ಲಕ್ಷ್ಯ ನೀಡದ ಕಾರಣಕ್ಕೆ ಲಕ್ಷ ದಾಟಿದ ದೇಶದ ಕರೋನಾ ಪೀಡಿತರ ಸಂಖ್ಯೆ
ರಾಷ್ಟ್ರೀಯ

ಲಕ್ಷ್ಯ ನೀಡದ ಕಾರಣಕ್ಕೆ ಲಕ್ಷ ದಾಟಿದ ದೇಶದ ಕರೋನಾ ಪೀಡಿತರ ಸಂಖ್ಯೆ

ಆಳುವ ಮಂದಿ ‘ಬಿದ್ದರೂ ತಮ್ಮ ಮೀಸೆ ಮಣ್ಣಾಗಲಿಲ್ಲ’ ಎಂದು ಹೇಳಿಕೊಳ್ಳಬಹುದು. ಆದರೆ ಕರೋನಾ ಅಂಕಿ ಅಂಶಗಳು ಇಡೀ ಮುಖವೇ ಮಸಿಯಾಗಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ. ಏಕೆಂದರೆ ಮೊದ ಮೊದಲು ಕರೋನಾ ಕಷ್ಟಕ್ಕೀಡಾಗಿರುವ ದೇಶಗಳ ನೆರವಿಗೆ ಭಾರತ ಧಾವಿಸಲಿದೆ ಎಂದು ವೀರಾವೇಶದ ಭಾಷಣ ಮಾಡಿದ್ದವರು ಈಗ IMF ಬಳಿ ಸಾಲ ಕೇಳಿದ್ದಾರೆ. ಆದ್ದರಿಂದ ಈಗೀಗ ಕೇಂದ್ರ ಸರಕಾರ ಕೋವಿಡ್-19‌ ಪೀಡಿತರ ಅಂಕಿಅಂಶ ಮುಂದಿಡಲೂ ಹಿಂದೆ ಮುಂದೆ ನೋಡುತ್ತಿದೆ.

ಯದುನಂದನ

ಕಂಡುಕೇಳರಿಯದ ಕರೋನಾ ಕಷ್ಟವನ್ನು ನಿಭಾಯಿಸಿದ ರೀತಿಗೆ ಕೇಂದ್ರ ಸರ್ಕಾರ ತನ್ನ ಭುಜವನ್ನು ತಾನೇ ತಟ್ಟಿಕೊಳ್ಳುತ್ತಿದೆ‌. ಜಾಗತಿಕ ಪಿಡುಗಾಗಿರುವ ಕರೊನಾವನ್ನು ಜಗತ್ತಿನಲ್ಲೇ ಅತ್ಯದ್ಭುತವಾಗಿ ನಿರ್ವಹಿಸಿದ ಖ್ಯಾತಿ ತನ್ನದೇ ಎಂದು ಇಲ್ಲದ ಕೋಡನ್ನು ತೋರಿಸಲು ಹವಣಿಸುತ್ತಿದೆ. ಕರೋನಾ ಕಡುಕಷ್ಟದ ಸಂದರ್ಭದಲ್ಲೂ ಸ್ವಪ್ರತಿಷ್ಟೆ ಮುಖ್ಯವಾಗುತ್ತಿದೆ. ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಳ್ಳುವ ಹಪಹಪಿಕೆ ಕಾಣಿಸುತ್ತಿದೆ. ಆದರೆ ಅಂಕಿ ಅಂಶಗಳು ಈ ಎಲ್ಲವನ್ನೂ ನಿವಾಳಿಸಿ ಬಿಸಾಡಿವೆ, ವ್ಯತಿರಿಕ್ತ ಮಾಹಿತಿಯನ್ನು ಪ್ರತಿಬಿಂಬಿಸುತ್ತಿವೆ.

ಸರಿಯಾದ ಸಂದರ್ಭಕ್ಕೆ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳದೆ ಆಳುವವರು ಮಾಡಿದ ತಪ್ಪಿಗೆ ದೇಶ ದುರ್ದಿನವನ್ನು ಎದುರಿಸಬೇಕಾಗಿದೆ. ಕಂಡುಕೇಳರಿಯದ ಕ್ಲಿಷ್ಟವಾದ ಸಮಸ್ಯೆಯೆಡೆಗೆ ಲಕ್ಷ್ಯ‌ ಕೊಟ್ಟಿಲ್ಲ ಎನ್ನುವುದು ದೇಶದ ಕರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟುವ ಮೂಲಕ‌ ಸಾಬೀತಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದೇಶದ ಕರೋನಾ ಸೋಂಕು ಪೀಡಿತರ ಸಂಖ್ಯೆ ಈಗ 1,01,139. ಅಂದಹಾಗೆ ಕರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿದ್ದು ಅದನ್ನು ನಿಯಂತ್ರಿಸಬೇಕೆಂದು ದೇಶವನ್ನೇ ದಿಗ್ಬಂಧನಕ್ಕೆ ಒಳಪಡಿಸಿದ ಸಂದರ್ಭದಲ್ಲಿ ಎಂಬುದು ಗಮನಾರ್ಹವಾದ ಸಂಗತಿ.

ದೇಶದಲ್ಲಿ ಕರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಜನವರಿ 30ರಂದು, ಕೇರಳದಲ್ಲಿ. ದೇಶದಲ್ಲಿ ಕರೋನಾವನ್ನು ಎಡೆಮುರಿ ಕಟ್ಟಿ ಹುಟ್ಟಡಗಿಸಬೇಕು ಎಂದು ದೇಶಕ್ಕೆ ದಿಗ್ಬಂಧನ ವಿಧಿಸಿದ್ದು ಮಾರ್ಚ್ 24ರ ಮಧ್ಯರಾತ್ರಿಯಿಂದ. ಈ ರೀತಿ ಎಚ್ಚೆತ್ತುಕೊಳ್ಳಲು 54 ದಿನ ಬೇಕಾಯಿತು. ಇದಕ್ಕೂ ಮೊದಲು ಮಾರ್ಚ್ 22ರಂದು ಸ್ಪೇನ್ ದೇಶದಿಂದ ಕಡ ತಂದ ಚಪ್ಪಾಳೆ ತಟ್ಟುವ ಪ್ರಕ್ರಿಯೆ ನಡೆಯಿತು. ಈ ನಡುವೆಯೇ ಕಾಂಗ್ರೆಸ್ ನಾಯಕರೂ ಹಾಗೂ ಸಂಸದರೂ ಆದ ರಾಹುಲ್ ಗಾಂಧಿ ಅವರು 'ಕರೋನಾ‌ ಎಂಬುದು ಸರ್ವೆ ಸಾಮಾನ್ಯವಾದ ಒಂದು ರೋಗ ಮಾತ್ರವಲ್ಲ, ಮುಂದೊಂದು ದಿನ‌ ದೇಶಕ್ಕೆ ದೇಶವೇ ದಿಕ್ಕೆಡುವಂತಹ ಪರಿಸ್ಥಿತಿಯನ್ನು ತಂದೊಡ್ಡುವ ಮಹಾಕ್ರೂರಿ' ಎಂದು ಎಚ್ಚರಿಸಿದ್ದರು. ರಾಹುಲ್ ಗಾಂಧಿ ಅವರು ಎಚ್ಚರಿಸಿದ್ದು ಫೆಬ್ರವರಿ 12ರಂದು.

ಕೇಂದ್ರ ಸರ್ಕಾರ ಸಮಸ್ಯೆ ಬಗ್ಗೆ ನಿಗಾ ನೀಡುವ ಬದಲು ರಾಹುಲ್ ಗಾಂಧಿ ಅವರನ್ನು ಗೇಲಿ ಮಾಡಿ ಸುಮ್ಮನಾಯಿತು. ಇರಲಿ, ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ಬಿಜೆಪಿ ರಾಜಕಾರಣದ ದೃಷ್ಟಿಯಿಂದ ರಾಹುಲ್ ಗಾಂಧಿಯವರಿಗೆ ಆ ಶ್ರೇಯ ಸಿಗದಂತೆ ನೋಡಿಕೊಂಡಿತು ಎಂದುಕೊಳ್ಳೋಣ. ಆದರೆ ಈ ಘನ ಸಮಸ್ಯೆಯ ಬಗ್ಗೆ ಕ್ರಮವಹಿಸಬೇಕಾಗಿತ್ತು. ಅಷ್ಟೊತ್ತಿಗಾಗಲೆ ನೆರೆಯ ಚೀನಾ ದೇಶ ಕೂಡ ಕರೋನಾ ಏಟಿಗೆ ನಲುಗಿ ಹೋಗಿತ್ತು. ಒಂದು ದೇಶವಾಗಿ ಪಕ್ಷದ ದೇಶವನ್ನು ನೋಡಿಯೂ ಪಾಠ ಕಲಿಯಬೇಕಾಗಿತ್ತು. ಮುಖ್ಯವಾಗಿ ಕರೋನಾ ಹೊರದೇಶಗಳಿಂದ ಬರುತ್ತದೆ ಎಂಬ ಖಚಿತ ಮಾಹಿತಿ ಆಗಲೇ ಇದ್ದುದರಿಂದ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಬೇಕಾಗಿತ್ತು. ವಿಮಾನಗಳನ್ನು ದೇಶದೊಳಕ್ಕೆ ಬಿಟ್ಟುಕೊಂಡರೂ ಪ್ರಯಾಣಿಕರನ್ನು ಪರೀಕ್ಷೆ ಮಾಡಿಸಬೇಕಾಗಿತ್ತು.‌ ಕ್ವಾರಂಟೈನ್ ಮಾಡಿಸಬೇಕಾಗಿತ್ತು.

ಇವ್ಯಾವನ್ನೂ ಮಾಡದ ಕೇಂದ್ರ ಸರ್ಕಾರಕ್ಕೆ ಲಾಕ್ಡೌನ್ ಉದ್ದೇಶ ಕೂಡ ಸರಿಯಾಗಿ ಅರ್ಥ ಆಗಿರಲಿಲ್ಲ.‌ ದೇಶಾದ್ಯಂತ ಮೊದಲ ಹಂತದ ದಿಗ್ಬಂಧನ ಹೇರಿದ ಬಳಿಕ ಸರ್ಕಾರ ಮುಂದಿನ ಹೋರಾಟಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಬೇಕಾಗಿತ್ತು. ಅಗತ್ಯ ವೈದ್ಯಕೀಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕಾಗಿತ್ತು. ನಮ್ಮ ಆರೋಗ್ಯ ಸೇವಾ ಕ್ಷೇತ್ರವನ್ನು ಅಣಿಗೊಳಿಸಬೇಕಾಗಿತ್ತು. ಆದರೆ ಮೊದಲ ಹಂತದ ಲಾಕ್ಡೌನ್ ನಿಂದ ಈವರೆಗೆ ಅಂತಹ ಮಹತ್ತರವಾದ ಕೆಲಸ ಮತ್ತು ಇಚ್ಛಾಶಕ್ತಿಗಳೆರಡೂ ಸರ್ಕಾರದಿಂದ ವ್ಯಕ್ತವಾಗಿಲ್ಲ.

ನೋಟು ರದ್ದತಿ ಮಾಡಿದಂತೆ ಏಕಾಏಕಿ ಲಾಕ್ಡೌನ್ ಮಾಡಲಾಯಿತು. ಇದರಿಂದ ವಲಸೆ ಕಾರ್ಮಿಕರು ಕಂಗಾಲಾಗಿ ಬೀದಿಗೆ ಬಿದ್ದರು. ಆಗ ಸರ್ಕಾರವೇ ಕಂಗಾಲಾಯಿತು. ವಲಸೆ ಕಾರ್ಮಿಕರ ಸಮಸ್ಯೆಯನ್ನು ‌ನಿಭಾಯಿಸಲು ಪ್ರಯತ್ನಿಸಿತು. ಆದರೆ ವಲಸೆ ಕಾರ್ಮಿಕರನ್ನು ತಿಂಗಳವರೆಗೆ ಇದ್ದಲ್ಲೇ ಕಾಯಿಸಿ ಕಂಗೆಡಿಸಿ‌ ಕಡೆಗೆ ಅವರವರ ಊರಿಗೆ ಹೋಗಲು ಶ್ರಮಿಕ್ ರೈಲುಗಳನ್ನು ಬಿಡಲಾಯಿತು. ಈ‌ ಕೆಲಸವನ್ನು ‌ಮೊದಲೇ ಮಾಡಬಹುದಾಗಿತ್ತು.‌ ಲಾಕ್ಡೌನ್ ಮುಕ್ತಾಯವಾಗುವ ಹಂತದಲ್ಲಿ ವಲಸೆ ಕಾರ್ಮಿಕರಿಗೆ ಹಣ ಸಹಾಯ ಮಾಡುವ ಭರವಸೆ ನೀಡಲಾಗಿದೆ. ಮೊದಲೇ ಹಣ ಕೊಟ್ಟಿದ್ದರೂ ವಲಸೆ ಕಾರ್ಮಿಕರು ಇಷ್ಟೊಂದು ಅಭದ್ರತೆಗೆ ಸಿಲುಕುತ್ತಿರಲಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಲಸೆ ಕಾರ್ಮಿಕರು ಊರಿಗೆ ಹೊರಡುತ್ತಿರಲಿಲ್ಲ.

ಇನ್ನೊಂದೆಡೆ ಲಾಕ್ಡೌನ್ ಹೇರಿದ್ದರಿಂದ ಕರೋನಾ ಸೋಂಕು ಹರಡುವಿಕೆ ಕೂಡ ನಿಯಂತ್ರಣಕ್ಕೆ ಬರಲಿಲ್ಲ.‌ ಅಲ್ಲದೆ ಅಷ್ಟೊತ್ತಿಗಾಗಲೇ ಕುಸಿದು ಬಿದ್ದಿದ್ದ ಆರ್ಥಿಕತೆ ಇನ್ನಷ್ಟು ಸಮಸ್ಯೆಗೆ ಸಿಲುಕಿತು. ಕೇಂದ್ರ ಸರ್ಕಾರ ಏಕಕಾಲಕ್ಕೆ ಕರೋನಾ ಎಂಬ ಮಹಾಕ್ರೂರಿ ಮತ್ತು ಪಾರ್ಶ್ವವಾಯುಪೀಡಿತ ಆರ್ಥಿಕತೆಯ ವಿರುದ್ಧ ಹೋರಾಡಬೇಕಾಯಿತು. ಒಂದು ಸಮಸ್ಯೆಯನ್ನೇ ಬಗೆಹರಿಸಲಾಗದೆ ಪಡಿಪಾಟಲು ಪಡುತ್ತಿದ್ದ ಆಳುವವರು ಎರಡೆರಡು ಸಮಸ್ಯೆಗಳಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದ್ದಾರೆ. ಆದರೆ 'ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ...' ಎಂಬುದು ಅವರ ಮಂತ್ರ.

ಅವರೇನೋ 'ಬಿದ್ದರೂ ತಮ್ಮ ಮೀಸೆ ಮಣ್ಣಾಗಲಿಲ್ಲ...' ಎಂದು ಹೇಳಿಕೊಳ್ಳಬಹುದು. ಆದರೆ ಅಂಕಿ ಅಂಶಗಳು ಇಡೀ ಮುಖವೇ ಮಸಿಯಾಗಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ. ಏಕೆಂದರೆ ಮೊದಮೊದಲು ಕರೋನಾ ಕಷ್ಟಕ್ಕೀಡಾಗಿರುವ ದೇಶಗಳ ನೆರವಿಗೆ ಭಾರತ ಧಾವಿಸಲಿದೆ ಎಂದು ವೀರಾವೇಶದ ಭಾಷಣ ಮಾಡಿದ್ದವರು ಈಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಳಿ ಸಾಲ ಕೇಳಿದ್ದಾರೆ. ಬ್ರಿಕ್ಸ್ ದೇಶಗಳಿಂದ ಹೊಸ ಅಭಿವೃದ್ಧಿ ಬ್ಯಾಂಕ್ (ಎನ್ ಡಿಬಿ)ಯಿಂದ ಈಗಾಗಲೇ 1 ಸಾವಿರ ಕೋಟಿ ಸಾಲ ತಂದಿದ್ದಾರೆ. ಇವು ಆರ್ಥಿಕ ವ್ಯವಸ್ಥೆಯ ಅಧಃಪತನಕ್ಕಿಡಿದ ಕನ್ನಡಿ.

ಕರೋನಾ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಮೇ 6ರಿಂದಲೇ ದಿನವೊಂದಕ್ಕೆ 3 ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮೇ 6ರಂದು 3,561 ಜನರಿಗೆ, ಮೇ 7ರಂದು 3,390 ಮಂದಿಗೆ, ಮೇ 8ರಂದು 3,320 ಜನರಿಗೆ ಮತ್ತುಮೇ 9 ರಂದು 3,277 ಜನರಿಗೆ, ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242 ಮತ್ತು ಮೇ 18ರಂದು 4,970 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಮೇ 16ರಿಂದ ಈಚೆಗೆ ದಿನವೊಂದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿಂದೆ ಮೇ 10ರಂದು ಮಾತ್ರ 4,213 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದವು. ಲಾಕ್ಡೌನ್ ಇದ್ದಾಗಲೇ ಈ ರೀತಿ ಕರೋನಾ ಸೋಂಕು ವ್ಯಾಪಕವಾಗಿ ಹರಡಿದೆ. ಇನ್ನೀಗ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿದೆ. ಅಂತರ ರಾಜ್ಯ ಸಂಚಾರಕ್ಕೆ ಎಡೆ ಮಾಡಿಕೊಡಲಾಗಿದೆ. ಅಂತರ ರಾಜ್ಯ ಸಂಚಾರಕ್ಕೆ ಎಡೆ ಮಾಡಿಕೊಡುವುದರಿಂದ ಏನಾಗುತ್ತದೆ ಎಂಬುದಕ್ಕೆ ತಮಿಳುನಾಡು ಸೂಕ್ತ ಉದಾಹರಣೆ. ತಮಿಳುನಾಡಿನಲ್ಲಿ ಮೇ 18ರಂದು ಒಂದೇ ದಿನ 536 ಜನರಿಗೆ ಕರೋನಾ ಸೋಂಕು ಹರಡಿದೆ. ಆ ಪೈಕಿ 46 ಜನ ಮಹಾರಾಷ್ಟ್ರಕ್ಕೆ ಭೇಟಿಕೊಟ್ಟಿದ್ದವರು‌. ಮಹಾರಾಷ್ಟ್ರ, ಇಡೀ ದೇಶದಲ್ಲೇ ಅತಿಹೆಚ್ಚು‌, ಅಂದರೆ 36 ಸಾವಿರಕ್ಕೂ ಹೆಚ್ಚು ಕರೋನಾ ರೋಗಿಗಳಿರುವ ರಾಜ್ಯ.

ಕೇಂದ್ರ ಸರ್ಕಾರ ಬೇರೆಯದೇ ರೀತಿ ಬಿಂಬಿಸಿಕೊಳ್ಳುತ್ತಿದೆ. ಆದರೆ ಅಂಕಿಅಂಶಗಳು ಈಗಾಗಲೇ ಹೇಳಿದಂತೆ ಬೇರೆಯದೇ ಕತೆಯನ್ನು ಬಿಚ್ಚಿಡುತ್ತಿವೆ. ಆದುದರಿಂದ ಈಗ ಕೇಂದ್ರ ಸರ್ಕಾರ ಮಾಹಿತಿ ಕೊಡುವುದನ್ನೇ ಕಡಿಮೆ ಮಾಡಿದೆ. ಮೊದಲು ಪ್ರತಿದಿನ ಎರಡೆರಡು ಬಾರಿ ದೇಶದ ಕರೋನಾ ಪೀಡಿತರ ಸಂಖ್ಯೆ, ಕರೋನಾದಿಂದ ಸತ್ತವರ ಸಂಖ್ಯೆ, ಗುಣಮುಖರಾದವರ ಸಂಖ್ಯೆ, ಗಂಭೀರ ಸ್ಥಿತಿಯಲ್ಲಿರುವವರ ಸಂಖ್ಯೆ, ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಗಳೆಲ್ಲವನ್ನೂ ನೀಡುತ್ತಿತ್ತು. ಈಗ ಒಂದೇ ಬಾರಿ‌. ಅದೂ ಕೂಡ ಪ್ರಕಟಣೆಯ ಮೂಲಕ.‌ ಮೊದಲಿನಂತೆ ಸುದ್ದಿಗೋಷ್ಟಿ ಇಲ್ಲ.

ಇಂಥ ಸಂಕಷ್ಟದ ಸಂದರ್ಭದಲ್ಲಿ ಮಾಹಿತಿ ಹಂಚಿಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸಾರ್ವಜನಿಕರಿಗೆ ಮಾಹಿತಿ ಅತ್ಯಗತ್ಯ. ಆದರೆ ಕೇಂದ್ರ ಆರೋಗ್ಯ ಸಚಿವಾಲಯವು ಒಂದು ವಾರದಿಂದ ಯಾವುದೇ ʼಬ್ರೀಫಿಂಗ್ʼ ನಡೆಸುತ್ತಿಲ್ಲ ಎಂದು ʼದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್ʼ, ʼಎಕನಾಮಿಕ್ಸ್ ಅಂಡ್ ಪಾಲಿಸಿʼಯ ನಿರ್ದೇಶಕ ಡಾ. ರಮಣನ್ ಲಕ್ಷ್ಮೀನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರೋನಾ ಮತ್ತು ಲಾಕ್ಡೌನ್ ವಿಷಯದಲ್ಲಿ ಆಳುವವರು 'ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂದು ಬಿಂಬಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ 'ಅವರ ಮುಖವೆಲ್ಲಾ ಮಸಿಯಾಗಿದೆ' ಎಂಬ‌ ಅಂಕಿ ಅಂಶಗಳು ಮಾತ್ರ ಅಷ್ಟೇ ಗಟ್ಟಿ.

Click here Support Free Press and Independent Journalism

Pratidhvani
www.pratidhvani.com