ಬಿಜೆಪಿ ಮತ್ತು ರಾಮಮಂದಿರಗಳಿಗಾಗಿ ದುಡಿದೂ ದುರಂತ ನಾಯಕನಾದ ಅಡ್ವಾಣಿ
ರಾಷ್ಟ್ರೀಯ

ಬಿಜೆಪಿ ಮತ್ತು ರಾಮಮಂದಿರಗಳಿಗಾಗಿ ದುಡಿದೂ ದುರಂತ ನಾಯಕನಾದ ಅಡ್ವಾಣಿ

2004ರವರೆಗೂ ಪ್ರಧಾನ ಮಂತ್ರಿ‌ ಆಗಿದ್ದ ವಾಜಪೇಯಿ ಅತಿಯಾದ ಆತ್ಮವಿಶ್ವಾಸದಿಂದ ಅವಧಿಗೂ ಮುನ್ನವೇ 'ಇಂಡಿಯಾ ಶೈನಿಂಗ್' ಹೆಸರಿನಲ್ಲಿ ಚುನಾವಣೆಗೆ ಹೋಗಿ ಪೆಟ್ಟುತಿಂದರು. 2004ರಲ್ಲಿ ಬಿಜೆಪಿ ಗಳಿಸಿದ್ದು ಕೇವಲ 138 ಸೀಟು.

ಯದುನಂದನ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಲಕೃಷ್ಣ ಅಡ್ವಾಣಿ ಅವರಿಗೆ ಅವಕಾಶ ನೀಡಿಲ್ಲ ಎನ್ನುವ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಅಡ್ವಾಣಿ ಅವರನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಮಾತನಾಡಲಾಗುತ್ತಿದೆ.‌ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ 'ಅಡ್ವಾಣಿ ಅವರನ್ನು ಕೇಳಿಯೇ ಆಹ್ವಾನಿತರ ಪಟ್ಟಿ ಸಿದ್ದಪಡಿಸಿದ್ದೇವೆ' ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಮಜನ್ಮಭೂಮಿ ಹೋರಾಟ ಮತ್ತು ಬಿಜೆಪಿ ಕಟ್ಟುವುದರಲ್ಲಿ ಲಾಲಕೃಷ್ಣ ಅಡ್ವಾಣಿ ವಹಿಸಿದ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಸ್ವತಂತ್ರ್ಯ ಪೂರ್ವದಿಂದಲೂ ಆರ್ ಎಸ್ ಎಸ್ ತನ್ನ ಬಲಪಂಥದ ಪ್ರತಿಷ್ಠಾಪನೆಗೆ ಪರಿತಪಿಸುತ್ತಿತ್ತು. ಅದಕ್ಕಾಗಿ ರಾಜಕೀಯ ಅಧಿಕಾರವೂ ಬೇಕೆಂದು ನಂಬಿತ್ತು.‌ ಇದೇ ಹಿನ್ನಲೆಯಲ್ಲಿ 1980ರಲ್ಲಿ ಭಾರತೀಯ ಜನತಾ ಪಕ್ಷವನ್ನು ಹುಟ್ಟುಹಾಕಿತು. ಆದರೆ ಅಟಲ್ ಬಿಹಾರಿ‌ ವಾಜಪೇಯಿ ಅಧ್ಯಕ್ಷತೆಯಲ್ಲಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು ಕೇವಲ ಎರಡು ಸಂಸತ್ ಸ್ಥಾನಗಳನ್ನು. ಆಗ ಆರ್ ಎಸ್ ಎಸ್ ಮತ್ತು ಬಿಜೆಪಿಗಳಿಗೆ ಜಾತ್ಯತೀತ ರಾಷ್ಟ್ರದಲ್ಲಿ ನೇರವಾಗಿ ಬಲಪಂಥ ಬಿತ್ತಲು ಪ್ರಯತ್ನಿಸಿದರೆ ಫಲ ಸಿಗುವುದಿಲ್ಲ ಎನ್ನುವುದು ಅರಿವಾಗತೊಡಗಿತು. ಜನರನ್ನು ಧಾರ್ಮಿಕವಾಗಿ ಸೆಳೆದರಷ್ಟೇ ರಾಜಕೀಯ ಅಧಿಕಾರ ಗಳಿಸಲು ಸಾಧ್ಯ ಎನಿಸಿತು. ಅದಕ್ಕಾಗಿಯೇ ಪುರಾಣ ಪುರುಷ ಶ್ರೀರಾಮನ ಜನ್ಮಭೂಮಿ ಎನ್ನಲಾದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದ್ದ ಬಾಬರಿ ಮಸೀದಿಯನ್ನು ಕೆಡವಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂಬ ಹೋರಾಟ ಆರಂಭಿಸಿದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

1986ರಲ್ಲಿ ಸೌಮ್ಯವಾದಿ ಅಟಲ್ ಬಿಹಾರಿ ವಾಜಪೇಯಿಯನ್ನು ಪಕ್ಕಕ್ಕೆ ಸರಿಸಿ ಉಗ್ರಸ್ವರೂಪಿ ಲಾಲಕೃಷ್ಣ ಅಡ್ವಾಣಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಲಾಯಿತು. ಅಡ್ವಾಣಿ ರಾಮಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ದೇಶವ್ಯಾಪ್ತಿ ಸಂಚರಿಸಿ ಉಗ್ರ ಭಾಷಣ ಮಾಡಿ ಹಿಂದುತ್ವವನ್ನು ಉದ್ದೀಪನಗೊಳಿಸಿದ ಪರಿಣಾಮ 1989ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 85 ಸಂಸತ್ ಸದಸ್ಯರನ್ನು ಹೊಂದುವಂತಾಯಿತು. 2 ಸೀಟುಗಳಿಂದ 85 ಸೀಟಿಗೆ ಜಿಗಿದ ಬಿಜೆಪಿಗೆ ಆಗ ರಾಮಜನ್ಮಭೂಮಿ ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದರೆ ಇನ್ನಷ್ಟು ಮೈಕಾಯಿಸಿಕೊಳ್ಳಬಹುದೆಂದು‌ ಸ್ಪಷ್ಟವಾಯಿತು. ಫಲಿತಾಂಶದಿಂದ ಉತ್ತೇಜಿತರಾದ ಅಡ್ವಾಣಿ 1990ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಆರಂಭಿಸಿದರು. ರಥಯಾತ್ರೆ ಮೂಲಕ ಕೋಮುದಳ್ಳುರಿ ಹೊತ್ತಿಸುವಲ್ಲಿ ಸಫಲರಾದರು. ಉಗ್ರಸ್ವರೂಪಿ ಎಂಬುದನ್ನು ಸಾಬೀತುಪಡಿಸಿದರು. ಇದರ ಪರಿಣಾಮ 1991ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 120 ಸಂಸತ್ ಸ್ಥಾನ ಗಳಿಸಿತು‌.

ಇದಾದ ಮೇಲೆ 1991ರಿಂದ 93ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದ ಮುರಳಿ ಮನೋಹರ ಜೋಷಿ ಅವರನ್ನು ಬದಲಾಯಿಸಿ 1996ರ ಲೋಕಸಭಾ ಚುನಾವಣೆಯನ್ನು ಅಡ್ವಾಣಿ ನಾಯಕತ್ವದಲ್ಲಿ ಎದುರಿಸಲಾಯಿತು. ಇದು ಕೂಡ ಫಲ ನೀಡಿತು. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳನ್ನು ಗೆದ್ದಿತ್ತು. ಇದಾದ ಎರಡೇ ವರ್ಷಕ್ಕೆ ಅಂದರೆ 1998ಕ್ಕೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ 182 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿತು.

ಆಗ ವಾಸ್ತವವಾಗಿ 2 ಸೀಟುಗಳಿಂದ 182 ಸೀಟುಗಳವರೆಗೆ ಬಿಜೆಪಿಯನ್ನು ಕೈಹಿಡಿದು ಕರೆತಂದಿದ್ದ ಅಡ್ವಾಣಿ ಪ್ರಧಾನ ಮಂತ್ರಿ ಆಗಬೇಕಿತ್ತು. ಆದರೆ ಎನ್‌ಡಿಎ ಮಿತ್ರ ಪಕ್ಷಗಳು ಸೌಮ್ಯವಾದಿ ಅಟಲ್ ಬಿಹಾರಿ ವಾಜಪೇಯಿ ಕಡೆಗೆ ಒಲವು ತೋರಿದವು. ದೇಶದಲ್ಲಿ ಮೊದಲ ಬಾರಿಗೆ 1998ರ ಮಾರ್ಚ್ 19ರಂದು ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ದೇಶದ ಚುಕ್ಕಾಣಿ ಹಿಡಿಯಿತು. ಲಾಲಕೃಷ್ಣ ಅಡ್ವಾಣಿ ಉಪ ಪ್ರಧಾನಿ ಪಟ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. 2004ರವರೆಗೂ ಪ್ರಧಾನ ಮಂತ್ರಿ‌ ಆಗಿದ್ದ ವಾಜಪೇಯಿ ಅತಿಯಾದ ಆತ್ಮವಿಶ್ವಾಸದಿಂದ ಅವಧಿಗೂ ಮುನ್ನವೇ 'ಇಂಡಿಯಾ ಶೈನಿಂಗ್' ಹೆಸರಿನಲ್ಲಿ ಚುನಾವಣೆಗೆ ಹೋಗಿ ಪೆಟ್ಟುತಿಂದರು. 2004ರಲ್ಲಿ ಬಿಜೆಪಿ ಗಳಿಸಿದ್ದು ಕೇವಲ 138 ಸೀಟು.

ಉಗ್ರವಾದಿ ಅಡ್ವಾಣಿ ನೇತೃತ್ವದಲ್ಲಿ 1998ರಲ್ಲಿ ಚುನಾವಣೆ ಎದುರಿಸಿ ಬಿಜೆಪಿ 182 ಸೀಟು ಗೆದ್ದಿತ್ತು. ಪಕ್ಷ ಅಧಿಕಾರದಲ್ಲಿದ್ದರೂ ತನ್ನ ನೆಲೆ ವಿಸ್ತರಿಸಿಕೊಳ್ಳಲಾಗಲಿಲ್ಲ. 1998ರಿಂದ 2004ರವರೆಗೆ ನಾಲ್ವರು (ಕೇಶುಭಾವ್ ಠಾಕ್ರೆ, ಬಂಗಾರು ಲಕ್ಷ್ಮಣ್, ಜ್ಞಾನ ಕೃಷ್ಣಮೂರ್ತಿ ಮತ್ತು ವೆಂಕಯ್ಯ ನಾಯ್ಡು) ಅಧ್ಯಕ್ಷರನ್ನು ಬದಲಿಸಿತು. ಬಂಡಾರು ಲಕ್ಷ್ಮಣ್ ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಬೇಕಾಯಿತು.‌ ಎಲ್ಲಕ್ಕಿಂತ ಹೆಚ್ಚಾಗಿ 'ಅಜಾತಶತ್ರು' ಎಂದೇ ಹೆಸರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಚುನಾವಣೆ ಎದುರಿಸಿಯೂ 138 ಸ್ಥಾನವನ್ನು ಗಳಿಸಲಾಯಿತು.

ಆಗ ಬಿಜೆಪಿ ಮತ್ತೆ ಮೊರೆ ಹೋಗಿದ್ದು ಲಾಲಕೃಷ್ಣ ಅಡ್ವಾಣಿ ಅವರ ಬಳಿ. 2004ರಲ್ಲಿ ಅಡ್ವಾಣಿ ಮತ್ತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ಆದರೆ ಪಾಕಿಸ್ತಾನದ ಮೊಹಮ್ಮದ್ ಆಲಿ ಜಿನ್ನಾ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು ಎನ್ನುವ ಕಾರಣಕ್ಕೆ ಏಕಾಏಕಿ ಒಂದೇ ವರ್ಷದಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ‌ಕಿತ್ತುಹಾಕಲಾಯಿತು. 2005ರಲ್ಲಿ ರಾಜನಾಥ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ 2009ರಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಇನ್ನಷ್ಟು ಕುಸಿಯಿತು. ಕೇವಲ 116 ಸ್ಥಾನವನ್ನು ಗೆಲ್ಲಬೇಕಾಯಿತು. ಅಷ್ಟೊತ್ತಿಗಾಗಲೇ ಬಿಜೆಪಿಯ ಅಗ್ರನಾಯಕ ಅಟಲ್ ಬಿಹಾರಿ ವಾಜಪೇಯಿ ಅನಾರೋಗ್ಯಕ್ಕೆ ತುತ್ತಾಗಿ‌ ಕೋಮ ಸ್ಥಿತಿ ತಲುಪಿದ್ದರಿಂದ ಮತ್ತು ಯುಪಿಎ -2 ಸರ್ಕಾರದ ಹೆಸರು ಕೆಟ್ಟಿದ್ದರಿಂದ 2014ರಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬಂದರೆ ಅಡ್ವಾಣಿ ಪ್ರಧಾನ ಮಂತ್ರಿ ಆಗಬಹುದು ಎಂದು ಹೇಳಲಾಗುತ್ತಿತ್ತು.

ಆದರೆ ಅಡ್ವಾಣಿ ಬಗ್ಗೆ ಎಳ್ಳಷ್ಟು ಕನಿಕರ ತೋರದ ಆರ್ ಎಸ್ ಎಸ್ 2014ರ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿತು. 282 ಸೀಟು ಗೆದ್ದು ಅಧಿಕಾರವನ್ನೂ ಹಿಡಿಯಿತು. ಅಲ್ಲಿಗೆ ಒಂದು ಕಾಲದ ಉಗ್ರ ನಾಯಕ, ಅಗ್ರನಾಯಕ ಲಾಲಕೃಷ್ಣ ಅಡ್ವಾಣಿ ದುರಂತನಾಯಕರಾದರು.

Click here to follow us on Facebook , Twitter, YouTube, Telegram

Pratidhvani
www.pratidhvani.com