ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಎಡವಿದ ಕೇಂದ್ರ ಸರ್ಕಾರ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ!
ರಾಷ್ಟ್ರೀಯ

ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಎಡವಿದ ಕೇಂದ್ರ ಸರ್ಕಾರ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ!

ವಲಸೆ ಕಾರ್ಮಿಕರ ವಿಚಾರದಲ್ಲಿ ಆಡಳಿತ ಪಕ್ಷ ತೋರಿದ ನಿರ್ಲಕ್ಷ್ಯದಿಂದಾಗಿ ಅನಗತ್ಯ ಗೊಂದಲಗಳು ಏರ್ಪಟ್ಟವು. ಇದರಿಂದಾಗಿ ವಿಪಕ್ಷಗಳು ವಲಸೆ ಕಾರ್ಮಿಕರ ಪರ ಬೀದಿಗೆ ಬಂದು ನೆರವು ನೀಡಲು ಶುರು ಮಾಡಿದವು. ಇದರಿಂದ ವಿಚಲಿತಗೊಂಡ ಆಡಳಿತ ಪಕ್ಷ ಬಿಜೆಪಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಕೋವರ್ ಕೊಲ್ಲಿ ಇಂದ್ರೇಶ್

ಇಡೀ ವಿಶ್ವದಲ್ಲಿ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೋವಿಡ್‌-19 ವಿರುದ್ದ ಇಡೀ ದೇಶವೇ ಒಂದಾಗಿ ಹೋರಾಟ ನಡೆಸುತ್ತಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾತ್ರ ಬಹಳ ಮಹತ್ತರವಾದುದು. ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಅತ್ಯಂತ ಹೆಚ್ಚು ಸಂಕಷ್ಟಕ್ಕೀಡಾದವರೆಂದರೆ ಕಡು ಬಡವರು, ಮಧ್ಯಮ ವರ್ಗದವರು ಮತ್ತು ಕೂಲಿ ಕಾರ್ಮಿಕರು. ಅದರಲ್ಲೂ ದಿಢೀರ್‌ ಆಗಿ ಲಾಕ್‌ ಡೌನ್‌ ಘೋಷಿಸಿದ ಪ್ರಧಾನ ಮಂತ್ರಿ ನರೇಂಧ್ರ ಮೋದಿ ಅವರ ನಿರ್ಧಾರದಿಂದ ತೀರಾ ತೊಂದರೆಗೀಡಾದ ಸಮುದಾಯವೆಂದರೆ ವಲಸೆ ಕಾರ್ಮಿಕರದ್ದು. ಉತ್ತಮ ಬದುಕಿಗಾಗಿ ಕುಟುಂಬ ಸಹಿತ ಸಾವಿರಾರು ಕಿಲೋಮೀಟರ್‌ ವಲಸೆ ಹೊರಡುವ ಈ ಸಮುದಾಯವು ಲಾಕ್‌ ಡೌನ್‌ ನಿಂದಾಗಿ ದಿಕ್ಕೇ ತೋಚದಂತಹ ಪರಿಸ್ಥಿತಿಯಲ್ಲಿತ್ತು. ಇವರಿಗೆ ಉಳಿದುಕೊಳ್ಳಲು ಸೂಕ್ತ ವಸತಿ ವ್ಯವಸ್ಥೆಯಾಗಲೀ ಅಥವಾ ಊಟದ ವ್ಯವಸ್ಥೆ ಆಗಲೀ ಇರಲಿಲ್ಲ.

ಕೆಲವು ಮಹಾನಗರಗಳಲ್ಲಿ ರೈಲು , ಬಸ್ಸು ಹತ್ತಲು ಕುಟುಂಬ ಸಹಿತ ಹತ್ತಾರು ಕಿಲೋಮೀಟರ್‌ ದೂರಬಂದು ಅಲ್ಲಲ್ಲೆ ಠಿಕಾಣಿ ಹೂಡಿದ್ದ ಕುಟುಂಬಗಳದ್ದು ದಯನೀಯ ಸ್ಥಿತಿ. ಈ ಸ್ಥಿತಿಯು ಅವರನ್ನು ಸರ್ಕಾರದ ವಿರುದ್ದವೇ ಪ್ರತಿಭಟಿಸುವಂತೆ ಪ್ರೇರೇಪಿಸಿತು. ಲಾಕ್‌ ಡೌನ್‌ ಘೋಷಿಸುವುದಕ್ಕೂ ಮುನ್ನ ನಾಲ್ಕು ದಿನ ಅವರವರ ರಾಜ್ಯಗಳಿಗೆ ತೆರಳಲು ಸೂಕ್ತ ಬಸ್ಸು , ರೈಲುಗಳ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರೆ ಅವರು ನೆಮ್ಮದಿಯಾಗಿ ಊರು ತಲುಪಿಕೊಳ್ಳುತಿದ್ದರು. ಆದರೆ ಸರ್ಕಾರ ಅದನ್ನು ಮಾಡದೇ ವಲಸಿಗರು ನಡೆದೇ ಊರು ತಲುಪಲು ಹೊರಟು ಹತ್ತಾರು ಜನರು ಸಾವಿಗೀಡಾದರು. ಸಿಕ್ಕಿದ ಗೂಡ್ಸ್‌ ವಾಹನ ಹತ್ತಿಕೊಂಡು ಊರು ತಲುಪಲು ಹೊರಟವರೂ ಅಪಘಾತದಲ್ಲಿ ಹೆಣವಾದರು.

ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದಾಗ ಪ್ರತಿಪಕ್ಷ ಕಾಂಗ್ರೆಸ್‌ , ತೃಣಮೂಲ ಕಾಂಗ್ರೆಸ್‌ , ಸಿಪಿಎಂ ಪಕ್ಷಗಳು ತಾವು ನೆರವು ನೀಡಲು ಮುಂದೆ ಬಂದವು. ಕಾಂಗ್ರೆಸ್‌ ಪಕ್ಷವು ರಾಜಸ್ತಾನದಿಂದ ಉತ್ತರ ಪ್ರದೇಶಕ್ಕೆ ಒಂದು ಸಾವಿರ ಬಸ್‌ ಗಳನ್ನೇ ವ್ಯವಸ್ಥೆ ಮಾಡಿತು. ಇದರಿಂದಾಗಿ ಪ್ರಧಾನಿ ಮೋದಿ ಅವರ ಮತ್ತು ಬಿಜೆಪಿ ಪಕ್ಷದ ಇಮೇಜ್‌ ಗೆ ಧಕ್ಕೆ ಆಯಿತು. ಇದರಿಂದಾಗಿ ಆತಂಕಗೊಂಡಿರುವ ಪಕ್ಷವು ಇದೀಗ ಡ್ಯಾಮೇಜ್‌ ಕಂಟ್ರೋಲ್‌ ಗೆ ಮುಂದಾಗಿದೆ.

ಅದಕ್ಕಾಗಿ ದೇಶಾದ್ಯಂತ ಕೋವಿಡ್‌ ಲಾಕ್‌ ಡೌನ್‌ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ವಿವರಣೆಯನ್ನು ವಲಸಿಗರು, ರೈತರು , ಮತ್ತು ಬಡ ವರ್ಗದವರಲ್ಲಿ ಪ್ರಚಾರ ಮಾಡಲು ಯೋಜಿಸಿದೆ. ಬಿಜೆಪಿಯು ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಪಕ್ಷವು ರಾಜ್ಯ ಸರ್ಕಾರಗಳ ವೈಫಲ್ಯವನ್ನು ಪ್ರಚಾರಿಸಲು ಮುಂದಾಗಿದೆ. ಇದರ ಅಂಗವಾಗಿ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ ಬಡ ವರ್ಗದವರಿಗೆ ಕೇಂದ್ರ ಸರ್ಕಾರ ನೀಡಿದ ಪಡಿತರವನ್ನೂ ವಿತರಿಸಲು ವಿಫಲವಾಗಿರುವ ಕುರಿತ ಫಲಕಗಳನ್ನು ಹಿಡಿದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಕಾರ್ಯಕರ್ತರು ಉತ್ತರ ಪೂರ್ವ ದೆಹಲಿಯಲ್ಲಿ ಈ ಬಗ್ಗೆ ಆಂದೋಲನವನ್ನೇ ಹಮ್ಮಿಕೊಳ್ಳಲಿದ್ದು ಮೋದಿ ನೀಡಿದ ಪಡಿತರ ಎಲ್ಲಿ ? ಮೋದಿಜಿ ಕಳುಹಿಸಿದ ಪಡಿತರವನ್ನು ಕೇಜ್ರಿವಾಲ್‌ ವಿತರಿಸಲಿಲ್ಲ ಎಂಬ ಘೋಷಣೆಗಳನ್ನು ಬಳಸಿಕೊಳ್ಳಲಿದೆ ಎಂದು ಬಿಜೆಪಿ ದೆಹಲಿ ಘಟಕದ ಅದ್ಯಕ್ಷ ಮನೋಜ್‌ ತಿವಾರಿ ಮತ್ತು ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಮವೀರ್‌ ಸಿಂಗ್‌ ಹೇಳಿದರು. ದೆಹಲಿಯ 70 ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪ್ರತಿಭಟನೆ ನಡೆಸಲಿದ್ದು ವಲಸೆ ಕಾರ್ಮಿಕರು ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸಿದ್ದು ದೆಹಲಿಯಲ್ಲೇ ಎಂದೂ ಅವರು ಹೇಳಿದರು.

ರಾಜಾಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್‌ ಪೂನಿಯಾ ಅವರು ಪಕ್ಷವು ಮೂರು ಹಂತಗಳಲ್ಲಿ ಪ್ರಚಾರ ನಡೆಸಲಿದ್ದು ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಣ್ಣ ವೀಡಿಯೋ ಕ್ಲಿಪ್‌ ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು. ಪ್ರಿಯಾಂಕ ಗಾಂಧಿ ವಾದ್ರಾ ಅವರ 1000 ಬಸ್‌ ಹಗರಣವನ್ನು ನಾವು ಬಯಲು ಮಾಡಿದ್ದೇವೆ, ಅವರು ಬರೇ ವಲಸೆ ಕಾರ್ಮಿಕರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು ಎಂದು ಆರೋಪಿಸಿದರು.

ಬಿಜೆಪಿಯು ತನ್ನ ಪ್ರಚಾರವನ್ನು ಬಿಹಾರ ಹಾಗೂ ಮಧ್ಯ ಪ್ರದೇಶದತ್ತ ಹೆಚ್ಚು ಕೇಂದ್ರೀಕರಿಸಿದ್ದು ಬಿಹಾರದಲ್ಲಿ ಈ ವರ್ಷದ ಅಂತ್ಯ ಭಾಗದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿಯು 22 ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಮೂಲಕ ಸರ್ಕಾರ ರಚಿಸಿದೆ. ಈ ಸ್ಥಾನಗಳಿಗೂ ಚುನಾವಣೆ ನಡೆಯಬೇಕಿದೆ. ಎರಡೂ ರಾಜ್ಯ ಘಟಕಗಳ ಬಿಜೆಪಿ ಮುಖಂಡರಿಗೆ ಈಗಾಗಲೇ ಸೂಚನೆ ನೀಡಿದ್ದು ವಲಸೆ ಕಾರ್ಮಿಕರಿಗೆ ನೀಡಲಾಗಿರುವ ಸೌಲಭ್ಯ, ಶ್ರಮಿಕ್‌ ರೈಲು, ರೇಷನ್‌ ಕಾರ್ಡ್‌ ಇಲ್ಲದೆ ಪಡಿತರ ನೀಡಿದ್ದು, ಮನರೇಗಾ ಯೋಜನೆಯಲ್ಲಿ ಕೆಲಸ ನೀಡಿರುವುದನ್ನು ಎತ್ತಿ ಹೇಳಲು ಸೂಚಿಸಿದೆ. ಈಗಾಗಲೇ ಬಿಜೆಪಿ ಅದ್ಯಕ್ಷ ಜೆ ಪಿ ನಡ್ಡಾ, ಸಚಿವರಾದ ಅಮಿತ್‌ ಷಾ, ನಿತಿನ್‌ ಘಡ್ಕರಿ, ಹರ್ಷವರ್ಧನ್‌ ಮುಂತಾದ ನಾಯಕರು ಮೋದಿ ಸರ್ಕಾರ ನೀಡಿರುವ ಸೌಲಭ್ಯಗಳ ಬಗ್ಗೆ ಟ್ವೀಟ್‌ ಮಾಡಲು ಪ್ರಾರಂಬಿಸಿದ್ದಾರೆ.

ಬಿಹಾರದ 25 ಲಕ್ಷ ಕಾರ್ಮಿಕರು ವಲಸಿಗರಾಗಿದ್ದು ತವರಿಗೆ ಮರಳಿರುವ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಸಹಾಯ ಮಾಡಬೇಕೆಂದು ರಾಷ್ಟ್ರೀಯ ಅದ್ಯಕ್ಷ ನಡ್ಡಾ ಸೂಚಿಸಿದ್ದಾರೆ. ವಲಸಿಗರಿಗೆ ಪಡಿತರ ಹಾಗೂ ಇನ್ನಿತರ ಸವಲತ್ತುಗಳು ತಲುಪುವಂತೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಪಕ್ಷ ಸೂಚಿಸಿದೆ. ಇನ್ನು ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್‌ ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ವಿಫಲಗೊಂಡಿರುವ ಬಗ್ಗೆ ಪ್ರತಿಪಕ್ಷಗಳು ಆರೋಪವನ್ನು ಹೈಲೈಟ್‌ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಡಳಿತ ಯಂತ್ರದ ಜತೆ ಸಹಕರಿಸುವಂತೆ ಪಕ್ಷವು ಸೂಚಿಸಿದೆ.

ಏನೇಆದರೂಲಾಕ್‌ಡೌನ್‌ನಿಂದಾಗಿ ಸಾವು ನೋವು ಅನುಭವಿಸಿದ ಲಕ್ಷಾಂತರ ಕಾರ್ಮಿಕರ ಕಣ್ಣೀರು ಸದ್ಯಕ್ಕೆ ಇನ್ನೂ ಹಸಿಯಾಗಿದೆ. ಚುನಾವಣೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಬರೇ ಪ್ರಚಾರವನ್ನಷ್ಟೆ ಕೈಗೊಂಡರೆ ಇದರಿಂದ ಕಾರ್ಮಿಕರಿಗೆ ಕಿಂಚಿತ್ತೂ ಅನುಕೂಲ ಆಗುವುದಿಲ್ಲ. ಬದಲಿಗೆ ಕೋವಿಡ್‌-19 ವಿರುದ್ದ ಹೋರಾಟದಲ್ಲಿ ರಾಜ್ಯಸರ್ಕಾರಗಳ ಜತೆ ಸೇರಿ ಕಾರ್ಮಿಕರಿಗೆ ಬಡವರಿಗೆ ಸಹಾಯ ಮಾಡಿದರೆ ಮಾತ್ರ ಜನರು ಗುರುತಿಸುತ್ತಾರೆ. ಇದನ್ನು ಬಿಜೆಪಿ ಕೇಂದ್ರ ಸಮಿತಿ ಅರಿತುಕೊಳ್ಳಬೇಕಿದೆ.

Click here Support Free Press and Independent Journalism

Pratidhvani
www.pratidhvani.com