ಚುನಾವಣಾ ಖರ್ಚಿನಲ್ಲಿ ʼನಮೋ ಟಿವಿʼಯನ್ನು ಬಚ್ಚಿಟ್ಟು ಬಿಜೆಪಿಯ ಮಹಾಮೋಸ
ರಾಷ್ಟ್ರೀಯ

ಚುನಾವಣಾ ಖರ್ಚಿನಲ್ಲಿ ʼನಮೋ ಟಿವಿʼಯನ್ನು ಬಚ್ಚಿಟ್ಟು ಬಿಜೆಪಿಯ ಮಹಾಮೋಸ

ಯಾವುದೇ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಪ್ರಸಾರ ಮಾಡಿದ್ದ ನಮೋ ಟೀವಿ ಕುರಿತಂತೆ ಬಿಜೆಪಿ ಚುನಾವಣಾ ಖರ್ಚಿನಲ್ಲಿ ಸಂಪೂರ್ಣವಾಗಿ ಮರೆಮಾಚಿದೆ. ಚುನಾವಣೆಯಲ್ಲಿ ವಂಚನೆ ಮಾಡುವ ಮೂಲಕ ಭಾರತದ 130 ಕೋಟಿ ಜನರಿಗೆ ಮೋದಿ ಹಾಗೂ ಸರ್ಕಾರ ಮೋಸ ಮಾಡಿದೆ

ಫೈಝ್

ಫೈಝ್

2019 ರ ಲೋಕಸಭಾ ಚುನಾವಣೆ ಮೊದಲು ಅಣಬೆಯಂತೆ ತಲೆಯೆತ್ತಿ ಚುನಾವಣೆ ಮುಗಿದ ಬಳಿಕ ಮಲಗಿಕೊಂಡ “ನಮೋ ಟಿವಿ” ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಯಾವುದೇ ಅನುಮತಿ ಪಡೆಯದೆ ಎನ್‌ಎಸ್‌ಎಸ್‌-6 ಉಪಗ್ರಹವನ್ನು ತನ್ನ ಪ್ರಸಾರಕ್ಕೆ ಬಳಸಿರುವುದು ಬೆಳಕಿಗೆ ಬಂದಿತ್ತು.

24*7 ಮೋದಿಯ ಸಾಧನೆಗಳನ್ನು ಪ್ರಸಾರ ಮಾಡುತ್ತಿದ್ದ ನಮೋ ಟಿವಿ ಚಾನೆಲ್‌ ಚುನಾವಣಾ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿತ್ತು.

ನಮೋ ಟೀವಿ ಬಿಜೆಪಿ ಪ್ರಾಯೋಜಕತ್ವದ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ, ಈ ಕುರಿತು ವಿಚಾರಣೆ ನಡೆಸಿ ವರದಿ ನೀಡಬೇಕೆಂದು ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್‌ ಬುಟೋಲಿಯಾ ಅವರು ಮುಖ್ಯ ಚುನಾವಣಾ ಅಧಿಕಾರಿಗೆ 2019 ಎಪ್ರಿಲ್‌ 11ರಲ್ಲಿ ನಿರ್ದೇಶನ ನೀಡಿದ್ದರು.

ಇದೇ ನಮೋ ಟೀವಿಯ ಕುರಿತು ವಿಪಕ್ಷಗಳ ವಿರೋಧ ಹೆಚ್ಚಾದ ಬಳಿಕ ಚುನಾವಣಾ ಆಯೋಗ ಚಾನೆಲ್‌ನ ಪ್ರಸಾರಕ್ಕೆ ತಡೆಯನ್ನೂ ನೀಡಿತ್ತು.

ವಾರ್ತಾ ಮತ್ತು ಪ್ರಸಾರ ಇಲಾಖೆ, ನಮೋ ಟಿವಿ ‘ವಿಶೇಷ ಸೇವೆಯ ಜಾಹಿರಾತು ಚಾನೆಲ್’ ಎಂದು ಘೋಷಿಸಿ, ಇದಕ್ಕೆಲ್ಲ ಲೈಸೆನ್ಸ್ ಅಗತ್ಯವಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಬಹಿರಂಗವಾಗಿ ನಮೋ ಟಿವಿಯ ಸಮರ್ಥನೆಗಿಳಿದಿತ್ತು. ಚುನಾವಣಾ ಆಯೋಗವನ್ನೇ ಬಿಜೆಪಿ ನಿಯಂತ್ರಿಸುತ್ತದೆ ಎಂಬ ಮಾತುಗಳು ಹರಿದಾಡುತ್ತಿದ್ದರಿಂದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಈ ಹೇಳಿಕೆ ಯಾರಲ್ಲೂ ಅಚ್ಚರಿಯನ್ನು ಉಂಟು ಮಾಡಿರಲಿಲ್ಲ.

ಭಾರತದ ಕಾನೂನಿನ ಪ್ರಕಾರ, ಯಾವುದೇ ಚಾನೆಲ್ ಉಪಗ್ರಹಗಳಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡಲು ಪ್ರಸಾರ ಇಲಾಖೆಯ ಅನುಮತಿ ಪಡೆಯಬೇಕು. ಕಂಪನಿಯ ಹಿನ್ನೆಲೆ ಮತ್ತು ಭದ್ರತಾ ವಿಷಯಗಳ ಪರಿಶೀಲನೆ ನಂತರವಷ್ಟೇ ಈ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂತಹ ಯಾವ ಲೈಸನ್ಸ್ ಹೊಂದಿರದ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹದಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿತ್ತು.

ನಮೋ ಟಿವಿ ಚಾನೆಲ್‌ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿತ್ತು. ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಈ ಚಾನೆಲನ್ನು ನಡೆಸುತ್ತಿರುವುದು ಬಿಜೆಪಿಯ ಐಟಿಸೆಲ್‌ ಎಂದು ನೇರವಾಗಿ ಒಪ್ಪಿಕೊಂಡಿದ್ದರು.

ಅದೂ ಅಲ್ಲದೆ, ನಮೋ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಖುದ್ದು ಮೋದಿಯೇ ಕರೆ ನೀಡಿ ಟ್ವೀಟ್‌ ಕೂಡಾ ಮಾಡಿದ್ದರು.

ಇಷ್ಟೆಲ್ಲಾ ನಾಟಕೀಯ ತಿರುವುಗಳನ್ನು ಪಡೆದುಕೊಂಡು ಬಂದ ನಮೋ ಟಿವಿ, 2019 ರ ಚುನಾವಣೆ ಬಳಿಕ ಟೀವಿ ಚಾನೆಲ್‌ಗಳ ಪಟ್ಟಿಯಿಂದ ಏಕಾಏಕೀ ಕಣ್ಮರೆಯಾಯಿತು. ದೂರದರ್ಶನದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತು. ಚುನಾವಣೆ ವೇಳೆ ನರೇಂದ್ರ ಮೋದಿಗೆ ಪ್ರಚಾರ ನೀಡುವುದನ್ನೇ ವಿಶೇಷ ಜಾಹಿರಾತು ಸೇವೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ತಿಪ್ಪೆ ಸಾರಿಸಿತೇ ಎಂದು ಇಲಾಖೆಯೇ ಹೇಳಬೇಕು. ಯಾಕೆಂದರೆ ನಮೋ ಟಿವಿ ಶುರುವಾದ ದಿನ, ತನ್ನನ್ನು ನ್ಯೂಸ್ ಚಾನೆಲ್ ಎಂದು ಹೇಳಿಕೊಂಡಿತ್ತು. ಅಲ್ಲದೆ ಡಿಟಿಎಚ್‌ ಸೇವೆಯನ್ನು ಒದಗಿಸುವ ಟಾಟಾ ಸ್ಕೈ ಕೂಡಾ ನಮೋ ಟೀವಿಯನ್ನು ಹಿಂದಿ ನ್ಯೂಸ್‌ ಚಾನೆಲ್‌ ಎಂದು ಹೇಳಿತ್ತು. ಅದಾಗ್ಯೂ ವಾರ್ತಾ ಮತ್ತು ಪ್ರಸಾರ ಇಲಾಖೆ ನಮೋ ಟಿವಿಯನ್ನು ‘ವಿಶೇಷ ಸೇವೆಯ ಜಾಹಿರಾತು ಚಾನೆಲ್’ ಎಂದು ಘೋಷಿಸಿ, ಇದಕ್ಕೆಲ್ಲ ಲೈಸೆನ್ಸ್ ಅಗತ್ಯವಿಲ್ಲ ಎಂದು ಹೇಳಿರುವುದು ಯಾತಕ್ಕಾಗಿ?

ಇಂತಹಾ ಹಲವಾರು ಉತ್ತರವಿಲ್ಲದ ಪ್ರಶ್ನೆಯೊಂದಿಗೆ ʼನಮೋ ಟೀವಿʼ ತನ್ನ ಕಾರ್ಯ ಸಾಧಿಸಿ ತೆರೆಯಿಂದ ಮರೆಗೆ ಹೊರಳಿದೆ. ಪ್ರಜಾಪ್ರಭುತ್ವಕ್ಕೆ ಅರ್ಥ ನೀಡುವ ಚುನಾವಣೆಯಲ್ಲಿಯೇ ಅವ್ಯವಹಾರ ನಡೆಸಿ ಭಾರತದ 130 ಕೋಟಿ ಜನರನ್ನೂ ಭಾಜಪಾ ಪಕ್ಷ ವಂಚಿಸಿದೆ. ಉತ್ತರ ಪಡೆಯಬೇಕಿದ್ದ ಭಾರತದ ಪ್ರಜೆಗಳು ಪ್ರಶ್ನೆಗಳನ್ನು ಕೇಳಿದ ಕೂಡಲೇ ದೇಶದ್ರೋಹಿಗಳಾಗುತ್ತಿದ್ದಾರೆ.

ಸರ್ಕಾರ ಹೇಗಿರಬೇಕೆಂಬುದರ ಕುರಿತಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಿ ಎಚ್‌ ಪಟೇಲ್‌ ಅರ್ಥವತ್ತಾದ ಮಾತೊಂದು ಹೇಳುತ್ತಾರೆ. ಉತ್ತಮ ಸರ್ಕಾರ ಎಂದರೆ, ಅದರ ಇರುವಿಕೆ ಪ್ರಜೆಗಳ ಅರಿವಿಗೇ ಬರಬಾರದು. ಅಷ್ಟು ನಾಜೂಕಾಗಿ ಸರ್ಕಾರ ತನ್ನ ಕೆಲಸ ಮಾಡುತ್ತಿರಬೇಕೆಂಬುದು ಅವರ ಮಾತಿನ ಒಟ್ಟು ತಾತ್ಪರ್ಯ. ಅವರು ಹೇಳಿದ್ದ ಈ ಆದರ್ಶ ಎಷ್ಟು ಪ್ರಾಯೋಗಿಕ ಎನ್ನುವುದು ಬೇರೆಯೇ ಚರ್ಚೆ. ಈಗಿರುವ ನಮ್ಮ ಸರ್ಕಾರಗಳು ಚಾಲ್ತಿಯಲ್ಲಿರುವ ಪ್ರಶ್ನೆ, ವಿವಾದಗಳನ್ನು ಮುಚ್ಚಲು ಹೊಸ ಗದ್ದಲಗಳನ್ನು ಎಬ್ಬಿಸುತ್ತಿವೆಯೇ ಹೊರತು ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಅದಕ್ಕಾಗಿಯೇ ಒಂದಿಲ್ಲೊಂದು ವಿವಾದಾತ್ಮಕ ಕಾನೂನುಗಳನ್ನು, ಯೋಜನೆಗಳನ್ನು ಕೇಂದ್ರ ಸರ್ಕಾರ ಜನರ ಎದುರು ಇಡುತ್ತಿವೆ. ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಂತೂ ಭಾರತೀಯರು ವಿಪರೀತವೆನಿಸುವಷ್ಟು ರಾಜಕೀಯ ಚರ್ಚೆಗಳಲ್ಲಿ ಮುಳುಗಿ ಹೋದರು. ಹಾಗೂ ಪ್ರಧಾನಿ ಮೋದಿ ಭಾಷಣಗಳಲ್ಲಿ.

ಇಂತಹಾ ರಾಜಕೀಯ, ಸಾಮಾಜಿಕ ಘಟ್ಟದಲ್ಲಿ ಸರ್ಕಾರದ ಹಳೆಯ ಮೋಸಗಳನ್ನು ಹೊಸ ಗದ್ದಲಗಳು ವ್ಯವಸ್ಥಿತವಾಗಿ ಮರೆಮಾಚುತ್ತಿದೆ. ಹಾಗಾಗಿಯೇ ನಮೋ ಟೀವಿಯ ಹಿಂದಿರುವ ಒಂದು ಮಹಾ ಮೋಸ ಭಾರತೀಯ ಸ್ಮೃತಿಪಟಲದಿಂದ ಅಂಚಿಗೇ ಜಾರಿತ್ತು. ಈ ಘಳಿಗೆಯಲ್ಲಿ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ನಮೋ ಟೀವಿಯ ಕುರಿತಂತೆ ದಾಖಲೆಗಳನ್ನು ಕೆದಕಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

2019 ರ ಲೋಕಸಬಾ ಚುನಾವಣೆ ಸಂಧರ್ಭದಲ್ಲಿ ನಿಗೂಢವಾಗಿ ಅಸ್ತಿತ್ವಕ್ಕೆ ಬಂದ ನಮೋ ಟೀ.ವಿ ಚುನಾವಣೆಯ ಬಳಿಕ ಅಷ್ಟೇ ನಿಗೂಢತೆಯಿಂದ ಮರೆಗೆ ಸರಿದಿತು. ಡಿಟಿಎಚ್‌ ಸೇವೆಯಲ್ಲಿ ಇದು ಲಭ್ಯವಾಗಲು ಬಿಜೆಪಿಯೇ ಪಾವತಿಸುತ್ತಿತ್ತು ಎಂದು ಚುನಾವಣಾ ಆಯೋಗದ ವಕ್ತಾರರು ಒಪ್ಪಿಕೊಂಡಿರುವುದು ನಿಮಗೆ ನೆನಪಿರಬಹುದೆಂದು ಎಂದು ಗೋಖಲೆ ಟ್ವೀಟ್‌ ಮಾಡಿದ್ದಾರೆ.

ನಮೋ ಟೀವಿಯ ಕುರಿತಂತೆ ಸರಣಿ ಟ್ವೀಟ್‌ ಮಾಡಿದ ಸಾಕೇತ್‌ ಗೋಖಲೆ, ಸರ್ಕಾರದಿಂದ ಸ್ಯಾಟ್‌ಲೈಟ್‌ನಲ್ಲಿ ಪ್ರಸಾರಗೊಳ್ಳಲು ಯಾವುದೇ ಅಧಿಕೃತ ಅನುಮತಿ ಪಡೆಯದ ಹಾಗೂ ನೋಂದಾವಣೆಯಾಗದ ನಮೋ ಟಿವಿಯನ್ನು ನಿರ್ವಹಿಸುತ್ತಿರುವುದು ಬಿಜೆಪಿ ಹಾಗೂ ಅದರ ಐಟಿ ಸೆಲ್‌ ಎಂದು ಸ್ವತಃ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಚುನಾವಣೆಯ ಬಳಿಕ ನಮೋ ಟಿ.ವಿಯ ಕುರಿತಂತೆ ಯಾರೂ ಗಂಭೀರ ಗಮನ ಹರಿಸಲಿಲ್ಲ. ಚುನಾವಣಾ ಆಯೋಗಕ್ಕೆ ನೀಡಿರುವ ಚುನಾವಣಾ ಖರ್ಚಿನ ವರದಿಯಲ್ಲಿ ನಮೋ ಟಿವಿಗೆ ಮಾಡಿರುವ ಖರ್ಚು ಕುರಿತಂತೆ ಹಾಗೂ ಡಿಟಿಎಚ್‌ ಓಪರೇಟರ್‌ಗಳಿಗೆ ಪಾವತಿ ಮಾಡಿರುವ ಹಣದ ಕುರಿತಂತೆ ಬಿಜೆಪಿ ತನ್ನ ವರದಿಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಈ ನಿರ್ಣಾಯಕ ಖರ್ಚಿನ ಕುರಿತಂತೆ ಬಿಜೆಪಿ ಸಂಪೂರ್ಣ ಮರೆಮಾಚಿದೆ.

ಬಿಜೆಪಿ, ನಮೋ ಟಿವಿಯ ಕುರಿತಂತೆ ಖರ್ಚಿನ ವರದಿಯಲ್ಲಿ ಮರೆಮಾಚಿರುವುದು ಚುನಾವಣಾ ವಂಚನೆ ಮಾತ್ರವಲ್ಲದೆ ಚಾನೆಲಿನ ವಿವರಗಳ ಮರೆಮಾಚುವಿಕೆ ಕೂಡಾ ಆಗಿದೆ. ಈ ಕುರಿತಂತೆ ತುರ್ತು ತನಿಖೆ ನಡೆಸಬೇಕೆಂದು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದೇನೆಂದು ಸಾಕೇತ್‌ ಗೋಖಲೆ ಹೇಳಿದ್ದಾರೆ. ಅಲ್ಲದೆ ಈ ಗೊಂದಲ ಭರಿತ ಚಾನೆಲ್‌ನ ಹಿಂದಿರುವ ಸತ್ಯಾಂಶ ಬೆಳಕಿಗೆ ಬರಬೇಕೆಂದೂ ಅವರು ಆಗ್ರಹಿಸಿದ್ದಾರೆ.

ನರೇಂದ್ರ ಮೋದಿ ಕೇಂದ್ರ ಸರ್ಕಾರ, ತನ್ನ ಅಸಹ್ಯ ರಾಜಕೀಯದ ಮೂಲಕ ಅಸಹಜ ಸರ್ವಾಧಿಕಾರವನ್ನು ಹೇರಿದೆ. ಸ್ವಾಯತ್ತವಾಗಿರಬೇಕಾದ ಸರ್ಕಾರಿ ಸಂಸ್ಥೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ನ್ಯಾಯಾಲಯದ ಮೇಲೆಯೇ ಪ್ರಭಾವ ಬೀರುವಷ್ಟು ಅಧೋಗತಿಯ ರಾಜತಾಂತ್ರಿಕತೆಯನ್ನು ಅನುಸರಿಸುತ್ತಿದೆ. ಕಪಟ ದೇಶಪ್ರೇಮವನ್ನು ತನ್ನ ಸರಕಾಗಿಸಿಕೊಂಡು ಬಿಜೆಪಿಯ ನೈತಿಕತೆ ಅಧಃಪತನಕ್ಕಿಳಿದಿದೆ. ಚುನಾವಣೆಯಲ್ಲಿ ವಂಚಿಸುವ ಮೂಲಕ ದೇಶದ 130 ಕೋಟಿ ಜನರನ್ನು ವಂಚಿಸಿದೆ. ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಬಿಜೆಪಿ ಗೆದ್ದಲು ಹಿಡಿಸಲು ಹೊರಟಿದೆ. ಪ್ರಶ್ನೆಗಳನ್ನೇ ಎದುರಿಸಲು ಭಯಪಡುವ ಪ್ರಧಾನಿ ಹಾಗೂ ಪ್ರಶ್ನೆಗಳನ್ನು ಸಹಿಸದ ಅವರ ಪಕ್ಷ, ಪ್ರಾಮಾಣಿಕವಾಗಿ ನಿಷ್ಪಕ್ಷಪಾತ ತನಿಖೆಗೆ ಒಳಪಟ್ಟಾರೆ?

Click here to follow us on Facebook , Twitter, YouTube, Telegram

Pratidhvani
www.pratidhvani.com