ಒಂದು ವರ್ಷ ಪೂರೈಸಿದ ಮೋದಿ 2.O ಸರ್ಕಾರ : ಇದು ಮೋದಿ ಮಾಡಿದ ಸಾಧನಗೆಳ ಪಟ್ಟಿ..!
SANJAY KANOJIA
ರಾಷ್ಟ್ರೀಯ

ಒಂದು ವರ್ಷ ಪೂರೈಸಿದ ಮೋದಿ 2.O ಸರ್ಕಾರ : ಇದು ಮೋದಿ ಮಾಡಿದ ಸಾಧನಗೆಳ ಪಟ್ಟಿ..!

ಮೋದಿ 2.0 ನೇತೃತ್ವದ ಸರಕಾರಕ್ಕೆ ಒಂದು ವರ್ಷ ಪೂರೈಸಿದೆ. ಈ ಒಂದು ವರುಷದಲ್ಲಿ ಮೋದಿ ಸರಕಾರ ಹಲವು ಏಳು ಬೀಳುಗಳನ್ನ ಕಂಡಿವೆ. ಕೆಲವೊಂದು ಪ್ರಮುಖ ನಿರ್ಧಾರಗಳು ಸಾಕಷ್ಟು ವಿವಾದವೂ ಎಬ್ಬಿಸಿದ್ದವು. ಹಾಗಿದ್ರೆ ಮೋದಿ 2.0 ಸರಕಾರ ಒಂದು ವರುಷದಲ್ಲಿ ಮಾಡಿದ ಸಾಧನೆಯೇನು? ಅನ್ನೋದರ ಸುತ್ತ ಒಂದು ಹೊರನೋಟ.

ಆಶಿಕ್‌ ಮುಲ್ಕಿ

ನಾನು ನರೇಂದ್ರ ದಾಮೋದರ ದಾಸ್ ಮೋದಿ. ಹೀಗೆನ್ನುತ್ತಲೇ, ಸಂವಿಧಾನ ಆಶಯಗಳಿಗೆ ಬದ್ಧವಾಗಿರುತ್ತೇನೆ ಮತ್ತು ಈಶ್ವರನ ಮೇಲೆ ಆಣೆ ಮಾಡಿ ಎರಡನೇ ಅವಧಿಯ ಅಧಿಕಾರ ಸ್ವೀಕರಿಸಿಕೊಂಡವರು ಮಾನ್ಯ ಪ್ರಧಾನಿ ಮೋದಿಯವರು. ಮೇ23ಕ್ಕೆ ಮೋದಿ ಎರಡನೇ ಅವಧಿಯ ಅಧಿಕಾರಕ್ಕೆ ಬಂದು ಭರ್ತಿ ಒಂದು ವರ್ಷ. ದೇಶದ ಮುಖ್ಯವಾಹಿನಿಗಳು ಮೋದಿಯ ಎರಡನೇ ಆಗಮನವನ್ನು ಮೋದಿ 2.O ಎಂದು ಸಂಭ್ರಮಿಸಿದವು. 2014ರಲ್ಲಿ ಸಮುದ್ರದಲ್ಲಿ ಭೋರ್ಗರೆವ ಅಲೆಗಳಂತೆ ರಾಜಕೀಯ ಪಡಸಾಲೆಯಲ್ಲಿ ದಾಂಗುಡಿ ಇಟ್ಟ ಮೋದಿ ಅನೂಹ್ಯ ಗೆಲುವಿನೊಂದಿಗೆ ಚುಕ್ಕಾಣಿ ಹಿಡಿದು ಕೂತರು. ಮೊದಲ ಅವಧಿಯಲ್ಲಿ ಮೋದಿ ಮಾಡಿದ್ದೇನು ಅನ್ನೋದನ್ನ ಮತ್ತೆ ಎಳೆಯೆಳೆಯಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ. ಚುನಾವಣೆಯ ನೆಕ್ ಪಾಯಿಂಟ್‌ ನಲ್ಲಾದ ಪುಲ್ವಾಮ ದಾಳಿ ಮತ್ತೊಮ್ಮೆ ದೇಶಾದ್ಯಂತ ಮೋದಿ ನಾಮ ಜಪಿಸುವಂತೆ ಮಾಡಿತು. ಪರಿಣಾಮ, ಮೇ 23 2019ರಂದು ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಸಿಂಹವಿಷ್ಟರದಲ್ಲಿ ಕೂತರು.

ಇಂದಿಗೆ ಮೋದಿ 2.O ಸರ್ಕಾರಕ್ಕೆ ಒಂದರ ಸಂಭ್ರಮ. 303 ಸದನ ಸಂಖ್ಯಾಬಲ ಹೊಂದಿರುವ ಮೋದಿ ಸರ್ಕಾರ ಬೆಟ್ಟದಷ್ಟು ಭರವಸೆಗಳನ್ನು ಎರಡನೇ ಅವಧಿಯಲ್ಲೂ ಹೊತ್ತು ತಂದಿತ್ತು. ಆದರೆ ಇದು 2014ನ್ನು ಮತ್ತೆ ಪ್ರತಿಧ್ವನಿಸುವಂತೆ ಮಾಡಿದೆ. ವಾಸ್ತವಿಕವಾಗಿ 2014ರಲ್ಲಿ ನೋಟ್‌ ಬ್ಯಾನ್ ಮಾಡಿ ಮೋದಿ ಕೈ ಸುಟ್ಟುಕೊಂಡಿದ್ದರು. ಆದರೆ ಆ ಬಳಿಕ ಅದಕ್ಕೆ ತೇಪೆ ಹಚ್ಚಿದ ಪರಿ ಇಡೀ ದೇಶ ನೋಡಿದೆ. ಹೀಗಾಗಿ ಮೊದಲ ಅವಧಿಯಲ್ಲಿ ಮೋದಿ ಎಡವಟ್ಟುಗಳ ಸರದಾರನಾಗಿ ಹೊರಮ್ಮಿದರು. ಆದರೂ 60 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಮಾತಿನ ಬಂಡವಾಳ ಮಾಡಿಕೊಂಡಿದ್ದ ಮೋದಿ ಐದು ವರ್ಷದಲ್ಲಿ ಏನು ಮಾಡಲು ಸಾಧ್ಯ ಎಂದು, ಮತ್ತೊಮ್ಮೆ ಆರಿಸಿದರೆ ಭಾರತ ʻವಿಶ್ವ ಗುರುʼ ಎಂಬ ಪರಿಕಲ್ಪನೆಯ ಆಸೆಯನ್ನು ಹುಟ್ಟಿಸಿದರು. ದೇಶವಾಸಿಗಳು ಮಗದೊಮ್ಮೆ ಮೋದಿಯನ್ನು ನಂಬಿದರು. ಪರಿಣಾಮ ಇಂದು ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದ್ದಾರೆ ಮೋದಿ. ಕಳೆದ ಒಂದು ವರ್ಷದ ಅವಧಿಯಲ್ಲಿ ಮೋದಿ ಮಾಡಿದ್ದು ಬೆಟ್ಟದಷ್ಟು ಸಾಧನೆ.

2019ರಲ್ಲಿ ಗದ್ದುಗೆ ಹಿಡಿದ ಮೋದಿ ಕೆಲವೊಂದು ನಿರ್ಣಾಯಕ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾದರು. ಚೊಚ್ಚಲವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಿಧಿ 370 ಮತ್ತು ವಿಧಿ 35(ಎ) ಕಾಯ್ದೆಯನ್ನು ತೆಗೆದು ಹಾಕಿದರು. ಈ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನ ಬದ್ಧ ವಿಶೇಷ ಸ್ಥಾನಮಾನವನ್ನು ಇಲ್ಲವಾಗಿಸಿದರು. ಆ ಬಳಿಕ ಲಡಾಕ್, ಜಮ್ಮು ಮತ್ತು ಕಾಶ್ಮೀರವನ್ನು ಮೂರಾಗಿ ವಿಂಗಡಿಸಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದರು.

ಅದಾಗಿ ಮೋದಿಯ ಕಣ್ಣು ಬಿದ್ದಿದ್ದು ತ್ರಿವಳಿ ತಲಾಖ್ ಮಸೂದೆಯ ಮೇಲೆ. ಭಾರತೀಯ ಮುಸಲ್ಮಾನರ ಧಾರ್ಮಿಕ ಶಿಷ್ಟಾಚಾರವಾಗಿದ್ದ ತ್ರಿವಳಿ ತಲಾಖ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಕಾಯ್ದೆಯಾಗಿಸಿಕೊಂಡರು. ಈ ಮೂಲಕ ತ್ರಿವಳಿ ತಲಾಖ್ ಕಾನೂನು ಬಾಹಿರವಾಯ್ತು. ಇದು ಮೋದಿಗೆ ಆರಂಭದಲ್ಲಿ ಕೊಂಚ ಮಟ್ಟಿನ ಶ್ರೇಯ ತಂದುಕೊಟ್ಟಿತು. ಇದರ ಜತೆ ಜತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಮುಂತಾವನ್ನೆಲ್ಲಾ ತಂದು ಆರಂಭದಲ್ಲಿ ಮೋದಿ ಮಿಂಚಿದರು.

ಈತನ್ಮಧ್ಯೆ, ಆರಂಭಿಕ 100 ದಿನಗಳ ಅವಧಿಯಲ್ಲೇ 7 ದೇಶಗಳಿಗೆ ಭೇಟಿಕೊಟ್ಟು ಸಂಬಂಧ ಕುದುರಿಸಿಕೊಂಡರು ಮೋದಿ. ಆ ಬಳಿಕ ಮೋದಿಯ ಕಣ್ಣು ನೇರವಾಗಿ ಬಿದ್ದಿದ್ದು ದೇಶದ ಹಣದ ಹೊಳೆ ಹರಿಯುವ ಬ್ಯಾಂಕುಗಳ ಮೇಲೆ. 10 ರಾಜ್ಯದ ಅಧೀನದಲ್ಲಿರುವ ಬ್ಯಾಂಕುಗಳನ್ನು ರಾಷ್ಟ್ರೀಯ ಮನ್ನಣೆ ದೊರಕಿದ ಬ್ಯಾಂಕುಗಳ ಜೊತೆ ಕೂಡಿಸಿದರು. ನಮ್ಮ ಕರ್ನಾಟಕದ ವಿಜಯ ಬ್ಯಾಂಕ್ ನಂಥಾ ಹಲವು ವರ್ಷದದ ಇತಿಹಾಸವಿರುವ ಬ್ಯಾಂಕ್ಗಳ ಕದಕ್ಕೆ ಬೀಗ ಜಡಿಯಲಾಯ್ತು. ಇದರಿಂದ ಜನರಿಗೆ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ದೊರಕಲಿದೆ ಎಂಬುದಾಗಿತ್ತು ಮೋದಿಯ ವಾದ. ಆದರೆ ಇದರ ಪರಿಣಾಮವೇನು ಎಂಬುದಕ್ಕೆ ನಂತರ ದಿನಗಳಲ್ಲಿ ದೇಶದ ಆರ್ಥಿಕತೆ ನಡೆದ ದಾರಿಯೇ ಸಾಕ್ಷಿ.

ಆರ್ಥಿಕತೆ ಮೋದಿಯ ಈ ಅವಧಿಯಲ್ಲಿ ಈ ಹಿಂದೆ ಎಂದೂ ದೇಶ ಕಂಡು ಕೇಳರಿಯದ ರೀತಿಯಲ್ಲಿ ಮಕಾಡೆ ಮಲಗಿದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ಹಣದ ಕೊರತೆ ಎದ್ದಿದೆ. ಕೆಲವು ಕ್ಷೇತ್ರಗಳಂತೂ ಬಾಗಿಲು ಮುಚ್ಚಿ ಮನೆ ಸೇರಿದೆ. ಜಿಎಸ್ಟಿ ಹೆಚ್ಚಿಸಿದರಾದರೂ ಯಾವ ಪ್ರಯೋಜನಕ್ಕೂ ಬಂದಿಲ್ಲ. ದೇಶದ ಸಾಮಾನ್ಯ ಜನರು ಹೆಚ್ಚಿನ ತೆರಿಗೆಯನ್ನು ಜಿಎಸ್ಟಿ ರೂಪದಲ್ಲಿ ನೀಡಿದ್ದರೂ ಕೂಡ ದೇಶದ ಆರ್ಥಿಕತೆ ತೂತು ಮಡಿಕೆಯಾಯ್ತು. ಎಷ್ಟರ ಮಟ್ಟಿಗೆ ಹಣಕಾಸಿನ ವಿಚಾರದಲ್ಲಿ ಮೋದಿ ಸರ್ಕಾರ ದಿವಾಳಿ ಎದ್ದು ಹೋಗಿತ್ತು ಎಂದರೆ, ಭೇರೆ ವಿಧಿಯಿಲ್ಲದೆ ಆರ್ಬಿಐನಲ್ಲಿದ್ದ ಮೀಸಲು ನಿಧಿಗೂ ಕನ್ನಾ ಹಾಕಿತು. ಆರ್ಬಿಐ ಮೀಸಲು ನಿಧಿಯಿಂದ ಬರೋಬ್ಬರಿ 1.50 ಲಕ್ಷ ಕೋಟಿ ರೂಪಾಯಿಯನ್ನು ಪಡೆದುಕೊಂಡಿತು. ಆದರೆ 2019ರಲ್ಲಿ ಮೋದಿ ಮೊದಲ ಅವಧಿಯನ್ನು ಪೂರೈಸುವ ಹೊತ್ತಿಗೆ ಮೋದಿ ಸರ್ಕಾರ ಮಾಡಿದ್ದು ಸರಿಸುಮಾರು 82 ಲಕ್ಷ ಕೋಟಿ ರೂಪಾಯಿ ಮೊತ್ತದ ಸಾಲವನ್ನು ಎಂಬುದನ್ನು ಮಾತ್ರ ಮರೆಯದಿರಿ.

ಎರಡನೇ ಅವಧಿಯಲ್ಲಿ ಮೋದಿ ಸರ್ಕಾರ CAA, NRC ಹಾಗೂ NPR ಕಾಯ್ದೆಯನ್ನು ಜಾರಿಗೆ ತರಲು ಹೊರಟಿದ್ದು ಇಡೀ ದೇಶದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಭಾರತೀಯ ನಾಗರೀಕರ ಪೌರತ್ವವನ್ನೇ ಅಣಕಿಸಿದ ಈ ನಿರ್ಧಾರಕ್ಕೆ ದೇಶದ ಬಹುಪಾಲು ಜನರು ಒಟ್ಟಾಗಿ ಸಿಟ್ಟಾಗಿ ನಿಂತರು. ದೆಹಲಿಯಲ್ಲಿ ಗಲಭೆಗಳಾದವು. ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡ ಪ್ರತಿರೋಧ, ನೋಡ ನೋಡುತ್ತಲೇ ದೇಶವ್ಯಾಪಿ ಕಾಳ್ಗಿಚ್ಚಿನಂತೆ ಹರಡಿದವು. ಅಲ್ಲಲ್ಲಿ ಪ್ರತಿಭಟನಾ ಸಭೆಗಳಾದವು. ಸಂವಿಧಾನದ ಪೀಠಿಕೆ ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಧ್ವನಿಸಿದವು.

ಆದರೂ ಈ ನಿರ್ಧಾರದಿಂದ ಒಂದಿಂಚೂ ಆಚೆ ಸರಿಯದ ಮೋದಿ ಸರ್ಕಾರ ಈ ಕಾಯ್ದೆಯನ್ನು ಜಾರಿ ಮಾಡಿಯೇ ತೀರೆವು ಎಂಬ ಬಹಿರಂಗ ಶಪಥ ಮಾಡಿಕೊಂಡಿದ್ದರು. ಆದರೆ ನಿಪುಣರು ಇದು ದೇಶದ ಅಲ್ಪಾಸಂಖ್ಯಾತರ ಪೌರತ್ವವನ್ನು ಪ್ರಶ್ನಿಸುತ್ತಿದೆ. ಇದು ಸಂವಿಧಾನ ವಿರೋಧಿ ಎಂಬ ಮಾತನ್ನು ಸ್ಪಷ್ಟವಾಗಿ ಮತ್ತು ಆಧಾರ ಸಹಿತ ವಿವರಿಸಿದರು. ಆದರೂ ಮೋದಿ ಸರ್ಕಾರ ಈ ನಿರ್ಧಾರವನ್ನು ಕೈಬಿಡಲು ಸಿದ್ಧರಿರಲಿಲ್ಲ. ದಿನ ಬೆಳಗಾದರೆ ಹಳ್ಳಿ-ಹಳ್ಳಿಗಳೂ ಕೂಡ ಪ್ರತಿಭಟನೆಯ ಘೋಷಣೆ ಕೂಗೋದಕ್ಕೆ ಶುರುಮಾಡಿತು. ಆದರೆ ಈ ನಡುವೆ ಮೋದಿಯ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವಂತೆ ದೇಶಕ್ಕೆ ವಕ್ಕರಿಸಿದ್ದು ಕರೋನಾ ಮಹಾಮಾರಿ.

ದೆಹಲಿಯಲ್ಲಿ ಗೃಹ ಇಲಾಖೆಯ ಆದೇಶದ ಮೇರೆಗೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು. ನಾವೂ ಕಂಡಿದ್ದೇವೆ ಕೆಲವು ದೃಶ್ಯಗಳನ್ನು. ಮಹಿಳೆಯರನ್ನು ಎಳೆದಾಡಿದರು. ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿದರು. ಶಾಹೀನ್ ಭಾಗ್ ಪ್ರತಿಭಟನಾಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ಮಾಡಲಾಯ್ತು. ಪರಿಣಾಮ ಅಂತರಾಷ್ಟ್ರೀಯ ಮಾಧ್ಯಮಗಳು ಭಾರತದತ್ತ ಮಗದೊಮ್ಮೆ ಕಣ್ಣಾಯಿಸುವಂತೆ ಮಾಡಿದರು. ಇದನ್ನು ತೇಪೆ ಹಚ್ಚಲು ʼನಮಸ್ತೆ ಟ್ರಂಪ್ʼ ಕಾರ್ಯಕ್ರಮ ನಡೆಸಲಾಯ್ತು. ಆದರೂ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ದೆಹಲಿ ಗಲಭೆಯ ಚಿತ್ರಣಗಳು ರಾರಾಜಿಸಿದವು. ಈ ಮಧ್ಯೆ ಮೋದಿ ಮಾಡಿದ ಬಹುದೊಡ್ಡ ಸಾಧನೆ ಎಂದರೆ, ಸ್ಲಂಗಳಿಗೆ ಗೋಡೆ ಕಟ್ಟಿ ವಿಶ್ವದ ದೊಡ್ಡಣ್ಣನ ಕಣ್ಣಿಂದ ದೇಶದ ನೈಜ ಸ್ಥಿತಿಗತಿಯನ್ನು ಮರೆಮಾಚಿ, ʻಇದರ್ ಸಬ್ ಚಂಗಾಸಿʼ (ಇಲ್ಲಿ ಎಲ್ಲವೂ ಚೆನ್ನಾಗಿದೆ) ಎಂದಿದ್ದು.

ಒಂದು ಕಡೆ CAA, NRC ಹಾಗೂ NPR ಕಾಯ್ದೆಯನ್ನು ವಿರೋಧಿಸಿ ಜನಚಳುವಳಿಗಳು ಆಗುತ್ತಿದ್ದರೆ, ಇತ್ತ ಮೋದಿ ಸರ್ಕಾರ ಇದ್ಯಾವದನ್ನೂ ಲೆಕ್ಕಿಸಿದೆ ಕಾಯ್ದೆಯನ್ನು ಜಾರಿ ಮಾಡುವ ಕೆಲಸದಲ್ಲಿತ್ತು. ಆದರೆ ಕರೋನಾ ಆಗಮನ ಎಲ್ಲವನ್ನೂ ಹಳಿ ತಪ್ಪಿಸಿತು. ಇದ್ದಕ್ಕಿದ್ದ ಹಾಗೆ ಇಡೀ ದೇಶ ಸ್ತಬ್ಧವಾಯಿತು. ಜನರು ಮನೆ ಬಿಟ್ಟು ಆಚೆ ಬರೋದನ್ನೆ ನಿಲ್ಲಿಸಿದರು. ಕರೋನಾ ಮೆಲ್ಲನೆ ಜನರ ಕತ್ತು ಹಿಸುಕೋದಕ್ಕೆ ಶುರುಮಾಡಿತು. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಯಿತು. ಸದ್ಯಕ್ಕೆ 1 ಲಕ್ಷಕ್ಕೂ ಹೆಚ್ಚಿನ ಸೋಂಕಿತರು ದೇಶದಲ್ಲಿದ್ದಾರೆ. ಲಾಕ್ ಡೌನ್ ಜನರ ಜೀವನ ಶೈಲಿಯನ್ನೇ ಅಲುಗಾಡಿಸಿತು. ಪರಿಣಾಮ ಪ್ರಧಾನಿ ಮೋದಿ ಊಹಿಸಲೂ ಸಾಧ್ಯವಾಗದ ಅನೂಹ್ಯ ಮಟ್ಟಕ್ಕೆ ದೇಶ ಬಂದು ನಿಂತಿತು. ಆರ್ಥಿಕತೆ ಹಳ್ಳ ಹಿಡಿಯಿತು. ಈ ನಡುವೆ ಮೋದಿ 20 ಲಕ್ಷ ಕೋಟಿ ಮೊತ್ತದ ‘ಆತ್ಮನಿರ್ಭರ್ ಭಾರತʼ ಪ್ಯಾಕೇಜ್ ಘೋಷಿಸಿ, ದೇಶವಾಸಿಗಳ ಮನ ಗೆಲ್ಲಲು ಮುಂದಾದರು. ಆದರೆ, ಬಹುತೇಕ ಜನರು ಎರಡನೇ ಅವಧಿಯ ಮೊದಲ ಸಂವತ್ಸರ ಹೊತ್ತಿಗಷ್ಟರಲ್ಲೇ ಹೈರಾಣಾಗಿ ಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆಗಳು ಇದಕ್ಕೆ ಹಿಡಿದಿರುವ ಕೈಗನ್ನಡಿ.

ಇವಿಷ್ಟನ್ನು ಒಂದು ಕಡೆ ತಳ್ಳಿ, ಮೋದಿಯ ಕಳೆದ ಒಂದು ವರ್ಷದ ಮತ್ತೊಂದು ಬೃಹತ್ ಸಾಧನೆ ಎಂದರೆ, ಆಪರೇಷನ್ ಕಮಲ ಯಶಸ್ವಿಯಾಗಿ ಮಾಡಿದ್ದು. ಜನಾದೇಶ ಇಲ್ಲದಿದ್ದರು ಕೆಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದ್ದು. ದೂರ ಹೋಗುವ ಅಗತ್ಯವಿಲ್ಲ. ಕರ್ನಾಟಕದಲ್ಲೇ ನಡೆದ ರಾಜಕೀಯ ಪಲ್ಲಟಗಳು ನಾವೆಲ್ಲಾ ನೋಡಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಜೆಪಿ, ಬುಡ ಸಮೇತ ಕಿತ್ತೆಸೆಯಿತು. ರಾತ್ರೋ ರಾತ್ರಿ ಕುದುರೆ ವ್ಯಾಪಾರ ಮಾಡಿದ ಮೋದಿ ಹಾಗೂ ಬಿಜೆಪಿ ಮಧ್ಯಪ್ರದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕೂರಿಸಿತು. ಶಾಸಕರ ಜೀಬಿಗೆ ಕೋಟಿ ಕೋಟಿ ಚೆಲ್ಲಿ ತಮ್ಮ ಪಾಳಯಕ್ಕೆ ಎಳೆದುಕೊಂಡರು. ಜನಾದೇಶವನ್ನು ಧಿಕ್ಕರಿಸಿ ಸರ್ಕಾರ ರಚಿಸಿದರು.

ಹೀಗೆ ಕಳೆದೊಂದು ವರ್ಷದಲ್ಲಿ ಮೋದಿ ಬೆಟ್ಟದಷ್ಟು ಸಾಧನೆ ಮಾಡಿದ್ದಾರೆ. ಅದ್ರಲ್ಲೂ ಕರೋನಾ ವಿಷಮ ಪರಿಸ್ಥಿತಿಯಲ್ಲಿ ಮೋದಿ ನಡೆದುಕೊಂಡ ರೀತಿ ನಿಜಕ್ಕೂ ಇತರೆ ರಾಜಕಾರಣಿಗಳಿಗೆ ಮಾದರಿ. ಅತ್ತ ಕಾಂಗ್ರೆಸ್ ಮೋದಿಯನ್ನು ಖೆಡ್ಡಾಕೆಕೆಡವಲು ನೋಡುತ್ತಿರುವುದರ ಮಧ್ಯೆ ದೇಶವಾಸಿಗಳು ಮನದ ನೋವಿಗೆ ಮಿಡಿದ ಮೋದಿ ದೇಶದ ಪ್ರಧಾನಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಇರುವವರು. ವಾಸ್ತವದಲ್ಲಿ ದೇಶಕ್ಕೆ ಇಂಥಾ ಪ್ರಧಾನಿ ಈವರೆಗೆ ಸಿಕ್ಕಿರಲೇ ಇಲ್ಲ. ಮೋದಿ ಓರ್ವ ಪ್ರಧಾನಿ ಮಾತ್ರವಲ್ಲ. ಬದಲಿಗೆ ದೇಶದ ಜನರ ಪಾಲಿನ ಆಶಾಕಿರಣ.

Click here Support Free Press and Independent Journalism

Pratidhvani
www.pratidhvani.com