ಲಾಕ್‌ಡೌನ್‌ ಗೊಂದಲ.. ಜನತಾ ಲಾಕ್‌ಡೌನ್‌.. ಮುಂದೇನು..?

ಲಾಕ್‌ಡೌನ್‌ ಗೊಂದಲ.. ಜನತಾ ಲಾಕ್‌ಡೌನ್‌.. ಮುಂದೇನು..?

ಲಾಕ್‌ಡೌನ್‌ನಿಂದ ಕರೋನಾ ನಿಯಂತ್ರಣ ಸಾಧ್ಯವಿಲ್ಲ ಎನ್ನುವ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ಲಾಕ್‌ಡೌನ್‌ ಮಾಡದಿದ್ದರೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತದೆ. ಕಾರಣ ಇಷ್ಟೆ, ಈಗಾಗಲೇ ಬೆಂಗಳೂರು ಒಂದರಲ್ಲೇ ಪ್ರತಿದಿನ ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದು, ಎಲ್ಲಾ ಆಸ್ಪತ್ರೆಗಳನ್ನು ಒಟ್ಟು ಮಾಡಿದರೂ ಚಿಕಿತ್ಸೆ ನೀಡಲು ಬೆಡ್‌ ಸೌಲಭ್ಯವಿಲ್ಲ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವಂತೆ, ಭಾರತ ದೇಶದಲ್ಲೂ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿ ಮುಂದೆ ಹೋಗಿದೆ. ಶುಕ್ರವಾರ ಒಂದೇ ದಿನ ಭಾರತದಲ್ಲಿ ಸೋಂಕಿತರ ಸಂಖ್ಯೆ 22,771 ಕಂಡು ಬಂದಿದೆ. ಈ ಮೂಲಕ ಭಾರತದಲ್ಲಿ ಕರೋನಾ ಪೀಡಿತರ ಸಂಖ್ಯೆ 6,48,315 ಆಗಿದೆ. ಇನ್ನು ಶುಕ್ರವಾರ ಕರೋನಾ ಸೋಂಕಿನಿಂದ ಸತ್ತವರ ಸಂಖ್ಯೆ 442 ಆಗಿದ್ದು, ಭಾರತದಲ್ಲಿ ಇಲ್ಲೀವರೆಗೂ ಸತ್ತವರ ಸಂಖ್ಯೆ ಕೂಡ ಗಣನೀಯವಾಗಿ ಏರಿಯಾಗಿ 18,655ಕ್ಕೆ ಬಂದು ನಿಂತಿದೆ. ವಿಶೇಷ ಎಂದರೆ 3,94,227 ಜನರು ಸೋಂಕಿನಿಂದ ಗುಣಮುಖರಾಗಿದ್ದು, 2,35,433 ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ಸೋಂಕಿತ ಜನರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ 15 ದಿನಗಳ ಈಚೆಗೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಜನತೆಯನ್ನು ಆತಂಕಕ್ಕೆ ದೂಡಿದೆ.

ಲಾಕ್‌ಡೌನ್‌ ಮಾಡಲ್ಲ ಎಂದಿದೆ ರಾಜ್ಯ ಸರ್ಕಾರ..!

ಪ್ರಧಾನಿ ನರೇಂದ್ರ ಮೋದಿ ಕೇವಲ 21 ದಿನಗಳ ಲಾಕ್‌ಡೌನ್‌ನಿಂದ ಕರೋನಾ ಎಂಬ ಯುದ್ಧವನ್ನು ಗೆಲ್ಲೋಣ, ದೇಶದಿಂದ ಕರೋನಾ ಓಡಿಸೋಣ ಎಂದು ಆಶ್ವಾಸನೆ ಕೊಟ್ಟಿದ್ದರು. ಜೊತೆಗೆ ಜೀವ ಜೀವನ ಎಂದು ಬಂದಾಗ ನಮ್ಮ ಆಯ್ಕೆ ಜೀವ ಆಗಿರುತ್ತದೆ. ಜೀವ ಇದ್ದರೆ ಜೀವನ ರೂಪಿಸಿಕೊಳ್ಳಬಹುದು ಎಂದಿದ್ದರು. ಆ ಬಳಿಕ ಲಾಕ್‌ಡೌನ್‌ ಬಿಟ್ಟು ಅನ್‌ಲಾಕ್‌ ಮಾಡುತ್ತಾ ಸಾಗಿದರು.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ನಾನಾ ರಾಜ್ಯಗಳು ಮತ್ತೆ ಲಾಕ್‌ಡೌನ್‌ ಮೊರೆ ಹೋಗಿವೆ. ಆದರೆ ಕರ್ನಾಟಕ ಮಾತ್ರ ಲಾಕ್‌ಡೌನ್‌ ಮಾಡುವ ಮನಸ್ಸು ಮಾಡುತ್ತಿಲ್ಲ. ಲಾಕ್‌ಡೌನ್‌ನಿಂದ ಕರೋನಾ ಸಮಸ್ಯೆಗೆ ಮುಕ್ತಿ ಸಿಗಲ್ಲ. ಬದಲಿಗೆ ಸೋಂಕು ಹರಡುವ ಕಾಲ ವಿಸ್ತರಣೆ ಆಗಲಿದೆ. ಈಗ ಇರುವ ಸ್ಥಿತಿಯಲ್ಲೇ ಸೋಂಕು ಹರಡಿದರೆ ಸೆಪ್ಟೆಂಬರ್‌ ವೇಳೆಗೆ ಉತ್ತುಂಗವನ್ನು ತಲುಪಿ ಆ ಬಳಿಕ ಇಳಿಕೆ ಕ್ರಮಕ್ಕೆ ಬರಲಿದೆ. ಒಂದು ವೇಳೆ ನಾವೀಗ ಲಾಕ್‌ಡೌನ್‌ ಮಾಡಿದರೆ, ಮುಂದಿನ ವರ್ಷ ಫೆಬ್ರವರಿಯಲ್ಲಿ ಉತ್ತುಂಗ ತಲುಪಿ ಆ ಬಳಿಕ ಇಳಿಕೆ ಕ್ರಮಕ್ಕೆ ಬರಲಿದೆ. ಹಾಗಾಗಿ ಲಾಕ್‌ಡೌನ್‌ ಮಾಡುವ ಮೂಲಕ ಕರೋನಾ ನಿಯಂತ್ರಣ ಸಾಧ್ಯವಿಲ್ಲ ಎನ್ನಲಾಗ್ತಿದೆ.

ಲಾಕ್‌ಡೌನ್‌ ಆಗದಿದ್ದರೆ ಸಾವಿನ ಸಂಖ್ಯೆ ಹೆಚ್ಚಳ..!

ಲಾಕ್‌ಡೌನ್‌ನಿಂದ ಕರೋನಾ ನಿಯಂತ್ರಣ ಸಾಧ್ಯವಿಲ್ಲ ಎನ್ನುವ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ಲಾಕ್‌ಡೌನ್‌ ಮಾಡದಿದ್ದರೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತದೆ. ಕಾರಣ ಇಷ್ಟೆ, ಈಗಾಗಲೇ ಬೆಂಗಳೂರು ಒಂದರಲ್ಲೇ ಪ್ರತಿದಿನ ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದು, ಎಲ್ಲಾ ಆಸ್ಪತ್ರೆಗಳನ್ನು ಒಟ್ಟು ಮಾಡಿದರೂ ಚಿಕಿತ್ಸೆ ನೀಡಲು ಬೆಡ್‌ ಸೌಲಭ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಚಿಕಿತ್ಸೆ ಎನ್ನುವುದು ಗಗನ ಕುಸುಮ ಆಗಿದೆ. ಈಗಾಗಲೇ ಬೇರೆ ಬೇರೆ ಕಾಯಿಲೆಗಳಿಂದ ನರಳುತ್ತಿದ್ದ ಜನರಿಗೆ ಸೋಂಕು ವ್ಯಾಪಿಸಿದ್ದರೆ ಚಿಕಿತ್ಸೆ ಸಿಗದೆ ಪರಿಸ್ಥಿತಿ ಗಂಭೀರ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆ ತಜ್ಞರು. ಲಾಕ್‌ಡೌನ್‌ ಮಾಡಿದರೆ ತಕ್ಷಣಕ್ಕೆ ಸೋಂಕು ಹರಡುವುದು ಕಡಿಮೆಯಾಗುವುದರಿಂದ ಆಸ್ಪತ್ರೆಗಳ ವ್ಯವಸ್ಥೆ ಹೆಚ್ಚಿಸಿಕೊಳ್ಳಲು ಅನುಕೂಲ ಆಗುತ್ತದೆ ಎನ್ನುವುದು ಅವರ ವಾದ.

ಮೋದಿ ತೋರಿಸಿದ ಹಾದಿಯಲ್ಲೇ ಜನತೆ..!

ಪ್ರಧಾನಿ ನರೇಂದ್ರ ಮೋದಿ ಸೋಂಕು ಕಾಣಿಸಿದ ಬಳಿಕ ತತ್‌ಕ್ಷಣದ ಕ್ರಮ ಕೈಗೊಳ್ಳದಿದ್ದರೂ ಕರೋನಾ ಕಿಚ್ಚು ಹಚ್ಚಲು ಶುರುವಾಗುತ್ತಿದ್ದ ಹಾಗೆ ಮಾರ್ಚ್‌ 19ರಂದು ಜನತಾ ಕರ್ಫ್ಯೂ ಮಾಡಲು ಮನವಿ ಮಾಡಿಕೊಂಡಿದ್ದರು. ಮೋದಿ ಮಾಡಿದ ಮನವಿಯಂತೆ ಮಾರ್ಚ್‌ 22ರ ಭಾನುವಾರ ಇಡೀ ಭಾರತ ದೇಶವೇ ಲಾಕ್‌ಡೌನ್‌ ಆಗಿತ್ತು. ಸಂಜೆ 5 ಗಂಟೆಗೆ ಜಾಗಟೆ, ಗಂಟೆ ಬಾರಿಸಿಕೊಂಡು ಜನರು ಹಬ್ಬ ಆಚರಣೆ ಮಾಡಿದ್ದರು. ಆದರೀಗ ಜನರಿಗೆ ಕರೋನಾ ಮಹಾಮಾರಿಯ ಪ್ರಭಾವ ಹೇಗಿದೆ. ಅದರಿಂದ ಬಚಾವ್‌ ಆಗಲು ಏನು ಮಾಡಬೇಕು ಎನ್ನುವ ಅರಿವು ಬಂದಿದೆ. ಆರ್ಥಿಕತೆಯ ದೃಷ್ಟಿಯಿಂದ ಸರ್ಕಾರ ಲಾಕ್‌ಡೌನ್‌ ಮಾಡಲು ಹಿಂದೆ ಮುಂದೆ ನೋಡುತ್ತಿದೆ ಎನ್ನುವ ತಿಳುವಳಿಕೆಯೂ ಜನರಲ್ಲಿ ಮೂಡಿದೆ. ಅದೇ ಕಾರಣಕ್ಕೆ ಇದೀಗ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ಮಾಡಲು ಮುಂದಾಗುತ್ತಿದ್ದಾರೆ. ನಗರವಾಸಿಗಳಾಗಿದ್ದ ಹಳ್ಳಿ ಭಾಗದ ಜನರು ನಗರವನ್ನೇ ತೊರೆದು ಹೋಗುತ್ತಿದ್ದಾರೆ. ಸರ್ಕಾರ ಲಾಕ್‌ಡೌನ್‌ ಮಾಡದಿದ್ದರೂ ಸ್ವಯಂಪ್ರೇರಿತವಾಗಿ ಆಗುವ ಎಲ್ಲಾ ಸಾಧ್ಯಗಳನ್ನು ಕರೋನಾ ಸೋಂಕು ಹುಟ್ಟುಹಾಕುತ್ತಿದೆ.

ರಾಜ್ಯ ಸರ್ಕಾರ ಏನು ಮಾಡಬಹುದು..?

ಕರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರವೇ ಮದ್ದು ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಮಾತು ನೂರಕ್ಕೆ ನೂರರಷ್ಟು ಸತ್ಯ. ಅದೇ ರೀತಿ ಈಗಾಗಲೇ 2 ತಿಂಗಳ ಲಾಕ್‌ಡೌನ್‌ನಿಂದ ದೇಶವೇ ತತ್ತರಿಸಿ ಹೋಗಿದ್ದು, ದೇಶವನ್ನು ಮುನ್ನಡೆಸಬೇಕಿದ್ದರೆ ಹಣಕಾಸಿನ ವಹಿವಾಟು ನಡೆಯಲೇಬೇಕು ಎನ್ನುವುದೂ ಅಷ್ಟೇ ಸತ್ಯ. ಆದರೆ, ಸರ್ಕಾರ ಒಂದು ಸರಳ ಉಪಾಯವನ್ನು ಮಾಡಬಹುದು. ಯಾವ ವ್ಯವಹಾರದಲ್ಲಿ ಗುಂಪು ಗುಂಪಾಗಿ ಜನರು ನಿಲ್ಲುವುದಿಲ್ಲವೋ ಆ ವ್ಯವಹಾರಗಳಿಗೆ ಅನುಮತಿ ಕೊಡಬಹುದು. ಉದಾಹರಣೆಗೆ ಟೀ ಅಂಗಡಿಗಳಿಗೆ ಬೀಗ ಹಾಕಿಸುವುದು. ಬೆಳಗ್ಗೆ ವಾಕಿಂಗ್‌ಗೆ ಹೋಗುವ ಜನರು ವಾಪಸ್‌ ಬರುವಾಗ ಗುಂಪು ಗುಂಪಾಗಿ ನಿಂತು ಟೀ ಹೀರುತ್ತಾರೆ. ಅಲ್ಲಿ ಟೀ ಅಂಗಡಿ ಕರೋನಾ ಸೋಂಕನ್ನು ಹರಡುವ ಕೇಂದ್ರವಾಗುತ್ತಿದೆ. ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್‌ ಹಾಕುವುದು ಹಾಗೂ ಬೀದಿ ಬೀದಿ ಸುತ್ತುತ್ತ ಮಾರಾಟ ಮಾಡುವ ತಳ್ಳುಗಾಡಿಗಳ ವ್ಯಾಪಾರಕ್ಕೆ ಬೆಂಬಲಿಸುವುದು ಈಗಿರುವ ಪ್ರಮುಖ ಮಾರ್ಗ. ಸೋಂಕಿತರಲ್ಲಿ ರೋಗ ಗುಣಲಕ್ಷಣ ಇದ್ದವರಿಗೆ ಚಿಕಿತ್ಸೆ ನೀಡುವುದು ಉತ್ತಮ ಮಾರ್ಗವಾಗಿದೆ. ಆದರೆ ಒಮ್ಮೆ ಸೋಂಕಿತನಾಗಿದ್ದು ಲಕ್ಷಣವಿಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲೇ ಬಿಟ್ಟು, ನಂತರ ರೋಗ ಲಕ್ಷಣ ಬಂದಾಗ ಚಿಕಿತ್ಸೆ ನೀಡಲು ಕರೆದೊಯ್ಯದೆ ನಿರ್ಲಕ್ಷ್ಯ ಮಾಡುವ ಮೂಲಕ ಸಾವಿನ ಕೂಪಕ್ಕೆ ತಳ್ಳುವ ಕೆಲಸ ಆಗಬಾರದು ಅಷ್ಟೆ. ಸರ್ಕಾರದ ಮಾಗಸೂಚಿಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಸರ್ಕಾರ ಮೊದಲು ತಜ್ಞರು ಕೊಡುವ ಸಲಹೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ.

Click here to follow us on Facebook , Twitter, YouTube, Telegram

Last updated

Pratidhvani
www.pratidhvani.com