ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ RBI; ಸಾಲಕ್ಕೆ ಬೇಡಿಕೆಯೇ ಇಲ್ಲ!
ರಾಷ್ಟ್ರೀಯ

ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ RBI; ಸಾಲಕ್ಕೆ ಬೇಡಿಕೆಯೇ ಇಲ್ಲ!

ಈಗಾಗಲೇ ಬಡ್ಡಿದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೂ ಸಹ ಜನರು ಬ್ಯಾಂಕುಗಳಿಂದ ಸಾಲ ಪಡೆಯಲು ಮುಂದಾಗುತ್ತಿಲ್ಲ. ಈ ಕಾರಣದಿಂದಾಗಿ ಸಾಲದ ಬೆಳವಣಿಗೆಯು ಋಣಾತ್ಮಕ ವಲಯಕ್ಕೆ ಜಿಗಿದಿದೆ. ಈ ಬೆಳವಣಿಗೆ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಆತಂಕಕಾರಿಯೇ ಹೌದು.

ರೇಣುಕಾ ಪ್ರಸಾದ್ ಹಾಡ್ಯ

ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ. ಮೂರು ದಿನಗಳ ಸುಧೀರ್ಘ ಸಮಾಲೋಚನೆ ನಡೆಸಿದ ಆರ್ಬಿಐ ಹಣಕಾಸು ನೀತಿ ಸಮಿತಿಯು ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಆದರೆ, ಅಗತ್ಯ ಬಂದಾಗ ಬಡ್ಡಿದರ ಏರಿಸುವ ಅಥವಾ ಇಳಿಸುವ ಮುಕ್ತ ನಿಲವನ್ನು ಪ್ರಕಟಿಸಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ರೆಪೊದರ (ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಮತ್ತು ರಿವರ್ಸ್ ರೆಪೋದರ (ಬ್ಯಾಂಕುಗಳು ಆರ್ಬಿಐನಲ್ಲಿಟ್ಟ ಠೇವಣಿ ಮೇಲಿನ ಬಡ್ಡಿದರ) ಎರಡನ್ನೂ ಕಡಿತ ಮಾಡುವ ನಿರೀಕ್ಷೆಯಲ್ಲಿ ಹಣಕಾಸು ಮಾರಕಟ್ಟೆ ಇತ್ತು. ಆದರೆ, ಚಿಲ್ಲರೆ ಹಣದುಬ್ಬರವು ಸತತ ಏರುಹಾದಿಯಲ್ಲಿ ಸಾಗಿರುವ ಕಾರಣ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಹಣಕಾಸು ನೀತಿ ಸಮಿತಿ ಕೈಗೊಂಡಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಈಗಾಗಲೇ ಬಡ್ಡಿದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೂ ಸಹ ಜನರು ಬ್ಯಾಂಕುಗಳಿಂದ ಸಾಲ ಪಡೆಯಲು ಮುಂದಾಗುತ್ತಿಲ್ಲ. ಈ ಕಾರಣದಿಂದಾಗಿ ಸಾಲದ ಬೆಳವಣಿಗೆಯು ಋಣಾತ್ಮಕ ವಲಯಕ್ಕೆ ಜಿಗಿದಿದೆ. ಈ ಬೆಳವಣಿಗೆ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಆತಂಕಕಾರಿಯೇ ಹೌದು. ಕರೊನಾ ಸೋಂಕು ವ್ಯಾಪಕಗೊಂಡ ನಂತರದ ಬೆಳವಣಿಗೆಯಲ್ಲಿ ಕುಸಿದಿರುವ ಆರ್ಥಿಕತೆ ಚೇತರಿಕೆಗೆ ಮತ್ತಷ್ಟು ಕಾಲಾವಕಾಶ ಬೇಕಿದೆ. ಬಹುತೇಕ ಬೇಡಿಕೆಗಳು ಕುಸಿದ ಪರಿಣಾಮ, ಉತ್ಪಾದನೆ, ಉಪಭೋಗ ಎಲ್ಲವೂ ಇಳಿಜಾರಿನಲ್ಲಿ ಸಾಗಿರುವುದರಿಂದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಋಣಾತ್ಮಕ ಅಭಿವೃದ್ಧಿ ದಾಖಲಿಸಲಿದೆ ಎಂದು ಸಮಿತಿ ಮುನ್ನಂದಾಜು ಮಾಡಿದೆ. ಇದರರ್ಥ ಸದ್ಯದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಚೇತರಿಸುವ ಸಾಧ್ಯತೆಗಳಿಲ್ಲ.

ರೆಪೊದರ, ರಿವರ್ಸ್ ರೆಪೋದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಹಿಂದೆ ಎರಡು ಕಾರಣಗಳಿವೆ. ಒಂದು, ಈಗಾಗಲೇ ಗರಿಷ್ಠ ಮಟ್ಟದಲ್ಲಿ ರೆಪೋದರವನ್ನು ಕಡಿತ ಮಾಡಲಾಗಿದೆ. ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಯ ವೇಳೆಗೆ ರೆಪೊದರ ಶೇ.4ಕ್ಕೆ, ರಿವರ್ಸ್ ರೆಪೊದರ ಶೇ.3.35 ಇಳಿಸಲಾಗಿತ್ತು. ಕೊರೊನೋತ್ತರ ಅವಧಿಯಲ್ಲಿ ಆರ್ಬಿಐ 125 ಮೂಲಅಂಶಗಳಷ್ಟು (ಶೇ.1.25), ಹಾಗೂ ಕಳೆದ ವರ್ಷದ ಫೆಬ್ರವರಿಯಿಂದ 250 ಮೂಲ ಅಂಶಗಳಷ್ಟು (ಶೇ.2.50) ಬಡ್ಡಿದರ ಕಡಿತ ಮಾಡಿದೆ. ಹೀಗಾಗಿ ಮತ್ತಷ್ಟು ಬಡ್ಡಿದರ ಕಡಿತ ಮಾಡುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಹಣಕಾಸು ನೀತಿ ಸಮಿತಿ ನಿರ್ಧಾರಕ್ಕೆ ಬಂದಿದೆ. ಈ ನಿರ್ಧಾರವನ್ನು ಆರು ಸದಸ್ಯರ ಸಮಿತಿಯು ಸರ್ವಾನುಮತದಿಂದ ಕೈಗೊಂಡಿದೆ. ಇಷ್ಟಾದರೂ ಅಗತ್ಯ ಬಿದ್ದರೆ, ಬಡ್ಡಿದರವನ್ನು ಯಾವಾಗ ಬೇಕಾದರೂ ಹಿಗ್ಗಿಸುವ ಅಥವಾ ಕುಗ್ಗಿಸುವ ಮುಕ್ತ ನಿಲುವನ್ನು ಮುಂದುವರೆಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬ್ಯಾಂಕುಗಳು ಸಾಲದ ಅಭಿವೃದ್ಧಿಯು ಋಣಾತ್ಮಕವಾಗಿರುವುದಕ್ಕೆ ಬಡ್ಡಿದರ ಕಾರಣವಲ್ಲ ಬದಲಿಗೆ, ಕುಸಿದಿರುವ ಆರ್ಥಿಕತೆಗೆ ಚೇತರಿಕೆ ಬಂದಿಲ್ಲ. ಜನರ ಕೊಳ್ಳುವ ಶಕ್ತಿ ವೃದ್ಧಿಸಿಲ್ಲ. ಉತ್ಪಾದನೆ, ಸೇವಾ ವಲಯ ಸೇರಿದಂತೆ ಬಹುತೇಕ ವಲಯಗಳಲ್ಲಿ ಪೂರ್ಣಪ್ರಮಾಣದ ಚೇತರಿಕೆ ಬಂದಿಲ್ಲ. ಹೀಗಾಗಿ ಲಾಕ್‌ಡೌನ್‌ ತೆರವಿನ ನಂತರ ಉದ್ಯೋಗ ಸೃಷ್ಟಿ ಮೇಲ್ನೋಟಕ್ಕೆ ಕಂಡು ಬಂದಿದ್ದರೂ ವಾಸ್ತವವಾಗಿ ಅದು ಆರ್ಥಿಕ ಚೇತರಿಕೆ ನೀಡುವಷ್ಟು ಪ್ರಮಾಣದಲ್ಲಿ ಇಲ್ಲ.

ಬಡ್ಡಿದರ ಕಡಿತ ಮಾಡದಿರಲು ಮತ್ತೊಂದು ಕಾರಣ ಎಂದರೆ- ಚಿಲ್ಲರೆ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ.6ನ್ನು ಮೀರಿದೆ. ಮುಂಬರುವ ದಿನಗಳಲ್ಲಿ ಚಿಲ್ಲರೆ ಹಣದುಬ್ಬರವು ಏರು ಹಾದಿಯಲ್ಲೇ ಸಾಗುವ ಸಾಧ್ಯತೆ ಇದೆ. ಹೀಗಾಗಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ಹೊಣೆ ಆರ್ಬಿಐ ಮೇಲಿದೆ. ಸಾಮಾನ್ಯವಾಗಿ ಶೇ.4ರಷ್ಟು (ಶೇ.2ರಷ್ಟು ಇಳಿಕೆ ಅಥವಾ ಏರಿಕೆಯೊಂದಿಗೆ) ಹಣದುಬ್ಬರ ಕಾಯ್ದುಕೊಳ್ಳುವುದಕ್ಕೂ ಆರ್ಬಿಐ ಆದ್ಯತೆ ನೀಡಬೇಕಿದೆ. ಒಂದು ಕಡೆ ಆಹಾರ ಮತ್ತಿತರ ವಸ್ತುಗಳ ದರ ಯಥಾಸ್ಥಿತಿ ಅಥವಾ ಇಳಿಯುತ್ತಿದ್ದರೆ, ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್ ಮತ್ತಿತರ ಇಂಧನಗಳ ದರ, ಪ್ರೋಟೀನ್ ಯುಕ್ತ ಆಹಾರಗಳ ದರ ಜಿಗಿಯುತ್ತಿರುವುದರಿಂದ ಹಣದುಬ್ಬರ ಶೇ.6ರಷ್ಟು ದಾಟಿದೆ. ಹೀಗಾಗಿ ಸದ್ಯಕ್ಕೆ ಬಡ್ಡಿದರ ತಗ್ಗಿಸದಿರಲು ನಿರ್ಧರಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿನ ಹಣದುಬ್ಬರದ ಜಾಡು ನೋಡಿ ಬಡ್ಡಿದರ ತಗ್ಗಿಸುವ ನಿರ್ಧಾರ ಕೈಗೊಳ್ಳಬಹುದು.

ಜನರಿಗಾಗುವ ಅನುಕೂಲ ಏನು?

ಆರ್ಬಿಐ ಬಡ್ಡಿದರ ಯಥಾ ಸ್ಥಿತಿ ಕಾಪಾಡಿಕೊಂಡಿರುವುದರಿಂದ ಮುಂದಿನ ಎರಡು ತಿಂಗಳ ಕಾಲ ಬಹುತೇಕ ಬಡ್ಡಿದರ ಯಥಾಸ್ಥಿತಿ ಇರುತ್ತದೆ. ಈಗಾಗಲೇ ಗೃಹಸಾಲ, ವಾಹನಸಾಲ, ವೈಯಕ್ತಿಕ ಸಾಲ ಸೇರಿದಂತೆ ಬಹುತೇಕ ಸಾಲಗಳ ಮೇಲಿನ ಬಡ್ಡಿದರವು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹೀಗಾಗಿ ಸಾಲ ಮರುಪಾವತಿಯ ಸಾಮರ್ಥ್ಯ ಇರುವವರು ಸಾಲ ಪಡೆಯಲು ಇದು ಸಕಾಲ. ಆರ್ಥಿಕ ಚೇತರಿಕೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗುವುದರಿಂದ ಮುಂದಿನ ಒಂದು ವರ್ಷದವರೆಗೂ ಬಡ್ಡಿದರ ಏರುವ ಸಾಧ್ಯತೆ ಕಡಮೆ, ಬಡ್ಡಿದರ ಇಳಿಯಲೂ ಬಹುದು.

ಈಗಾಗಲೇ ಬಹುತೇಕ ಸಾಲ ಪಡೆದವರ ಮಾಸಿಕ ಸಮಾನ ಕಂತುಗಳ ಪ್ರಮಾಣವು ತಗ್ಗಿದೆ. ಅಂದರೆ, ಪ್ರತಿ ತಿಂಗಳು ಕಟ್ಟುತ್ತಿದ್ದ ಇಎಂಐ ಮೊತ್ತ ಕುಗ್ಗಿದೆ. ಇಲ್ಲವೇ, ಅಷ್ಟೇ ಪ್ರಮಾಣದ ಇಎಂಐ ಪಾವತಿಸುತ್ತಿರುವ ಗ್ರಾಹಕರ ಸಾಲದ ಕಂತುಗಳ ಪ್ರಮಾಣವು ಇಳಿಯಲಿದೆ.

ಕೆವಿ ಕಾಮತ್ ನೇತೃತ್ವದಲ್ಲಿ ಸಮಿತಿ ರಚನೆ

ಆರ್ಥಿಕ ಕುಸಿತ ಮತ್ತು ಕೊರೊನಾದಿಂದಾಗಿ ಉದ್ಭವಿಸಿರುವ ಸಾಲ ಮರುಪಾವತಿ ಸಮಸ್ಯೆ ಕುರಿತಂತೆ ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸುವ ಸಲುವಾಗಿ ಬ್ರಿಕ್ಸ್ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಅಧ್ಯಕ್ಷ ಕೆವಿ ಕಾಮತ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ಈ ಸಮಿತಿಯು ಬ್ಯಾಂಕುಗಳಲ್ಲಿ ಬೃಹತ್ತಾಗಿ ಬೆಳೆದಿರುವ ಮರುಪಾವತಿಯಾಗದ ಸಾಲಗಳ ವಿಲೇವಾರಿ ಮತ್ತು ಏಕ ಕಾಲಕಾಲದ ಸಾಲಪುನಾರಚನೆ ಕುರಿತಂತೆ ಮಾರ್ಗಸೂಚಿಗಳನ್ನು ರೂಪಿಸಿ, ವ್ಯಾಪ್ತಿ ವಿಸ್ತಾರವನ್ನು ಗುರುತಿಸಲಿದೆ. ಹಿಗ್ಗುತ್ತಿರುವ ಮರುಪಾವತಿಯಾಗದ ಸಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಲಾಗಿದೆ. ಮುಖ್ಯವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಮರುಪಾವತಿಯಾಗದ ಸಾಲದ ಸಮಸ್ಯೆಯು ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಲುಗಾಡಿಸುವ ಮಟ್ಟಕ್ಕೆ ಬಂದಿದೆ. ಈ ಸಾಲವನ್ನು ಇನ್ನೂ ನಿಷ್ಕ್ರಿಯ ಸಾಲವೆಂದು (ಎನ್ಪಿಎ) ಘೋಷಿಸಿಲ್ಲ. ನಿಷ್ಕ್ರಿಯ ಸಾಲವೆಂದು ಘೋಷಿಸಿದರೆ, ಅದರ ವಸೂಲಾತಿಗೆ ಕಾನೂನು ಕ್ರಮಗಳು ಮತ್ತು ಸುಧೀರ್ಘ ಅವಧಿ ಬೇಕಾಗುತ್ತದೆ. ಸಾಲ ಪುನಾರಚನೆ ಮಾಡುವ ಮೂಲಕ ಸಾಲ ಪಡೆದವರಿಗೆ ಮರುಪಾವತಿಗೆ ಅವರ ಸಾಮರ್ಥ್ಯಾನುಸಾರ ಕಾಲಾವಕಾಶವನ್ನು ನೀಡಲಾಗುತ್ತದೆ. ಎಂತಹ ಸಾಲಗಳಿಗೆ ಮತ್ತು ಎಷ್ಟು ಅವಧಿಗೆ ಸಾಲ ಪುನಾರಚನೆ ಮಾಡಿದರೆ ಬ್ಯಾಂಕಿಂಗ್ ಉದ್ಯಮ ಮತ್ತು ಎಸ್ಎಂಇ ವಲಯಕ್ಕೆ ಅನುಕೂಲವಾಗುತ್ತದೆ ಎಂಬುದರ ಬಗ್ಗ ಈ ಕುರಿತಂತೆ ಕೆವಿ ಕಾಮತ್ ಸಮಿತಿ ಮಾರ್ಗಸೂಚಿ ರೂಪಿಸಲಿದೆ.

ಜತೆಗೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸರಾಗವಾಗಿ ನಗದು ಹರಿವು ಕಾಯ್ದುಕೊಳ್ಳಲು ಕ್ರಮ ಪ್ರಕಟಿಸಿರುವ ಆರ್ಬಿಐ, ಮತ್ತೆ 10,000 ಕೋಟಿ ರುಪಾಯಿಗಳನ್ನು ಒದಗಿಸಲಿದೆ. ಈ ಪೈಕಿ ನಬಾರ್ಡ್ 5,000 ಕೋಟಿ ರುಪಾಯಿ ಮತ್ತು ನ್ಯಾಷನಲ್ ಹೌಸಿಂಗ್ ಬ್ಯಾಂಕ್ 5000 ಕೋಟಿ ರುಪಾಯಿ ಪಡೆಯಲಿವೆ. ಇದರಿಂದ ರೆಪೊದರಕ್ಕನುಗುಣವಾಗಿ ಸುಲಭವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಗದು ಲಭ್ಯವಾಗಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com