ಮೋದಿ ತವರು ರಾಜ್ಯದಲ್ಲಿ ಕೋವಿಡ್-19 ರೋಗಿಯ ಮೃತದೇಹ ಬಸ್‌ ನಿಲ್ದಾಣದಲ್ಲಿ ಪತ್ತೆ!
ರಾಷ್ಟ್ರೀಯ

ಮೋದಿ ತವರು ರಾಜ್ಯದಲ್ಲಿ ಕೋವಿಡ್-19 ರೋಗಿಯ ಮೃತದೇಹ ಬಸ್‌ ನಿಲ್ದಾಣದಲ್ಲಿ ಪತ್ತೆ!

ಒಂದೊಮ್ಮೆ ದೇಶಾದ್ಯಂತ ʼಗುಜರಾತ್‌ ಮಾದರಿʼ ಜಾರಿ ಮಾಡುವ ಕನಸು ಕಂಡಿದ್ದ ಬಿಜೆಪಿಗರ ಮಾದರಿಯ ಕನಸು ಒಂದೊಂದಾಗಿ ಬಯಲಾಗುತ್ತಿದೆ. ʼನಮಸ್ತೇ ಟ್ರಂಪ್‌ʼ ಕಾರ್ಯಕ್ರಮ ನಡೆದಿದ್ದ ಅಹ್ಮದಾಬಾದ್‌ನಲ್ಲಿ ಕೋವಿಡ್-19‌ ಸೋಂಕಿನಿಂದ ಆಸ್ಪತ್ರೆ ದಾಖಲಾಗಿದ್ದ ರೋಗಿಯ ಮೃತದೇಹ ಬಸ್‌ನಿಲ್ದಾಣದಲ್ಲಿ ಪತ್ತೆಯಾಗಿದೆ. ಸದ್ಯ ಗುಜರಾತ್‌ನಲ್ಲಿ ಕೋವಿಡ್-19‌ ಏರಿಕೆಗೆ ಇಂತಹ ನಿರ್ಲಕ್ಷ್ಯವೂ ಕಾರಣ ಎನ್ನಲಾಗುತ್ತಿದೆ.

ಮೊಹಮ್ಮದ್‌ ಇರ್ಷಾದ್‌

ʼನಮಸ್ತೇ ಟ್ರಂಪ್‌ʼ ಕಾರ್ಯಕ್ರಮಕ್ಕೆ ಬಹುದೊಡ್ಡ ವೇದಿಕೆಯಾಗಿದ್ದ ಅಹ್ಮದಾಬಾದ್‌ನಲ್ಲಿ ಕೋವಿಡ್-19‌ ಸೋಂಕಿನಿಂದ ಆಸ್ಪತ್ರೆ ದಾಖಲಾಗಿದ್ದ ರೋಗಿಯೊಬ್ಬನ ಮೃತದೇಹವೊಂದು ಅನಾಥವಾಗಿ ಬಸ್ಸು ನಿಲ್ದಾಣದಲ್ಲಿ ಪತ್ತೆಯಾಗಿದೆ. ಅಂದು ʼನಮಸ್ತೆ ಟ್ರಂಪ್‌ʼ ಕಾರ್ಯಕ್ರಮಕ್ಕಾಗಿ ಕೆಂಪು ಹಾದರ ಹಾಸಿ ಅಮೆರಿಕಾ ಅಧ್ಯಕ್ಷರನ್ನ ಸ್ವಾಗತಿಸಿದ್ದ ಅದೇ ಅಹ್ಮದಾಬಾದ್‌ ನಲ್ಲಿ, ಮೈ ಮೇಲೆ ಬಿಳಿ ವಸ್ತ್ರವೂ ಇಲ್ಲದೇ ಕೋವಿಡ್‌ ಪೀಡಿತ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಅಹ್ಮದಾಬಾದ್‌ ಇದೀಗ ದೇಶದ ಎರಡನೇ ಕರೋನಾ ಹಾಟ್‌ಸ್ಪಾಟ್‌ ನಗರವಾಗಿದೆ. ದಿನವೊಂದಕ್ಕೆ ನೂರಾರು ಹೊಸ ಪ್ರಕರಣಗಳು ಈ ನಗರವೊಂದರಲ್ಲೇ ಕಾಣಸಿಗುತ್ತಿದೆ. ಸದ್ಯ ಗುಜರಾತ್‌ ರಾಜ್ಯದಲ್ಲಿ 11,300 ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದರೆ ಅದರಲ್ಲಿ ʼನಮಸ್ತೇ ಟ್ರಂಪ್ʼ ಕಾರ್ಯಕ್ರಮ ನಡೆದಿದ್ದ ಅಹ್ಮದಾಬಾದ್‌ ನಗರವೊಂದರಲ್ಲೇ 8400 ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾದರೆ, 524 ಮಂದಿ ಅದಾಗಲೇ ಅಸುನೀಗಿದ್ದಾರೆ. ಇದು ಮುಂಬೈ ನಂತರದಲ್ಲಿ ಅತೀ ಹೆಚ್ಚು ಸೋಂಕು ಹಾಗೂ ಸಾವು ಕಂಡಿರುವ ದೇಶದ ಎರಡನೇ ನಗರವಾಗಿದೆ.

ಸದ್ಯ ಅಹ್ಮದಾಬಾದ್‌ನ ದಾನಿಲಿಮ್ಡಾ ಕ್ರಾಸಿಂಗ್‌ ಬಳಿಯ ಬಸ್‌ ನಿಲ್ದಾಣದ ಬಳಿ ಪತ್ತೆಯಾದ 67 ರ ಹರೆಯದ ಮೃತದೇಹದ ಬಗ್ಗೆ ಗುಜರಾತ್‌ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚರ್ಚೆಯೂ ನಡೆಯುತ್ತಿವೆ. ಅಂದಹಾಗೆ ಹೀಗೆ ಬಸ್‌ ನಿಲ್ದಾಣದಲ್ಲಿ ಸಾವೀಗೀಡಾಗಿ ಪತ್ತೆಯಾದ ವ್ಯಕ್ತಿಯು ಮೇ 10 ರಂದು ಕರೋನಾ ಸೋಂಕು ದೃಢಪಟ್ಟ ನಂತರ ಅಹ್ಮದಾಬಾದ್‌ ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೇ 15 ರಂದು ಪೊಲೀಸರಿಂದ ಕರೆ ಸ್ವೀಕರಿಸಿದ ಆ ವ್ಯಕ್ತಿಯ ಮಗನಿಗೆ ಆಘಾತ ಕಾದಿತ್ತು. ತನ್ನ ತಂದೆಯ ಮೃತದೇಹ ಅಹ್ಮದಾಬಾದ್‌ ನ ದಾನಿಲಿಮ್ಡಾ ಕ್ರಾಸಿಂಗ್‌ ನ BRTS ಎಂಬಲ್ಲಿದೆ ಅನ್ನೋದು ತಿಳಿಯಿತು ಅನ್ನೋದಾಗಿ ಮೃತ ವ್ಯಕ್ತಿಯ ಪುತ್ರ ʼದಿ ಕ್ವಿಂಟ್‌ʼ ಗೆ ತಿಳಿಸಿದ್ದಾರೆ.

ಆದರೆ ಪೊಲೀಸ್‌ ಅಧಿಕಾರಿಗಳು ನೀಡಿರುವ ಮಾಹಿತಿ ಮಾತ್ರ ಅಚ್ಚರಿಗೆ ಕಾರಣವಾಗುತ್ತಿದೆ. ಕಾರಣ, ಕೋವಿಡ್-19‌ ದೃಢಪಟ್ಟಿದೆ ಅನ್ನೋ ಕಾರಣಕ್ಕಾಗಿ ಮೇ 10 ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿಗೆ ಕರೋನಾ ಸೋಂಕು ಲಕ್ಷಣ ಇರಲಿಲ್ಲವೆಂದೇ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆ ಕಾರಣಕ್ಕಾಗಿ ʼಹೋಂ ಕ್ವಾರೆಂಟೈನ್‌ʼ ತೆರಳುವುದಾಗಿ ಖುದ್ದು ಆ ವ್ಯಕ್ತಿಯೇ ಲಿಖಿತ ಫಾರಂ ತುಂಬಿದ್ದು, ಅದರನ್ವಯ ಆಸ್ಪತ್ರೆಯ ಆಡಳಿತ ಮಂಡಳಿಯೇ ಅವರಿಗೆ ಬಸ್‌ ವ್ಯವಸ್ಥೆಯನ್ನ ಕಲ್ಪಿಸಿತ್ತು ಎನ್ನುತ್ತಾರೆ. ಆದರೆ ಮೃತ ವ್ಯಕ್ತಿಯನ್ನ ಯಾಕಾಗಿ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಲಾಯಿತು? ಮತ್ತು ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೇ ತೋರಿದ ನಿರ್ಲಕ್ಷ್ಯದ ಬಗ್ಗೆ ಇದೀಗ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇದನ್ನ ಪುಷ್ಟೀಕರಿಸುವಂತೆ ಅಹ್ಮದಾಬಾದ್‌ ಸಾರ್ವಜನಿಕ ಆಸ್ಪತ್ರೆ ವಿಶೇಷ ಕರ್ತವ್ಯಾಧಿಕಾರಿ ಡಾ. ಎಂಎಂ ಪ್ರಭಾಕರ್‌, “ಮೃತಪಟ್ಟಿರುವ ವ್ಯಕ್ತಿಯಲ್ಲಿ ಸ್ವಲ್ಪ ಮಟ್ಟಿನ ಕೋವಿಡ್‌-19 ರೋಗದ ಲಕ್ಷಣಗಳಷ್ಟೇ ಕಾಣಸಿಕಿದ್ದವು. ಆದ್ದರಿಂದ ಹೊಸ ಮಾರ್ಗಸೂಚಿ ಪ್ರಕಾರ ಆ ವ್ಯಕ್ತಿಯೇ ಹೋಂ ಕ್ವಾರೆಂಟೈನ್‌ಗಾಗಿ ಮನವಿ ಮಾಡಿದ್ದರು. ಆದ್ದರಿಂದ ಮೇ 14 ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. (ಸಾವೀಗೀಡಾಗುವ ಮುನ್ನ ದಿನ) ಅಲ್ಲದೇ ಡಿಸ್ಚಾರ್ಜ್‌ ಸಂದರ್ಭ ಅವರು ಆರೋಗ್ಯವಾಗಿ ಸದೃಢವಾಗಿದ್ದರು” ಎಂದು ತಿಳಿಸಿದ್ದಾರೆ.

“ಅಲ್ಲದೇ ಆಸ್ಪತ್ರೆ ವತಿಯಿಂದಲೇ ಅವರಿಗೆ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಅದರೆ ಅವರ ಮನೆಗೆ ತೆರಳುವ ರಸ್ತೆಗಳು ಇಕ್ಕಟ್ಟಿನಿಂದ ಕೂಡಿದ್ದರ ಪರಿಣಾಮ ಅವರನ್ನ ಸಮೀಪದ ಬಸ್‌ ನಿಲ್ದಾಣದ ಬಳಿ ಬಿಡಲಾಗಿತ್ತು. ಆದರೆ ಈ ರೀತಿ ಹತ್ತಿರದ ಬಸ್‌ ನಿಲ್ದಾಣದ ಬಳಿ ಅವರನ್ನ ಬಿಟ್ಟು ಹೋಗಿರುವ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ತಿಳಿಸಲಾಗಿತ್ತೇ ಅನ್ನೋದರ ಬಗ್ಗೆ ತಿಳಿದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಅದಲ್ಲದೇ ಅಂತ್ಯ ಸಂಸ್ಕಾರ ಸಮಯದಲ್ಲೂ ಮೃತ ವ್ಯಕ್ತಿಯ ಕುಟುಂಬಿಕರು ಮೃತದೇಹವನ್ನ ಪ್ಲಾಸ್ಟಿಕ್‌ನಲ್ಲಿ ಕವರ್‌ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ICMR ಮಾರ್ಗಸೂಚಿಯಂತೆ ಆರೋಗ್ಯ ಸಿಬ್ಬಂದಿಗಳು ಆ ಕ್ರಮಗಳನ್ನ ಪಾಲಿಸಿಲ್ಲ ಎಂದು ಮೃತ ವ್ಯಕ್ತಿಯ ಪುತ್ರ ಆರೋಪಿಸಿದ್ದಾರೆ.

ಕೋವಿಡ್‌-19 ಪೀಡಿತ ವ್ಯಕ್ತಿಯ ನಿರ್ಲಕ್ಷ್ಯದ ಸಾವು ವಿಚಾರ ಬೆಳಕಿಗೆ ಬರುತ್ತಲೇ ಗುಜರಾತ್‌ ನಲ್ಲಿ ರಾಜಕೀಯವಾಗಿಯೂ ಇದು ಚರ್ಚೆಗೆ ಕಾರಣವಾಗಿದೆ. ಸ್ವತಃ ಗುಜರಾತ್‌ ಸಿಎಂ ವಿಜಯ್‌ ರೂಪಾನಿ ಅವರೇ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಗುಪ್ತಾ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. 24 ಗಂಟೆಯಲ್ಲಿ ವರದಿ ಸಲ್ಲಿಸುವಂತೆಯೂ ಅವರಿಗೆ ಸೂಚಿಸಲಾಗಿದೆ.

ಇನ್ನು ಶಾಸಕ ಜಿಗ್ನೇಶ್‌ ಮೆವಾನಿ ಈ ವಿಚಾರವಾಗಿ ಗುಜರಾತ್‌ ಬಿಜೆಪಿ ಸರಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. “ಇದು ಕೋವಿಡ್-19‌ ಸಮಯದಲ್ಲಿ ಸರಕಾರ ತೆಗೆದುಕೊಂಡಿರುವ ಅತ್ಯಂತ ಕೆಟ್ಟ ವ್ಯವಸ್ಥೆಗೆ ಸಾಕ್ಷಿಯಾಗಿದೆ. ಆದ್ದರಿಂದ ವಿಜಯ್‌ ರೂಪಾನಿ ಇದರ ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು” ಎಂದು ಟ್ವೀಟ್‌ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಅಲ್ಲದೇ, “ಇದು ಗುಜರಾತ್‌ ಮಾದರಿಯ ಮುಖವಾಡವನ್ನ ಬಹಿರಂಗಪಡಿಸಿದೆ. ಆದರೂ ಸರಕಾರ ಜವಾಬ್ದಾರಿ ಮೆರೆಯುವ ಬದಲು ಹೆಡ್‌ಲೈನ್‌ ನಿರ್ವಹಿಸುವಲ್ಲಿ ನಿರತವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿ ಇದಕ್ಕೂ ಮುನ್ನ ಎಪ್ರಿಲ್‌ 24 ರಂದೂ ಇಂತಹದ್ದೇ ನಿರ್ಲಕ್ಷ್ಯ ವಹಿಸಿದ ಘಟನೆಯೊಂದು ವರದಿಯಾಗಿತ್ತು. ಇದೇ ಅಹ್ಮದಾಬಾದ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಮಂದಿ ಕರೋನಾ ಸೋಂಕಿತರನ್ನ ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮ, ಅವರು ಸುಮಾರು ಆರು ಗಂಟೆಗೂ ಅಧಿಕ ಹೊತ್ತು ಬೀದಿ ಬದಿಯಲ್ಲೇ ಕಳೆಯಬೇಕಾಗಿತ್ತು. ಅದರಲ್ಲಿದ್ದ ರೋಗಿಯೊಬ್ಬರು ಅದನ್ನ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ನಂತರವಷ್ಟೇ ಅಲ್ಲಿನ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು.

ಒಟ್ಟಿನಲ್ಲಿ ʼನಮಸ್ತೆ ಟ್ರಂಪ್‌ʼ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಮೆರಿಕಾ ಅಧ್ಯಕ್ಷರಿಗೆ ಸ್ವಾಗತ ಕೋರಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನದೇ ತವರು ರಾಜ್ಯದಲ್ಲಿ ನಡೆಯುತ್ತಿರುವ ಕರೋನಾ ಆರ್ಭಟಕ್ಕೆ ಸ್ಪಂದಿಸುವ ಮನಸ್ಸು ಮಾಡುತ್ತಿಲ್ಲ. ಕಳೆದ ಚುನಾವಣೆ ಸಮಯದವರೆಗೂ ʼಗುಜರಾತ್‌ ಮಾದರಿʼ ದೇಶವ್ಯಾಪಿ ಜಾರಿ ಮಾಡುವುದಾಗಿ ತಿಳಿಸುತ್ತಿದ್ದ ಮೋದಿ ಹಾಗೂ ಅವರ ಪಕ್ಷದವರಿಗೆ, ಜನತೆ ಈಗ ʼಇದೇನಾ ಗುಜರಾತ್‌ ಮಾದರಿ?ʼ ಅನ್ನೋ ಹಾಗಾಗಿದೆ.

Click here Support Free Press and Independent Journalism

Pratidhvani
www.pratidhvani.com