DCM, ಪಕ್ಷದ ಅಧ್ಯಕ್ಷ ಹುದ್ದೆಯಿಂದ ಸಚಿನ್ ಪೈಲಟ್ ರನ್ನು ವಜಾಗೊಳಿಸಿದ ಕಾಂಗ್ರೆಸ್
ರಾಷ್ಟ್ರೀಯ

DCM, ಪಕ್ಷದ ಅಧ್ಯಕ್ಷ ಹುದ್ದೆಯಿಂದ ಸಚಿನ್ ಪೈಲಟ್ ರನ್ನು ವಜಾಗೊಳಿಸಿದ ಕಾಂಗ್ರೆಸ್

ಗೆಹ್ಲೋಟ್‌ ನೇತೃತ್ವದ ಸರ್ಕಾರ ತನ್ನ ಸ್ಥಿರತೆಯನ್ನು ಸಾಬೀತುಪಡಿಸಿದಾಗಲೇ ಸಚಿನ್‌ರಿಗೆ ಆಘಾತವೆದುರಾಗಿತ್ತು, ತನ್ನ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷಗಿರಿ ಕೈಜಾರುವುದರೊಂದಿಗೆ ಆಘಾತದ ಮೇಲೆ ಆಘಾತ ಎದುರಾಗಿದೆ.

ಪ್ರತಿಧ್ವನಿ ವರದಿ

ರಾಜಸ್ಥಾನ ರಾಜ್ಯ ರಾಜಕೀಯದಲ್ಲಿ ಏರ್ಪಟ್ಟಿರುವ ಬಿಕ್ಕಟ್ಟು ದಿನಕ್ಕೊಂದು ನಾಟಕೀಯ ತಿರುವು ಪಡೆಯುತ್ತಿದೆ. ಇನ್ನೇನು ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕುಸಿದು ಬೀಳಲಿದೆ ಎನ್ನುವಾಗಲೇ ಸಚಿನ್‌ ಪೈಲಟ್‌ ಪಾಳಯದಲ್ಲಿದ್ದ 17 ಕಾಂಗ್ರೆಸ್‌ ಶಾಸಕರು ಸರ್ಕಾರದೊಂದಿಗೆ ಒಮ್ಮತ ತೋರಿಸಿದ್ದಾರೆ. ಇದರಿಂದ ವಿಚಲಿತರಾಗಿದ್ದ ಸಚಿನ್‌ ಕೆಲಕಾಲ ಮಾಧ್ಯಮಗಳಿಂದ ತಲೆತಪ್ಪಿಸಿಕೊಂಡಿದ್ದರು.

ರಾಜಕೀಯ ತಜ್ಞರು ಸಚಿನ್‌ ಪೈಲಟ್‌ರ ಹೊಸ ವರಸೆಯನ್ನು ಎದುರು ನೋಡುತ್ತಿರುವಂತೆಯೇ, ರಾಜಸ್ಥಾನ ರಾಜ್ಯ ಕಾಂಗ್ರೆಸ್‌ ತನ್ನ ದಾಳವನ್ನು ಹೂಡಿದೆ. ಸಚಿನ್‌ ಪೈಲಟ್‌ರ ಉಪಮುಖ್ಯ ಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಪಕ್ಷ, ರಾಜ್ಯದಲ್ಲಿ ಭಾರೀ ವರ್ಚಸ್ಸಿದ್ದ ಕಾಂಗ್ರೆಸ್‌ ಯುವ ನಾಯಕನ ಅಧ್ಯಕ್ಷ ಸ್ಥಾನವನ್ನೂ ಕಿತ್ತುಕೊಂಡಿದೆ.

ಗೆಹ್ಲೋಟ್‌ ನೇತೃತ್ವದ ಸರ್ಕಾರ ಸ್ಥಿರವಾಗಿದೆಯೆಂದು ಸಾಬೀತುಪಡಿಸಿದಾಗಲೇ ಸಚಿನ್‌ರಿಗೆ ಆಘಾತವೆದುರಾಗಿತ್ತು, ತನ್ನ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷಗಿರಿ ಕೈಜಾರುವುದರೊಂದಿಗೆ ಆಘಾತದ ಮೇಲೆ ಆಘಾತ ಎದುರಾಗಿದೆ. ಇದರಿಂದ ಈಗಾಗಲೇ ರಾಜಸ್ಥಾನದಲ್ಲಿ ತೃತೀಯ ರಂಗ ಕಟ್ಟಬೇಕೆಂದು ಆಲೋಚನೆಯಲ್ಲಿರುವ ಸಚಿನ್‌ ತನ್ನ ಆಲೋಚನೆಯೊಂದಿಗೆ ಮುನ್ನುಗ್ಗಲಿದ್ದಾರೆ ಎಂಬ ವಾದಕ್ಕೆ ಇನ್ನಷ್ಟು ಪುಷ್ಟಿ ದೊರೆತಿದೆ.

ಸಚಿನ್‌ ಪೈಲಟ್‌ ಹಾಗೂ ಅವರ ಬಣದ ಇಬ್ಬರು ಮಂತ್ರಿಗಳನ್ನು ಗೆಹ್ಲೋಟ್‌ ಕ್ಯಾಬಿನೆಟ್‌ನಿಂದ ವಜಾಗೊಳಿಸಿರುವುದಾಗಿ ಹೇಳಿರುವ ಕಾಂಗ್ರೆಸ್‌ ಹಿರಿಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲ ಭಾರವಾದ ಹೃದಯದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸುರ್ಜೆವಾಲ, ಸಚಿನ್‌ ಪೈಲಟ್‌ ಹಾಗೂ ಅವರ ಸಂಗಡಿಗರು, ಬಿಜೆಪಿಯೊಂದಿಗೆ ಸೇರಿ ರಾಜಸ್ಥಾನದ ಎಂಟು ಕೋಟಿ ಜನತೆ ಆರಿಸಿರುವ ಸರ್ಕಾರವನ್ನು ತೂಗುಗತ್ತಿಯಲ್ಲಿ ಹಾಕಲು ಹೊರಟಿರುವುದು ವಿಷಾದಣೀಯ. ಕಾಂಗ್ರೆಸ್‌ ರಾಜಸ್ಥಾನ ಪ್ರಾದೇಶಿಕ ಅಧ್ಯಕ್ಷ ಸ್ಥಾನದಿಂದಲೂ ಅವರನ್ನು ವಜಾಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ತನ್ನ ಸಚಿವ ಸಂಪುಟದಿಂದ ಬಂಡಾಯ ನಾಯಕರನ್ನು ಅಧಿಕೃತವಾಗಿ ವಜಾಗೊಳಿಸಲು ರಾಜಭವನಕ್ಕೆ ತೆರಳಿ ರಾಜ್ಯಪಾಲರಲ್ಲಿ ಔಪಚಾರಿಕ ಮನವಿ ಸಲ್ಲಿಸಿದ್ದಾರೆ. ಇಂದು ಸತತ ಎರಡನೇ ದಿನದ ಸಭೆ ಸೇರಿದ ಕಾಂಗ್ರೆಸ್ ಶಾಸಕಾಂಗ ಪಕ್ಷವು ಬಂಡಾಯ ನಾಯಕರ ವಿರುದ್ಧ ಬಲವಾದ ಸಂದೇಶವನ್ನು ಕಳುಹಿಸಲು ಮತ್ತು ಭವಿಷ್ಯದ ಯಾವುದೇ ತೊಂದರೆಗಳನ್ನು ತಡೆಯಲು ಕ್ರಮಕೈಗೊಳ್ಳಬೇಕೆಂದು ಈ ಕಟ್ಟುನಿಟ್ಟಿನ ನಿರ್ಣಯವನ್ನು ಅಂಗೀಕರಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com