ಭಾರತ vs ನೇಪಾಳ : ಕಾಲಾಪಾನಿ ಬಿಕ್ಕಟ್ಟು ಉದ್ಭವಿಸಿದ್ದು ಹೇಗೆ.?
ರಾಷ್ಟ್ರೀಯ

ಭಾರತ vs ನೇಪಾಳ : ಕಾಲಾಪಾನಿ ಬಿಕ್ಕಟ್ಟು ಉದ್ಭವಿಸಿದ್ದು ಹೇಗೆ.?

ರಾಜತಾಂತ್ರಿಕವಾಗಿ ನೇಪಾಳ ಹಾಗೂ ಭಾರತದ ನಡುವೆ ಉತ್ತಮ ಸಂಪರ್ಕವಿದೆ. ಕೊಡು-ಕೊಳ್ಳುವಿಕೆ ಸಂಬಂಧವಿದೆ. ಹೀಗಿರುವಾಗಲೂ ಈ ಬಿಕ್ಕಟ್ಟು ಹೇಗೆ ಉದ್ಭವಿಸಿತು ಅನ್ನೋದು ಕುತೂಹಲದ ಸಂಗತಿ. ಈ ಕಾಲಾಪಾನಿ ಬಿಕ್ಕಟ್ಟು ನೇಪಾಳ ಹಾಗೂ ಭಾರತದ ನಡುವಿನದ್ದಾದರೂ ಕೂಡ ಚೀನಾವೂ ಇಲ್ಲಿ ಮಹತ್ವದ ಪಾತ್ರವಹಿಸಿದೆ.

ಆಶಿಕ್‌ ಮುಲ್ಕಿ

ಇತ್ತೀಚೆಗೆ ಭಾರತ ಹಾಗೂ ನೇಪಾಳದ ನಡುವೆ ಬಿಕ್ಕಟ್ಟು ಉಂಟಾಗಿದೆ. ಇದು ಕಾಲಾಪಾನಿ ಎಂಬ ಭೂಪ್ರದೇಶದ ಕಾರಣಕ್ಕಾಗಿರುವ ಬಿಕ್ಕಟ್ಟು. ಉಭಯ ರಾಷ್ಟ್ರಗಳು ಕೂಡ ಕಾಲಾಪಾನಿ ತಮ್ಮದೆಂದು ವಾದಿಸುತ್ತಿರುವುದೇ ಇಲ್ಲಿನ ಕಿತ್ತಾಟ. ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರ ನಕಾಶೆಯೊಂದನ್ನು ಬಿಡುಗಡೆಗೊಳಿಸಿತ್ತು. ಈ ವೇಳೆ ಕಾಲಾಪಾನಿಯನ್ನು ಉತ್ತಾಖಂಡ್‌ನ ಭಾಗವೆಂದು ಘೋಷಿಸಿತ್ತು.

ಅಂದಹಾಗೆ, ನೇಪಾಳ ಭಾರತದ ಆಪ್ತ ರಾಷ್ಟ್ರ. ಹಿಂದೂ ರಾಷ್ಟ್ರ ಎಂದು ಘೋಷಿಸಿಕೊಂಡ ಜಗತ್ತಿನ ಏಕೈಕ ರಾಷ್ಟ್ರ ನೇಪಾಳ. ಇದು ಭಾರತದ ಹಾಗೂ ನೇಪಾಳದ ನಡುವೆ ಗಟ್ಟಿಯಾದ ಒಂದು ಭಾಂಧವ್ಯ ಬೆಸೆಯಿತು. ಅಲ್ಲದೇ ರಾಜತಾಂತ್ರಿಕವಾಗಿಯೂ ನೇಪಾಳ ಹಾಗೂ ಭಾರತದ ನಡುವೆ ಉತ್ತಮ ಸಂಪರ್ಕವಿದೆ. ಕೊಡುಕೊಳ್ಳುವಿಕೆ ಸಂಬಂಧವಿದೆ. ಹೀಗಿರುವಾಗಲೂ ಈ ಬಿಕ್ಕಟ್ಟು ಹೇಗೆ ಉದ್ಭವಿಸಿತು ಅನ್ನೋದು ಕುತೂಹಲದ ಸಂಗತಿ. ಈ ಕಾಲಾಪಾನಿ ಬಿಕ್ಕಟ್ಟು ನೇಪಾಳ ಹಾಗೂ ಭಾರತದ ನಡುವಿನದ್ದಾದರೂ ಕೂಡ ಚೀನಾವೂ ಇಲ್ಲಿ ಮಹತ್ವದ ಪಾತ್ರವಹಿಸಿದೆ. ಈ ಕಾಲಾಪಾನಿ ಭಾರತ, ನೇಪಾಳ ಹಾಗೂ ಚೀನಾ ಗಡಿಗಳು ಸೇರುವ ಪ್ರದೇಶವಾಗಿರೋದರಿಂದ ಈ ಗಡಿ ಬಿಕ್ಕಟ್ಟು ಮಹತ್ವ ಪಡೆದುಕೊಂಡಿದೆ.

Image Courtesy / Swarajya
Image Courtesy / Swarajya

ಭಾರತ ರಾಜಕೀಯ ನಕ್ಷೆಯನ್ನು ಬಿಡುಗಡೆಗೊಳಿಸದ್ದ ಕಾರಣ, ಕೆಲವು ದಿನಗಳ ಹಿಂದೆ ಚೀನಾ ಕೂಡ ರಾಜಕೀಯ ನಕಾಶೆಯೊದಂದನ್ನ ಬಿಡುಗಡೆಗೊಳಿಸಿ, ಕಾಲಾಪಾನಿ ಸೇರಿದಂತೆ, ಉತ್ತರಾಖಂಡ್‌ನ ಲಿಂಪಿಯಾಧುರಾ ಹಾಗೂ ಲಿಪುಲೇಖ್‌ ಪ್ರದೇಶಗಳು ತಮ್ಮದೆಂದು ವಾದಿಸುತ್ತಿರುವುದೇ ಈ ಬಿಕ್ಕಟ್ಟಿನ ಮೂಲ ಸಮಸ್ಯೆ.

ಆದರೆ ಇಲ್ಲಿ ನೇಪಾಳ ಹಾಗೂ ಚೀನಾ ಒಂದಾಗಿ ಭಾರತದ ವಿರುದ್ಧ ನಿಂತಂತಿದೆ. ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಚೀನಾ ನೇಪಾಳವನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆಯಾ ಎಂಬುದು. ಯಾಕೆಂದರೆ ಹಲವು ಜಾಗತಿಕ ವಿಚಾರದಲ್ಲಿ ಭಾರತ ಚೀನಾವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅತ್ತ ಭೂತಾನ್‌, ಭಾರತ ಹಾಗೂ ಚೀನಾ ಗಡಿ ಹಂಚಿಕೊಂಡಿರುವ ದೊಕ್ಲಾಮ್‌ ಬಿಕ್ಕಟ್ಟಿನಲ್ಲಿ ಭಾರತ ಭೂತಾನ್‌ ಪರವಹಿಸಿ ಚೀನಾವನ್ನು ಪೇಚಾಡುವಂತೆ ಮಾಡಿತ್ತು. ಇದು ಉಭಯ ರಾಷ್ಟ್ರಗಳ ಮಧ್ಯೆ ಕಂದಕ ಸೃಷ್ಟಿಸಿತು. ಹೀಗಾಗಿ ಚೀನಾ ಈಗ ನೇಪಾಳವನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆಯಾ ಎಂಬ ಸಂಶಯ ದಟ್ಟವಾಗಿದೆ. ಅಷ್ಟಕ್ಕೂ ಏನಿದು ಕಾಲಾಪನಿ..? ಈ ವಿಷಯದ ವಾಸ್ತವವೇನು.?

1960ರಲ್ಲಿ ಶುರುವಾದ ಕಾಲಾಪಾನಿ ವಿವಾದ.!

1960ರಿಂದಲೇ ಕಾಲಾಪಾನಿಗಾಗಿ ಭಾರತ ಹಾಗೂ ನೇಪಾಳದ ನಡುವೆ ತಿಕ್ಕಾಟ ನಡೆಯುತ್ತಿತ್ತು. 370 ಚ.ಕಿ.ಮೀ ಹೊದಿರುವ ಭೂ ಪ್ರದೇಶವಾಗಿದೆ ಕಾಲಾಪಾನಿ. ಈ ಪ್ರದೇಶ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸರಿಂದ ನಿಯಂತ್ರಿಸಲ್ಪಡುತ್ತದೆ. 1962ರಿಂದಲೇ ಇಲ್ಲಿ ಐಟಿಬಿಪಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ರಾಷ್ಟ್ರಗಳ ಗಡಿಯನ್ನು ಸಂದಿಸುವ ಕಾಲಾಪಾನಿ ಮೂರು ರಾಷ್ಟ್ರಗಳಿಗೂ ಮುಖ್ಯವಾಗಿದೆ. ಆದರೆ ಚೀನಾ ಉತ್ತರಾಖಂಡ್‌ನ ಲಿಂಪಿಯಾಧುರಾ ಹಾಗೂ ಲಿಪುಲೇಖ್‌ ಪ್ರದೇಶವೂ ತಮ್ಮದೆಂದು ವಾದಿಸುತ್ತಿರುವುದು ಈಗ ಸಮಸ್ಯೆ ಉಂಟು ಮಾಡಿದೆ. ಯಾಕೆಂದರೆ, ಸದ್ಯ ನೇಪಾಳ ಈ ಗಡಿ ವಿಚಾರದಲ್ಲಿ ಭಾರತದ ವಿರುದ್ಧ ತಿರುಗಿಬಿದ್ದಿರೋದು ಸ್ಪಷ್ಟವಾಗಿದೆ. ಹೀಗಾಗಿ ನೇಪಾಳವನ್ನು ಮುಂದಿಟ್ಟುಕೊಂಡು ಚೀನಾ ಈ ಗಡಿ ಸಮಸ್ಯೆಯಿಂದ ಹೊರಗುಳಿಯುವಂತೆ ಮಾಡಲು ಹೊರಟಂತಿದೆ. ಒಂದು ವೇಳೆ ಹೀಗಾದರೆ ನೇಪಾಳವನ್ನೋ ಸಣ್ಣ ರಾಷ್ಟ್ರವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳಬಹುದು ಎಂಬುವುದು ಚೀನಾದ ಲೆಕ್ಕಚಾರವೂ ಆಗಿರಬಹುದು.

ಇನ್ನು ಭಾರತ ಹಾಗೂ ನೇಪಾಳದ ನಡುವೆ 1,758 ಕಿ.ಮೀ ಉದ್ದದ ತೆರೆದ ಗಡಿಯಿದೆ. ಕಾಲಾಪಾನಿ ಉತ್ತರಾಖಂಡ ಪಿಥೋರ್‌ಗರ್‌ ಜಿಲ್ಲೆಗೆ ಸೇರಿದೆ ಎಂಬುದು ಭಾರತದ ವಾದ. ಆದರೆ ನೇಪಾಳ ಈ ಕಾಲಾಪಾನಿ ತಮ್ಮ ಧಾರ್ಚುಲಾ ಜಿಲ್ಲೆಗೆ ಸೇರುದ್ದು ಎಂದು ವಾದಿಸುತ್ತಿದೆ. ಅಂದಹಾಗೆ, ಟಿಬೆಟ್‌ನಲ್ಲಿರುವ ಪುಣ್ಯ ಯಾತ್ರಾ ಸ್ಥಳ ಕೈಲಾಸ ಮಾನಸ ಸರೋವರ ಭಾರತಕ್ಕೆ ಹತ್ತಿರವಾಗಿರುವ ಕಾಲಾಪಾನಿ ಬೆಟ್ಟಗಳನ್ನು ಸಂಧಿಸುತ್ತವೆ.

Image Courtesy / The Kathmandu Post
Image Courtesy / The Kathmandu Post

ಐತಿಹಾಸಿಕ ಕಾಳಿ ನದಿಯನ್ನು ವಶಪಡಿಸಿಕೊಳ್ಳುವ ಉದ್ದೇಶ.!

1816ರಲ್ಲಿ ನೇಪಾಳ ಹಾಗೂ ಬ್ರಿಟಿಷ್‌ ಇಂಡಿಯಾ ಮಾಡಿಕೊಂಡ ಸುಗೌಲಿ ಒಪ್ಪದಂದ ಪ್ರಕಾರ ಪಶ್ಚಿಮ ಪ್ರದೇಶ ಭಾರತದ್ದು ಎಂದು ಹೇಳಲಾಗಿದೆ. ಆದರೆ, ಒಪ್ಪಂದದಲ್ಲಿ ಕಾಲಾಪನಿ ಬಳಿ ಹರಿಯುವ ಕಾಳಿ ನದಿ ಎಂಬುದನ್ನು ಉಲ್ಲೇಖಿಸಿಲ್ಲದಿರುವುದು ಈಗಿನ ವಿವಾದಕ್ಕೆ ಕಾರಣವಾಗಿದೆ. ನೇಪಾಳದ ವಾದ ಏನೆಂದರೆ, ಕಾಲಾಪಾನಿಯ ಪಶ್ಚಿಮಕ್ಕೆ ಮುಖ್ಯ ಕಾಳಿ ನದಿ ಹರಿಯುತ್ತಿದೆ. ಆದ್ದರಿಂದ ಆ ಪ್ರದೇಶದ ಮೇಲೆ ನಮಗೆ ಹಕ್ಕಿದೆ ಎಂದು ಪ್ರತಿಪಾದಿಸುತ್ತಿದೆ. ಭಾರತ ಕಾಲಾಪಾನಿಯ ಪೂರ್ವವನ್ನು ಗಡಿಯಾಗಿ ಪರಿಗಣಿಸಿರುವುದರಿಂದ ಕಾಲಾಪಾನಿ ತಮ್ಮ ಅವಿಭಾಜ್ಯ ಭಾಗ ಎಂಬುದು ಭಾರತದ ನಿಲುವು.

​ಕಾಲಾಪಾನಿಯ ನಂತರ ಭಾರತ ಮತ್ತು ನೇಪಾಳದ ನಡುವೆ ವಿವಾದ ಸೃಷ್ಟಿಸಿರುವ ಮತ್ತೊಂದು ಪ್ರದೇಶವೆಂದರೇ ಉತ್ತರಾಖಂಡ - ನೇಪಾಳ ಗಡಿಯಲ್ಲಿರುವ ಲಿಪುಲೇಖ್‌ ಪಾಸ್‌. ಪ್ರಾಚೀನ ಕಾಲದಲ್ಲಿ ವ್ಯಾಪಾರ ಹಾಗೂ ಯಾತ್ರಾ ಸ್ಥಳದ ದಾರಿಯಾಗಿ ಲಿಪುಲೇಖ್‌ ಪಾಸ್‌ ಬಳಕೆಯಾಗುತ್ತಿತ್ತು. ಆದರೆ, 1962ರ ಭಾರತ-ಚೀನಾ ಯುದ್ಧದ ಬಳಿಕ ಈ ಹಾದಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕಾಲಾಪಾನಿ, ಲಿಪುಲೇಖ್‌ ನಂತರ ಉತ್ತರಾಖಂಡದ ಲಿಂಪಿಯಾಧುರಾ ಪ್ರದೇಶವನ್ನು ಕೂಡ ನೇಪಾಳ ತನ್ನದೆಂದು ವಾದಿಸುತ್ತಿದೆ.

ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ವಾಜಪೇಯಿ.!

ಆದರೆ, 2000ನೇ ಇಸವಿಯಲ್ಲಿ ಅಂದಿನ ನೇಪಾಳ ಪ್ರಧಾನಿ ಗಿರಿಜಾ ಪ್ರಸಾದ್‌ ಕೋಯರಲಾ ನವದೆಹಲಿಗೆ ಭೇಟಿ ನೀಡಿದಾಗ ಭಾರತದ ಅಂದಿನ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಗಡಿ ವಿವಾದ ಬಗೆಹರಿಸಿಕೊಳ್ಳಲು ಒಪ್ಪಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. 2014ರಲ್ಲಿ ಎರಡು ದೇಶಗಳು ಮತ್ತೆ ಈ ವಿವಾದ ಬಗೆಹರಿಸಿಕೊಳ್ಳಲು ಮುಂದಾದವಾದರೂ ಮತ್ತೆ ಯಾವ ಪ್ರಗತಿಯು ಕಂಡುಬಂದಿಲ್ಲ. 2105ರಲ್ಲಿ ಭಾರತ ಮತ್ತು ಚೀನಾ ಲಿಪುಲೇಖ್‌ ಪಾಸ್‌ ಮೂಲಕ ವ್ಯಾಪಾರಕ್ಕೆ ಮುಂದಾದಾಗ ನೇಪಾಳ ಆಕ್ಷೇಪವನ್ನು ಎತ್ತಿ, ಲಿಪುಲೇಖ್‌ ನನಗೆ ಸೇರಿದ್ದು ಎಂದು ಹೇಳಿತ್ತು.

2019ರಲ್ಲಿ ಕೈಲಾಸ ಮಾನಸ ಸರೋವರ ಹೆದ್ದಾರಿ ಉದ್ಘಾಟನೆ.!

ನವೆಂಬರ್‌ 2019ರಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್‌ ಪ್ರಾಂತ್ಯಗಳ ವಿಭಜನೆ ನಂತರ ಭಾರತ ಹೊಸ ರಾಜಕೀಯ ನಕಾಶೆಯನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ ಕಾಲಾಪಾನಿ ಭಾರತದ ಭಾಗವೆಂದು ತೋರಿಸಲಾಗಿತ್ತು. ಇದರಿಂದ ಕಠ್ಮಂಡು ಮತ್ತೆ ಆಕ್ಷೇಪಣೆ ಸಲ್ಲಿಸಿ ಮಾತುಕತೆಗೆ ಭಾರತವನ್ನು ಆಹ್ವಾನಿಸಿತ್ತು. ಆದರೆ, ಕೇಂದ್ರ ಸರಕಾರ ಮಾತುಕತೆಗೆ ಒಪ್ಪಲಿಲ್ಲ. ಇನ್ನು, ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಧಾರ್ಚುಲಾದಿಂದ ಲಿಪುಲೇಖ್‌ ಪಾಸ್‌ವರೆಗೆ 80 ಕಿ.ಮೀ ಅಂತರದ ಅತ್ಯಾಧುನಿಕ ರಸ್ತೆಯನ್ನು ಉದ್ಘಾಟಿಸಿದ ನಂತರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಈ ರಸ್ತೆ ಕೈಲಾಸ್‌ ಮಾನಸ ಸರೋವರ ಯಾತ್ರೆಗೆ ಹೋಗುವ ಜನರಿಗೆ ವೇಗವಾಗಿ ತಲುಪಿಸುವ ರಸ್ತೆಯಾಗಿದೆ.

Image Courtesy / CNBC
Image Courtesy / CNBC

ಕೆಂಡಾಮಂಡಲವಾದ ಚೀನಾ.!

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟಿಸಿದ ರಸ್ತೆಯ ಬಗ್ಗೆ ನೇಪಾಳ ವಿಷಾಧ ವ್ಯಕ್ತಪಡಿಸಿದ್ದಲ್ಲದೇ, ರಸ್ತೆ ತನ್ನ ದೇಶದೊಳಗೆ ನಿರ್ಮಿಸಲಾಗಿದೆ ಎಂದು ವಾದಿಸಿತ್ತು. ನೇಪಾಳದ ವಿದೇಶಾಂಗ ಸಚಿವಾಲಯ ಹಾಗೂ ನೇಪಾಳ ಸರಕಾರ 1816ರ ಸುಗೌಲಿ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ನೇಪಾಳದ ಪೂರ್ವ ಪ್ರದೇಶದಲ್ಲಿರುವ ಲಿಂಪಿಯಾಧುರಾ, ಕಾಲಾಪಾನಿ ಹಾಗೂ ಲಿಪುಲೇಖ್‌ ಪ್ರದೇಶ ಸೇರಿ ಎಲ್ಲವೂ ತಮಗೆ ಸೇರಿವೆ ಎಂದಿತ್ತು. ಈ ವಾರದ ಆರಂಭದಲ್ಲಿ ನೇಪಾಳ ತನ್ನ ನಕಾಶೆಯನ್ನು ಬಿಡುಗಡೆಗೊಳಿಸಿದ್ದು, ಈ ಮೂರು ಪ್ರದೇಶಗಳನ್ನು ತನ್ನದೆಂದು ತೋರಿಸಿದೆ. ಇದರ ಜೊತೆಗೆ ನೇಪಾಳ ಪ್ರಧಾನಿ ಕೆ ಶರ್ಮಾ ನಮ್ಮ ಪ್ರದೇಶಗಳನ್ನು ವಾಪಾಸ್‌ ತೆಗೆದುಕೊಂಡು ಬರಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದು ಈ ವಿವಾದವನು ಸದ್ಯಕ್ಕೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

Click here Support Free Press and Independent Journalism

Pratidhvani
www.pratidhvani.com