ಮಧ್ಯಪ್ರದೇಶ: ಕಾಂಗ್ರೆಸ್ ಪರ ಕಾರ್ಯತಂತ್ರ ರೂಪಿಸಲಿರುವ ಚುನಾವಣಾ ಚಾಣಕ್ಯ
ರಾಷ್ಟ್ರೀಯ

ಮಧ್ಯಪ್ರದೇಶ: ಕಾಂಗ್ರೆಸ್ ಪರ ಕಾರ್ಯತಂತ್ರ ರೂಪಿಸಲಿರುವ ಚುನಾವಣಾ ಚಾಣಕ್ಯ

ಸದ್ಯದ ಮಟ್ಟಿಗೆ ಅಧಿಕಾರ ಕಳೆದುಕೊಂಡು ಗಾಯಗೊಂಡ ಹುಲಿಯಂತಾಗಿರುವ ಕಾಂಗ್ರೆಸ್, ತಮ್ಮ ಈ ಅವಸ್ಥೆಗೆ ಕಾರಣವಾದ ಜ್ಯೋತಿರಾದಿತ್ಯ ಸಿಂಧಿಯಾ ಅವರ ತವರಾದ ಗ್ವಾಲಿಯರ್ನಲ್ಲೇ ವಾರ್ ರೂಮ್ ಒಂದನ್ನು ರೂಪಿಸಿದೆ.

ಪ್ರತಿಧ್ವನಿ ವರದಿ

ಭಾರತದ ರಾಜಕಾರಣದಲ್ಲಿ ಚುನಾವಣಾ ಚಾಣಕ್ಯನೆಂದೇ ಪ್ರಖ್ಯಾತರಾಗಿರುವ ಪ್ರಶಾಂತ್‌ ಕಿಶೋರ್‌ ಅವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪರ ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ. ಮುಂದಿನ ನಾಲ್ಕು ತಿಂಗಳ ಒಳಗೆ 24 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಪ್ರಶಾಂತ್‌ ಕಿಶೋರ್‌ ಅವರು ಚಕ್ರವ್ಯೂಹ ಹೆಣೆಯಲಿದ್ದಾರೆ ಎಂಬ ಸುದ್ದಿ ಈಗ ಖಚಿತವಾಗಿದೆ.

ಮಧ್ಯಪ್ರದೇಶದಲ್ಲಿ 15 ವರ್ಷಗಳ ವನವಾಸ ಅನುಭವಿಸಿದ ಕಾಂಗ್ರೆಸ್‌ ಕಮಲ್‌ನಾಥ್‌ ನೇತೃತ್ವದಲ್ಲಿ ಅಧಿಕಾರ ಪಡೆಯುವಲ್ಲಿ ಸಫಲವಾಯಿತು. ಆದರೆ, ಮಾರ್ಚ್‌ನಲ್ಲಿ ನಡೆದ ಮಹತ್ತರವಾದ ಬದಲಾವಣೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್‌ನ ಯುವ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ 22 ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಸದ್ಯದ ಮಟ್ಟಿಗೆ ಅಧಿಕಾರ ಕಳೆದುಕೊಂಡು ಗಾಯಗೊಂಡ ಹುಲಿಯಂತಾಗಿರುವ ಕಾಂಗ್ರೆಸ್‌, ತಮ್ಮ ಈ ಅವಸ್ಥೆಗೆ ಕಾರಣವಾದ ಜ್ಯೋತಿರಾದಿತ್ಯ ಸಿಂಧಿಯಾ ಅವರ ತವರಾದ ಗ್ವಾಲಿಯರ್‌ನಲ್ಲೇ ವಾರ್‌ ರೂಮ್‌ ಒಂದನ್ನು ರೂಪಿಸಿದೆ. ಜಾಹಿರಾತು ಹಾಗೂ ಪ್ರಚಾರಕ್ಕಾಗಿ ಮೂರು ಸಂಸ್ಥೆಗಳೊಂದಿಗೆ ಈಗಾಗಲೇ ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

24 ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ 16 ಸ್ಥಾನಗಳು ಗ್ವಾಲಿಯರ್‌ ಮತ್ತು ಚಂಬಲ್‌ ಪ್ರದೇಶಗಳಿಗೆ ಸೇರಿವೆ. ಈ ಪ್ರದೇಶಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಭಾವ ಹೆಚ್ಚಾಗಿದ್ದು, ಇಲ್ಲಯೇ ಅತೀ ಹೆಚ್ಚು ಸ್ಥಾನಗಳನ್ನು ಪಡೆಯಬೇಕೆಂಬುದು ಕಾಂಗ್ರೆಸ್‌ ಬಯಕೆ.

ಇನ್ನು ಕರೋನಾ ಸಂಕಷ್ಟದಲ್ಲಿ ಬಾಧಿತರಾಗಿರುವ ಜನತೆಗೆ ಸರ್ಕಾರದ ವಿರುದ್ದವಿರುವ ಕೋಪವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಮತ್ತೆ ಅಧಿಕಾರಕ್ಕೇರುವ ಕಾರ್ಯತಂತ್ರ ಕಾಂಗ್ರೆಸ್‌ ಪಕ್ಷದ್ದು.

ಇನ್ನುಳಿದಂತೆ, ಆಯಾ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ವಿಶ್ವಾಸಿಯಾಗಿರುವ ವ್ಯಕ್ತಿಗಳನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು, ಸಿಂಧಿಯಾ ಹಾಗೂ ಬಿಜೆಪಿಯ ಬೆಂಬಲಿಗರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸದಂತೆ ಸಾಕಷ್ಟು ಎಚ್ಚರಿಕೆ ವಹಿಸುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿದೆ.

ಇವೆಲ್ಲದರ ಮೇಲೆ, ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಮಧ್ಯಪ್ರದೇಶದಲ್ಲಿ ಯಾವ ರೀತಿ ಮೋಡಿ ಮಾಡುತ್ತಾರೆ? ಅವರ ಕಾರ್ಯತಂತ್ರದಿಂದ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೃಪೆ: ನ್ಯೂಸ್‌ 18

Click here Support Free Press and Independent Journalism

Pratidhvani
www.pratidhvani.com