ರೋಚಕ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಗೆಹ್ಲೋಟ್, ಪೈಲಟ್ ಇಬ್ಬರಿಗೂ ಇಕ್ಕಟ್ಟು
ರಾಷ್ಟ್ರೀಯ

ರೋಚಕ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಗೆಹ್ಲೋಟ್, ಪೈಲಟ್ ಇಬ್ಬರಿಗೂ ಇಕ್ಕಟ್ಟು

ಹೈಕೋರ್ಟ್ ತೀರ್ಪು ಸ್ಪೀಕರ್ ಪರ ಬಂದರೆ ಕಾಂಗ್ರೆಸ್ ಪಕ್ಷ ನೀಡಿರುವ ದೂರಿನ ಆಧಾರದ ಮೇಲೆ ಸಚಿನ್ ಪೈಲಟ್ ಮತ್ತು ಅವರ 18 ಮಂದಿ ಬೆಂಬಲಿಗ ಶಾಸಕರು ಅನರ್ಹರಾಗುವುದು ಖಚಿತ. ಆಗ 200 ಸದಸ್ಯ ಬಲದ ವಿಧಾನಸಭೆ 181ಕ್ಕೆ ಇಳಿಯುತ್ತದೆ. ಜೊತೆಗೆ ಮ್ಯಾಜಿಕ್ ನಂಬರ್ 91ಕ್ಕೆ ಇಳಿಯುತ್ತದೆ. ಆಗಲೂ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯಬಹುದು.

ಯದುನಂದನ

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಅವರ 18 ಮಂದಿ ಬೆಂಬಲಿಗ ಶಾಸಕರು ಸ್ಪೀಕರ್ ಸಿ.ಪಿ. ಜೋಶಿ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ರಾಜಸ್ಥಾನ ಹೈಕೋರ್ಟ್ ಜುಲೈ 24 ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲಿಯವರೆಗೆ ಮುಂದೇನಾಗುತ್ತೋ ಏನೋ ಎನ್ನುವ ಕುತೂಹಲ. ಜೊತೆಗೆ ಯಾವ ರೀತಿಯ ತೀರ್ಪು ಬಂದರೆ ಯಾವ ಬಣಕ್ಕೆ ಅನುಕೂಲ? ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರ ಉಳಿಯುತ್ತೋ? ಉರುಳುತ್ತೊ? ಎಂಬ ಲೆಕ್ಕಾಚಾರ.

ಆರಂಭದಲ್ಲಿ ಸಚಿನ್ ಪೈಲಟ್ ಜೊತೆ ಗುರುತಿಸಿಕೊಂಡಿದ್ದ ಶಾಸಕರ ಪೈಕಿ ಮೂವರು ಅಶೋಕ್ ಗೆಹ್ಲೋಟ್ ಪಾಳೆಯಕ್ಕೆ ಜಿಗಿದರು. ನಂತರ ಸಚಿನ್ ಪೈಲಟ್ ತಮ್ಮ ಕೂಟದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ ಅಶೋಕ್ ಗೆಹ್ಲೋಟ್ ಮೇಲುಗೈ ಸಾಧಿಸಿದರು ಎಂದೇ ಹೇಳಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಅಶೋಕ್ ಗೆಹ್ಲೋಟ್ ಬಣ ಅದು ಬಿಂಬಿಸಿಕೊಳ್ಳುವಷ್ಟು ಪ್ರಬಲವಾಗಿಲ್ಲ, ಸಚಿನ್ ಪೈಲಟ್ ಪಾಳೆಯ ಅಂದಾಜು ಮಾಡಿದಷ್ಟು ದುರ್ಬಲವಾಗಿಲ್ಲ ಎಂಬುದು ಗೊತ್ತಾಗುತ್ತಿದೆ.

ಸಚಿನ್ ಪೈಲಟ್ ಮತ್ತು ಅವರ 18 ಮಂದಿ ಬೆಂಬಲಿರು ಶಾಸಕರು ಸ್ಪೀಕರ್ ಸಿ,ಪಿ. ಜೋಷಿ ತಮ್ಮನ್ನು ವಿಧಾನಸಭೆಯ ಸದಸ್ಯತ್ವದಿಂದ ಅಮಾನತ್ತು ಮಾಡುವ ಹಿನ್ನೆಲೆಯಲ್ಲಿ ನೊಟೀಸ್ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿ ದೂರು ಸಲ್ಲಿಸಿದ್ದರು. ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 24 ರಂದು ತೀರ್ಪು ನೀಡಲಾಗುವುದು ಹೇಳಿದೆ. ಅಲ್ಲದೆ ಜುಲೈ 24ರವರೆಗೆ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಸ್ಪೀಕರ್‌ಗೆ ನಿರ್ದೇಶನವನ್ನೂ ನೀಡಿದೆ. ಇದರಿಂದ ಈಗ ಗೆಹ್ಲೋಟ್ ಮತ್ತು ಪೈಲಟ್ ಬಣ ಜುಲೈ 24ರವರೆಗೆ ಕಾಯಲೇಬೇಕಿದೆ. ಜೊತೆಗೆ ತಮ್ಮ ಬಳಿ ಇರುವ ಶಾಸಕರ ಪೈಕಿ ಒಬ್ಬರೇ ಒಬ್ಬರು ಕಡಿಮೆ ಆಗದಂತೆ ನೋಡಿಕೊಳ್ಳಬೇಕಿದೆ. ಏಕೆಂದರೆ ಒಬ್ಬ ಶಾಸಕ ಆಚೀಚೆ ಆದರೂ ಇಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಈ ಹಿನ್ನೆಲೆಯಲ್ಲಿ ರಾಜಸ್ಥಾನ ವಿಧಾನಸಭೆಯ ಸಂಖ್ಯಾಬಲ, ಮ್ಯಾಜಿಕ್ ನಂಬರ್ ಹಾಗೂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಣಗಳ ಬಲಾಬಲವನ್ನು ನೋಡಿ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 101 ಶಾಸಕರ ಬೆಂಬಲ ಹೊಂದಿದ್ದಾರೆ. ಈವರೆಗೆ ಅವರು ನಡೆಸಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ 101 ಜನ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸದ್ಯದ ಮಾಜಿಕ್ ನಂಬರ್ ಕೂಡ 101 ಆಗಿರುವುದರಿಂದ ಯಥಾಸ್ಥಿತಿ ಮುಂದುವರೆದರೆ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮುಂದುವರೆಯಬಹುದು. ಹೈಕೋರ್ಟ್ ತೀರ್ಪು ಸ್ಪೀಕರ್ ಪರ ಬಂದರೆ ಕಾಂಗ್ರೆಸ್ ಪಕ್ಷ ನೀಡಿರುವ ದೂರಿನ ಆಧಾರದ ಮೇಲೆ ಸಚಿನ್ ಪೈಲಟ್ ಮತ್ತು ಅವರ 18 ಮಂದಿ ಬೆಂಬಲಿಗ ಶಾಸಕರು ಅನರ್ಹರಾಗುವುದು ಖಚಿತ. ಆಗ 200 ಸದಸ್ಯ ಬಲದ ವಿಧಾನಸಭೆ 181ಕ್ಕೆ ಇಳಿಯುತ್ತದೆ. ಜೊತೆಗೆ ಮ್ಯಾಜಿಕ್ ನಂಬರ್ 91ಕ್ಕೆ ಇಳಿಯುತ್ತದೆ. ಆಗಲೂ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯಬಹುದು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ರಾಜಸ್ಥಾನ ಹೈಕೋರ್ಟ್ ತಿರ್ಪು ಸಚಿನ್ ಪೈಲಟ್ ಮತ್ತವರ ಬೆಂಬಲಿತ ಶಾಸಕರ ಪರ ಬಂದರೆ ಸ್ಪೀಕರ್ ಈ 19 ಮಂದಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿರುವುದಿಲ್ಲ. ಹಾಗಾದರೆ ಮತ್ತೆ ವಿಧಾನಸಭೆಯ ಬಲ 200 ಇರುತ್ತದೆ ಮತ್ತು ಮ್ಯಾಜಿಕ್ ನಂಬರ್ 101 ಇರುತ್ತದೆ. ಆಗ ಅಶೋಕ್ ಗೆಹ್ಲೋಟ್ ಸರ್ಕಾರ ಅಲ್ಪಮತಕ್ಕೆ ಇಳಿಯುತ್ತದೆ. ಅನಿಶ್ಚಿತತೆಯಲ್ಲೇ ಅಧಿಕಾರ ನಡೆಸಬೇಕಾಗುತ್ತದೆ. ಏಕೆಂದರೆ ಅಶೋಕ್ ಗೆಹ್ಲೋಟ್ ಅವರನ್ನು ಬೆಂಬಲಿಸಿರುವ ಶಾಸಕರ ಪೈಕಿ ಪಕ್ಷೇತರರು ಇದ್ದಾರೆ. 'ಇನ್ನು ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರನ್ನು ಅನರ್ಹಗೊಳಿಸಬಾರದು' ಎಂದು ತೀರ್ಪು ನೀಡಿದ ಮೇಲೆ ಮತ್ತೊಂದು ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಅದೇನೆಂದರೆ ಇವರೆಲ್ಲರಿಗೂ 'ವಿಶ್ವಾಸಮತಯಾಚನೆ ವೇಳೆ ಮುಖ್ಯಮಂತ್ರಿ ಪರವಾಗಿ ಮತಚಲಾಯಿಸಬೇಕು' ಎಂದು ಕಾಂಗ್ರೆಸ್ ಪಕ್ಷ ವಿಪ್ ಜಾರಿ ಮಾಡುತ್ತದೆ. ಆಗ ಸಚಿನ್ ಪೈಲಟ್ ಬಣ ಇಕ್ಕಟ್ಟಿಗೆ ಸಿಲುಕುತ್ತದೆ.

ಈ ನಡುವೆ ಅಶೋಕ್ ಗೆಹ್ಲೋಟ್ ಬಣದ ಒಬ್ಬನೇ ಒಬ್ಬ ಶಾಸಕ ವಿರೋಧಿ ಪಾಳೆಯಕ್ಕೆ ಜಿಗಿದು ಜೊತೆಗೆ ಸಚಿನ್ ಪೈಲಟ್ ಮತ್ತವರ ಸಂಗಡಿಗರು ಸರ್ಕಾರದ ವಿರುದ್ದ ಮತಚಲಾಯಿಸಿದರೆ ಮುಖ್ಯಮಂತ್ರಿ ಪರವಾಗಿ 100 ಮತ್ತು ವಿರುದ್ಧವಾಗಿ 100 ಮತಗಳು ಬಿದ್ದಿರುತ್ತವೆ. ವಿವಾದದ ಚೆಂಡು ವಿಧಾನಸಭೆಯಿಂದ ರಾಜಭವನಕ್ಕೆ ವರ್ಗವಾಗುತ್ತದೆ. ವಿಪ್ ಉಲ್ಲಂಘಿಸಿ ಚಲಾಯಿಸಿದ ಮತಗಳು ಸಿಂಧುವೋ ಅಸಿಂಧುವೋ ಎಂಬ ಜಿಜ್ಞಾಸೆ ಶುರುವಾಗುತ್ತದೆ. ಪ್ರಕರಣ ಸುಪ್ರಿಂ ಕೋಟ್ ಮೆಟ್ಟಿಲನ್ನೂ ಏರುತ್ತದೆ. ಇದೂ ಅಲ್ಲದೆ ತೆರೆಮರೆಯಲ್ಲಿ ಸರ್ಕಾರ ರಚನೆಯ ಕಸರತ್ತು ನಡೆಸುತ್ತಿರುವ ಬಿಜೆಪಿ ವಿಶ್ವಾಸಮತಯಾಚನೆ ವೇಳೆಗೆ ಅಶೋಕ್ ಗೆಹ್ಲೋಟ್ ಪಾಳೆಯದಿಂದ ಇಬ್ಬರು ಶಾಸಕರನ್ನು ಸೆಳೆದಿದ್ದೇ ಆದರೆ ಸರ್ಕಾರದ ಪರವಾಗಿ 99 ಮತ್ತು ವಿರುದ್ಧ 101 ಮತಗಳು ಚಲಾವಣೆ ಆಗುತ್ತವೆ. ಬಿಜೆಪಿಯ ಸರ್ಕಾರ ರಚನೆಯ ಹಾದಿ ಸುಗಮವಾಗುತ್ತದೆ.

ಇದೇ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ತನ್ನ ತೀರ್ಪನ್ನು ಕಾದಿರಿಸುವ ಮುನ್ನವೇ 'ಇನ್ನು ಸ್ವಲ್ಪದಿನ ಹೊಟೆಲ್‌ನಲ್ಲೇ ಇರಬೇಕಾಗಬಹುದು, ಮಾನಸಿಕವಾಗಿ ಸಿದ್ದರಾಗಿ' ಎಂದು ತಮ್ಮೊಂದಿಗೆ ಗುರುತಿಸಿಕೊಂಡಿರುವ ಶಾಸಕರಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಕೂಡ ಜೈಪುರದಲ್ಲಿ ಶಾಸಕರ ಜೊತಗೇ ಇದ್ದಾರೆ. ಎಲ್ಲವೂ ಜುಲೈ ೨೪ರಂದು ರಾಜಸ್ಥಾನ ಹೈಕೋರ್ಟ್ ನೀಡುವ ತೀರ್ಪಿನ ಮೇರೆಗೆ ನಿರ್ಧಾರವಾಗಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com