ʼಕರೋನಿಲ್‌ʼ ಹೆಸರು ಬಳಕೆ‌: ಪತಂಜಲಿಗೆ ದಂಡ ವಿಧಿಸಿದ ಮದ್ರಾಸ್ ಕೋರ್ಟ್
ರಾಷ್ಟ್ರೀಯ

ʼಕರೋನಿಲ್‌ʼ ಹೆಸರು ಬಳಕೆ‌: ಪತಂಜಲಿಗೆ ದಂಡ ವಿಧಿಸಿದ ಮದ್ರಾಸ್ ಕೋರ್ಟ್

ಪತಂಜಲಿ ಸಂಸ್ಥೆ ಕರೋನಾ ಕಿಟ್‌ ಮೇಲೆ ಬಳಸುತ್ತಿರುವ Coronil ಟ್ರೇಡ್‌ ಮಾರ್ಕನ್ನು 1993ರಿಂದಲೂ ನಾವು ಬಳಸುತ್ತಿದ್ದೇವೆ. ಇದೇ ಟ್ರೇಡ್‌ ಮಾರ್ಕ್‌ನಲ್ಲಿ ‘CORONIL-92 B ಎನ್ನುವ ವಸ್ತು ಮಾರಾಟ ಮಾಡಲಾಗುತ್ತಿದೆ

ಕೃಷ್ಣಮಣಿ

ಕರೋನಾ ಸೋಂಕು ಲಕ್ಷಾಂತರ ಭಾರತೀಯರ ಪಾಲಿಗೆ ಕರಾಳ ಮುಖವನ್ನು ಪ್ರದರ್ಶನ ಮಾಡಿದ್ರೆ, ಇನ್ನೂ ಕೆಲವರಿಗೆ ಖಜಾನೆ ತುಂಬಿಸುವ ಸ್ವರ್ಗ ಮಾರ್ಗವಾಗಿದೆ. ಅದರಲ್ಲಿ ಪತಂಜಲಿ ಸಂಸ್ಥೆಯೂ ಒಂದು. ಕರೋನಾ ಸೋಂಕು ಭಾರತದಾದ್ಯಂತ ವ್ಯಾಪಿಸುತ್ತಿದ್ದಂತೆ ಸಾಕಷ್ಟು ಸಂಸ್ಥೆಗಳು ಕರೋನಾ ಬಾರದಂತೆ ತಡೆಯಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವಾರು ರೀತಿಯ ಪದಾರ್ಥಗಳನ್ನು ಬಿಡುಗಡೆ ಮಾಡಿದವು. ಕರೋನಾ ಸೋಂಕಿಗೆ ಮದ್ದು ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಪತಂಜಲಿ ಸಂಸ್ಥೆ ಕೂಡ ಕರೋನಾ ಸೋಂಕಿಗೆ ಎಂದೇ ಮಾತ್ರೆಗಳನ್ನು ಬಿಡುಗಡೆ ಮಾಡಿತ್ತು. ಜೊತೆಗೆ ಶೇಕಡ 70 ರಷ್ಟು ಕರೋನಾ ಸೋಂಕಿತರು ಇದರಿಂದ ಗುಣಮುಖ ಆಗ್ತಾರೆ ಎಂದು ಮಾಧ್ಯಮಗಳ ಎದುರು ಹೇಳಿದ್ದರು. ಆ ಬಳಿಕ ಬಾಬಾ ರಾಮದೇವ್‌ ಕರೋನಾಗೆ ಮದ್ದು ಕಂಡು ಹಿಡಿದಿದ್ದಾರೆ ಎನ್ನುವ ಸುದ್ದಿ ಹಭ್ಬಿತ್ತು. ಆ ನಂತರ ಸೃಷ್ಟಿಯಾದ ವಿವಾದದ ಬಳಿಕ ಉಲ್ಟಾ ಹೊಡೆದ ಬಾಬಾ ರಾಮದೇವ್‌ ಹಾಗೂ ಪತಂಜಲಿ ಸಂಸ್ಥೆ ಸಿಇಒ ಬಾಲಕೃಷ್ಣ ನಾವು ಕರೋನಾಗೆ ಚಿಕಿತ್ಸೆ ಎಂದಿಲ್ಲ. ಪ್ರಾಯೋಗಿಕವಾಗಿ ನಾವು ಯಶಸ್ವಿಯಾಗಿದ್ದೇವೆ ಎಂದಷ್ಟೇ ನಾವು ಹೇಳಿದ್ದೇವೆ ಎನ್ನುವ ಮೂಲಕ ಉಲ್ಟಾ ಹೊಡೆದಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ. ಹಾಗಾಗಿ ಕರೋನಾ ಸೋಂಕು ಬರುವುದನ್ನೇ ತಡೆಗಟ್ಟಬೇಕು ಎನ್ನುವ ಕಾರಣಕ್ಕೆ ಹಲವಾರು ಸಂಸ್ಥೆಗಳು ಕರೋನಾ ಇಮ್ಯುನಿಟಿ ಬೂಸ್ಟರ್‌ ಎನ್ನುವ ಮಾತ್ರೆಗಳು, ಪೌಡರ್‌, ಪೇಸ್ಟ್‌, ಟೀ ಪೌಡರ್‌ ಎಲ್ಲವೂ ಮಾರುಕಟ್ಟೆಯಲ್ಲಿ ಲಭ್ಯ. ಸರ್ಕಾರಿ ಸ್ವಾಮ್ಯದ ಆಯುಶ್‌ ಇಲಾಖೆಯೂ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಉಳ್ಳವರು ಎಲ್ಲವನ್ನೂ ಬಳಸುತ್ತಿದ್ದಾರೆ. ಆದರೆ ಇವೆಲ್ಲಾ ಎಷ್ಟರ ಮಟ್ಟಿಗೆ ಸಹಕಾರಿ ಎನ್ನುವುದನ್ನು ಪರೀಕ್ಷೆ ಮಾಡಿದವರು ಯಾರು..? ಇದಕ್ಕೆಲ್ಲಾ ಅಧಿಕೃತ ಮುದ್ರೆ ಇದೆಯಾ ಎಂದರೆ ಇಲ್ಲ. ಇದೇ ಕಾರಣದಿಂದ ಪತಂಜಲಿ ಯೋಗ ಸಂಸ್ಥೆ ಬಿಡುಗಡೆ ಮಾಡಿದ್ದ ಕರೋನಾ ಇಮ್ಯುನಿಟಿ ಬೂಸ್ಟರ್‌ ಕಿಟ್‌ ಮಾರುಕಟ್ಟೆ ಪ್ರವೇಶ ಮಾಡಿತ್ತು. ಬಿಡುಗಡೆ ವೇಳೆಯಲ್ಲೇ ಕರೋನಾಗೆ ಚಿಕಿತ್ಸೆ ಎನ್ನುವಂತೆ ತಿರುಚಿದ ಹೇಳಿಕೆ ನೀಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆ 10 ಲಕ್ಷ ರೂಪಾಯಿ ದಂಡ ಕಟ್ಟುವಂತಾಗಿದೆ.

ಆಗಸ್ಟ್‌ 05, ಬುಧವಾರ ಅಷ್ಟೇ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಬಾಬಾ ರಾಮದೇವ್‌, ಪತಂಜಲಿ ಕರೋನಾ ಕಿಟ್‌ಗೆ ಭಾರೀ ಬೇಡಿಕೆ ಇದ್ದು, ಪ್ರತಿದಿನ 10 ಲಕ್ಷ ಕಿಟ್‌ಗಳಿಗೆ ಬೇಡಿಕೆ ಇದೆ. ಆದರೆ ಹರಿದ್ವಾರದಲ್ಲಿರುವ ಕಂಪನಿ ದಿನಕ್ಕೆ ಕೇವಲ 1 ಲಕ್ಷ ಕಿಟ್‌ ಉತ್ಪಾದನೆ ಮಾಡಲು ಮಾತ್ರ ಸಾಧ್ಯವಾಗ್ತಿದೆ ಎಂದಿದ್ದರು. ಇನ್ನೂ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದು ಆಯುರ್ವೇದದ ಶಕ್ತಿ, ನಾವು ಕೇವಲ 500 ರೂಪಾಯಿಗೆ ಕರೋನಿಲ್‌ ಕಿಟ್‌ ಕೊಡುತ್ತಿದ್ದೇವೆ, ಈ ಕಿಟ್‌ ಅನ್ನು 5 ಸಾವಿರಕ್ಕೂ ಬೇಕಿದ್ದರೆ ಈ ಕರೋನಾ ಸಮಯದಲ್ಲಿ ಮಾರಾಟ ಮಾಡುವ ಮೂಲಕ 5000 ಕೋಟಿ ಹಣವನ್ನು ಸಂಪಾದನೆ ಮಾಡಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ ಎಂದಿದ್ದರು. ಅದರ ಮರುದಿನವೇ ಅಂದರೆ ಆಗಸ್ಟ್‌ 6 ರಂದು ಕರೋನಿಲ್‌ ಕಿಟ್‌ ಮೇಲೆ ಟ್ರೇಡ್‌ ಮಾಕ್‌ ಬಳಸದಂತೆ ಸೂಚಿಸಿರುವ ಮದ್ರಾಸ್‌ ಹೈಕೋರ್ಟ್‌ 10 ಲಕ್ಷ ದಂಡವನ್ನೂ ಹಾಕಿದೆ.

ಪತಂಜಲಿ ಸಂಸ್ಥೆ ಕರೋನಾ ಕಿಟ್‌ ಮೇಲೆ ಬಳಸುತ್ತಿರುವ Coronil ಟ್ರೇಡ್‌ ಮಾರ್ಕನ್ನು 1993ರಿಂದಲೂ ನಾವು ಬಳಸುತ್ತಿದ್ದೇವೆ. ಇದೇ ಟ್ರೇಡ್‌ ಮಾರ್ಕ್‌ನಲ್ಲಿ ‘CORONIL-92 B ಎನ್ನುವ ವಸ್ತು ಮಾರಾಟ ಮಾಡಲಾಗ್ತಿದೆ. ದೊಡ್ಡ ದೊಡ್ಡ ಯಂತ್ರಗಳನ್ನು ಶುದ್ಧ ಮಾಡಲು ಕೆಮಿಕಲ್‌ ಕೈಗಾರಿಕೆಗಳನ್ನು ಬಳಸುವ ಕೆಮಿಕಲ್‌ ತಯಾರಿಸಲು ಬಳಸಲಾಗುತ್ತದೆ. ಹಾಗಾಗಿ ಈ ಟ್ರೇಡ್‌ ನಮ್ಮದು ಎಂದು ಚೆನ್ನೈ ಮೂಲದ ಸಂಸ್ಥಯೊಂದು ಹೈಕೋರ್ಟ್‌ ಮೆಟ್ಟಿಲೇರಿತ್ತು. ಜೊತೆಗೆ 2027ರ ತನಕವೂ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ವಾದಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಪತಂಜಲಿ ಸಂಸ್ಥೆಗೆ 10 ಲಕ್ಷ ದಂಡ ವಿಧಿಸಿ, ಇನ್ಮುಂದೆ ಬಳಸದಂತೆ ಸೂಚನೆ ಕೊಟ್ಟಿದೆ. ಆಗಸ್ಟ್‌ 21ರೊಳಗಾಗಿ ದಂಡದ ಮೊತ್ತವನ್ನು ಅಡ್ಯಾರ್‌ ಕ್ಯಾನ್ಸರ್‌ ಸಂಸ್ಥೆ ಹಾಗೂ ಅರುಂಬಾಕಂನಲ್ಲಿರುವ Government Yoga and Naturopathy Medical College and Hospital ಗೆ ಹಂಚಿಕೆ ಮಾಡುವಂತೆ ಸೂಚನೆ ಕೊಟ್ಟಿದೆ. ಜೊತೆಗೆ ಪತಂಜಲಿ ಸಂಸ್ಥೆ ಉತ್ಪಾದಿಸುತ್ತಿರುವ ಕರೋನಿಲ್‌ ಕಿಟ್‌ ಸೋಂಕು ನಿವಾರಕವಲ್ಲ, ಕೇವಲ ಕೆಮ್ಮು ಬಾರದಂತೆ ತಡೆಯಲು ಸಹಕಾರಿ ಎಂದು ಸ್ಪಷ್ಟನೆ ನೀಡಿದೆ.

ಕರ್ನಾಟಕದಲ್ಲೂ ನಡೀತಿದೆ ಇಂತಹದ್ದೇ ವ್ಯವಹಾರ..!

ಕರ್ನಾಟಕದಲ್ಲೂ ಆಯುರ್ವೇದ ಔಷಧಿ ತಯಾರಿಸಿದ್ದೇನೆ, ಇದರಿಂದ ಕರೋನಾ ಸೋಂಕು ನಿವಾರಣೆ ಆಗುತ್ತದೆ ಎಂದು ಆಯುರ್ವೇದ ವೈದ್ಯರೊಬ್ಬರು ಭಾರೀ ಸುದ್ದಿ ಆಗುತ್ತಿದ್ದಾರೆ. ರಾಜ್ಯ ಆರೋಗ್ಯ ಸಚಿವರ ಬಾಯಿಂದಲೂ ಯಶಸ್ವಿಯಾಗಿದೆ ಎಂದು ಹೇಳಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಮೆಡಿಸಿನ್‌ ಮಾಫಿಯಾ ಆಯುರ್ವೇದ ಔಷಧಿಯನ್ನು ಬಳಸದಂತೆ ತಡೆಯುತ್ತಿದೆ ಎಂದು ಸಾಮಾಜಿಕ ಜಾಲ ತಾಣದಲ್ಲೂ ಭಾರೀ ಪ್ರಸಿದ್ಧಿ ಪಡೆದಿತ್ತು. ಆದರೂ ಭಾರೀ ಪ್ರಚಾರ ಸಿಕ್ಕಿರುವುದಂತೂ ಸತ್ಯ. ಜನರು ಈ ರೀತಿಯ ಹಣದಾಹಿ ವಸ್ತುಗಳು ಹಾಗೂ ಸುಳ್ಳಿನ ಮಹಲು ಕಟ್ಟುವವರನ್ನು ಎಚ್ಚರಿಕೆಯಿಂದ ದೂರ ಇಡಬೇಕಿದೆ. ಇದೀಗ ಪತಂಜಲಿ ಸಂಸ್ಥೆಯ ಬಣ್ಣ ಬಯಲಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com