ಮೋದಿ ಕನಸಿನ ಸೆಂಟ್ರಲ್ ವಿಸ್ತಾ ಯೋಜನೆ ಸುತ್ತ ಅನುಮಾನದ ಹುತ್ತ!
ರಾಷ್ಟ್ರೀಯ

ಮೋದಿ ಕನಸಿನ ಸೆಂಟ್ರಲ್ ವಿಸ್ತಾ ಯೋಜನೆ ಸುತ್ತ ಅನುಮಾನದ ಹುತ್ತ!

ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಪತ್ರ ಬರೆದ ಬೆನ್ನಲ್ಲೇ ಇದೀಗ, ದೇಶದ ಅಗ್ರಮಾನ್ಯ ಶಿಲ್ಪಿಗಳಲ್ಲಿ ಒಬ್ಬರಾಗಿರುವ ಅನೀಶ್ ಕಪೂರ್ ಕೂಡ ಸೆಂಟ್ರಲ್ ವಿಸ್ತಾ ಯೋಜನೆ ಬಗ್ಗೆ ದನಿ ಎತ್ತಿದ್ದು, ಭಾರತದ ಭವ್ಯ ಪರಂಪರೆಯನ್ನು ನಾಶ ಮಾಡಲು ಮೋದಿ ಕರೋನಾ ವೈರಸ್ ಬಿಕ್ಕಟ್ಟನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ದೇಶದ ಕರೋನಾ ಲಾಕ್ ಡೌನ್ ಸಂತ್ರಸ್ತ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬಿಡಿಗಾಸು ಹಣಕಾಸು ನೆರವು ಸಿಗಲಿಲ್ಲ. ಕೈಯಲ್ಲಿ ಕಾಸಿಲ್ಲದೆ ಜೀವ ಬಿಡುತ್ತಿದ್ದ ಅವರು ಶ್ರಮಜೀವಿ ಎಕ್ಸ್ ಪ್ರೆಸ್ ರೈಲುಗಳ ದುಬಾರಿ ದರ ಭರಿಸಲಾಗದೆ ಬರಿಗಾಲಲ್ಲಿ ಹೆದ್ದಾರಿಗೆ ರಕ್ತ ಬಸಿಯುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಬರೋಬ್ಬರಿ 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನವದೆಹಲಿಯ ಸೆಂಟ್ರಲ್ ವಿಸ್ತಾ ಭವನದ ಮರು ನಿರ್ಮಾಣಕ್ಕೆ ಮುಂದಾಗಿದೆ.

ಈ ಯೋಜನೆ ಕರೋನಾಕ್ಕೆ ಮುನ್ನವೇ ಯೋಜಿತವಾದುದಾದರೂ, ಕರೋನಾ ಸಂಕಷ್ಟ ಮತ್ತು ಆ ಹಿಂದಿನ ಆರ್ಥಿಕ ಕುಸಿತದ ಪರಿಣಾಮವಾಗಿ ದೇಶದ ಖಜಾನೆ ಖಾಲಿಯಾಗಿದೆ ಎಂಬುದನ್ನು ಸ್ವತಃ ಸರ್ಕಾರದ ಅಂಕಿಅಂಶಗಳೇ ಹೇಳುತ್ತಿರುವಾಗ, ಕಾರ್ಮಿಕರು, ನಿರ್ಗತಿಕರು, ಬಡವರ ಬದುಕಿಗೆ ಲಾಕ್ ಡೌನ್ ನೀಡಿರುವ ಆಘಾತದಿಂದ ಪಾರು ಮಾಡಲು ಅವರಿಗೆ ಯಾವುದೇ ನೇರ ಹಣಕಾಸು ಬೆಂಬಲ ನೀಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲದಿರುವಾಗ, ಈಗಾಗಲೇ ಇರುವ ಭವನವನ್ನು ಕೆಡವಿ ಮರು ನಿರ್ಮಾಣ ಮಾಡುವ ಜರೂರೇನಿದೆ ಎಂಬುದು ಈಗ ಉದ್ಭವವಾಗಿರುವ ಪ್ರಶ್ನೆ. ಆ ಕಾರಣಕ್ಕಾಗಿಯೇ ಇಡೀ ಯೋಜನೆ ಈಗ ಸಾರ್ವಜನಿಕ ಟೀಕೆಯ, ವಿವಾದದ ವಸ್ತುವಾಗಿದೆ.

ಪ್ರತಿಪಕ್ಷಗಳು, ವಿವಿಧ ನಾಗರಿಕ ಹಿತಾಸಕ್ತ ಗುಂಪುಗಳು, ಆರ್ಥಿಕ ತಜ್ಞರು ಸೇರಿದಂತೆ ಯಾವೊಬ್ಬರೂ ಸರ್ಕಾರದ ಈ ಸೆಂಟ್ರಲ್ ವಿಸ್ತಾ ಪುನರ್ ನಿರ್ಮಾಣ ಯೋಜನೆಗೆ ಸಹಮತ ವ್ಯಕ್ತಪಡಿಸಿಲ್ಲ. ಬದಲಾಗಿ ಎಲ್ಲರೂ ಕರೋನಾ ಮತ್ತು ಲಾಕ್ ಡೌನ್ ಸಂಕಷ್ಟದ ಹೊತ್ತಲ್ಲಿ ದೇಶ, ಜನರ ಜೀವ ಮತ್ತು ಬದುಕು ಉಳಿಸುವ ನಿಟ್ಟಿನಲ್ಲಿ ಸಂಪೂರ್ಣ ಕೈಚೆಲ್ಲಿರುವ ಹೊತ್ತಲ್ಲಿ; ಕನಿಷ್ಟ ವಲಸೆ ಕಾರ್ಮಿಕರಿಗೆ ನೀರು- ನೆರಳು ಒದಗಿಸಲೂ ಶಕ್ತವಾಗಿಲ್ಲದ ಸ್ಥಿತಿಯಲ್ಲಿ, ಪೊಳ್ಳು ಭರವಸೆಯ ಪ್ಯಾಕೇಜುಗಳಲ್ಲಿ ಶೇ.20ರಷ್ಟೂ ವಾಸ್ತವ ಅನುಷ್ಠಾನ ಮಾಡಲಾಗದ ಹೀನಾಯ ಸ್ಥಿತಿಯಲ್ಲಿ ಇಂತಹದ್ದೊಂದು ಅನಗತ್ಯ ಮತ್ತು ದುಂದುವೆಚ್ಚದ ಯೋಜನೆಯನ್ನು ತರಾತುರಿಯಲ್ಲಿ ಕೈಗೆತ್ತಿಕೊಳ್ಳುವ ಜರೂರು ಏನಿದೆ ಎಂದು ಎಲ್ಲರೂ ಪ್ರಶ್ನಿಸಿದ್ದಾರೆ.

ಇದೀಗ, ದೇಶದ 60ಕ್ಕೂ ಹೆಚ್ಚು ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ದೇಶವೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಹೊತ್ತಲ್ಲಿ, ಈ ಯೋಜನೆ ಅನಿವಾರ್ಯವೇನಲ್ಲ. ದೇಶದ ಆರೋಗ್ಯ ವ್ಯವಸ್ಥೆ ಸುಧಾರಿಸುವ ಮೂಲಕ ಕರೋನಾದಿಂದ ಜನರ ಜೀವ ಉಳಿಸಲು ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಹೊತ್ತಿನಲ್ಲಿ ಹೀಗೆ ಅಪಾರ ಪ್ರಮಾಣದ ಹಣವನ್ನು ಅನಿವಾರ್ಯವಲ್ಲದ, ತೀರಾ ಆದ್ಯತೆಯೂ ಅಲ್ಲದ ಯೋಜನೆಗೆ ಸುರಿಯುವುದು ವಿವೇಚನೆಯ ಕ್ರಮವಲ್ಲ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ದೇಶದ ಜನ ಕನಿಷ್ಟ ಊಟ- ವಸತಿ ಇಲ್ಲದೆ, ವೈದ್ಯಕೀಯ ಸೌಲಭ್ಯ ಸಿಗದೆ ಪ್ರಾಣ ಬಿಡುತ್ತಿರುವಾಗ ಇರುವ ಕಟ್ಟಡವನ್ನು ಕೆಡವಿ, ಮರು ನಿರ್ಮಾಣ ಮಾಡುವ ಸೆಂಟ್ರಲ್ ವಿಸ್ತಾದಂತಹ ಯೋಜನೆ ಜಾರಿ ಮಾಡುವುದು ಒಂದು ರೀತಿಯಲ್ಲಿ ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸಿದಂತೆಯೇ ಸರಿ ಎಂದೂ ಮಾಜಿ ಅಧಿಕಾರಿಗಳು ತೀರಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ, ದೇಶದ ರಾಜಧಾನಿಯ ವಾಸ್ತುವಿನ್ಯಾಸ ಮತ್ತು ಪರಂಪರೆಯ ಕುರಿತ ಇಂತಹದ್ದೊಂದು ಮಹತ್ವದ ನಿರ್ಮಾಣ ಕಾರ್ಯಕ್ಕೆ ಮುನ್ನ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಪ್ರತಿಪಕ್ಷಗಳೂ ಸೇರಿದಂತೆ ಯಾವುದೇ ರಾಜಕೀಯ ವಲಯದ ಜೊತೆಗಾಗಲೀ, ವಾಸ್ತುಶಿಲ್ಪ ವಲಯದ ತಜ್ಞರ ಜೊತೆಗಾಗಲೀ, ರಾಜಧಾನಿ ದೆಹಲಿಯ ಪಾರಂಪರಿಕ ತಾಣಗಳ ತಜ್ಞರ ಜೊತೆಗಾಗಲೀ ಯಾವುದೇ ರೀತಿಯ ಸಮಾಲೋಚನೆ, ಚರ್ಚೆಗಳನ್ನು ಮಾಡಿಲ್ಲ. ಇದು, ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಮತ್ತೊಂದು ನಿದರ್ಶನ. ಅದರಲ್ಲೂ ಮುಖ್ಯವಾಗಿ ದೇಶವನ್ನು ಕಟ್ಟಿದ, ರಾಜಧಾನಿಯನ್ನು ರೂಪಿಸಿದ ಹಿಂದಿನ ನಾಯಕರು, ಅರಸರ ಕೊಡುಗೆಗಳನ್ನು, ಅವರ ನೆನಪಿನ ಕುರುಹುಗಳನ್ನು ಅಳಿಸಿಹಾಕಿ, ತಮ್ಮ ಅಜೆಂಡಾದ ಮೇಲೆ ಮರು ನಿರ್ಮಾಣ ಮಾಡಲು ಬಿಜೆಪಿ ಈ ಯೋಜನೆಯನ್ನು ಇಷ್ಟು ತರಾತುರಿಯಲ್ಲಿ ಕೈಗೆತ್ತಿಕೊಂಡಿದೆ ಎಂಬ ಮಾತುಗಳೂ ಕೇಳಿಬಂದಿವೆ.

ಬೃಹತ್ ನಿರ್ಮಾಣಗಳ ಕುರಿತ ಭ್ರಮೆ ಮತ್ತು ಹಪಾಹಪಿ ಆಳುವ ಮಂದಿಯನ್ನು ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆಯ ಬದಲಾಗಿ, ಸರ್ವನಾಶಕ್ಕೆ ಕೊಂಡೊಯ್ಯುತ್ತದೆ. ಈಗಿನ ಬಿಜೆಪಿ ನಾಯಕರಿಗೂ ಇಂತಹ ಭ್ರಮೆ ಇದೆ. ತಮ್ಮ ಮತ್ತು ತಮ್ಮ ಸಿದ್ಧಾಂತದ ಕುರುಹಗಳನ್ನು ದೇಶಾದ್ಯಂತ ನಿರ್ಮಾಣ ಮಾಡುವ ಹಠ ಅವರದ್ದು. ಆದರೆ, ಅದಿಷ್ಟೇ ಆಗಿದ್ದರೆ, ಅದು ತೀರಾ ಅಪಾಯಕಾರಿ ಎನಿಸುತ್ತಿರಲಿಲ್ಲ. ಬದಲಾಗಿ ಅವರು ಹಿಂದಿನವರ ಎಲ್ಲಾ ಚಹರೆಗಳನ್ನು, ಸ್ಮಾರಕಗಳನ್ನು, ನಿರ್ಮಾಣಗಳನ್ನು ನಾಶ ಮಾಡಿ, ಅವುಗಳ ಅವಶೇಷಗಳ ಮೇಲೆ ತಮ್ಮ ಹೆಗ್ಗುರುತುಗಳನ್ನು ಕಟ್ಟಲು ಹೊರಟಿದ್ದಾರೆ. ಇದು ಪರಂಪರೆ ಮತ್ತು ದೇಶದ ಸಂಸ್ಕೃತಿಗೆ ಬಗೆವ ದ್ರೋಹ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಅದರಲ್ಲೂ 20 ಸಾವಿರ ಕೋಟಿ ಬೃಹತ್ ಮೊತ್ತದ ಸೆಂಟ್ರಲ್ ವಿಸ್ತಾ ಯೋಜನೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಿಲ್ಲ. ಯೋಜನೆಯ ವಿವರಗಳು, ಗುತ್ತಿಗೆ ಮಾಹಿತಿಯನ್ನು ಕೂಡ ಬಹಳ ದಿನಗಳ ಕಾಲ ಪ್ರತಿಪಕ್ಷಗಳು ಮತ್ತು ಸಾರ್ವಜನಿಕರಿಂದ ಮುಚ್ಚಿಡಲಾಗಿತ್ತು. ಗುಜರಾತ್ ಮೂಲದ ಒಂದು ಕಂಪನಿಗೆ ಸಂಪೂರ್ಣ ನಿರ್ಮಾಣ ಗುತ್ತಿಗೆ ವಹಿಸಲಾಗಿದೆ. ಅದರ ಅರ್ಹತೆ, ಕಾರ್ಯಕ್ಷಮತೆ, ಹಿಂದಿನ ನಿರ್ಮಾಣಗಳ ಇತಿಹಾಸದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪ್ರಜಾಪ್ರಭುತ್ವದ ಸಂಕೇತವಾಗಿರುವ, ದೇಶದ ಭವ್ಯ ರಾಜಕೀಯ ಪರಂಪರೆಯ ಕುರುಹು ಆಗಿರುವ ಮೇರು ಸಂಸತ್ ಭವನವನ್ನು ಬಹುತೇಕ ಉರುಳಿಸುವಂತಹ ಕಾರ್ಯಕ್ಕೆ ಯಾವುದೇ ಸಮಾಲೋಚನೆ ಇಲ್ಲದೆ, ನಾಗರಿಕ ಅಭಿಪ್ರಾಯವಿಲ್ಲದೆ, ಚರ್ಚೆಯಿಲ್ಲದೆ ಜಾರಿಗೆ ತರಲಾಗುತ್ತಿದೆ. ದೇಶದ ಜನತೆ ತಮಗೆ ಭಾರೀ ಜನಾದೇಶ ನೀಡಿದೆ ಎಂದರೆ, ದೇಶದ ಚಹರೆಯ ಭಾಗವಾಗಿರುವ ನಿರ್ಮಾಣಗಳ ಮಾಲೀಕತ್ವ ನೀಡಿದ್ದಾರೆ ಎಂದೇನೂ ಅಲ್ಲ. ಹೀಗೆ ಮನಸೋಇಚ್ಛೆ ವರ್ತಿಸುವುದನ್ನು ಸರ್ಕಾರ ಕೈಬಿಡಬೇಕು ಮತ್ತು ಕೂಡಲೇ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೈಬಿಡಬೇಕು ಎಂದು ಹಿರಿಯ ಅಧಿಕಾರಿಗಳು ಪತ್ರದಲ್ಲಿ ಆಗ್ರಹಿಸಿದ್ದಾರೆ.

ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಷ್ಟೇ ಅಲ್ಲದೆ; ದೇಶದ ಅಗ್ರಮಾನ್ಯ ಶಿಲ್ಪಿಗಳಲ್ಲಿ ಒಬ್ಬರಾಗಿರುವ ಅನೀಶ್ ಕಪೂರ್ ಕೂಡ ಈ ಬಗ್ಗೆ ದನಿ ಎತ್ತಿದ್ದು, ‘ದ ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಲೇಖನದಲ್ಲಿ ಭಾರತದ ಭವ್ಯ ಪರಂಪರೆಯನ್ನು ನಾಶ ಮಾಡಲು ಮೋದಿ ಕರೋನಾ ವೈರಸ್ ಬಿಕ್ಕಟ್ಟನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

ಯಾವುದೇ ಸಮಾಲೋಚನೆಯಾಗಲೀ, ಕಾನೂನುಬದ್ಧ ಕ್ರಮಗಳನ್ನಾಗಲೀ ಅನುಸರಿಸದೆ ಮೋದಿ ಸರ್ಕಾರ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಮುಂದಾಗಿದೆ. ಕರೋನಾ ಸಂಕಷ್ಟದ ನಡುವೆ, ಪರಿಸ್ಥಿತಿಯ ಲಾಭ ಪಡೆದು ತರಾತುರಿಯಲ್ಲಿ ಯೋಜನೆ ಅನುಷ್ಟಾನಕ್ಕೆ ಮುಂದಾಗಿದೆ. 1912-31ರ ಅವಧಿಯಲ್ಲಿ ಖ್ಯಾತ ವಾಸ್ತುಶಿಲ್ಪಿ ಎಡ್ವರ್ಡ್ ಲ್ಯುಟೆಯೆನ್ಸ್ ನಿರ್ಮಿಸಿದ ಸಂಸತ್ ಭವನವನ್ನು ನೆಲಸಮಗೊಳಿಸಿ, ಆ ಜಾಗದಲ್ಲಿ ಯಾವುದೇ ವಿವೇಚನೆ ಇಲ್ಲದ, ವಿವೇಕಹೀನ ಯೋಜನೆಯ ಮೂಲಕ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ತಮ್ಮದೇ ಗುಜರಾತಿನ ಬಿಮಲ್ ಪಟೇಲ್ ಎಂಬ ವಾಸ್ತು ಶಿಲ್ಪಿಗೆ ಈ ಇಡೀ ಯೋಜನೆ ವಹಿಸಿದ್ದಾರೆ. ಇಂತಹ ಮಹತ್ವದ ಕಾರ್ಯಕ್ಕೆ ಅವರನ್ನು ನೇಮಿಸುವಾಗ ಕನಿಷ್ಟ ಕಾನೂನುಬದ್ಧ ಪ್ರಕ್ರಿಯೆಯನ್ನಾಗಲೀ, ಪಾರದರ್ಶಕ ಕ್ರಮವನ್ನಾಗಲೀ ಅನುಸರಿಸಿಲ್ಲ. ಈಗಾಲಗೇ ಅಹಮದಾಬಾದ್ ಮತ್ತು ವಾರಣಾಸಿ ನಗರಗಳ ಪಾರಂಪರಿಕ ವಾಸ್ತುಶಿಲ್ಪವನ್ನು ನಾಶ ಮಾಡಿ, ಸಿಮೆಂಟ್ ಕಟ್ಟಡಗಳನ್ನು ರೂಪಿಸಿದ ಕಳಪೆ ದರ್ಜೆಯ ನಿರ್ಮಾಣಕ್ಕೆ ಕುಖ್ಯಾತಿ ಗಳಿಸಿರುವ ವ್ಯಕ್ತಿಗೆ ದೇಶದ ಪ್ರಜಾಪ್ರಭುತ್ವದ ಭವ್ಯ ಸದನ ನಿರ್ಮಾಣದ ಹೊಣೆ ವಹಿಸಿರುವುದು ಹಾಸ್ಯಾಸ್ಪದವಾಗಿದೆ ಎಂದೂ ಅನೀಶ್ ಕಪೂರ್ ಕಿಡಿಕಾರಿದ್ದಾರೆ.

ನೆಹರೂ ಅವರ ಜಾತ್ಯತೀತ ಭಾರತದ ಪರಂಪರೆಯನ್ನು ನಾಶ ಮಾಡಿ, ಅದರ ಸ್ಥಾನದಲ್ಲಿ ತಮ್ಮ ಕಟ್ಟರ್ ಹಿಂದುತ್ವದ ಅಜೆಂಡಾವನ್ನು ಪ್ರತಿಷ್ಠಾಪಿಸುವ ತಂತ್ರಗಾರಿಕೆಯ ಭಾಗವಾಗಿ ಮೋದಿ ಈ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹಾಗಾಗಿಯೇ ಅವರು ದೇಶ- ವಿದೇಶದ ಪ್ರತಿಭಾವಂತ ವಾಸ್ತುತಜ್ಞರನ್ನು, ವಾಸ್ತುಶಿಲ್ಪಿಗಳನ್ನು ಬದಿಗೊತ್ತಿ, ಕೇವಲ ತಮ್ಮ ಆಪ್ತ ಎಂಬ ಕಾರಣಕ್ಕೆ ಮತ್ತು ಹಿಂದೂ ಎಂಬ ಕಾರಣಕ್ಕೆ ಪಟೇಲ್ ಗೆ ಇಡೀ ಯೋಜನೆಯನ್ನು ಧಾರೆ ಎರೆದಿದ್ದಾರೆ. ಆ ಮೂಲಕ ತಮ್ಮ ಹಿಂದೂ ರಾಷ್ಟ್ರ ಅಜೆಂಡಾದ ಅನುಷ್ಠಾನಕ್ಕೆ ಈ ನಿರ್ಮಾಣ ಯೋಜನೆಯನ್ನೂ ಬಳಸಿಕೊಂಡಿದ್ದಾರೆ ಎಂದು ಕಪೂರ್ ವಾಗ್ದಾಳಿ ಮಾಡಿದ್ದಾರೆ.

ಒಟ್ಟಾರೆ, ಒಂದು ಕಡೆ ಲಾಕ್ ಡೌನ್ ನಿಂದ ಬದುಕನ್ನೇ ಕಳೆದುಕೊಂಡು ಬೀದಿಪಾಲಾದ ಜನಗಳಿಗೆ ಕನಿಷ್ಟ ಊಟ- ವಸತಿಗೆ ಹಣಕಾಸು ನೆರವು ನೀಡಲಾಗದ ಸರ್ಕಾರ, ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಪ್ರಮಾಣದ ಸುರಕ್ಷಾ ಸಾಧನಗಳನ್ನು, ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್ ಗಳನ್ನು ನೀಡಲಾಗದ ಸರ್ಕಾರ, ಇಂತಹ ಸಂಕಷ್ಟದ ಹೊತ್ತಲ್ಲಿ ಬರೋಬ್ಬರಿ 20 ಸಾವಿರ ಕೋಟಿ ರೂ. ಮೊತ್ತದ ಬೃಹತ್ ಯೋಜನೆಗೆ ಇನ್ನಿಲ್ಲದ ಧಾವಂತ ಮಾಡುತ್ತಿರುವುದು ಹಲವರ ಅನುಮಾನಕ್ಕೂ, ಆಕ್ರೋಶಕ್ಕೆ ತುಪ್ಪ ಸುರಿದಿದೆ.

Click here Support Free Press and Independent Journalism

Pratidhvani
www.pratidhvani.com