ಪ್ರಧಾನಿ ಮೋದಿಯ ವಿಸ್ತರಣಾವಾದ ಮತ್ತು ಅಭಿವೃದ್ಧಿ ಪಥದ ವೈರುಧ್ಯಗಳು!
ರಾಷ್ಟ್ರೀಯ

ಪ್ರಧಾನಿ ಮೋದಿಯ ವಿಸ್ತರಣಾವಾದ ಮತ್ತು ಅಭಿವೃದ್ಧಿ ಪಥದ ವೈರುಧ್ಯಗಳು!

ಪ್ರಧಾನಿ ಮೋದಿ ಈಗ ಭಾರತ-ಚೀನಾ ಗಡಿಯಲ್ಲಿ ನಿಂತು, ಜಪಾನಿನಲ್ಲಿ ಸುಮಾರು 70 ತಿಂಗಳ ಹಿಂದೆ ಹೇಳಿದ ಮಾತುಗಳನ್ನು ಮರುಪ್ರಸ್ತಾಪಿಸಿದ್ದಾರೆ. ಈ ಅವಧಿಯಲ್ಲಿ ವಿಶ್ವದ ನದಿಗಳಲ್ಲಿ ಅದೆಷ್ಟೋ ಹೊಸನೀರು ಹರಿದು ಬಂದಿದೆ. ವಿಶ್ವದ ಹಲವು ದೇಶಗಳಲ್ಲಿ ಅದೆಷ್ಟೋ ಹೊಸ ಸರ್ಕಾರಗಳು ಬಂದಿವೆ.

ರೇಣುಕಾ ಪ್ರಸಾದ್ ಹಾಡ್ಯ

ತಮ್ಮ ನಿಗೂಢ ನಡೆಯ ಮೂಲಕವೇ ದೇಶದ ಜನರಿಗೆ ಅಚ್ಚರಿ ಮೂಡಿಸುವ ಪ್ರಧಾನಿ ನರೇಂದ್ರ ಮೋದಿ ಭಾರತ- ಚೀನಾ ಗಡಿ ಭಾಗಕ್ಕೆ ಭೇಟಿ ನೀಡಿ ಮತ್ತೆ ಅಚ್ಚರಿ ಮೂಡಿಸಿದ್ದಾರೆ. ಈ ದೇಶದ ಜನರು ನಿಜಕ್ಕೂ ಹೆಚ್ಚು ಅಚ್ಚರಿಗೊಂಡದ್ದು, ದೇಶದೊಳಗೆ ಯಾರೂ ನುಸುಳಿಲ್ಲ ಎಂದು ಜೂನ್ 20 ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದಾಗ. ನಮ್ಮ ಸೇನೆಯ 20 ಮಂದಿ ವೀರಯೋಧರು ಹುತಾತ್ಮರಾದ ಆಘಾತದಲ್ಲಿದ್ದ ದೇಶದ ಜನತೆಗೆ ಪ್ರಧಾನಿ ಮೋದಿಯ ಹೇಳಿಕೆಯು ಮತ್ತಷ್ಟು ಅಚ್ಚರಿಯ ಆಘಾತ ತಂದಿತ್ತು.

ಲಡಾಖ್ ಗೆ ತೆರಳಿದ ಪ್ರಧಾನಿ ಮೋದಿ ಚೀನಾಗೆ ಎಚ್ಚರಿಕೆಯನ್ನು ನೀಡುತ್ತಾ ಬುದ್ದಿಮಾತನ್ನೂ ಹೇಳಿದ್ದಾರೆ. ಅದು ಅತ್ತ ಎಚ್ಚರಿಕೆಯೂ ಅಲ್ಲದ ಇತ್ತ ಬುದ್ಧಿಮಾತೂ ಅಲ್ಲದಂತಿದೆ. ವಿಸ್ತರಣಾವಾದದ ಯುಗಾಂತ್ಯವಾಗಿದೆ, ಅಭಿವೃದ್ಧಿವಾದವೇ ನಮ್ಮ ಮುಂದಿನ ಭವಿಷ್ಯ ಎಂಬುದು ಪ್ರಧಾನಿ ಮೋದಿ ಮಾತಿನ ತಾತ್ಪರ್ಯ. ಮೋದಿ ಹಿಂದಿಯಲ್ಲಾಡಿದ ಮಾತುಗಳನ್ನು ಬಿಡಿಸಿ, ಭಾಗಿಸಿ ಭಾಷಾಂತರಿಸಿದ ಹಲವು ಅರ್ಥಗಳ ಒಟ್ಟೂ ತಾತ್ಪರ್ಯವಿದು.

ಇಲ್ಲಿ ಮೋದಿ ವಿಸ್ತರಣವಾದವನ್ನು ಪ್ರಸ್ತಾಪಿಸಿ ಚೀನಾದ ನೆರೆರಾಷ್ಟ್ರಗಳ ಗಡಿದಾಟುವ ತಂಟೆಕೋರ ಪ್ರವೃತ್ತಿಯನ್ನು ಖಂಡಿಸಿದ್ದಾರೆ. ಗಡಿದಾಟುವ ಪ್ರವೃತ್ತಿಯು 21ನೇ ಶತಮಾನಕ್ಕೆ ಪ್ರಸ್ತುತವಲ್ಲವೆಂದೂ ಅಭಿವೃದ್ಧಿವಾದ ಮಾತ್ರವೇ ಮುಂದಿನ ಭವಿಷ್ಯವೆಂದೂ ಹೇಳಿದ್ದಾರೆ. ಪ್ರಧಾನಿ ಮೋದಿಯ ಈ ಮಾತುಗಳನ್ನು ನಾವೆಲ್ಲೋ ಕೇಳಿದ್ದೇವೆ ಎಂದು ನಿಮಗೆ ಅನಿಸಿದ್ದರೆ- ನಿಮ್ಮ ಅಂದಾಜು ಸರಿ! ಮೋದಿ ಪ್ರಧಾನಿಯಾದ ನಾಲ್ಕೇ ತಿಂಗಳಲ್ಲಿ ಜಪಾನ್ ದೇಶಕ್ಕೆ ಭೇಟಿ ನೀಡಿದ್ದರು. ಆಗ ಭಾರತ- ಜಪಾನ್ ದೇಶಗಳ ಕೈಗಾರಿಕೋದ್ಯಮಿಗಳು ಮತ್ತು ರಾಜತಾಂತ್ರಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ “ಹದಿನೆಂಟನೇ ಶತಮಾನದಲ್ಲಿ ಏನಾಯಿತು ಎಂಬುದನ್ನು ನಮ್ಮ ಸುತ್ತಲೂ ನಾವೀಗ ನೋಡುತ್ತಿದ್ದೇವೆ... ವಿಸ್ತರಣಾವಾದ ನಿಚ್ಚಳವಾಗಿ ಗೋಚರಿಸುತ್ತಿದೆ. ಕೆಲ ದೇಶಗಳು ಅತಿಕ್ರಮಣಗೊಂಡಿವೆ, ಒಂದು ದೇಶ ಎಲ್ಲೋ ಸಮುದ್ರವನ್ನು ಪ್ರವೇಶಿಸುತ್ತದೆ, ಕೆಲವೊಮ್ಮೆ ಒಂದು ದೇಶದೊಳಗೆ ಹೋಗಿ ಒಂದು ಪ್ರದೇಶವನ್ನು ವಶಪಡಿಸಿಕೊಳ್ಳುತ್ತದೆ, ನಾವು ಅಂತಹ ವಿಸ್ತರಣವಾದ ಪ್ರವೃತ್ತಿಗಳಿಗೆ ಸಾಕ್ಷಿಯಾಗುತ್ತಿದ್ದೇವೆ….” ಎಂದಿದ್ದರು. ಮುಂದುವರೆದು “ಈ ವಿಸ್ತರಣವಾದವು 21 ನೇ ಶತಮಾನದಲ್ಲಿ ಪ್ರಸ್ತುತವಲ್ಲ. ಮನುಕುಲಕ್ಕೆ ಇದರಿಂದ ಉಪಯೋಗವಾಗಲಾರದು… ಅಭಿವೃದ್ಧಿ ಈಗಿನ ತುರ್ತು ಅಗತ್ಯವಾಗಿದೆ. ಒಂದುವೇಳೆ 21 ನೇ ಶತಮಾನದಲ್ಲಿ ಏಷ್ಯಾವು ಜಗತ್ತನ್ನು ಮುನ್ನಡೆಸಬೇಕಾದರೆ ಭಾರತ ಮತ್ತು ಜಪಾನ್ ಒಟ್ಟಾಗಿ ಅಭಿವೃದ್ಧಿ ಪಥದ ಘನತೆಯನ್ನು ಔನ್ನತ್ಯಕ್ಕೇರಿಸಬೇಕಿದೆ ಎಂಬುದನ್ನು ನಾನು ನಂಬುತ್ತೇನೆ…” ಎಂದೂ ಹೇಳಿದ್ದರು.

“ವಿಶ್ವವೀಗ ಎರಡು ಹರಿವುಗಳ ಜಾಡಿನಲ್ಲಿದೆ. ಒಂದು ವಿಸ್ತರಣಾವಾದ ಮತ್ತೊಂದು ಅಭಿವೃದ್ಧಿಪಥ. ಅಭಿವೃದ್ಧಿಪಥವು ನಮ್ಮ ಮುಂದಿನ ನಡೆ. ವಿಶ್ವವೀಗ ವಿಸ್ತರಣಾವಾದದ ಕಪಿಮುಷ್ಠಿಯಲ್ಲಿ ಸಿಲುಕಿಕೊಳ್ಳಬೇಕೆ ಅಥವಾ ಅಭಿವೃದ್ಧಿಪಥದಲ್ಲಿ ಮುನ್ನಡೆಯಬೇಕೆ ಎಂಬುದನ್ನು ನಾವು ನಿರ್ಧರಿಸಬೇಕು. ಶಾಂತಿಪಥದಲ್ಲಿ ಮುನ್ನಡೆಯುವವರು, ಅಭಿವೃದ್ಧಿಪಥ ನಂಬುವವರು ಮಾತ್ರವೇ ಶಾಂತಿ ಮತ್ತು ಪ್ರಗತಿಗೆ ಖಾತರಿ ನೀಡಬಲ್ಲರು…” ಎಂದು ಸ್ಪಷ್ಟವಾಗಿ ಹೇಳಿದ್ದರು.

ಪ್ರಧಾನಿ ಮೋದಿ ಈಗ ಭಾರತ-ಚೀನಾ ಗಡಿಯಲ್ಲಿ ನಿಂತು, ಜಪಾನಿನಲ್ಲಿ ಸುಮಾರು 70 ತಿಂಗಳ ಹಿಂದೆ ಹೇಳಿದ ಮಾತುಗಳನ್ನು ಮರುಪ್ರಸ್ತಾಪಿಸಿದ್ದಾರೆ. ಈ ಅವಧಿಯಲ್ಲಿ ವಿಶ್ವದ ನದಿಗಳಲ್ಲಿ ಅದೆಷ್ಟೋ ಹೊಸನೀರು ಹರಿದು ಬಂದಿದೆ. ವಿಶ್ವದ ಹಲವು ದೇಶಗಳಲ್ಲಿ ಅದೆಷ್ಟೋ ಹೊಸ ಸರ್ಕಾರಗಳು ಬಂದಿವೆ. ವಿಶ್ವದ ಅದೆಷ್ಟೋ ಭಾಗದಲ್ಲಾದ ಸಂಘರ್ಷಗಳಲ್ಲಿ ಅದೆಷ್ಟೋ ಸಾವಿರ ಜನರ ಅಂತ್ಯವಾಗಿದೆ. ವಿಶ್ವದ ಅಷ್ಟೇ ಏಕೆ ಭಾರತದ ಆರ್ಥಿಕತೆಯಲ್ಲಾದ ತೀವ್ರ ಏರಿಳಿತಗಳಿಂದಾಗಿ ಅದೆಷ್ಟೋ ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕತೆಯು ದಿಕ್ಕೆಟ್ಟಿ ಹೋಗಿದೆ.

ನಮ್ಮ ದೇಶದ 20 ಮಂದಿ ವೀರಯೋಧರು ಗಡಿಯಾಚೆಗಿನ ಪುಂಡರರೊಂದಿಗೆ ಹೋರಾಡಿ ಹುತಾತ್ಮರಾದ ನಂತರವೂ ಪ್ರಧಾನಿ ಮೋದಿ ಚೀನಾದ ಮೇಲೆ ಯಾವುದೇ ರೀತಿಯ ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲವೇಕೆ? ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಡೆಸಲಿಲ್ಲವೇಕೆ? ವಿರೋಧಪಕ್ಷಗಳ ನಾಯಕರು ಹೇಳುವಂತೆ ಚೀನಾ ಭೂಪಟದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ ಮೋದಿ ಸರ್ಕಾರ ಡಿಜಿಟಲ್ ಆಪ್ ಗಳ ಮೇಲೆ ಸ್ಟ್ರೈಕ್ ಮಾಡಿ ಸುಮ್ಮನಾಗಿದ್ದೇಕೆ? ಎಲ್ಲಕ್ಕೂ ಮಿಗಿಲಾಗಿ ಜೂನ್ 20 ರಂದು ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ದೇಶದ ಗಡಿಯನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಹೇಳಿದ್ದೇಕೆ? 20 ವೀರಯೋಧರು ಹುತಾತ್ಮರಾದ ಎರಡು ವಾರಗಳ ನಂತರ ಗಡಿಭಾಗಕ್ಕೆ ತೆರಳಿದ್ದೇಕೆ? ರಕ್ಷಣಾ ಸಚಿವರನ್ನೂ ಬಿಟ್ಟು ತೆರಳುವ ಅಗತ್ಯವಿತ್ತೇ? ಹೀಗೆ ಮೋದಿ ಲಡಾಖ್ ಭೇಟಿ ಹಿನ್ನೆಲೆಯಲ್ಲಿ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.

ಮೋದಿ ವಿರೋಧಿಗಳು ಕೇಳುವ ಒಂದೇ ಪ್ರಮುಖ ಪ್ರಶ್ನೆ ಎಂದರೆ- ನಮ್ಮ ಗಡಿಯನ್ನು ಯಾರೂ ಅತಿಕ್ರಮಿಸಿಲ್ಲ ಎಂದಾದರೆ ನಮ್ಮ ಸೈನಿಕರು ಹೋರಾಟ ಮಾಡಿ ಹುತಾತ್ಮರಾಗಿದ್ದು ಹೇಗೆ? ಎಂಬುದು. ಈ ಪ್ರಶ್ನೆಗೆ ಖುದ್ಧು ಪ್ರಧಾನಿ ಮೋದಿಯಾಗಲೀ, ಅಥವಾ ಪ್ರಧಾನಿ ಕಾರ್ಯಾಲಯವಾಗಲೀ ಸ್ಪಷ್ಟನೆ ನೀಡಿಲ್ಲ. ಆದರೆ, ಈ ನಡುವೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಏನೆಂದರೆ- ನಮ್ಮ ಗಡಿಯೊಳಗೆ ಯಾರೂ ನುಸುಳಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಖುದ್ಧು ಪ್ರಧಾನಿ ಮೋದಿಯೇ ಮತ್ತೆ ನೋಡಲು ಬಯಸುತ್ತಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ಕಾರ್ಯಾಲಯವು ಆ ಭಾಗವನ್ನು ಸೆನ್ಸಾರ್ ಮಾಡಿದೆಯಂತೆ! ಅಧಿಕೃತವಾಗಿ ಸೆನ್ಸಾರ್ ಮಾಡಿದ್ದರೂ, ಪ್ರಧಾನಿ ಮೋದಿ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಇದೆ.

ವಿಸ್ತರಣಾವಾದ ಮತ್ತು ಅಭಿವೃದ್ಧಿಪರವಾದದ ಬಗ್ಗೆ ಖುದ್ದು ಪ್ರಧಾನಿ ಮೋದಿಯೇ ವೈರುದ್ಧ್ಯ ನಿಲುವು ತಾಳಿದಂತಿದೆ. 2014ರಲ್ಲಿ ಅಭೂತಪೂರ್ವ ವಿಜಯದೊಂದಿಗೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿ ನೆಪಮಾತ್ರಕ್ಕೆ ಅಭಿವೃದ್ಧಿ ಮಂತ್ರ ಪಠಿಸುತ್ತಲೇ ವಿಸ್ತರಣಾ ಪ್ರವೃತ್ತಿಯನ್ನು ದೇಶವ್ಯಾಪಿ ವಿಸ್ತರಿಸಿದ್ದರು. ವಿಕಾಸವಾದ ಮತ್ತು ಭ್ರಷ್ಟಚಾರ ಮುಕ್ತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಪ್ರಧಾನಿ ಮೋದಿ, ವಿಕಾಸವಾದವನ್ನು ಮರೆತೇ ಬಿಟ್ಟರು. ವಿಸ್ತರಣಾವಾದಕ್ಕೆ ಮುಂದಾದರು. “ಕಾಂಗ್ರೆಸ್ ಮುಕ್ತ ಭಾರತ” ಎಂಬ ಘೋಷಣೆಯೊಂದಿಗೆ ಚುನಾವಣೆ ಮೂಲಕ ರಾಜ್ಯವನ್ನು ಗೆಲ್ಲಲು, ಚುನಾವಣೆ ಮೂಲಕ ಸಾಧ್ಯವಾಗದ ಕಡೆ ಶಾಸಕರ ಖರೀದಿ ಮೂಲಕ ಗೆಲ್ಲುವ ದುಸ್ಸಾಹಸಕ್ಕೆ ಮುಂದಾದರು. 2014ರಲ್ಲಿ ಏಳು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಎನ್‌ಡಿಎ ಪಕ್ಷಗಳು 2018ರ ಹೊತ್ತಿಗೆ 21 ರಾಜ್ಯಗಳಿಗೆ ವಿಸ್ತಾರಗೊಂಡವು.

2018ರ ನಂತರ ಮೋದಿ ಚರಿಷ್ಮಾ ನಡೆಯಲಿಲ್ಲ. ನಿರ್ಣಾಯಕ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿತು. ರಾಜಸ್ತಾನ, ಮಧ್ಯಪ್ರದೇಶ, ಪಂಜಾಬ್, ಕರ್ನಾಟಕ ರಾಜ್ಯಗಳಲ್ಲಿ ಸೋಲು ಅನುಭವಿಸಿತು. ಪುಲ್ವಾಮಾ ಸ್ಪೋಟ ಘಟನೆಯನ್ನು ಭಾವನಾತ್ಮಕವಾಗಿ ಬಳಸಿಕೊಂಡ ಬಿಜೆಪಿ ಮತ್ತೆ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿತ್ತು.

ಅಷ್ಟು ಅಭೂತಪೂರ್ವ ಗೆಲುವು ಸಿಕ್ಕಾಗ ಯಾವುದೇ ಸರ್ಕಾರವಾಗಲೀ, ಪ್ರಧಾನಿಯಾಗಲಿ ಜನರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅಭಿವೃದ್ಧಿ ಸಾಧಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆದರೆ, ಮೋದಿ ಸರ್ಕಾರ ಮತ್ತೆ ವಿಸ್ತರಣಾವಾದಕ್ಕೆ ಇಳಿಯಿತು. ಕರ್ನಾಟಕದಲ್ಲಿ ಶಾಸಕರನ್ನು ಖರೀದಿಸಿ ಅಧಿಕಾರ ಗಿಟ್ಟಿಸಿತು. ಕೊರೊನಾ ಸಾಂಕ್ರಾಮಿಕ ರೋಗ ದೇಶವ್ಯಾಪಿ ಹರಡುತ್ತಿರುವ ಹೊತ್ತಿನಲ್ಲೇ ನಿರ್ಲಜ್ಜೆಯಿಂದ ಮಧ್ಯಪ್ರದೇಶದಲ್ಲಿ ಶಾಸಕರನ್ನು ಖರೀದಿಸಿ, ತನ್ನದೇ ಸರ್ಕಾರ ರಚಿಸಿತು.

ಮುಖ್ಯ ವಿಷಯ ಏನೆಂದರೆ- ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣಾವಾದದ ವಿರುದ್ಧ ಮಾತನಾಡುತ್ತಾ, ವಿಸ್ತರಣಾ ವಾದವು ಅಭಿವೃದ್ಧಿಗೆ ಮಾರಕ ಎಂಬುದನ್ನು ವಾದಿಸುತ್ತಾ ದೇಶದಲ್ಲಿ ಮಾತ್ರ ವಿಸ್ತರಣಾವಾದವನ್ನು ಎಗ್ಗಿಲ್ಲದೇ ಅನುಸರಿಸುತ್ತಾ ಬಂದಿದ್ದಾರೆ. ಮೋದಿ ಮಾತು ಅಕ್ಷರಷಃ ನಿಜಾ. ವಿಸ್ತರಣಾ ವಾದಕ್ಕೆ ಭವಿಷ್ಯವಿಲ್ಲ. ವಿಸ್ತರಣಾವಾದದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ, ಗಡಿಯೊಳಗಿನ ವಿಸ್ತರಣಾವಾದ ಬಗೆಗಿನ ಪ್ರಧಾನಿ ಮೋದಿಯ ಹಪಾಹಪಿಯಿಂದಾಗಿ ಇಡೀ ದೇಶದ ಅಭಿವೃದ್ಧಿ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಮೋದಿ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳ ಚುನಾವಣೆ ಗೆಲ್ಲಲು ತಮ್ಮೆಲ್ಲ ಸಮಯ ಮತ್ತು ಬುದ್ಧಿಮತ್ತೆಯನ್ನು ಮೀಸಲಿಟ್ಟ ಪರಿಣಾಮ ದೇಶದ ಅಭಿವೃದ್ಧಿ ಕುಸಿದಿದೆ. ಆರ್ಥಿಕತೆಯು ಉದಾರೀಕರಣೋತ್ತರ ಯುಗದಲ್ಲೇ ಅತಿ ಕನಿಷ್ಠಮಟ್ಟಕ್ಕೆ ಕುಸಿದಿದೆ. ನಿರುದ್ಯೋಗವು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಂದಹಾಗೆ ಈ ಎಲ್ಲಾ “ಕುಸಿತ”ಗಳೂ ಕೊರೊನಾ ಸೋಂಕು ವ್ಯಾಪಿಸುವ ಮುಂಚಿನವು. ಕೊರೋನಾ ಸೋಂಕು ಹರಡಿದ ಪರಿಣಾಮ ಮತ್ತಷ್ಟು ಕುಸಿತವಾಗಿದೆ. ಇಷ್ಟೆಲ್ಲದರ ನಡುವೆಯೂ ಮೋದಿ ಅಭಿವೃದ್ಧಿಪಥದ ಬಗ್ಗೆ ಚಿಂತಿಸದೇ ನಾಲ್ಕು ತಿಂಗಳ ನಂತರ ನಡೆಯುವ ಬಿಹಾರ ಚುನಾವಣೆಯಲ್ಲಿ ವಿಜಯೋತ್ಸವ ಆಚರಿಸುವ ಸಲುವಾಗಿ ಈಗಿನಿಂದಲೇ ಸಿದ್ಧತೆ ನಡೆಸಿದ್ದಾರೆ. ಪ್ರಧಾನಿ ಮೋದಿಯ ನೀತಿ-ನಿಲುವು ಗಡಿಯೊಳಗೊಂದು, ಗಡಿಯಾಚೆಗೆ ಮತ್ತೊಂದು!!

Click here to follow us on Facebook , Twitter, YouTube, Telegram

Pratidhvani
www.pratidhvani.com