ರೆಪೊ ದರ ಮತ್ತೆ ಕಡಿತ:  ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಮತ್ತಷ್ಟು ಇಳಿಯಲಿದೆ!
ರಾಷ್ಟ್ರೀಯ

ರೆಪೊ ದರ ಮತ್ತೆ ಕಡಿತ: ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಮತ್ತಷ್ಟು ಇಳಿಯಲಿದೆ!

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌ ಪತ್ರಿಕಾಗೋಷ್ಟಿಯಲ್ಲಿ ರೆಪೋ ದರ ಕಡಿತ ಮಾಡುವ ಕುರಿತು ಮಾತನಾಡಿದ್ದಾರೆ. ಜೊತೆಗೆ ಮಾಸಿಕ ಸಾಲ ಪಾವತಿಯನ್ನ ಮತ್ತೆ 3 ತಿಂಗಳ ಕಾಲ RBI ಮುಂದೂಡಿದೆ. ರೆಪೋ ದರ ಕಡಿತ ಮಾಡುವುದರಿಂದ ಬ್ಯಾಂಕ್‌ ಸಾಲದ ಬಡ್ಡಿ ಕಡಿಮೆಯಾಗಲಿದೆ ಎನ್ನಲಾಗಿದೆ. ಹಾಗಿದ್ರೆ ರೆಪೋ ದರ ಎಂದರೇನು? ಬಡ್ಡಿ ಕಡಿತಗೊಳ್ಳುವ ಬಗೆ ಹೇಗೆ? ಇಲ್ಲಿದೆ ಪೂರ್ಣ ವಿವರ. 

ರೇಣುಕಾ ಪ್ರಸಾದ್ ಹಾಡ್ಯ

ಕರೋನಾ ಸೋಂಕಿನಿಂದ ದೇಶದ ಆರ್ಥಿಕತೆಯು ಹಿಂಜರಿತದತ್ತ ದಾಪುಗಾಲು ಹಾಕುವುದನ್ನು ತಡೆಯಲು ಯತ್ನಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಮತ್ತೊಂದು ಕಂತಿನ ಆರ್ಥಿಕ ಪರಿಹಾರ ಮಾರ್ಗೋಪಾಯಗಳನ್ನು ಪ್ರಕಟಿಸಿದೆ. ಮುಖ್ಯವಾಗಿ ರೆಪೊದರವನ್ನು 40 ಅಂಶಗಳಷ್ಟು ಅಂದರೆ ಶೇ.0.40ರಷ್ಟು ಇಳಿಸಿದೆ. ಶೇ.4.40 ರಷ್ಟಿದ್ದ ರೆಪೊದರವು ಈಗ ಶೇ.4ಕ್ಕೆ ಇಳಿದಿದೆ. ಇದು ಐತಿಹಾಸಿಕ ಕನಿಷ್ಠ ಮಟ್ಟವಾಗಿದೆ. ಜತೆಗೆ ರಿವರ್ಸ್ ರೆಪೊದರವನ್ನು RBI 40 ಅಂಶಗಳಷ್ಟು ಕಡಿತ ಮಾಡಿದ್ದು, ಶೇ.3.75 ರಿಂದ ಶೇ.3.35ಕ್ಕೆ ತಗ್ಗಿದೆ. (ರೆಪೊದರ ಎಂದರೆ- ಬ್ಯಾಂಕುಗಳು RBI ನಿಂದ ಪಡೆಯುವ ಸಾಲದ ಮೇಲಿನ ಬಡ್ಡಿದರ, ರಿವರ್ಸ್ ರೆಪೊದರ ಎಂದರೆ- ಬ್ಯಾಂಕುಗಳು RBI ನಲ್ಲಿ ಇಡುವ ನಗದಿಗೆ ನೀಡುವ ಬಡ್ಡಿದರ).

RBI ನಿರ್ಧಾರದಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರವು ಗಣನೀಯವಾಗಿ ಇಳಿಯಲಿದೆ. ಇದು ಬರುವ ತಿಂಗಳುಗಳಲ್ಲಿ ಆರ್ಥಿಕ ಚೇತರಿಕೆಗೆ ಕಾರಣವಾಗಬಹುದು. ಪ್ರಸಕ್ತ ಶೇ.7.25 -8ರ ಆಜುಬಾಜಿನಲ್ಲಿರುವ ಗೃಹ ಸಾಲವು ಶೇ.7ರ ಮಟ್ಟಕ್ಕೆ ಇಳಿಯಬಹುದು. ಇತ್ತೀಚಿನ ವರ್ಷಗಳಲ್ಲಿ ಇದು ಅತಿ ಕನಿಷ್ಠಮಟ್ಟದ ಬಡ್ಡಿದರವಾಗಿದೆ.

ಆತಂಕದ ಸಂಗತಿ ಎಂದರೆ- ಬ್ಯಾಂಕುಗಳಲ್ಲಿರುವ ಗ್ರಾಹಕರ ಠೇವಣಿಗಳ ಮೇಲಿನ ಬಡ್ಡಿದರವೂ ಕುಸಿಯಲಿದೆ. ಈಗಾಗಲೇ ಸಾರ್ವಜನಿಕ ವಲಯದ ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಶೇ.2.75ಕ್ಕೆ ತಗ್ಗಿಸಿವೆ. ಬರುವ ದಿನಗಳಲ್ಲಿ ಶೇ.2.25-2.40ರ ಆಜುಬಾಜಿಗೆ ಇಳಿಯಲಿದೆ. ಪ್ರಸಕ್ತ ಶೇ.5ರಷ್ಟು ಹಣದುಬ್ಬರ ಇರುವುದರಿಂದ ಉಳಿತಾಯ ಖಾತೆಯಿಂದ ಬರುವ ಬಡ್ಡಿಯಿಂದ ಏನೂ ಉಪಯೋಗವಾಗುವುದಿಲ್ಲ. ವಿವಿಧ ನಿಶ್ಚಿತ ಠೇವಣಿ, ಅವಧಿ ಠೇವಣಿಗಳ ಮೇಲಿನ ಬಡ್ಡಿದರವೂ ಇಳಿಯಲಿದೆ. ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಬದುಕು ಸಾಗಿಸುತ್ತಿರುವ ನಿವೃತ್ತರು ಗರಿಷ್ಠ ಸಂಕಷ್ಟ ಎದುರಿಸಲಿದ್ದಾರೆ.

RBI ಪ್ರಕಟಿಸಿರುವ ಮತ್ತೊಂದು ಪ್ರಮುಖ ನಿರ್ಧಾರ ಎಂದರೆ- ಅವಧಿ ಸಾಲಗಳ ಅಸಲು ಮತ್ತು ಬಡ್ಡಿ ಪಾವತಿಗೆ ನೀಡಿದ್ದ ಮೂರು ತಿಂಗಳ ವಿನಾಯ್ತಿಯನ್ನು ಮತ್ತೆ ಮೂರು ತಿಂಗಳ ವರೆಗೆ ವಿಸ್ತರಿಸಿದೆ. ಅಂದರೆ, ಸಾಲ ಪಡೆದವರು, ಬ್ಯಾಂಕುಗಳಿಗೆ ಅಸಲು ಬಾಕಿ ಮತ್ತು ಬಡ್ಡಿ ಬಾಕಿಯನ್ನು ಆಗಸ್ಟ್ 31ರವರೆಗೆ ಪಾವತಿ ಮಾಡುವುದು ಕಡ್ಡಾಯವೇನಲ್ಲ. ಆದರೆ, ಸಾಲದ ಅಸಲು ಮತ್ತು ಬಡ್ಡಿ ಪಾವತಿಗೆ ವಿನಾಯ್ತಿ ನೀಡುವ ಅಂತಿಮ ಅಧಿಕಾರವನ್ನು ಆಯಾ ಬ್ಯಾಂಕುಗಳೇ ಕೈಗೊಳ್ಳಬಹುದಾಗಿದೆ.

RBI ಇದೇ ವೇಳೆ ಪ್ರಕಟಿಸಿದ ಮತ್ತೊಂದು ಪ್ರಮುಖ ವಿಷಯ ಎಂದರೆ ‘2020-21ನೇ ಸಾಲಿನ ವಿತ್ತೀಯ ವರ್ಷದ ಜಿಡಿಪಿ ಅಭಿವೃದ್ಧಿಯು ಋಣಾತ್ಮಕ ಬೆಳವಣಿಗೆ ದಾಖಲಿಸಲಿದೆ’ ಎಂಬುದು. ಅಂದರೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯು ಏರುಮುಖದಲ್ಲಿ ಸಾಗುವುದಿಲ್ಲ. 2019-20ನೇ ಸಾಲಿನಲ್ಲಿ ಶೇ.5ರ ಆಜುಬಾಜಿನಲ್ಲಿದ್ದರೆ, ಈ ವರ್ಷ ಅಭಿವೃದ್ಧಿಯು ಶೂನ್ಯಕ್ಕೆ ಇಳಿಯಬಹುದು ಅಥವಾ ಶೇ.-1 ರಿಂದ -2ರಷ್ಟು ದಾಖಲಾಗಬಹುದು. RBI ಈ ವಿಷಯ ಪ್ರಕಟಿಸುವುದರೊಂದಿಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸೇರಿದಂತೆ, ನೀತಿ ಆಯೋಗ, ಕೇಂದ್ರ ಹಣಕಾಸು ಸಚಿವಾಲಯ ಇತ್ಯಾದಿಗಳ ‘ಜಿಡಿಪಿಯು ಶೇ.2ರ ಆಜುಬಾಜಿನಲ್ಲಿರುತ್ತದೆ’ ಎಂಬ ಉಹಾಪೋಹಭರಿತ ಅಂದಾಜುಗಳಿಗೆ ತೆರೆಬಿದ್ದಂತಾಗಿದೆ.

ಪ್ರಸಕ್ತ ವಿತ್ತೀಯ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಹಣದುಬ್ಬರವನ್ನು ಏರುಹಾದಿಯಲ್ಲೇ ಸಾಗಲಿದ್ದು, ಮೂರು ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಶೇ.4ರ ಮಿತಿಯಲ್ಲಿರಲಿದೆ ಎಂದು ಆರ್ಬಿಐ ಮುನ್ನಂದಾಜು ಮಾಡಿದೆ. ರಫ್ತುದಾರರಿಗೆ ನೆರವಾಗುವ ಸಲುವಾಗಿ ಎಕ್ಸಿಮ್ ಬ್ಯಾಂಕಿಗೆ 15,000 ಕೋಟಿ ರುಪಾಯಿಗಳ ಡಾಲರ್ ವಿನಿಮಯ ಸಾಲ ನೀಡಲಿದೆ. ಜತೆಗೆ ರಫ್ತು ಸಾಲದ ಮರುಪಾವತಿ ಅವಧಿಯನ್ನು ಹಾಲಿ 1 ವರ್ಷದಿಂದ 15 ತಿಂಗಳಿಗೆ ವಿಸ್ತರಿಸಿದೆ. ಸಿಡ್ಬಿಗೆ 15,000 ಕೋಟಿ ರುಪಾಯಿಗಳ ಸಾಲ ಪುನರ್ಧನ ಸೌಲಭ್ಯದ ಜತೆಗೆ ಸಾಲ ಮರುಪಾವತಿಗೆ 90 ದಿನಗಳ ವಿನಾಯ್ತಿ ನೀಡಲು ಆರ್ಬಿಐ ನಿರ್ಧರಿಸಿದೆ. ಈ ಉಪಕ್ರಮಗಳಿಂದಾಗಿ ನಗದು ಹರಿವು ಹೆಚ್ಚಲಿದೆ.

ಅನಿಶ್ಚಿತ ಭವಿಷ್ಯದ ಸವಾಲುಗಳನ್ನು ಎದುರಿಸಲು RBI ತನ್ನ ಎಲ್ಲಾ ಪರಿಕರಗಳನ್ನು ಬಳಸಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇಲ್ಲಿ ಎಲ್ಲಾ ಪರಿಕರಗಳನ್ನು ಬಳಸಲಿದೆ ಎಂದರೆ- ಅಗತ್ಯ ಬಂದರೆ ವಿದೇಶಿ ವಿನಿಮಯ ಮೀಸಲನ್ನೂ ಬಳಸಲಿದೆ ಎಂದರ್ಥ. ಪ್ರಸ್ತುತ ಭಾರತದ ವಿದೇಶಿ ವಿನಿಮಯ ಮೀಸಲು 487 ಬಿಲಿಯನ್ ಡಾಲರ್ ಗಳಷ್ಟಿದೆ. ರುಪಾಯಿ ಲೆಕ್ಕದಲ್ಲಿ 36,89,212 ಕೋಟಿ ರುಪಾಯಿಗಳಷ್ಟಿದೆ. ಅಂದರೆ ಕೇಂದ್ರ ಸರ್ಕಾರದ ಒಂದು ವರ್ಷದ ಬಜೆಟ್ ಗಿಂತಲೂ ಹೆಚ್ಚು.

ದೇಶದ ಬೃಹದಾರ್ಥಿಕತೆಯು ಚಿಂತಾಜನಕ ಸ್ಥಿತಿಯಲ್ಲಿದೆ. ಕೈಗಾರಿಕಾ ಉತ್ಪನ್ನವು ಶೇ.17ರಷ್ಟು ಕುಸಿದಿದೆ, ತಯಾರಿಕಾ ಚಟುವಟಿಕೆಯು ಶೇ.21ರಷ್ಟು ತಗ್ಗಿದೆ, ಮುಖ್ಯ ವಲಯದ ಉದ್ಯಮಗಳ ಉತ್ಪಾದನೆಯು ಶೇ.6.5ರಷ್ಟು ಕುಸಿದಿದೆ. ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಕೊಂಚ ಚೇತರಿಕೆ ಕಂಡುಬಂದರೂ ಸಹ ಜಿಡಿಪಿ ಋಣಾತ್ಮಕ ಬೆಳವಣಿಗೆ ದಾಖಲಿಸಲಿದೆ. ಹಣಕಾಸು ನೀತಿಯ ಸುಧಾರಣಾ ಕ್ರಮಗಳು ಉತ್ತಮ ಫಲಿತಾಂಶ ನೀಡುತ್ತಿವೆ. ವಿತ್ತೀಯ, ಹಣಕಾಸು ಮತ್ತು ಆಡಳಿತಾತ್ಮಕ- ಈ ಸಂಯುಕ್ತ ಕ್ರಮಗಳಿಂದಾಗಿ ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಚೇತರಿಕೆ ಕಂಡುಬರಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಮಾರುಕಟ್ಟೆ ಕಾರ್ಯಚಟುವಟಿಕೆಗೆ ಉತ್ತೇಜನ, ಆಮದು ಮತ್ತು ರಫ್ತಿಗೆ ಪ್ರೋತ್ಸಾಹ, ಸಾಲದ ಪ್ರಮಾಣ ಹೆಚ್ಚಿಸಿ ಹಣಕಾಸು ಒತ್ತಡವನ್ನು ತಗ್ಗಿಸುವುದು, ದುಡಿಯುವ ಬಂಡವಾಳವನ್ನು ಪಡೆಯಲು ಅವಕಾಶ ನೀಡುವುದು ಮತ್ತು ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಹಣಕಾಸು ಮಿತಿಗಳನ್ನು ನಿವಾರಿಸುವುದು- ಆರ್ಬಿಐ ಪ್ರಕಟಿಸಿದ ಪರಿಹಾರ ಮಾರ್ಗೋಪಾಯಗಳ ಉದ್ದೇಶವಾಗಿದೆ.

ದೇಶದಲ್ಲಿ ಬೇಡಿಕೆ ಗಣನಿಯವಾಗಿ ಕುಸಿದಿದೆ, ಮುಖ್ಯವಾಗಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಮತ್ತು ಖಾಸಗಿ ಉಪಬೋಗಗಳ ಕುಸಿತವು ಹೆಚ್ಚಿದೆ. ಇದರ ನಡುವೆಯೂ ಕೃಷಿ ಮತ್ತು ಕೃಷಿಯಾಧಾರಿತ ಚಟುವಟಿಕೆಗಳು ಗರಿಗೆದರಿದ್ದು, ಶೇ.3.7ರಷ್ಟು ಆಹಾರ ಉತ್ಪಾದನೆ ಹೆಚ್ಚಳವಾಗಿದೆ. ಇದು ಆರ್ಥಿಕತೆ ಚೇತರಿಕೆಗೆ ಒತ್ತಾಸೆಯಾಗಲಿದೆ ಎಂದೂ ಶಕ್ತಿಕಾಂತ್ ದಾಸ್ ಹೇಳದ್ದಾರೆ.

RBI ಪ್ರಕಟಿಸಿದ ರೆಪೊ ದರ ಕಡಿತ ಸೇರಿದಂತೆ ಆರ್ಥಿಕ ಉತ್ತೇಜನ ಕ್ರಮಗಳಿಗೆ ಷೇರುಪೇಟೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದೆ. ಬ್ಯಾಂಕ್ ನಿಫ್ಟಿ 450 ಅಂಶಗಳಷ್ಟು ಕುಸಿದರೆ, ಸೆನ್ಸೆಕ್ಸ್ 350 ಮತ್ತು ನಿಫ್ಟಿ 100 ಅಂಶಗಳಷ್ಟು ಕುಸಿದಿತ್ತು.

Click here Support Free Press and Independent Journalism

Pratidhvani
www.pratidhvani.com