ಪ್ರಧಾನಿ ಮೋದಿ ಪ್ಯಾಕೇಜು: ಕೊಟ್ಟೋನು ಈರಭದ್ರ, ಈಸ್ಕೊಂಡೋನೇ ಕೋಡಂಗಿ!
ರಾಷ್ಟ್ರೀಯ

ಪ್ರಧಾನಿ ಮೋದಿ ಪ್ಯಾಕೇಜು: ಕೊಟ್ಟೋನು ಈರಭದ್ರ, ಈಸ್ಕೊಂಡೋನೇ ಕೋಡಂಗಿ!

ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ‘ಆತ್ಮನಿರ್ಬರ ಅಭಿಯಾನ’ದ 20 ಲಕ್ಷ ಕೋಟಿ ಪ್ಯಾಕೇಜಿನ ಬಗ್ಗೆ ಅತಿ ಹೆಚ್ಚು ತಲೆ ಕೆಡಿಸಿಕೊಂಡವರುಲೆಕ್ಕಪರಿಶೋಧಕರು ಮತ್ತು ಅರ್ಥಶಾಸ್ತ್ರಜ್ಞರು! ಏಕೆಂದರೆ, ಎಲ್ಲಿಂದ ಹೋಗಿ ಲೆಕ್ಕಹಾಕಿದರೂ ಮೋದಿ ಘೋಷಿಸಿದ ಪ್ಯಾಕೇಜು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಮೋಘ ಐದು ದಿನಗಳ ಕಾಲ ವಿವರಿಸಿದ ನಂತರವೂ ಅರ್ಥವಾಗುತ್ತಿಲ್ಲ. ಹಣ ಎಲ್ಲಿಂದ ಬರುತ್ತದೆ ಮತ್ತು ಎಲ್ಲಿಗೆ ಹೋಗುತ್ತದೆ ಎಂಬುದೇ ಸಸ್ಪೆನ್ಸ್!

ರೇಣುಕಾ ಪ್ರಸಾದ್ ಹಾಡ್ಯ

ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ‘ಆತ್ಮನಿರ್ಬರ ಅಭಿಯಾನ’ದ 20 ಲಕ್ಷ ಕೋಟಿ ಪ್ಯಾಕೇಜಿನ ಬಗ್ಗೆ ಅತಿ ಹೆಚ್ಚು ತಲೆ ಕೆಡಿಸಿಕೊಂಡವರು ಲೆಕ್ಕಪರಿಶೋಧಕರು ಮತ್ತು ಅರ್ಥಶಾಸ್ತ್ರಜ್ಞರು! ಏಕೆಂದರೆ, ಎಲ್ಲಿಂದ ಹೋಗಿ ಲೆಕ್ಕಹಾಕಿದರೂ ಮೋದಿ ಘೋಷಿಸಿದ ಪ್ಯಾಕೇಜು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಮೋಘ ಐದು ದಿನಗಳ ಕಾಲ ವಿವರಿಸದ ನಂತರವೂ ಅರ್ಥವಾಗುತ್ತಿಲ್ಲ. ಹಣ ಎಲ್ಲಿಂದ ಬರುತ್ತದೆ ಮತ್ತು ಎಲ್ಲಿಗೆ ಹೋಗುತ್ತದೆ ಎಂಬುದೇ ಸಸ್ಪೆನ್ಸ್!

ಮೋದಿ ಘೋಷಿಸಿದ ಪ್ಯಾಕೇಜಿನ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐದು ದಿನಗಳ ಕಾಲ ವಿವರಿಸಿದ ನಂತರವೂ ಲೆಕ್ಕಾ ಪಕ್ಕಾ ಆಗುತ್ತಿಲ್ಲ. ಆದರೂ ಹಲವು ಅಂದಾಜುಗಳ ಪ್ರಕಾರ, ಪ್ರಧಾನಿ ಮೋದಿ ಪ್ರೈಮ್ ಟೈಮ್ ನಲ್ಲಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜಿನಿಂದ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಬೊಕ್ಕಸಕ್ಕೆ ಆಗಬಹುದಾದ ಹೊರೆಯು ಸರಿಸುಮಾರು ಶೇ.10ರಷ್ಟು. ಅಂದರೆ, ಕೇವಲ ಎರಡು ಲಕ್ಷ ಕೋಟಿ ರುಪಾಯಿಗಳು. ಆ ಲೆಕ್ಕದಲ್ಲಿ ನಮ್ಮ ದೇಶದ ಘೋಷಿತ ಬಜೆಟ್ ಮೊತ್ತ 30.44 ಲಕ್ಷ ಕೋಟಿಗೆ ಹೋಲಿಸಿದರೆ ಶೇ.7 ರಷ್ಟು ಮಾತ್ರ. ನಮ್ಮ ದೇಶದ ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ 20 ಲಕ್ಷ ಕೋಟಿಗೆ ಹೋಲಿಸಿದರೆ ಶೇ.1ರಷ್ಟು ಮಾತ್ರ!

ಪ್ರಧಾನಿ ಮೋದಿ ಪ್ಯಾಕೇಜು ಘೋಷಿಸುವ ಮುನ್ನಾ ಯಾವುದೇ ಲೆಕ್ಕಾಚಾರ ಹಾಕಿರಲಿಲ್ಲ ಎಂಬುದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಐದು ದಿನಗಳ ಕಾಲ ಪ್ಯಾಕೇಜು ಲೆಕ್ಕಾಚಾರವನ್ನು ವಿವರಿಸಿದ ನಂತರ ಮನದಟ್ಟಾಗಿದೆ. ಏಕೆಂದರೆ- ಪ್ರಧಾನಿ ಮೋದಿ 20 ಲಕ್ಷ ಕೋಟಿ ಘೋಷಣೆ ಮಾಡಿದ್ದರೆ, ನಿರ್ಮಲಾ ಸೀತಾರಾಮನ್ ಅವರು ಕೊಟ್ಟಿರುವ ಲೆಕ್ಕವು 20,97,053 ಕೋಟಿ ರುಪಾಯಿಗಳು. ಮೊದಲೇ ಈ ಲೆಕ್ಕ ಗೊತ್ತಿದ್ದರೆ ಪ್ರಧಾನಿ ಮೋದಿ ಅವರು ತಮ್ಮ ಪ್ಯಾಕೇಜಿನ ಲೆಕ್ಕವನ್ನು 21 ಲಕ್ಷ ಕೋಟಿಗೆ ಏರಿಸುತ್ತಿದ್ದರೋ ಏನೋ?

ಮೋದಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ, ಈಗಾಗಲೇ ಮೊದಲ ಹಂತದಲ್ಲಿ ಘೋಷಿಸಿದ್ದ 1.92 ಲಕ್ಷ ಕೋಟಿ ರುಪಾಯಿಗಳ ಉತ್ತೇಜನ ಕ್ರಮಗಳು ಮತ್ತು ನಗದು ಹಾಗೂ ಸಾಲದ ಹರಿವು ಉದ್ದೀಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ್ದ 8.01 ಲಕ್ಷ ಕೋಟಿ ರುಪಾಯಿ ಸೇರಿದಂತೆ 10 ಲಕ್ಷ ಕೋಟಿ ರುಪಾಯಿ ಹಳೆಯದ್ದು. ಈ ಹತ್ತು ಕೋಟಿ ರುಪಾಯಿಗಳಲ್ಲಿ ನೇರವಾಗಿ ಜನಸಾಮಾನ್ಯರಿಗಾಗಲೀ ಕರೋನಾ ಸೋಂಕು ಹರಡಿದ ನಂತರ ನಿರ್ಗತಿಕರಾಗಿರುವ ವಲಸೆ ಕಾರ್ಮಿಕರಿಗಾಗಲೀ ಯಾವುದೇ ನಗದು ಪಾವತಿ ಇಲ್ಲ. ಆದರೆ, ಬಡ ಮಹಿಳೆಯರಿಗೆ 500 ರುಪಾಯಿ ನಗದನ್ನು ಪಾವತಿಸಲಾಗಿದೆ. ಅದರ ಹೊರತಾಗಿ ಉಳಿದೆಲ್ಲವೂ ಸಾಲದ ಸಮಾನ ಮಾಸಿಕ ಕಂತುಗಳ (EMI) ಪಾವತಿ ಮುಂದೂಡಿಕೆ, ಕಾರ್ಮಿಕರು ತಮ್ಮ ಇಪಿಎಫ್ ಖಾತೆಯಲ್ಲಿ ಹಣ ಪಡೆಯುವಿಕೆ ಇತ್ಯಾದಿಗಳೇ ಸೇರಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಇಲ್ಲ.

ಆದರೆ, ಘೋಷಿತ ಪ್ಯಾಕೇಜಿನಲ್ಲಿನ ಇಎಂಐ ಕಂತುಗಳ ಮುಂದೂಡಿಕೆ ಮತ್ತು ಇಪಿಎಫ್ ಖಾತೆಯಿಂದ ಹಣ ಹಿಂಪಡೆಯುವಿಕೆಯನ್ನು ಸ್ವೀಕರಿಸಿದರೆ ಕೋಡಂಗಿಗಳಾಗುವುದು ನಿಜಾ. ಏಕೆಂದರೆ, ಈಗ ಇಎಂಐ ಪಾವತಿಸಿದಿದ್ದರೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಕಂತುಗಳನ್ನು ಏರುವ ಬಡ್ಡಿಯೊಂದಿಗೆ ಪಾವತಿಸಬೇಕುತ್ತದೆ. ಇಪಿಎಫ್ ಮೊತ್ತವನ್ನು ಹಿಂಪಡೆದರೆ, ಮುಂದಿನ ಭವಿಷ್ಯದ ವರ್ಷಗಳಲ್ಲಿ ಭವಿಷ್ಯ ನಿಧಿಯ ಮೊತ್ತವು ಗಣನೀಯವಾಗಿ ಕುಂದಿರುತ್ತದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಪ್ಯಾಕೇಜಿನ ಲೆಕ್ಕ ನೀಡಲು ತೆಗೆದುಕೊಂಡ ಐದು ದಿನಗಳ ಪೈಕಿ ಮೊದಲ ದಿನ ವಿವರಿಸಿದ್ದು 5.94 ಲಕ್ಷ ಕೋಟಿ ರುಪಾಯಿಗಳ ಲೆಕ್ಕ. ಇದರಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ವಿತರಣೆ, ಸಾಲದ ಕಂತುಗಳ ಪಾವತಿಗೆ ಹೆಚ್ಚಿನ ಕಾಲಾವಕಾಶ, ವಿದ್ಯುತ್ ವಿತರಣಾ ಕಂಪನಿಗಳಿಗೆ ಸಾಲದ ನೆರವಿನ ಜತೆಗೆ ಹಾಲಿ ಪಾವತಿಯಾಗದ ಸಾಲವನ್ನು ನಿಷ್ಕ್ರಿಯ ಸಾಲವೆಂದು ಘೋಷಿಸದಂತೆ ಸಾಲ ನೀಡಿದ ಬ್ಯಾಂಕುಗಳಿಗೆ ನಿರ್ದೇಶನ, ಮತ್ತು ನಗದು ಹರಿವಿನ ಕೊರತೆ ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಾಲದ ನೆರವು ನೀಡುವುದು ಸೇರಿದೆ. ಈ ಘೋಷಿತ 5.94 ಲಕ್ಷ ಕೋಟಿಯಲ್ಲಿ ಸರ್ಕಾರವು ತಕ್ಷಣವೇ ಭರಿಸಬೇಕಾದ ಮೊತ್ತವು ಸುಮಾರು 20,000-50000 ಕೋಟಿ ರುಪಾಯಿಗಳು.

ಎರಡನೇ ಕಂತಿನಲ್ಲಿ ನಿರ್ಮಲಾ ಸೀರಾರಾಮನ್ ಕೊಟ್ಟ ಲೆಕ್ಕದ ಒಟ್ಟು ಮೊತ್ತ 3.10 ಲಕ್ಷ ಕೋಟಿ ರುಪಾಯಿಗಳು. ಈ ಪೈಕಿ, ವಲಸೆ ಕಾರ್ಮಿಕರಿಗೆ, ನಗದು ಮತ್ತು ಸಾಲ, ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮತ್ತು ಆ ಮೂಲಕ ಸಾಲ ವಿತರಣೆ, ಸಣ್ಣ ವ್ಯಾಪಾರಿಗಳಿಗೆ ಮುದ್ರಾದಿಂದ ಸಾಲ ಹಾಗೂ ಕೃಷಿ ವಲಯಕ್ಕೆ ಸಾಲ ವಿತರಿಸಲು ನಬಾರ್ಡ್ ನಿಂದ ಸಹಕಾರ ಬ್ಯಾಂಕುಗಳಿಗೆ ಪುನರ್ಧನ ಒದಗಿಸುವುದು ಸೇರಿದೆ. ಈ ಪೈಕಿ ವಲಸೆ ಕಾರ್ಮಿಕರಿಗೆ ನಗದು ಮತ್ತು ರೈತರ ಖಾತೆಗಳಿಗೆ ಪಾವತಿಸುವ 2000 ನಗದು ಸೇರಿದಂತೆ ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆಯು 14,000 ಕೋಟಿ ರುಪಾಯಿಗಳು. ಮೂರನೇ ಕಂತಿನಲ್ಲಿ ಕೃಷಿಕರಿಗೆ ಘೋಷಿಸಿದ ಮೊತ್ತವು 1.50 ಲಕ್ಷ ಕೋಟಿ ರುಪಾಯಿಗಳು. ಈ ಪೈಕಿ ಸರ್ಕಾರ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭರಿಸಬಹುದಾದ ಮೊತ್ತವು 30,000 ಕೋಟಿ ರುಪಾಯಿಗಳು. ನಾಲ್ಕು ಮತ್ತು ಐದನೇ ಕಂತನಲ್ಲಿ ಘೋಷಿಸಿದ ಮೊತ್ತ ಸುಮಾರು 48,000 ಕೋಟಿ ರುಪಾಯಿಗಳು. ಈ ಪೈಕಿ ಅಷ್ಟೂ ಬೊಕ್ಕಸಕ್ಕೆ ಹೊರೆಯಾಗುವಂತಾದ್ದು.

ಈ ಐದು ಕಂತುಗಳ ಪೈಕಿ ಎಲ್ಲವನ್ನೂ ಕ್ರೋಢೀಕರಿಸಿದರೆ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮೋದಿ ಸರ್ಕಾರವು ಬೊಕ್ಕಸದಿಂದ ಭರಿಸಬೇಕಾದ ಮೊತ್ತವು ಸುಮಾರು 2 ಲಕ್ಷ ಕೋಟಿ ರುಪಾಯಿಗಳು. ‘ದಿ ವೈರ್’ ಎಸ್ಬಿಐ ರಿಸರ್ಚ್, ಕೇರ್ ರೇಟಿಂಗ್ಸ್, ಎಂಕೆ ಗ್ಲೋಬಲ್, ಎಚ್ಎಸ್ಬಿಸಿ ಇಂಡಿಯಾದ ಆರ್ಥಿಕ ತಜ್ಞರ ಲೆಕ್ಕಾಚಾರಗಳನ್ನು ಪರಿಗಣಿಸಿ ಮಾಡಿರುವ ಅಂದಾಜಿನ ಪ್ರಕಾರ, ಸರ್ಕಾರ ಈ ವರ್ಷ ಖರ್ಚು ಮಾಡಬೇಕಾದ ಪ್ಯಾಕೇಜಿನ ಮೊತ್ತವು 1.65- 2.43 ಲಕ್ಷ ಕೋಟಿ ರುಪಾಯಿಗಳು ಮಾತ್ರ.

ಮೋದಿ ಘೋಷಿಸಿದ ಪ್ಯಾಕೇಜಿನ ಪೈಕಿ ಮೊದಲೇ ಘೋಷಿತ 10 ಲಕ್ಷಗಳ ಪೈಕಿ ಎಲ್ಲವೂ ಸಾಲವನ್ನಾಧರಿಸಿದ್ದು. ಹೆಚ್ಚಿನ ಸಾಲ ವಿತರಣೆ, ಇಲ್ಲವೇ, ಸಾಲ ಮರುಪಾವತಿಗೆ ಕಾಲಾವಕಾಶ, ಸಾಲದ ಕಂತುಗಳ ಪಾವತಿಗೆ ಮೂರುತಿಂಗಳ ವಿನಾಯ್ತಿ ಇತ್ಯಾದಿ. ಕಾರ್ಮಿಕರು ತಮ್ಮ EPF ಖಾತೆಯಿಂದ ತಮ್ಮದೇ ಹಣ ಪಡೆಯುವುದನ್ನು ಮೋದಿ ಸರ್ಕಾರ ಪ್ಯಾಕೇಜಿಗೆ ಸೇರಿಸಿಕೊಂಡಿರುವುದು ಸೋಜಿಗ. ಉಳಿದ ಹತ್ತು ಲಕ್ಷ ಕೋಟಿಗಳ ಪೈಕಿ 8 ಲಕ್ಷ ಕೋಟಿ ರುಪಾಯಿಗಳು, ಕೃಷಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ತ್ಥೆಗಳಿಗೆ ಹೆಚ್ಚಿನ ಸಾಲವನ್ನು ಒಳಗೊಂಡಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ- ಮೋದಿ ಸರ್ಕಾರ, ಸಾಲ ಮನ್ನಾ ಮಾಡುವುದಿರಲಿ, ಬಡ್ಡಿಯನ್ನು ಕೂಡಾ ಮನ್ನಾ ಮಾಡಿಲ್ಲ, ಸಾಲ ಪಾವತಿಗೆ ರಿಯಾಯ್ತಿ ನೀಡಿದ ಅವಧಿಯಲ್ಲೂ ಸಾಲದ ಮೇಲೆ ಬಡ್ಡಿ ಪಾವತಿಸುವ ಅನಿವಾರ್ಯ ಸಾಲಿಗರ ಮೇಲಿದೆ. RBI ಸಹ LTRO ಅಂದರೆ, ಲಾಂಗ್ ಟರ್ಮ್ ರೆಪೋ ಆಪರೇಷನ್ ಮೂಲಕವೇ ಸುಮಾರು 4 ಲಕ್ಷ ಕೋಟಿ ರುಪಾಯಿ ನಗದು ಹರಿವು ಹೆಚ್ಚಿಸಿದೆ. ಆದರೆ, ಇದರಿಂದ ನೇರವಾಗಿ ಯಾರಿಗೂ ಅನುಕೂಲವಾಗಿಲ್ಲ.

ಪ್ರಧಾನಿ ಮೋದಿ ಘೋಷಿಸಿದ ಪ್ಯಾಕೇಜಿನ ಅರ್ಥ ಇಷ್ಟೇ! ಸಾಲ ಪಡೆಯಿರಿ, ಪಡೆದಿರುವ ಸಾಲ ಮರುಪಾವತಿ ಸಾಧ್ಯವಿಲ್ಲವೇ ಕಾಲಾವಕಾಶ ಪಡೆಯಿರಿ, ಇಎಂಐ ಕಂತುಗಳ ಪಾವತಿಗೆ ರಿಯಾಯ್ತಿ ಪಡೆಯಿರಿ, ನಿಮ್ಮದೇ ಇಪಿಎಫ್ ಖಾತೆಯಿಂದ ದುಡ್ಡನ್ನು ಪಡೆಯಿರಿ. ಆದರೆ, ಮುಂಬರುವ ದಿನಗಳಲ್ಲಿ ಬಡ್ಡಿ ಮತ್ತು ಸಾಲ ಮರುಪಾವತಿಗೆ ಪಡೆದ ರಿಯಾಯ್ತಿಗೆ ಮತ್ತಷ್ಟು ಬಡ್ಡಿ ಪಾವತಿಸಿ ಎಂಬುದಾಗಿದೆ.

ಅಂದರೆ, ಇಲ್ಲಿ ಪ್ಯಾಕೇಜಿನ ಹೆಸರಲ್ಲಿ ಕೊಟ್ಟೇನೇ ಈರಭದ್ರ, ಅಪ್ಪಿತಪ್ಪಿ ಪ್ಯಾಕೇಜಿನ ಸಾಲ ಪಾವತಿ ರಿಯಾಯ್ತಿ ಸೌಲಭ್ಯಗಳನ್ನು ಪಡೆದವರು ‘ಕೋಡಂಗಿ’ಗಳಾಗೋದು ಗ್ಯಾರಂಟಿ.

Click here Support Free Press and Independent Journalism

Pratidhvani
www.pratidhvani.com