ಚೀನಾದಲ್ಲಿ 83 ಸಾವಿರ ಕೆಜಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಖದೀಮರು..
ರಾಷ್ಟ್ರೀಯ

ಚೀನಾದಲ್ಲಿ 83 ಸಾವಿರ ಕೆಜಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಖದೀಮರು..

ಚೀನಾದಲ್ಲಿ ನಡೆದಿರುವ ಭಾರೀ ಮೊತ್ತದ ಅವ್ಯವಹಾರವು ಹೊರಜಗತ್ತಿಗೆ ತಿಳಿದು ಬಂದೊಡನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೊಳಪಟ್ಟಿದೆ, ಒಟ್ಟಾರೆ ಚಿನ್ನದ ಮಾರುಕಟ್ಟೆಯಲ್ಲಿ ಎಷ್ಟು ನಕಲಿ ಚಿನ್ನ ಇದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿ ವರದಿ

ಚೀನಾದ ಪ್ರಮುಖ 14 ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸುಮಾರು 2.8 ಬಿಲಿಯನ್‌ ಡಾಲರ್‌ ನ್ನು ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಅಡವಿಟ್ಟ ನಕಲಿ ಚಿನ್ನದ ಪ್ರಮಾಣ 83 ಸಾವಿರ ಕೆಜಿ ಎಂದು ತಿಳಿದು ಬಂದ ಬೆನ್ನಿಗೆ ಚೀನಾದ ಚಿನ್ನೋದ್ಯಮ ತಲ್ಲಣಗೊಂಡಿದೆ. ಈ ಪ್ರಮಾಣವು ಚೀನಾ ವಾರ್ಷಿಕವಾಗಿ ಉತ್ಪಾದಿಸುವ 22 ಶೇಕಡಾದಷ್ಟಿದೆ.

ಚೀನಾದ ಅತೀದೊಡ್ಡ ಆಭರಣ ತಯಾರಕ ಕಂಪೆನಿಯಾದ ಕಿಂಗೋಲ್ಡ್‌ ಜುವೆಲ್ಲರಿ‌ ಸಾಲ ಪಡೆಯಲು ನಕಲಿ ಚಿನ್ನ ಅಡವಿಟ್ಟಿರುವುದಾಗಿ Caixin ವರದಿ ಮಾಡಿದೆ. 14 ಹಣಕಾಸು ಸಂಸ್ಥೆಗಳಿಂದ ಸುಮಾರು 2.8 ಬಿಲಿಯನ್‌ ಡಾಲರ್‌ ಹಣ ಪಡೆದಿರುವುದಾಗಿ ವರದಿಯಲ್ಲಿ ತಿಳಿಸಿದೆ.

ಕಿಂಗೋಲ್ಡ್‌ ಸಂಸ್ಥೆಯ ಸಾಲ ಬಾಕಿಯಿದ್ದ ಹಿನ್ನಲೆಯಲ್ಲಿ ಚಿನ್ನದ ಬಾರ್‌ಗಳನ್ನು ಕರಗಿಸಲು ಡೊಂಗುವನ್‌ ಟ್ರಸ್ಟ್‌ ಹೊರಟಾಗ ಅಡವಿಟ್ಟ ಚಿನ್ನವು ತಾಮ್ರ ಮಿಶ್ರ ಲೋಹವೆಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಇದರ ಬೆನ್ನಿಗೆ ಉಳಿದ ಸಂಸ್ಥೆಗಳೂ ತನ್ನ ಬಳಿ ಕಿಂಗೋಲ್ಡ್‌ ಜುವೆಲರಿ ಇಟ್ಟಿರುವ ಚಿನ್ನವನ್ನು ಮರುಪರಿಶೀಲನೆ ನಡೆಸಿದೆ. ಅದೂ ಕೂಡ ನಕಲಿ ಎಂದು ತಿಳಿದು ಬಂದ ಬೆನ್ನಿಗೆ ಭಾರೀ ವಂಚನೆ ಬೆಳಕಿಗೆ ಬಂದಿದೆ.

ಚೀನಾದಲ್ಲಿ ನಡೆದಿರುವ ಭಾರೀ ಮೊತ್ತದ ಅವ್ಯವಹಾರವು ಹೊರಜಗತ್ತಿಗೆ ತಿಳಿದು ಬಂದೊಡನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೊಳಪಟ್ಟಿದೆ, ಒಟ್ಟಾರೆ ಚಿನ್ನದ ಮಾರುಕಟ್ಟೆಯಲ್ಲಿ ಎಷ್ಟು ನಕಲಿ ಚಿನ್ನ ಇದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಜನಪ್ರಿಯ ಪುಸ್ತಕ “ದಿ ಬಿಟ್‌ಕಾಯಿನ್ ಸ್ಟ್ಯಾಂಡರ್ಡ್” ನ ಲೇಖಕ ಸೈಫೀಡಿಯನ್ ಟ್ವೀಟ್ ಮಾಡಿ “ಚೀನಾದ ವಾರ್ಷಿಕ ಚಿನ್ನದ ಉತ್ಪಾದನೆಯ ಒಂದು ಪ್ರಮಾಣ [ಅಂದಾಜು] 20% ನಕಲಿ ಎಂದು ಕಂಡುಬಂದಿದೆ. ಚೀನಾ ವಿಶ್ವದ ಅತಿದೊಡ್ಡ ಚಿನ್ನ ಉತ್ಪಾದಕ. ಅಲ್ಲಿ ಎಷ್ಟು ನಕಲಿ ಚಿನ್ನವಿದೆ? ನಕಲಿ ಚಿನ್ನದ ಕಾರಣ, ಚಿನ್ನದ ಮಾರುಕಟ್ಟೆ ಪೂರೈಕೆ ಪ್ರತಿವರ್ಷ 5-15% ರಷ್ಟು ಹೆಚ್ಚಾಗುತ್ತಿದೆಯೇ? ” ಎಂದು ಪ್ರಶ್ನಿಸಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ನ ಲೇಖಕ ಜಿಮ್ ರಿಕಾರ್ಡ್ಸ್ “ವುಹಾನ್ ಕೋವಿಡ್ -19 ವೈರಸ್ ಬಗ್ಗೆ ಸುಳ್ಳು ಹೇಳುವುದು ಮಾತ್ರವಲ್ಲ, ಅವರು ಚಿನ್ನದ ಬಗ್ಗೆಯೂ ಸುಳ್ಳು ಹೇಳುತ್ತಾರೆ. ವುಹಾನ್ ನಕಲಿ ಚಿನ್ನದ ವಿಶ್ವ ಕೇಂದ್ರದಂತೆ ಕಾಣುತ್ತದೆ ” ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com