ಭಾಗ- 2: ಬಾಬರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು
ರಾಷ್ಟ್ರೀಯ

ಭಾಗ- 2: ಬಾಬರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು

ಅಯೋಧ್ಯೆಯಲ್ಲಿ ವಿಎಚ್‌ಪಿ-ಬಿಜೆಪಿಯ ಕರಸೇವಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಿಂದಾಗಿ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಕಣ್ಣಲ್ಲಿ ನಿಜವಾದ ಹೀರೋ ಆಗಿಬಿಟ್ಟಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಆದ ನಷ್ಟದಿಂದ ಲಾಲು-ಮುಲಾಯಂ ಅವರಿಗೆ ಲಾಭವಾಗಿ ಪರಿಣಮಿಸಿತ್ತು

ಯದುನಂದನ

ಭಾರತದ ಅತಿದೊಡ್ಡ ವಿವಾದವಾಗಿ, ಸುದೀರ್ಘ ಕಾನೂನು ಹೋರಾಟವನ್ನು ಕಂಡ ಅಯೋಧ್ಯೆಯ ಬಾಬರಿ‌ ಮಸೀದಿ- ರಾಮಜನ್ಮಭೂಮಿ ವಿವಾದದಲ್ಲಿ ಹೋರಾಟ ಮಾಡಿದವರು, ರಾಜಕೀಯವಾಗಿ ಎದ್ದವರು, ಬಿದ್ದವರ ಬಗ್ಗೆ ಹೇಳುತ್ತಾ ಕಳೆದ ಸಂಚಿಕೆಯಲ್ಲಿ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಬಗ್ಗೆ ಮತ್ತು ಮುಖ್ಯವಾಗಿ ಆ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದವರ ಬಗ್ಗೆ ಉಲ್ಲೇಖಿಸಲಾಗಿತ್ತು. ಇಂದು ಇಡೀ ಪ್ರಕರಣದ ಮತ್ತೊಂದು ಮಗ್ಗಲನ್ನು ನೋಡೋಣ. ಮುಸ್ಲಿಂ ಸಮುದಾಯದ ಫಿರಿಯಾರುದಾರರು, ಅವರ ಹೋರಾಟ, ಕಾಂಗ್ರೆಸ್ ನಾಯಕರ ಪಾತ್ರ, ಇದಕ್ಕೆ ಹೊರತಾಗಿ ರಾಜಕೀಯವಾಗಿ ಮೇಲೆದ್ದವರ ಬಗ್ಗೆ ತಿಳಿಯೋಣ.

ಅಲಿ ಮಿಯಾ, ಜಫರ್ಯಾಬ್ ಜಿಲಾನಿ, ಅಜಮ್ ಖಾನ್ ಮತ್ತು ಹಶಿಮ್ ಅನ್ಸಾರಿ

ಮುಸ್ಲಿಂ ಸಮುದಾಯದ ಪರವಾಗಿ ವಿವಾದದುದ್ದಕ್ಕೂ ಗಟ್ಟಿಯಾಗಿ ನಿಂತು‌ ಹೋರಾಡಿದ ಪ್ರಮುಖ ವ್ಯಕ್ತಿಗಳೆಂದರೆ ಅಲಿ ಮಿಯಾ, ಜಫರ್ಯಾಬ್ ಜಿಲಾನಿ, ಅಜಮ್ ಖಾನ್ ಮತ್ತು ಹಶಿಮ್ ಅನ್ಸಾರಿ. 1980ರ ದಶಕದಲ್ಲಿ ರಾಮಜನ್ಮೂಭೂಮಿ‌ ಆಂದೋಲನವು ವೇಗವನ್ನು ಪಡೆದುಕೊಳ್ಳುತ್ತಿದ್ದಂತೆ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು‌ ಧಾರ್ಮಿಕವಾಗಿ ಕೂಡ ಸಂಚಲನ ಉಂಟಾಗಲು ಶುರುವಾಯಿತು. ಆಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಮತ್ತು ಅದರ ಅಡಿಯಲ್ಲಿ ಬಾಬರಿ ಮಸೀದಿ ಕ್ರಿಯಾ ಸಮಿತಿ ಕೂಡ ಪ್ರಾಮುಖ್ಯತೆ ಪಡೆದುಕೊಂಡಿತು. ಅಲಿ ಮಿಯಾ, ಹಾಶಿಮ್ ಅನ್ಸಾರಿ, ಜಫಾರ್ಯಾಬ್ ಜಿಲಾನಿ ಮತ್ತು ಅಜಮ್ ಖಾನ್ ಅವರು ಪ್ರತಿರೋಧದ ಧ್ವನಿಯಾಗಿ ಮುಂದೆ ಬಂದರು. 1986ರಲ್ಲಿ ಅಂದಿನ ಸರ್ಕಾರ ಅಯೋಧ್ಯೆಯ ಮಸೀದಿ ಬಾಗಿಲು ತೆರೆಯಲು ಅವಕಾಶ ಕೊಟ್ಟಾಗ ಎಐಎಂಪಿಎಲ್‌ಬಿಯ ಅಧ್ಯಕ್ಷರಾಗಿದ್ದ ಅಲಿ ಮಿಯಾ ಅವರು ಮಂಡಳಿಯ ನಿರ್ಣಾಯಕ ಸಭೆಗೆ ಕರೆ ನೀಡಿದರು. ಅಲ್ಲದೆ ಆ ಮೂಲಕ ಬಾಬರಿ ಮಸೀದಿ ಕ್ರಿಯಾ ಸಮಿತಿ ರಚನೆಗೆ ದಾರಿ ಮಾಡಿಕೊಟ್ಟರು.

ವಕೀಲ ಜಫರ್ಯಾಬ್ ಜಿಲಾನಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರು ಮೊದಲ ಕನ್ವೀನರ್‌ಗಳಾಗಿ ಆಯ್ಕೆಯಾದರು. ಮುಖ್ಯದಾವೆಯಲ್ಲಿ ಕಾನೂನು ವಿಚಾರಣೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮಂಡಳಿಯು ವಹಿಸಿಕೊಂಡಿತು. ಜಿಲಾನಿ ಕ್ರಮೇಣ ಮುಸ್ಲಿಂ ಪರ ಕಾನೂನು ಹೋರಾಟದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡರು. 1961ರ ಹಿಂದೆಯೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ ಮುಸ್ಲಿಂ ದಾವೆದಾರರಲ್ಲಿ ಹಶೀಮ್ ಅನ್ಸಾರಿ ಅನುಭವಿಯಾಗಿದ್ದರು. ಹಾಶಿಮ್ ಅನ್ಸಾರಿ ಅವರ ಸಾವಿನ ನಂತರ ಅವರ ಮಗ ಇಕ್ಬಾಲ್ ಈ ಪ್ರಕರಣದಲ್ಲಿ ದಾವೆಯನ್ನು ಮುಂದುವರೆಸಿದರು. ಇನ್ನೊಂದೆಡೆ ಅಜಮ್ ಖಾನ್ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಜೊತೆ ಹೆಚ್ಚು ಸಕ್ರೀಯಾವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು. ಜೊತೆಗೆ ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ಮುಸ್ಲಿಂ ರಾಜಕೀಯದ ಧ್ವನಿಯಾಗಿ ಕಾಣಿಸಿಕೊಂಡರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜೀವ್ ಗಾಂಧಿ ಮತ್ತು ನರಸಿಂಹ ರಾವ್

ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ರಾಜೀವ್ ಗಾಂಧಿ ಮತ್ತು ನರಸಿಂಹ ರಾವ್ ಅವರ ಪಾತ್ರಗಳನ್ನು ವ್ಯಾಖ್ಯಾನಿಸದೆ ಮಸೀದಿ-ಮಂದಿರದ ಸಾಹಸದ ಪ್ರಮುಖ ಕಥೆ ಪೂರ್ಣಗೊಳ್ಳುವುದಿಲ್ಲ. ಅಂದು ಸರಿಯಾದ ತೀರ್ಪುಗಳನ್ನು ಕೈಗೊಳ್ಳುವುದರಲ್ಲಿ ಎಡವಿದ ಈ ಇಬ್ಬರು ಕಾಂಗ್ರೆಸ್ ಪ್ರಧಾನ ಮಂತ್ರಿಗಳು, ಮೃದು ಹಿಂದುತ್ವವನ್ನು ‌ಪಾಲಿಸುವ ಮೂಲಕ ಇತ್ತ ಮುಸ್ಲಿಮರ ನಂಬಿಕೆಯನ್ನೂ ಉಳಿಸಿಕೊಳ್ಳದೆ, ಅತ್ತ ಹಿಂದೂಗಳ ವಿಶ್ವಾಸವನ್ನೂ ಗಳಿಸದೆ ರಾಜಕೀಯವಾಗಿ ಸಂಚಕಾರ ತಂದುಕೊಂಡರು. ಈ ಇಬ್ಬರು ತುಳಿದ ಮೃದು ಹಿಂದುತ್ವದ ಹಾದಿಯಿಂದ ಕಾಂಗ್ರೆಸ್ ಕುಸಿತ ಆರಂಭವಾಯಿತು. ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿ ಬಾಬರಿ ಮಸೀದಿಯ ಬೀಗಗಳನ್ನು ತೆರೆಯಲು ನಿರ್ಧರಿಸಿದರು. ಆ ಮೂಲಕ ಬಿಜೆಪಿ ಮತ್ತು ಹಿಂದುತ್ವ ದಳಕ್ಕೆ ಅಗತ್ಯವಾದ ಪ್ರಚೋದನೆಯನ್ನು ನೀಡಿದರು. ನರಸಿಂಹ ರಾವ್ ಅವರ ಸರ್ಕಾರವು ಬಾಬರಿ ಮಸೀದಿಯನ್ನು ತಡೆಯುವಲ್ಲಿ ವಿಫಲವಾಯಿತು. ಕೇಂದ್ರ ಸರ್ಕಾರವೇ ಪರೋಕ್ಷವಾಗಿ ಬೆಂಬಲ ನೀಡಿದ್ದರಿಂದ ಅಂದು ಕೇಸರಿ ನಾಯಕರು ಸಂಭ್ರಮಪಟ್ಟಿದ್ದರು. ಮುಸ್ಲಿಮರು ಕಾಂಗ್ರೆಸ್ ಪಕ್ಷದಿಂದ ದೂರವಾಗಲು ನಿಶ್ಚಯಿಸಿದ್ದರು. ಇದರಿಂದ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ರೀತಿಯ ಸಂಚಲನ ಸೃಷ್ಟಿಯಾಗಿತ್ತು. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ರಾಜಕೀಯ ಚಿತ್ರಣವೇ ಬದಲಾಗಿಬಿಟ್ಟಿತು.

ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್

ರಾಮಜನ್ಮಭೂಮಿ ವಿವಾದವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದೂ ಮತದಾರರು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದರು. ಅಷ್ಟೇ ಅಲ್ಲ ಈ ಎರಡೂ ರಾಜ್ಯದಲ್ಲಿ ನಿರ್ಣಾಯಕವಾಗಿರುವ ಮುಸ್ಲಿಂ ಸಮುದಾಯದ ಮತದಾರರು ಮೃದು ಹಿಂದುತ್ವ ಪಾಲಿಸುತ್ತಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ವಿರುದ್ಧದ ನಿಲುವು ತೆಳೆದಿದ್ದರು. ಇದರಿಂದ ಹಿಂದಿ ಹೃದಯಭೂಮಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೊರತಾಗಿ ಹೊಸ ರಾಜಕೀಯ ಶಕ್ತಿಗಳು ಹುಟ್ಟಿಕೊಳ್ಳುವಂತಾಯಿತು. ಅವರೇ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್.

1980ರ ದಶಕದ ಉತ್ತರಾರ್ಧದಲ್ಲಿ ಮಂಡಲ್ ಅಲೆ ಸೃಷ್ಟಿಸಿದ ಹೊಸ ಹಿಂದುಳಿದ ಜಾತಿ ಪುನರುತ್ಥಾನದ ಮಧ್ಯೆ ಮುಲಾಯಂ ಸಿಂಗ್ ಮತ್ತು ಲಾಲು ಪ್ರಸಾದ್ ಯಾದವದ್ವಯರು ಉದಯೋನ್ಮುಖ ರಾಜಕೀಯ ತಾರೆಗಳಾಗಿ ಹೊರಹೊಮ್ಮಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪಿತಾಮಹ ಮುಲಾಯಂ ಸಿಂಗ್ ಯಾದವ್ ಮತ್ತು ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿಯಾದರು. ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು‌ ಪ್ರಸಾದ್ ಯಾದವ್ 1990ರಲ್ಲಿ ಅಡ್ವಾಣಿಯ ರಥಯಾತ್ರೆಯನ್ನು ನಿಲ್ಲಿಸಿ ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಸೃಷ್ಟಿಸಿದರು. ಇನ್ನೊಂದೆಡೆ ಅದೇ ವರ್ಷ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ “ಪರಿಂದಾ ಭಿ ಪಾರ್ ನಹಿ ಮಾರ್ ಸಕ್ತಾ" ಎಂದು ಘೋಷಿಸಿದರು. ಅಲ್ಲದೆ ಅಯೋಧ್ಯೆಯಲ್ಲಿ ವಿಎಚ್‌ಪಿ-ಬಿಜೆಪಿಯ ಕರಸೇವಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಿಂದಾಗಿ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಕಣ್ಣಲ್ಲಿ ನಿಜವಾದ ಹೀರೋ ಆಗಿಬಿಟ್ಟಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಆದ ನಷ್ಟದಿಂದ ಲಾಲು-ಮುಲಾಯಂ ಅವರಿಗೆ ಲಾಭವಾಗಿ ಪರಿಣಮಿಸಿತ್ತು.‌ ಅಂದು‌ ಈ ಯಾದವದ್ವಯರು ಗಳಿಸಿದ ಪ್ರಾಬಲ್ಯ ಇಂದಿಗೂ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಅಂದು ನಿರ್ಮಾಣವಾದ ಮುಸ್ಲಿಮ್-ಯಾದವ್ ಸಮೀಕರಣ ಈಗಲೂ ದೇಶದ ಎರಡು ದೊಡ್ಡ ಹಿಂದಿ ರಾಜ್ಯಗಳ ಚುನಾವಣೆಗಳನ್ನು ನಿಯಂತ್ರಿಸುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ

ಅಂದು ಹಿಮ್ಮುಖವಾಗಿ ಚಲಿಸಲು ಆರಂಭಿಸಿದ ಕಾಂಗ್ರೆಸ್ ಪಕ್ಷ ಇಂದಿಗೂ ಚೇತರಿಸಿಕೊಂಡಿಲ್ಲ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲೂ.‌ 2004ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರ ನಡೆಸಿರಬಹುದು. ಆದರೆ ಅದು ಮೈತ್ರಿ ಸರ್ಕಾರವಾಗಿತ್ತು. ಕಾಂಗ್ರೆಸ್ ಹಲವು ಮುಲಾಜು, ಮರ್ಜಿಯಲ್ಲಿ ಕುರ್ಚಿಯಲ್ಲಿತ್ತು. ಅದೇ ಕಾರಣಕ್ಕೆ ಮಿತ್ರ ಪಕ್ಷಗಳ ಭ್ರಷ್ಟಾಚಾರಕ್ಕೆ ಬೆಲೆ ತೆತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಸ್ಥಾನ ಗಳಿಸಬೇಕಾಯಿತು. ಇನ್ನು 1980ರಲ್ಲಿ ಕೇವಲ ಇಬ್ಬರು ಸಂಸದರನ್ನು ಮಾತ್ರವೇ ಹೊಂದಿದ್ದ ಬಿಜೆಪಿ ಜಾತ್ಯಾತೀತ ರಾಷ್ಟ್ರದಲ್ಲಿ‌ ಹಿಂದುತ್ವದ ಹೆಸರು ಹೇಳಿಕೊಂಡು ರಾಜಕಾರಣ ಮಾಡಿ ಇಂದು 303 ಸಂಸತ್ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ದೇಶದ ಅತಿದೊಡ್ಡ ಪಕ್ಷವಾಗಿದೆ. ಉತ್ತರ ಪ್ರದೇಶದಲ್ಲಿ ಸ್ವತಂತ್ರವಾಗಿ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ‌.

Click here to follow us on Facebook , Twitter, YouTube, Telegram

Pratidhvani
www.pratidhvani.com