ವೈಫಲ್ಯ ಮುಚ್ಚಿಹಾಕಲು ಲಾಕ್ ಡೌನ್ ಅಸ್ತ್ರ: ಕರೋನಾ ಟಾಸ್ಕ್‌ ಫೋರ್ಸ್!
ರಾಷ್ಟ್ರೀಯ

ವೈಫಲ್ಯ ಮುಚ್ಚಿಹಾಕಲು ಲಾಕ್ ಡೌನ್ ಅಸ್ತ್ರ: ಕರೋನಾ ಟಾಸ್ಕ್‌ ಫೋರ್ಸ್!

ಅಗತ್ಯ ಪ್ರಮಾಣದ ಪರೀಕ್ಷೆ ನಡೆಸಲು ಸಜ್ಜಾಗದೇ ಕೇವಲ ಲಾಕ್ ಡೌನ್ ಹೇರಿ ಕೈಕಟ್ಟಿ ಕುಳಿತರೆ, ಅದು ಒಂದು ರೀತಿಯಲ್ಲಿ ಎರಗುವ ವೈರಿಯ ಎದುರು ಗುಂಡುಗಳೇ ಇಲ್ಲದೆ ಕೇವಲ ರಿವಾಲ್ವರ್ ಹಿಡಿದು ಝಳಪಿಸಿದಂತೆ ಅಷ್ಟೇ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

“ಕರೋನಾ ನಿಯಂತ್ರಣದಲ್ಲಿ ದೇಶ ಜಗತ್ತಿಗೇ ಮಾದರಿಯಾಗಲಿದೆ. ವಿಶ್ವಗುರುವಾಗಲಿದೆ!”

ಹೀಗೆ ಹೇಳಿದ್ದು ಸ್ವತಃ ನಮ್ಮ ಪ್ರಧಾನಿ ಮೋದೀಜಿ ಅವರು. “ಇಡೀ ದಡಾರ, ಸಿಡುಬು, ಏಡ್ಸ್ ನಂತಹ ಮಹಾಮಾರಿಗಳ ವಿರುದ್ಧ ಅತ್ಯಂತ ಪರಿಣಾಮಕಾರಿ ಸಮರ ಸಾರಿ ಜಯಗಳಿಸಿ ನಾವು ಇಡೀ ಜಗತ್ತಿಗೇ ಈಗಾಗಲೇ ತೋರಿಸಿಕೊಟ್ಟಿದ್ದೇವೆ. ಈಗಲೂ ಈ ಮಹಾಮಾರಿಯ ವಿರುದ್ಧ ಕೇವಲ 21 ದಿನದಲ್ಲಿ ಜಯಭೇರಿ ಬಾರಿಸುತ್ತೇವೆ. ಮಹಾಭಾರತ ಯುದ್ಧ 18 ದಿನ ನಡೆದಿದ್ದರೆ, ಕರೋನಾ ವಿರುದ್ಧದ ನಮ್ಮ ಸಮರ 21 ದಿನವಾಗಬಹುದು ಅಷ್ಟೇ, ಅಂತಿಮವಾಗಿ ಜಯ ನಮ್ಮದೇ” ಎಂದು ಮೊದಲ ಹಂತದ ಲಾಕ್ ಡೌನ್ ಹೇರಿದ ಮಾರನೇ ದಿನ (ಮಾ.25) ಅವರು ಹೇಳಿದ್ದರು!

ತಮ್ಮ ಸ್ವಕ್ಷೇತ್ರ ವಾರಣಾಸಿಯ ಕಾರ್ಯಕ್ರಮವೊಂದರಲ್ಲಿ ಅವರು ಅಂದು ಹೇಳಿದ ಆ ಮಾತಿನ ಹಿಂದಿನ ವಿಶ್ವಾಸಕ್ಕೆ ಕಾರಣ, ಲಾಕ್ ಡೌನ್ ಎಂಬ ಅಸ್ತ್ರದ ಮೇಲಿದ್ದ ಅಪಾರ ನಂಬಿಕೆ. ಆದರೆ, ಈಗ ಮೂರು ಹಂತದ ಲಾಕ್ ಡೌನ್ ಮುಗಿದು ಬರೋಬ್ಬರಿ 55 ದಿನಗಳ ನಿರ್ಬಂಧದ ಬಳಿಕ ದೇಶದ ಕರೋನಾ ಸೋಂಕಿನ ಸ್ಥಿತಿಗತಿ ನೋಡಿದರೆ, ಪ್ರಧಾನಮಂತ್ರಿಗಳ ಆ ವಿಶ್ವಾಸ ಎಷ್ಟು ಪೊಳ್ಳು ಮತ್ತು ಹಾಸ್ಯಾಸ್ಪದ ಎಂಬುದು ಅವರ ಕಟ್ಟಾ ಭಕ್ತರಿಗೂ ಮನವರಿಕೆಯಾಗದೇ ಇರದು!

ಲಾಕ್ ಡೌನ್ ಎಂಬುದು ಕರೋನಾ ಮಹಾಮಾರಿಯ ವಿರುದ್ಧ ಹೋರಾಟದ ಒಂದು ಅಸ್ತ್ರವಷ್ಟೇ. ಆದರೆ, ಅದೇ ರಾಮಬಾಣವಲ್ಲ. ಕೇವಲ ಲಾಕ್ ಡೌನ್ ನಿಂದಲೇ ಕೋವಿಡ್-19 ವೈರಾಣುವನ್ನು ಮಣಿಸಿ, ಹೆಡೆಮುರಿ ಕಟ್ಟುವುದು ಸಾಧ್ಯವಿಲ್ಲ ಎಂಬುದು ಮೊದಲ ಹಂತದ ಲಾಕ್ ಡೌನ್ ಹೇರುವ ಸಂದರ್ಭದಲ್ಲೇ ವೈರಾಣು ತಜ್ಞರು, ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಪರಿಣಿತರು ಹೇಳಿದ್ದರು. ಆದರೆ, ಯೋಜಿತ ಕಾರ್ಯತಂತ್ರ, ವೈಚಾರಿಕ ವಿಧಿವಿಧಾನಗಳಿಗಿಂತ ಜನಸಮೂಹವನ್ನು ಮೋಡಿ ಮಾಡುವ ಮಾತುಗಾರಿಕೆ, ವೀರಾವೇಶದ ಪ್ರದರ್ಶನಗಳಲ್ಲೇ ಹೆಚ್ಚು ನಂಬಿಕೆ ಇರುವ ಪ್ರಧಾನಿಗಳು ಅಂತಹ ಸಲಹೆ- ಸೂಚನೆಗಳನ್ನು ಗಾಳಿಗೆ ತೂರಿದ್ದರು. ಕೇವಲ ಲಾಕ್ ಡೌನ್ ಮೂಲಕವೇ ದೇಶವನ್ನು ಕರೋನಾಮುಕ್ತಗೊಳಿಸುವ ಹುಂಬುತನದ ವಿಶ್ವಾಸ ಈಗ ದೇಶವನ್ನು ಒಂದು ಲಕ್ಷಕ್ಕೂ ಅಧಿಕ ಸೋಂಕು ಮತ್ತು ಮೂರು ಸಾವಿರ ಸಾವುಗಳೊಂದಿಗೆ ಅಪಾಯಕ್ಕೆ ತಳ್ಳಿದೆ.

ಇದು; ಲಾಕ್ ಡೌನ್ ಬಗ್ಗೆ ಮೋದಿಯವರ ಸರ್ಕಾರಕ್ಕೆ ಇದ್ದ ಅಜ್ಞಾನ ಮತ್ತು ಕರೋನಾದ ಬಗ್ಗೆ ಇದ್ದ ಉದಾಸೀನದ ಫಲ. ವಾಸ್ತವವಾಗಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಲಾಕ್ ಡೌನ್ ನನ್ನು ಕರೋನಾದ ವಿರುದ್ಧ ಪ್ರಯೋಗಿಸಬಹುದಾದ ಅಸ್ತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿತ್ತು ಮತ್ತು ರೋಗದ ವಿರುದ್ಧದ ಪರಿಣಾಮಕಾರಿ ಪ್ರಬಲ ಅಸ್ತ್ರಗಳನ್ನು ಸಜ್ಜುಗೊಳಿಸಲು ಲಾಕ್ ಡೌನ್ ಒಂದು ಸಮಯಾವಕಾಶ. ಲಾಕ್ ಡೌನ್ ಮೂಲಕ ಪರಸ್ಪರ ಜನಸಂಪರ್ಕ ಕಡಿತ ಮಾಡುವ ಹೊತ್ತಿಗೇ ರೋಗದ ವಿರುದ್ಧದ ಸಮರದಲ್ಲಿ ನಿರ್ಣಾಯಕವಾದ ವ್ಯಾಪಕ ವೈರಾಣು ಪರೀಕ್ಷೆ, ರೋಗಿಗಳ ಚಿಕಿತ್ಸೆ, ಐಸೋಲೇಷನ್ ಮತ್ತು ಕ್ವಾರಂಟೈನ್ ಸೌಲಭ್ಯ, ತರಬೇತಾದ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸುರಕ್ಷಾ ಸಾಧನ, ಜೀವ ರಕ್ಷಕ ಸಲಕರಣೆ ಮುಂತಾದವನ್ನು ಅಗತ್ಯಪ್ರಮಾಣದಲ್ಲಿ ಸಜ್ಜುಗೊಳಿಸಿಕೊಳ್ಳಲು ಈ ಲಾಕ್ ಡೌನ್ ಸಮಯವನ್ನು ಬಳಸಿಕೊಳ್ಳಬೇಕು. ಲಾಕ್ ಡೌನ್ ನೊಂದಿಗೆ ಸೋಂಕಿನ ರೇಖೆಯನ್ನು ಬಾಗಿಸುವ ಜೊತೆಜೊತೆಯಲ್ಲೇ ಅದನ್ನು ಅಂತಿಮವಾಗಿ ಶೂನ್ಯಕ್ಕೆ ತರಲು ಬೇಕಾದ ವೈದ್ಯಕೀಯ ಹತಾರಗಳನ್ನು ನಿಖರ ಅಂದಾಜಿನೊಂದಿಗೆ ಸಜ್ಜುಗೊಳಿಸಿಕೊಳ್ಳಬೇಕು. ಹಾಗಾಗಿ ಲಾಕ್ ಡೌನ್ ಎಂಬುದು ಕೇವಲ ಜನಸಂಪರ್ಕ ಕಡಿತ ಮಾಡುವ ಕ್ರಮವಷ್ಟೇ ಅಲ್ಲದೆ; ಸೋಂಕಿನ ವಿರುದ್ಧದ ಸಮರಕ್ಕೆ ತಯಾರಾಗುವ ಕಾಲಾವಕಾಶ ಕೂಡ ಎಂಬುದನ್ನು ಆ ದೇಶಗಳು ತೋರಿಸಿಕೊಟ್ಟಿವೆ.

ಆದರೆ, ಭಾರತದಲ್ಲಿ ನಮ್ಮ ಪ್ರಧಾನಿಗಳು ರಚಿಸಿದ ಕರೋನಾ ರೋಗದ ವಿರುದ್ಧದ ಹೋರಾಟದಲ್ಲಿ ತಮ್ಮ ಸರ್ಕಾರಕ್ಕೆ ಸಲಹೆ-ಸೂಚನೆ ನೀಡುವ ಅತ್ಯುನ್ನತ ‘ಕೋವಿಡ್-19 ಕಾರ್ಯಪಡೆ’ಯೇ ತೀರಾ ಮೂರ್ಖತನದ ಅಂದಾಜುಗಳನ್ನು ಮಾಡಿತ್ತು. ಇಡೀ ದೇಶದ ಕರೋನಾ ವಿರುದ್ಧದ ಸಂಪೂರ್ಣ ಕಾರ್ಯತಂತ್ರಗಳು, ನೀತಿ-ನಿಲುವುಗಳನ್ನು, ಮಾರ್ಗಸೂಚಿಗಳನ್ನು ರೂಪಿಸಲು ಆಧಾರವಾಗಿದ್ದ ಈ ಕಾರ್ಯಪಡೆಯ ಅಂಕಿಅಂಶಗಳು, ಅಂದಾಜಿನ ಪ್ರಕಾರ ಮೇ 16ರ ಹೊತ್ತಿಗೆ ಭಾರತದ ಕರೋನಾ ಸೋಂಕು ಪ್ರಮಾಣ ಸೊನ್ನೆಯಾಗಬೇಕಿತ್ತು ಮತ್ತು ಆ ಬಳಿಕ ದೇಶ ಸಂಪೂರ್ಣ ಕರೋನಾ ಮುಕ್ತವಾಗಬೇಕಿತ್ತು. ಮೊದಲ ಹಂತದ ಕರೋನಾ ಲಾಕ್ ಡೌನ್ ಪರಿಣಾಮದ ಅಂದಾಜಿನ ಮೇಲೆ ಏಪ್ರಿಲ್ 24ರ ಹೊತ್ತಿಗೆ ಬಹಿರಂಗಗೊಂಡ ಈ ಮುನ್ಸೂಚನೆಯ ಪ್ರಕಾರವೇ ಕರೋನಾ ವಿರುದ್ಧ ಆ ಬಳಿಕದ ಎಲ್ಲಾ ಕಾರ್ಯತಂತ್ರಗಳನ್ನು ಜಾರಿಗೊಳಿಸಲಾಗಿತ್ತು. ಆ ಬಳಿಕದ ಎರಡು ಸುತ್ತಿನ ಲಾಕ್ ಡೌನ್ ಅವಧಿ ಮತ್ತು ಸ್ವರೂಪವನ್ನು ಕೂಡ ಇದೇ ಮಾದರಿಯ ಮೇಲೆಯೇ ಜಾರಿಗೆ ತರಲಾಗಿತ್ತು.

ನೀತಿ ಆಯೋಗದ ಸದಸ್ಯರನ್ನೂ ಹೊಂದಿದ್ದ ಮತ್ತು ಸ್ವತಃ ನೀತಿ ಆಯೋಗದ ಸದಸ್ಯ ಡಾ ವಿ ಕೆ ಪೌಲ್ ಅಧ್ಯಕ್ಷರಾಗಿರುವ ಆ ಕಾರ್ಯಪಡೆಯ ಹಾಸ್ಯಾಸ್ಪದ ಅಂದಾಜಿನ ಬಗ್ಗೆ ಮತ್ತು ಅದನ್ನೆ ಏಕಮಾತ್ರ ಮಾರ್ಗದರ್ಶಿ ಸೂತ್ರವಾಗಿ ಪರಿಗಣಿಸಿ ಆ ಬಳಿಕದ ಕರೋನಾ ಸಂಬಂಧಿತ ಎಲ್ಲಾ ನೀತಿ-ನಿರ್ಧಾರಗಳನ್ನೂ ಕೈಗೊಂಡ ಸರ್ಕಾರದ ಕ್ರಮದ ಬಗ್ಗೆ ಈಗ ಸ್ವತಃ ಆ ಕಾರ್ಯಪಡೆಯ ಸದಸ್ಯರೇ ಬಹಿರಂಗ ಟೀಕೆ ಮಾಡಿದ್ದಾರೆ. ಅದರಲ್ಲೂ ಕಾರ್ಯಪಡೆಯಲ್ಲಿದ್ದ ವಿಜ್ಞಾನಿಗಳು ಮತ್ತು ವೈರಾಣು ರೋಗ ತಜ್ಞರೇ ಅಪಸ್ವರ ತೆಗೆದಿದ್ದಾರೆ. ಮಾತ್ರವಲ್ಲ; ದೇಶದ ಕರೋನಾ ಪ್ರಕರಣಗಳ ಈ ಪರಿಯ ಏರಿಕೆಗೆ ಕಾರ್ಯಪಡೆ ಅಧ್ಯಕ್ಷರು ಮತ್ತು ಪ್ರಧಾನಿಗಳು ತಪ್ಪು ಅಂದಾಜು ಮತ್ತು ನಿರ್ಧಾರಗಳೇ ಕಾರಣ ಎಂದೂ ಅವರು ನೇರ ಆರೋಪ ಮಾಡಿದ್ದಾರೆ.

“ಯಾವುದೇ ಅಂದಾಜು ಮಾದರಿಗಳು ಊಹೆಗಳ ಮೇಲೆ ನಿಂತಿರುತ್ತವೆ. ಅಂತಹ ಊಹೆಗಳು ತಪ್ಪಾದರೆ, ಅದನ್ನು ಆಧರಿಸಿದ ಮಾಹಿತಿ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ, ಕಾರ್ಯಪಡೆಯ ಆ ಅಂದಾಜಿನ ಅಂಕಿಅಂಶಗಳು ಹಳಿತಪ್ಪಿರುವುದನ್ನು ಯಾರೂ ಗಮನಿಸಲೇ ಇಲ್ಲ. ಯಾರೂ ಆ ಅಂಕಿಅಂಶಗಳ ವಿಶ್ಲೇಷಣೆ ಮಾಡಲಿಲ್ಲ. ಸರ್ಕಾರಿ ಅಧಿಕಾರಿಗಳಂತೂ ಆ ಮಾದರಿಯನ್ನು ಅರ್ಥಮಾಡಿಕೊಳ್ಳುವ ಗೊಡವೆಗೇ ಹೋದರೆ, ಅದೇ ಅಂತಿಮ ಮಾರ್ಗದರ್ಶಿ ಸೂತ್ರವೆಂದು ಪರಿಗಣಿಸಿ ಅದಕ್ಕನುಸಾರವಾಗಿ ಎಲ್ಲಾ ಕ್ರಮಗಳನ್ನು ಜಾರಿಗೆ ತಂದರು. ಆ ಮೂಲಕ ವಾಸ್ತವ ಸ್ಥಿತಿಗೆ ತಕ್ಕಂತೆ ಅನುಕರಣೀಯ ಮಾದರಿ ಸಿದ್ಧಪಡಿಸುವ ಬದಲು, ಊಹಾತ್ಮಕ ಮಾದರಿ ಸಿದ್ಧಪಡಿಸಿ ವಾಸ್ತವ ಬದುಕನ್ನು ಅದಕ್ಕೆ ತಕ್ಕಂತೆ ಬಗ್ಗಿಸುವ ವಿಚಿತ್ರ ಸರ್ಕಸ್ ನಡೆಯಿತು. ಹಾಗಾಗಿಯೇ ಲಾಕ್ ಡೌನ್ ಯಶಸ್ವಿ ಪ್ರಯೋಗ ಎಂಬಂತೆ ಬಿಂಬಿಸಲಾಯಿತು. ರಾಜಕೀಯ ಲಾಭವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಇಂತಹ ವಂಚನೆ ಎಸಗಲಾಯಿತು” ಎಂದು ಕಾರ್ಯಪಡೆಯ ಸದಸ್ಯರಲ್ಲಿ ಒಬ್ಬರು ‘ದ ಕ್ಯಾರವಾನ್’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಲ್ಲದೆ ಸ್ವತಃ ಸಾಂಕ್ರಾಮಿಕ ತಜ್ಞರಾದ, ಕಾರ್ಯಪಡೆಯ ಮತ್ತೊಬ್ಬ ಸದಸ್ಯರು ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದ್ದು, “ಕಾರ್ಯಪಡೆಯಲ್ಲಿದ್ದ ವಿಜ್ಞಾನಿಗಳು, ತಜ್ಞರ ಸಲಹೆ- ಸೂನಚೆಗಳಿಗೆ ಸರ್ಕಾರ ಕಿವಿಗೊಡಲೇ ಇಲ್ಲ. ಕೇವಲ ಕಾರ್ಯಪಡೆ ಮುಖ್ಯಸ್ಥರು ತಯಾರಿಸಿದ ಅಂದಾಜು ಮಾದರಿಯನ್ನೇ ಇಟ್ಟುಕೊಂಡು ಎಡವಟ್ಟು ಕೇವಲ ಲಾಕ್ ಡೌನ್ ಒಂದೇ ದೇಶವನ್ನು ಕರೋನಾಮುಕ್ತಗೊಳಿಸಿಬಿಡುತ್ತದೆ ಎಂದು ನಂಬಿ ಕೆಲಸ ಮಾಡಿತು. ಆದರೆ, ಲಾಕ್ ಡೌನ್ ವೇಳೆ ಮಾಡಲೇಬೇಕಾಗಿದ್ದ ತಯಾರಿಗಳನ್ನು ಮಾಡಿಕೊಳ್ಳುವಲ್ಲಿ ಮೈಮರೆಯಿತು. ಸೋಂಕಿತರ ಸಂಪರ್ಕ ಪತ್ತೆ, ಪರೀಕ್ಷಾ ಪ್ರಯೋಗಾಲಯ ಹೆಚ್ಚಳ, ಪರೀಕ್ಷಾ ಪ್ರಮಾಣ ಹೆಚ್ಚಳ, ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ಹೆಚ್ಚಳ ಮುಂತಾದ ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಳ ವಿಷಯದಲ್ಲಿ ನೀಡಬೇಕಾದ ಪ್ರಮಾಣದ ಆದ್ಯತೆ ನೀಡಲಿಲ್ಲ” ಎಂದು ಹೇಳಿದ್ದಾರೆ. ಕಾರ್ಯಪಡೆಯ ಈ ಇಬ್ಬರೂ ಸದಸ್ಯರು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, “ಸೋಂಕು ನಿಯಂತ್ರಣ ಮತ್ತು ರೋಗದ ವಿರುದ್ಧದ ಸಮರಕ್ಕೆ ಸಜ್ಜಾಗಲು ಸಮಯಾವಕಾಶ ತೆಗೆದುಕೊಳ್ಳುವ ಉದ್ದೇಶದಿಂದ ಮೊದಲ ಹಂತದ 21 ದಿನಗಳ ಲಾಕ್ ಡೌನ್ ಅನಿವಾರ್ಯವಾಗಿತ್ತು. ಆದರೆ, ಆ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಮಾಡಿಕೊಳ್ಳಬೇಕಾದ ತಯಾರಿಗಳನ್ನು ಮಾಡಿಕೊಳ್ಳುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿತು. ಕೇವಲ ಲಾಕ್ ಡೌನ್ ಒಂದೇ ಕರೋನಾ ಓಡಿಸಿಬಿಡುತ್ತದೆ ಎಂದು ನಂಬಿತು. ಆ ಬಳಿಕ ಕೂಡ ಮತ್ತೆ ಮತ್ತೆ ಲಾಕ್ ಡೌನ್ ವಿಸ್ತರಿಸಲು ಕೂಡ ಇಂತಹ ಲೋಪವೇ ಕಾರಣ. ಮೊದಲ ಹಂತದಲ್ಲಿ ಸರಿಯಾದ ತಯಾರಿ ಮಾಡಿಕೊಂಡಿದ್ದರೆ ಮತ್ತೆ ವಿಸ್ತರಣೆಯ ಅಗತ್ಯವೇ ಇರಲಿಲ್ಲ. ಕನಿಷ್ಟ ಸರ್ಕಾರ ಟಾಸ್ಕ್ ಫೋರ್ಸನ ತಜ್ಞರು ಮಾಹಿತಿ ಮತ್ತು ಸಲಹೆಯನ್ನು ಕೂಡ ಪಡೆಯಲಿಲ್ಲ. ಪ್ರಯೋಗಾಲಯ ಮತ್ತು ಪರೀಕ್ಷೆಯ ಪ್ರಮಾಣ ಹೆಚ್ಚಿಸಿಕೊಂಡಿದ್ದರೆ ಮಾತ್ರ ಲಾಕ್ ಡೌನ್ ಮಾಡಿದ್ದು ಸಾರ್ಥಕವಾಗುತ್ತಿತ್ತು. ಆದರೆ ಸರ್ಕಾರ ಅದನ್ನು ಮಾಡಲಿಲ್ಲ” ಎಂದೂ ಆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ನೀವು ಅಗತ್ಯ ಪ್ರಮಾಣದ ಪರೀಕ್ಷೆ ನಡೆಸಲು ಸಜ್ಜಾಗದೇ ಕೇವಲ ಲಾಕ್ ಡೌನ್ ಹೇರಿ ಕೈಕಟ್ಟಿ ಕುಳಿತರೆ, ಅದು ಒಂದು ರೀತಿಯಲ್ಲಿ ಎರಗುವ ವೈರಿಯ ಎದುರು ಗುಂಡುಗಳೇ ಇಲ್ಲದೆ ಕೇವಲ ರಿವಾಲ್ವರ್ ಹಿಡಿದು ಝಳಪಿಸಿದಂತೆ ಅಷ್ಟೇ” ಎಂಬುದು ಸ್ವತಃ ಸರ್ಕಾರವೇ ರಚಿಸಿದ ಕೋವಿಡ್ 19 ಟಾಸ್ಕ್ ಫೋರ್ಸ್ ಸದಸ್ಯ ಸಾಂಕ್ರಾಮಿಕ ತಜ್ಞರ ಮಾರ್ಮಿಕ ಮಾತು!

ಇದು ದೇಶದ ಸದ್ಯದ ಕರೋನಾ ವಿರುದ್ಧದ ಸಮರದ ಕುರಿತ ಅತ್ಯಂತ ಮಾರ್ಮಿಕ ಚಿತ್ರಣ. ಬುಲೆಟ್ಟೇ ಇಲ್ಲದ ರಿವಾಲ್ವರ್ ತಮ್ಮ ಕೈಯಲ್ಲಿದೆ ಎಂಬುದು ಗೊತ್ತಿದ್ದೂ, ಕರೋನಾ ವಿರುದ್ಧ ನಾವು ಗೆಲ್ಲುತ್ತೇವೆ ಎಂದು ನಮ್ಮ ಚೌಕಿದಾರರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ಧಾರೆ! ಇದೀಗ ಪರಿಸ್ಥಿತಿ ಎಂತಹ ಶೋಚನೀಯ ಹಂತಕ್ಕೆ ಬಂದಿದೆ ಎಂದರೆ; ಲಾಕ್ ಡೌನ್ ನಿಂದಾಗಿ ಯಾವ ಪ್ರಯೋಜನವೂ ಆಗಿಲ್ಲ; ಬದಲಾಗಿ ಕೋಟ್ಯಂತರ ಮಂದಿ ಕಾರ್ಮಿಕರು, ಬಡವರ ಬದುಕು ಸರ್ವನಾಶವಾಯಿತು. ದೇಶದ ಕೃಷಿ ಸೇರಿದಂತೆ ಆರ್ಥಿಕತೆ ಮಕಾಡೆ ಮಲಗಿತು ಎಂಬುದು ಗೊತ್ತಿದ್ದೂ, ಅವರು ಲಾಕ್ ಡೌನ್ ಸಂಪೂರ್ಣ ತೆರವು ಮಾಡಿ ಅದಕ್ಕೆ ಬದಲಾಗಿ ಕ್ವಾರಂಟೈನ್, ಕಾಂಟ್ಯಾಕ್ಟ್ ಟ್ರೇಸಿಂಗ್, ಟೆಸ್ಟಿಂಗ್, ವೈದ್ಯಕೀಯ ಸೌಲಭ್ಯ, ಸಲಕರಣೆ, ಸುರಕ್ಷಾ ಸಾಧನಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ.

ಬದಲಾಗಿ ಎರಡು ವಾರದಲ್ಲಿ ಕರೋನಾ ಕಳೆಯುತ್ತದೆ, ಮೂರು ವಾರದಲ್ಲಿ ತೊಗಲುತ್ತದೆ ಎಂಬ ತಮ್ಮದೇ ಭ್ರಮಾತ್ಮಕ ಲೆಕ್ಕಾಚಾರಗಳಲ್ಲಿ ಲಾಕ್ ಡೌನ್ ಮುಂದುವರಿಸುತ್ತಲೇ ಇದ್ದಾರೆ! ಆ ಮೂಲಕ ರಾಜಕೀಯವಾಗಿ ಅನಿವಾರ್ಯವಾದ ಹಾದಿ ಹಿಡಿದಿದ್ದಾರೆ. ರಾಜಕೀಯ ಮುಖಭಂಗದಿಂದ ಪಾರಾಗಲು ಆತ್ಮನಿರ್ಭರದಂತಹ ಹೊಸ ಹೊಸ ಪರಿಭಾಷೆಗಳನ್ನು ಸೃಷ್ಟಿಸಿ ತಮ್ಮ ವೈಫಲ್ಯಗಳನ್ನು ಯಶಸ್ಸಿನ ದಾರಿ ಎಂಬಂತೆ ಬಿಂಬಿಸುತ್ತಿದ್ದಾರೆ.

ಆದರೆ, ತಜ್ಞರ ಪ್ರಕಾರ, ಸರ್ಕಾರ ಅಂದಾಜಿಸಿದಂತೆ ಒಂದು ವಾರ, ಎರಡು ವಾರದಲ್ಲಿ ಕರೋನಾ ಮಾಯವಾಗುವುದಿಲ್ಲ. ಬದಲಾಗಿ ಕನಿಷ್ಟ ಮೂರು ವರ್ಷ ಕಾಲ ದೇಶವನ್ನು ಕಾಡಲಿದೆ! ಪ್ರಧಾನ ಮಂತ್ರಿಗಳ ಲಾಕ್ ಡೌನ್ ಎಂಬ ಖಾಲಿ ರಿವಾಲ್ವರ್ ಝಳಪಿಸುವ ಕೆಲಸ ಇನ್ನೂ ಎಷ್ಟು ತಿಂಗಳು ಮುಂದುವರಿಯುವುದು? ಎಂಬುದು ಈಗಿರುವ ಪ್ರಶ್ನೆ! ಈಗ ನಿಜಕ್ಕೂ ಭಾರತೀಯರು ಕರೋನಾದ ಜೊತೆ ಬದುಕುವುದನ್ನು ಕಲಿಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆತ್ಮವಂಚಕರಾಗದೇ ವಾಸ್ತವವನ್ನು ಎದುರಿಸುವುದನ್ನು ಜನರಾದರೂ ಕಲಿಯಬೇಕಿದೆ.

Click here Support Free Press and Independent Journalism

Pratidhvani
www.pratidhvani.com