ಕಷ್ಟಕ್ಕೆ ಮರುಗುವ ವ್ಯಕ್ತಿತ್ವ ಲೋಕೇಶ್‌ ಅವರದ್ದು
ರಾಷ್ಟ್ರೀಯ

ಕಷ್ಟಕ್ಕೆ ಮರುಗುವ ವ್ಯಕ್ತಿತ್ವ ಲೋಕೇಶ್‌ ಅವರದ್ದು

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಲೋಕೇಶ್. ನೆಲದ ಕಸುವಿನ ಕತೆಗಳಿಗೆ ಜೀವ ತುಂಬಿದ ಹೀರೋ. ಇಂದು ಅವರು (ಮೇ 19) ನಮ್ಮೊಂದಿಗಿದ್ದಿದ್ದರೆ 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ರಂಗದ ಮೇಲೆಯೇ ಅವರು ಗಿರಿಜಾರನ್ನು ವರಿಸಿದವರು..! ಸಿನಿಮಾ ಚಿತ್ರೀಕರಣದ ಕೆಲವು ಘಟನೆಗಳೊಂದಿಗೆ ನಟಿ ಗಿರಿಜಾ ಅವರು ನಟ ಲೋಕೇಶ್‍ರ ಸರಳ, ಸುಂದರ ವ್ಯಕ್ತಿತ್ವವನ್ನು ನೆನಪು ಮಾಡಿಕೊಂಡಿದ್ದಾರೆ.

ಶಶಿಧರ್‌ ಚಿತ್ರದುರ್ಗ

ಶಶಿಧರ್‌ ಚಿತ್ರದುರ್ಗ

ಗಿರಿಜಾ ಲೋಕೇಶ್‌ -

ನನ್ನ ಲೋಕೇಶ್ ಸರಳ ವ್ಯಕ್ತಿತ್ವದ ಆದರ್ಶ ಕಲಾವಿದ. ಆಡಂಬರಗಳನ್ನು ಇಷ್ಟಪಡದ ಅವರು ಸಾಮಾಜಿಕ ಕಳಕಳಿ ಇದ್ದಂಥವರು. ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡಬೇಕೆನ್ನುವುದು ಅವರು ಕೊನೆಯವರೆಗೂ ರೂಢಿಸಿಕೊಂಡು ಬಂದಿದ್ದ ಪಾಲಿಸಿ. ಸಿನಿಮಾ ಸೆಟ್‍ಗಳಲ್ಲಿ ಸ್ನೇಹಮಯಿ ನಟ. ಇನ್ನೊಬ್ಬರ ಕಷ್ಟಕ್ಕೆ ಮರುಗುವ ವ್ಯಕ್ತಿತ್ವ ಅವರದು. `ಕಾಡು' ಚಿತ್ರೀಕರಣದಲ್ಲಿ ಲೋಕೇಶ್‍ರ ಜೊತೆಗಿನ ತಮ್ಮ ಒಡನಾಟವನ್ನು ಸುಂದರ (ನಟ ಸುಂದರ್‍ರಾಜ್) ನನ್ನಲ್ಲಿ ಹೇಳಿಕೊಂಡಿದ್ದ. ಹಿಂದಿ ನಟ ಅಂಬರೀಶ ಪುರಿ ಆ ಚಿತ್ರದ ಸನ್ನಿವೇಶವೊಂದರಲ್ಲಿ ಸುಂದರ್‍ನನ್ನು ಹೊಡೆಯಬೇಕಿರುತ್ತದೆ. ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ಪುರಿಯವರು ಹುಣಸೇ ಬರಲು ಕೈಗೆತ್ತಿಕೊಂಡಿದ್ದಾರೆ. ಪಾತ್ರದಲ್ಲಿ ತಲ್ಲೀನರಾದವರೇ ಸುಂದರ್ ದೇಹದ ಮೇಲೆ ಚೆನ್ನಾಗಿ ಬಾರಿಸಿದ್ದರಂತೆ. ಈ ಹುಡುಗ ಸುಂದರ್ ಪಾತ್ರ ನೈಜವಾಗಿ ಮೂಡಿಬರಲೆಂದು ಸುಮ್ಮನೆ ಏಟು ಸಹಿಸಿಕೊಂಡಿದ್ದಾನೆ. ಸಂಜೆ ನೋವಿನಿಂದ ನರಳುತ್ತಿದ್ದ ಸುಂದರ್ ಬಳಿ ಲೋಕೇಶ್ ಬಂದಿದ್ದಾರೆ. ಷರ್ಟ್ ಬಿಚ್ಚಿಸಿ ನೋಡಿದರೆ ಬೆನ್ನು, ತೋಳ್ಗಳ ಮೇಲೆಲ್ಲಾ ಬಾಸುಂಡೆ! ಲೋಕೇಶ್ ಅಂದು ರಾತ್ರಿಯಿಡೀ ಎದ್ದಿದ್ದು ಆಗಾಗ ಸುಂದರ್ ದೇಹದ ಗಾಯಗಳಿಗೆ ಹರಳೆಣ್ಣೆ ಹಚ್ಚಿದ್ದರಂತೆ.

ಅಡುಗೆ ಮಾಡಿ ಬಡಿಸಿದರು!

ಲೋಕೇಶ್ ಅತ್ಯಂತ ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಅವರ ಕೈರುಚಿಯನ್ನು ಉದ್ಯಮದ ಬಹುತೇಕರು ಸವಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸಂಗತಿ ನೆನಪಾಗುತ್ತದೆ. ಎಸ್.ನಾರಾಯಣ್ ನಿರ್ದೇಶನದ `ಬೇವು ಬೆಲ್ಲ' ಚಿತ್ರಕ್ಕೆ ಮಹದೇವಪುರದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆ ದಿನಗಳಲ್ಲಿ ಬಾಬ್ರಿ ಮಸೀದಿ ಗಲಾಟೆ ಶುರುವಾಯ್ತು. ನಿಷೇಧಾಜ್ಞೆ ಜಾರಿಯಾದ್ದರಿಂದ ಇಡೀ ಯೂನಿಟ್ ಹಳ್ಳಿ ಬಿಟ್ಟು ಕದಲುವಂತಿರಲಿಲ್ಲ. ಅಡುಗೆಗೆ ಹೆಚ್ಚಿನ ದಿನಸಿಯೂ ಇರಲಿಲ್ಲ. ಆಗ ಹತ್ತು ದಿನಗಳ ಕಾಲ ಹಳ್ಳಿಯಲ್ಲಿ ಸಿಕ್ಕ ಅಕ್ಕಿ ಮತ್ತಿತರೆ ಅಲ್ಪ ಪದಾರ್ಥಗಳಲ್ಲೇ ಲೋಕೇಶ್ ಎಲ್ಲರಿಗೂ ಅಡುಗೆ ಮಾಡಿ ಬಡಿಸಿದ್ದಾರೆ! ಯಾವುದೇ ಕೊರತೆ ಕಾಡದಂತೆ ಇದ್ದುದರಲ್ಲೇ ವಿವಿಧ ತಿಂಡಿ, ತಿನಿಸು ಮಾಡಿಕೊಡುತ್ತಿದ್ದರಂತೆ `ಬಾಣಸಿಗ ಲೋಕೇಶ್'.

ಗಿರಿಜಾ ಲೋಕೇಶ್‌ ಹಾಗೂ ಲೋಕೇಶ್‌ ನಡುವಿನ ಒಂದು ಅಪೂರ್ವ ಕ್ಷಣ (ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)
ಗಿರಿಜಾ ಲೋಕೇಶ್‌ ಹಾಗೂ ಲೋಕೇಶ್‌ ನಡುವಿನ ಒಂದು ಅಪೂರ್ವ ಕ್ಷಣ (ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ಕಹಾ ಹೈ ಹೀರೋ?

`ಭೂಮಿಗೆ ಬಂದ ಭಗವಂತ' ಶೂಟಿಂಗ್ ಸಂದರ್ಭದಲ್ಲೊಂದು ತಮಾಷೆ ನಡೆದಿತ್ತು. ಐದು ವರ್ಷದ ಪುನೀತ್ ರಾಜಕುಮಾರ್ ಶ್ರೀಕೃಷ್ಣನ ಪಾತ್ರದಲ್ಲಿದ್ದರೆ, ಲೋಕೇಶ್‍ರಿಗೆ ದರೋಡೆಕೋರನ ಪಾತ್ರ. ದರೋಡೆಕೋರ ಲೋಕೇಶ್‍ರಿಗೆ ಸುಂದರ ಯುವತಿಯೊಬ್ಬಳ ಮೇಲೆ ಮೋಹವಾಗುತ್ತದೆ. ಶ್ರೀಕೃಷ್ಣನನ್ನು ಕರೆದುಕೊಂಡು ಬಂದರೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಆಕೆ ಹೇಳಿರುತ್ತಾಳೆ. ಕೃಷ್ಣನನ್ನು ಹುಡುಕಿಕೊಂಡು ಆ ದರೋಡೆಕೋರ ಹಿಮಾಲಯಕ್ಕೆ ಹೋಗುತ್ತಾನೆ. ಅಲ್ಲಿ ಕೃಷ್ಣನ ದರ್ಶನವಾಗುತ್ತಿದ್ದಂತೆ ದರೋಡೆಕೋರನಿಗೆ ಲೌಕಿಕ ಜಗತ್ತಿನ ಮೋಹ ಹೊರಟುಹೋಗುತ್ತದೆ. ಈ ಸನ್ನಿವೇಶವನ್ನು ಕಾಶ್ಮೀರದಲ್ಲಿ ಚಿತ್ರಿಸಲಾಗುತ್ತಿತ್ತು. ಅಂದು ಹರಿದ ಬಟ್ಟೆ, ಉದ್ದನೆಯ ಗಡ್ಡದ ಗೆಟಪ್‍ನಲ್ಲಿದ್ದರು ಲೋಕೇಶ್. ಶೂಟಿಂಗ್‍ಗೆ ಲೋಕೇಶ್‍ರೊಂದಿಗೆ ನಾನೂ ಹೋಗಿದ್ದೆ.

ಬಾಲನಟನಾಗಿ ಲೋಕೇಶ್
ಬಾಲನಟನಾಗಿ ಲೋಕೇಶ್

ಅಲ್ಲಿನ ಜನರು ಗುಂಪು ಕಟ್ಟಿಕೊಂಡು ಶೂಟಿಂಗ್ ನೋಡಲು ಬಂದಿದ್ದರು. ಅಲ್ಲಿ ನಿಂತಿದ್ದ ಕೆಲವರು `ಕಹಾ ಹೈ ಹೀರೋ?' (ಹೀರೋ ಎಲ್ಲಿ?) ಎಂದು ನನ್ನನ್ನು ಪ್ರಶ್ನಿಸಿದರು. ನಾನು ಲೋಕೇಶ್‍ರನ್ನು ತೋರಿಸಿದೆ. `ಏ ಹೀರೋ ಹೈ ಕ್ಯಾ!?' (ಅಯ್ಯೋ, ಇವರು ಹೀರೋನಾ?) ಎಂದು ಆ ಜನರು ನಿರಾಶರಾದರು! ಅಲ್ಲಿನವರಿಗೆ ಹಿಂದಿ ರೊಮ್ಯಾನ್ಸ್ ಹೀರೋ, ಚಿತ್ರಗಳ ಪರಿಚಯವಿತ್ತಷ್ಟೆ. ದಕ್ಷಿಣ ಭಾರತದ ನಟರು, ಪೌರಾಣಿಕ ಕತೆಗಳ ಬಗ್ಗೆ ಅರಿವಿರಲಿಲ್ಲ. ಸ್ವತಃ ಲೋಕೇಶ್ ಚಿತ್ರದ ಕತೆ ಹಾಗೂ ತಮ್ಮ ಪಾತ್ರವನ್ನು ವಿವರಿಸಿದ ನಂತರ ಅವರು ಕನ್ವಿನ್ಸ್ ಆದರು. ಘಟನೆಯನ್ನು ಅಷ್ಟೇ ಸರಳವಾಗಿ ತೆಗೆದುಕೊಂಡ ಲೋಕೇಶ್ ನಕ್ಕು ಹಗುರಾಗಿದ್ದರು. ಹೀಗೆ, ಬದುಕಿನ ಬಗ್ಗೆ ಲೋಕೇಶ್ ಅವರಿಗೆ ವಿಶಿಷ್ಟ ಒಳನೋಟಗಳಿದ್ದವು. ಮನೆಯಲ್ಲಿ ನಮಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ, ಅಭಿಮಾನಿಗಳಿಗೆ ಅವರು ಕನ್ವಿನ್ಸಿಂಗ್ ಆಗಿ ಸಮಾಧಾನ ಹೇಳುತ್ತಿದ್ದರು. ಖಂಡಿತವಾಗಿ ಅವರ ಆದರ್ಶಗಳು ನಮಗೆ ಮಾರ್ಗದರ್ಶನವಾಗಿವೆ.-----------------

ಲೋಕೇಶ್ ಪ್ರಮುಖ ಸಿನಿಮಾಗಳು: ಭಕ್ತ ಪ್ರಹ್ಲಾದ (1958, ಬಾಲನಟ), ಕಾಡು, ಬೂತಯ್ಯನ ಮಗ ಅಯ್ಯು, ದೇವರ ಕಣ್ಣು, ಕಾಕನಕೋಟೆ, ಸುಳಿ, ಪರಸಂಗದ ಗೆಂಡೆತಿಮ್ಮ, ಎಲ್ಲಿಂದಲೋ ಬಂದವರು, ಹದ್ದಿನ ಕಣ್ಣು, ಅದಲು ಬದಲು, ಭೂಲೋಕದಲ್ಲಿ ಯಮರಾಜ, ಮುಯ್ಯಿ, ದಾಹ, ಚಂದನದ ಗೊಂಬೆ, ಭಕ್ತ ಸಿರಿಯಾಳ, ಹದ್ದಿನ ಕಣ್ಣು, ಎಲ್ಲಿಂದಲೋ ಬಂದವರು, ಸಂಗೀತ, ಭೂಮಿಗೆ ಬಂದ ಭಗವಂತ, ಬೆಟ್ಟದ ಸೇವೆ, ದೇವರ ತೀರ್ಪು, ಬ್ಯಾಂಕರ್ ಮಾರ್ಗಯ್ಯ, ಇಬ್ಬನಿ ಕರಗಿತು, ಶ್ವೇತ ಗುಲಾಬಿ, ಪ್ರೇಮಲೋಕ, ರಣಧೀರ, ಸಂಕ್ರಾಂತಿ, ಆಸೆಗೊಬ್ಬ ಮೀಸೆಗೊಬ್ಬ, ಭುಜಂಗಯ್ಯನ ದಶಾವತಾರ, ರಾಮಾಚಾರಿ, ಬೇವು ಬೆಲ್ಲ, ಗಾನಯೋಗಿ ಪಂಚಾಕ್ಷರಿ ಗವಾಯಿ, ಭೂಮಿಗೀತ, ಮುಂಗಾರಿನ ಮಿಂಚು, ಭೂಮಿ ತಾಯಿಯ ಚೊಚ್ಚಲ ಮಗ, ನಂಜುಂಡಿ

(ಬೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆತಿಮ್ಮ, ಬ್ಯಾಂಕರ್ ಮಾರ್ಗಯ್ಯ ಚಿತ್ರಗಳಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಗೌರವ. ಬೂತಯ್ಯನ ಮಗ ಅಯ್ಯು ಮತ್ತು ಎಲ್ಲಿಂದಲೋ ಬಂದವರು ಚಿತ್ರಗಳಿಗೆ ಫಿಲ್ಮ್‍ಫೇರ್ ಪುರಸ್ಕಾರ. 'ಭುಜಂಗಯ್ಯನ ದಶಾವತಾರ' ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ರಾಜ್ಯಪ್ರಶಸ್ತಿ ಮನ್ನಣೆ)

Click here Support Free Press and Independent Journalism

Pratidhvani
www.pratidhvani.com