ಉಳ್ಳವರಿಗೆ ಪಾಲಿಗೆ ಚಿಕಿತ್ಸೆ…ಇಲ್ಲದವರಿಗೆ?
ರಾಷ್ಟ್ರೀಯ

ಉಳ್ಳವರಿಗೆ ಪಾಲಿಗೆ ಚಿಕಿತ್ಸೆ…ಇಲ್ಲದವರಿಗೆ?

ಬೆಂಗಳೂರಿನಲ್ಲಿ ಅಮಾನವೀಯ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿದೆ. ಆರೋಗ್ಯ ಇಲಾಖೆ ತನ್ನ ಕರಾಳ ಮುಖ ದರ್ಶನ ಮಾಡುತ್ತಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಬಡವರ ಜೀವದ ಬಗ್ಗೆ ಯಾವುದೇ ಕಾಳಜಿ ಇಲ್ಲದಂತಾಗಿದೆಯಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಕೃಷ್ಣಮಣಿ

ಕರ್ನಾಟಕದಲ್ಲಿ ಶುಕ್ರವಾರದ ಕರೋನಾ ಕರೋನಾ ಅಂಕಿ ಅಂಶ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ ರಾಜ್ಯಾದ್ಯಂತ ಒಂದು ದಿನದ ಸೋಂಕಿತರ ಸಂಖ್ಯೆ 1694 ಆಗಿದ್ದು ಅದರಲ್ಲಿ 994 ಮಂದಿ ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗಿದ್ದಾರೆ. ಅದರ ಜೊತೆಗೆ 21 ಜನರು ಇಡೀ ರಾಜ್ಯಾದ್ಯಂತ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಇದು ಜನರನ್ನು ಆತಂಕಕ್ಕೆ ಈಡು ಮಾಡಿರುವ ಜೊತೆಗೆ ಮತ್ತೊಂದು ವಿಚಾರ ಬಯಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದೇ ದಿನ ಆರು ಮಂದಿ ಕರೋನಾ ಸೋಂಕಿತರು ಸೂಕ್ತ ಚಿಕಿತ್ಸೆ ಲಭಿಸದೆ ಸಾವಿನ ಮನೆ ಸೇರಿದ್ದಾರೆ.

ಬೆಂಗಳೂರಿನಲ್ಲಿ ಅಮಾನವೀಯ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿದೆ. ಆರೋಗ್ಯ ಇಲಾಖೆ ತನ್ನ ಕರಾಳ ಮುಖ ದರ್ಶನ ಮಾಡುತ್ತಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಬಡವರ ಜೀವದ ಬಗ್ಗೆ ಯಾವುದೇ ಕಾಳಜಿ ಇಲ್ಲದಂತಾಗಿದೆಯಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಶ್ರೀನಗರದಲ್ಲಿ ಮನಕಲಕುವ ಘಟನೆ ಒಂದು ನಡೆದಿದ್ದು, ಕೋವಿಡ್–19 ಗೆ ವ್ಯಕ್ತಿ ಬಲಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಸ್ವಾಬ್ ಟೆಸ್ಟ್ ಮಾಡಿಸಿಕೊಂಡಿದ್ದ ವ್ಯಕ್ತಿಗೆ ಪಾಸಿಟಿವ್ ಎನ್ನವ ಮಾಹಿತಿ ಬಂದಿತ್ತು. ಕೂಡಲೇ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ಗಾಗಿ ಕರೆ ಮಾಡಿದ್ರು. ಸಂಜೆ 4 ಗಂಟೆಯಾದ್ರು ಆ್ಯಂಬುಲೆನ್ಸ್ ಬರಲಿಲ್ಲ. 15 ದಿನಕ್ಕೆ ಆಗುವಷ್ಟು ಬಟ್ಟೆ ತುಂಬಿಕೊಂಡು ಕಾದು ಕುಳಿತಿದ್ದ ಸೋಂಕಿತ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ರಾಮಾಂಜನೇಯ ದೇವಸ್ಥಾನದ ಬಳಿಯ ರಸ್ತೆ ಮೇಲೆ ಮೃತ ದೇಹ ಗಂಟೆಗಟ್ಟಲೆ ಬಿದ್ದಿದ್ದು ಜನರ ಮನಸ್ಸು ಕಲಕುವಂತೆ ಮಾಡಿತ್ತು.

ಮತ್ತೊಂದು ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯ ಕ್ರೌರ್ಯಕ್ಕೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಬೆಳಗ್ಗೆ ವಾಕಿಂಗ್ ಮಾಡುವಾಗ ಹೃದಯಾಘಾತಕ್ಕೆ ಒಳಗಾದ 50 ವರ್ಷದ ವೃದ್ಧ, ತಕ್ಷಣವೇ ಆಸ್ಪತ್ರೆಗೆ ತೆರಳಿದ್ದಾರೆ. ರಾಜಾಜಿನಗರದ ʻಕಾಡೆʼ ಆಸ್ಪತ್ರೆ ಬಂದಾಗ ಆಸ್ಪತ್ರೆ ಸಿಬ್ಬಂದಿ ಕರೋನಾ ಭೀತಿಯಲ್ಲಿ ದಾಖಲು ಮಾಡಿಕೊಂಡಿಲ್ಲ ಎನ್ನಲಾಗಿದ್ದು, ಕಾಮಾಕ್ಷಿಪಾಳ್ಯದ ವಯೋವೃದ್ಧ ಆಸ್ಪತ್ರೆ ಬಳಿಯೇ ಕೆಲಕಾಲ ಸಂಕಷ್ಟ ಅನುಭವಿಸಿ ಸಾವನ್ನಪ್ಪಿದ್ದಾರೆ.

ಮೂರನೇ ಪ್ರಕರಣದಲ್ಲಿ ಚಿಕಿತ್ಸೆ ಸಿಗದೆ ಸೋಂಕಿತ ವೃದ್ಧ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು. ಕಳೆದ 3 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ರು. ಆದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಕರೋನಾ ಟೆಸ್ಟ್ ಮಾಡಿಸಿಕೊಂಡು ಬರಲು ಸೂಚಿಸಿ, ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದ್ದಾರೆ. ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗಳಿಗೆ ಅಲೆದಾಡಿದ ಬಳಿಕ ಮನೆಗೆ ವಾಪಸ್ ಆಗಿದ್ದ ವೃದ್ಧ ಬಳಲಿಕೆಯಿಂದ ತೀವ್ರ ಅಸ್ವಸ್ಥರಾಗಿ ಸಾನ್ನಪ್ಪಿದ್ದಾರೆ. ಸಾವಿನ ಬಳಿಕ ವೃದ್ಧನ ಸ್ವಾಬ್ ಟೆಸ್ಟ್ ಮಾಡಿದ್ದು, ಸೋಂಕು ಇರುವುದು ದೃಢವಾಗಿದೆ.

ಇನ್ನೂ ಹೊಸಕೋಟೆ ತಾಲೂಕು ಸಮೇತನಹಳ್ಳಿಯಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಸಿಗದೇ ಅಮಾನವೀಯವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಸ್ವತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಹಾಸಿಗೆ ಸೌಲಭ್ಯ ಸಿಗದೆ ಸಾವನ್ನಪ್ಪಿದ್ದಾರೆ. 45 ವರ್ಷದ ರಾಣಿ ಕಳೆದ ಬುಧವಾರ ಮನೆಗೆ ಹೋಗುತ್ತಿದ್ದಾಗ ತಲೆ ತಿರುಗಿ ಕಳೆಗೆ ಬಿದ್ದಿದ್ದರು. ಹೀಗಾಗಿ ಕುಟುಂಬಸ್ಥರು ಚಿಕಿತ್ಸೆ ಕೊಡಿಸಲು ಸಾಕಷ್ಟು ಕಡೆ ಸುತ್ತಾಡಿದ್ದರು. ಎಲ್ಲೂ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಿಲ್ಲ. ಎಂವಿಜೆ, ಮಣಿಪಾಲ್ ಮತ್ತು ವೈದೇಹಿ ಆಸ್ವತ್ರೆಗೂ ತೆರಳಿದ ಬಳಿಕ ಅಂತಿಮವಾಗಿ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಮಹಿಳೆಯನ್ನು ತಪಾಸಣೆ ಮಾಡಿದ ವೈದ್ಯರು ಮೆದುಳಿಗೆ ಪೆಟ್ಟಾಗಿದ್ದು ಬೇರೆ ಆಸ್ವತ್ರೆಗೆ ಶಿಫ್ಟ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಸಾಕಷ್ಟು ಆಸ್ಪತ್ರೆಗಳಿಗೆ ಕರೆ ಮಾಡಿ ಐಸಿಯು ಬೆಡ್ ಬಗ್ಗೆ ಕೇಳಿದ್ರೆ, ಟ್ರೀಟ್ಮೆಂಟ್ಗೆ ನಿರಾಕರಿಸಿದ್ದಾರೆ. ಇನ್ನೂ ಕೆಲವರು ಕೋವಿಡ್ – 19 ರಿಪೋರ್ಟ್ ಜೊತೆಗೆ ಬಂದರೆ ಮಾತ್ರ ಚಿಕಿತ್ಸೆ ಕೊಡೋದಾಗಿ ಹೇಳಿದ್ದಾರೆ. ಆದರೆ ಅಂತಿಮವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೇಲಿನ ನಾಲ್ವರು ಜನಸಾಮಾನ್ಯರಿಗೂ ಚಿಕಿತ್ಸೆ ಸಿಗದೆ ಇರಬಹುದು. ಆದರೆ ಈ ಪ್ರಕರಣದಲ್ಲಿ ನಿವೃತ್ತ ಸಬ್ ಇನ್ಸ್ಪೆಕ್ಟರ್ ಒಬ್ಬರು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಹಲವಾರು ಆಸ್ಪತ್ರೆಗಳಿಗೆ ಅಲೆದು ಅಲೆದು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಜ್ವರದಿಂದ ಬಳಲುತ್ತಿದ್ದ ನಿವೃತ್ತ ಇನ್ಸ್ಪೆಕ್ಟರ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಕೋರಮಂಗಲ ನಿವಾಸಿ ಆಗಿದ್ದ ನಿವೃತ್ತ ಪೋಲಿಸ್ ಸಬ್ ಇನ್ಸ್ಪೆಕ್ಟರ್ಗೆ 67 ವರ್ಷ ವಯಸ್ಸಾಗಿತ್ತು. ಹೆಬ್ಬಾಳದ ಡಾಕ್ಟರ್ ಬಳಿ ಜ್ವರಕ್ಕೆ ಚಿಕಿತ್ಸೆ ಕೂಡ ಪಡೆದಿದ್ದರು. ಜ್ವರ ತೀವ್ರವಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ಕೊಟ್ಟಿದ್ದರು. ಬಳಿಕ ವಿಲ್ಸನ್ ಗಾರ್ಡನ್ನ ಅಗಡಿ ಆಸ್ಪತ್ರೆಗೆ ದಾಖಲಾಗಲು ತೆರಳಿದಾಗ ಕೋವಿಡ್ ಟೆಸ್ಟ್ ಸೂಚಿಸಿದ್ದು, ಟೆಸ್ಟ್ ಮಾಡಿಸಿದ ಬಳಿಕ ಐಸಿಯು ಬೆಡ್ ಇಲ್ಲ ಎನ್ನುವ ಕಾರಣ ಕೊಟ್ಟು ಸಾಗಹಾಕಿದ್ದಾರೆ. ಬಳಿಕ ವೊಕಾರ್ಡ್ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆಗೆ ತೆರಳಿದರೂ ಚಿಕಿತ್ಸೆಗೆ ನಿರಾಕರಿಸಲಾಗಿದೆ. ಸರ್ಕಾರಿ ಆಸ್ಪತ್ರೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲೂ ಬೆಡ್ ಸಿಗದೆ ಚಿಕಿತ್ಸೆ ಲಭ್ಯವಾಗದೆ ಸಾವನ್ನಪ್ಪಿದ್ದಾರೆ.

ಇವರು ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಎಂದುಕೊಂಡರೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಆಸ್ಪತ್ರೆಗಳಿಗೆ ಅಲೆದು ಬೆಳಗ್ಗೆ ಆದರೂ ಐಸಿಯು ವಾರ್ಡ್ ಸಿಗದೆ ಮನೆಗೆ ವಾಪಸ್ ಆಗಿದ್ದರು. ವಿಜಯನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಇವರು ಲಿವರ್ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

ಒಟ್ಟಾರೆ, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಮಾತು ಹೇಳಿದ್ದರು. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ಮುಂದೆ ಬಡವರಿಗೆ ಚಿಕಿತ್ಸೆ ಸಿಗುವುದು ಅನುಮಾನ. ಇನ್ನೇನಿದ್ದರೂ ಉಳ್ಳವರಿಗೆ ಮಾತ್ರ ಚಿಕಿತ್ಸೆ ಸಿಗಲಿದೆ ಎಂದಿದ್ದರು. ಆ ಮಾತು ಅಕ್ಷರಶಃ ಸತ್ಯವಾಗಿದೆ. ಉಳ್ಳವರು ಮಾತ್ರ ಚಿಕಿತ್ಸೆ ಪಡೆಯಲು ಸಾಧ್ಯ ಎನ್ನುವುದನ್ನು ಈ ಮೇಲಿನ ಆರು ಘಟನೆಗಳು ಸಾರಿ ಹೇಳುತ್ತಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com