ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.

ಆರ್‌ಎಸ್‌ಎಸ್ ಪ್ರಚಾರಕರಾದ ಮಹಂತ್ ರಾಮಚಂದ್ರ ಪರಮಹಂಸ ದಾಸ್, ಅಪ್ರತಿಮ ಹಿಂದುತ್ವವಾದಿ ಅಶೋಕ್ ಸಿಂಘಾಲ್ ಮತ್ತು ಬಿಜೆಪಿಯ ಅಗ್ರ ನಾಯಕ ಲಾಲ್ ಕೃಷ್ಣ ಅಡ್ವಾಣಿ. ಈ ಪೈಕಿ ಮಹಂತ್ ರಾಮಚಂದ್ರ ಪರಮಹನ್ಸ್ ದಾಸ್ ಮತ್ತು ಅಶೋಕ್ ಸಿಂಘಾಲ್ ಮೃತಪಟ್ಟಿದ್ದಾರೆ ...
ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.

ಭಾರತೀಯ ಇತಿಹಾಸ ಮತ್ತು ರಾಜಕೀಯದಲ್ಲೇ ಬಾಬರಿ ಮಸೀದಿ- ರಾಮ ಜನ್ಮಭೂಮಿ ವಿವಾದಕ್ಕಿಂತ ಬೇರೆ ಯಾವುದೇ ದೊಡ್ಡ ವಿವಾದ ಅಥವಾ ಚಳುವಳಿ ದಾಖಲಾಗಿಲ್ಲ. 1528 ರಲ್ಲಿ ಮೊಘಲ್ ಸಾಮ್ರಾಟ ಬಾಬರ್ ಕಮಾಂಡರ್ ಮಿರ್ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸಿದಾಗಿನಿಂದ 2019ರ ನವೆಂಬರ್ 19ರಂದು ದೇಶದ ಸರ್ವೋಚ್ಚ ನ್ಯಾಯಾಲಯ ಬಾಬರಿ ಮಸೀದಿಯ ವಿವಾದಿತ ಜಾಗದ ಅಕ್ಕಪಕ್ಕ ಇರುವ 67 ಎಕರೆ ಭೂಮಿ ರಾಮ ಜನ್ಮ ಭೂಮಿ ವ್ಯಾಸ್‌ ಸಮಿತಿಗೆ ಸೇರಿದ್ದು ಎಂದು ತೀರ್ಪು ನೀಡುವವರೆಗೆ ಈ ವಿವಾದ ಸಾಗಿ ಬಂದಿದೆ.

ಈ‌ ಸುದೀರ್ಘ ಇತಿಹಾಸದಲ್ಲಿ ಅಯೋಧ್ಯೆ ವಿವಾದ 1980 ರಿಂದ ಈಚೆಗೆ ಭಾರತೀಯ ಸಮಾಜ ಮತ್ತು ರಾಜಕೀಯದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸದ್ಯ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಯಾರನ್ನು ಕರೆಯಬೇಕು? ಯಾರು ಬೇಡ ಎಂಬ ಚರ್ಚೆಗಳು ನಡೆಯುತ್ತಿವೆ. ಅದು ಸಣ್ಣ ಮಟ್ಟದ ವಿವಾದವೂ ಆಗಿದೆ. ಈಗ ಮುಂಚೂಣಿಯಲ್ಲಿರುವವರು ಬೇರೆ. 1980ರಿಂದ ರಾಜಕೀಯ ಚಳವಳಿ ಮತ್ತು ಕಾನೂನು ಹೋರಾಟ ಎರಡರಲ್ಲೂ ಸಕ್ರೀಯವಾಗಿದ್ದವರು ಬೇರೆ. ಈ ಹಿನ್ನಲೆಯಲ್ಲಿ ಅಂದು ಹೋರಾಟದ ನೊಗಕ್ಕೆ ಕೊರಳೊಡ್ಡಿದವರು, ಕಳೆದುಕೊಂಡವರು, ರಾಜಕೀಯವಾಗಿ ಎದ್ದವರು, ಬಿದ್ದವರನ್ನೂ ನೋಡಬೇಕಲ್ಲವೇ?

ದೇವಾಲಯದ ಪರವಾದ ಚಳವಳಿಯನ್ನು ಮೊದಲನೆಯದಾಗಿ ಮೊನಚುಗೊಳಿಸಿದವರೆಂದರೆ ಅಂದಿನ‌ ಪೂರ್ಣಾವಧಿ ಆರ್‌ಎಸ್‌ಎಸ್ ಪ್ರಚಾರಕರಾದ ಮಹಂತ್ ರಾಮಚಂದ್ರ ಪರಮಹಂಸ ದಾಸ್, ಅಪ್ರತಿಮ ಹಿಂದುತ್ವವಾದಿ ಅಶೋಕ್ ಸಿಂಘಾಲ್ ಮತ್ತು ಬಿಜೆಪಿಯ ಅಗ್ರ ನಾಯಕ ಲಾಲ್ ಕೃಷ್ಣ ಅಡ್ವಾಣಿ. ಈ ಪೈಕಿ ಮಹಂತ್ ರಾಮಚಂದ್ರ ಪರಮಹನ್ಸ್ ದಾಸ್ ಮತ್ತು ಅಶೋಕ್ ಸಿಂಘಾಲ್ ಮೃತಪಟ್ಟಿದ್ದಾರೆ.‌ 92 ವರ್ಷದ ಲಾಲಕೃಷ್ಣ ಅಡ್ವಾಣಿ ಅವರದು ತಮ್ಮ ಕನಸು ನನಸಾದರೂ ಅದನ್ನು ‌ಕಣ್ತುಂಬಿಕೊಳ್ಳಲಾಗದ ಅಸಹಾಯಕ ಸ್ಥಿತಿ. ಸದ್ಯ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ಟಿವಿ ಪರದೆ ಮೂಲಕವಷ್ಟೇ ನೋಡಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಮಚಂದ್ರ ಪರಮಹಂಸ ದಾಸ್ ಹಿನ್ನೆಲೆ

1913 ರಲ್ಲಿ ಬಿಹಾರದಲ್ಲಿ ಜನಿಸಿದ ರಾಮಚಂದ್ರ ಪರಮಹಂಸ ದಾಸ್ ಸಾಧುವಾಗಿ ಮಾರ್ಪಾಟ್ಟು ಅಯೋಧ್ಯೆಗೆ ಸ್ಥಳಾಂತರಗೊಂಡರು. 1949ರಲ್ಲಿ ಮಸೀದಿಯೊಳಗೆ ವಿಗ್ರಹಗಳನ್ನು ಇರಿಸಿದಾಗ, ದಾಸ್ ಹಿಂದೂ ಮಹಾಸಭಾದ ಅಯೋಧ್ಯಾ ನಗರದ ಅಧ್ಯಕ್ಷರಾಗಿದ್ದರು. ಈ ಪ್ರಕರಣದಲ್ಲಿ ಅವರನ್ನು ಎಂದಿಗೂ ಆರೋಪಿಯನ್ನಾಗಿ ಹೆಸರಿಸಲಾಗಿಲ್ಲ. ಆದರೆ ಅದೇ ವರ್ಷ ಡಿಸೆಂಬರ್ 22 ಮತ್ತು 23ರ ಮಧ್ಯರಾತ್ರಿ ನಡೆದ ಘಟನೆಗಳಲ್ಲಿ ಅವರ ಪಾತ್ರ ಇತ್ತು ಎಂದು ಹೇಳಲಾಗುತ್ತಿದೆ.

1991ರಲ್ಲಿ, 'ದಿ ನ್ಯೂಯಾರ್ಕ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ, ರಾಮಚಂದ್ರ ಪರಮಹಂಸ ದಾಸ್ ವಿಗ್ರಹಗಳನ್ನು ಮಸೀದಿಯೊಳಗೆ ಇರಿಸುವಲ್ಲಿ ತನ್ನ ಪಾತ್ರ ಇತ್ತು‌ ಎಂದು ಒಪ್ಪಿಕೊಂಡಿದ್ದರು. 1980ರ ದಶಕದಲ್ಲಿ ದೇವಾಲಯದ ಅಭಿಯಾನವು ವೇಗವನ್ನು ಪಡೆದುಕೊಂಡಾಗ ರಾಮಚಂದ್ರ ಪರಮಹಂಸ ದಾಸ್, ರಾಮ್ ಜನ್ಮಭೂಮಿ ನ್ಯಾಯಗಳ ಅಧ್ಯಕ್ಷರಾದರು. ಅಲ್ಲದೆ ಆರೆಸ್ಸೆಸ್ ಮತ್ತು ಬಿಜೆಪಿಯವರ ಪೈಕಿ ಚಳವಳಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಸಂತರ ಪೈಕಿ ಪ್ರಮುಖ ವ್ಯಕ್ತಿಯಾಗಿದ್ದರು. 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲೂ ಅವರು ಆರೋಪಿಯಾಗಿದ್ದರು. 2003ರಲ್ಲಿ ಅವರು ಇಹಲೋಕ ತ್ಯಜಿಸಿದರು.

ಅಶೋಕ್ ಸಿಂಘಾಲ್

ಅಶೋಕ್ ಸಿಂಘಾಲ್, ರಾಮಚಂದ್ರ ಪರಮಹಂಸ ದಾಸ್ ಅವರ ನಿಕಟವರ್ತಿಯಾಗಿದ್ದರು. 1923ರಲ್ಲಿ ಜನಿಸಿದ ಅಶೋಕ್ ಸಿಂಘಾಲ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಆದರೆ 1942ರಲ್ಲಿ ಪೂರ್ಣ ಸಮಯದ ಆರ್‌ಎಸ್‌ಎಸ್ ಪ್ರಚಕರಾಗಿದ್ದರು. ನಂತರ ತಮ್ಮ ಜೀವನವನ್ನು ಅಯೋಧ್ಯೆ ಚಳವಳಿಗೆ ಅರ್ಪಿಸಿಕೊಂಡಿದ್ದರು. 1981ರಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ರಾಮ ಜನ್ಮಭೂಮಿ ವಿಷಯದಲ್ಲಿ ಗಮನ ಹರಿಸುತ್ತಿದ್ದಂತೆ, ಸಿಂಘಾಲ್ ಅವರನ್ನು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಅವರು ಕ್ರಮೇಣ ಆರ್‌ಎಸ್‌ಎಸ್‌ನ ಪ್ರಮುಖ ಮುಖವಾಗಿ ಮಾರ್ಪಟ್ಟರು. ದೇವಾಲಯದ ಆಂದೋಲನವನ್ನು ಮುನ್ನಡೆಸಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದರು. ಬಾಬರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದ ಅವರು 2016ರಲ್ಲಿ ನಿಧನರಾದರು.

ಲಾಲಕೃಷ್ಣ ಅಡ್ವಾಣಿ ತಂಡ

ರಾಮಚಂದ್ರ ಪರಮಹಂಸ ದಾಸ್ ಮತ್ತು ಅಪ್ರತಿಮ ಹಿಂದುತ್ವವಾದಿ ಅಶೋಕ್ ಸಿಂಘಾಲ್ ವ್ಯಕ್ತಿಗಳಾಗಿ ಪ್ರಭಾವಿಗಳಾಗಿ ಸಂಘ,‌ ಹೋರಾಟವನ್ನು ಮುನ್ನಡೆಸುತ್ತಿದ್ದರೆ ಆನಂತರ ಚಿತ್ರಣಕ್ಕೆ ಬಂದ ಲಾಲಕೃಷ್ಣ ಅಡ್ವಾಣಿಯವರು ತಂಡವೊಂದನ್ನು ಕಟ್ಟಿಕೊಂಡು ಸಕ್ರೀಯರಾಗಿದ್ದರು. ಮುರಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಈ ತಂಡದಲ್ಲಿದ್ದರು. ಅಡ್ವಾಣಿ ಅವರ ಪ್ರಭಾವ ಎಷ್ಟಿತ್ತು ಎಂದರೆ 1990ರ ದಶಕದ ಉತ್ತರಾರ್ಧ ಮತ್ತು 2000ರ ದಶಕದ ಆರಂಭದಲ್ಲಿ ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಶುರುವಾದಾಗ ಅಡ್ವಾಣಿ ಅವರ ಹೆಸರು ಪ್ರಧಾನ ಮಂತ್ರಿ ಹುದ್ದೆಗೂ ಕೇಳಿಬಂದಿತು.

1989ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಲಾಲಕೃಷ್ಣ ಅಡ್ವಾಣಿ 1990ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ನಡೆಸುವುದಾಗಿ ಘೋಷಿಸಿದರು. ಇದು ಅಂದಿನ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಉಂಟುಮಾಡಿತ್ತು. ಕೋಮುಗಲಭೆಗಳನ್ನು ಹುಟ್ಟಿಹಾಕಿತ್ತು. ರಕ್ತದೋಕುಳಿ ನಡೆಯಿತು. ಇದರಿಂದಾಗಿ ರಾಜಕೀಯವಾಗಿ ಬಿಜೆಪಿಗೆ ಭಾರೀ ಲಾಭವಾಯಿತು‌. ಆದರೆ ಅಡ್ವಾಣಿ ಅವರು ಉಗ್ರ ಹಿಂದುತ್ವವಾದಿ ಎನಿಸಿಕೊಂಡಿದ್ದರಿಂದ ಪ್ರಧಾನ ಮಂತ್ರಿಯಾಗುವ ಅವಕಾಶ ಒದಗಿಬಂದಿದ್ದು ಸೌಮ್ಯವಾದಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ. ಆಗ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿ ಅಡ್ವಾಣಿ ಉಪ ಪ್ರಧಾನಿ ಪಟ್ಟಕ್ಕೆ ತೃಪ್ತಿ‌ ಪಟ್ಟುಕೊಳ್ಳಬೇಕಾಯಿತು.

ಅಡ್ವಾಣಿ ನಡೆಸಿದ ರಥಯಾತ್ರೆ
ಅಡ್ವಾಣಿ ನಡೆಸಿದ ರಥಯಾತ್ರೆ

ಇದಾದ ಬಳಿಕ‌ ಲಾಲಕೃಷ್ಣ ಅಡ್ವಾಣಿ ಅವರಿಗೆ 2009ರಲ್ಲಿ ಪ್ರಧಾನಿಯಾಗಲು ಮತ್ತೆ ಅವಕಾಶ ಇತ್ತು. ಆದರೆ ಚುನಾವಣಾ ಕಣದಲ್ಲಿ ಕಾಂಗ್ರೆಸ್ ವಿರುದ್ಧ ಸೋಲು ಅನುಭವಿಸಿದ್ದರಿಂದ ಅಡ್ವಾಣಿ ಅವಕಾಶ ಕಳೆದುಕೊಳ್ಳಬೇಕಾಯಿತು.‌ 2014ರಲ್ಲಿ ಕಟ್ಟ ಕಡೆಯ ಅವಕಾಶ ಇತ್ತು. ಆದರೆ ಪಕ್ಷ ನರೇಂದ್ರ ಮೋದಿಯವರ ನೇತೃತ್ವ ಘೋಷಿಸಿದ್ದರಿಂದ ಅದೂ ಮರಿಚಿಕೆಯಾಯಿತು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಕಾರ್ಯವೈಖರಿಯೇ ಬದಲಾಯಿತು. ಒಂದು ರೀತಿಯಲ್ಲಿ ಎಲ್ಲಾ ‌ಹಿರಿಯರನ್ನು‌ ಕಡೆಗಣಿಸಲಾಯಿತು. ಲಾಲಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ‌ದೂರ ಇಡಲೆಂದೇ ಮಾರ್ಗದರ್ಶಕ ಮಂಡಳಿ ರಚನೆ ಮಾಡಲಾಯಿತು. ಅದರ ಬಗ್ಗೆ 'ಮೂಕ‌ ದರ್ಶಕ ಮಂಡಳಿ' ಎಂಬ ಟೀಕೆಗಳು ಕೇಳಿಬಂದವು.

ಮುರಳಿ ಮನೋಹರ ಜೋಷಿ

ರಾಷ್ಟ್ರೀಯ ರಾಜಕೀಯದಲ್ಲಿ ಸಹಚರರಾದ ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಇಲ್ಲದೆ ಅಡ್ವಾಣಿ ಯುಗದ ಕಥೆ ಪೂರ್ಣಗೊಳ್ಳುವುದಿಲ್ಲ. ಅಲಹಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರಾಧ್ಯಾಪಕ ಮುರಳಿ ಮನೋಹರ ಜೋಷಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲಕೃಷ್ಟ ಅಡ್ವಾಣಿ ಅವರೊಂದಿಗೆ ಬಿಜೆಪಿಯ ಸ್ಥಾಪಕ ಸದಸ್ಯರಾಗಿದ್ದರು. 1992ರಲ್ಲಿ ಬಾಬರಿ ಮಸೀದಿ ನೆಲಸಮವಾದಾಗ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿಯೊಂದಿಗೆ ಜೋಷಿ ಸಹ-ಆರೋಪಿ ಕೂಡ ಆಗಿದ್ದಾರೆ. ಜೋಷಿ ರಾಜಕೀಯವಾಗಿ ದೀರ್ಘಕಾಲ ಪ್ರಾಬಲ್ಯ ಹೊಂದಿದ್ದ ಅವರು‌ ಬದಲಾದ ಬಿಜೆಪಿ ನಾಯಕತ್ವದ ಎದುರು ಮಂಕಾಗಬೇಕಾಯಿತು. ಸದ್ಯ ಅವರು ಕೂಡ ಅಡ್ವಾಣಿ ಅವರಂತೆ 'ಮಾರ್ಗದರ್ಶಕ ಮಂಡಳಿ'ಗೆ ಸೀಮಿತ. ಅತಾರ್ಥ್ ಅಪ್ರಸ್ತುತ.

ಉಮಾ ಭಾರತಿ ಹಾಗೂ ಮುರಳಿ ಮನೋಹರ್‌ ಜೋಷಿ
ಉಮಾ ಭಾರತಿ ಹಾಗೂ ಮುರಳಿ ಮನೋಹರ್‌ ಜೋಷಿ

ಕಲ್ಯಾಣ್ ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್

ಅಡ್ವಾಣಿ ಮತ್ತು ಜೋಷಿ ಅವರು ರಾಷ್ಟ್ರಮಟ್ಟದಲ್ಲಿ ಹಿಂದುತ್ವವನ್ನು ಬಡಿದೆಬ್ಬಿಸುತ್ತಿದ್ದರೆ ಅವರ ಸಂಗಾತಿಗಳಾದ ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಉತ್ತರ ಪ್ರದೇಶದಲ್ಲಿ ಚಳುವಳಿಯನ್ನು ಸಂಘಟಿಸುತ್ತಿದ್ದರು. ಇವರು ಚಳವಳಿಗೆ ಹೊಸ ಚತುರತೆ ಮತ್ತು ಆಕ್ರಮಣಶೀಲತೆಯನ್ನು ತಂದುಕೊಟ್ಟಿದ್ದರು. 1992ರಲ್ಲಿ ಇದೇ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗಲೇ ಬಾಬರಿ ಮಸೀದಿಯನ್ನು ನೆಲಸಮ ಮಾಡಲಾಯಿತು.

ಇನ್ನೊಂದೆಡೆ ಉಮಾ ಭಾರತಿ ಹಿಂದುತ್ವದ ಉಗ್ರ ಪ್ರತಿಪಾದಕಿಯಾಗಿ ರಾಮಜನ್ಮಭೂಮಿ ಹೋರಾಟಕ್ಕೆ ಮಹಿಳೆಯರನ್ನು ಸೆಳೆಯಲು ಅಸ್ತ್ರವಾದರು. ವಿನಯ್ ಕಟಿಯಾರ್, ಉಗ್ರಗಾಮಿ ನಿಲುವು ಪ್ರತಿಪಾದಿಸುವ ಯುವ ಸಂಘಟನೆಯಾದ ಭಜರಂಗದಳದ ಮುಖವಾಗಿ ಹೋರಾಟಕ್ಕೆ ಶಕ್ತಿ ತುಂಬಿದರು. ಉಮಾ ಭಾರತಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರೆ, ಕಟಿಯಾರ್ ಕೂಡ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸಿ ಸಂಸತ್ ಸದಸ್ಯರಾಗಿದ್ದರು. ಇವರೆಲ್ಲರೂ ಈಗಲೂ ಬಾಬರಿ ಧ್ವಂಸ ಪ್ರಕರಣದ ಆರೋಪಿಗಳಾಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ ಮತ್ತು ಪಕ್ಷದೊಳಗೆ ಮೂಲೆಗುಂಪಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com