ಪಾಕಿಸ್ತಾನ ತಮ್ಮದೆನ್ನುತ್ತಿರುವ ಜುನಾಗಢ್ ಪ್ರಾಂತ್ಯದ ಹಿನ್ನಲೆಯೇನು?
ರಾಷ್ಟ್ರೀಯ

ಪಾಕಿಸ್ತಾನ ತಮ್ಮದೆನ್ನುತ್ತಿರುವ ಜುನಾಗಢ್ ಪ್ರಾಂತ್ಯದ ಹಿನ್ನಲೆಯೇನು?

ಯಾವಾಗ ಪಾಕಿಸ್ತಾನದೊಂದಿಗೆ ಜುನಾಗಢನ್ನು ವಿಲೀನಗೊಳಿಸುವ ಒಪ್ಪಂದ ಮಾಡಲು ನವಾಬ ಮುಂದುವರೆದನೋ, ಭಾರತ ಸರ್ಕಾರ ಜುನಾಗಢನ್ನು ದಿಗ್ಬಂಧನದಲ್ಲಿಟ್ಟಿತು. ಈ ಒತ್ತಡ ನಿಭಾಯಿಸಲು ಸಾಧ್ಯವಾಗದ ಅಲ್ಲಿನ ನವಾಬ ಮಹಾಬತ್‌ ತನ್ನ ಪರಿವಾರದೊಂದಿಗೆ ಕರಾಚಿಗೆ ಪಲಾಯನ ಮಾಡುತ್ತಾನೆ.

ಶಿವಕುಮಾರ್‌ ಎ

ಹಲವಾರು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಬಗೆಹರಿಸಲಾಗದೆ ಉಳಿದಿರುವ ದೊಡ್ಡ ಸಮಸ್ಯೆ ಕಾಶ್ಮೀರ ವಿವಾದ. ಆದರೆ ಉಭಯ ದೇಶಗಳ ನಡುವೆ ಕಾಶ್ಮೀರದ ಕುರಿತಂತೆ ಮಾತ್ರ ವಿವಾದಗಳಿರುವುದಲ್ಲ. ಭಾರತ ಹಾಗೂ ಪಾಕಿಸ್ತಾನ ಸ್ವತಂತ್ರಗೊಂಡಾಗಿನಿಂದ ಎರಡು ದೇಶಗಳೊಳಗೆ ಪ್ರಾಂತ್ಯಗಳನ್ನು ಹಂಚಿಕೊಳ್ಳುವ ಕುರಿತಂತೆ ತಕರಾರುಗಳು ಎದ್ದಿದ್ದವು. ಇತಿಹಾಸದ ಆ ತಕರಾರು ವರ್ತಮಾನದಲ್ಲೂ ಮುಂದುವರೆಯುತ್ತಿದೆ.

ಬ್ರಿಟೀಷರು ಭಾರತ ಹಾಗೂ ಪಾಕಿಸ್ತಾನವನ್ನು ಪ್ರತ್ಯೇಕಗೊಳಿಸಿ ಸ್ವತಂತ್ರ ನೀಡಿದಾಗ ಎರಡೂ ದೇಶಗಳು ಈಗಿರುವ ಸ್ವರೂಪದಲ್ಲಿರಲಿಲ್ಲ. ಹೈದರಾಬಾದ್‌, ಕಾಶ್ಮೀರ, ಜುನಾಗಢ್‌ ಸೇರಿದಂತೆ ಹಲವು ಪ್ರಾಂತ್ಯಗಳು ಸ್ಥಳೀಯ ರಾಜರ, ನವಾಬರ ಆಳ್ವಿಕೆಯಲ್ಲಿದ್ದವು. ಕಾಶ್ಮೀರದಲ್ಲಿ ರಾಜಾ ಹರಿಸಿಂಗ್‌ ಆಳ್ವಿಕೆ ನಡೆಸುತ್ತಿದ್ದರೆ, ಹೈದರಾಬಾದಿನಲ್ಲಿ ನಿಝಾಮರು ಆಳುತ್ತಿದ್ದರು. ಹರಿಸಿಂಗನ ಆಳ್ವಿಕೆಯಡಿಯಲ್ಲಿ ಬಹುಸಂಖ್ಯೆಯಲ್ಲಿ ಕಾಶ್ಮೀರಿ ಮುಸ್ಲಿಮರು ಇದ್ದರೆ, ನಿಝಾಮರ ಆಳ್ವಿಕೆಯಡಿಯಲ್ಲಿ ಬಹು ಸಂಖ್ಯೆಯಲ್ಲಿ ಹಿಂದೂಗಳಿದ್ದರು.

ಪ್ರಾಂತ್ಯಾಡಳಿತಗಾರರು ಎರಡೂ ದೇಶಗಳೊಂದಿಗೆ ಸೇರಿಕೊಳ್ಳದೆ ಸಾಧ್ಯವಾದಷ್ಟೂ ಸ್ವತಂತ್ರರಾಗಿ ಮುಂದುವರೆಯುವ ಆಲೋಚನೆಯನ್ನು ಹೊಂದಿದ್ದರು. ಆದರೆ ತಮ್ಮ ಪ್ರಾಂತ್ಯಗಳಿಗಿಂತ ಹಿರಿದಾದ ರಾಜಕೀಯ ಶಕ್ತಿಗಳೆದುರು ಇವರ ಯೋಜನೆಗಳು ಪೂರ್ತಿಯಾಗಲಿಲ್ಲ. ಅಂತಹ ಒಂದು ನಿರ್ಣಾಯಕ ಘಟ್ಟದಲ್ಲಿ ರಾಜಾ ಹರಿಸಿಂಗ್‌ ಭಾರತದ ಒಕ್ಕೂಟದೊಂದಿಗೆ ಕಶ್ಮೀರವನ್ನು ವಿಲೀನಗೊಳಿಸುತ್ತಾನೆ. ಹೈದರಾಬಾದ್‌ ನಿಜಾಮ ಭಾರತದೊಂದಿಗೆ ಸೇರಿಕೊಳ್ಳಲು ಬಯಸದೆ ಪಾಕಿಸ್ತಾನದೊಂದಿಗೆ ಸೇರಿಕೊಳ್ಳಲು ಮುಂದುವರೆಯುತ್ತಾನೆ. ಇನ್ನು ಕಾದರೆ ತಮಗೆ ಅಪಾಯವೆಂದು ಅರಿತ, ಭಾರತದ ಸರ್ಕಾರ ಅವತ್ತು ಸೈನ್ಯ ದಾಳಿ ಮಾಡಿ ಹೈದರಾಬಾದನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳುತ್ತದೆ.

ಇಂತಹದ್ದೇ ಒಂದು ಇತಿಹಾಸ ಗುಜರಾತಿನ ತೀರ ಪ್ರಾಂತ್ಯವಾದ ಜುನಾಗಢ್‌ಗೂ ಇದೆ. ಅಲ್ಲಿನ ಬಹುಸಂಖ್ಯಾತ ಹಿಂದೂಗಳನ್ನು ಆಳುತ್ತಿದ್ದ ನವಾಬ, ಪಾಕಿಸ್ತಾನದೊಂದಿಗೆ ಸೇರಿಕೊಳ್ಳಲು ಒಪ್ಪಂದ ಮಾಡಿಕೊಳ್ಳುತ್ತಾನೆ. ಪಾಕ್‌ನೊಂದಿಗೆ ಯಾವ ಗಡಿಯನ್ನೂ ಹಂಚಿಕೊಳ್ಳದಿದ್ದ ಜುನಾಗಢ್‌, ಪ್ರಾಂತ್ಯವನ್ನು ಸುತ್ತಲೂ ಭಾರತದ ಭೂಭಾಗ ಸುತ್ತಿಕೊಂಡಿತ್ತು. ಅದು ಪಾಕಿಸ್ತಾನದ ವಶವಾಗುವುದು ಭಾರತದ ಮಟ್ಟಿಗೆ ದೊಡ್ಡ ಹಾನಿಯನ್ನು ಒಡ್ಡಬಹುದಿತ್ತು. ಅಲ್ಲದೆ ಅಲ್ಲಿನ 99.5% ಜನರೂ ಭಾರತದೊಂದಿಗೆ ವಿಲೀನಗೊಳ್ಳಲು ಬಯಸಿದ್ದರು.

ಮಹಮದ್‌ ಮಹಾಬತ್‌ ಖಾಂಜಿ
ಮಹಮದ್‌ ಮಹಾಬತ್‌ ಖಾಂಜಿ

ಆದರೆ ಅಲ್ಲಿನ ನವಾಬ ಮಹಮದ್‌ ಮಹಾಬತ್‌ ಖಾಂಜಿ ತನ್ನ ಪ್ರಾಂತ್ಯವನ್ನು ಮೂರು ಭಾಗದಿಂದ ಭಾರತದ ಪ್ರದೇಶಗಳು ಸುತ್ತುವರೆದಿದ್ದರೂ ತಾನು ಸಮುದ್ರ ಮಾರ್ಗವಾಗಿ ಪಾಕಿಸ್ತಾನದೊಂದಿಗೆ ಸಂಬಂಧ ಇರಿಸುತ್ತೇನೆಂಬ ವಿಲಕ್ಷಣ ವಾದ ಮುಂದಿಟ್ಟಿದ್ದರು. ಮನವೊಲಿಸುವ ಭಾರತ ಸರ್ಕಾರದ ಪ್ರಯತ್ನಗಳೆಲ್ಲಾ ವಿಫಲಗೊಳ್ಳುತ್ತಿತ್ತು. ಯಾವಾಗ ಪಾಕಿಸ್ತಾನದೊಂದಿಗೆ ನವಾಬ ವಿಲೀನಗೊಳಿಸುವ ಒಪ್ಪಂದ ಮಾಡಲು ಮುಂದುವರೆದನೋ, ಭಾರತ ಸರ್ಕಾರ ಜುನಾಗಢನ್ನು ದಿಗ್ಬಂಧನದಲ್ಲಿಟ್ಟಿತು. ಈ ಒತ್ತಡ ನಿಭಾಯಿಸಲು ಸಾಧ್ಯವಾಗದ ಅಲ್ಲಿನ ನವಾಬ ಮಹಾಬತ್‌ ತನ್ನ ಪರಿವಾರದೊಂದಿಗೆ ಕರಾಚಿಗೆ ಪಲಾಯನ ಮಾಡುತ್ತಾನೆ.

ತನ್ನ ಚಾಣಾಕ್ಷ ರಾಜತಾಂತ್ರಿಕ ನೀತಿಯೊಂದಿಗೆ ಆವಾಗಿನ ಭಾರತ ಸರ್ಕಾರ ಜುನಾಗಢನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಜವಹಾರ್‌ಲಾ ಪಂಡಿತ್‌ ನೇತೃತ್ವದ ಸರ್ಕಾರ ಪಾಕಿಸ್ತಾನದೊಂದಿಗೆ ವಿಲೀನಗೊಳ್ಳಲು ಬಯಸಿದ್ದ ಹೈದರಾಬಾದ್, ಜುನಾಗಢ್‌ನ್ನು ಪ್ರಾಂತ್ಯವನ್ನು ತನ್ನಲ್ಲಿಯೇ ಇರಿಸಿಕೊಂಡಿತ್ತು. ಪಾಕಿಸ್ತಾನ ಪ್ರಧಾನಿ ಜಿನ್ನಾ ಕಾಶ್ಮೀರವನ್ನು ರಾಣಿಯೆಂದೇ ಪರಿಗಣಿಸಿದ್ದರು. ಅದನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳುವುದು ಜಿನ್ನಾರ ಅದಮ್ಯ ಬಯಕೆಯಾಗಿತ್ತು. ಆದರೆ ಭಾರತ ಸರ್ಕಾರ ಜಿನ್ನಾ ಕನಸನ್ನು ಪೂರ್ಣಗೊಳಿಸಲು ಬಿಡಲಿಲ್ಲ. ಕಾಶ್ಮೀರವನ್ನೂ ಭಾರತದೊಂದಿಗೆ ವಿಲೀನಗೊಳಿಸಿತು.

ಅತ್ತ ಕಾಶ್ಮೀರವನ್ನೂ ಕಳೆದುಕೊಂಡ ಪಾಕಿಸ್ತಾನ, ಇತ್ತ ಜುನಾಗಢನ್ನೂ ಕಳೆದುಕೊಂಡಿತ್ತು. ತೀವ್ರ ಮುಜುಗರ, ಹತಾಷೆ ಎದುರಿಸಿದ ಪಾಕಿಸ್ತಾನ ಇಂದಿಗೂ ಈ ಎರಡು ಭಾಗವನ್ನು ತನ್ನ ಭಾಗವೆಂದು ವಾದ ಮಾಡುತ್ತಿದೆ. ಆಗಸ್ಟ್‌ 4 ರಂದು ಪಾಕಿಸ್ತಾನ ಪ್ರಧಾನಿ ಈ ಎರಡೂ ಭಾಗಗಳನ್ನು ಪಾಕಿಸ್ತಾನಕ್ಕೆ ಸೇರಿಕೊಂಡಿರುವ ಭಾಗ ಎಂದು ಪಾಕಿಸ್ತಾನದ ಹೊಸ ನಕ್ಷೆಯನ್ನು ಅನಾವರಣಗೊಳಿಸಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ನೇಪಾಳ ಹೊಸ ನಕಾಶೆ ಹೊರಡಿಸಿ, ಭಾರತದ ನೆಲವನ್ನು ತನ್ನ ನೆಲವೆಂದು ಹೇಳಿಕೊಂಡಿತ್ತು. ಚೀನಾ ಗಾಲ್ವಾನ್‌ನಲ್ಲಿ ಸಂಘರ್ಷಕ್ಕಿಳಿದು ಭಾರತದ 20 ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದುಕೊಂಡಿತ್ತು.

ಒಟ್ಟಿನಲ್ಲಿ ಭಾರತದ ಅಂತರಾಷ್ಟ್ರೀಯ ಸಂಬಂಧಗಳು ಕುಸಿದಿದೆ. ನೆರೆಯ ರಾಷ್ಟ್ರಗಳು ಒಟ್ಟಿಗೆ ಭಾರತದ ವಿರುದ್ಧ ಕಾಳಗಕ್ಕೆ ನಿಂತಿದೆ. ನರೇಂದ್ರ ಮೋದಿ ಅಂತರಾಷ್ಟ್ರೀಯ ಸಂಬಂಧಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಯತ್ನಿಸಬೇಕಾದ ಅಗತ್ಯ ಹೆಚ್ಚಿದೆ. ಯುದ್ಧ ಮಾಡುವಂತಹ ಪರಿಸ್ಥಿತಿಯಲ್ಲಿ ದೇಶವಂತೂ ಖಂಡಿತಾ ಇಲ್ಲ.

ಪಾಕಿಸ್ತಾನ ಬಿಡುಗಡೆಗೊಳಿಸಿರುವ ಹೊಸ ನಕಾಶೆ (ಒಳಚಿತ್ರದಲ್ಲಿ ಜುನಾಗಢ್‌ ಹಾಗೂ ಮನವಡಾರ್‌ ಅನ್ನು ತನ್ನ ನಕ್ಷೆಯಲ್ಲಿ ಸೇರ್ಪಡಿಸುವುದು ಕಾಣಬಹುದು)
ಪಾಕಿಸ್ತಾನ ಬಿಡುಗಡೆಗೊಳಿಸಿರುವ ಹೊಸ ನಕಾಶೆ (ಒಳಚಿತ್ರದಲ್ಲಿ ಜುನಾಗಢ್‌ ಹಾಗೂ ಮನವಡಾರ್‌ ಅನ್ನು ತನ್ನ ನಕ್ಷೆಯಲ್ಲಿ ಸೇರ್ಪಡಿಸುವುದು ಕಾಣಬಹುದು)

Click here to follow us on Facebook , Twitter, YouTube, Telegram

Pratidhvani
www.pratidhvani.com