ಪ್ರಧಾನಿ ಕಾಳಜಿ ಬೆತ್ತಲಾಗಿಸಿತೆ ‘ಪಿಎಂ ಕೇರ್ಸ್ ವೆಂಟಿಲೇಟರ್’ ಖರೀದಿ ವ್ಯವಹಾರ?
ಒಟ್ಟಾರೆ ಇಡೀ ಪಿಎಂ ಕೇರ್ಸ್ ನಿಧಿ ಬಳಕೆ ಮತ್ತು ಅದರ ನಿರ್ವಹಣೆಯ ವಿಷಯದಲ್ಲಿ ಸಾರ್ವಜನಿಕ ವಲಯದಲ್ಲಿ ಈವರೆಗೆ ಎದ್ದಿರುವ ಅನುಮಾನಗಳನ್ನು ವೆಂಟಿಲೇಟರ್ ಖರೀದಿ ವ್ಯವಹಾರ ನಿಜಮಾಡುತ್ತಿದೆ! ಕೋವಿಡ್-19 ರ ಸಂಕಷ್ಟದ ಹೊತ್ತನ್ನು ಕೇಂದ್ರ ಬಿಜೆಪಿ ಸರ್ಕ ...

ಕೋವಿಡ್-19 ಸಂಕಷ್ಟದ ಹೊತ್ತಲ್ಲಿ ದೇಶದ ಜನರ ನೆರವಿಗಾಗಿ ಸ್ಥಾಪಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿದ್ದ ಪಿಎಂ ಕೇರ್ಸ್ ಕುರಿತ ವಿವಾದ ಇನ್ನೂ ಬಗೆಹರಿದಿಲ್ಲ. ಈ ನಡುವೆ, ಪಿಎಂ ಕೇರ್ಸ್ ನಿಧಿ ಬಳಸಿ ದೇಶದ ಖರೀದಿಸಿದ್ದ ಪಿಎಂ ಕೇರ್ಸ್ ವೆಂಟಿಲೇಟರುಗಳನ್ನು ಬಳಸಲು ದೇಶದ ಆಸ್ಪತ್ರೆಗಳು ಹಿಂದೇಟು ಹಾಕಿದ್ದು, ಅವುಗಳನ್ನು ಗುಟ್ಟಾಗಿ ರಫ್ತು ಮಾಡಲು ಸರ್ಕಾರ ಹೊಸ ಹಾದಿ ಕಂಡುಕೊಂಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಈಗಾಗಲೇ ಪ್ರಧಾನಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿ(ಪಿಎಂಎನ್ ಡಿಆರ್ ಎಫ್) ಮತ್ತು ಆಯಾ ರಾಜ್ಯಗಳ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್ ಡಿಆರ್ ಎಫ್) ನಿಧಿಗಳು ತುರ್ತು ವಿಕೋಪ ಪರಿಸ್ಥಿತಿ ಎದುರಿಸಲೆಂದೇ ಇರುವಾಗ, ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಪಾರದರ್ಶಕವಲ್ಲದ ಮತ್ತೊಂದು ನಿಧಿಯ ಅಗತ್ಯವೇನು ಎಂಬ ಕುರಿತ ಹಲವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಮುಂದುವರಿದೆ. ಈ ನಡುವೆ ಕಳೆದ ವಾರ ಕೂಡ, ಈ ನಿಧಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಾರ್ವಜನಿಕ ದೇಣಿಗೆ ಪಡೆಯಲು ರಚಿಸಿರುವ ಸಂಪೂರ್ಣ ಸಾರ್ವಜನಿಕ ಟ್ರಸ್ಟ್ ಆಗಿದ್ದು, ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನ ಮುಂದೆ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಪಿಎಂ ಕೇರ್ಸ್ ಒಂದು ಸಾರ್ವಜನಿಕ ಟ್ರಸ್ಟ್ ಎನ್ನುವ ಅದೇ ಸರ್ಕಾರ, ಸಾರ್ವಜನಿಕ ಟ್ರಸ್ಟಿನ ದೇಣಿಗೆಯ ಕುರಿತ ಮಾಹಿತಿಯನ್ನು ಮಾತ್ರ ಸಾರ್ವಜನಿಕಗೊಳಿಸಲಾಗದು. ಆ ಕುರಿತ ಹಣಕಾಸು ವಹಿವಾಟಿನ ಮಾಹಿತಿಯನ್ನು ಪಡೆಯುವ ಹಕ್ಕು ಜನರಿಗಾಗಲೀ, ಅಥವಾ ಸರ್ಕಾರದ ಮಹಾಲೆಕ್ಕಪಾಲರಿಗಾಗಲೀ ಇಲ್ಲ. ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಈ ನಿಧಿ ಬರುವುದೇ ಇಲ್ಲ ಎಂದೂ ಹೇಳುತ್ತಿದೆ! ಸರ್ಕಾರದ ಈ ದ್ವಿಮುಖ ನೀತಿಯೇ ಪಿಎಂ ಕೇರ್ಸ್ ಕುರಿತ ಹಲವು ಅನುಮಾನ ಮತ್ತು ಶಂಕೆಗಳಿಗೆ ಇಂಬು ನೀಡುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಕರ್ಚುವೆಚ್ಚದ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂಬುದು ಆರ್ ಟಿಐ ಅಥವಾ ಇನ್ನಾವುದೇ ಕಾಯ್ದೆ, ಕಾನೂನುಗಳನ್ನು ಮೀರಿದ ಕನಿಷ್ಟ ಸಾರ್ವಜನಿಕ ಶಿಷ್ಟಚಾರ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆ. ಅಲ್ಲದೆ, ಒಂದು ಸರ್ಕಾರದ ಚುಕ್ಕಾಣಿ ಹಿಡಿದವರೇ, ಅದೇ ಸರ್ಕಾರದ ವಿಪತ್ತು ಪರಿಹಾರ ನಿಧಿಗಳ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸದೇ, ಪ್ರತ್ಯೇಕ ನಿಧಿ ಸ್ಥಾಪಿಸುವುದು ಎಂದರೆ; ಅದರರ್ಥ ಸರ್ಕಾರದ ಮೇಲೆ ಸರ್ಕಾರದ ಚುಕ್ಕಾಣಿ ಹಿಡಿದವರಿಗೇ ನಂಬಿಕೆ ಇಲ್ಲ ಎಂದಾಗುವುದಿಲ್ಲವೇ? ಎಂಬ ಪ್ರಶ್ನೆಯೂ ಇದೆ.

ಈ ನಡುವೆ, ಪಿಎಂ ಕೇರ್ಸ್ ನಿಧಿಯಲ್ಲಿ ಸಂಗ್ರಹವಾಗಿದೆ ಎನ್ನಲಾಗುತ್ತಿರುವ ಬೃಹತ್ ಮೊತ್ತದ ಸಾರ್ವಜನಿಕ ದೇಣಿಗೆಯನ್ನು ಪ್ರಧಾನಮಂತ್ರಿಗಳು ಹೇಗೆ ಮತ್ತು ಯಾವುದಕ್ಕೆ ಕರ್ಚು ಮಾಡುತ್ತಿದ್ದಾರೆ ಎಂಬುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಬಹುಪಾಲು ದೇಶದ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ ಆರ್ ಫಂಡ್) ಈ ಪಿಎಂ ಕೇರ್ಸ್ ಗೆ ಹರಿದುಬಂದಿದ್ದು, ಅಪಾರ ಪ್ರಮಾಣದ ಹಣ ನಿಜವಾಗಿಯೂ ಕೋವಿಡ್-19 ನಿರ್ವಹಣೆಗೆ ಪ್ರಾಮಾಣಿಕವಾಗಿ ಮತ್ತು ವಿವೇಚನಾತ್ಮಕವಾಗಿ ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಕೂಡ ಹಲವರು ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆಗಳನ್ನು ಹೂಡಿದ್ದಾರೆ.

ಇದೀಗ ಪಿಎಂ ಕೇರ್ಸ್ ಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ ಸಾಕೇತ್ ಗೋಖಲೆ ಹಲವು ಮಾಹಿತಿಯನ್ನು ಹೊರಗೆಡವಿದ್ದು, ಪಿಎಂ ಕೇರ್ಸ್ ನಿಧಿಯ ವಿಷಯದಲ್ಲಿ ಅದರ ಟ್ರಸ್ಟಿಗಳಾದ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಗಳು ಎಷ್ಟು ಪಾರದರ್ಶಕವಾಗಿ ಮತ್ತು ವಿವೇಚನೆಯಿಂದ ಬಳಸುತ್ತಿದ್ದಾರೆ ಎಂಬುದನ್ನು ಬಯಲುಮಾಡಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಿಂದ ತಪ್ಪಿಸಿಕೊಳ್ಳುವುದು ಮತ್ತು ಹಣಕಾಸಿನ ಅಂಕಿಅಂಶಗಳ ಕುರಿತ ಮಾಹಿತಿಯನ್ನು ಮುಚ್ಚಿಡುವ ಮೂಲಕ ಪಿಎಂ ಕೇರ್ಸ್ ಹೇಗೆ ವೆಂಟಿಲೇಟರ್ ಖರೀದಿ ವ್ಯವಹಾರದ ಬಗ್ಗೆ ಸಾರ್ವಜನಿಕ ಅನುಮಾನಗಳಿಗೆ ಪುಷ್ಟಿ ನೀಡಿದೆ ಎಂಬುದನ್ನು ಸಾಕೇತ್ ದಾಖಲೆ ಸಹಿತ ವಿವರಿಸಿದ್ದಾರೆ. ಟ್ವಿಟರ್ ಮೂಲಕ ಪಿಎಂ ಕೇರ್ಸ್ ನಿಧಿಯ ವೆಂಟಿಲೇಟರ್ ಖರೀದಿ ಪ್ರಕ್ರಿಯೆಯನ್ನು ಆರಂಭದಿಂದ ಹಂತಹಂತವಾಗಿ ವಿವರಿಸಿರುವ ಸಾಕೇತ್, ಏಕ ಕಾಲಕ್ಕೆ ವೆಂಟಿಲೇಟರ್ ಖರೀದಿ ಮತ್ತು ವಿತರಣೆಯಲ್ಲಿ ಹಾಗೂ ವೆಂಟಿಲೇಟರ್ ರಫ್ತಿನ ವಿಷಯದಲ್ಲಿ ಸರ್ಕಾರ ದೇಶದ ಜನತೆಯನ್ನು ಹಾದಿತಪ್ಪಿಸುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆ ಕಂಡುಬರುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ಗಂಭೀರ ರೋಗಿಗಳಿಗೆ ವೆಂಟಿಲೇಟರ್ ಅಗತ್ಯ ಮತ್ತು ಅನಿವಾರ್ಯತೆಯ ಹಿನ್ನೆಲೆಯಲ್ಲಿ ಎಲ್ಲಾ ಬಗೆಯ ವೆಂಟಿಲೇಟರುಗಳ ರಫ್ತನ್ನು ನಿಷೇಧಿಸಿರುವುದಾಗಿ ಕೇಂದ್ರ ಸರ್ಕಾರ, ಕಳೆದ ಮಾರ್ಚ್ 24ರಂದು ಹೇಳಿತ್ತು. ಜೀವರಕ್ಷಕ ವೆಂಟಿಲೇಟರುಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮ ಸಮರ್ಥನೀಯವೂ ಆಗಿತ್ತು. ಈ ನಡುವೆ, ಅದೇ ಮಾರ್ಚ್ 31ರಂದು ಕೇಂದ್ರ ಸರ್ಕಾರ ಬಿಇಎಲ್-ಸ್ಕಾನ್ ರೇ ಮತ್ತು ಅಗ್ವಾ-ಮಾರುತಿಯಿಂದ ಒಟ್ಟು 40 ಸಾವಿರ ವೆಂಟಿಲೇಟರುಗಳ ಖರೀದಿಗಾಗಿ ಬೇಡಿಕೆ ಸಲ್ಲಿಸಿತ್ತು. ಆ ಪೈಕಿ ಮೂವತ್ತು ಸಾವಿರ ವೆಂಟಿಲೇಟರನ್ನು ಬಿಇಎಲ್-ಸ್ಕಾನ್ ರೇ ಸರಬರಾಜು ಮಾಡುವುದು ಮತ್ತು ಉಳಿದವನ್ನು ಅಗ್ವಾ-ಮಾರುತಿ ಸರಬರಾಜು ಮಾಡುವುದು ಎಂದಾಗಿತ್ತು.

ಆ ಬೇಡಿಕೆಗೆ ಪೂರಕವಾಗಿ ಅಗತ್ಯ ಪ್ರಮಾಣದ ವೆಂಟಿಲೇಟರುಗಳು ಸರಬರಾಜಾಗುವ ಮುನ್ನವೇ, ಜೂನ್ 23ರಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, 50 ಸಾವಿರ ವೆಂಟಿಲೇಟರ್ ಖರೀದಿಗಾಗಿ ಪಿಎಂ ಕೇರ್ಸ್ ನಿಧಿಯಿಂದ ಬರೋಬ್ಬರಿ 2000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆ ಪೈಕಿ ಬಿಇಎಲ್-ಸ್ಕಾನ್ ರೇ ಕಂಪನಿಯಿಂದ 30 ಸಾವಿರ ವೆಂಟಿಲೇಟರ್ ಮತ್ತು ಆಗ್ವಾ-ಮಾರುತಿ ಕಂಪನಿಯಿಂದ 10 ಸಾವಿರ ವೆಂಟಿಲೇಟರ್ ಖರೀದಿಸುವುದಾಗಿ ಹೇಳಲಾಗಿತ್ತು. ಆ ಪೈಕಿ 1340 ವೆಂಟಿಲೇಟರುಗಳನ್ನು ಈಗಾಗಲೇ ಸರಬರಾಜು ಮಾಡಿದ್ದು, ಅವುಗಳನ್ನು ಕರ್ನಾಟಕಕ್ಕೆ 90 ಸೇರಿದಂತೆ ಮೊದಲ ಕಂತಿನಲ್ಲಿ ಜೂನ್ ಅಂತ್ಯದ ಹೊತ್ತಿಗೆ ಸೋಂಕು ತೀವ್ರವಾಗಿರುವ ವಿವಿಧ ರಾಜ್ಯಗಳಿಗೆ ವಿತರಿಸಲಾಗಿದೆ ಎಂದು ಹೇಳಲಾಗಿತ್ತು.

ಅಂದರೆ, ಪಿಎಂ ಕೇರ್ಸ್ ನಿಧಿ ಬಳಸಿ ಖರೀದಿಸುತ್ತಿರುವುದಾಗಿ ಹೇಳಿದ 50 ಸಾವಿರ ವೆಂಟಿಲೇಟರ್ ಪೈಕಿ, 40 ಸಾವಿರ ವೆಂಟಿಲೇಟರ್ ಗಳನ್ನು ಅದಾಗಲೇ ಮಾರ್ಚ್ 31ರಂದು ಕೇಂದ್ರ ಸರ್ಕಾರದ ಬೇಡಿಕೆಯ ಖರೀದಿಸಲಾಗಿತ್ತು! ಹಿಂದಿನ ಖರೀದಿಯನ್ನೂ ಸೇರಿಸಿ ಪಿಎಂ ಕೇರ್ಸ್ ನಡಿ 50 ಸಾವಿರ ವೆಂಟಿಲೇಟರ್ ಖರೀದಿಸುತ್ತಿರುವುದಾಗಿಯೂ ಅದಕ್ಕಾಗಿ ಎರಡು ಸಾವಿರ ಕೋಟಿ ರೂ. ಬಿಡುಗಡೆ ಮಾಡಿರುವುದಾಗಿಯೂ ಹೇಳಿದ್ದರೂ, ವಾಸ್ತವವಾಗಿ ಪಿಎಂ ಕೇರ್ಸ್ ನಡಿ ಖರೀದಿಸಿದ್ದು ಕೇವಲ 10 ಸಾವಿರ ವೆಂಟಿಲೇಟರ್ ಮಾತ್ರವೆ ಎಂಬ ಪ್ರಶ್ನೆ ಇದೆ.

ಹಾಗಾದರೆ, ಮಾರ್ಚನಲ್ಲಿಯೇ ಭಾರತ ಸರ್ಕಾರ ಖರೀದಿಸಿದ 40 ಸಾವಿರ ವೆಂಟಿಲೇಟರ್ ಹೊರತುಪಡಿಸಿ ಇನ್ನುಳಿದ ಕೇವಲ 10 ಸಾವಿರ ವೆಂಟಿಲೇಟರಿಗೆ ಪಿಎಂ ಕೇರ್ಸ್ ನಿಂದ ಎರಡು ಸಾವಿರ ಕೋಟಿ ರೂ. ಪಾವತಿಸಲಾಯಿತೆ? ಅಥವಾ ಮೊದಲ ಖರೀದಿಯ 40 ಸಾವಿರ ವೆಂಟಿಲೇಟರುಗಳ ಮೊತ್ತವನ್ನು ಪಿಎಂ ಕೇರ್ಸ್ ನಿಂದ ಭಾರತ ಸರ್ಕಾರಕ್ಕೆ ವಾಪಸು(ರಿಇಂಬರ್ಸ್ಮೆಂಟ್) ಮಾಡಲಾಯಿತೆ? ಎಂಬುದು ನಿಗೂಢವಾಗಿಯೇ ಉಳಿದಿದೆ. ಆ ಬಗ್ಗೆ ಈವರೆಗೂ ಪಿಎಂಒ ನಿಂದಾಗಲೀ, ಭಾರತ ಸರ್ಕಾರದ ಕಡೆಯಿಂದಾಗಲೀ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ!

ಇನ್ನು ಈ ವೆಂಟಿಲೇಟರ್ ಗಳ ದರದ ಬಗ್ಗೆ ಪ್ರಸ್ತಾಪಿಸಿರುವ ಸಾಕೇತ್ ಗೋಖಲೆ, ಭಾರತ ಸರ್ಕಾರ ಮತ್ತು ಪಿಎಂ ಕೇರ್ಸ್ ಖರೀದಿಸಿದ ವೆಂಟಿಲೇಟರುಗಳ ಬೆಲೆ ಮಾರುಕಟ್ಟೆ ದರದ ಪ್ರಕಾರ ತಲಾ 1.5-2 ಲಕ್ಷ ಆಸುಪಾಸಿನಲ್ಲಿದೆ. ವಾಸ್ತವವಾಗಿ ಸರ್ಕಾರ ಮಾರ್ಚಿನಲ್ಲಿ ಅವುಗಳಿಗೆ ಯಾವ ದರ ತೆತ್ತಿತ್ತು ಎಂಬುದು ಬಹಿರಂಗವಾಗಿಲ್ಲ. ಆದರೆ, ಪಿಎಂ ಕೇರ್ಸ್ ಪ್ರಕಾರ, ಜೂನ್ ನಲ್ಲಿ ಅದು ಪ್ರತಿ ವೆಂಟಿಲೇಟರಿಗೆ ತಲಾ 4 ಲಕ್ಷ ರೂ. ದರದಲ್ಲಿ ಖರೀದಿಸಿದೆ ಎಂದು ಹೇಳಲಾಗಿದೆ. ಅಂದರೆ, ದುಪ್ಪಟ್ಟು ಬೆಲೆಗೆ ಖರೀದಿ ಮಾಡಲಾಗಿದೆ!

ಈ ನಡುವೆ, ಜೂನ್ 23ರ ಹೇಳಿಕೆಯಲ್ಲಿ ಪಿಎಂ ಕೇರ್ಸ್, ತಮ್ಮ ಖರೀದಿ ಆದೇಶದ ಪೈಕಿ 2923 ವೆಂಟಿಲೇಟರುಗಳನ್ನು ತಯಾರಿಸಲಾಗಿದ್ದು, ಆ ಪೈಕಿ 1340 ಈಗಾಗಲೇ ಸರಬರಾಜಾಗಿದೆ ಎಂದು ಹೇಳಿದೆ. ಆದರೆ, ಜೂನ್ 23ಕ್ಕೆ ಒಂದು ವಾರ ಹಿಂದೆ, ಪಿಎಂ ಕೇರ್ಸ್ ವೆಂಟಿಲೇಟರ್ ಖರೀದಿಸಿದ ಬಿಇಎಲ್-ಸ್ಕ್ಯಾನ್ ರೇ ಮಾಹಿತಿ ಹಕ್ಕು ಅರ್ಜಿಗೆ ಪ್ರತ್ಯುತ್ತರವಾಗಿ ಸಾಕೇತ್ ಅವರಿಗೆ ನೀಡಿದ ಮಾಹಿತಿ ಬೇರೆಯದೇ ಕಥೆ ಹೇಳುತ್ತದೆ. ಆ ಪ್ರಕಾರ, ಜೂನ್ 15ರವರೆಗೆ ಬಿಇಎಲ್ 4000 ಪಿಎಂ ಕೇರ್ಸ್ ವೆಂಟಿಲೇಟರ್ ತಯಾರಿಸಿದೆ. ಅಂದರೆ, ತನ್ನ ಖರೀದಿ ಆದೇಶಕ್ಕೆ ಅನುಗುಣವಾಗಿ 2923 ವೆಂಟಿಲೇಟರ್ ತಯಾರಿಸಲಾಗಿದೆ ಎಂಬ ಜೂನ್ 23ರ ಪಿಎಂ ಕೇರ್ಸ್ ಹೇಳಿಕೆ, ಶುದ್ದ ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಸಾಕೇತ್ ತಮ್ಮ ಸರಣಿ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಈ ನಡುವೆ, ಜೂನ್ ಅಂತ್ಯದ ಹೊತ್ತಿಗೆ ಭಾರತ ಸರ್ಕಾರ ಮತ್ತು ಪಿಎಂ ಕೇರ್ಸ್ ನ ಖರೀದಿ ಆದೇಶಗಳ ಪೈಕಿ ಒಟ್ಟಾರೆ ಈವರೆಗೆ ಕೇವಲ ಶೇ.6ರಷ್ಟು ವೆಂಟಿಲೇಟರುಗಳು ಮಾತ್ರ ಉತ್ಪಾದನೆಯಾಗಿವೆ ಎಂಬ ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿಯನ್ನು ಪ್ರಸ್ತಾಪಿಸಿರುವ ಸಾಕೇತ್ ಗೋಖಲೆ, ಜೂನ್ ತಿಂಗಳು ಮುಗಿದರೂ ಪಿಎಂ ಕೇರ್ಸ್ನ 50 ಸಾವಿರ ವೆಂಟಿಲೇಟರಾಗಲೀ, ಅಥವಾ ಭಾರತ ಸರ್ಕಾರದ ಆದೇಶದ 40 ಸಾವಿರ ವೆಂಟಿಲೇಟರಾಗಲೀ ಸರಬರಾಜಾಗೇ ಇಲ್ಲ ಎನ್ನುತ್ತಾರೆ.

ಅಂದರೆ, ದೇಶದಲ್ಲಿ ಆಂತರಿಕವಾಗಿ, ಸರ್ಕಾರಿ ಬೇಡಿಕೆಯನ್ನು ಪೂರೈಸಲು ಕೂಡ ನಮ್ಮ ವೆಂಟಿಲೇಟರು ತಯಾರಿಕಾ ಕಂಪನಿಗಳು ಶಕ್ತವಾಗಿಲ್ಲ. ಅದೂ ಮಾರ್ಚ್ 24ರ ಹೊತ್ತಿಗೇ ರಫ್ತು ನಿಷೇಧದಂತಹ ಕ್ರಮಗಳ ಹೊರತಾಗಿಯೂ ಸರ್ಕಾರದ ಖರೀದಿ ಆದೇಶಕ್ಕೆ ಪ್ರತಿಯಾಗಿ ಅಗತ್ಯ ಸಂಖ್ಯೆಯ ವೆಂಟಿಲೇಟರ್ ತಯಾರಿಕೆ ಸಾಧ್ಯವಾಗಿಲ್ಲ. ಮೇಕ್ ಇನ್ ಇಂಡಿಯಾ ಹೆಸರಲ್ಲಿ ಸರ್ಕಾರ ಸಲ್ಲಿಸಿದ ಬೇಡಿಕೆ ಮತ್ತು ವಾಸ್ತವವಾಗಿ ಉತ್ಪಾದನಾ ಸಾಮರ್ಥ್ಯದ ನಡುವಿನ ಇಷ್ಟು ಅಂತರದ ನಡುವೆ, ದಿಢೀರನೇ ಸರ್ಕಾರ ಮತ್ತೊಂದು ನಿರ್ಧಾರ ಕೈಗೊಂಡು ಆಗಸ್ಟ್ 1ರಂದು ದೇಶಿ ಉತ್ಪಾದನೆಯ, ಮೇಕ್ ಇನ್ ಇಂಡಿಯಾ ವೆಂಟಿವೇಟರುಗಳ ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ವಾಪಸು ಪಡೆಯಿತು! ಅಂತಹ ತನ್ನ ನಿರ್ಧಾರಕ್ಕೆ ಅದು ನೀಡಿದ ಕಾರಣ; ದೇಶದಲ್ಲಿ ಕೋವಿಡ್ ಸಾವಿನ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂಬುದು! ಅದೇ ಹೊತ್ತಿಗೆ ದೇಶದ ಮೂಲೆಮೂಲೆಯಲ್ಲಿ ಅಗತ್ಯ ಪ್ರಮಾಣದ ವೆಂಟಿಲೇಟರ್ ಸಕಾಲದಲ್ಲಿ ಲಭ್ಯವಿಲ್ಲದೆ ಸಂಭವಿಸುತ್ತಿರುವ ಬಹುತೇಕ ಕೋವಿಡ್-19 ಸಾವುಗಳನ್ನು ಸರ್ಕಾರ ಗಣನೆಗೇ ತಗೆದುಕೊಂಡಿಲ್ಲ!

ಈ ನಡುವೆ, ಭಾರತ ಸರ್ಕಾರ ಮತ್ತು ಪಿಎಂ ಕೇರ್ಸ್ ಮೂಲಕ ಖರೀದಿಗೆ ಆದೇಶ ನೀಡಿದ ಎಲ್ಲಾ ವೆಂಟಿಲೇಟರುಗಳು ನಾನ್-ಬೈಪಾಪ್ ಇನ್ ವ್ಯಾಸಿವ್ ಮಾದರಿಯವು. ಅಂದರೆ; ಶ್ವಾಸಕೋಶದ ಒಳಗೆ ಪೈಪ್ ಅಳವಡಿಸಿ ಉಸಿರಾಟಕ್ಕೆ ಅನುವು ಮಾಡಿಕೊಡುವ ಅಪಾಯಕಾರಿ ಪ್ರಕ್ರಿಯೆ ಹೊರತಾಗಿ ಆಮ್ಲಜನಕ ಸರಬರಾಜು ಮಾಡಲಾರದಂತಹ ಸಂಕೀರ್ಣ ವ್ಯವಸ್ಥೆ ಹೊಂದಿರುವಂತಹವು ಈ ವೆಂಟಿಲೇಟರುಗಳು. ಆದರೆ, ದೇಶದಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯರು ಬಹುತೇಕ ನಾನ್-ಇನ್ ವ್ಯಾಸಿವ್ ಬೈಪಾಪ್ ವೆಂಟಿಲೇಟರುಗಳನ್ನು ಬಳಸುತ್ತಾರೆ. ರೋಗಿಯ ಜೀವಕ್ಕೆ ಕಡಿಮೆ ಅಪಾಯ ಎಂಬ ಕಾರಣಕ್ಕೆ ಈ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಆದರೆ, ಸರ್ಕಾರ ಮತ್ತು ಪಿಎಂ ಕೇರ್ಸ್ ಅಷ್ಟೊ ಬೃಹತ್ ಮೊತ್ತದ ಹಣ ನೀಡಿ ಖರೀದಿಸುವ ಮುನ್ನ ಅವುಗಳನ್ನು ವಾಸ್ತವಾಗಿ ಬಳಸುವ ತಜ್ಞ ವೈದ್ಯರ ಸಲಹೆ ಪಡೆಯದೇ ಖರೀದಿ ಆದೇಶ ನೀಡುವ ಮೂಲಕ ಕೋವಿಡ್ ರೋಗಿಗಳ ಜೀವಕ್ಕೆ ಇನ್ನಷ್ಟು ಅಪಾಯಕ್ಕೆ ಆಹ್ವಾನ ನೀಡಿದೆ. ಅದೂ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ದರ ತೆತ್ತು ಖರೀದಿ ಮಾಡಲಾಗಿದೆ ಎಂಬುದು ಸಾಕೇತ್ ವಾದ. ಆದರೆ, ದೇಶದ ಬಹುತೇಕ ಆಸ್ಪತ್ರೆಗಳು ಬಳಸಲು ನಿರಾಕರಿಸುತ್ತಿರುವ ಈ ವೆಂಟಿಲೇಟರುಗಳನ್ನು ಕೂಡ ಸಾಗಹಾಕಲು ಕೇಂದ್ರ ಸರ್ಕಾರ ಕಂಡುಕೊಂಡಿರುವ ಮಾರ್ಗವೇ ರಫ್ತು! ಆ ಉಪಾಯದ ಭಾಗವಾಗಿಯೇ ದೇಶದಲ್ಲಿ ಬೇಡಿಕೆಯ ಪ್ರಮಾಣದ ಶೇ.6ರಷ್ಟು ಉತ್ಪಾದನೆ ಇಲ್ಲದೇ ಹೋದರೂ, ದಿಢೀರನೇ ವೆಂಟಿಲೇಟರ್ ರಫ್ತಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ಸಾವಿರ ಕೋಟಿ ರೂ. ವೆಚ್ಚ ಮಾಡಿ ಪಿಎಂ ಕೇರ್ಸ್ ನಡಿ ಖರೀದಿಸಿದ ದೇಶೀಯವಾಗಿ ಬಳಸಲು ಯೋಗ್ಯವಲ್ಲದ 50 ಸಾವಿರ ವೆಂಟಿಲೇಟರುಗಳನ್ನು, ಈಗ ರಫ್ತು ಅವಕಾಶ ಬಳಸಿ ಸಾಗಹಾಕಲು ಯೋಜಿಸಲಾಗಿದೆ ಎಂದು ಸಾಕೇತ್ ಹೇಳಿದ್ದಾರೆ.

ಹಾಗಾಗಿ, ಒಟ್ಟಾರೆ ಪಿಎಂ ಕೇರ್ಸ್ ನಿಧಿಯನ್ನು ಮನಸೋ ಇಚ್ಛೆ ಬಳಸಲಾಗುತ್ತಿದೆ ಮತ್ತು ಹಣವನ್ನು ಜನರ ನೆರವಿಗೆ ಬಳಸುವ ಬದಲಾಗಿ ವೆಂಟಿಲೇಟರ್ ಖರೀದಿ ಮತ್ತು ಮಾರಾಟಕ್ಕಾಗಿ ಬಳಸಲಾಗುತ್ತಿದೆ ಎಂಬ ಅನುಮಾನಗಳಿಗೆ ಈ ಖರೀದಿ ವ್ಯವಹಾರ ಇಂಬು ನೀಡಿದೆ ಎಂದು ಸಾಕೇತ್ ಗೋಖಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತದ ಆಸ್ಪತ್ರೆಗಳಲ್ಲಿ ಬಳಸದ ಮಾದರಿಯ ವೆಂಟಿಲೇಟರ್ ಖರೀದಿಯ ಆರಂಭದಲ್ಲಿಯೇ ಈ ಬಗ್ಗೆ ಅನುಮಾನವಿತ್ತು. ದೇಶೀಯ ವೈದ್ಯರು ಬಳಕೆಗೆ ನಿರಾಕರಿಸುತ್ತಲೇ ಅವುಗಳನ್ನು ರಫ್ತು ಮಾಡಬಹುದು ಎಂದು ಹೇಳಿದ್ದೆ. ಆ ಮಾತು ಈಗ ನಿಜವಾಗಿದೆ ಎಂದೂ ಸಾಕೇತ್ ಪ್ರಸ್ತಾಪಿಸಿದ್ದಾರೆ.

ಒಟ್ಟಾರೆ ಇಡೀ ಪಿಎಂ ಕೇರ್ಸ್ ನಿಧಿ ಬಳಕೆ ಮತ್ತು ಅದರ ನಿರ್ವಹಣೆಯ ವಿಷಯದಲ್ಲಿ ಸಾರ್ವಜನಿಕ ವಲಯದಲ್ಲಿ ಈವರೆಗೆ ಎದ್ದಿರುವ ಅನುಮಾನಗಳನ್ನು ವೆಂಟಿಲೇಟರ್ ಖರೀದಿ ವ್ಯವಹಾರ ನಿಜಮಾಡುತ್ತಿದೆ! ಕೋವಿಡ್-19 ರ ಸಂಕಷ್ಟದ ಹೊತ್ತನ್ನು ಕೇಂದ್ರ ಬಿಜೆಪಿ ಸರ್ಕಾರ ಹೇಗೆ ಒಂದು ಅಮೂಲ್ಯ ಅವಕಾಶವಾಗಿ ಬಳಸಿಕೊಳ್ಳುತ್ತಿದೆ ಎಂಬ ಸಾಲು ಸಾಲು ನಿದರ್ಶನಗಳಿಗೆ ಪಿಎಂ ಕೇರ್ಸ್ ವೆಂಟಿಲೇಟರ್ ಖರೀದಿ ಪ್ರಕರಣ ಕೂಡ ಸೇರ್ಪಡೆಯಾಗಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com