ವಲಸೆ ಕಾರ್ಮಿಕರ ವಿಚಾರದಲ್ಲಿ ಮೋದಿ ಮಾಡಿದ 6 ಎಡವಟ್ಟುಗಳೇನು..?
ರಾಷ್ಟ್ರೀಯ

ವಲಸೆ ಕಾರ್ಮಿಕರ ವಿಚಾರದಲ್ಲಿ ಮೋದಿ ಮಾಡಿದ 6 ಎಡವಟ್ಟುಗಳೇನು..?

ವಲಸೆ ಕಾರ್ಮಿಕರು ಕರೋನಾ ಸಂದಿಗ್ಧತೆ ನಡುವೆ ಸಿಕ್ಕಿ ಒದ್ದಾಡುವಂತಾಗಲು ಆಳುವ ಸರಕಾರ ತೆಗೆದುಕೊಂಡ ನಿರ್ಧಾರಗಳೇ ಕಾರಣ ಅನ್ನೋ ಮಾತು ವ್ಯಾಪಕವಾಗಿ ಕೇಳಿ ಬಂದಿದೆ. ಅದರಲ್ಲೂ ಲಾಕ್‌ಡೌನ್‌ ಘೋಷಣೆಯಿಂದ ಹಿಡಿದು ಶ್ರಮಿಕ್‌ ರೈಲು ಬಿಡುಗಡೆವರೆಗೂ ಪ್ರಧಾನಿ ನರೇಂದ್ರ ಮೋದಿ ಮಾಡಿದ ಎಡವಟ್ಟುಗಳೇನು? ಅಂತಹ ಪ್ರಮುಖ ಆರು ಎಡವಟ್ಟುಗಳು ಇಲ್ಲಿವೆ.

ಕೃಷ್ಣಮಣಿ

ಭಾರತದಲ್ಲಿ ಕರೋನಾ ಸೋಂಕು ಕೇವಲ 396 ಜನರಿಗೆ ಬಂದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು. ಮಾರ್ಚ್ 22ರಂದು ಜನರೆಲ್ಲರೂ ಮನೆಯೊಳಗೆ ಸೇರಿಕೊಂಡು ಸಂಜೆ 5 ಗಂಟೆಗೆ ಬೀದಿಗೆ ಬಂದು ಗಂಟೆ ಬಾರಿದ್ದರು. ಜಾಗಟೆ ಹೊಡೆದಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಆ ಬಳಿಕ ಮಾರ್ಚ್ 24 ರಂದು ಭಾರತದಲ್ಲಿ ಕರೋನಾ ಸೋಂಕಿನ ಸಂಖ್ಯೆ 536 ಆಗಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ದೇಶವನ್ನು ಏಪ್ರಿಲ್ 14ರ ತನಕ ಅಂದರೆ 21 ದಿನಗಳ ಕಾಲ ಲಾಕ್ಡೌನ್ ಮಾಡುತ್ತಿದ್ದೇವೆ. ಕರೋನಾ ಸೋಂಕನ್ನು ತಡೆಗೆ ಇರುವುದು ಇದೊಂದೇ ಉಪಾಯ. ಸಾಮಾಜಿಕ ಅಂತರದಿಂದ ನಾವು ಕರೋನಾ ಹೆಮ್ಮಾರಿಯನ್ನೂ ಓಡಿಸೋಣ ಎಂದು ಮಹತ್ವದ ಸಂದೇಶ ಕೊಟ್ಟಿದ್ದರು. ಜನರೂ ಕೂಡ ‘ಹೌದು ಹುಲಿಯಾ’ ಎಂದಿದ್ದರು. ಆ ನಂತರ ಮತ್ತೊಮ್ಮೆ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14 ಬೆಳಗ್ಗೆ 10 ಗಂಟೆಗೆ ಮಾತನಾಡಿ ಮತ್ತೆ 19 ನಗಳ ಕಾಲ ಎಂದರೆ ಮೇ 3 ರ ತನಕ ಲಾಕ್ಡೌನ್ ಎಂದು ಬಿಟ್ಟರು. ಈ ವೇಳೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಂದರೆ ಸಾಕು ಎನ್ನುವ ಉದ್ದೇಶದಿಂದ ಪ್ರಧಾನಿ ಮಾತನ್ನು ಶೇಕಡವಾರು ಜನರು ಅಕ್ಷರಶಃ ಪಾಲಿಸಿದ್ದರು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ಹುಮ್ಮಸ್ಸು ಕಳೆದುಕೊಂಡರು. ಕೇಂದ್ರ ಗೃಹ ಇಲಾಖೆ ಮೂಲಕ ಒಂದೊಂದೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಾ ಸಾಗಿದರು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮಹಾನ್ ಎಡವಟ್ಟುಗಳ ಪಟ್ಟಿಯನ್ನು ಕಣ್ಣಾಡಿಸಿದರೆ ಹೀಗಿದೆ.

ಸ್ವತಂತ್ರ್ಯ ಭಾರತದ ಬಳಿಕ ಭಾರತ ವಿಭಜನೆಯಾದ ಕೂಡಲೇ ನಡೆದ ವಲಸೆ ಸಂಕಷ್ಟ ಈ ಬಾರಿಯ ಲಾಕ್ಡೌನ್ ಸಮಯದಲ್ಲಿ ಎದುರಾಗಿದೆ ಎಂದು ಹೇಳಲಾಗ್ತಿದೆ. ಕರೋನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ನಿಭಾಯಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ನಿಶ್ಚಿಂತೆಯಿಂದ ಇತ್ತು. ಸಾವಿರಾರು ಕಿಲೋ ಮೀಟರ್ ದೂರು ಕಾಲ್ನಡಿಗೆಯಲ್ಲೇ ಸಾಗುವ ಅನಿವಾರ್ಯೆತೆಯೂ ಎದುರಾಯ್ತು. 170ಕ್ಕೂ ಹೆಚ್ಚು ಜನರು ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ರಾಷ್ಟ್ರೀಯ ಸುದ್ದಿ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ ‘ದುರಂತ ಮತ್ತು ಅವಮಾನ’ ಎಂದು ಬಣ್ಣಿಸಿ ವರದಿ ಮಾಡಿದೆ.

ಕೇವಲ 4 ಗಂಟೆಯಲ್ಲಿ ಲಾಕ್ಡೌನ್ ಘೋಷಣೆ

ಜನವರಿ 30ರಂದು ಭಾರತಕ್ಕೆ ಕಾಲಿಟ್ಟ ಕರೋನಾ ವೈರಸ್ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಯೋಜನೆ ಮಾಡಿಕೊಳ್ಳಬಹುದಿತ್ತು. ಯಾಕಂದ್ರೆ ಕರೋನಾ ಸೋಂಕು ಭಾರತದಲ್ಲಿ ಏಕಾಏಕಿ ಹರಡಲಿಲ್ಲ. ಮಾರ್ಚ್ 13ರಂದು ಈ ಬಗ್ಗೆ ಮಾಹಿತಿ ನೀಡಿದ್ದ ಅಧಿಕಾರಿಗಳು ಕರೋನಾ ಸೋಂಕು ಸಾಂಕ್ರಾಮಿಕವೂ ಅಲ್ಲ, ತುರ್ತು ಪರಿಸ್ಥಿತಿಯೂ ಅಲ್ಲ ಅಂದು ಬಣ್ಣಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಅಂದರೆ ಮಾರ್ಚ್ 18 ರಂದು ದೂರದರ್ಶನದಲ್ಲಿ ಮಾತನಾಡಿ ಮಾರ್ಚ್ 22ರಂದು ಸ್ವಯಂ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಮಾರ್ಚ್ 21ರಿಂದ ರೈಲು ತನ್ನ ಸಂಚಾರವನ್ನು ನಿಲ್ಲಿಸಿತು. ಆ ನಂತರ ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ದೇಶವನ್ನು ಮೂರು ವಾರಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿದರು. ಘೋಷಣೆ ಮಾಡಿದ ಕೇವಲ 4 ಗಂಟೆಗಳ ಅವಧಿಯಲ್ಲಿ ಎನ್ನುವುದು ವಿಶೇಷ.

ಕಾರ್ಮಿಕರ ಹಿತ ಕಾಯುವ ಸಲಹೆ ಮಾತ್ರ.. ಸಹಾಯವಿಲ್ಲ!

ಲಾಕ್ಡೌನ್ ಸಂಕಷ್ಟದ ಸುಳಿಗೆ ಸಿಲುಕಿದ ವಲಸೆ ಕಾರ್ಮಿಕರ ಹಿತ ಕಾಯುವಂತೆ ಕೇಂದ್ರ ಸರ್ಕಾರ ರಾಜ್ದಯ ಸರ್ಕಾಋಗಳಿಗೆ ಸಲಹೆ ನೀಡಿತ್ತು. ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಮತ್ತು ವೇತನವನ್ನು ನೀಡುವಂತೆ ಉದ್ಯೋಗದಾತರಿಗೆ ಸಲಹೆ ನೀಡಿತು. ಆದರೆ ಅನೇಕ ಸಣ್ಣ ಉದ್ಯಮಗಳು ಸಣ್ಣ ಪ್ರಮಾಣದ ಹಣಕಾಸು ಹೊಂದಿದ್ದವು ಎನ್ನುವುದು ಕೇಂದ್ರದ ಪರಿಜ್ಞಾನಕ್ಕೆ ಬರಲೇ ಇಲ್ಲ. ಈ ಅವಧಿಯಲ್ಲಿ ಸಣ್ಣ ಉದ್ಯಮಗಳಿಗೆ ಬೆಂಬಲವಾಗಿ ನಿಲ್ಲುವ ಯಾವುದೇ ಔದಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲಿಲ್ಲ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ದಾಖಲಿಸಿಕೊಂಡ ಭಾರತೀಯರಿಗೆ ಆಹಾರ ಧಾನ್ಯವನ್ನು ದ್ವಿಗುಣಗೊಳಿಸಿ ಹಂಚುವುದಾಗಿ ಮಾರ್ಚ್ 26 ರಂದು ಸರ್ಕಾರ ಘೋಷಿಸಿತು. ಆದರೆ ಹೆಚ್ಚಿನ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಯೇ ಇಲ್ಲ ಎಂಬ ಅಂಶವನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿತು. ಅಂತಿಮವಾಗಿ, ಲಾಕ್‌ಡೌನ್‌ಗೆ 50 ದಿನಗಳು ಕಳೆಯುವ ಹೊತ್ತಿಗೆ ಎಚ್ಚೆತ್ತುಕೊಂಡ ಕೇಂದ್ರ 80 ದಶಲಕ್ಷ ಭಾರತೀಯರಿಗೆ ಆಹಾರ ಬೆಂಬಲವನ್ನು ಘೋಷಿಸಿತು. ಅಷ್ಟರಲ್ಲಿ ಅನ್ನ ನೀರು ಸಿಗದೆ ಸಾವನ್ನಪ್ಪಿದ ವರದಿಗಳು ಬಂದಿದ್ದವು ಎನ್ನುವುದು ವಿಪರ್ಯಾಸ.

ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ರೈಲು ಬಿಟ್ಟಾಗಲು ಎಡವಟ್ಟು..!

ವಲಸೆ ಕಾರ್ಮಿಕರ ಸಂಕಷ್ಟದ ಕೇಂದ್ರ ಸರ್ಕಾರ ಮುಟ್ಟುವ ವೇಳೆಗೆ ಏಪ್ರಿಲ್ 29 ಆಗಿತ್ತು. ಆಗ ಎಚ್ಚೆತ್ತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಮನೆಗಳಿಗೆ ಪ್ರಯಾಣಿಸಲು ಅವಕಾಶ ನೀಡುವುದಾಗಿ ಘೋಷಿಸಿತು. 5 ವಾರಗಳ ದುಃಖವನ್ನು , ಹಸಿವು ಸಂಕಟವನ್ನು ತಡೆದುಕೊಂಡಿದ್ದ ಜನ ತಮ್ಮ ಹುಟ್ಟೂರುಗಳಿಗೆ ತೆರಳಲು ಮುಂದಾಗಿದ್ದರು. ಮೊದಲು ಬಸ್ ಮೂಲಕ ಎಂದಿದ್ದ ಕೇಂದ್ರ 2 ದಿನಗಳ ಬಳಿಕ ಶ್ರಮಿಕ್ ರೈಲು ಓಡಿಸುವುದಾಗಿ ತಿಳಿಸಿತ್ತು. ಭಾರತೀಯ ರೈಲ್ವೆಯನ್ನು ಸಾರಿಗೆ ಸಂಸ್ಥೆ ಹಂತಕ್ಕೆ ಇಳಿಸಲಾಯಿತು. ಕಾರ್ಮಿಕರು ಇರುವ ರಾಜ್ಯ ಹಾಗೂ ಕಾರ್ಮಿಕರ ಮೂಲ ರಾಜ್ಯದಲ್ಲಿರುವ ಸರ್ಕಾರಗಳು ಒಪ್ಪಿಕೊಂಡರೆ ಮಾತ್ರ ರೈಲು ಸಂಚಾರ ಎನ್ನುವ ಮೂಲಕ ರಾಜ್ಯಗಳಿಗೆ ಪೂರ್ಣಾಧಿಕಾರ ಕೊಟ್ಟಿತ್ತು. ಜೊತೆಗೆ ಕರ್ನಾಟಕವು ಬೇರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು 13 ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಿತು. ಅದು ಸಫಲ ಆಗುವಲ್ಲಿ ತಡವಾಯ್ತು. ಕೆಲವು ರಾಜ್ಯಗಳು ಸೋಂಖು ಹರಡುವ ಭೀತಿಯಲ್ಲಿ ಕಾರ್ಮಿಕರನ್ನು ಕರೆಸಿಕೊಳ್ಳಲು ಹಿಂದೇಟು ಹಾಕಿದವು. ಇದೀಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ ಜೂನ್ 1 ರಿಂದ 200 ಹೆಚ್ಚುವರಿ ರೈಲು ಓಡಿಸುವ ನಿರ್ಧಾರ ಮಾಡಿದೆ. ಯಾವುದೇ ರಾಜ್ಯದ ಮರ್ಜಿಗೆ ಕಾಯುವುದಿಲ್ಲ ಎಂದಿದೆ. ಇದು ಮೊದಲೇ ಆಗಬೇಕಿಲ್ಲ ಕೆಲಸ. ಅರ್ಥವಾಗಲು ಬೇಕಾಗಿದ್ದು ಒಂದು ತಿಂಗಳ ಕಾಲಾವಧಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಕೇಂದ್ರದ ನಿರ್ಧಾರ ವಲಸೆ ಕಾರ್ಮಿಕರಿಗೆ ನರಕ ಯಾತನೆ..!

ಕೇಂದ್ರ ಸರ್ಕಾರ ಶ್ರಮಿಕ್ ರೈಲು ಆರಂಭಿಸಿದ ಕೂಡಲೇ ಕಾರ್ಮಿಕರನ್ನು ಕರೆದುಕೊಂಡು ಅವರ ಸ್ವಂತ ರಾಜ್ಯಗಳಿಗೆ ತಲುಪಿಸಲು ಕೆಲಸ ಮಾಡಲಿಲ್ಲ. ಏಪ್ರಿಲ್ 29 ರ ಆದೇಶದ ಪ್ರಕಾರ ವಲಸೆ ಕಾರ್ಮಿಕರಿಗೆ ತಪಾಸಣೆ ಮತ್ತು ರೋಗಲಕ್ಷಣವಿಲ್ಲದಿದ್ದರೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ ಎಂದು ಇಳಿಸಿತ್ತು. ಇದಕ್ಕಾಗಿ ವಲಸೆ ಕಾರ್ಮಿಕರು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡರು. ಕೆಲವು ರಾಜ್ಯಗಳು ವಲಸೆ ಕಾರ್ಮಿಕರಿಗೆ ರೈಲು ಹತ್ತುವ ಮೊದಲು ವೈದ್ಯಕೀಯ ಪ್ರಮಾಣ ಪತ್ರದ ಬೇಡಿಕೆ ಇಟ್ಟವು ಇದು ಕೂಲಿ ಕಾರ್ಮಿಕರಿಗೆ ಸಂಕಷ್ಟದಾಯಕ ಕೆಲಸವಾಗಿತ್ತು. ವಲಸೆ ಕಾರ್ಮಿಕರು ಮೊದಲು ಆನ್‌ಲೈನ್‌ ನಲ್ಲಿ ಅರ್ಜಿ ಭರ್ತಿ ಮಾಡಬೇಕು. ತಮ್ಮ ತವರು ರಾಜ್ಯಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರಯಾಣಕ್ಕೆ ಯೋಗ್ಯ ಎನ್ನಲು ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕು. ರೈಲ್ವೆ ನಿಲ್ದಾಣವನ್ನು ತೆರಳಲು ಟ್ರಾವೆಲ್ ಪಾಸ್‌ ಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಬೇಕು. ಇಷ್ಟೆಲ್ಲಾ ಮಾಡಿಕೊಂಡ ಬಳಿಕ ಊರುಗಳಿಗೆ ಹೋಗಲು ಟಿಕೆಟ್ ಕನ್ಫರ್ಮ್ ಆಗಿದ್ಯಾ ಎನ್ನುವ ಬಗ್ಗೆಯೂ ಪರಿಶೀಲನೆ ಮಾಡಿಕೊಳ್ಳಬೇಕು. ವಲಸೆ ಕಾರ್ಮಿಕರಲ್ಲಿ ಅದೆಷ್ಟು ಜನ ಉತ್ತಮ ಇಂಟರ್ನೆಟ್ ಸೌಲಭ್ಯದ ಮೊಬೈಲ್ ಬಳಸುತ್ತಾರೆ..? ಒಂದು ವೇಳೆ ಉತ್ತಮ ಮೊಬೈಲ್ ಬಳಸಿದರೂ ಸಂವಹನ ಮಾಡಲು ಸಮರ್ಥರೇ ಎಂಬುದನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ. ಇಷ್ಟೆಲ್ಲಾ ಪ್ರಕ್ರಿಯೆ ನಡೆಸುವಾಗ ಸೋಂಕು ಯಾರಿಗೆ ಎಲ್ಲಿ ಬೇಕಾದರೂ ಹರಡುವ ಸಾಧ್ಯತೆ ಇದೆ ಎನ್ನುವ ಕನಿಷ್ಠ ಆಲೋಚನೆಯೂ ಅಧಿಕಾರಿಗಳಿಗೆ ಬರಲಿಲ್ಲ. ಸಾವಿರಾರು ಜನರನ್ನು ಗುಂಪೂಗೂಡಿಸಿಕೊಂಡು ಮಾತನಾಡುವಾಗಲೂ ಅವರ ಅರಿವಿಗೆ ಬಾರದಿದ್ದದ್ದು ದುರಂತ.

ವಲಸೆ ಕಾರ್ಮಿಕರ ವಿಚಾರದಲ್ಲೂ ಮೋದಿ ಸರ್ಕಾರದ ಸುಳ್ಳು..!

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರ ರೈಲು ದರದ ಶೇಕಡ 85ರಷ್ಟು ಪಾಲನ್ನು ನಾವು ಪಾವತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಬಿಡಿಗಾಸನ್ನೂ ವಲಸೆ ಕಾರ್ಮಿಕರಿಗಾಗಿ ವೆಚ್ಚ ಮಾಡಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಣ ಪಾವತಿಸುತ್ತಿರುವುದಾಗಿ ಹೇಳಿದ್ದ ಮೋದಿ ಸರ್ಕಾರ ಅಂತಿಮವಾಗಿ ವಾರಗಳ ಕಾಲ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ, ನಿರ್ಗತಿಕರಾಗಿದ್ದ ವಲಸೆ ಕಾರ್ಮಿಕರಿಂದಲೇ ಭಾರತೀಯ ರೈಲ್ವೆ ಶ್ರಮಿಕ್ ರೈಲುಗಳ ಸಂಪೂರ್ಣ ಟಿಕೆಟ್ ದರವನ್ನು ಪಡೆದುಕೊಂಡಿದೆ. 2011ರ ಜನಗಣತಿಯಂತೆ ಭಾರತದಲ್ಲಿ 5.6 ಕೋಟಿ ಅಂತರರಾಜ್ಯ ವಲಸಿಗರಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರು ವಲಸೆ ಕಾರ್ಮಿಕರ ಸಂಖ್ಯೆ 6.5 ಕೋಟಿ ಎಂದು ಅಂದಾಜಿಸಿದ್ದಾರೆ. ಎಲ್ಲಾ ಕಾರ್ಮಿಕರಿಗೂ ವಾಪಸ್ ಆಗಲು ಅವಕಾಶ ಕೊಟ್ಟಿದ್ದರೆ ಅದರಿಂದ ಆಗುತ್ತಿದ್ದ ವೆಚ್ಚ ಸುಮಾರು 4,200 ಕೋಟಿ ಆಗುತ್ತಿತ್ತು ಎಂದು ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಸಂಶೋಧಕರು ಲೆಕ್ಕ ಹಾಕಿದ್ದಾರೆ. ಏಪ್ರಿಲ್ ಆರಂಭದಲ್ಲೇ ವರದಿಯಾದಂತೆ ಪಿಎಂ-ಕೇರ್ಸ್ ಫಂಡ್ಗೆ ಹರಿದು ಬಂದ ಹಣ 6,500 ಕೋಟಿ ರೂಪಾಯಿ. ಆದರೂ ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರವೇ ಸುಲಿಗೆ ಮಾಡಿತು ಎನ್ನುವುದು ನಮ್ಮ ದೇಶದ ವಲಸೆ ಕಾರ್ಮಿಕರ ಹಣೆಬರಹ.

ರೈಲು ಹೊರಟ ಮೇಲಾದರೂ ಸರಿಯಾಯಿತೇ..? ಅದೂ ಕೂಡ ವ್ಯಥೆ..!

ಶ್ರಮಿಕ್ ರೈಲುಗಳಲ್ಲಿ ಮೇ 16ರ ಅಂಕಿ ಅಂಶದಂತೆ 15 ಲಕ್ಷ ವಲಸಿಗರನ್ನು ಅವರ ಊರುಗಳಿಗೆ ತಲುಪಿಸಿದ್ದೇವೆ ಎಂದು ಭಾರತೀಯ ರೈಲ್ವೆ ಸಚಿವಾಲಯ ಪ್ರಕಟಿಸಿದೆ. ಇದು ಅತ್ಯಂತ ದೊಡ್ಡ ಮೊತ್ತವಾಗಿ ಕಾಣಿಸುತ್ತದೆ. ಭಾಷಣ ಮಾಡುವಾಗಲೂ ಇದನ್ನು ಹೇಳಿದರೆ ವಾವ್ಹ್ ಎನ್ನುವಂತಾಗುತ್ತದೆ. ಆದರೆ ಪ್ರಯಾಣಿಸಲು ಬಯಸಿದ ವಲಸೆ ಕಾರ್ಮಿಕರ ಸಣ್ಣ ಭಾಗ ಎನ್ನುವುದು ಯಾರಿಗೂ ಕಾಣಿಸುವುದೇ ಇಲ್ಲ. ಅಂತರರಾಜ್ಯ ವಲಸಿಗರಲ್ಲಿ ಕೇವಲ ಮೂರನೇ ಒಂದು ಭಾಗವೆಂದು ಅಂದಾಜು ಮಾಡಿದರೂ 1.4 ಕೋಟಿ ಜನರು ಇರುತ್ತಾರೆ. ಆದರೆ ಭಾರತೀಯ ರೈಲ್ವೆ ಸಾಗಿಸಿದ್ದು ಕೇವಲ 15 ಲಕ್ಷ. ಇನ್ನುಳಿದ ಲಕ್ಷಾಂತರ ಭಾರತೀಯರು ರಸ್ತೆಯಲ್ಲಿದ್ದಾರೆ.ತಮ್ಮ ಮಕ್ಕಳೊಂದಿಗೆ ಸಾವಿರಾರು ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗುತ್ತಿದ್ದಾರೆ. ಸೈಕಲ್‌ಗಳಲ್ಲಿ ತೆರಳುತ್ತಿದ್ದಾರೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಕಂಟೇನರ್ ಟ್ರಕ್‌ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಇದ್ಯಾವುದು ಸರ್ಕಾರದ ಗಮನಕ್ಕೆ ಬರಲೇ ಇಲ್ಲ.

ಮೊದಲು “ಜೀವನ ಮುಖ್ಯವಲ್ಲ ನಮಗೆ ಜೀವ ಮುಖ್ಯ” ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಮೇ 13ರಂದು ಭಾಷಣ ಮಾಡಿ 20 ಲಕ್ಷ ಕೋಟಿ ಪ್ಯಾಕೇಜ್ ಎಂದು ಘೋಷಣೆ ಮಾಡಿದರು. ಆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ದಿನಗಳ ಕಾಲ ಎಳೆಎಳೆಯಾಗಿ ದೇಶದ ಜನರನ್ನು ಸೆಳೆಯುವ ಕೆಲಸ ಮಾಡಿದರು. ಆದರೆ ಯಾರಿಗೆ ಎಷ್ಟು ಕೊಡ್ತಾರೆ..? ಯಾರಿಗೆ ಲಾಭವಾಯ್ತು ಎನ್ನುವ ಮಾಹಿತಿ ಇನ್ನೂ ಕೂಡ ಜನಸಾಮಾನ್ಯರಿಗೆ ಅರ್ಥವಾಗಿಲ್ಲ. ಜನಸಾಮಾನ್ಯರಿಗೆ ಬೇಡ, ಅರ್ಥಶಾಸ್ತ್ರಜ್ಞರು ಕೂಡ ಪ್ಯಾಕೇಜ್‌ ನಲ್ಲಿ ಏನು ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಂಕ್ರಾಮಿಕ ಪಿಡುಗನ್ನು ತಡೆಯಲು ಮಾಡಿದ ಕಸರತ್ತು ವ್ಯರ್ಥ ಎನ್ನುವುದು ಇಂದಿನ ಸೋಂಕಿನ ಸಂಖ್ಯೆಯನ್ನು ಗಮನಿಸಿದಾಗ ಹೊತ್ತಾಗುತ್ತದೆ. ನೂರು ಇನ್ನೂರು ಇದ್ದಾಗ ದೇಶವನ್ನು ಲಾಕ್ ಮಾಡಿದ ಪ್ರಧಾನಿ ಮೋದಿ ಲಕ್ಷ ಸೋಂಕಿತರನ್ನು ದಾಟಿದ ಬಳಿಕ ಎಲ್ಲಾ ವ್ಯವಹಾರಕ್ಕೂ ಒಪ್ಪಿಗೆ ಕೊಡುತ್ತಿರುವುದು ಜನರನ್ನು ಗೊಂದಲಕ್ಕೆ ಈಡು ಮಾಡಿದೆ.

Click here Support Free Press and Independent Journalism

Pratidhvani
www.pratidhvani.com