ಇದು ಶ್ರೀಮಂತರ ಸರ್ಕಾರ, ಬಡವರದ್ದಲ್ಲ.!
ರಾಷ್ಟ್ರೀಯ

ಇದು ಶ್ರೀಮಂತರ ಸರ್ಕಾರ, ಬಡವರದ್ದಲ್ಲ.!

ಕಲ್ಲು ಹೊತ್ತು, ಮಣ್ಣು ಅಗೆದು, ಕಟ್ಟಿಗೆ ಕಡಿದು, ಬೆವರು ಹರಿಸಿ ದೇಶ ಕಟ್ಟಿದ್ದು ಕಾರ್ಮಿಕರು ಅಂದರೆ ಬಡವರು. ಅವರಿಲ್ಲದೆ ಹೋಗಿದ್ದರೆ ಈ ದೇಶಕ್ಕೊಂದು ರೂಪವೇ ಇರುತ್ತಿರಲಿಲ್ಲ. ಭೂ ಪಟದಲ್ಲಿ ಕಾಣುವ ಭಾರತವನ್ನು ಮಾತೆ ಎಂದು ಸಂಭೋಧಿಸಿ ದಿವ್ಯಾನುಭೂತಿ ಪಡೆದುಕೊಳ್ಳುವ ದೇಶಕ್ಕೆ ಮಾತೆಯ ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲ.

ಆಶಿಕ್‌ ಮುಲ್ಕಿ

“ಸರ್.‌ ನಾವು ಕಳೆದ ಕೆಲವು ದಿನದಿಂದ ಅನುಭವಿಸುತ್ತಿರುವ ಯಾತನೆ ಎಂಥದ್ದು ಅಂತ ಯಾರಿಗೂ ಗೊತ್ತಿಲ್ಲ. ನಾವು ನಮ್ಮ ಊರು ಬಿಟ್ಟು ಮೂರು ನಾಲ್ಕು ವರ್ಷದಿಂದ ಇಲ್ಲಿ (ಬೆಂಗಳೂರು) ಬಂದು ದುಡಿಯುತ್ತಿದ್ದೇವೆ. ಆದರೀಗ ಲಾಕ್‌ ಡೌನ್‌ ಆಗಿ ಊರಿಗೆ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇಲ್ಲಿನ ಸರ್ಕಾರ ನಮ್ಮನ್ನು ಊರಿಗೆ ತಲುಪಿಸಲಿ”

ಎಂದು ʻಪ್ರತಿಧ್ವನಿʼಯ ಲೋಗೋ ಕಂಡ ಕೂಡಲೇ ದುಂಬಾಲು ಬಿದ್ದ ವಲಸೆ ಕಾರ್ಮಿಕರು ಅಳಲು ತೋಡಿಕೊಂಡಿದ್ದು ಹೀಗೆ.

ಹೀಗೆ ಲಕ್ಷಾಂತರ ಕಾರ್ಮಿಕರು ವರ್ಷಾನುಗಟ್ಟಲೆ ತಮ್ಮ ಊರು, ಕುಟುಂಬವನ್ನೆಲ್ಲಾ ಬಿಟ್ಟು ದೇಶದ ವಿವಿಧ ಭಾಗಗಳಿಗೆ ತೆರಳಿ ದುಡಿಯುತ್ತಿದ್ದಾರೆ. ದೇಶ ಕಟ್ಟಲು ತಮ್ಮ ಪಾಲು ನೀಡುತ್ತಿದ್ದಾರೆ. ಒಂದು ವೇಳೆ ಇವರು ಇಲ್ಲದೆ ಹೋಗಿದ್ದರೆ.? ಏನಾಗುವುದೆಂದು ಯಾರಾದರೂ ಊಹಿಸಿದ್ದೀರಾ. ಆದರೆ ಈ ವಿಷಮ ಸಮಯದಲ್ಲಿ ಕೇಂದ್ರ ಸರ್ಕಾರ ಇವರನ್ನು ನಡೆಸಿಕೊಂಡಿದ್ದು ಹೇಗೆ ಎಂಬುವುದುನ್ನು ನಾವು ಕಣ್ಣಾರೆ ಕಂಡಿದ್ದೇವೆ. ಕರೋನಾ ವಿಷಮ ಸಮಯದಲ್ಲಿ ಆಗಿದ್ದೆಲ್ಲವೂ ಅವಾಂತರಗಳೇ. ಆದರೆ, ಇದರ ನಡುವೆ ಒಂದು ವಿಚಾರವಂತೂ ಸ್ಪಷ್ಟವಾಯ್ತು. ಕೇಂದ್ರದಲ್ಲಿರುವ ಸರ್ಕಾರ ಯಾರನ್ನು ಪೋಷಿಸುತ್ತಿದೆ ಮತ್ತು ಯಾರಿಗಾಗಿ ಅಧಿಕಾರದಲ್ಲಿ ಇದೆ ಎಂಬುದು. ಕರೋನಾ ಮಹಾಮಾರಿ ತಂದಿಟ್ಟ ಸಂಕಷ್ಟದ ಮಧ್ಯೆ ಇಡೀ ದೇಶಕ್ಕೆ ಅರಿವಾದ ಸತ್ಯವಿದು. ಕೇಂದ್ರದಲ್ಲಿನ ಸರ್ಕಾರ ಯಾರಿಂದ ಆಯ್ಕೆಯಾಗಿ ಯಾರಿಗಾಗಿ ಆಡಳಿತ ನಡೆಸುತ್ತಿದೆ ಎಂಬುದನ್ನು ಮರೆಂತಿದೆ. ಶ್ರೀಮಂತರ ಬಾಹುಗಳಲ್ಲಿ ಜೋತು ಬಿದ್ದು ಒರಳಾಡುವ ಸರ್ಕಾರ ನಮ್ಮದು ಎಂಬುವುದು ನಿಜಕ್ಕೂ ಬೇಸರದ ಸಂಗತಿ. ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ, ಬಡವರ ಬಗ್ಗೆ ಕೊಂಚವೂ ತಲೆಕೆಡಸಿಕೊಳ್ಳದ, ಬಡವರ ಬವಣೆಗೆ ಎಳ್ಳಷ್ಟೂ ಮರುಗದ ಸರ್ಕಾರ ನಮ್ಮದು. ಜನರಿಂದ, ಜನರಿಗಾಗಿ, ಜನರೇ ನಡೆಸುವ ಸರ್ಕಾರ ಇದು ಎಂದು ನೀವು ನಂಬಿಕೊಂಡಿದ್ದರೆ ಅದು ಸುಳ್ಳು. ಯಾಕೆಂದರೆ ಇದು ಬಡವರಿಂದ ಆಯ್ಕೆಯಾಗಿ ಶ್ರೀಮಂತರಿಗಾಗಿ ನಡೆಯುತ್ತಿರುವ ಸರ್ಕಾರ.

ನಮ್ಮ ಕಣ್ಣೀಗೆ ಬೀಳುವುದು ಒಂದೆರಡು ದೃಶ್ಯಗಳಷ್ಟೇ, ಅದರ ಹೊರತಾಗಿಯೂ ವಲಸೆ ಕಾರ್ಮಿಕರು ತಮ್ಮ ಊರು ಸೇರಲು ಹರಸಾಹಸ ಪಡುತ್ತಿದ್ದಾರೆ. ಇಲ್ಲೊಬ್ಬ ಕಾರ್ಮಿಕ ಲಾಕ್‌ ಡೌನ್‌ ಶುರುವಾದಾಗಿನಿಂದ ಸರ್ಕಾರ ಒದಗಿಸಿದ ಸೇವಾ ಸಿಂಧೂ ಆಪ್‌ ನಲ್ಲಿ ಟ್ರೈನ್‌ ಟಿಕೆಟ್‌ ಪಡೆಯಲು ಎಲ್ಲಾ ದಾಖಲೆಗಳನ್ನೂ ನೀಡಿದ್ದರೂ ಕೂಡ ಈವರೆಗೂ ಸರ್ಕಾರದಿಂದ ಒಂದೇ ಒಂದು ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುತ್ತಿದ್ದಾನೆ. ನಮ್ಮನ್ನು ದಯವಿಟ್ಟು ಊರಿಗೆ ಕಳುಹಿಸಿಕೊಡಿ ಎಂದು ಕಣ್ಣು ತೇವಗೊಳಿಸಿ ಹೇಳುತ್ತಿದ್ದಾನೆ. ಇದಕ್ಕೆ ತಾನೇ ಸರ್ಕಾರ ಸ್ಪಂದಿಸಬೇಕಿರೋದು..? ಆದರೆ ಸರ್ಕಾರ ಇದ್ಯಾವುದಕ್ಕೂ ಸ್ಪಂದಿಸುತ್ತಲೇ ಇಲ್ಲ.

ಕಲ್ಲು ಹೊತ್ತು, ಮಣ್ಣು ಅಗೆದು, ಕಟ್ಟಿಗೆ ಕಡಿದು, ಬೆವರು ಹರಿಸಿ ದೇಶ ಕಟ್ಟಿದ್ದು ಕಾರ್ಮಿಕರು ಅಂದರೆ ಬಡವರು. ಅವರಿಲ್ಲದೆ ಹೋಗಿದ್ದರೆ ಈ ದೇಶಕ್ಕೊಂದು ರೂಪವೇ ಇರುತ್ತಿರಲಿಲ್ಲ. ಭೂ ಪಟದಲ್ಲಿ ಕಾಣುವ ಭಾರತವನ್ನು ಮಾತೆ ಎಂದು ಸಂಭೋಧಿಸಿ ದಿವ್ಯಾನುಭೂತಿ ಪಡೆದುಕೊಳ್ಳುವ ದೇಶಕ್ಕೆ ಮಾತೆಯ ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲ. ಅದು ಈ ಲಾಕೌಡೌನ್‌ ಸಮಯದಲ್ಲಂತೂ ಸಾಬೀತಾಗಿದೆ. ದೇಶ ಮುಂದೆ ಸಾಗಬಹುದಾದ ಹಾದಿಯನ್ನು ನಿಚ್ಚಳಗೊಳಿಸೋ ತಾಕತ್ತಿರುವುದು ಈ ಕಾರ್ಮಿಕರಿಗೆ ಮಾತ್ರ. ಇಂಥಾ ಬೆವರಿನ ಮಕ್ಕಳನ್ನು ಸಾಕಿ ಸಲಹ ಬೇಕಿದ್ದ ಸರ್ಕಾರ ಶ್ರೀಮಂತರ ತಾಳಕ್ಕೆ ಕುಣಿಯುತ್ತಿದೆ.

ಲಾಕೌಡೌನ್‌ ಅವಧಿಯಲ್ಲಿ ಇಡೀ ದೇಶ ಮರುಗಿದ್ದು ಕಾರ್ಮಿಕರ ಪಾಡು ನೋಡಿ. ಆದರೆ ಸರ್ಕಾರಕ್ಕೆ ಯಾಕೋ ಅದು ಕಾಣಲೇ ಇಲ್ಲ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ಉತ್ತರ ಭಾಗಗಳಲ್ಲೂ ವಲಸೆ ಕಾರ್ಮಿಕರ ಪಾಡು ಹೇಳತೀರದ್ದಾಗಿದೆ. ಆತ ರಾಯ್‌ದಾಸ್‌. ದೆಹಲಿಯಲ್ಲಿ ಕೂಲಿ ಮಾಡಿಕೊಂಡಿದ್ದ. ಲಾಕ್‌ ಡೌನ್‌ ಕಾರಣಕ್ಕೆ ಮನೆ ಸೇರಲಾಗದೆ ಪರದಾಡಿದ್ದ. ಅದ್ಯಾವಾಗ ಕೇಂದ್ರ ಸರ್ಕಾರ ವಿಶೇಷ ರೈಲು ಆರಂಭಿಸಿತ್ತೋ ಅಂದೇ ಊರಿಗೆ ಹೊಡರಲು ಸಿದ್ಧತೆ ನಡೆಸಿಕೊಂಡ. ಅಂತೆಯೇ ರೈಲು ನಿಲ್ದಾಣಕ್ಕೆ ತೆರಳಿ ರೈಲಿಗಾಗಿ ಕಾದು ಕುಳಿತುಕೊಂಡ. ಶತಾಯಗತಾಯ ಟಿಕೆಟು ಪಡೆಯಲು ಕಸರತ್ತು ನಡೆಸಿದರೂ ಟಿಕೇಟು ಸಿಗಲೇ ಇಲ್ಲ. ಆದರೂ ಅಂಗಲಾಚಿ ರೈಲೇರುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಈ ವೇಳೆ ರಾಯ್‌ದಾಸ್‌ಗೆ ವರಿಗಾರನೊಬ್ಬ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿ ಕಣ್ಣೀರಾದರು. ರೈಲು ಎಂಬುವುದೆಲ್ಲ ಈ ಸರ್ಕಾರದ ತೋರಿಕೆ ಎನ್ನುತ್ತಲೇ ರಾಯ್‌ದಾಸ್‌ ಕಣ್ಣು ತೋಯತೊಡಗಿತು.

ಅತ್ತ ಕ್ಯಾನ್ಸರ್‌ ಪಿಡುಗಿನಿಂದ ಬಳಲುತ್ತಿರುವ ತಾಯಿ ಮತ್ತು ತುಂಬು ಗರ್ಭಿಣಿಯಾಗಿರುವ ಹೆಂಡತಿ. ಇತ್ತ ಕರೋನಾ ಕಾರಣದಿಂದ ಹೇರಲಾದ ಲಾಕ್‌ ಡೌನ್.‌ ಮಧ್ಯದಲ್ಲಿ ಅಸಹಾಯಕನಾಗಿ ನಿಂತಿರುವ ರಾಯ್‌ದಾಸ್‌.‌ ತನ್ನವರ ಜೊತೆಗೆ ಕೊನೆಗೆ ನಡೆದು ಊರು ಸೇರುವ ನಿರ್ಧಾರ ತೆಗೆದುಕೊಂಡು ಸುಮಾರು 30 ಕೀಲೋ ಮೀಟರ್‌ ದೂರ ನಡೆದು, ಘಾಝಿಪುರ್‌ ಎಂಬಲ್ಲಿ ಬರುವಷ್ಟೊತ್ತಿಗೆ ಮತ್ತೊಂದು ಸವಾಲು ಕಾದಿತ್ತು. ಘಾಝಿಪುರ್ ಉತ್ತರಪ್ರದೇಶ ಮತ್ತು ದೆಹಲಿಯ ಗಡಿಭಾಗ. ಅಷ್ಟೊತ್ತಿಗಾಗಲೇ ಯುಪಿ ಸರ್ಕಾರ ಯಾರನ್ನೂ ಕೂಡ ರಾಜ್ಯದೊಳಕ್ಕೆ ಸೇರಿಸ ಬೇಡಿ ಎಂಬ ಆದೇಶ ಹೊರಡಿಸಿತ್ತು. ಇತ್ತ ದೆಹಲಿ ಕೂಡ ಹೋದವರು ಹೋದರು. ಇನ್ನು ಮುಂದೆ ಯಾರಿಗೂ ರಾಜ್ಯದೊಳಕ್ಕೆ ಪ್ರವೇಶವಿಲ್ಲ ಎಂದು ಬಿಟ್ಟಿತು. ಹೀಗೆ ಅರ್ಧ ದಾರಿಗೆ ಬಿದ್ದಿರುವ ರಾಯ್‌ದಾಸ್‌ ಸೇರಿದಂತೆ ನೂರಾರು ವಲಸೆ ಕಾರ್ಮಿಕರು ಅಸಹಾಯಕ ಸ್ಥಿತಿಯಲ್ಲಿ ಸೇತುವೆಯ ಕೆಳಗಡೆ ಸದ್ಯ ಕೂತಿದ್ದಾರೆ. ಕಣ್ಣೀರು ಹಾಕುತ್ತಾ ಪ್ರಭುತ್ವವನ್ನು ಶಪಿಸುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ಇವರನ್ನೆಲ್ಲ ಗೂಡು ಸೇರಿಸುವುದು ಕಷ್ಟದ ಕೆಲಸವಲ್ಲ. ಒಂದು ಅಥವಾ ಎರಡು ದಿನದ ಕೆಲಸ. ಅಥವಾ ಒಂದೇ ಒಂದು ಆದೇಶ. ಎಲ್ಲರೂ ಅರಾಮವಾಗಿ ತಮ್ಮ ತಮ್ಮ ನೆಲೆ ಸೇರಿಕೊಳ್ಳುತ್ತಿದ್ದರು. ಆದರೆ ಸರ್ಕಾರಕ್ಕೆ ಅದನ್ನೆಲ್ಲಾ ಮಾಡುವುದಕ್ಕೆ ಸಮಯವೇ ಇಲ್ಲ. ಪ್ಯಾಕೇಜ್‌ ಘೋಷಿಸಿ ಸರಣಿ ಗೋಷ್ಠಿ ನಡೆಸಿ ನಮ್ಮಿಂದ ಇಷ್ಟೇ ಮಾಡಲು ಸಾಧ್ಯವೆಂದು ಕೈ ಚೆಲ್ಲಿದೆ. ಇದಲ್ಲವೇ ದ್ರೋಹವೆಂದರೆ..?

ಮೊನ್ನೆ ಮೊನ್ನೆ ಕರುಳು ಹಿಂಡುವ ದೃಶ್ಯಗಳನ್ನು ನೋಡಿದ್ದೀರಿ ನೀವು. ಮಹಾರಾಷ್ಟ್ರದ ಔರಂಗಾಬಾದ್‌ ನಲ್ಲಿ 16 ವಲಸೆ ಕಾರ್ಮಿಕರ ದೇಹದ ಮೇಲೆ ಟ್ರೈನ್‌ವೊಂದು ಹರಿದು ದೇಹ ಛಿದ್ರ ಛಿದ್ರವಾಗಿ ಹೋಗಿತ್ತು. ಈ ಸಾವಿಗೆ ಹೊಣೆಯಾರು..? ಊರು ಸೇರುವ ತವಕದಲ್ಲಿ ಅಲ್ಪ ವಿರಾಮ ತೆಗೆದುಕೊಂಡಿದ್ದೇ ತಪ್ಪಾ..? ಲಾಕ್‌ ಡೌನ್‌ ಎಂದರೆ ರೈಲಿಗೂ ಅನ್ವಯವೇ ಅಲ್ಲವೇ..? ಅಷ್ಟೊತ್ತಿಗಾಗಲೇ ವಿಶೇಷ ರೈಲು ಸೇವೆ ಆರಂಭಗೊಂಡಿದ್ದು ಅವರಿಗೆ ಹೇಗೆ ಅರಿವಾಗಬೇಕು..? ಮೂಟೆ ಹೊತ್ತುಕೊಂಡು, ಕುಡಿಗಳನ್ನ ಎತ್ತಿಕೊಂಡು ಕಡು ಬಿಸಿಲಿಗೆ ಮನೆಯತ್ತ ಹೆಜ್ಜೆ ಹಾಕುವುದರ ಮಧ್ಯ ಲೋಕಜ್ಞಾನ ಬೆಳೆಸಿಕೊಳ್ಳಲು ಸುದ್ದಿ ಪತ್ರಿಕೆಯನ್ನ ಓದದೆ ಇದ್ದಿದ್ದು ಆ ಬಡವರು ಎಸಗಿದ ಅಪರಾಧವೇ..? ಪ್ರಭುತ್ವದ ಕಣ್ಣಿಗೆ ಕಪ್ಪು ಬಟ್ಟೆಯೊಂದು ಬಿದ್ದಿದೆ. ಕೇಂದ್ರ ಸರ್ಕಾರ ಕುರುಡಾಗಿದೆ.

ಅಲ್ಲಿಗೇ ನಿಲ್ಲುವುದಿಲ್ಲ ಈ ಸರ್ಕಾರದ ಮೌನ ಕ್ರೌರ್ಯ. ತುಂಬು ಗರ್ಭಿಣಿಯೊಬ್ಬಳು ಸಾರಿಗೆ ವ್ಯವಸ್ಥೆ ಸಿಗದೆ ನಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಳು. ಅಲ್ಲೇ ಹಣ್ಣುಮಗುವಿಗೆ ಜನ್ಮ ನೀಡಿದಳು. ಇದು ಮತ್ತೊಂದು ಮನಕಲಕಿದ ಸುದ್ದಿ. ಇದಾಗಿ ಒಂದೆರಡು ದಿನಕ್ಕೆ 900 ಕೀ.ಮೀ ದೂರ ನಡೆದು ಸಾಗಿದ ಹೆಣ್ಣೊಬ್ಬಳು ಕೂಡ ರಸ್ತೆಯಲ್ಲೇ ಮಗುವೊಂದಕ್ಕೆ ಜನ್ಮ ನೀಡಿದಳು. ಮಾತೆಯ ಪರಿಕಲ್ಪನೆ ಇಟ್ಟುಕೊಂಡು ದೇಶವನ್ನು ಕಟ್ಟಲು ಹೊರಟವರ ಕಣ್ಣಿಗೆ ಈ ಎಲ್ಲಾ ಹೆಣ್ಣು ಮಕ್ಕಳ ನೋವು ಅರ್ಥವಾಗಲೇ ಇಲ್ಲ. ಸತ್ತರೆ ಸಾಯಲಿ ಬಿಡಿ ಎಂಬಂತೆ ನಡೆದುಕೊಂಡಿತು ಕೇಂದ್ರ ಸರ್ಕಾರ.

ನಮ್ಮ ಕರ್ನಾಟಕದಲ್ಲೂ ಕೂಡ ವಲಸೆ ಕಾರ್ಮಿಕರು ಬಿದ್ದ ಪಾಡು ಒಂದೆರಡಲ್ಲ. ಊರು ಸೇರಲಾಗದೆ ನಡು ರಸ್ತೆಯಲ್ಲಿ ಕಣ್ಣಿಗೆ ಕಟ್ಟಿದಂತೆ ಕಂಡು ಬಂದಿದ್ದವು. ಕೇಂದ್ರ ಸರ್ಕಾರ ವಿಶೇಷ ರೈಲು ಆರಂಭಿಸಿದಾಗ ಹೆಗಲಿಗೆ ಬ್ಯಾಗು ಹಾಕಿಕೊಂಡು ನಿಲ್ದಾಣದ ಕಡೆಗೆ ಧಾವಿಸಿದ ಕಾರ್ಮಿಕರ ಕಣ್ಣಲಿ ಅದೊಂದು ಸಂತಸವಿತ್ತು. ಆದರೆ, ಅರ್ಧಕ್ಕರ್ಧ ಜನ ಈಗಲೂ ಊರು ಸೇರಲಾಗದೆ ಫೂಟ್‌ಪಾತ್‌ಗಳಲ್ಲಿ ಮಲಗಿದ್ದಾರೆ. ಒಂದು ಕಡೆ ಕೈಯಲ್ಲಿ ಕಾಸಿಲ್ಲ. ಮತ್ತೊಂದು ಕಡೆ ಸರಿಯಾದ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಹೀಗೆ ದೇಶದ ಉದ್ದಗಲಕ್ಕೂ ವಲಸೆ ಕಾರ್ಮಿಕರು ದಿಕ್ಕೆಟ್ಟು ಕೂತಿದ್ದಾರೆ. ಕೆಲವು ಕ್ಯಾಮಾರ ಕಣ್ಣುಗಳಿಗೆ ಬಿದ್ದ ದೃಶ್ಯಗಳಷ್ಟೇ ನಮಗೆ ಗೊತ್ತಿದೆ. ಆದರೆ ಅದರಾಚೆಗೂ ಕಾರ್ಮಿಕರ ಗೋಳು, ನೋವು ಬವಣೆ ಎಲ್ಲವೂ ಅನೂಹ್ಯವಾದದ್ದು.

ಹೀಗಿರುವಾಗಲೇ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದ ಪ್ರಧಾನಿ ಮೋದಿಯವರು ನಮ್ಮಿಂದ ಇಷ್ಟು ಮಾತ್ರ ಸಾಧ್ಯ ಎಂಬಂತೆ ನಡೆದುಕೊಂಡರು. ಅದಾಗಿ ಈ ಪ್ಯಾಕೇಜ್‌ ಬಗ್ಗೆ ನಡೆದ ಸರಣಿ ಪತ್ರಿಕಾಗೋಷ್ಟಿಗಳಲ್ಲಿ ವಿತ್ತ ಸಚಿವೆ ಬಡವರಿಗಾಗಿ ಇಂತಿಷ್ಟು ಹಣ ಮೀಸಲು ಎಂದರು. ಆದರೆ ಈ ಹಿಂದೆ ಘೋಷಿಸಿದ ಪ್ಯಾಕೇಜ್‌ ಪೈಕಿ ಎಷ್ಟು ಹಣ ಈ ಬಡವರ ಪಾಲಾಗಿದೆ..? ಇಷ್ಟೆಲ್ಲಾ ಆದರೂ ಕೊನೆಯ ಪತ್ರಿಕಾಗೋಷ್ಟಿಯಲ್ಲಿ ಮಾನ್ಯ ವಿತ್ತ ಸಚಿವೆ ನುಡಿದ ಮಾತುಗಳು ಅವರ ನಡೆಗಿಂತ ಆಳವಾಗಿ ಚುಚ್ಚಿ ಗಾಯಮಾಡಿದೆ ಇವರಿಗೆ. ನಾವೇನು ವಲಸೆ ಕಾರ್ಮಿಕರ ಜತೆ ಅವರ ಗಂಟೆಮೂಟೆ ಹೊತ್ತು ನಡೆಯಬೇಕಿತ್ತಾ..? ಅವರಿಗಾಗಿ ಇಲ್ಲಿ ಕೂತು ಮಾಡಲು ಬೇರೆ ಸಾಕಷ್ಟು ಕೆಲಸವಿದೆ ಎಂಬ ಅಸೂಕ್ಷ್ಮ ಮಾತುಗಳನ್ನು ಆಡಿ ತಮ್ಮ ಅಧಿಕಾರದ ದರ್ಪ ತೋರಿದರು.

ಆದರೆ ವಿದೇಶದಲ್ಲಿರುವವರನ್ನು ತವರಿಗೆ ಮರಳಿಸುವುದಕ್ಕೆ ಕೋಟಿ ಕೋಟಿ ಹಣ ವಿನಿಯೋಗ ಮಾಡಿದೆ ಸರ್ಕಾರ. ನಮ್ಮ ಬ್ಯಾಂಕುಗಳ ತಲೆ ಮೇಲೆ ಕೈ ಇಟ್ಟು ವಿದೇಶಕ್ಕೆ ಓಡಿ ಹೋದ ಕಳ್ಳಕಾಕರ ಸಾಲವನ್ನೆಲ್ಲ ಮನ್ನಾ ಮಾಡಿ ಸಾಧನೆಯಂತೆ ಬಿಂಬಿಸಿದೆ ಈ ಸರ್ಕಾರ. ಆಳುವ ವರ್ಗದ ಈ ಕಟು ನಿಲುವು ನಿಜಕ್ಕೂ ಬಡವರನ್ನು ಹೈರಾಣಾಗಿಸಿವೆ. ಹೀಗೆ ಕೇಂದ್ರದಲ್ಲಿನ ಸರ್ಕಾರ ಬಡವರನ್ನು ಸಾಕಿ ಸಲಹುತ್ತಿಲ್ಲ. ವಾಸ್ತವಿಕವಾಗಿ ಇದು ಶ್ರೀಮಂತರ ಸರ್ಕಾರ ಎಂಬುವುದಕ್ಕೆ ಇಂಥಾ ಸಾಕ್ಷ್ಯ ಸಾಕಲ್ಲವೇ..? ಹೀಗಾಗಿ ಒಂದೇ ಮಾತಿನಲ್ಲಿ ಈ ಸರ್ಕಾರ ಶ್ರೀಮಂತರದ್ದೇ ಹೊರತು ಬಡವರದ್ದಲ್ಲ.

Click here Support Free Press and Independent Journalism

Pratidhvani
www.pratidhvani.com