ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಯುವ ನಾಯಕ ಸಚಿನ್ ಪೈಲಟ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಯುವ ನಾಯಕ ಸಚಿನ್ ಪೈಲಟ್
ರಾಷ್ಟ್ರೀಯ

ರಾಜಸ್ಥಾನ ರಾಜಕೀಯ ರಗಳೆ: ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ

ಸಚಿನ್‌ ಪೈಲಟ್‌ ಅವರು ಕಾಂಗ್ರೆಸ್‌ ವಿರುದ್ದ ಬಂಡಾಯ ಎದ್ದಿದ್ದರಿಂದ ಅರಂಭವಾದ ರಾಜಸ್ಥಾನದ ರಾಜಕೀಯ ರಗಳೆ ಸದ್ಯಕ್ಕೆ ಮುಗಿಯುವ ಸೂಚನೆಗಳು ಕಾಣಿಸುತ್ತಿಲ್ಲ. ತಮ್ಮ ಮುಂದಿನ ನಡೆಯನ್ನು ಇನ್ನೂ ಸ್ಪಷ್ಟಪಡಿಸದ ಸಚಿನ್‌ ಅವರ ಕಡೆಗೆ ಎಲ್ಲರ ದೃಷ್ಟಿಯೂ ನೆಟ್ಟಿದ್ದು ರಾಜಸ್ಥಾನ ಸರ್ಕಾರದ ಅಳಿವು ಉಳಿವಿನ ವಿಚಾರವೂ ಇದರಲ್ಲಿ ಅಡಗಿದೆ.

ಪ್ರತಿಧ್ವನಿ ವರದಿ

ರಾಜಸ್ಥಾನದ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ಅಷ್ಟೇ ನಾಟಕೀಯವಾಗಿ ನಡೆಯುತ್ತಿವೆ. ಸಚಿನ್‌ ಪೈಲಟ್‌ ಹಾಗೂ ಅವರ 18 ಜನ ಬೆಂಬಲಿಗ ಶಾಸಕರು ತಮ್ಮನ್ನು ವಜಾಗೊಳಿಸಬಾರದೆಂದು ಕೋರ್ಟ್‌ ಮೊರೆ ಹೋಗಿದ್ದು, ತೀರ್ಪನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ನಡುವೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವಿನ ಕೆಸರೆರಚಾಟ ಮುಂದುವರಿದಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌, ಕೇಂದ್ರ ಸಚಿವ ಗಜೇಂದ್ರ ಶೇಖಾವತ್‌ ಅವರು ಸರ್ಕಾರ ಉರುಳಿಸುವ ಸಂಚು ಮಾಡಿದ್ದಾರೆ ಎಂಬುದನ್ನು ತನಿಖೆಯ ಮೂಲಕ ಖಚಿತಪಡಿಸಬೇಕಿದೆ. ಈ ವಿಚಾರದಲ್ಲಿ ನಿಷ್ಪಕ್ಷಪಾತವಾದ ತನಿಖೆ ಆಗಬೇಕೆಂದರೆ ಅವರು ತಮ್ಮ ಪದವಿಗೆ ರಾಜಿನಾಮೆ ನೀಡಬೇಕು, ಎಂದು ಹೇಳಿದ್ದಾರೆ.

ಈಗಾಗಲೇ ಸಾಕಷ್ಟು ಪ್ರಚಾರ ಪಡೆದಿರುವ ಆಡಿಯೋ ಕುರಿತು ಮಾತನಾಡಿರುವ ಮಾಕನ್‌ ಅವರು, ಕುದುರೆ ವ್ಯಾಪಾರ ನಡೆದಿದೆ ಎಂದು ಹೇಳಲಾಗುತ್ತಿರುವ ಆಡಿಯೋದಲ್ಲಿರುವ ಧ್ವನಿ ಶಾಸಕರಾದ ಭನ್ವರ್‌ಲಾಲ್‌ ಶರ್ಮಾ ಹಾಗೂ ವಿಶ್ವೇಂದ್ರ ಸಿಂಗ್‌ ಅವರದ್ದೇ ಎಂದು ತನಿಖೆಗೆ ಒಳಪಡಿಸಬೇಕು. ಹಾಗಾಗಿ ಅವರ ಧ್ವನಿ ಪರೀಕ್ಷೆಯನ್ನು ನಡೆಸಬೇಕು. ರಾಜಸ್ಥಾನ ಪೊಲೀಸ್‌ ಇಲಾಖೆಯ ಸ್ಪೆಷಲ್‌ ಆಪರೇಷನ್ಸ್‌ ಗ್ರೂಪ್‌ ಏಕೆ ಅವರ ಧ್ವನಿ ಪರೀಕ್ಷೆ ನಡೆಸುತ್ತಿಲ್ಲ? ಏಕೆ ಕೇಂದ್ರ ಸರ್ಕಾರ ಸಿಬಿಐ ತನಿಖೆಯ ಭಯವನ್ನು ಹುಟ್ಟಿಸಲು ಪ್ರಯತ್ನಿಸುತ್ತಿದೆ? ಕುದುರೆ ವ್ಯಾಪಾರದಲ್ಲಿ ಬಿಜೆಪಿಯ ಇತರ ನಾಯಕರ ಹೆಸರು ಬಹಿರಂಗವಾಗುವುದೆಂಬ ಭಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು ವಿಶ್ವಾಸ ಮತ ಸಾಬೀತು ಪಡಿಸುವ ಕುರಿತು ಮಾತನಾಡಿರುವ ಅವರು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಅಗತ್ಯ ಎಂದು ಅನಿಸಿದಾಗ ಅವರು ವಿಶ್ವಾಸಮತವನ್ನು ಸಾಬೀತು ಪಡಿಸಲಿದ್ದಾರೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್‌ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್‌ ಪೂನಿಯ, ನಿಯಮಾವಳಿಗಳನ್ನು ಪಾಲಿಸದೇ ರಾಜಸ್ಥಾನ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಹೇಗೆ ಫೋನ್‌ ಟ್ಯಾಪಿಂಗ್‌ ಮಾಡಿತು? ಎಂದು ಮರು ಪ್ರಶ್ನಿಸಿದ್ದಾರೆ.

“ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಉಪ ಮುಖ್ಯ ಕಾರ್ಯದರ್ಶಿ ಹೇಳಿರುವ ಪ್ರಕಾರ ಅವರಿಗೆ ಫೋನ್‌ ಟ್ಯಾಪಿಂಗ್‌ ಮಾಡಿರುವ ಕುರಿತು ಮಾಹಿತಿಯಿಲ್ಲ. ಈಗಿರುವ ಪ್ರಶ್ನೆಯೇನೆಂದರೆ, ಸರ್ಕಾರಕ್ಕೆ ಹಾಗೂ ಪೊಲೀಸ್‌ ಇಲಾಖೆಗೆ ಫೋನ್‌ ಟ್ಯಾಪಿಂಗ್‌ ಮಾಡಲು ಅನುಮತಿ ನೀಡಿದವರು ಯಾರು? ಕೇಂದ್ರ ಮಂತ್ರಿಯೋರ್ವರ ಹೆಸರನ್ನು ಈ ವಿವಾದದಲ್ಲಿ ಎಳೆದು ತರುತ್ತಿರುವುದರಿಂದ ಈ ವಿಚಾರದಲ್ಲಿ ಸಿಬಿಐ ವಿಚಾರಣೆ ನಡೆಯಬೇಕಿದೆ,” ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಸಚಿನ್‌ ಪೈಲಟ್‌ ಅವರು ಕಾಂಗ್ರೆಸ್‌ ವಿರುದ್ದ ಬಂಡಾಯ ಎದ್ದಿದ್ದರಿಂದ ಅರಂಭವಾದ ರಾಜಸ್ಥಾನದ ರಾಜಕೀಯ ರಗಳೆ ಸದ್ಯಕ್ಕೆ ಮುಗಿಯುವ ಸೂಚನೆಗಳು ಕಾಣಿಸುತ್ತಿಲ್ಲ. ತಮ್ಮ ಮುಂದಿನ ನಡೆಯನ್ನು ಇನ್ನೂ ಸ್ಪಷ್ಟಪಡಿಸದ ಸಚಿನ್‌ ಅವರ ಕಡೆಗೆ ಎಲ್ಲರ ದೃಷ್ಟಿಯೂ ನೆಟ್ಟಿದ್ದು ರಾಜಸ್ಥಾನ ಸರ್ಕಾರದ ಅಳಿವು ಉಳಿವಿನ ವಿಚಾರವೂ ಇದರಲ್ಲಿ ಅಡಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com