ʼನೂತನ ಮಸೀದಿಗಾಗಿ ಹಿಂದೂ ಬಾಲಕನ ನರಬಲಿʼ ಸುದ್ದಿ ಬಿತ್ತರಿಸಿದ್ದರ ಹಿಂದಿನ ಷಡ್ಯಂತ್ರಗಳೇನು!?
ರಾಷ್ಟ್ರೀಯ

ʼನೂತನ ಮಸೀದಿಗಾಗಿ ಹಿಂದೂ ಬಾಲಕನ ನರಬಲಿʼ ಸುದ್ದಿ ಬಿತ್ತರಿಸಿದ್ದರ ಹಿಂದಿನ ಷಡ್ಯಂತ್ರಗಳೇನು!?

ಬಿಹಾರದ ಗೋಪಾಲ್‌ಗಂಜ್‌ ನಲ್ಲಿ ನಡೆದ ಹಿಂದೂ ಬಾಲಕನ ನಿಗೂಢ ಸಾವು ಪ್ರಕರಣ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದೆ. ನೂತನ ಮಸೀದಿಗಾಗಿಯೇ ಬಾಲಕನನ್ನು ʼನರಬಲಿʼ ಪಡೆಯಲಾಗಿದೆ ಅಂತಾ ಕನ್ನಡದ ಪ್ರಮುಖ ವೆಬ್‌ಸೈಟ್‌ ಕೂಡಾ ವರದಿ ಬಿತ್ತರಿಸಿತ್ತು. ಹಾಗಿದ್ದರೆ ಬಿಹಾರ ಪೊಲೀಸರು ಹಾಗೂ ಘಟನೆ ಹಿಂದಿನ ವಾಸ್ತವಗಳೇನು?

ಮೊಹಮ್ಮದ್‌ ಇರ್ಷಾದ್‌

ಬಿಹಾರದ ಗೋಪಾಲ್‌ಗಂಜ್‌ ನಲ್ಲಿ ನಡೆದ ಹಿಂದೂ ಬಾಲಕನ ನಿಗೂಢ ಸಾವು ಪ್ರಕರಣ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದೆ. ನೂತನ ಮಸೀದಿಗಾಗಿಯೇ ಬಾಲಕನನ್ನು ʼನರಬಲಿʼ ಪಡೆಯಲಾಗಿದೆ ಅಂತಾ ಕನ್ನಡದ ಪ್ರಮುಖ ವೆಬ್‌ಸೈಟ್‌ ಕೂಡಾ ವರದಿ ಬಿತ್ತರಿಸಿತ್ತು. ಹಾಗಿದ್ದರೆ ಬಿಹಾರ ಪೊಲೀಸರು ಹಾಗೂ ಘಟನೆ ಹಿಂದಿನ ವಾಸ್ತವಗಳೇನು?

ʼನೂತನ ಮಸೀದಿ ನಿರ್ಮಾಣಕ್ಕಾಗಿ, ಹಿಂದೂ ಬಾಲಕನ ನರಬಲಿʼ ಹೀಗಂತ ಸುದ್ದಿಗಳು ಜಾಲತಾಣ ಮಾತ್ರವಲ್ಲದೇ ಸುದ್ದಿ ತಾಣ ಹಾಗೂ ದಿನಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಕರ್ನಾಟಕ ಹೆಸರಾಂತ ದಿನಪತ್ರಿಕೆಯೊಂದರ ವೆಬ್‌ಸೈಟ್‌ ಕೂಡಾ ಇದೇ ವರದಿಯನ್ನ ಬಿತ್ತರಿಸಿತ್ತು. ಆದರೆ ಆ ನಂತರ ಕನ್ನಡದ ಆ ವೆಬ್‌ಸೈಟ್‌ ಸುದ್ದಿ ನಿಖರತೆ ಬಗ್ಗೆ ಗೊಂದಲ ಇರುವುದನ್ನ ಮನಗಂಡು ಅಳಿಸಿ ಹಾಕಿತ್ತು. ಮಾತ್ರವಲ್ಲದೇ ಇದೊಂದು ಫೇಕ್‌ ಸುದ್ದಿಯಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಸುದ್ದಿಯ ಮಗ್ಗುಲನ್ನೇ ಬದಲಿಸಿಕೊಂಡಿತ್ತು. ಆದರೆ Opindia.com ಸುದ್ದಿ ತಾಣ ಮಾತ್ರ ಈ ವರದಿಯನ್ನ ಕೈ ಬಿಟ್ಟಿಲ್ಲ. ಬದಲಾಗಿ Alt news ಫ್ಯಾಕ್ಟ್‌ ಚೆಕ್‌ ಮಾಡಿ ಹಾಕಿದ ಹೊರತಾಗಿಯೂ Opindia.com ಮಾತ್ರ ತನ್ನ ಸುದ್ದಿ ನಿಖರವಾಗಿದೆ ಎನ್ನುತ್ತಲೇ ಬಂದಿದೆ.

ಅಷ್ಟಕ್ಕೂ ಕಳೆದ ವಾರ ಜಾಲತಾಣ ತುಂಬಾ ಹರಿದಾಡಿದ್ದ ಆ ಸುದ್ದಿ ಬಿಹಾರ ರಾಜ್ಯದ ಗೋಪಾಲ್‌ಗಂಜ್‌ ನ ಕಟಿಯಾ ಎಂಬಲ್ಲಿನ ಬೇಲದಿಹಾ ಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಮಾರ್ಚ್‌ 28 ರಂದು ನಡೆದ ಆ ಘಟನೆಯಲ್ಲಿ ಹಿಂದೂ ಅಪ್ರಾಪ್ತ ವಯಸ್ಸಿನ ಬಾಲಕನನ್ನ ಪರಿಚಯಸ್ಥರೇ ಸೇರಿಕೊಂಡು ಹತ್ಯೆಗೈದು ನದಿಗೆ ಎಸೆಯಲಾಗಿದ್ದಾಗಿಯೂ, ಹಾಗೂ ದೂರು ನೀಡಲು ಹೋದ ಮೃತ ಬಾಲಕನ ಕುಟಂಬಿಕರನ್ನ ಪೊಲೀಸರು ಹೊಡೆದು ಬೆದರಿಸಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಅಷ್ಟಕ್ಕೂ ಮಾರ್ಚ್‌ 28ರಂದು ನಡೆದ ಈ ಸುದ್ದಿ ಮುನ್ನೆಲೆ ಬಂದಿದ್ದು ಇತ್ತೀಚಿನ ದಿನಗಳಲ್ಲಿ. ಅದರಲ್ಲೂ OpIndia, Sirf NEWS ನಂತಹ ಸುದ್ದಿ ತಾಣಗಳು ವರದಿ ಮಾಡಿದ ಬಳಿಕವಷ್ಟೇ ಸಾಕಷ್ಟು ವೈರಲ್‌ ಆಗಿತ್ತು. ಇದನ್ನೇ ಟ್ವೀಟ್‌ ಮಾಡಿದ್ದ ನೂರಾರು ಮಂದಿ ಇನ್ನಷ್ಟು ಆತಂಕ ಬಿತ್ತಲು ಕಾರಣರಾಗಿದ್ದರು.

ಅಲ್ಲಿ ನಿರ್ಮಾಣ ಹಂತದಲ್ಲಿತ್ತು ಎನ್ನಲಾದ ಮಸೀದಿಯ ʼಶಕ್ತಿಶಾಲಿʼ ಹಾಗೂ ʼಪ್ರಭಾವಶಾಲಿʼಯನ್ನಾಗಿಸಲು ರೋಹಿತ್‌ ಜೈಸ್ವಾಲ್‌ ಹೆಸರಿನ ಹಿಂದೂ ಅಪ್ರಾಪ್ತ ಬಾಲಕನ ನರಬಲಿ ನೀಡಿ ನಂತರ ಸಮೀಪದಲ್ಲಿದ್ದ ನದಿಗೆ ಎಸೆಯಲಾಗಿತ್ತು ಎಂದೆಲ್ಲಾ ಸುದ್ದಿಯಾಯಿತು. ಅಲ್ಲದೇ ರೋಹಿತ್‌ ಜೈಸ್ವಾಲ್‌ ಸಹೋದರಿ, ಪುಟ್ಟ ಬಾಲಕಿ ನ್ಯಾಯಕ್ಕಾಗಿ ಕಣ್ಣೀರಿಟ್ಟು ಮಾಡಿರುವ ವೀಡಿಯೋ ಕೂಡಾ ಭಾರೀ ಸಂಚಲನ ಮೂಡಿಸಿತ್ತು. ಇದನ್ನೇ ಉಲ್ಲೇಖಿಸಿ OpIndia, Sirf NEWS ಇವುಗಳು ವರದಿ ಬಿತ್ತರಿಸಿದ್ದವು. ಆದರೆ ಇಂತಹ ವರದಿಯಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲವೆಂದೇ ಬಿಹಾರ ರಾಜ್ಯ ಡಿಜಿಪಿ, ಡಿಐಜಿ ಹಾಗೂ ಗೋಪಾಲ್‌ಗಂಜ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಅಂತಹ ಆರೋಪವನ್ನೇ ಅವರು ಅಲ್ಲಗಳೆದಿದ್ದಾರೆ. ಸಾವಿಗೀಡಾಗಿರುವ ರೋಹಿತ್‌ ಜೈಸ್ವಾಲ್‌ ಸಾವಿನ ಹಿಂದೆ ಕೋಮು ಸಂಚು ನಡೆದಿತ್ತು ಅನ್ನೋದನ್ನ ನಿರಾಕರಿಸಿ ಆ ಎಲ್ಲಾ ಪೊಲೀಸ್‌ ಅಧಿಕಾರಿಗಳು, ರೋಹಿತ್‌ ಜೈಸ್ವಾಲ್‌ ಮರಣೋತ್ತರ ಪರೀಕ್ಷೆ ವರದಿಯೇ ತಿಳಿಸಿದಂತೆ ಅದೊಂದು ನೀರಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣವಾಗಿದೆ ಎಂದಿದ್ದಾರೆ.

ಆದರೆ OpIndia, Sirf NEWS ಸುದ್ದಿ ತಾಣಗಳು ರೋಹಿತ್‌ ಜೈಸ್ವಾಲ್‌ ತಂದೆ ರಾಜೇಶ್‌ ಜೈಸ್ವಾಲ್‌ ಹೇಳಿಕೆ ಆಧರಿಸಿ ವರದಿ ಮಾಡಿದ್ದವು. ಅದರಲ್ಲಿ ರಾಜೇಶ್ ಜೈಸ್ವಾಲ್‌ ಪುತ್ರ ರೋಹಿತ್‌ ನನ್ನ ಅವರ ಹಳ್ಳಿಯಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಯನ್ನ ಪ್ರಭಾವಶಾಲಿ ಹಾಗೂ ಶಕ್ತಿಶಾಲಿಯಾಗಿಸಲು ಬಲಿಪಡೆದಿದ್ದಾರೆ. ಅಲ್ಲದೇ ಅವರೆಲ್ಲರೂ ಹಿಂದೂ ಬಾಲಕನ ನರಬಲಿಯೇ ಬೇಕೆಂದು ನಂಬಿದ್ದರು. ಹೀಗಾಗಿ ಇದರ ಹಿಂದೆ ಎಲ್ಲಾ ಮುಸಲ್ಮಾನರು ಪಾಲ್ಗೊಂಡು ದುಷ್ಕೃತ್ಯ ನಡೆಸಿದ್ದಾಗಿ ಆ ಸುದ್ದಿ ತಾಣಗಳು ಆರೋಪಿಸಿವೆ. ಮಾತ್ರವಲ್ಲದೇ ರಾಜೇಶ್‌ ಜೈಸ್ವಾಲ್‌ ಹಾಗೂ ಆತನ ಪುಟ್ಟ ಮಗಳ ವೀಡಿಯೋವನ್ನು ದಾಖಲೆಯಾಗಿ ನೀಡಿದ್ದಾರೆ. ಆದರೆ ಆ ವೀಡಿಯೋಗಳಲ್ಲಿ ಎಲ್ಲೂ ಮಸೀದಿಗಾಗಿ ನರಬಲಿ ಪಡೆಯಲಾಗಿದೆ ಅಂತಾ ಉಲ್ಲೇಖ ಮಾಡದಿರುವುದು ಗಮನಾರ್ಹ.

ಈ ಕುರಿತು ಗಂಭೀರವಾಗಿ ತನಿಖೆಗೆ ಮುಂದಾದ ಬಿಹಾರ ಪೊಲೀಸರಿಗೆ ಯಾವ ಹಂತದಲ್ಲೂ ಇದೊಂದು ಕೋಮು ಸಂಬಂಧಿತ ಇಲ್ಲವೇ ಮಸೀದಿ ನಿರ್ಮಾಣದ ವಿಚಾರವಾಗಿ ನಡೆದ ನರಬಲಿ ಎಂದು ಎಲ್ಲೂ ಗೊತ್ತಾಗಿಲ್ಲ. ಇನ್ನು ಈ ಪ್ರಕರಣವನ್ನ ಸಿಐಡಿಗೆ ವಹಿಸಿಕೊಂಡಿದ್ದು, ಐವರು ಆರೋಪಿತರ ವಿರುದ್ಧದ ತನಿಖೆ ನಡೆಯುತ್ತಿರುವುದಾಗಿ ಸಿಐಡಿ ಡಿಐಜಿ ವಿಜಯ್‌ ಕುಮಾರ್‌ ವರ್ಮಾ ತಿಳಿಸಿದ್ದಾರೆ. ಅಲ್ಲದೇ ವಿಚಾರಣೆ ಸಂದರ್ಭ OpIndia ಮಾಡಿರುವ ಆರೋಪದ ಬಗ್ಗೆಯೂ FIR ದಾಖಲಿಸಿಕೊಂಡಿರುವುದಾಗಿ ವರ್ಮಾ ತಿಳಿಸಿದ್ದಾರೆ.

ಅದಲ್ಲದೇ ಮೇ 17 ನೇ ತಾರೀಕಿನಂದು ʼಫೇಸ್‌ಬುಕ್‌ ಲೈವ್‌ʼ ಮೂಲಕ ಬಿಹಾರ್‌ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರು ಕೂಡಾ ಸುಮಾರು ಅರ್ಧ ಗಂಟೆ ಕಾಲ ಮಾತಾಡಿದ್ದು, ಸುದ್ದಿ ತಾಣಗಳಲ್ಲಿ ಬಂದಿರುವಂತಹ ಘಟನೆ ನಡೆದೇ ಇಲ್ಲ ಎಂದಿದ್ದಾರೆ. “ ಆ ಹಳ್ಳಿಯಲ್ಲಿ ಮಸೀದಿಯಾಗಲೀ, ನರಬಲಿ ನೀಡುವ ಸಂಪ್ರದಾಯವಾಗಲೀ ಹಿಂದಿನಿಂದಲೂ ನಡೆದುಕೊಂಡು ಬಂದಿಲ್ಲ. ಮಾತ್ರವಲ್ಲದೇ ಸಾವನ್ನಪ್ಪಿದ ರೋಹಿತ್‌ ಜೈಸ್ವಾಲ್‌ನನ್ನ ನದಿ ಕಿನಾರೆ ಓರ್ವ ಹಿಂದೂ ಬಾಲಕನೇ ಮನೆಗೆ ತೆರಳಿ ಬರುವಂತೆ ತಿಳಿಸಿದ್ದ. ಒಂದೇ ವಯಸ್ಕಿನ ಬಾಲಕರಾಗಿದ್ದ ಅವರು ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳನ್ನ ಬೇರ್ಪಡಿಸುವ ನದಿಯೊಂದಕ್ಕೆ ತೆರಳಿದ್ದರು. ಆ ನಂತರ ನದಿಗೆ ಬಿದ್ದಿದ್ದಾನೆನ್ನಲಾಗಿದ್ದು, ನೀರಿನ ಮಟ್ಟ ಹೆಚ್ಚಿದ್ದರಿಂದ ಸಾವನ್ನಪ್ಪಿದ್ದಾಗಿ ಡಿಜಿಪಿ ತಿಳಿಸಿದ್ದಾರೆ.

ಅಲ್ಲದೇ ಸ್ಥಳೀಯ ಠಾಣೆಯಲ್ಲಿ ಮಾರ್ಚ್‌ 29ರಂದು ದಾಖಲಾದ FIR ನಲ್ಲೂ ಎಲ್ಲೂ ಕೂಡಾ ಮಸೀದಿಗಾಗಿ ನರಬಲಿ ನಡೆದಿದೆ ಅನ್ನೋದನ್ನ ರೋಹಿತ್‌ ಜೈಸ್ವಾಲ್‌ ತಂದೆ ದೂರಲ್ಲ. ಬದಲಾಗಿ ತನ್ನ ಮಗನನ್ನ ಅವರ ಸಹಪಾಠಿಗಳು ಕೊಂದಿರುವುದಾಗಿ ದೂರಿದ್ದನು. ಅದರಂತೆ FIR ಕೂಡಾ ದಾಖಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ವರದಿ ಬಳಿಕ ಅದೊಂದು ಹತ್ಯೆಯಾಗಿರದೆ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಸ್ಪಷ್ಟವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಬಂಧಿತರಾದ ಐವರು ಮಕ್ಕಳಲ್ಲಿ ಓರ್ವ ಮಾತ್ರ ಯವಸ್ಕನಾಗಿದ್ದು, ಉಳಿದಂತೆ ನಾಲ್ವರು ಅಪ್ರಾಪ್ತ ಬಾಲಕರಾಗಿದ್ದರು. ಆದ್ದರಿಂದ ನಾಲ್ವರು ಜಾಮೀನಿನ ಮೇಲೆ ಬಿಡುಗಡೆಗೊಂಡರೆ, ಓರ್ವ ಮಾತ್ರ ಜೈಲಿನಲ್ಲಿದ್ದಾನೆ ಎಂದೂ ಗೋಪಾಲ್‌ಗಂಜ್‌ ಎಸ್ಪಿ ಮನೋಜ್‌ ತಿವಾರಿ ತಿಳಿಸಿದ್ದಾರೆ. ಇನ್ನು ರೋಹಿತ್‌ ಕುಟುಂಬಿಕರ ಆರೋಪದಂತೆ ಇದು ಕೊಲೆಯಲ್ಲ, ಆದರೆ ಅವರು ತಮ್ಮ ಸಂಶಯವನ್ನ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ವಿಚಾರವಾಗಿ ʼದಿ ಕ್ವಿಂಟ್‌ʼ ಕುರಿತು ಸಂಪರ್ಕಿಸಿದ್ದು ರೋಹಿತ್‌ ತಂದೆ ರಾಜೇಶ್‌ ಜೈಸ್ವಾಲ್‌, ನನ್ನ ಮಗನೊಂದಿಗೆ ಆವತ್ತು ತೆರಳಿದವರಲ್ಲಿ ಐವರಲ್ಲಿ ನಾಲ್ವರು ಮುಸ್ಲಿಮರಾಗಿದ್ದು, ಆ ಕಾರಣಕ್ಕಾಗಿ ಮಸೀದಿ ಬಳಿ ಹತ್ಯೆ ನಡೆದಿರಬಹುದು ಅಂತಾ ಅಂದಾಜಿಸಿದ್ದೆ. ಹಾಗಂತ ನನಗೆ ಯಾರ ಮೇಲೆ ದ್ವೇಷವಿಲ್ಲ ಮತ್ತು ಇದೊಂದು ಕೋಮುದ್ವೇಷಿತ ಹತ್ಯೆ ಎಂದೂ ಹೇಳಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಪೊಲೀಸ್‌ ತನಿಖೆ ಬಗ್ಗೆ ಅಸಮಾಧಾನ ಇರುವುದನ್ನ ಒಪ್ಪಿಕೊಂಡಿದ್ದಾರೆ. ಇದೊಂದು ಕೊಲೆಯೇ ಹೊರತು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಆಗಿರಲಿಲ್ಲ ಎಂದು ರಾಜೇಶ್‌ ತಿಳಿಸಿದ್ದಾರೆ.

ಅಲ್ಲದೇ ಪೊಲೀಸರು FIR ದಾಖಲಿಸಿಕೊಳ್ಳದಿರಲು ಪರಿಹಾರ ನೀಡುವ ಆಮಿಷವನ್ನೂ ಒಡ್ಡಿದ್ದಾಗಿ ತಿಳಿಸಿದ್ದಾರೆ. ಆದರೆ FIR ಹಿಂದೆಗೆದುಕೊಳ್ಳುವಂತೆ ಸ್ಥಳೀಯ ಶಬೀರ್‌ ಅನ್ಸಾರಿ ಹಾಗೂ ಅಫ್ಸಾಲ್‌ ಅನ್ಸಾರಿ ಎಂಬವರು ರಾಜೇಶ್‌ ಜೈಸ್ವಾಲ್‌ ಅವರನ್ನ ಬೆದರಿಸಿದ್ದರು. ಆದರೆ ಈ ಇಬ್ಬರ ಮೇಲೆ ಯಾವುದೇ FIR ದಾಖಲಾಗಿಲ್ಲ.

ಇನ್ನು ಮಗನ ಸಾವಿನ ಬಗ್ಗೆ ಮಾತಾಡಲು ಪೊಲೀಸರ ಬಳಿ ಹೋದಾಗ, ಅವರ ನನ್ನ ಹಾಗೂ ನನ್ನ ಪತ್ನಿಯನ್ನ ನಿಂದಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾವು ಉತ್ತರ ಪ್ರದೇಶದಲ್ಲಿರುವುದಾಗಿ ರಾಜೇಶ್‌ ಜೈಸ್ವಾಲ್‌ ʼದಿ ಕ್ವಿಂಟ್‌ʼ ಗೆ ತಿಳಿಸಿದ್ದಾರೆ.

ಇನ್ನ ಮಸೀದಿಗಾಗಿ ನರಬಲಿ ನಡೆದಿದೆ ಅನ್ನೋದಾಗಿ OpIndia ಹೇಳಿಕೊಂಡಿರುವ ವಿಚಾರವಾಗಿ ಪ್ರಶ್ನಿಸಿದ ʼದಿ ಕ್ವಿಂಟ್‌ʼ ಗೆ ಪ್ರತಿಕ್ರಿಯಿಸಿರುವ ರಾಜೇಶ್‌ ಜೈಸ್ವಾಲ್‌, ಅದನ್ನ ಯಾರೂ ನೋಡಿಲ್ಲ. ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಆದರೆ ಆವತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದ ನಾನು ಅದೇನು ಪ್ರತಿಕ್ರಿಯೆ ನೀಡಿದ್ದೇನೆ ಅನ್ನೋದೆ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಯಾವ ತಂದೆಯಾದರೂ ತನ್ನಲ್ಲಿರುವ ವಿವಿಧ ಸಂಶಯಗಳನ್ನ ಹೊರಗಿಡುವುದು ತಪ್ಪೇ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಬಿಹಾರದ ಸ್ಥಳೀಯ ಪತ್ರಕರ್ತರ ಮಾಹಿತಿ ಪ್ರಕಾರ, ಅಲ್ಲಿ ಯಾವುದೇ ಮಸೀದಿಗಳು ನಿರ್ಮಾಣವಾಗುತ್ತಿಲ್ಲ ಎನ್ನಲಾಗಿದೆ. ಆದರೆ ಎರಡು ವರುಷದ ಹಿಂದೆ ಮಸೀದಿಗೆಂದು ಕಟ್ಟಲಾದ ಕಟ್ಟಡ ಅರ್ಧದಲ್ಲೇ ನಿಂತಿದ್ದು, ಸದ್ಯ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಅನ್ನೋದು ಆ ಭಾಗಕ್ಕೆ ತೆರಳಿದ್ದ ಬಿಹಾರದ ಪತ್ರಕರ್ತನ ಮಾತು. ಅಲ್ಲದೇ ಅಲ್ಲಿಯ ಸ್ಥಳೀಯರು ಕೋಮುದ್ವೇಷದ ಆರೋಪವನ್ನ ಅಲ್ಲಗಳೆದಿದ್ದಾರೆ.

ಹೀಗಿದ್ದ ಮೇಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಒಂದು ಘಟನೆ ಕೋಮುದ್ವೇಷ ಹರಡುವವರಿಗೆ ಆಹಾರವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಜಾಲತಾಣ ತುಂಬಾ ಅನಗತ್ಯ ಗೊಂದಲು ಮುಂದುವರೆದಿದೆ. ಆದರೆ ದುರಾದೃಷ್ಟವಶಾತ್‌ ಜಾಲತಾಣದ ಹೊರತಾಗಿ ಕರ್ನಾಟಕದ ಪ್ರಮುಖ ದಿನಪತ್ರಿಕೆಯೊಂದರ ವೆಬ್‌ಸೈಟ್‌ ಕೂಡಾ ಅಂತಹದ್ದೇ ವರದಿ ಬಿತ್ತರಿಸಿ ಆ ನಂತರ ಸ್ಪಷ್ಟನೆ ನೀಡಲು ಮುಂದಾಗಿತ್ತು. ಇದೆಲ್ಲವೂ ಸಮಾಜದಲ್ಲಿ ದ್ವೇಷ ಬಿತ್ತಲು ಇನ್ನಷ್ಟು ಪ್ರೇರಣೆ ನೀಡಿದಂತೆ.

Click here Support Free Press and Independent Journalism

Pratidhvani
www.pratidhvani.com