ರೈತರ ಹೆಸರಲ್ಲಿ ವಿಮಾ ಕಂಪನಿ ಖಜಾನೆ ತುಂಬಿದ ‘ಮೋದಿ’ ಬೆಳೆ ವಿಮಾ ಯೋಜನೆ!
ರಾಷ್ಟ್ರೀಯ

ರೈತರ ಹೆಸರಲ್ಲಿ ವಿಮಾ ಕಂಪನಿ ಖಜಾನೆ ತುಂಬಿದ ‘ಮೋದಿ’ ಬೆಳೆ ವಿಮಾ ಯೋಜನೆ!

ಮುಖ್ಯವಾಗಿ ಪ್ರೀಮಿಯಂ ಹಣ ಪಾವತಿಯಲ್ಲಿನ ವಿಳಂಬ ಧೋರಣೆ ಮತ್ತು ಬೆಳೆ ಇಳವರಿ ಅಂದಾಜಿನಲ್ಲಿ ಆಗುವ ತಾರತಮ್ಯದಿಂದ ಬೇಸತ್ತಿರುವ ರೈತರು ಈ ಯೋಜನೆಯಿಂದ ದೂರವೇ ಉಳಿಯುತ್ತಿದ್ದಾರೆ. ಕರೋನಾ ಸಂಕಷ್ಟದ ಹೊತ್ತಲ್ಲಿ ಕನಿಷ್ಟ ಪ್ರೀಮಿಯಂ ತುಂಬುವ ಔದಾರ್ಯವನ್ನು ಕೂಡ ತೋರದ ಸರ್ಕಾರಗಳು, ಕೇವಲ ಬೆಳೆ ನಮೂದಿನ ಗಡುವು ನೀಡಿ ಕೈತೊಳೆದುಕೊಂಡಿವೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆ ನೋಂದಣಿಗೆ ಕರ್ನಾಟಕದಲ್ಲಿ ಇನ್ನು ಕೇವಲ ಒಂಭತ್ತು ದಿನಗಳ ಕಾಲಾವಕಾಶ ಉಳಿದಿದೆ. ಕರೋನಾ ಲಾಕ್ ಡೌನ್, ಸೀಲ್ ಡೌನ್ ಮತ್ತು ಸೋಂಕಿನ ಆತಂಕದ ನಡುವೆ ಹಲವು ಬಿಕ್ಕಟ್ಟುಗಳಲ್ಲಿ ಸಿಲುಕಿರುವ ರೈತರು ಈ ಬಾರಿ ಬೆಳೆ ವಿಮೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎನ್ನಲಾಗುತ್ತಿದೆ.

ಹಾಗೆ ನೋಡಿದರೆ, ಕರ್ನಾಟಕ ಮಾತ್ರವಲ್ಲ; ದೇಶದ ಹಲವು ರಾಜ್ಯಗಳಲ್ಲಿ ಇದೇ ಸ್ಥಿತಿ ಇದೆ. ಬಹುತೇಕ ಕಡೆ ರಾಜ್ಯ ಸರ್ಕಾರಗಳ ಒತ್ತಾಸೆ, ಒತ್ತಾಯದ ಹೊರತಾಗಿಯೂ ರೈತ ಸಮುದಾಯ ಪ್ರಧಾನಿ ನರೇಂದ್ರ ಮೋದಿಯವರ ಹೆಮ್ಮೆಯ ಯೋಜನೆಗಳಲ್ಲಿ ಒಂದಾದ ಈ ಯೋಜನೆಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಬೆಳೆ ವಿಮಾ ಯೋಜನೆಗಳು ದೇಶದ ರೈತರ ಆದಾಯವನ್ನು 2022ರ ಹೊತ್ತಿಗೆ ದುಪ್ಪಟ್ಟು ಮಾಡುವ ತಮ್ಮ ಮಹತ್ತರ ಕನಸಿಗೆ ಪೂರಕವಾಗಿಲ್ಲ ಎಂದು ಮೋದಿಯವರು 2016ರಿಂದಲೇ ಈ ಹೊಸ ಬೆಳೆ ವಿಮಾ ಯೋಜನೆಯನ್ನು ತಮ್ಮ ಹುದ್ದೆಯ ಹೆಸರಿನಲ್ಲಿಯೇ ‘ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ(ಪಿಎಂಎಫ್ಬಿಐ)’ ಎಂದು ಜಾರಿಗೆ ತಂದಿದ್ದರು.

ಆದರೆ, ವಾಸ್ತವವಾಗಿ ಈ ಯೋಜನೆ, ಪ್ರಧಾನಿ ಮೋದಿಯವರ ಇತರೆ ಹಲವು ಯೋಜನೆ ಮತ್ತು ನೀತಿಗಳಂತೆಯೇ ಅಸಲಿಗೆ ರೈತರ ಹಿತ ಕಾಯುವ ಬದಲಿಗೆ ವಿಮಾ ವಲಯದ ಕಾರ್ಪೊರೇಟ್ ಸಂಸ್ಥೆಗಳ ಬೊಕ್ಕಸ ತುಂಬಿಸುತ್ತಿದೆ ಎಂಬುದು ಈ ಯೋಜನೆಯ ಕುರಿತು ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪ. ದೇಶಾದ್ಯಂತ 2016ರ ಮುಂಗಾರು ಹಂಗಾಮಿನಿಂದ ಈವರೆಗೆ ನಾಲ್ಕು ಮುಂಗಾರು ಮತ್ತು ನಾಲ್ಕು ಹಿಂಗಾರು ಹಂಗಾಮು ಬೆಳೆಗಳಿಗೆ ಈ ವಿಮಾ ಯೋಜನೆ ಅಳವಡಿಸಲಾಗಿದ್ದು, ಎಲ್ಲಾ ಸಂದರ್ಭದಲ್ಲಿಯೂ ರೈತರು ಮತ್ತು ಸರ್ಕಾರಗಳು ವಿಮೆ ಕಂತಿನ ಮೊತ್ತವಾಗಿ ಪಾವತಿಸಿದ ಹಣಕ್ಕೆ ಹೋಲಿಸಿದರೆ, ವಿಮಾ ಕಂಪನಿಗಳು ಬೆಳೆ ನಷ್ಟ ಪರಿಹಾರ ನೀಡಿದ ಮೊತ್ತ ತೀರಾ ಅತ್ಯಲ್ಪ. ಕೆಲವು ರಾಜ್ಯಗಳಲ್ಲಂತೂ ಆ ರಾಜ್ಯಗಳ ಕೃಷಿ ಬಜೆಟ್ಟಿನ ಬಹುಪಾಲು ಮೊತ್ತ ಈ ಬೆಳೆ ವಿಮಾ ಕಂತು ಪಾವತಿಗೇ ಹೋಗುತ್ತಿದೆ. ಅಷ್ಟರಮಟ್ಟಿಗೆ ವಿಮೆ ಕಂತು ರಾಜ್ಯ ಸರ್ಕಾರಗಳ ಪಾಲಿಗೆ ಹೊರೆಯಾಗುತ್ತಿದ್ದರೆ, ಅದೇ ಹೊತ್ತಿಗೆ ವಿಮಾ ಕಂಪನಿಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ!

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಲ್ಲೂ ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಕೃಷಿ ವಿಮಾ ಕಂಪನಿ(ಎಐಸಿ), ಜನರಲ್ ಇನ್ಸೂರೆನ್ಸ್ ಕಾರ್ಪೊರೇಷನ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ, ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಮುಂತಾದವರು ದೊಡ್ಡ ಮೊತ್ತದ ಪ್ರಯೋಜನ ಪಡೆದಿವೆ. 2019-10ನೇ ಸಾಲಿನಲ್ಲಿ ಪಿಎಂಎಫ್ಬಿಐ ಯೋಜನೆಯಡಿ ಒಟ್ಟು ಸಂಗ್ರಹವಾದ ಪ್ರೀಮಿಯಂ ಮೊತ್ತ ಬರೋಬ್ಬರಿ 31,391 ಕೋಟಿ ರೂ. ಆ ಪೈಕಿ ಶೇ.52ರಷ್ಟು, ಅಂದರೆ, 16,325 ಕೋಟಿ ರೂ. ಸಾರ್ವಜನಿಕ ವಲಯದ ವಿಮಾ ಕಂಪನಿಗಳ ಪಾಲಾಗಿತ್ತು. ಅದರಲ್ಲೂ ಎಐಸಿ ಕಂಪನಿಯೊಂದೇ ರೂ.13,651 ಕೋಟಿಯಷ್ಟು ಪ್ರೀಮಿಯಂ ಬಾಚಿಕೊಂಡಿತ್ತು.

ಇದು ಪ್ರೀಮಿಯಂ ಮೊತ್ತದ ಲಾಭದ ವಿಷಯವಾದರೆ, ಇನ್ನು ರೈತರ ಬೆಳೆ ನಷ್ಟ ಪರಿಹಾರ ಕ್ಲೇಮುಗಳಿಗೆ ಸಕಾಲದಲ್ಲಿ ಪರಿಹಾರ ಬಿಡುಗಡೆ ಮಾಡದೆ, ವರ್ಷಗಟ್ಟಲೆ ಸತಾಯಿಸುವುದು ಈ ಯೋಜನೆಯ ಮತ್ತೊಂದು ಲೋಪ. ನಿಯಮದ ಪ್ರಕಾರ ವಿಮೆ ಮಾಡಿಸಿದ ಬೆಳೆ ಇಳವರಿ ಅಂದಾಜು ಪ್ರಯೋಗ ನಡೆಸಿದ ಎರಡು ತಿಂಗಳ ಒಳಗೆ ಬೆಳೆ ಪರಿಹಾರ ಮೊತ್ತವನ್ನು ರೈತರಿಗೆ ನೀಡಬೇಕು. ತಪ್ಪಿದ್ದಲ್ಲಿ ಶೇ.12ರಷ್ಟು ಬಡ್ಡಿ ಸಹಿತ ಪಾವತಿಸಬೇಕು. ಆದರೆ, ಈ ಯೋಜನೆ ಜಾರಿಗೆ ಬಂದಾಗಿನಿಂದ ಈವರೆಗೆ ಸಕಾಲದಲ್ಲಿ ಎಲ್ಲಾ ರೈತರ ವಿಮೆ ಪರಿಹಾರ ಪಾವತಿ ಮಾಡಿದ ನಿದರ್ಶನವೇ ಇಲ್ಲ! 2017-18ರಲ್ಲಿ 2,829 ಕೋಟಿ ರೂ. ಪರಿಹಾರ ಮೊತ್ತವನ್ನು ನಿಗದಿತ ಅವಧಿ ಮೀರಿದ ಬಳಿಕ ಸುಮಾರು ಏಳು ತಿಂಗಳು ವಿಳಂಬವಾಗಿ ಪಾವತಿ ಮಾಡಲಾಗಿತ್ತು. 2018-19ರಲ್ಲಿ ಕೂಡ 5,171 ಕೋಟಿ ರೂ. ಪರಿಹಾರವನ್ನು ಮೂರು ತಿಂಗಳು ವಿಳಂಬವಾಗಿ ಪಾವತಿ ಮಾಡಿದ್ದರೆ, 2019-10ರಲ್ಲಿ 3000 ಕೋಟಿ ರೂ ಪರಿಹಾರವನ್ನು ಏಳು ತಿಂಗಳು ವಿಳಂಬವಾಗಿ ಪಾವತಿ ಮಾಡಲಾಗಿದೆ.

ಕಳೆದ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ವಿಷಯದಲ್ಲಿ ಕೂಡ ವಿಮಾ ಕಂಪನಿಗಳ ವಿಳಂಬ ನೀತಿ ಮುಂದುವರಿದಿದ್ದು, ಸರ್ಕಾರಿ ಸ್ವಾಮ್ಯ ಮತ್ತು ಖಾಸಗೀ ಕಂಪನಿಗಳು ವಿಮೆ ಪರಿಹಾರ ಪಾವತಿಯಲ್ಲಿ ವಿಳಂಬ ಮಾಡುವುದರ ಹಿಂದೆ ದೊಡ್ಡ ಮಟ್ಟದ ಹಣಕಾಸು ಲಾಭದ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎಂಬುದು ಸರಳ ಸತ್ಯ. ಸರ್ಕಾರಿ ಸ್ವಾಮ್ಯದ ಎಐಸಿ, ಓರಿಯಂಟಲ್ ಇನ್ಸೂರೆನ್ಸ್, ನ್ಯೂ ಇಂಡಿಯಾ ಮತ್ತು ನ್ಯಾಷನಲ್ ವಿಮಾ ಕಂಪನಿಗಳು ಸುಮಾರು 2,589 ಕೋಟಿ ರೂ. ಪರಿಹಾರ ಪಾವತಿ ಬಾಕಿ ಉಳಿಸಿಕೊಂಡಿವೆ. ಹಾಗೇ ಖಾಸಗೀ ವಲಯದ ಆರು ವಿಮಾ ಕಂಪನಿಗಳು ಸುಮಾರು 2,140 ಕೋಟಿ ರೂ. ಪರಿಹಾರ ಬಾಕಿ ಉಳಿಸಿಕೊಂಡಿವೆ.

ತೀರಾ ಇತ್ತೀಚಿನ ಮಾಹಿತಿ ಪ್ರಕಾರ(ಪೈನಾನ್ಸಿಯಲ್ ಎಕ್ಸ್ ಪ್ರೆಸ್), ಎಐಸಿ ಒಂದೇ, ರೈತರ ಪರಿಹಾರ ಕ್ಲೇಮ್ ಮೊತ್ತ 7,946 ಕೋಟಿ ರೂ. ಪೈಕಿ ಬರೋಬ್ಬರಿ 7,117 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅಂದರೆ, ಅದು ಪಾವತಿ ಮಾಡಿರುವುದು ಒಟ್ಟು ಕ್ಲೇಮಿನ ಪೈಕಿ ಶೇ.17ರಷ್ಟು ಮಾತ್ರ! ಇನ್ನುಳಿದ ಶೇ.83ರಷ್ಟು ಪಾವತಿ ಬಾಕಿ ಇದೆ. ಅದೇ ರೀತಿ, ನ್ಯೂ ಇಂಡಿಯಾ ಕಂಪನಿ ಒಟ್ಟಾರೆ ಕ್ಲೇಮಿನ ಪೈಕಿ ಶೇ.92ರಷ್ಟು ಬಾಕಿ ಉಳಿಸಿಕೊಂಡಿದ್ದರೆ, ಓರಿಯಂಟಲ್ ಕಂಪನಿ ಶೇ.66ರಷ್ಟು ಬಾಕಿ ಉಳಿಸಿಕೊಂಡಿದೆ. ಹಾಗೇ ಖಾಸಗೀ ವಲಯದ ಇಫ್ಕೋ ಟೋಕಿಯೋ ಕಂಪನಿ ಶೇ.99ರಷ್ಟು ಪರಿಹಾರ ಪಾವತಿ ಬಾಕಿ ಉಳಿಸಿಕೊಂಡಿದ್ದರೆ, ಮೋದಿಯವರ ಆಪ್ತ ಉದ್ಯಮಿ ಒಡೆತನದ ರಿಲೆಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಶೇ.94ರಷ್ಟು ಪರಿಹಾರ ಪಾವತಿ ಬಾಕಿ ಉಳಿಸಿಕೊಂಡಿದೆ(ಜೂ.29ರವರೆಗೆ).

ಹೀಗೆ ಸಾವಿರಾರು ಕೋಟಿ ಮೊತ್ತದ ಹಣವನ್ನು ಸಕಾಲದಲ್ಲಿ ಪಾವತಿ ಮಾಡದೆ ವಿಮಾ ಕಂಪನಿಗಳು ರೈತರಿಗೆ ವಂಚಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸರಾಸರಿ ಸುಮಾರು 17 ತಿಂಗಳು ವಿಳಂಬವಾಗಿ ವಿಮಾ ಪರಿಹಾರ ನೀಡಲಾಗಿದೆ ಎಂದು ಒಂದು ವರದಿ ಹೇಳಿದೆ. ಅಂದರೆ, ಸಾವಿರಾರು ಕೋಟಿ ರೂನಷ್ಟು ಬೃಹತ್ ಮೊತ್ತದ ಹಣಕ್ಕೆ 17 ತಿಂಗಳುಗಟ್ಟಲೆ ಸಿಗಬಹುದಾದ ಬಡ್ಡಿ ಮತ್ತು ವ್ಯವಹಾರಿಕ ಚಲಾವಣೆಯ ಮೌಲ್ಯ ಖಾಸಗೀ ಮತ್ತು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಗೆ ತಂದುಕೊಡುವ ಲಾಭ ಎಷ್ಟು ದೊಡ್ಡದು ಎಂಬುದನ್ನು ಅಂದಾಜಿಸಬಹುದು.

ಇಂತಹ ವಿಳಂಬದ ಹಿನ್ನೆಲೆಯಲ್ಲಿಯೇ ಹಲವು ರಾಜ್ಯ ಸರ್ಕಾರಗಳು ರೈತರ ದೂರುಗಳಿಂದ ಬೇಸತ್ತು ಪ್ರಧಾನ ಮಂತ್ರಿಗಳ ಈ ಮಹತ್ವಾಕಾಂಕ್ಷೆಯ ಯೋಜನೆಯಿಂದಲೇ ಹೊರನಡೆದಿದೆ. ಬಿಹಾರ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಜಾರ್ಖಂಡ್ ರಾಜ್ಯಗಳು ಈಗಾಗಲೇ ಯೋಜನೆಯಿಂದ ಹೊರ ನಡೆದಿದ್ದು, ಆ ಪೈಕಿ ಬಿಹಾರ, ಜಾರ್ಖಂಡ್, ಪಶ್ಚಿಮಬಂಗಾಳ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಬೆಳೆ ವಿಮಾ ಯೋಜನೆಗಳನ್ನು ಜಾರಿಗೆ ತಂದಿವೆ. ಆಂಧ್ರಪ್ರದೇಶ ಕೂಡ ತನ್ನದೇ ಆದ ಬೆಳೆ ವಿಮಾ ಯೋಜನೆ ರಚನೆಗೆ ಮುಂದಾಗಿದೆ. ಹರ್ಯಾಣ ಕೂಡ ಆ ದಿಕ್ಕಿನಲ್ಲಿ ಚಿಂತನೆ ನಡೆಸಿದೆ. ಕರ್ನಾಟಕದಲ್ಲಿಕೂಡ ಪ್ರತ್ಯೇಕ ಬೆಳೆ ವಿಮಾ ಯೋಜನೆ ಜಾರಿಗೆ ತರುವುದಾಗಿ ಕಳೆದ ವರ್ಷ ಅಂದಿನ ಸಿಎಂ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯನ್ನೇ ಮುಂದುವರಿಸಿದೆ.

ಮುಖ್ಯವಾಗಿ ಪ್ರೀಮಿಯಂ ಹಣ ಪಾವತಿಯಲ್ಲಿನ ವಿಳಂಬ ಧೋರಣೆ ಮತ್ತು ಬೆಳೆ ಇಳವರಿ ಅಂದಾಜಿನಲ್ಲಿ ಆಗುವ ತಾರತಮ್ಯದಿಂದ ಬೇಸತ್ತಿರುವ ರೈತರು ಈ ಯೋಜನೆಯಿಂದ ದೂರವೇ ಉಳಿಯುತ್ತಿದ್ದಾರೆ. ಈ ನಡುವೆ, ವಿಮಾ ಕಂತಿನ ಮೊತ್ತ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಕರೋನಾದಂತಹ ಸಂಕಷ್ಟದ ಹೊತ್ತಲ್ಲಿ ಬೆಳೆಗೆ ಬೆಲೆ ಇಲ್ಲದೆ, ಫಸಲು ನಷ್ಟ ಅನುಭವಿಸಿ, ಕೃಷಿ ಕಾರ್ಯ ಸಕಾಲಕ್ಕೆ ಮಾಡಲಾಗದೆ ಹೈರಾಣಾಗಿರುವ ರೈತರು ಪ್ರೀಮಿಯಂ ಮೊತ್ತ ಕಟ್ಟಲೂ ಕಂಗಾಲಾಗಿದ್ಧಾರೆ. ಇಂತಹ ಹೊತ್ತಲ್ಲಿ ಕನಿಷ್ಟ ಪ್ರೀಮಿಯಂ ತುಂಬುವ ಔದಾರ್ಯವನ್ನು ಕೂಡ ತೋರದ ಸರ್ಕಾರಗಳು, ಕೇವಲ ವಿಮಾ ಯೋಜನೆಗೆ ಬೆಳೆ ನಮೂದಿನ ಗಡುವು ನೀಡಿ ಕೈತೊಳೆದುಕೊಂಡಿವೆ. ಸಂಕಷ್ಟದ ಹೊತ್ತಲ್ಲಿ ಲಾಭ ದೋಚುವ ಪ್ರವೃತ್ತಿ ಅನ್ನದಾತರ ಬೆಳೆ ವಿಮೆ ವಿಷಯದಲ್ಲಿ ಕೂಡ ಮುಂದುವರಿದಿದೆ!

Click here to follow us on Facebook , Twitter, YouTube, Telegram

Pratidhvani
www.pratidhvani.com