ಶುಭ ಸುದ್ದಿ: ಕರೋನಾ ಗೆದ್ದು ಬಂದ 85 ವರ್ಷದ ಕ್ಯಾನ್ಸರ್ ರೋಗಿ
ರಾಷ್ಟ್ರೀಯ

ಶುಭ ಸುದ್ದಿ: ಕರೋನಾ ಗೆದ್ದು ಬಂದ 85 ವರ್ಷದ ಕ್ಯಾನ್ಸರ್ ರೋಗಿ

ಒರಿಸ್ಸಾದ ಕೇಂದ್ರಪಾರ ಜಿಲ್ಲೆಯಲ್ಲಿ 85 ವರ್ಷದ ಕ್ಯಾನ್ಸರ್‌ ರೋಗಿ ಸುರೇಂದ್ರ ಪಾಟಿ ಹಾಗೂ ಅವರ 78 ವರ್ಷದ ಹೆಂಡತಿ ಸಾಬಿತ್ರಿ ಪಾಟಿ ಕರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸುರೇಂದ್ರ ಪಾಟಿ ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಅವರಿಗೆ ಗಾಯದ ಮೇಲೆ ಬರೆ ಎಳೆದಂತೆ ಕರೋನಾ ಸೋಂಕು ಕೂಡಾ ಅಂಟಿಕೊಂಟಿತು

ಪ್ರತಿಧ್ವನಿ ವರದಿ

ಕರೋನಾ ಸಂಕಷ್ಟ ಭಾರತಕ್ಕೆ ಬಂದೆರಗಿದ ದಿನದಿಂದ ಪ್ರತೀ ದಿನವೂ ಭಯ ಹುಟ್ಟಿಸುವ ಸುದ್ದಿಗಳೇ ಬರುತ್ತಿದ್ದವು. ಆದರೆ, ಈ ಬಾರಿ ಒರಿಸ್ಸಾದಿಂದ ಬಂದಿರುವ ಸುದ್ದಿಯೊಂದು ಆ ಭಯವನ್ನು ಹೋಗಲಾಡಿಸುವ ಭರವಸೆಯನ್ನು ನೀಡುತ್ತದೆ. ಆತ್ಮಸ್ಥೈರ್ಯ ಒಂದಿದ್ದರೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಲು ಸಾಧ್ಯ ಎಂಬ ಸಂದೇಶವನ್ನು ಸಾರುತ್ತದೆ.

ಒರಿಸ್ಸಾದ ಕೇಂದ್ರಪಾರ ಜಿಲ್ಲೆಯಲ್ಲಿ 85 ವರ್ಷದ ಕ್ಯಾನ್ಸರ್‌ ರೋಗಿ ಸುರೇಂದ್ರ ಪಾಟಿ ಹಾಗೂ ಅವರ 78 ವರ್ಷದ ಹೆಂಡತಿ ಸಾಬಿತ್ರಿ ಪಾಟಿ ಕರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸುರೇಂದ್ರ ಪಾಟಿ ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಅವರಿಗೆ ಗಾಯದ ಮೇಲೆ ಬರೆ ಎಳೆದಂತೆ ಕರೋನಾ ಸೋಂಕು ಕೂಡಾ ಅಂಟಿಕೊಂಟಿತು. ಆದರೆ, ಭರವಸೆ ಕಳೆದುಕೊಳ್ಳದ ಅವರು ಮತ್ತು ಅವರ ಪತ್ನಿ ಇಬ್ಬರೂ ಕರೋನಾ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜೂನ್‌ 8ರಂದು ಕ್ಯಾನ್ಸರ್‌ ರೋಗದ ಚಿಕಿತ್ಸೆಗಾಗಿ ಆಚಾರ್ಯ ಹರಿಹರ ಕ್ಯಾನ್ಸರ್‌ ಸಂಸ್ಥೆಗೆ ಸುರೇಂದ್ರ ಅವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರ ಪತ್ನಿಯೂ ಅವರ ಜೊತೆಗಿದ್ದರು.

ಜೂನ್‌ 29ರಂದು ಇಬ್ಬರಲ್ಲೂ ಕರೋನಾ ಸೋಂಕು ಪತ್ತೆಯಾಗಿತ್ತು. ಹಾಗಾಗಿ ಅವರನ್ನು ಕಟಕ್‌ನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಹತ್ತು ದಿನಗಳ ಕಾಲ ಕರೋನಾ ಚಿಕಿತ್ಸೆಯನ್ನು ಪಡೆದ ದಂಪತಿಗಳು ಈಗ ರೋಗದಿಂದ ಸಂಪೂರ್ಣ ಗುಣಮುಖರಾಗಿದ್ದಾರೆಂದು ವರದಿ ಹೇಳಿದೆ.

ಕೋವಿಡ್‌ ನೆಗೆಟಿವ್‌ ವರದಿ ಬಂದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಗಾಡ ಗ್ರಾಮ ಪಂಚಾಯಿತಿಯಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ವಾಸವಿರಲು ಸೂಚಿಸಲಾಗಿತ್ತು. ಆದರೆ, ಜುಲೈ 17ರವರೆಗೆ ಅವರಲ್ಲಿ ಕರೋನಾ ಸೋಂಕಿನ ರೋಗ ಲಕ್ಷಣಗಳು ಕಾಣಿಸಿಲ್ಲವಾದ್ದರಿಂದ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಕೆಂದ್ರಪಾರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಎಂ ಹೆಚ್‌ ಬೇಗ್‌ ಹೇಳಿದ್ದಾರೆ.

“ಸುರೇಂದ್ರ ಪಾಟಿ ಹಾಗೂ ಅವರ ಹೆಂಡತಿಯ ಧೈರ್ಯ ಅವರನ್ನು ಕಾಪಾಡಿತು. ಅವರಲ್ಲಿದ್ದ ಆತ್ಮಸ್ಥೈರ್ಯದಿಂದ ಅವರು ಗುಣಮುಖರಾಗಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್‌ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದರೂ, ಅವರು ಕರೋನಾ ಮತ್ತು ಕ್ಯಾನ್ಸರ್‌ ಎರಡರೊಂದಿಗೂ ಹೋರಾಡಿ ಜಯಿಸಿದ್ದಾರೆ,” ಎಂದು ಹೇಳಿದ್ದಾರೆ.

ಈ ಶುಭ ಸುದ್ದಿಯನ್ನು ಕೇಂದ್ರಪಾರ ಜಿಲ್ಲೆಯ ಜಿಲ್ಲಾಧಿಕಾರಿಯವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು ದಂಪತಿಗಳಿಗೆ ಶುಭ ಕೋರಿದ್ದಾರೆ.

ಒಟ್ಟಿನಲ್ಲಿ, ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ ಕರೋನಾ ಸೋಂಕಿನ ಆರ್ಭಟದ ನಡುವೆ ಈ ಸುದ್ದಿ ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿದೆ. ಸೋಂಕಿಗೆ ಭಯ ಪಡದೇ, ಧೈರ್ಯದಿಂದ ಇದ್ದಲ್ಲಿ ಕರೋನಾವನ್ನು ಗೆಲ್ಲಲು ಸಾಧ್ಯ ಎಂದು ಈ ಘಟನೆ ತಿಳಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com