ಬೀಫ್ ಸಾಗಾಟ ಆರೋಪ: ಪೋಲಿಸರ ಸಮ್ಮುಖದಲ್ಲೇ ವ್ಯಕ್ತಿಗೆ ಸುತ್ತಿಗೆಯಿಂದ ಹಲ್ಲೆ
ರಾಷ್ಟ್ರೀಯ

ಬೀಫ್ ಸಾಗಾಟ ಆರೋಪ: ಪೋಲಿಸರ ಸಮ್ಮುಖದಲ್ಲೇ ವ್ಯಕ್ತಿಗೆ ಸುತ್ತಿಗೆಯಿಂದ ಹಲ್ಲೆ

ಲುಕ್ಮಾನ್‌ ಚಲಾಯಿಸಿಕೊಂಡು ಬರುತ್ತಿದ್ದ ಪಿಕಪ್‌ಗೆ ಅಡ್ಡಗಟ್ಟಿ, ಹೊರಗೆಳೆದು ಭೀಕರವಾಗಿ ಹಲ್ಲೆ ನಡೆಸಿದೆ. ಜೀವಚ್ಛವವಾಗಿದ್ದ ಲುಕ್ಮಾನ್‌ರನ್ನು ಮತ್ತೆ ಪಿಕಪ್‌ನಲ್ಲಿ ಕಟ್ಟಿ ಗುರ್ಗಾಂವ್‌ನ ಬಾದ್‌ಷಾಪುರ್‌ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಮತ್ತೆ ಹಲ್ಲೆ ನಡೆಸಲಾಗಿದೆ

ಪ್ರತಿಧ್ವನಿ ವರದಿ

ಗೋಮಾಂಸ ಸಾಗಾಟ ಮಾಡುತ್ತಿದ್ದಾರೆಂಬ ಆರೋಪದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದೆ. ಪೋಲಿಸರ ಸಮ್ಮುಖದಲ್ಲೇ ನಡೆದ ಹಲ್ಲೆಯಲ್ಲಿ ದುಷ್ಕರ್ಮಿಗಳು ಸುತ್ತುವರೆದು ಸುತ್ತಿಗೆ ಮೂಲಕ ಸಂತ್ರಸ್ತರ ಮೇಲೆ ದಾರುಣವಾಗಿ ದಾಳಿ ನಡೆಸಿದ್ದಾರೆ. ಓರ್ವ ವ್ಯಕ್ತಿಯನ್ನು ಕ್ರೂರವಾಗಿ ಥಳಿಸುತ್ತಿರುವಾಗಲೂ ಪೋಲಿಸರು ಹಾಗೂ ಸುತ್ತಲಿರುವ ಜನ ಮೂಕ ಪ್ರೇಕ್ಷಕರಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲ್ಲೆಕೋರರ ಹಾಗೂ ಪೋಲಿಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು, ಲುಕ್ಮಾನ್‌ ಎಂದು ಗುರುತಿಸಿದ್ದು, ಕಳೆದ ಹಲವಾರು ವರ್ಷಗಳಿಂದ ಲುಕ್ಮಾನ್ ಪಿಕಪ್‌ ಚಾಲಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ಬೆಳಗಿನ ಹೊತ್ತು ಹಲ್ಲೆ ನಡೆದಿದೆಯೆಂದು NDTV ವರದಿ ಮಾಡಿದೆ. 8 ಕಿಮೀ ದೂರದಿಂದ ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಗುರ್ಗಾಂವ್‌ನ ಬಹುರಾಷ್ಟ್ರೀಯ ಸಾಫ್ಟ್‌ವೇರ್‌ ಕಂಪೆನಿಗಳ ಕಟ್ಟಡ ಸಮೀಪ ಲುಕ್ಮಾನ್‌ ಚಲಾಯಿಸಿಕೊಂಡು ಬರುತ್ತಿದ್ದ ಪಿಕಪ್‌ಗೆ ಅಡ್ಡಗಟ್ಟಿ ಚಾಲಕ ಸೀಟಿನಿಂದ ಹೊರಗೆಳೆದು ಭೀಕರವಾಗಿ ಹಲ್ಲೆ ನಡೆಸಿದೆ. ಜೀವಚ್ಛವವಾಗಿದ್ದ ಲುಕ್ಮಾನ್‌ರನ್ನು ಮತ್ತೆ ಪಿಕಪ್‌ನಲ್ಲಿ ಕಟ್ಟಿ ಗುರ್ಗಾಂವ್‌ನ ಬಾದ್‌ಷಾಪುರ್‌ ಗ್ರಾಮಕ್ಕೆ ಕರೆದೊಯ್ಯಲಾಗಿದೆ ಅಲ್ಲಿ ಮತ್ತೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

2015 ರಲ್ಲಿ ದಾದ್ರಿಯಲ್ಲಿ ನಡೆದ ಗುಂಪು ಹಲ್ಲೆಯನ್ನು ನೆನಪಿಸುವಂತೆ ಗುರ್ಗಾಂವ್‌ನಲ್ಲೂ ಗುಂಪು ಹಲ್ಲೆ ನಡೆದಿದೆ. ದಾದ್ರಿಯಂತೆ ಪೋಲಿಸರು ಹಲ್ಲೆಕೋರರನ್ನು ಬಂಧಿಸುವುದಕ್ಕಿಂತಲೂ ಮಾಂಸ ಯಾವುದೆಂದು ಪತ್ತೆಹಚ್ಚಲು ಉತ್ಸುಕರಾಗಿದ್ದರು ಎಂದು NDTV ವರದಿ ಮಾಡಿದೆ.

ಘಟನೆ ಸಂಬಂಧ ಓರ್ವ ಹಲ್ಲೆಕೋರನನ್ನು ಬಂಧಿಸಲಾಗಿದೆ. ವೀಡಿಯೋದಲ್ಲಿ ಹಲ್ಲೆ ನಡೆಸುವವರನ್ನು ಪತ್ತೆಹಚ್ಚುತ್ತಿದ್ದೇವೆ ಎಂದು ಗುರ್ಗಾಂವ್‌ ಅಡಿಷನಲ್‌ ಪೋಲಿಸ್ ಕಮಿಷನರ್‌ ಪ್ರಿತ್‌ಪಾಲ್‌ ಸಿಂಗ್‌ ಹೇಳಿದ್ದಾರೆ. ಅದಾಗ್ಯೂ, ಆಸ್ಪತ್ರೆಯಲ್ಲಿ ಲುಕ್ಮಾನ್‌ ಬಳಿಯಿಂದ ದೂರು ಪಡೆದ ಪೋಲಿಸರು “ಅಪರಿಚಿತ ಆರೋಪಿಗಳʼ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪೋಲಿಸರ ಉಪಸ್ಥಿತಿಯಲ್ಲೇ ಹಲ್ಲೆಕೋರರು ನಿರ್ಭೀತವಾಗಿ ಹಲ್ಲೆ ನಡೆಸುವುದು ವೀಡಿಯೋಗಳಲ್ಲಿ ದಾಖಲಾಗಿದೆ. ಹಲ್ಲೆಕೋರರನ್ನು ನಿಯಂತ್ರಿಸಲು ಪೋಲಿಸರು ವಿಫಲರಾಗಿರುವುದು ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com