ರಾಜಕಾರಣಿಗಳನ್ನು ರಕ್ಷಿಸಲು ನಡೆಯಿತೆ ನಕಲಿ ಎನ್‌ಕೌಂಟರ್? ನೆಟ್ಟಿಗರ ಪ್ರಶ್ನೆ
ರಾಷ್ಟ್ರೀಯ

ರಾಜಕಾರಣಿಗಳನ್ನು ರಕ್ಷಿಸಲು ನಡೆಯಿತೆ ನಕಲಿ ಎನ್‌ಕೌಂಟರ್? ನೆಟ್ಟಿಗರ ಪ್ರಶ್ನೆ

ಇಷ್ಟೊಂದು ಭದ್ರತೆಯ ನಡುವೆಯೂ ವಿಕಾಸ್‌ ದುಬೇ ತಪ್ಪಿಸಲು ಹೇಗೆ ಪ್ರಯತ್ನ ಪಟ್ಟರು? ʼಕಾರ್‌ ಪಲ್ಟಿಯಾಗದಿದ್ದರೆ ಸರ್ಕಾರ ಪಲ್ಟಿಯಾಗುತ್ತಿತ್ತೆಂದುʼ ಜನರು ಹೇಳುವುದು ಸರಿಯಾಗಿದೆ. ಮಾಧ್ಯಮಗಳು ತೋರಿಸುತ್ತಿರುವುದರಲ್ಲಿ ಪಲ್ಟಿಯಾಗಿರುವ ಕಾರಿನಲ್ಲಿ ವಿಕಾಸ್‌ ದೂಬೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಪ್ರತಿಧ್ವನಿ ವರದಿ

ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಕಾನ್ಪುರ ಪೋಲಿಸ್‌ ಹತ್ಯೆ ಪ್ರಕರಣ ಹಲವು ತಿರುವುಗಳನ್ನು, ಅನುಮಾನಗಳನ್ನು ಪಡೆಯುತ್ತಿದೆ. ಜುಲೈ 09 ರಂದು ಮಧ್ಯ ಪ್ರದೇಶ ಫೊಲಿಸರಿಂದ ಬಂಧನಕ್ಕೊಳಗಾದ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌, 8 ಪೋಲಿಸರ ಹತ್ಯೆಯ ರುವಾರಿ ವಿಕಾಸ್‌ ಧುಬೆಯನ್ನು, ಮಧ್ಯ ಪ್ರದೇಶ ಪೋಲಿಸರು ಉತ್ತರ ಪ್ರದೇಶದ ಪೋಲಿಸರಿಗೆ ಹಸ್ತಾಂತರಿಸಿದ್ದರು.

ಪೋಲಿಸರು ಹೇಳಿರುವ ಪ್ರಕಾರ, ಕಾನ್ಪುರಕ್ಕೆ ಕರೆತರುವ ದಾರಿ ಮಧ್ಯೆ ಪೋಲಿಸರ ವಾಹನ ಅಪಘಾತಕ್ಕೆ ಈಡಾಗಿದ್ದು, ಅಲ್ಲಿಂದ ವಿಕಾಸ್‌ ಪೋಲಿಸರ ಪಿಸ್ತುಲ್‌ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮ ರಕ್ಷಣೆಗಾಗಿ ಪೋಲಿಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ವಿಕಾಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸಿನಿಮೀಯ ರೀತಿಯ ಈ ಎನ್‌ಕೌಂಟರ್‌ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸದ್ಯದ ಚರ್ಚಾವಸ್ತುವಾಗಿದೆ. 2013 ರಲ್ಲಿ ರಿಲೀಸ್‌ ಆಗಿರುವ ಜಾಲಿ ಎಲ್‌ಎಲ್‌ಬಿ 2 ಸಿನೆಮಾದ ಎನ್‌ಕೌಂಟರ್‌ ದೃಶ್ಯವನ್ನೇ ಇಲ್ಲೂ ನಕಲಿ ಮಾಡಲಾಗಿದೆ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ವಿಕಾಸ್‌ ದುಬೆಯನ್ನು ಕೊಂಡೊಯ್ಯುತ್ತಿದ್ದ ಕಾರ್‌ ಪಲ್ಟಿಯಾಗದಿದ್ದರೆ ಯೋಗಿ ಸರ್ಕಾರ ಪಲ್ಟಿಯಾಗುತ್ತಿತ್ತು ಎಂದೂ ಕಿಚಾಯಿಸಿದ್ದಾರೆ.

ರಾಜ್ಯವು ಒಬ್ಬರನ್ನು ಕೊಲ್ಲುವುದನ್ನು ನೀವು ಬೆಂಬಲಿಸುತ್ತೀರೆಂದರೆ, ಒಂದು ದಿನ ರಾಜ್ಯವು ನಿಮ್ಮನ್ನೂ ಕೊಲ್ಲುತ್ತದೆ ಎಂದು ವಿವೇಕ್‌ ನಂಬಿಯಾರ್‌ ಎಂಬವರು ವಿಕಾಸ್‌ ದುಬೆಯ ಎನ್‌ಕೌಂಟರ್‌ ಕುರಿತು ಟ್ವೀಟ್‌ ಮಾಡಿದ್ದಾರೆ.

ಸರಳ್‌ ಪಟೇಲ್‌ ಎಂಬವರು ಟ್ವೀಟ್‌ ಮಾಡಿ, “ಸೇಡು ನ್ಯಾಯವಾಗುವುದಿಲ್ಲ, 8 ಹುತಾತ್ಮರಿಗೆ ಕೊಡುವ ನಿಜವಾದ ನ್ಯಾಯವೆಂದರೆ ಯಾರು ಸರ್ಕಾರದ ವತಿಯಿಂದ ವಿಕಾಸ್‌ ದುಬೆಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಕಂಡು ಹಿಡಿಯುವುದು ಎಂದಿದ್ದಾರೆ.

ನ್ಯಾಯ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗುತ್ತಿದೆಯೆಂದರೆ ನ್ಯಾಯ ನಿರಾಕರಿಸಲಾಗಿದೆಯೆಂದು, ನ್ಯಾಯ ನೀಡುವಲ್ಲಿ ಅವಸರ ಮಾಡುವುದೆಂದರೆ ನ್ಯಾಯವನ್ನು ಸಮಾಧಿ ಮಾಡಲಾಗಿದೆಯೆಂದು ಅರ್ಥ, ಇದು ಅಂತ್ಯವಲ್ಲ, ಇಲ್ಲೇನೋ ಗೊಂದಲಗಳು ಇದೆಯೆಂದು ಅಂಕಿತ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

ಪೋಲಿಸರು ವಿಕಾಸ್‌ ದುಬೆಗೆ ಗುಂಡು ಹಾರಿಸುವ ಮೊದಲು ಆ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅವರ ವಾಹನಗಳ ಹಿಂಬಾಲಿಸುತ್ತಿದ್ದ ಪತ್ರಕರ್ತರನ್ನೂ ತಡೆಯಲಾಗಿತ್ತು ಎಂದು ಜಾಹ್ನವಿ ಸೇನ್‌ ಎಂಬವರು ಹೇಳಿದ್ದಾರೆ.

ಇಷ್ಟೊಂದು ಭದ್ರತೆಯ ನಡುವೆಯೂ ಅವರು(ವಿಕಾಸ್‌ ದುಬೇ) ತಪ್ಪಿಸಲು ಹೇಗೆ ಪ್ರಯತ್ನ ಪಟ್ಟರು? ʼಕಾರ್‌ ಪಲ್ಟಿಯಾಗದಿದ್ದರೆ ಸರ್ಕಾರ ಪಲ್ಟಿಯಾಗುತ್ತಿತ್ತೆಂದುʼ ಜನರು ಹೇಳುವುದು ಸರಿಯಾಗಿದೆ. ಮಾಧ್ಯಮಗಳು ತೋರಿಸುತ್ತಿರುವುದರಲ್ಲಿ ಪಲ್ಟಿಯಾಗಿರುವ ಕಾರಿನಲ್ಲಿ ವಿಕಾಸ್‌ ದೂಬೆ ಇರಲಿಲ್ಲ. ಎಂದು ಆಕಾಂಕ್ಷ ಜೈನ್‌ ಎಂಬವರು ಕಮೆಂಟ್‌ ಹಾಕಿದ್ದಾರೆ.

ಅಪ್ನಾ ಉಸೂಲ್‌ ಎಂಬ ಟ್ವಿಟರ್‌ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟ್‌ ಇದು. “ನಾಟಕಗಳಿಗೆ ಬಿಜೆಪಿ ಸರ್ಕಾರ ಹೆಸರುವಾಸಿ. ಗ್ಯಾಂಗ್‌ಸ್ಟರ್‌ ಸಾವಿನಿಂದ, ರಹಸ್ಯಗಳು ಭದ್ರವಾದವು, ಗಾಡ್‌ಫಾದರ್‌ಗಳು ಬಚಾವಾದರು, ಇದು ಚುನಾವಣೆಯಲ್ಲಿ ಗೆಲ್ಲುವ ದಾರಿ. ಗೂಂಡಾ ಸರ್ಕಾರ ನಿರ್ಮೂಲನೆಯಾಗಬೇಕು”

ಒಟ್ಟಿನಲ್ಲಿ ಯೋಗಿ ಆದಿತ್ಯನಾಥ್‌ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಉತ್ತರ ಪ್ರದೇಶದಲ್ಲಿ ಹಲವು ನಕಲಿ ಎನ್‌ಕೌಂಟರ್‌ ನಡೆದಿದೆ. ಆದರೆ ವಿಕಾಸ್‌ ದೂಬೆಯ ಎನ್‌ಕೌಂಟರ್‌ ಸರ್ಕಾರ ಯಾರನ್ನೋ ರಕ್ಷಿಸಲು ಅಥವಾ ಸ್ವಯಂ ಮುಜುಗರದಿಂದ ತಪ್ಪಿಸಿಕೊಳ್ಳಲು ಮಾಡಿರುವ ಪ್ರಯತ್ನವೇ ಎಂದು ಸಂದೇಹಗಳು ಎದ್ದಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com