ಮೋದಿ ಸರ್ಕಾರದ ನಡೆಯನ್ನು ಟೀಕಿಸಿದ RSS ಅಂಗಸಂಸ್ಥೆ!
ರಾಷ್ಟ್ರೀಯ

ಮೋದಿ ಸರ್ಕಾರದ ನಡೆಯನ್ನು ಟೀಕಿಸಿದ RSS ಅಂಗಸಂಸ್ಥೆ!

ಕರೋನಾ ಆರ್ಥಿಕ ಸಂದಿಗ್ಧತೆಯನ್ನ ಸರಿದೂಗಿಸಲು ಸಾರ್ವಜನಿಕ ವಲಯಗಳಲ್ಲಿ ಭಾರೀ ಪ್ರಮಾಣದ ಖಾಸಗೀಕರಣಕ್ಕೆ ಕೇಂದ್ರ ಸರಕಾರ ಒತ್ತು ನೀಡಿದ್ದು, ಸರಕಾರದ ನಡೆಯನ್ನ RSS ನ ಕಾರ್ಮಿಕ ಸಂಘಟನೆ ʼಭಾರತೀಯ ಮಜ್ದೂರ್‌ ಸಂಘʼವೇ ಟೀಕಿಸಿದೆ. 

ಪ್ರತಿಧ್ವನಿ ವರದಿ

ಕೇಂದ್ರ ಸರ್ಕಾರ 8 ಪ್ರಮುಖ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಿರುವುದನ್ನು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ RSS ನ ಅಂಗಸಂಸ್ಥೆಯಾದ ʼಭಾರತೀಯ ಮಜ್ದೂರ್ ಸಂಘʼ ಬಲವಾಗಿ ಖಂಡಿಸಿದೆ. ಕರೋನಾ ಸಾಂಕ್ರಾಮಿಕದ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಮಾರುಕಟ್ಟೆ ತತ್ತರಿಸಿದ್ದಾಗ ಸಾರ್ವಜನಿಕ ವಲಯವು ಬಹಳ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಸರ್ಕಾರದ ನಡೆಯು ಸಾರ್ವಜನಿಕ ವಲಯ ಭಾರೀ ಉದ್ಯೋಗ ಕಡಿತವನ್ನು ತರಲಿದೆ ಎಂದು ಸಂಘ ಹೇಳಿದೆ.

“ತೀವ್ರ ಉತ್ಸಾಹದಿಂದ ಆರ್ಥಿಕ ಸಚಿವೆಯ ಮೂರು ದಿನಗಳ ಭಾಷಣ ಕೇಳುತ್ತಿದ್ದವರಿಗೆ ಸಚಿವರ ನಾಲ್ಕನೆ ದಿನದ ಭಾಷಣ ನೋವು ತಂದಿದೆ. ಆರ್ಥಿಕ ಸಚಿವರ ನಾಲ್ಕನೇ ಪ್ರಕಟಣೆ ಮಾಡಿದ ದಿನವು ದೇಶ ಹಾಗೂ ಜನರಿಗೆ ದುಖದ ದಿನವಾಗಿದೆ” ಎಂದು BMS ಪ್ರಧಾನ ಕಾರ್ಯದರ್ಶಿ ವಿಜೇಶ್ ಉಪಧ್ಯಾಯ್ ಹೇಳಿದ್ದಾರೆ.

ಕರೋನಾ ಸಾಂಕ್ರಾಂಮಿಕದ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕುಸಿದ ಆರ್ಥಿಕತೆಯನ್ನು ಮೇಲೆತ್ತಲು ಕಲ್ಲಿದ್ದಲು, ಖನಿಜಗಳು, ರಕ್ಷಣಾ ಉತ್ಪಾದನೆ, ಬಾಹ್ಯಾಕಾಶ ನಿರ್ವಹಣೆ, ವಿಮಾನ ನಿಲ್ದಾಣಗಳು, ವಿದ್ಯುತ್ ವಿತರಣೆ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ವಲಯ ಮೊದಲಾದ ಎಂಟು ಮುಖ್ಯ ಕ್ಷೇತ್ರಗಳಿಗೆ ಪ್ರಮುಖ ನೀತಿ ಬದಲಾವಣೆಯನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು.

“ಕಾರ್ಮಿಕ ಸಂಘಗಳು, ಸಾಮಾಜಿಕ ಪ್ರತಿನಿಧಿಗಳೊಂದಿಗೆ ಸಲಹೆ ಕೇಳಲು, ಸಂವಾದ ಮಾಡಲು ಸರ್ಕಾರ ಹಿಂಜರಿಯುವುದು ತನ್ನದೇ ಯೋಜನೆ, ಆಲೋಚನೆಗಳ ಬಗ್ಗೆ ತನಗಿರುವ ವಿಶ್ವಾಸದ ಕೊರತೆಯನ್ನು ತೋರಿಸುತ್ತಿದೆ ಇದು ಖಂಡನೀಯ” ಎಂದು ಸರ್ಕಾರದ ವಿರುದ್ದ ಉಪಾಧ್ಯಾಯ್ ಹರಿಹಾಯ್ದರು.

ನಮ್ಮ ನೀತಿ ನಿರೂಪಕರಿಗೆ ಸಾರ್ವಜನಿಕ ವಲಯದಲ್ಲಿ ರಚನಾತ್ಮಕ ಹಾಗೂ ಸ್ಪರ್ಧಾತ್ಮಕ ಸುಧಾರಣೆಯೆಂದರೆ ಖಾಸಗೀಕರಣ ಅನ್ನುವಂತಾಗಿದೆ. ಆದರೆ ಆರ್ಥಿಕ ಬಿಕ್ಕಟ್ಟಿನ ಸಂಧರ್ಭದಲ್ಲಿ ಹೆಚ್ಚು ನಿರ್ಣಾಯಕ ಪಾತ್ರವಹಿಸುವುದು ಸಾರ್ವಜನಿಕ ವಲಯಗಳೆಂದು ಸಾಬೀತಾಗಿದೆ.

ಪ್ರತೀ ಸುಧಾರಣೆಯ ಪರಿಣಾಮವು ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಾರ್ಮಿಕರಿಗೆ ಖಾಸಗೀಕರಣವೆಂದರೆ ಭಾರೀ ಉದ್ಯೋಗ ನಷ್ಟ, ಕಡಿಮೆ ಗುಣಮಟ್ಟದ ಉದ್ಯೋಗ ಸೃಷ್ಟಿ, ವಲಯದಲ್ಲಿ ಲಾಭ ಮತ್ತು ಶೋಷಣೆ ನಿಯಮವಾಗುವ ಸಾಧ್ಯತೆ. ಸಾರ್ವಜನಿಕ ಸಂವಾದವಿಲ್ಲದೆ ಸರ್ಕಾರವು ಭಾರೀ ಬದಲಾವಣೆಯನ್ನು ತರುತ್ತಿದೆಯೆಂದರೆ ಸರ್ಕಾರ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅರ್ಥ. ಸಾಮಾಜಿಕ ಸಂವಾದವು ಪ್ರಜಾಪ್ರಭುತ್ವದ ಮೂಲಭೂತ ಆಶಯವಾಗಿದೆ ಎಂದು RSSನ ಅಂಗ ಸಂಸ್ಥೆ ಹೇಳಿಕೊಂಡಿದೆ.

Click here Support Free Press and Independent Journalism

Pratidhvani
www.pratidhvani.com