ʻನೀವು ಬಸ್‌ಗಳಲ್ಲಿ ಬಿಜೆಪಿ ಧ್ವಜವನ್ನು ಹಾರಿಸಿ : ಆದರೆ ಬಸ್ ಚಾಲನೆಗೆ ಅನುಮತಿ ಕೊಡಿʼ
ರಾಷ್ಟ್ರೀಯ

ʻನೀವು ಬಸ್‌ಗಳಲ್ಲಿ ಬಿಜೆಪಿ ಧ್ವಜವನ್ನು ಹಾರಿಸಿ : ಆದರೆ ಬಸ್ ಚಾಲನೆಗೆ ಅನುಮತಿ ಕೊಡಿʼ

ಮೇ 19ರ ಸಂಜೆ 4 ಗಂಟೆಯಿಂದ ಉತ್ತರಪ್ರದೇಶ ಗಡಿಭಾಗದಲ್ಲಿ ಕಾಂಗ್ರೆಸ್ ವ್ಯವಸ್ಥೆ ಮಾಡಿದ ಸಾವಿರ ಬಸ್ಗಳು ಕಾದು ನಿಂತಿದೆ. ಆದರೂ ಅದನ್ನು ಚಲಾಯಿಸುವ ಅನುಮತಿಯನ್ನು ಯುಪಿ ಸರ್ಕಾರ ಕೊಟ್ಟಿಲ್ಲ. “ಇವರಿಗೆ ರಾಜಕೀಯವೇ ಮುಖ್ಯವೆಂದರೆ, ಬಸ್ಗಳಲ್ಲಿ ಬಿಜೆಪಿ ಧ್ವಜ ಹಾರಿಸಲಿ. ಬೇಕಿದ್ದರೆ ಕಾರ್ಮಿಕರಿಗೆ ಈ ಬಸ್ ವ್ಯವಸ್ಥೆ ಕಲ್ಪಿಸಿದ್ದು ಬಿಜೆಪಿಯೇ ಎಂದು ಹೇಳಲಿ” ಅಂತ ಪ್ರಿಯಾಂಕ ವಾದ್ರಾ ಸಿಎಂ ಯೋಗಿ ಆದಿತ್ಯನಾಥರಿಗೆ ಚಾಟಿ ಬೀಸಿದ್ದಾರೆ.

ಆಶಿಕ್‌ ಮುಲ್ಕಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮೇ20ರಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಲಸೆ ಕಾರ್ಮಿಕರ ವಿಚಾರದಲ್ಲಿ ನಡೆಸಿತ್ತಿರುವ ರಾಜಕೀಯಕ್ಕೆ ಮಾತಿನ ಚಾಟಿ ಬೀಸಿದ್ದಾರೆ. ವಲಸೆ ಕಾರ್ಮಿಕರು ಸಾರಿಗೆ ವ್ಯವಸ್ಥೆ ಸಿಗದೆ ಕಂಗೆಟ್ಟು ಹೋಗಿದ್ದಾರೆ. ಈ ಸಮಯದಲ್ಲೂ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜಕೀಯ ನಡೆಸುತ್ತಿದ್ದಾರೆ. ಈ ಸರ್ಕಾರಕ್ಕೆ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೇ 19ರ ಸಂಜೆ 4 ಗಂಟೆಯಿಂದ ಉತ್ತರಪ್ರದೇಶ ಗಡಿಭಾಗದಲ್ಲಿ ಕಾಂಗ್ರೆಸ್ ವ್ಯವಸ್ಥೆ ಮಾಡಿದ ಸಾವಿರ ಬಸ್ಗಳು ಕಾದು ನಿಂತಿದೆ. ಆದರೂ ಅದನ್ನು ಚಲಾಯಿಸುವ ಅನುಮತಿಯನ್ನು ಯುಪಿ ಸರ್ಕಾರ ಕೊಟ್ಟಿಲ್ಲ. “ಇವರಿಗೆ ರಾಜಕೀಯವೇ ಮುಖ್ಯವೆಂದರೆ ಬಸ್‌ಗಳಲ್ಲಿ ಬಿಜೆಪಿ ಧ್ವಜ ಹಾರಿಸಲಿ. ಬೇಕಿದ್ದರೆ ಕಾರ್ಮಿಕರಿಗೆ ಈ ಬಸ್ ವ್ಯವಸ್ಥೆ ಕಲ್ಪಿಸಿದ್ದು ಬಿಜೆಪಿಯೇ ಎಂದು ಹೇಳಲಿ” ಅಂತ ಪ್ರಿಯಾಂಕ ವಾದ್ರಾ ಸಿಎಂ ಯೋಗಿ ಆದಿತ್ಯನಾಥರಿಗೆ ಚಾಟಿ ಬೀಸಿದ್ದಾರೆ.

“ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿನಾಕಾರಣ ಅನುಮತಿ ನೀಡಲು ತಡಮಾಡುತ್ತಿದ್ದಾರೆ. ಒಂದು ವೇಳೆ ನೀವು ಸರಿಯಾದ ಸಮಯಕ್ಕೆ ಅನುಮತಿ ಕೊಟ್ಟಿದ್ದರೆ ಇಷ್ಟೊತ್ತಿಗಾಗಲೇ ಸಾವಿರಾರು ಕಾರ್ಮಿಕರು ಮನೆ ಸೇರುತ್ತಿದ್ದರು” ಎಂದು ವೀಡಿಯೋ ಕಾನ್ಫರನ್ಸ್ ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ವಲಸೆ ಕಾರ್ಮಿಕರು ಬಿಸಿಲಿಗೆ ನಡೆಯುತ್ತಿದ್ದಾರೆ. ಅವರಿಗೆ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮೊದಲು ಪ್ರಿಯಾಂಕ ಗಾಂಧಿ ಮನವಿ ಮಾಡಿಕೊಂಡಿದ್ದೆರು. ಹೀಗಾಗಿದ್ದರೆ ವಲಸೆ ಕಾರ್ಮಿಕರು ಸುರಕ್ಷಿತವಾಗಿ ಮನೆ ಸೇರುತ್ತಿದ್ದರು. ಇದಕ್ಕೆ ಸ್ಪಂದಿಸದ ಕಾರಣ ನಾವು 1000 ಬಸ್‌ಗಳನ್ನು ಏರ್ಪಾಡು ಮಾಡಿ ಗಡಿ ಭಾಗಕ್ಕೆ ಕಳುಹಿಸಿಕೊಟ್ಟೆವು ಎಂದು ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ.

ಆದರೆ ಅದ್ಯಾವಾಗ ಕಾಂಗ್ರೆಸ್ ಸಾವಿರ ಬಸ್ ಕಳುಹಿಸಿಕೊಟ್ಟಿತೋ ಆಗ ಯುಪಿ ಸರ್ಕಾರ ನಮಗೆ ನಿಮ್ಮ ಬಸ್ಗಳ ಅಗತ್ಯವಿಲ್ಲ. ನಮ್ಮಲ್ಲಿ 12 ಸಾವಿರ ಸರ್ಕಾರಿ ಬಸ್ಗಳಿವೆ ಎಂದು ಹೇಳಿತು. ಹೀಗಾಗಿ ಕಾಂಗ್ರೆಸ್, ತಾವು ಕಳುಹಿಸಿಕೊಟ್ಟಿದ್ದ ಸಾವಿರ ಬಸ್ಗಳನ್ನು ವಾಪಾಸು ಕರೆಸಿಕೊಂಡಿತು. ಆದರೆ ಮರುದಿನವೇ ಯುಪಿ ಸರ್ಕಾರದ ಕಡೆಯಿಂದ ಸಾವಿರ ಬಸ್ ಗಳ ಮತ್ತು ಚಾಲಕರ ಹಾಗೂ ನಿರ್ವಾಹಕರ ವಿವರ ನೀಡಲು ಸೂಚಿಸಿತು.ಇವೆಲ್ಲಾ ಕೊಟ್ಟ ಬಳಿಕ ರಾತ್ರೋ ರಾತ್ರಿ ಬಸ್ಗಳನ್ನು ಲಕ್ನೋವಿಗೆ ಕಳುಹಿಸಿ ಕೊಡಲಾಯ್ತು.

ಹೀಗೆ ಕಳುಹಿಸಿಕೊಡಲಾದ ಬಸ್ಗಳು ವಲಸೆ ಕಾರ್ಮಿಕರನ್ನು ಕಾದು ಗಡಿಭಾಗದಲ್ಲಿ ನಿಂತಿತ್ತು. ಇದರ ಮಧ್ಯಕ್ಕೆ ಮತ್ತೊಂದು ತಗಾದೆಯನ್ನು ಸರ್ಕಾರ ಎತ್ತಿತ್ತು. ಸರ್ಕಾರಕ್ಕೆ ಕೊಟ್ಟ ಬಸ್ಗಳ ವಿವರದಲ್ಲಿ ಗೊಂದಲವಿದೆ ಎಂದು ಹೇಳಿ ಬಸ್ಗಳ ಸಂಚಾರಕ್ಕೆ ತಡೆ ಹೇರಿತು.

ಈ ವಿಚಾರದಲ್ಲಿ ಯೋಗಿ ಸರ್ಕಾರ ರಾಜಕೀಯ ನಡೆಸದೆ ಇದ್ದಿದ್ದರೆ ಮೊದಲು ಕಳುಹಿಸಿಕೊಟ್ಟ 500 ಬಸ್ಗಳಲ್ಲಿ ಸುಮಾರು 20 ಸಾವಿರ ಕಾರ್ಮಿಕರು ಊರು ಸೇರಬಹುದಿತ್ತು. ಅದಾಗಿ ಮತ್ತೆ 900 ಬಸ್ಗಳ ವೇಳಾಪಟ್ಟಿ ಮಾಡಿಕೊಂಡಿದ್ದೆವು. ಅದರಲ್ಲಿಯೂ ಸುಮಾರು 36 ಸಾವಿರ ಕಾರ್ಮಿಕರು ತಮ್ಮ-ತಮ್ಮ ಮನೆ ಸೇರಬಹದಿತ್ತು ಎಂದು ಪ್ರಿಯಾಂಕ ವಾದ್ರಾ ಬೇಸರ ವ್ಯಕ್ತ ಪಡಿಸಿದ್ದಾರೆ.

ಆದರೂ ಮೇ 19ರ ರಾತ್ರಿ ಸುಮಾರು 11.30ರ ಹೊತ್ತಿಗೆ 100 ಬಸ್ಗಳನ್ನು ನೋಯ್ಡಾಗೆ ಕಳುಹಿಸಿಕೊಡಲಾಯ್ತು. ಇದು ಮತ್ತೊಂದು ಸುತ್ತಿನ ರಾಜಕೀಯ ಹಗ್ಗಜಗ್ಗಾಟಕ್ಕೆ ನಾಂದಿ ಹಾಡಿತು. ಒಂದೇ ಒಂದು ಬಸ್ಸನ್ನು ಕೂಡ ಚಲಾಯಿಸಲು ಅನುಮತಿಯನ್ನು ನೀಡದ ಯೋಗಿ ಆಧಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈಗ ಕಾಂಗ್ರೆಸ್ ನಾಯಕರ ಮೇಲೆ ಕೇಸು ದಾಖಲಿಸಿದೆ. ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ವಿಚಾರಕ್ಕೆ ಸಂಬಧಿಸಿದಂತೆ ಪ್ರಿಯಾಂಕ ಗಾಂಧಿ ಯುಪಿ ಸರ್ಕಾರಕ್ಕೆ ಒಟ್ಟು 9 ಪತ್ರಗಳನ್ನು ಬರೆದಿದ್ದಾರೆ. ಆದರೆ ಯಾವುದಕ್ಕೂ ಕೂಡ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ವಲಸೆ ಕಾರ್ಮಿಕರ ವಿಚಾರದಲ್ಲೂ ಕೂಡ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರಾಜಕೀಯ ಮಾಡಿರುವ ಬಗ್ಗೆ ಕಾಂಗ್ರೆಸ್ ವಿಷಾದ ವ್ಯಕ್ತಪಡಿಸಿದೆ.

ಉತ್ತರಪ್ರದೇಶ ಕಾಂಗ್ರೆಸ್ ನಾಯಕರ ಮೇಲೆ ಎಫ್ಐಆರ್.!

ಯೋಗಿ ಸರ್ಕಾರ ಅನುಮತಿ ಕೊಡದಿದ್ದರೂ ಕೂಡ ಮೇ 19ರ ರಾತ್ರಿಗೆ ಸುಮಾರು 100 ಬಸ್ಗಳನ್ನು ಕಾಂಗ್ರೆಸ್ ನೋಯ್ಡಾ ಗಡಿ ಭಾಗಕ್ಕೆ ಕಳುಹಿಸಿಕೊಡಲಾಗಿತ್ತು. ಇದು ಮತ್ತೊಂದು ಸುತ್ತಿನ ರಾಜಕೀಯಕ್ಕೆ ಎಡೆ ಮಾಡಿತು. ಅನುಮತಿ ಇಲ್ಲದಿದ್ದರೂ ಕೂಡ ಹೇಗೆ ಬಸ್ಗಳನ್ನು ಕಳುಹಿಸಿದ್ರಿ ಎಂಬ ನೆಪ ಇಟ್ಟುಕೊಂಡು ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಕಾಂಗ್ರೆಸ್ ನಾಯಕರ ಮೇಲೆ ಎಫ್ಐಆರ್ ದಾಖಲಿಸಿದೆ.

ರಾಜ್ಯಮಟ್ಟದ 20 ಕಾಂಗ್ರೆಸ್ ನಾಯಕರ ಮೇಲೆ ಪೊಲೀಸರು ಕೇಸು ಜಡಿದಿದ್ದಾರೆ. ಲಾಕ್ ಡೌನ್ ನಿಯಮಗಳನ್ನು ಮುರಿಯಲಾಗಿದೆ ಎಂಬ ಕಾರಣದ ಮೇರೆಗೆ ಮೊಕದ್ದಮೆ ಹೂಡಲಾಗಿದೆ. ಮುಖ್ಯವಾಗಿ ಕಾಂಗ್ರೆಸ್ ಉಪಾಧ್ಯಕ್ಷ ಪಂಕಜ್ ಮಾಲಿಕ್ ವಿರುದ್ಧ ಕೇಸು ಹಾಕಲಾಗಿದೆ. ಅಲ್ಲದೇ ಎರಡು ಬಸ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, “ ಇದು ಯೋಗಿ ಆದಿತ್ಯನಾಥ್ ಸರ್ಕಾರ ನೀಚ ನಡೆ. ಕಳೆದ ಕೆಲವು ದಿನಗಳಿಂದ 500ಕ್ಕೂ ಹೆಚ್ಚಿನ ಬಸ್ಗಳು ಗಡಿಭಾಗದಲ್ಲಿದೆ. ನಾವು ಅದಕ್ಕಾಗಿ ಅನುಮತಿ ಪಡೆಯಲು ಶೂನ್ಯ ಸುತ್ತಿದಂತೆ ಸುತ್ತುತ್ತಿದ್ದೇವೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅಲ್ಲದೇ ಬಸ್ಗಳಲ್ಲಿ ಬಿಜೆಪಿ ಧ್ವಜ ಅಳವಡಿಸುವುದಿದ್ದರೂ ಸಮಸ್ಯ ಇಲ್ಲ ಎಂದಿದ್ದಾರೆ ಪ್ರಿಯಾಂಕ ಗಾಂಧಿಯವರು. ಕಾರ್ಮಿಕರ ಬಗ್ಗೆ ಈ ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಬಸ್ಗಳಿಗೆ ಅನುಮತಿ ನೀಡಲಿ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹೊರಟ ಕಾಂಗ್ರೆಸ್ ಈಗ ಸಹಾಯ ಮಾಡಲಾಗಿದೆ ಚಿಂತೆಗೆ ಬಿದ್ದಿದೆ. ಎಂದಿನಂತೆ ಬಿಜೆಪಿ ಸರ್ಕಾರ ವಲಸೆ ಕಾರ್ಮಿಕರ ವಿಚಾರದಲ್ಲೂ ರಾಜಕೀಯ ಮಾಡಿದ್ದು ಸ್ಪಷ್ಟವಾಗಿದೆ. ಬಹುಶಃ, ಇಂಥಾ ಸರ್ಕಾರಗಳನ್ನು ಆರಿಸಿ, ಅಧಿಕಾರ ಕೊಟ್ಟ ಬಡವರ ಬವಣೆಯನ್ನೂ ಅರ್ಥಮಾಡಿಕೊಳ್ಳಲಾಗದಷ್ಟು ಕಟುವಾಗಿದೆ ನಮ್ಮ ಈ ವ್ಯವಸ್ಥೆ.

Click here Support Free Press and Independent Journalism

Pratidhvani
www.pratidhvani.com