ಕರೋನಾ ಕಾಲದಲ್ಲಿ ಬ್ಯಾಂಕ್ ಖಾಸಗೀಕರಣಕ್ಕೆ ಮೋದಿ ಹೆಜ್ಜೆ
ರಾಷ್ಟ್ರೀಯ

ಕರೋನಾ ಕಾಲದಲ್ಲಿ ಬ್ಯಾಂಕ್ ಖಾಸಗೀಕರಣಕ್ಕೆ ಮೋದಿ ಹೆಜ್ಜೆ

ಐವತ್ತೊಂದು ವರ್ಷಗಳ ಹಿಂದೆ, ದೇಶದ ಬ್ಯಾಂಕಿಂಗ್ ವಲಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕ್ರಾಂತಿಕಾರಕ ಕ್ರಮವಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ 1969ರಲ್ಲಿ 14 ಖಾಸಗೀ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದರು. ಇದೀಗ ಅರ್ಧ ಶತಮಾನದ ಬಳಿಕ ಇದೀಗ ಮೋದಿಯವರು ಬ್ಯಾಂಕುಗಳನ್ನು ಜನಸಾಮಾನ್ಯರಿಂದ ದೂರ ಮಾಡುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಖಾಸಗೀಕರಣಕ್ಕೆ ಮುಂದಡಿ ಇಟ್ಟಿದ್ದಾರೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕರೋನಾ ಸಂಕಷ್ಟದ ಹೊತ್ತಲ್ಲಿ ಎಪತ್ತು ವರ್ಷಗಳ ಕಾಲ ದೇಶ ಕಟ್ಟಿದ ನಾಯಕರು ಸಾರ್ವಜನಿಕ ಸ್ವತ್ತಾಗಿ ಕೂಡಿಟ್ಟಿದ್ದ ದೇಶದ ಆಸ್ತಿಗಳನ್ನು ಒಂದೊಂದಾಗಿ ಮಾರಾಟ ಮಾಡುವ ಅವಕಾಶವಾಗಿ ಬಳಸಿಕೊಳ್ಳುತ್ತಿರುವ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ, ಇದೀಗ ಬ್ಯಾಂಕ್ ಖಾಸಗೀಕರಣಕ್ಕೆ ಮುಂದಾಗಿದೆ.

ವಸೂಲಾಗದ ಸಾಲ(ಎನ್ ಪಿಎ) ಮತ್ತು ಹಣಕಾಸು ಅಕ್ರಮಗಳಿಂದ ದೇಶದ ಬ್ಯಾಂಕಿಂಗ್ ವಲಯ ಕುಸಿಯುತ್ತಿರುವ ಹೊತ್ತಿನಲ್ಲಿ, ವಸೂಲಾಗದ ಸಾಲದ ವಿಷಯವನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿ, ಹೀಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಕುತೂಹಲ ಹುಟ್ಟಿಸಿದೆ. ಬ್ಯಾಂಕಿಂಗ್ ವಲಯದ ಪುನರ್ ರಚನೆಯ ಭಾಗವಾಗಿ ಮತ್ತು ಅರ್ ಬಿಐನಂತಹ ಉನ್ನತ ಸಂಸ್ಥೆಗಳ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದ್ದು, ಈಗಾಗಲೇಏ ಸರ್ಕಾರ ಖಾಸಗೀಕರಣ ಯೋಜನೆ ಸಿದ್ಧಪಡಿಸಿದೆ ಎಂದು ವರದಿಗಳು ಹೇಳಿವೆ.

ಸದ್ಯ ಭಾರತ ಸರ್ಕಾರದ ಸ್ವಾಮ್ಯದಲ್ಲಿ ದೇಶದ 12 ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ಆ ಪೈಕಿ ಬಹುತೇಕ ಬ್ಯಾಂಕುಗಳನ್ನು ಖಾಸಗಿಯವರ ಕೈಗೊಪ್ಪಿಸಲು ಮೋದಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೇವಲ ನಾಲ್ಕು ಅಥವಾ ಐದು ಬ್ಯಾಂಕುಗಳನ್ನಷ್ಟೇ ಸರ್ಕಾರದ ನಿಯಂತ್ರಣದಲ್ಲಿಟ್ಟುಕೊಂಡು, ಉಳಿದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ ನಷ್ಟದಲ್ಲಿರುವ ಹಲವು ಬ್ಯಾಂಕುಗಳನ್ನು ಮೊದಲ ಹಂತದಲ್ಲಿ ಖಾಸಗೀಕರಣ ಮಾಡಲಾಗುವುದು. ಆ ದಿಸೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬ್ಯಾಂಕುಗಳಲ್ಲಿ ಇರುವ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಿ, ತನ್ನ ಬಂಡವಾಳ ಹಿಂತೆಗೆದುಕೊಳ್ಳುವ ಮೂಲಕ ಸಂಪೂರ್ಣವಾಗಿ ಖಾಸಗೀ ವ್ಯವಸ್ಥೆಗೆ ಒಪ್ಪಿಸುವುದು ಸದ್ಯದ ಯೋಜನೆ ಎನ್ನಲಾಗಿದೆ.

ಕರೋನಾ ಮತ್ತು ಅದರ ನಿಯಂತ್ರಣದ ಅಂಗವಾಗಿ ಹೇರಲಾದ ಲಾಕ್ ಡೌನ್ ನಿಂದಾಗಿ ನೆಲಕಚ್ಚಿರುವ ದೇಶದ ಆರ್ಥಿಕ ಪರಿಸ್ಥಿತಿಯಿಂದಾಗಿ ಸರ್ಕಾರ ತೀವ್ರ ಹಣಕಾಸು ಮುಗ್ಗಟ್ಟಿಗೆ ಸಿಲುಕಿದೆ. ಬೊಕ್ಕಸ ಬರಿದಾಗಿದ್ದು, ಆದಾಯದ ಕೊರತೆ ತುಂಬಿಕೊಳ್ಳಲು ಪ್ರಮುಖವಲ್ಲದ ಕಂಪನಿ ಮತ್ತು ಸಂಸ್ಥೆಗಳಲ್ಲಿ ಸರ್ಕಾರ ಹೊಂದಿರುವ ಷೇರು ಮತ್ತು ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ಮೋದಿಯವರು ಮುಂದಾಗಿದ್ದಾರೆ. ಆ ಮೂಲಕ ಹಣಕಾಸು ಬಿಕ್ಕಟ್ಟು ನೀಗುವ ಯೋಚನೆ ಅವರದ್ದು ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಕರೋನಾ ಸೋಂಕು ಹರಡುವ ಮುನ್ನ ಕಳೆದ ವರ್ಷದ ಸೆಪ್ಟೆಂಬರ್ ಹೊತ್ತಿಗೇ ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳ ಎನ್ ಪಿಎ ಪ್ರಮಾಣ ಬರೋಬ್ಬರಿ ಹತ್ತು ಲಕ್ಷ ಕೋಟಿ ರೂ.ನಷ್ಟು ಬೃಹತ್ ಪ್ರಮಾಣದಲ್ಲಿ ಬೆಳೆದಿತ್ತು. ಆ ಪ್ರಮಾಣದ ಹೊರೆಗೆ ಕಾರಣವಾಗಿದ್ದು ಕರೋನಾ ಅಲ್ಲ; ಬದಲಾಗಿ ನೋಟು ರದ್ದತಿ ಮತ್ತು ಅವೈಜ್ಞಾನಿಕ ಜಿಎಸ್ ಟಿ ತೆರಿಗೆ ಹೇರಿಕೆ ದೇಶದ ಉದ್ಯಮ ಮತ್ತು ವ್ಯವಹಾರ ವಲಯಕ್ಕೆ ಕೊಟ್ಟ ಪೆಟ್ಟು ಎಂಬುದು ಅರ್ಥವ್ಯವಸ್ಥೆಯ ಪ್ರಾಥಮಿಕ ತಿಳಿವಳಿಕೆ ಇರುವವರಿಗೂ ಗೊತ್ತಿರುವ ಸಂಗತಿ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಇದೀಗ ಸರ್ಕಾರದ ಕೆಟ್ಟ ಮತ್ತು ಮೂರ್ಖತನದ ನೀತಿಗಳ ಪರಿಣಾಮಗಳನ್ನು ಕರೋನಾ ಸೋಂಕಿನ ಹೆಗಲಿಗೇರಿಸಲಾಗುತ್ತಿದೆ. ಮಂಗ ಮತ್ತು ಮೇಕೆಯ ಕಥೆಯಂತೆಯೇ ಈಗ ಆಡಳಿತ ಪಕ್ಷ ತನ್ನ ಎಲ್ಲಾ ಯಡವಟ್ಟುಗಳು, ಮೂರ್ಖತನವನ್ನು ಈಗ ಕರೋನಾದ ಬೆದರು ಬೊಂಬೆ ಮುಂದಿಟ್ಟು ಮರೆಮಾಚಲು ಯತ್ನಿಸುತ್ತಿದೆ. ವಾಸ್ತವವಾಗಿ ಬ್ಯಾಂಕ್ ಖಾಸಗೀಕರಣದ ಚಿಂತನೆ ಸರ್ಕಾರಕ್ಕೆ ಈ ಮೊದಲೇ ಇತ್ತು. ಆದರೆ, ಅದನ್ನು ದಿಢೀರನೇ ಜಾರಿಗೆ ತರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಬಹುದು ಎಂಬ ಹಿಂಜರಿಕೆ ಇತ್ತು. ಇದೀಗ ಕರೋನಾ ಸಂಕಷ್ಟದ ಸಂದರ್ಭ ಸರ್ಕಾರದ ಇತರೆ ಹಲವು ವಲಯದ ಖಾಸಗೀಕರಣದ ರೀತಿಯಲ್ಲೇ ಬ್ಯಾಂಕ್ ಖಾಸಗೀಕರಣಕ್ಕೂ ವರದಾನವಾಗಿ ಒದಗಿ ಬಂದಿದೆ. ಹಾಗಾಗಿ, ಬ್ಯಾಂಕ್ ಖಾಸಗೀಕರಣದ ಹೊಸದೇನಲ್ಲ; ಬಿಜೆಪಿಯ ಖಾಸಗೀಕರಣದ ಅಜೆಂಡಾದ ಭಾಗವೇ ಎಂಬ ಮಾತೂ ಇದೆ.

ಐವತ್ತೊಂದು ವರ್ಷಗಳ ಹಿಂದೆ, ದೇಶದ ಬ್ಯಾಂಕಿಂಗ್ ವಲಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕ್ರಾಂತಿಕಾರಕ ಕ್ರಮವಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1969ರಲ್ಲಿ 14 ಖಾಸಗೀ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದರು. ಆ ಮೂಲಕ ದೇಶದ ಹಣಕಾಸು ವ್ಯವಸ್ಥೆಯಲ್ಲಿ ಜನಸಾಮಾನ್ಯರ ಪಾಲುದಾರಿಕೆಗೆ ಅವಕಾಶ ನೀಡಿದ್ದರು. ಆ ಮೊದಲು ಕೇವಲ ಶ್ರೀಮಂತರು, ಉದ್ಯಮಿಗಳ ಪಾಲಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕುಗಳು ಸಾಮಾನ್ಯ ರೈತರು, ಚಿಕ್ಕಪುಟ್ಟ ವ್ಯಾಪಾರಿಗಳು ಮುಂತಾದ ದುರ್ಬಲ ವರ್ಗದವರಿಗೆ ಸಾಲ ಸೌಲಭ್ಯ ನೀಡುವ ಮಟ್ಟಕ್ಕೆ ಬಂದಿದ್ದವು. ಸರ್ಕಾರದ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಫಲವಾಗಿ ದೀನದಲಿತರ ಬದುಕಿನ ಮೇಲೆ ಬ್ಯಾಂಕಿಂಗ್ ವಲಯದ ನೆರವು ದೊಡ್ಡ ಮಟ್ಟದ ಪರಿಣಾಮ ಬೀರಿತ್ತು.

ಆದರೆ, ಇದೀಗ ಬ್ಯಾಂಕ್ ರಾಷ್ಟ್ರೀಕರಣದ ಅರ್ಧ ಶತಮಾನದ ಬಳಿಕ ಇದೀಗ ಮೋದಿಯವರು ಬ್ಯಾಂಕುಗಳನ್ನು ಜನಸಾಮಾನ್ಯರಿಂದ ದೂರ ಮಾಡುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಖಾಸಗೀಕರಣಕ್ಕೆ ಮುಂದಡಿ ಇಟ್ಟಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಲೇ, ಅಚ್ಛೇದಿನದ ಕನಸು ಬಿತ್ತುತ್ತಲೇ ಸಾಮಾನ್ಯರಿಂದ ಬ್ಯಾಂಕಿಂಗ್ ವಲಯವನ್ನು ಕಿತ್ತುಕೊಳ್ಳುವ ಜಾಣ ವರಸೆ ಇದು. ಇದರ ಪರಿಣಾಮಗಳು ಸದ್ಯಕ್ಕೆ ಕಾಣಿಸದೇ ಇರಬಹುದು. ಆದರೆ, ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳು ಗೋಚರಿಸದೇ ಇರಲಾರವು!

Click here to follow us on Facebook , Twitter, YouTube, Telegram

Pratidhvani
www.pratidhvani.com