ವಿಕಾಸ್ ದುಬೆ ಎನ್‌ಕೌಂಟರ್: ಚರ್ಚೆಗೆ ಗ್ರಾಸವಾದ ಯೋಗಿ ರಾಮರಾಜ್ಯದ ವರಸೆ
ರಾಷ್ಟ್ರೀಯ

ವಿಕಾಸ್ ದುಬೆ ಎನ್‌ಕೌಂಟರ್: ಚರ್ಚೆಗೆ ಗ್ರಾಸವಾದ ಯೋಗಿ ರಾಮರಾಜ್ಯದ ವರಸೆ

ಆಡಳಿತ ಪಕ್ಷದ ಪ್ರಭಾವಿ ನಾಯಕರು ಮತ್ತು ಉತ್ತರಪ್ರದೇಶ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿಕಾಸ್ ದುಬೆಯೊಂದಿಗೆ ಹೊಂದಿದ್ದ ನಂಟಿನ ಹಿನ್ನೆಲೆಯಲ್ಲಿ ಹಲವು ಸತ್ಯಗಳನ್ನು ಮುಚ್ಚಿಡಲು ಮತ್ತು ಸ್ವರಕ್ಷಣೆಯ ತಂತ್ರವಾಗಿ ಪೊಲೀಸರು ವಿಕಾಸ್ ದುಬೆಯನ್ನು ಎನ್‌ಕೌಂಟರ್ ಮಾಡಿ ಮುಗಿಸಿಹಾಕಿದ್ದಾರೆ. ಆತನ ಹತ್ಯೆಯೊಂದಿಗೆ ಹಲವು ಸತ್ಯಗಳನ್ನೂ ಮುಚ್ಚಿಹಾಕುವುದು ಈ ಎನ್‌ಕೌಂಟರ್ ಉದ್ದೇಶವಾಗಿತ್ತು ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಉತ್ತರಪ್ರದೇಶ ಎಂಬ ರಾಮನ ಭಂಟನ ಆಡಳಿತದ ರಾಮರಾಜ್ಯದಲ್ಲಿ ಕಳೆದ ಏಳು ದಿನಗಳ ಹಿಂದೆ ಸಂಭವಿಸಿದ್ದ ಎಂಟು ಮಂದಿ ಪೊಲೀಸರ ಹತ್ಯೆ ಘಟನೆಗೆ ಇಂದು(ಜು.10) ಅರಣ್ಯ ನ್ಯಾಯ ಸಿಕ್ಕಿದೆ. ಪೊಲೀಸರ ಹತ್ಯೆ ರೂವಾರಿ ಮತ್ತು ಕುಖ್ಯಾತ ಪಾತಕಿ ವಿಕಾಸ್ ದುಬೆಯನ್ನು ಎನ್‌ಕೌಂಟರ್ ಮಾಡುವ ಮೂಲಕ ಉತ್ತರಪ್ರದೇಶ ಪೊಲೀಸರು ರಕ್ತಸಿಕ್ತ ಅಧ್ಯಾಯವೊಂದಕ್ಕೆ ‘ತಾರ್ಕಿಕ’ ಅಂತ್ಯ ಕಾಣಿಸಿದ್ದಾರೆ.

ಕಾನ್ಪುರ ಸಮೀಪದ ಬಿಕ್ರು ಎಂಬ ಹಳ್ಳಿಯಲ್ಲಿ ಕಳೆದ ವಾರ ನಡೆದಿದ್ದ ಎನ್‌ಕೌಂಟರ್ ವೇಳೆ ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಈ ವಿಕಾಸ್ ದುಬೆ ಎಂಬುದು ಆತನ ಈ ಎನ್‌ಕೌಂಟರ್ ಗೆ ಪೊಲೀಸ್ ಭಾಷೆಯಲ್ಲಿ ಸಿಕ್ಕ ತಾರ್ಕಿಕ ಅಂತ್ಯ ಇಂದಿನ ಆತನ ಎನ್‌ಕೌಂಟರ್ ಎನ್ನಲಾಗುತ್ತಿದೆ. ಬಿಕ್ರು ಘಟನೆಯ ಬಳಿಕ ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಟ್ಟು ಐದು ಎನ್‌ಕೌಂಟರ್ ಮಾಡಿದ್ದು, ವಿಕಾಸ್ ದುಬೆಯ ಐವರು ಸಹಚರರನ್ನು ಮುಗಿಸಿದ್ದಾರೆ. ಇನ್ನೂ ಹಲವರನ್ನು ಬಂಧಿಸಿದ್ದಾರೆ.

90ರ ದಶಕದಲ್ಲಿ ಸಾಮಾನ್ಯ ಬೀದಿ ರೌಡಿಯಾಗಿ ಪಾತಕ ಕೃತ್ಯಗಳನ್ನು ಆರಂಭಿಸಿದ ದುಬೆ, 2001ರಲ್ಲಿ, ಸುಮಾರು 20 ವರ್ಷಗಳ ಹಿಂದೆ ಕಾನ್ಪರದ ಶಿವ್ಲಿಯಲ್ಲಿ ಅಂದಿನ ಬಿಜೆಪಿ ರಾಜ್ಯ ಸರ್ಕಾರದ ಸಚಿವನಾಗಿದ್ದ ಸಂತೋಷ್ ಶುಕ್ಲಾ ಎಂಬುವರನ್ನು ಅಟ್ಟಾಡಿಸಿ, ಪೊಲೀಸ್ ಠಾಣೆಯಲ್ಲೇ ಗುಂಡಿಕ್ಕಿ ಹತ್ಯೆ ಗೈಯುವ ಮೂಲಕ ಉತ್ತರಪ್ರದೇಶದ ರಾಜಕಾರಣ ಮತ್ತು ಪಾತಕ ಲೋಕದ ಅಪವಿತ್ರ ಮೈತ್ರಿಯ ಮುಖವಾಗಿ ಹೊರಹೊಮ್ಮಿದ್ದ. ಅಂದಿನಿಂದ ಈವರೆಗೆ ಕುಖ್ಯಾತ ಗ್ಯಾಂಗಸ್ಟರ್ ಆಗಿ ಬೆಳೆದಿದ್ದ ಆತನ ವಿರುದ್ಧ ಐದು ಕೊಲೆ ಮತ್ತು ಎಂಟು ಕೊಲೆ ಯತ್ನದ ಪ್ರಕರಣಗಳು ಸೇರಿ ಒಟ್ಟು 61 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಉತ್ತರಪ್ರದೇಶದ ಪ್ರಭಾವಿ ರಾಜಕಾರಣಿಗಳು ಮತ್ತು ಕೆಲವು ಪೊಲೀಸ್ ಅಧಿಕಾರಿಗಳೊಂದಿಗೂ ನಂಟು ಹೊಂದಿದ್ದ ಆತನ ದುಃಸ್ಸಾಹಸಗಳ ಹಿಂದೆ ಅದೇ ಪ್ರಭಾವಿಗಳ ಆಶೀರ್ವಾದದ ಬಲವಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ರಾಜಕೀಯವಾಗಿ ಕೂಡ ಸಕ್ರಿಯನಾಗಿದ್ದ ಈ ಗ್ಯಾಂಗಸ್ಟರ್ ಮತ್ತು ಆತನ ಕುಟುಂಬ ಕಳೆದ ಎರಡು ದಶಕದಿಂದ ಗ್ರಾಮ ಪಂಚಾಯ್ತಿಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ನಿರಂತರವಾಗಿ ಒಂದಿಲ್ಲೊಂದು ರಾಜಕೀಯ ಅಧಿಕಾರ ಹೊಂದಿತ್ತು. ಎಂಟು ಮಂದಿ ಪೊಲೀಸರ ಹತ್ಯೆ ನಡೆದ ಅದೇ ಬಿಕ್ರು ಗ್ರಾಮ ಈತನ ಸ್ವಂತ ಊರು ಮತ್ತು ಆ ಗ್ರಾಮ ಪಂಚಾಯ್ತಿಯಲ್ಲಿ ಸ್ವತಃ ಈತ ಪ್ರಧಾನನಾಗಿದ್ದ ಮತ್ತು ಆತನ ಸಹೋದರ, ಸಹೋದರನ ಪತ್ನಿ ಕೂಡ ಪಂಚಾಯ್ತಿ ಅಧಿಕಾರ ಹಿಡಿದಿದ್ದರು. 2002ರಿಂದ ಜೈಲಿನಲ್ಲಿದ್ದುಕೊಂಡೇ ಅಪರಾಧ ಜಗತ್ತು ಮತ್ತು ರಾಜಕಾರಣವನ್ನು ನಿಭಾಯಿಸುತ್ತಿದ್ದ ಆತ, ‘ದಬಾಂಗ್ ಬಾಹುಬಲಿ’ ಎಂದೇ ಕುಖ್ಯಾತಿ ಗಳಿಸಿದ್ದ ಮತ್ತು ಭೂ ಕಬಳಿಕೆ, ಬೆದರಿಕೆ, ಕೊಲೆಗಳ ಮೂಲಕ ಕಾನ್ಪುರ ವ್ಯಾಪ್ತಿಯನ್ನೂ ಮೀರಿ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದ್ದ.

2001ರ ಸಂತೋಷ್ ಶುಕ್ಲಾ ಕೊಲೆ ಪ್ರಕರಣವೂ ಸೇರಿ ಹಲವು ಪ್ರಕರಣಗಳಲ್ಲಿ ಆತ ಜೈಲು ಸೇರಿದರೂ ಅಷ್ಟೇ ಬೇಗ ಆರೋಪಮುಕ್ತನಾಗಿ ಹೊರಬರಲು ಆತನ ಸಹಚರರ ಗ್ಯಾಂಗಿನ ಬೆದರಿಕೆ ತಂತ್ರಗಳು ಮತ್ತು ಅಟ್ಟಹಾಸ ಎಷ್ಟು ಕಾರಣವೋ ಬಿಜೆಪಿ, ಬಿಎಸ್ಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಆಶೀರ್ವಾದವೂ ಅಷ್ಟೇ ಕಾರಣ ಎಂಬುದನ್ನು ಹಲವು ಮಾಧ್ಯಮ ವರದಿಗಳು ಹೇಳುತ್ತವೆ. ಪೊಲೀಸರ ಬೆಂಬಲ ಕೂಡ ಕಡಿಮೆ ಏನಿರಲಿಲ್ಲ. ಸಾರ್ವಜನಿಕವಾಗಿ ಆತನ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದ ಪೊಲೀಸ್ ಪೇದೆಗಳಿಂದ ಹಿಡಿದು, ಆತನನ್ನು ರಾಜ್ಯದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ಸ್ ಪಟ್ಟಿಯಿಂದ ಹೊರಗಿಟ್ಟು ಪರೋಕ್ಷವಾಗಿ ಆಶೀರ್ವದಿಸುತ್ತಿದ್ದ ಉನ್ನತ ಮಟ್ಟದ ಅಧಿಕಾರಿಗಳ ವರೆಗೆ ಪೊಲೀಸ್ ಇಲಾಖೆಯ ಒಳಗೇ ಆತನ ಪೊರೆವ ಕೈಗಳಿದ್ದವು. ಅದಕ್ಕೆ ಮುಖ್ಯವಾಗಿ ಕಾನ್ಪುರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿಯ ಕೆಲವು ಪ್ರಭಾವಿ ನಾಯಕರು ಸೇರಿದಂತೆ ಹಲವು ರಾಜಕಾರಣಿಗಳು ಆತನ ಬೆನ್ನಿಗೆ ನಿಂತದ್ದೂ ಕಾರಣ.

ವಿಕಾಸ್ ದುಬೆಗೆ ಇದ್ದ ವ್ಯವಸ್ಥೆಯ ಎರಡು ಪ್ರಭಾವಿ ವಲಯಗಳ ಬೆಂಬಲವೇ ಈಗ ಆತನ ಎನ್ ಕೌಂಟರನ್ನು ವ್ಯಾಪಕ ಚರ್ಚೆಯ ವಿದ್ಯಮಾನವಾಗಿ ಮಾಡಿದೆ. ಅದರಲ್ಲೂ ಮುಖ್ಯವಾಗಿ ಯೋಗಿ ಆದಿತ್ಯನಾಥ ಒಬ್ಬ ಮುಖ್ಯಮಂತ್ರಿಯಾಗಿ ಅಪರಾಧಿಗಳಿಗೆ ರಾಜ್ಯದಲ್ಲಿ ಇನ್ನು ಉಳಿಗಾಲವಿಲ್ಲ ಎಂದು ಹೇಳುತ್ತಾ, ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿರುವುದಾಗಿ ಹೇಳಿದ ಬಳಿಕ ಉತ್ತರಪ್ರದೇಶ ದೇಶದ ಎನ್‌ಕೌಂಟರ್ ರಾಜ್ಯವಾಗಿ ಕುಖ್ಯಾತಿ ಗಳಿಸಿದೆ. “ಈಗ ಅವರು ಅಪರಾಧ ಕೃತ್ಯದಲ್ಲಿ ಭಾಗಿಯಾದರೆ, ಅವರನ್ನು ಮುಗಿಸಲಾಗುವುದು” ಎಂದು 2017ರಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಹೇಳಿದ್ದ ಯೋಗಿ, ಎನ್‌ಕೌಂಟರ್ ನಡೆಸುವ ಪೊಲೀಸರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಅದಾಗಿ ಆರೇ ತಿಂಗಳಲ್ಲಿ ಯೋಗಿ ಸರ್ಕಾರದ ಅತಿ ದೊಡ್ಡ ಸಾಧನೆಯಾಗಿ ಎನ್‌ಕೌಂಟರ್ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದ ಉತ್ತರಪ್ರದೇಶ ಪೊಲೀಸರು, ಆರು ತಿಂಗಳಲ್ಲಿ ಸುಮಾರು 420 ಎನ್‌ಕೌಂಟರ್ ಮಾಡಿದ್ದು, 15 ಮಂದಿಯನ್ನು ಹತ್ಯೆ ಮಾಡಿರುವುದಾಗಿ ಹೆಮ್ಮೆಯಿಂದ ಘೋಷಿಸಿದ್ದರು. ಬಳಿಕ 2019ರಲ್ಲಿ 16 ತಿಂಗಳ ಸರ್ಕಾರದ ಸಾಧನೆಯಾಗಿ ರಾಜ್ಯದಲ್ಲಿ ಆದಿತ್ಯನಾಥರ ಅವಧಿಯಲ್ಲಿ ನಡೆದಿರುವ 3200 ಎನ್‌ಕೌಂಟರ್ ಮತ್ತು 79 ಹತ್ಯೆಗಳಿಗೆ ವ್ಯಾಪಕ ಪ್ರಚಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳಿಸಿತ್ತು! ಬಳಿಕ 2019ರ ಡಿಸೆಂಬರಿನಲ್ಲಿ ಉತ್ತರಪ್ರದೇಶ ಪೊಲೀಸರು, ಕಳೆದ ಎರಡು ವರ್ಷದ ಅವಧಿಯಲ್ಲಿ 5,178 ಎನ್‌ಕೌಂಟರ್ ನಡೆದಿದ್ದು, ಆ ಪೈಕಿ 103 ಅಪರಾಧಿಗಳನ್ನು ಹತ್ಯೆ ಮಾಡಲಾಗಿದೆ ಮತ್ತು 1,859 ಅಪರಾಧಿಗಳು ಗಾಯಗೊಂಡಿದ್ದಾರೆ ಎಂದು ತಮ್ಮ ಅಧಿಕೃತ ಟ್ವೀಟ್ ಮಾಡಿದ್ದರು.

ಯೋಗಿ ಸರ್ಕಾರ ಮತ್ತು ಉತ್ತರಪ್ರದೇಶ ಪೊಲೀಸರ ಈ ಕುಖ್ಯಾತಿಯ ಕಾರಣಕ್ಕಾಗಿಯೇ ಈಗ ವಿಕಾಸ್ ದುಬೆಯಂತಹ ಪಾತಕಿಯ ಎನ್‌ಕೌಂಟರ್ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಜೊತೆಗೆ ಯೋಗಿ ಸರ್ಕಾರದ ಅಪರಾಧ ಬಗ್ಗುಬಡಿಯುವ ‘ದಿಟ್ಟ ಕ್ರಮ’ ಅಪರಾಧಿಯ ಹಿನ್ನೆಲೆ, ಆತನ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಗಳ ಮೇಲೆ ಅವಲಂಬಿತವಾಗಿದೆ ಎಂಬ ಚರ್ಚೆ ಕೂಡ ಆರಂಭವಾಗಿದೆ. ಏಕೆಂದರೆ, ಇದೇ ಯೋಗಿ ಆಡಳಿತದಲ್ಲೇ ಅತ್ಯಾಚಾರ ಆರೋಪ ಎದುರಿಸಿದ ಶಾಸಕರಿಗೆ(ಕುಲದೀಪ ಶೆಂಗರ್ ಮತ್ತು ಚಿನ್ಮಯಾನಂದ) ರಕ್ಷಣೆ ನೀಡಿ, ಅವರ ವಿರುದ್ಧ ದೂರು ಕೊಟ್ಟವರ ಮೇಲೆಯೇ ಪೊಲೀಸ್ ದೌರ್ಜನ್ಯ ನಡೆಸಿದ ನಿದರ್ಶನವಿದೆ. ಜೊತೆಗೆ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಸಾಮೂಹಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಧಾರ್ಮಿಕ ಮುಖಂಡರು, ಬಹುಸಂಖ್ಯಾತ ಸಮುದಾಯದ ನಾಯಕರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದ ನಿದರ್ಶನವಿವೆ. ಸ್ವತಃ ಪೊಲೀಸ್ ಅಧಿಕಾರಿ(ಸುಭೋದ್ ಸಿಂಗ್- ಬುಲಂದಶಹರ್)ಯನ್ನು ಹೊಡೆದು ಸಾಯಿಸಿದ ಭಜರಂಗದಳ ನಾಯಕರಿಗೆ ಕೂಡ ಸ್ವತಃ ಆಡಳಿತ ಪಕ್ಷದ ನಾಯಕರೇ ಹಾರ ಹಾಕಿ ಸನ್ಮಾನಿಸಿದ ಘಟನೆಗಳೂ ಇವೆ. ಇಂತಹ ತಾರತಮ್ಯದ, ಲೆಕ್ಕಾಚಾರದ ಅಪರಾಧ ನಿಗ್ರಹ ವರಸೆ ಕೂಡ ವಿಕಾಸ್ ದುಬೆ ಪ್ರಕರಣಕ್ಕೆ ಹಲವು ಆಯಾಮಗಳನ್ನು ಜೋಡಿಸಿದೆ.

ಅಷ್ಟಕ್ಕೂ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಎನ್‌ಕೌಂಟರ್ ಮೂಲಕವೇ ಪರಿಹಾರ ಕಂಡುಕೊಳ್ಳುವುದೇ ಆದರೆ, ನ್ಯಾಯಾಲಯಗಳ ಅಗತ್ಯವೇನಿದೆ? ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಅನ್ವಯವಾಗುವುದಿಲ್ಲವೆ? ಎಂಬ ಪ್ರಶ್ನೆಗಳನ್ನೂ ಈ ಘಟನೆ ಹುಟ್ಟುಹಾಕಿದೆ. ಜೊತೆಗೆ ಬಹಳ ಮುಖ್ಯವಾಗಿ ಆಡಳಿತ ಪಕ್ಷದ ಪ್ರಭಾವಿ ನಾಯಕರು ಮತ್ತು ಉತ್ತರಪ್ರದೇಶ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿಕಾಸ್ ದುಬೆಯೊಂದಿಗೆ ಹೊಂದಿದ್ದ ನಂಟಿನ ಹಿನ್ನೆಲೆಯಲ್ಲಿ ಹಲವು ಸತ್ಯಗಳನ್ನು ಮುಚ್ಚಿಡಲು ಮತ್ತು ಸ್ವರಕ್ಷಣೆಯ ತಂತ್ರವಾಗಿ ಪೊಲೀಸರು ವಿಕಾಸ್ ದುಬೆಯನ್ನು ಎನ್‌ಕೌಂಟರ್ ಮಾಡಿ ಮುಗಿಸಿಹಾಕಿದ್ದಾರೆ. ಆತನ ಹತ್ಯೆಯೊಂದಿಗೆ ಹಲವು ಸತ್ಯಗಳನ್ನೂ ಮುಚ್ಚಿಹಾಕುವುದು ಈ ಎನ್‌ಕೌಂಟರ್ ಉದ್ದೇಶವಾಗಿತ್ತು ಎಂಬ ಮಾತುಗಳು ಕೂಡ ಕೇಳಿಬಂದಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com