ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ
ರಾಷ್ಟ್ರೀಯ

ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ

ಆಗಸ್ಟ್ 31, 1884 ರಲ್ಲಿ ಗುಲಾಮಗಿರಿ ನಿರ್ಮೂಲನೆ ಕಾಯ್ದೆಯ ಜಾರಿ ಮೂಲಕ ಬ್ರಿಟಿಷ್ ವಸಾಹತುಗಳಾದ ಉತ್ತರಾ ಕೆನಡಾ, ಕೆರಿಬಿಯನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ 8,00,000 ಕ್ಕೂ ಹೆಚ್ಚು ಗುಲಾಮರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲಾಯಿತು.

ಫೈಝ್

ಫೈಝ್

ಗುಲಾಮಗಿರಿ.. ಪ್ರಸ್ತುತ ಭಾರತದ ರಾಜಕೀಯ ಚರ್ಚೆಗಳಲ್ಲಿ ತನ್ನ ಗಂಭೀರತೆಯನ್ನು ಕಳೆದುಕೊಂಡು, ತೀರಾ ಸಾಧಾರಣ ಪದವಾಗಿಬಿಟ್ಟ ʼಗುಲಾಮಗಿರಿʼಗೆ, ಮಾನವ ಇತಿಹಾಸದಲ್ಲಿ ಬರೆಯಲ್ಪಡದ ಸುದೀರ್ಘ ಅಧ್ಯಾಯವಿದೆ. ಬಹುಪಾಲು ಇತಿಹಾಸದ ಪಠ್ಯವೇ ಆಗದೆ ಉಳಿದ ಚೀತ್ಕಾರಗಳು ಹೆಚ್ಚಿನವು ಗುಲಾಮರದ್ದು. ಅದರಲ್ಲೂ ದೇಹದಲ್ಲಿ ಹೆಪ್ಪುಗಟ್ಟಿದ ರಕ್ತವೂ ಕಾಣಿಸದಂತಹ ಮನುಷ್ಯರ ಹೆಪ್ಪುಗಟ್ಟಿದ ಗಂಟಲಿನದ್ದು.

ನಾಗರಿಕತೆ ಬೆಳೆದಂತೆ ಬಲಿಷ್ಟ ಮನುಷ್ಯ, ಜನಾಂಗ ತಮಗಿಂತ ದುರ್ಬಲರನ್ನು ತಮ್ಮ ಜೀತದಾಳನ್ನಾಗಿ ಮಾಡುವುದನ್ನು ಕಂಡುಕೊಂಡಿತು. ಲೈಂಗಿಕ, ಯೋಧ, ಕುಸ್ತಿಪಟು, ಕೆಲಸಗಾರ ಹೀಗೆ ಹಲವು ವಿಭಾಗಗಳಲ್ಲಿ ಜೀತ ಪದ್ದತಿ ವಿಸ್ತಾರಗೊಳ್ಳುತ್ತಾ ಸಾಗಿತು. ವಸಾಹತುಶಾಹಿ ಕಾಲದಲ್ಲಿ, ಯುದ್ಧದಲ್ಲಿ ಸೋತು ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಸಂಪ್ರದಾಯದಿಂದ ವ್ಯತ್ಯಸ್ಥವಾಗಿ ಕಪ್ಪು ಜನಾಂಗದವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ವ್ಯವಸ್ಥೆ ಪ್ರಾರಂಭಗೊಂಡಿತು. ಕ್ರಮೇಣ ಯುರೋಪಿಯನ್‌ ಬಿಳಿಯ ಜನಾಂಗದಲ್ಲಿದ್ದ ಜನಾಂಗೀಯ ಶ್ರೇಷ್ಟತೆ, ಆಫ್ರಿಕನ್‌ ಜನರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುವುದು ದೇವದತ್ತ ಅವಕಾಶವೆಂದು ಭಾವಿಸಿಕೊಂಡಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜಾನುವಾರುಗಳನ್ನು ಹರಾಜಿಗೆ ಹಾಕುವಂತೆ, ಮನುಷ್ಯ., ಮನುಷ್ಯನನ್ನು ಮಾರುಕಟ್ಟೆಯಲ್ಲಿ ಹರಾಜು ಕೂಗಲಾಗುತ್ತಿತ್ತು. ಅದಕ್ಕಾಗಿಯೇ ಗುಲಾಮರನ್ನು ಮಾರುವ ಮಾರುಕಟ್ಟೆಯನ್ನು ತೆರೆಯಲಾಗಿತ್ತು. ಆಳಿನ ದೇಹ, ಲಿಂಗದ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತಿತ್ತು.

ಮಧ್ಯಪ್ರಾಚ್ಯ, ಯುರೋಪ್‌ ಸೇರಿದಂತೆ ವಿಶ್ವದ ನಾನಾ ಪ್ರದೇಶಗಳು ಗುಲಾಮಗಿರಿಯನ್ನು ಸಮಾಜದ ಒಂದು ಅಂಗವಾಗಿಯೇ ಒಪ್ಪಿಕೊಂಡಿತ್ತು. ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಪ್ರಸಿದ್ಧವಾದ ಬ್ರಿಟೀಷ್‌ ಸಾಮ್ರಾಜ್ಯ ವಿಸ್ತಾರಗೊಂಡಂತೆಲ್ಲಾ ಗುಲಾಮರ ಸಂಖ್ಯೆ ಇಮ್ಮಡಿಯಾಯಿತು. 17, 18 ನೇ ಶತಮಾನದಲ್ಲಿದ್ದ ಗುಲಾಮಗಿರಿಯ ಚಿತ್ರಣವನ್ನು Django Unchained, The birth of Nation, 12 years of slave, Amistad, Beloved ಮುಂತಾದ ಹಲವು ಇಂಗ್ಲೀಷ್‌ ಸಿನೆಮಾಗಳು ಶಕ್ತವಾಗಿ ಕಟ್ಟಿಕೊಟ್ಟಿದೆ.

ಪಟ್ಟಭದ್ರ ಹಿತಾಸಕ್ತಿ ಜಮೀನ್ದಾರರು, ಆಳ್ವಿಕೆಗಾರರು, ಸಾಮ್ರಾಜ್ಯಶಾಹಿಗಳ ನಡುವೆಯೇ ಮಾನವೀಯ ಮೌಲ್ಯದ ಚಿಂತನೆಗಳು ಪ್ರಚಾರಕ್ಕೆ ಬರತೊಡಗಿದವು. ಎಕರೆಗಟ್ಟಲೆ ತೋಟಗಳಿಗೆ ವೇತನವಿಲ್ಲದೆ ಗುಲಾಮರನ್ನು ದುಡಿಸುತ್ತಿದ್ದ ಜಮೀನ್ದಾರರ ವಿರುದ್ಧವಾಗಿ ಬಿಳಿಯ ಜನಾಂಗದಲ್ಲೇ ಯೋಚನೆಗಳು ಮೊಳಕೆಯೊಡೆದವು. ಬ್ರಿಟನ್‌ ಎನ್‌ಸೈಕ್ಲೋಪೀಡಿಯಾ ಪ್ರಕಾರ 1770 ರಲ್ಲಿ ಆಫ್ರಿಕನ್‌ ಜನರ ಮಾರಾಟವನ್ನು ಬ್ರಿಟೀಷ್‌ ಜೀತವಿರೋಧಿ ಕಾರ್ಯಕರ್ತರು ಸಕ್ರಿಯವಾಗಿ ವಿರೋಧಿಸಲು ಪ್ರಾರಂಭಿಸಿದರು. ಮುಖ್ಯವಾಗಿ, ಬ್ರಿಟೀಷ್‌ ವಸಾಹತುವಾಗಿದ್ದ ಉತ್ತರ ಕೆನಡಾದಲ್ಲಿ ಜೀತ ವಿರೋಧಿ ಚಿಂತನೆ ವ್ಯಾಪಕವಾಗಿ ಪ್ರಚಾರಕ್ಕೆ ಬಂತು. ರೂಟರ್ಸ್.ಕಾಂ ಮಾಹಿತಿ ಪ್ರಕಾರ 1787ರಲ್ಲಿ ಗ್ರ್ಯಾನ್ವಿಲ್ಲೆ ಶಾರ್ಪ್ ಮತ್ತು ಥಾಮಸ್ ಕ್ಲಾರ್ಕ್ಸನ್ ಎಂಬವರು ಬ್ರಿಟನ್‌ನಲ್ಲಿ ಗುಲಾಮರ ವ್ಯಾಪಾರವನ್ನು ನಿರ್ಮೂಲನೆ ಮಾಡುವ ಸಂಘವನ್ನು ಸ್ಥಾಪಿಸಿದರು.

ಮಾನವೀಯತೆಯನ್ನು ಎತ್ತಿ ಹಿಡಿಯುವ ನವ ಚಿಂತನೆಗಳ ನಡುವೆ, 1793ರಲ್ಲಿ ದಕ್ಷಿಣ ಒಂಟಾರಿಯೋ ಹಾಗೂ ಜಾರ್ಜಿಯನ್‌ ಕೊಲ್ಲಿಯ ಬ್ರಿಟೀಷ್ ಲೆಫ್ಟಿನೆಂಟ್‌ ಗವರ್ನರಾಗಿದ್ದ ಜಾನ್‌ ಗ್ರೇವ್ಸ್‌ ಸಿಮ್ಕೊ ತನ್ನ ಪ್ರಾಂತ್ಯದಲ್ಲಿ ಜೀತ ವಿರೋಧಿ ಕಾನೂನು ತರಲು ಮೊದಲ ಬಾರಿ ಯತ್ನಿಸಿದ್ದ. ಆತನ ಅಸೆಂಬ್ಲಿಯಲ್ಲಿದ್ದ ಬಹುಪಾಲು ಸದಸ್ಯರು ಗುಲಾಮರನ್ನು ಹೊಂದಿರುವುದರಿಂದ ಆತನಿಗೆ ಸಂಪೂರ್ಣವಾಗಿ ಜೀತವಿರೋಧಿ ಕಾನೂನನ್ನು ತರಲು ಸಾಧ್ಯವಾಗಲಿಲ್ಲ. ಅದಾಗ್ಯೂ ಪಟ್ಟು ಬಿಡದ ಸಿಮ್ಕೊ ಜುಲೈ 9, 1793ರಂದು ಗುಲಾಮಗಿರಿಯನ್ನು ಮಿತಿಗೊಳಿಸುವ ಕಾನೂನು ಹೊರಡಿಸಿದ. ಆ ಕಾನೂನಿನಂತೆ ಗುಲಾಮರನ್ನು ಆಮದು ಮಾಡುವಂತಿರಲಿಲ್ಲ, ಹೆಣ್ಣಾಳುಗಳಿಗೆ ಹುಟ್ಟಿದ ಮಗುವನ್ನು 25 ವರ್ಷದ ಬಳಿಕ ಗುಲಾಮಗಿರಿಯಿಂದ ಮುಕ್ತಗೊಳಿಸುವಂತಹ ಅಂಶಗಳನ್ನು ಪರಿಚಯಿಸಲಾಯಿತು. ಇದು ಬ್ರಿಟೀಷ್‌ ವಸಾಹತುಶಾಹಿ ಸಾಮ್ರಾಜ್ಯದಲ್ಲಿ ಗುಲಾಮಗಿರಿಯ ವಿರುದ್ಧದ ಮೊದಲ ಶಾಸನವಾಗಿತ್ತು.

ನಂತರದ ವರ್ಷಗಳಲ್ಲಿ ಈ ಕಾನೂನಿನಿಂದಾಗಿ ಹಲವು ಗುಲಾಮರು ಸ್ವತಂತ್ರ ವ್ಯಕ್ತಿಗಳಾದರು, ಗುಲಾಮ ಪದ್ಧತಿಯನ್ನು ವಿರೋಧಿಸುವವರ ಸಂಖ್ಯೆ ಗಣನೀಯವಾಗಿ ಏರತೊಡಗಿದವು. ಇದರಿಂದಾಗಿ ಗುಲಾಮ ಪದ್ಧತಿ ವಿರೋಧಿ ಭಾವ ಇನ್ನಷ್ಟು ಪ್ರಚಾರಕ್ಕೆ ಬಂದವು, ಮುಖ್ಯವಾಗಿ ಈ ಕಾನೂನು ಗುಲಾಮರಲ್ಲೂ, ಗುಲಾಮ ಪದ್ಧತಿ ವಿರೋಧಿಸುವವರಲ್ಲೂ ಹೊಸತೊಂದು ಆಶಾಕಿರಣ ಉದಯಿಸಲು ಕಾರಣವಾಯಿತು.

ಬಹುತೇಕ ಕೆರಿಬಿಯನ್‌ ವಸಾಹತುಗಳಲ್ಲಿ ಜಮೀನ್ದಾರರು ದೊಡ್ಡ ದೊಡ್ಡ ತೋಟಗಳನ್ನು ನಿರ್ಮಿಸಿ ಗುಲಾಮರಿಂದ ದುಡಿಸಿಕೊಳ್ಳುತ್ತಿದ್ದರು. ಇವರ ಉತ್ಪನ್ನಗಳು ಇಡೀ ಬ್ರಿಟೀಷ್‌ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಪಡೆಯಿತು. ಅಂತರಾಷ್ಟ್ರೀಯ ವಾಣಿಜ್ಯದ ಹೊಸ ವ್ಯವಸ್ಥೆ ಹೊರ ಹೊಮ್ಮುತ್ತಿದ್ದಂತೆ ಕೆರಿಬಿಯನ್ ‌(Caribbean) ವಸಾಹತುಗಳ ಏಕಸ್ವಾಮ್ಯಕ್ಕೆ ಉಳಿದ ವ್ಯಾಪಾರಸ್ಥರ ತೀವ್ರ ವಿರೋಧ ವ್ಯಕ್ತವಾಗತೊಡಗಿದವು. ಆ ಮೂಲಕ ಗುಲಾಮಗಿರಿಯ ವಿರುದ್ಧದ ಅಭಿಪ್ರಾಯಗಳಿಗೆ ವಾಣಿಜ್ಯ ವಹಿವಾಟುಗಳೂ ಒಂದಿಷ್ಟು ಕಾರಣವಾಯಿತು.

ಈಗಾಗಲೇ ಸ್ವಾತಂತ್ರ್ಯದ ಆಸೆ ಹುಟ್ಟಿದ ಗುಲಾಮರು ಕನಸು ಕಾಣಲು ಶುರುಹಚ್ಚಿಕೊಂಡರು, ಇದು ತಮ್ಮ ಜಮೀನ್ದಾರರ ವಿರುದ್ಧ ದಂಗೆ ಏಳುವಂತಹ ಪ್ರಚೋದನೆ ನೀಡತೊಡಗಿದವು. ತೋಟದ ಮಾಲೀಕರಿಗೆ ಗುಲಾಮರು ಬಂಡಾಯವೇಳುವ ಭಯ ಹೆಚ್ಚಾಗತೊಡಗಿತು.

ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ
ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ
ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ
ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ
ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧ ಜಾರಿಗೊಳಿಸಿ 186 ವರ್ಷ

ಅಲ್ಲದೆ ಜೀತ ವಿರೋಧಿ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡಿತು. 1883 ರಲ್ಲಿ ಜೀತ ಪದ್ಧತಿಯನ್ನು ವಿರೋಧಿಸಿ ಸುಮಾರು 13 ಲಕ್ಷ ಸಹಿಗಳು ಸಂಗ್ರಹವಾದವು. ಅದೇ ವರ್ಷ ಆಗಸ್ಟ್‌ 28 ಕ್ಕೆ ಬ್ರಿಟನ್‌ನಲ್ಲಿ ʼಗುಲಾಮಗಿರಿ ನಿರ್ಮೂಲನೆ ಕಾಯ್ದೆʼ ರಾಯಲ್‌ ಅಸೆಂಟ್‌ (Royal Assent) ಪಡೆದುಕೊಂಡಿತು. ಕೆರಿಬಿಯನ್, ದಕ್ಷಿಣ ಆಫ್ರಿಕಾ ಹಾಗೂ ಕೆನಡಾ ಸೇರಿದಂತೆ ಹೆಚ್ಚಿನ ಬ್ರಿಟೀಷ್‌ ವಸಾಹತುಗಳಲ್ಲಿ 1834 ಆಗಸ್ಟ್‌ 1 ರಂದು ʼಗುಲಾಮಗಿರಿ ನಿರ್ಮೂಲನೆ ಕಾಯ್ದೆʼ (Slavery Abolition Act) ಅಧಿಕೃತವಾಗಿ ಜಾರಿಗೆ ಬಂತು.

1777ರಲ್ಲಿ ಅಮೆರಿಕನ್ ಕ್ರಾಂತಿಯ ತರುವಾಯ ಸ್ವತಂತ್ರ ಗಣರಾಜ್ಯವಾದ ವರ್ಮೊಂಟ್ ರಾಜ್ಯ (State of Vermont) ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿದ ಮೊದಲ ಸಾರ್ವಭೌಮ ರಾಜ್ಯವಾಗಿದ್ದಾಗಿಯೂ, ವಿಶಾಲ ಸಾಮ್ರಾಜ್ಯವನ್ನು ಹೊಂದಿದ್ದ ಬ್ರಿಟನ್‌ ತನ್ನ ವಸಾಹತುಗಳಲ್ಲಿ ಗುಲಾಮಗಿರಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕಾನೂನು ತಂದಿರುವುದು, ಗುಲಾಮಿ ಪದ್ಧತಿ ನಿರ್ಮೂಲನೆ ಬೇಡಿಕೆ ಇನ್ನಷ್ಟು ಪ್ರಚಾರಗೊಳ್ಳಲು, ತೀವ್ರಗೊಳ್ಳಲು ಕಾರಣವಾಯಿತು.

ಇಂದು ಆಗಸ್ಟ್‌ 1. ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಗುಲಾಮಗಿರಿ ನಿಷೇಧಿಸಿ ಇಂದಿಗೆ 186 ವರ್ಷ ಪೂರ್ಣವಾಗಿದೆ. ನವ ವಸಾಹತು ಕಾಲದಲ್ಲಿ ಗುಲಾಮಗಿರಿಯ ವಿರುದ್ಧದ ಕ್ರಮಗಳು ಶುರುವಾಗಿ ಸುಮಾರು 250 ವರ್ಷಗಳೇ ಕಳೆದರೂ, ಗುಲಾಮಗಿರಿಯಿಂದ ಅತೀ ಹೆಚ್ಚು ಜರ್ಝರಿತವಾದ ಜನಾಂಗ ಇಂದಿಗೂ ಸಮಾಧಾನದಿಂದಿಲ್ಲ. ಅವರ ಘನತೆ, ಬದುಕುವ ಹಕ್ಕು ಪದೇ ಪದೇ ಚರ್ಚಾ ವಿಷಯವಾಗಿ ಮುನ್ನಲೆಗೆ ಬರುತ್ತಿದೆ. 250 ವರ್ಷಗಳ ಹಿಂದೆ, ಬಹುಪಾಲು ಅವರ ಪರವಾಗಿ ಯಾವ ಖಂಡದಲ್ಲಿ ಮೊದಲ ಬಾರಿಗೆ ಶಾಸನ ಜಾರಿಯಾಯಿತೋ ಅದೇ ಖಂಡದಲ್ಲಿ ಅವರು ಬದುಕಿಗಾಗಿ ಬೀದಿಗಿಳಿದಿದ್ದಾರೆ.

ಗುಲಾಮಗಿರಿ ನಿಷೇಧದ ಮುಖ್ಯ ಇಸವಿಗಳು (ಕೃಪೆ-reuters.com)

 • 1777ರಲ್ಲಿ ಅಮೆರಿಕನ್ ಕ್ರಾಂತಿಯ ನಂತರ ಸ್ವತಂತ್ರ ಗಣರಾಜ್ಯವಾದ ವರ್ಮೊಂಟ್ ರಾಜ್ಯ ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿತು.

 • 1787ರಲ್ಲಿ ಗ್ರ್ಯಾನ್ವಿಲ್ಲೆ ಶಾರ್ಪ್ ಮತ್ತು ಥಾಮಸ್ ಕ್ಲಾರ್ಕ್ಸನ್ ಎಂಬವರು ಬ್ರಿಟನ್‌ನಲ್ಲಿ ಗುಲಾಮರ ವ್ಯಾಪಾರವನ್ನು ನಿರ್ಮೂಲನೆ ಮಾಡುವ ಸಂಘ ಸ್ಥಾಪಿಸಿದರು

 • 1792ರಲ್ಲಿ ಡೆನ್ಮಾರ್ಕ್ ತನ್ನ ವೆಸ್ಟ್ ಇಂಡೀಸ್ ವಸಾಹತುಗಳಿಗೆ ಗುಲಾಮರನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿತು, ಆದರೆ ಕಾನೂನು 1803 ರಿಂದ ಜಾರಿಗೆ ಬಂತು.

 • 1807ರಲ್ಲಿ ಬ್ರಿಟನ್ ಅಟ್ಲಾಂಟಿಕ್ ಗುಲಾಮರ ವ್ಯಾಪಾರವನ್ನು ನಿಷೇಧಿಸಿ ಗುಲಾಮರ ವ್ಯಾಪಾರ ಕಾಯ್ದೆಯನ್ನು ರದ್ದುಪಡಿಸಿತು.

 • 1808ರಲ್ಲಿ ಅಮೇರಿಕಾ ಗುಲಾಮರ ವ್ಯಾಪಾರವನ್ನು ನಿಷೇಧಿಸುವ ಶಾಸನವನ್ನು ಅಂಗೀಕರಿಸುತ್ತದೆ.

 • 1811ರಲ್ಲಿ ಸ್ಪೇನ್ ತನ್ನ ವಸಾಹತುಗಳನ್ನು ಒಳಗೊಂಡಂತೆ ಗುಲಾಮಗಿರಿಯನ್ನು ರದ್ದುಗೊಳಿಸಿತು.

 • 1813ರಲ್ಲಿ ಸ್ವೀಡನ್ ಗುಲಾಮರ ವ್ಯಾಪಾರವನ್ನು ನಿಷೇಧಿಸಿತು

 • 1814ರಲ್ಲಿ ನೆದರ್ಲ್ಯಾಂಡ್ಸ್ ಗುಲಾಮರ ವ್ಯಾಪಾರವನ್ನು ನಿಷೇಧಿಸಿತು

 • 1817 ರಲ್ಲಿ ಫ್ರಾನ್ಸ್ ಗುಲಾಮರ ವ್ಯಾಪಾರವನ್ನು ನಿಷೇಧಿಸಿತು, ಆದರೆ ನಿಷೇಧವು 1826 ರವರೆಗೆ ಪರಿಣಾಮಕಾರಿಯಾಗಿರಲಿಲ್ಲ.

 • 1833 ರಲ್ಲಿ ಎಲ್ಲಾ ಬ್ರಿಟಿಷ್ ವಸಾಹತುಗಳಲ್ಲಿ ಗುಲಾಮಗಿರಿಯನ್ನು ಕ್ರಮೇಣವಾಗಿ ರದ್ದುಗೊಳಿಸುವಂತೆ ಆದೇಶಿಸಿ, ಗುಲಾಮಗಿರಿ ನಿರ್ಮೂಲನೆ ಕಾಯ್ದೆಯನ್ನು ಬ್ರಿಟನ್ ಅಂಗೀಕರಿಸಿತು. 1834 ಆಗಸ್ಟ್‌ 1 ರಂದು ʼಗುಲಾಮಗಿರಿ ನಿರ್ಮೂಲನೆ ಕಾಯ್ದೆʼ ಅಧಿಕೃತವಾಗಿ ಜಾರಿಗೆ ಬಂತು.

 • 1846ರಲ್ಲಿ ಡ್ಯಾನಿಶ್ ಗವರ್ನರ್, ವೆಸ್ಟ್ ಇಂಡೀಸ್ನಲ್ಲಿ ಗುಲಾಮರ ವಿಮೋಚನೆಯನ್ನು ಘೋಷಿಸಿದರು, ಗುಲಾಮಗಿರಿಯನ್ನು ರದ್ದುಪಡಿಸಿದರು.

 • 1848ರಲ್ಲಿ ಫ್ರಾನ್ಸ್ ಗುಲಾಮಗಿರಿಯನ್ನು ರದ್ದುಗೊಳಿಸಿತು

 • 1851ರಲ್ಲಿ ಬ್ರೆಜಿಲ್ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿತು

 • 1858ರಲ್ಲಿ ಪೋರ್ಚುಗಲ್ ತನ್ನ ವಸಾಹತುಗಳಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸಿತು.

 • 1861ರಲ್ಲಿ ನೆದರ್ಲ್ಯಾಂಡ್ಸ್ ಡಚ್ ಕೆರಿಬಿಯನ್ ವಸಾಹತುಗಳಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸಿತು

 • 1862ರಲ್ಲಿ ಅಮೇರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಜನವರಿ 1, 1863 ರಿಂದ ಜಾರಿಗೆ ಬರುವಂತೆ ಗುಲಾಮರ ವಿಮೋಚನೆಯನ್ನು ಘೋಷಿಸಿದರು.

 • 1886ರಲ್ಲಿ ಕ್ಯೂಬಾದಲ್ಲಿ ಗುಲಾಮಗಿರಿಯನ್ನು ರದ್ದುಪಡಿಸಲಾಯಿತು

 • 1888ರಲ್ಲಿ ಬ್ರೆಜಿಲ್ ಗುಲಾಮಗಿರಿಯನ್ನು ರದ್ದುಗೊಳಿಸಿತು

 • 1926ರಲ್ಲಿ ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವ ಒಪ್ಪಂದವನ್ನು ಗುಲಾಮಗಿರಿ ನಿಗ್ರಹಿಸಲು ಮಾಡಿರುವ ಸಮಾವೇಶದಲ್ಲಿ(Slavery Convention) ಲೀಗ್ ಆಫ್ ನೇಷನ್ಸ್ ಅಂಗೀಕರಿಸಿತು.

 • 1948ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು, ಇದರಲ್ಲಿ “ಗುಲಾಮಗಿರಿ ಅಥವಾ ಜೀತಗಾರಿಕೆಯಲ್ಲಿ ಯಾರನ್ನೂ ಒಳಪಡಿಸಬಾರದು; ಗುಲಾಮಗಿರಿ ಮತ್ತು ಗುಲಾಮರ ವ್ಯಾಪಾರವನ್ನು ಅವರ ಎಲ್ಲಾ ಪ್ರಕಾರಗಳಲ್ಲಿ ನಿಷೇಧಿಸಲಾಗುವುದು ಎಂದು ಘೋಷಿಸಿತು.

Click here to follow us on Facebook , Twitter, YouTube, Telegram

Pratidhvani
www.pratidhvani.com