ಈಕೆ ಕಲಿಯುಗದ ಶ್ರವಣ ʻಕುಮಾರಿʼ : ಸೈಕಲ್‌ ತುಳಿದು ತಂದೆಯನ್ನು ಊರು ಸೇರಿಸಿದ 15 ವರ್ಷದ ಬಾಲಕಿ.!
ರಾಷ್ಟ್ರೀಯ

ಈಕೆ ಕಲಿಯುಗದ ಶ್ರವಣ ʻಕುಮಾರಿʼ : ಸೈಕಲ್‌ ತುಳಿದು ತಂದೆಯನ್ನು ಊರು ಸೇರಿಸಿದ 15 ವರ್ಷದ ಬಾಲಕಿ.!

ಹೀಗಿರುವಾಗ ಜ್ಯೋತಿ ಕುಮಾರಿ ಊರಿಗೆ ಹೊರಡುವ ವಿಷಯ ತಂದೆಯ ಮುಂದೆ ಪ್ರಸ್ತಾಪ ಮಾಡಿದಳು. ತಂದೆಗೂ ಅದೇ ಆಸೆ. ಆದರೆ ಅತ್ತ ಸಾರಿಗೆ ವ್ಯವಸ್ಥೆಯೂ ಇಲ್ಲ. ಇತ್ತ ನಡೆಯಲೂ ಸಾಧ್ಯವಿಲ್ಲ ಎಂಬ ಚಿಂತೆಗೆ ಬಿದ್ದರು. ಈ ವೇಳೆ ಜ್ಯೋತಿ ಕುಮಾರಿ ಸೈಕಲ್‌ ಮೇಲೆ ಕೂರಿಸಿ ತಂದೆಯನ್ನು ಊರಿಗೆ ಕರೆದೊಯ್ಯುವ ಮಾತನ್ನಾಡಿದಳು. ಇದು ಕಷ್ಟಸಾಧ್ಯ ಎಂಬುವುದು ಆಕೆಗೂ ಗೊತ್ತಿತ್ತು.

ಆಶಿಕ್‌ ಮುಲ್ಕಿ

ರಾಮಾಯಣ ಐತಿಹ್ಯದಲ್ಲಿ ಬರುವ ಶ್ರವಣ ಕುಮಾರನ ಸಾಹಸ ಕಥನ ನಿಮಗೂ ನೆನಪಿರಬಹುದು. ಶ್ರವಣ ಕುಮಾರ ತನ್ನ ಹೆಗಲು ಹೊರುವಂತ ಬುಟ್ಟಿಯೊಂದರಲ್ಲಿ ತನ್ನ ಪೋಷಕರನ್ನು ಹೊತ್ತು ತೀರ್ಥಯಾತ್ರೆಗೆ ಹೊರಡುವ ಕಥೆಯದು. ಅದು ಶ್ರವಣಕುಮಾರನ ಹೆತ್ತವರ ಕೊನೆಯ ಆಸೆಯೂ ಆಗಿತ್ತು. ಅಂಧ ಪೋಷಕರ ನೆನೆದು ಶ್ರವಣ ಕುಮಾರ ಅಂದು ಹೆಗಲ ಮೇಲೆಯೇ ಹೊತ್ತುಕಕೊಂಡು ತೀರ್ಥಯಾತ್ರೆ ನಡೆಸಿದನು. ಈಗ ಈ ಪುರಾಣವನ್ನು ನೆನಪಿಸುವಂತೆ ಮಾಡಿದ್ದು 15 ವರ್ಷದ ಈ ಬಾಲಕಿ. ಅಕೆಯ ಹೆಸರು ಜ್ಯೋತಿ ಕುಮಾರಿ.

ಆಕೆಯ ಊರು ಬಿಹಾರದ ದರ್ಭಂಗ. ಆದರೆ ಹರಿಯಾಣದ ಗುರ್‌ಗಾಂವ್‌ನಲ್ಲಿ ತಂದೆಯ ಜೊತೆ ವಾಸವಿದ್ದಳು. ಇದ್ದಕ್ಕಿದ್ದ ಹಾಗೆ ಹೇರಲಾದ ಲಾಕ್‌ ಡೌನ್‌ ನಿಂದಾಗಿ ಕುಮಾರಿ ಮತ್ತು ಆಕೆಯ ತಂದೆ ಮೋಹನ್ ಪಾಸ್ವಾನ್‌ ಊರು ಸೇರಲಾಗದೆ ಕಂಗೆಟ್ಟಿದ್ದರು. ಅದು ಬೇರೆ ಕುಮಾರಿಯ ತಂದೆ ಇತ್ತೀಚೆಗಷ್ಟೇ ಅಪಘಾತವೊಂದಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಗುರ್‌ಗಾಂವ್‌ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ತಾಯಿ ಕುಟುಂಬದ ಜೊತೆ ಇತ್ತ ಬಿಹಾರದಲ್ಲೇ ಇರುತ್ತಿದ್ದರು. ಜ್ಯೋತಿ ಕುಮಾರಿ ತಂದೆಯ ಜೊತೆ ನಿಂತೇ ಓದು ಮತ್ತು ತಂದೆಯನ್ನು ನೋಡಿಕೊಳ್ಳುತ್ತಿದ್ದಳು.

ಅಲ್ಲೇ ಪಕ್ಕದಲ್ಲಿದ್ದವರೊಬ್ಬರ ಬಳಿಯಿಂದ ಆಟೋವನ್ನು ಗುತ್ತಿಗೆ ಪಡೆದು ಜೀವನದ ಗಾಲಿ ಉರುಳಿಸುತ್ತಿದ್ದರು. ಅಪಘಾತ ಬದುಕಿಗೆ ಬಿದ್ದ ಬಹುದೊಡ್ಡ ಬರೆಯಾಗಿತ್ತು. ನಡೆಯುವ ತಾಕತ್ತು ಕುಮಾರಿಯ ತಂದೆ ಕಳೆದುಕೊಂಡರು. ಅದಾಗಲೇ ಕರೋನಾ ವೈರಸ್‌ ಕೂಡ ವಕ್ಕರಿಸಿತು. ಪರಿಣಾಮ ಇಡೀ ದೇಶ ಲಾಕ್‌ಡೌನ್‌ ಆಯತು.

ಹೀಗಾಗಿ ಊರಿಗೆ ತೆರಳಲಾಗದೆ ಮನೆಯಲ್ಲೇ ಕುಮಾರಿ ಮತ್ತು ತಂದೆ ಪಾಸ್ವಾನ್‌ ಉಳಿಯುವಂತಾಯ್ತು. ಆದ್ರೆ ಬಡತನ ಕಾರಣದಿಂದ ಆಟೋ ಮಾಲೀಕನಿಗೆ ಕೆಲ ದಿನದ ಬಾಡಿಗೆಯ ಒಂದು ಪಾಲನ್ನು ಬಾಕಿ ಉಳಿಸಿಕೊಂಡಿದ್ದರು ಪಸ್ವಾನ್.‌ ಲಾಕ್‌ಡೌನ್‌ ಆಗಿದ್ದರೂ ಕೂಡ ಹಣಕ್ಕಾಗಿ ಆಟೋ ಮಾಲೀಕ ಪ್ರತಿದಿನ ಪೀಡಿಸುತ್ತಿದ್ದ. ಒಂದು ಕಡೆ ಬಡತನ, ಮತ್ತೊಂದು ಕಡೆ ಅನಾರೋಗ್ಯ. ಮತ್ತು ಲಾಕ್‌ಡೌನ್. ಇಷ್ಟೂ ಸಾಲಲ್ಲಾಂತ ಹಣಕ್ಕಾಗಿ ಪೀಡುಸುತ್ತಿದ್ದ ಆಟೋ ಮಾಲೀಕ. ವಾಸ್ತವದಲ್ಲಿ ಕುಮಾರಿ ಹಾಗೂ ತಂದೆ ಮೋಹನ್‌ ಪಸ್ವಾನ್‌ ಹೈರಾಣಾಗಿ ಹೋಗಿದ್ದರು.

ಹೀಗಿರುವಾಗ ಜ್ಯೋತಿ ಕುಮಾರಿ ಊರಿಗೆ ಹೊರಡುವ ವಿಷಯ ತಂದೆಯ ಮುಂದೆ ಪ್ರಸ್ತಾಪ ಮಾಡಿದಳು. ತಂದೆಗೂ ಅದೇ ಆಸೆ. ಆದರೆ ಅತ್ತ ಸಾರಿಗೆ ವ್ಯವಸ್ಥೆಯೂ ಇಲ್ಲ. ಇತ್ತ ನಡೆಯಲೂ ಸಾಧ್ಯವಿಲ್ಲ ಎಂಬ ಚಿಂತೆಗೆ ಬಿದ್ದರು. ಈ ವೇಳೆ ಜ್ಯೋತಿ ಕುಮಾರಿ ಸೈಕಲ್‌ ಮೇಲೆ ಕೂರಿಸಿ ತಂದೆಯನ್ನು ಊರಿಗೆ ಕರೆದೊಯ್ಯುವ ಮಾತನ್ನಾಡಿದಳು. ಇದು ಕಷ್ಟಸಾಧ್ಯ ಎಂಬುವುದು ಆಕೆಗೂ ಗೊತ್ತಿತ್ತು. ಆದರೆ ಬದುಕಿನ ಅನಿವಾರ್ಯತೆ ಮೋಹನ್‌ ಪಾಸ್ವಾನ್‌ರನ್ನು ಮಗಳ ಮಾತಿಗೆ ಬಾಗುವಂತೆ ಮಾಡಿತು. ತಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ಹಣಕೊಟ್ಟು ಅಲ್ಲೇ ಪಕ್ಕದಲ್ಲೇ ಇದ್ದ ಸೈಕಲ್‌ ವೊಂದನ್ನು ಖರೀದಿಸಿ ಊರಿಗೇ ಹೊರಟೇ ಬಿಟ್ಟರು ಇಬ್ಬರು.

ಅದು 1,200 ಕಿ.ಮೀ ದೂರದ ಪ್ರಯಾಣ. ಮಗಳಿಗೆ ದೂರದ ಲೆಕ್ಕವೇ ಇರಲಿಲ್ಲ. ಸೈಕಲ್‌ ಹಿಂಬದಿ ಸೀಟಿನಲ್ಲಿ ತಂದೆಯನ್ನು ಕೂರಿಸಿ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ನಡು ನೆತ್ತಿ ಸೀಳುವಂತ ಬಿಸಿಲಿನಲ್ಲಿ ಪೆಡಲ್‌ ತುಳಿಯುತ್ತಾ ಸಾಗಿದಳು. ಹಿಂದೆ ಮಗಳ ಸೊಂಟವನ್ನು ಗಟ್ಟಿ ಹಿಡಿದು ಕೂತಿದ್ದ ತಂದೆ ಮೋಹನ್‌ ಪಾಸ್ವಾನ್‌ ಕಣ್ಣಲಿ ನೀರು ಜಿನುಗಿತ್ತು. ಸುಸ್ತಾದರೆ ದಾರಿ ಮಧ್ಯೆ ಕಾಣುವ ಮರದ ಕೆಳಗೆ ವಿಶ್ರಾಂತಿ. ದಾರಿ ಹೋಕರು ಕೊಡುವ ಆಹಾರ ಮತ್ತು ಅಲ್ಪಸ್ವಲ್ಪ ದೂರ ಯಾವುದಾದರು ಟ್ರಕ್‌ಗಳು ಹತ್ತಿಸಿಕೊಂಡು ಲಿಫ್ಟ್‌ ಕೊಟ್ಟರೆ ಅದೂ ಕೂಡ. ಹೀಗೆ 1,200 ಕೀ.ಮೀ ದೂರ ಸಾಗಿತು ಆ ಎಳಸು ಜೀವ.

ದಿನಕ್ಕೆ 30ರಿಂದ 40 ಕೀ.ಮೀ ದೂರ ಸೈಕಲ್‌ ತುಳಿದು ಸಾಗುವುದರ ಜೊತೆಗೆ ಟ್ರಕ್‌ ಚಾಲಕರು ಯಾರಾದರು ಲಿಫ್ಟ್‌ ಕೊಟ್ಟರೆ ಅದು ಸೇರಿ 100 ಕ್ಕೂ ಹೆಚ್ಚು ಕೀ.ಮೀ ದೂರ ಇವರ ಪ್ರಯಾಣ ಸಾಗುತ್ತಿತ್ತು. ಕೊನೆಗೆ ಹತ್ತು ದಿನಗಳ ಬಳಿಕ ಊರು ಕಣ್ಣೆದುರಿಗೆ ಬಂದು ನಿಂತಿತು. ಆ ಕ್ಷಣ ಬದುಕು ಗೆದ್ದು ಬಂದ ಖುಷಿ ಅವರಲ್ಲಿತು. ಬಿಹಾರದ ದರ್ಭಂಗದ ತಮ್ಮ ಸೂರು ಸೇರಿದ ಬಳಿಕ ಇಬ್ಬರು ಕೂಡ ಸಮೀಪದ ಆಸ್ಪತ್ರೆಗೆ ಹಾಜರಾಗಿದ್ದಾರೆ. ಅಲ್ಲದೆ ಇಬ್ಬರು ಕೂಡ ಸದ್ಯಕ್ಕೆ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ಈ ಸಾಹಸಮಯ ಯಾತ್ರೆ ಈಗ ಬಿಹಾರದ ಉದ್ದಗಲಕ್ಕೂ ಸುದ್ದಿಯಾಗಿದೆ. ಅಲ್ಲದೆ ಊರು ಸೇರಿದ ಕೂಡಲೇ ಆಸ್ಪತ್ರೆಯ ಮೆಟ್ಟಿಲೇರಿದ ಇವರ ಪ್ರಜ್ಞೆಯನ್ನು ಜನರು ಶ್ಲಾಘಿಸಿದ್ದಾರೆ.

ಹೀಗೆ ಜ್ಯೋತಿ ಕುಮಾರಿ 1,200 ಕೀ.ಮೀ ದೂರ ಶ್ರವಣಕುಮಾರನಂತೆ ತನ್ನ ತಂದೆಯನ್ನು ಹೊತ್ತುಕೊಂಡು ಪ್ರಯಾಣ ಬೆಳೆಸಿದ್ದಾಳೆ. ಈಕೆಗೆ ಕೇವಲ 15 ವರ್ಷ ವಯಸ್ಸು ಅನ್ನೋದನ್ನ ಮಾತ್ರ ಮರೆಯದಿರಿ. ಈ ದೇಶದ ಆಡಳಿತ ವ್ಯವಸ್ಥೆ ಜನರ ಪಾಲಿಗೆ ಪರಿತ್ಯಾಗಿಯಾಗುತ್ತಿರುವುದು ದೇಶ ಮುಂದೆ ಸಾಗಬಹುದಾಗ ಹಾದಿಯನ್ನು ನಿಚ್ಚಳಗೊಳಿಸುತ್ತಿದೆ. ವಲಸೆ ಕಾರ್ಮಿಕರ ಈ ಪಾಡು ನೋಡಿಯೂ ಸರ್ಕಾರದ ಕಣ್ಣು ತೆರೆಯದೆ ಇರುವುದಕ್ಕೆ ಹೇಳುವುದಾದರು ಏನು.?

Click here Support Free Press and Independent Journalism

Pratidhvani
www.pratidhvani.com