ಮುಸ್ಲಿಮನೆಂದು ಭಾವಿಸಿ ಹಲ್ಲೆ ನಡೆಸಿದ ಬಳಿಕ ಮಧ್ಯಪ್ರದೇಶ ಪೊಲೀಸರ ಹೈಡ್ರಾಮಾ.!
ರಾಷ್ಟ್ರೀಯ

ಮುಸ್ಲಿಮನೆಂದು ಭಾವಿಸಿ ಹಲ್ಲೆ ನಡೆಸಿದ ಬಳಿಕ ಮಧ್ಯಪ್ರದೇಶ ಪೊಲೀಸರ ಹೈಡ್ರಾಮಾ.!

ಪೊಲೀಸರು ಬುಂಡೆಲೆಗೆ ಕೊಟ್ಟ ವಿವರಣೆಯಲ್ಲಿ ನಾವು ನಿಮ್ಮನ್ನು ಮುಸ್ಲಿಮನೆಂದುಕೊಂಡು ತಪ್ಪಾಗಿ ಗುರುತಿಸಿದೆವು. ಈ ಕಾರಣಕ್ಕಾಗಿ ನಿಮಗೆ ಹೊಡೆದವು ಎಂದು ಹೇಳಿದ್ದಾರೆ. ಅಲ್ಲದೆ ಮೊಕದ್ದಮೆ ಹಿಂಪಡೆಯಲು ಬುಂಡೆಲೆ ಮುಂದೆ ಪೊಲೀಸರು ದುಂಬಾಲು ಬಿದ್ದರು. ಇಡೀ ಪೊಲೀಸ್ ಇಲಾಖೆ ನಿಮ್ಮ ಕ್ಷಮೆ ಕೇಳುತ್ತಿದೆ. ಬೇಕು ಎಂದರೆ ನಿಮ್ಮ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನೇ ಇಲ್ಲಿಗೆ ಕರೆದುಕೊಂಡು ಬಂದು ಕ್ಷಮೆ ಕೇಳುವಂತೆ ಮಾಡುತ್ತೇವೆ.

ಆಶಿಕ್‌ ಮುಲ್ಕಿ

ಮಧ್ಯಪ್ರದೇಶದ ಬೆತುಲ್ ನಲ್ಲಿ ಪೊಲೀಸರ ಇಸ್ಲಾಮೋಫೋಬಿಯಾಗೆ ಸಾಕ್ಷಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ಮಾರ್ಚ್ 23ಕ್ಕೆ ದೀಪಕ್ ಬುಂಡೆಲೆ ಎಂಬ ವಕೀಲ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಪೊಲೀಸರು ಮೊಕದ್ದಮೆ ಹಿಂಪಡೆಯಲು ಬುಂಡೆಲೆಯನ್ನು ಒತ್ತಾಯಿಸಿದ್ದರು. ಈ ವೇಳೆ ಪೊಲೀಸರು ಬುಂಡೆಲೆಗೆ ಕೊಟ್ಟ ವಿವರಣೆಯಲ್ಲಿ ನಾವು ನಿಮ್ಮನ್ನು ಮುಸ್ಲಿಮನೆಂದುಕೊಂಡು ತಪ್ಪಾಗಿ ಗುರುತಿಸಿದೆವು. ಈ ಕಾರಣಕ್ಕಾಗಿ ನಿಮಗೆ ಹೊಡೆದವು ಎಂದು ಹೇಳಿದ್ದಾರೆ.

ಹಲ್ಲೆಗೊಳಗಾದ ದೀಪಕ್‌ ಬುಂಡೆಲೆ
ಹಲ್ಲೆಗೊಳಗಾದ ದೀಪಕ್‌ ಬುಂಡೆಲೆ image courtesy : The Wire

ಈ ಪ್ರಕರಣದ ಕುರಿತು ‘The Wire’ ಸಂಪೂರ್ಣವಾಗಿ ವರದಿ ಮಾಡಿದೆ. ‘ದಿ ವೈರ್’ ಬುಂಡೆಲೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆಹಾಕಿದೆ. ಈ ವೇಳೆ ಬುಂಡೆಲೆ, ಮಾರ್ಚ್ 23ರ ಸಂಜೆ 5:30 ಮತ್ತು 6ರ ಸುಮಾರಿಗೆ ತಾನು ಆಸ್ಪತ್ರೆಗೆ ತೆರಳುತ್ತಿದ್ದೆ. ನನಗೆ ರಕ್ತದ ಒತ್ತಡದ ಖಾಯಿಲೆ ಇದೆ. ಹೀಗಾಗಿ ಆಸ್ಪತ್ರೆಗೆ ತೆರಳಿದ್ದೆ. ಅರ್ಧದಾರಿಯಲ್ಲಿ ಪೊಲೀಸರು ನನ್ನನ್ನು ತಡೆದರು. ಆಗಿನ್ನೂ ಲಾಕ್ ಡೌನ್ ಹೇರಿಕೆಯಾಗಿರಲಿಲ್ಲ. ಆದರೂ ಬೆತುಲ್ ನಲ್ಲಿ ಸೆಕ್ಷನ್ 144 ಜಾರಿಯಾಗಿತ್ತು ಎಂದು ಹೇಳಿದ್ದಾರೆ.

ಬುಂಡೆಲೆ ಗಡ್ಡ ಬೆಳೆಸಿಕೊಂಡಿದ್ದರು. ಹೀಗಾಗಿ ತಡೆದು ನಿಲ್ಲಿಸಿದ ಕೂಡಲೇ ಬುಂಡೆಲೆಯ ಮಾತನ್ನೂ ಕೇಳಿಸಿಕೊಳ್ಳದೆ ಓರ್ವ ಪೊಲೀಸ್ಸಿಬ್ಬಂದಿ ಬುಂಡೆಲೆ ಕಪಾಳಕ್ಕೆ ಹೊಡೆದಿದ್ದಾನೆ. ಈ ವೇಳೆ ದೀಪಕ್, “ಪೊಲೀಸರು ಕಾನೂನಿನ ಮಿತಿಯೊಳಗೆ ನಿಂತು ವರ್ತಿಸಬೇಕು. ಇಲ್ಲದೆ ಹೋದರೆ ನಾನು ಐಪಿಸಿ ಸೆಕ್ಷನ್ 188 ಅಡಿಯಲ್ಲಿ ದೂರು ಕೊಡುತ್ತೇನೆ” ಎಂದು ಹೇಳಿದ್ದಾರೆ. ಇದನ್ನು ಕೇಳಿದ ಕೂಡಲೇ ತಾಳ್ಮೆ ಕಳೆದುಕೊಂಡ ಪೊಲೀಸರು, “ನನ್ನನ್ನು ಮತ್ತು ದೇಶದ ಸಂವಿಧಾನವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಸುತ್ತವರಿದು ಹಿಗ್ಗಾಮುಗ್ಗಾ ಥಳಿಸಿದರು” ಎಂದಿದ್ದಾರೆ.

ಕೆಳಗೆ ಬಿದ್ದು ಪೊಲೀಸರ ಕೈಯಿಂದ ಹೊಡೆತ ತಿನ್ನುತ್ತಿರುವಗಾಲೇ ತಾನೊಬ್ಬ ವಕೀಲ ಎಂದು ಕಿರುಚಾಡಿದ್ದಾರೆ. ಈ ವೇಳೆ ಖಾಕಿಗಳು ಹೊಡೆತ ನಿಲ್ಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಬುಂಡೆಲೆಯ ಕಿವಿಯಿಂದ ರಕ್ತ ಸೋರುವುದಕ್ಕೆ ಶುರುವಾಗಿತ್ತು. ಆ ಬಳಿಕ ತನ್ನ ಸಹೋದರರನ್ನು ಕರೆದು ಆಸ್ಪತ್ರೆ ಸೇರಿದ್ದಾನೆ ಹಲ್ಲೆಗೊಳಗಾದ ವಕೀಲ.

ಇದಾದ ಮರುದಿನವೇ ಬುಂಡೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಸ್ ಭಡೋರಿಯಾಗೆ ಹಾಗೂ ಡಿಜಿಪಿ, ಮಾನವ ಹಕ್ಕುಗಳ ಆಯೋಗ, ಮಧ್ಯಪ್ರದೇಶದ ಮುಖ್ಯ ನ್ಯಾಯಾಧೀಶರಿಗೆ ಮತ್ತು ಇತರೆ ಸಂಬಂಧಿತ ಸರ್ಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಸಿಸಿಟಿವಿ ಫೂಟೇಜ್ ಗಾಗಿ RTI ಅರ್ಜಿ ಹಾಕಿದ್ದಾರೆ. ಆದರೆ ಪೊಲೀಸರ ಬಳಿ ಇದ್ದ ಸಿಸಿಟಿವಿ ದೃಶ್ಯಗಳು ಡಿಲಿಟ್ ಆಗಿ ಹೋಗಿದೆ ಎಂಬ ಪ್ರತ್ಯುತ್ತರವನ್ನ RTI ಅರ್ಜಿಗೆ ಪಡೆದುಕೊಂಡಿದ್ದಾರೆ.

ಉನ್ನತ ಅಧಿಕಾರಿಗಳಿಗೆ ದೂರು ನೀಡದ ಬಳಿಕ ಸ್ಥಳೀಯ ಪೊಲೀಸರಿಂದ ಬುಂಡೆಲೆ ಮೇಲೆ ದೂರು ಹಿಂಪಡೆಯಲು ಒತ್ತಡ ಬಿದ್ದಿದೆ. ಇಲ್ಲದೆ ಹೋದರೆ ನೀನು ಹೇಗೆ ವಕೀಲನಾಗಿ ಇಲ್ಲಿ ಬದುಕಿತ್ತಿ ಎಂಬ ಬೆದರಿಕೆಯನ್ನೂ ಒಡ್ಡಿದ್ದಾರಂತೆ. ಆದರೆ ಬುಂಡೆಲೆ ಇದಕ್ಕೆಲ್ಲ ಬಗ್ಗಲಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಘಟನೆಯ ಕುರಿತು ಎಫ್ಐಆರ್ ದಾಖಲಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆ ಕೆಲ ಪೊಲೀಸ್ ಅಧಿಕಾರಿಗಳು ಮೇ 17ರಂದು ಬುಂಡೆಲೆ ಹೇಳಿಕೆ ಪಡೆಯಲು ಮನೆಗೆ ತೆರಳಿದ್ದಾರೆ. ಈ ವೇಳೆ ಪೊಲೀಸರು, ನೀವು ಗಡ್ಡ ಬೆಳೆಸಿದ್ದನ್ನು ನೋಡಿ ನಿಮ್ಮನ್ನು ಮುಸ್ಲಿಂ ಎಂದು ಊಹಿಸಿಕೊಂಡು ಹೊಡೆದು ಬಿಟ್ಟೆವು ಎಂದು ಬುಂಡೆಲೆಗೆ ಹೇಳಿದ್ದಾರೆ. ಅಲ್ಲದೇ ಮನೆಗೆ ಬಂದ ಪೊಲೀಸರು ಸುಮಾರು 3 ತಾಸುಗಳ ಕಾಲ ದೂರು ಹಿಂಪಡೆಯಲು ಮನವೊಲಿಸಿದ್ದಾರೆಂದು ಬುಂಡೆಲೆ ‘ದಿ ವೈರ್’ ಗೆ ತಿಳಿಸಿದ್ದಾರೆ.

ದೀಪಕ್‌ ಬುಂಡೆಲೆ ದೂರಿನ ಪ್ರತಿ
ದೀಪಕ್‌ ಬುಂಡೆಲೆ ದೂರಿನ ಪ್ರತಿ image courtesy : The Wire

ಅಲ್ಲದೆ ಮೊಕದ್ದಮೆ ಹಿಂಪಡೆಯಲು ಬುಂಡೆಲೆ ಮುಂದೆ ಪೊಲೀಸರು ದುಂಬಾಲು ಬಿದ್ದರು. ಇಡೀ ಪೊಲೀಸ್ ಇಲಾಖೆ ನಿಮ್ಮ ಕ್ಷಮೆ ಕೇಳುತ್ತಿದೆ. ಬೇಕು ಎಂದರೆ ನಿಮ್ಮ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನೇ ಇಲ್ಲಿಗೆ ಕರೆದುಕೊಂಡು ಬಂದು ಕ್ಷಮೆ ಕೇಳುವಂತೆ ಮಾಡುತ್ತೇವೆ. ದಯವಿಟ್ಟು ನೀವು ದಾಖಲಿಸಿದ ಕೇಸನ್ನು ಹಿಂಪಡೆಯಿರಿ ಎಂದು ಬೇಡಿಕೊಂಡಿದ್ದಾರೆ.

ಇಷ್ಟಕ್ಕೂ ಒಲಿಯದೆ, ದೂರು ಹಿಂಪಡೆಯಲು ಮನಸ್ಸು ಮಾಡದೆ ನಿಂತಿದ್ದ ಬುಂಡೆಲೆ ಮುಂದೆ ಪೊಲೀಸರು ಮತ್ತೊಂದು ನಾಟಕ ಬಿಚ್ಚಿದ್ದಾರೆ. ದಯವಿಟ್ಟು ಮೊಕದ್ದಮೆಯನ್ನು ಹಿಂಪಡೆಯಿರಿ. ನಾವು ಗಾಂಧಿಯ ಭಾರತದಲ್ಲಿ ಬದುಕುತ್ತಿದ್ದೇವೆ. ನಾವೆಲ್ಲರೂ ಗಾಂಧಿಯ ಮಕ್ಕಳು. ನನಗೆ ನಿಮ್ಮ ಜಾತಿಯಿಂದ 50ಕ್ಕೂ ಹೆಚ್ಚಿನ ಗೆಳೆಯರಿದ್ದಾರೆ. ನಿಮಗೆ ಬಡಿದ ಪೊಲೀಸರಿಗೆ ಈಗ ನಾಚಿಕೆಯಾಗಿದೆ. ಯಾಕೆಂದರೆ ನಮ್ಮ ಹಿಂದೂ ಯುವಕನಿಗೆ ಈ ರೀತಿ ಹೊಡೆದು ಬಿಟ್ಟೆವಲ್ಲ ಎಂದು ನೊಂದುಕೊಂಡಿದ್ದಾರೆ. ನಮಗೆ ನಿಮ್ಮ ಮೇಲೆ ಯಾವುದೇ ದ್ವೇಷವಿಲ್ಲ. ಒಂದು ವೇಳೆ ಹಿಂದೂ-ಮುಸ್ಲಿಮರ ನಡುವೆ ಕೋಮು ಗಲಭೆಯಾದರೆ. ನಮ್ಮ ಇಲಾಖೆ ಖಂಡಿತವಾಗಿಯೂ ಹಿಂದೂಗಳ ಬೆಂಬಲಕ್ಕೆ ನಿಲ್ಲುತ್ತದೆ. ಒಂದು ವೇಳೆ ಇದು ಮುಸ್ಲಿಮರಿಗೆ ಗೊತ್ತಾದರೆ ನಮ್ಮ ಹಿಂದೂ ಧರ್ಮಕ್ಕೇ ನಾಚಿಕೆ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.

ಈ ವೇಳೆ ಬುಂಡೆಲೆ ಹಾಗಾದರೆ ಹಿಂದೂ ಮುಸ್ಲಿಮರ ನಡುವೆ ಗಲಭೆಯಾದರೆ ನೀವು ಮುಸ್ಲಿಮರನ್ನು ಹೊಡೆದು ಸಾಯಿಸಿ ಬಿಡುತ್ತೀರಿ..? ಎಂದು ಪ್ರಶ್ನಿಸಿದ್ದಾರೆ. ಹೌದು.. ನಾವು ಅದನ್ನೇ ಅಲ್ಲವೇ ಮಾಡಿಕೊಂಡು ಬರುತ್ತಿರುವುದು ಎಂದು ಪೊಲೀಸರು ಉತ್ತರಿಸಿದ್ದಾರೆ.

ಪೊಲೀಸರು ಬುಂಡೆಲೆಯನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೇಸು ಹಿಂಪಡೆಯದೆ ಪೊಲೀಸರಿಗೆ ಶಿಕ್ಷೆ ಕೊಡುವ ಪಣತೊಟ್ಟಿದ್ದಾರೆ. ಅಲ್ಲದೇ ಒಂದು ವೇಳೆ ತಾನು ಮುಸ್ಲಿಮನಾಗಿದ್ದರೆ ಮಾರಣಾಂತಿಕವಾಗಿ ಹೊಡೆಯುವ ಅಧಿಕಾರ ಪೊಲೀಸರಿಗೆ ಯಾರು ಕೊಟ್ಟಿದ್ದು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಸದ್ಯಕ್ಕೆ ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳೇ ನೇರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

ಇದು ದೇಶದಲ್ಲಿ ಯಾವ ಮಟ್ಟದಲ್ಲಿ ಇಸ್ಲಾಮೊಫೋಬಿಯಾ ಇದೆ ಎಂಬುದಕ್ಕಿರುವ ತಾಜಾ ನಿದರ್ಶನ. ಜನರನ್ನ ಕಾಯಬೇಕಾದ, ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕಾದ ಖಾಕಿಗಳೇ ಈ ರೀತಿಯಾಗಿ ನಡೆದುಕೊಂಡರೆ ಭಾರತ ವಿಶ್ವ ಗುರು ಆಗುವುದಿಲ್ಲ. ವ್ಯವಸ್ಥೆ ಬಿಡುವ ಉಸಿರು ಕೂಡ ಕೋಮು ದ್ವೇಷದ ದುರ್ಗಂಧದಿಂದ ನಾರುತ್ತಿದೆ.

Click here Support Free Press and Independent Journalism

Pratidhvani
www.pratidhvani.com