ಇವರು ವಲಸೆ ಕಾರ್ಮಿಕರಲ್ಲ, ʻಅತಿಥಿ ಕಾರ್ಮಿಕರುʼ.!
ರಾಷ್ಟ್ರೀಯ

ಇವರು ವಲಸೆ ಕಾರ್ಮಿಕರಲ್ಲ, ʻಅತಿಥಿ ಕಾರ್ಮಿಕರುʼ.!

ಮೂರು ಹಂತದ ಲಾಕ್ ಡೌನ್ ಸಂಧರ್ಭದಲ್ಲಿ ಇಡೀ ದೇಶದ ಆತ್ಮಸಾಕ್ಷಿ ಮರುಗಿದ್ದು ವಲಸೆ ಕಾರ್ಮಿಕರನ್ನು ನೋಡಿ. ಅವರ ಗೋಳು, ಕಣ್ಣೀರು, ಸ್ಥಿತಿ ನೋಡಿ ದೇಶ ಕಣ್ಣೀರಾಗಿತ್ತು. ಆದರೇ ಕೇಂದ್ರ ಸರ್ಕಾರ ನೋಡಿಯೂ ನೋಡದಂತೆ ನಡೆದುಕೊಂಡಿತು. ಈ ವೇಳೆ ಕೇರಳವೆಂಬ ರಾಜ್ಯ ವಲಸೆ ಕಾರ್ಮಿಕರನ್ನು ʻಅತಿಥಿ ಕಾರ್ಮಿಕʼರೆಂದು ಕರೆದು ಅವರನ್ನ ಗೌರವಯುತವಾಗಿ ನಡೆಸಿಕೊಂಡಿತು.

ಪ್ರತಿಧ್ವನಿ ವರದಿ

ಹಾಗೆ ನೋಡಿದರೆ ನಮ್ಮ ದೇಶಕ್ಕೆ ಕರೋನಾ ಸೋಂಕು ಈ ಪ್ರಮಾಣದಲ್ಲಿ ವಿಸ್ತರಿಸಲೇಬಾರದಿತ್ತು. ನಿರ್ಧಾರಗಳನ್ನ ಸಮಯಕ್ಕನುಗುಣವಾಗಿ ತೆಗೆದುಕೊಂಡಿದ್ದರೆ ಕರೋನಾ ಈ ಮಟ್ಟಕ್ಕೆ ದೇಶ ಆವರಿಸಿಕೊಳ್ಳುತ್ತಿರಲಿಲ್ಲ. ಈಗ ನಮ್ಮ ದೇಶ 90 ಸಾವಿರ ಸೋಂಕಿತರ ಗಡಿಯಲ್ಲಿ ನಿಂತಿದೆ. ಮೂರನೇ ಹಂತದ ಲಾಕ್ ಡೌನ್ ಮೇ 17ಕ್ಕೆ ಮುಕ್ತಾಯಗೊಳ್ಳುತ್ತಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಕಣ್ಣಿಗೆ ಕಟ್ಟಿದಂತೆ ರಾಚಿದ್ದು ವಲಸೆ ಕಾರ್ಮಿಕರ ಗೋಳು. ಲಾಕ್ ಡೌನ್‌ನಿಂದ ಕರೋನಾ ವೈರಸ್ ಅನ್ನು ಬುಡಸಮೇತ ಇಲ್ಲವಾಗಿಸಲು ಸಾಧ್ಯವಿಲ್ಲ ಅನ್ನೋದು ಸತ್ಯ. ಲಾಕ್ ಡೌನ್‌ನಿಂದ ಸೋಂಕು ಹರಡುವುದನ್ನು ಮಾತ್ರ ತಡೆಗಟ್ಟ ಬಹುದು. ಅದಾಗಿಯೂ ಮೂರು ಅವಧಿಯ ಲಾಕ್ ಡೌನ್ ವೇಳೆ ಇಡೀ ದೇಶ ಕೆಲವೊಂದು ದೃಶ್ಯಗಳನ್ನು ಕಂಡು ಅಕ್ಷರಶಃ ಕಣ್ಣೀರಾಗಿ ಹೋಗಿತ್ತು. ಆದರೆ ಕೇರಳ ಮಾತ್ರ ಅವರನ್ನು ತಮ್ಮ ಅತಿಥಿಗಳೆಂದು ಹೇಳಿ ತಮ್ಮವರಂತೆ ನೋಡಿಕೊಂಡಿತು.

ಕರೋನಾ ಧಾವಿಸಿದ ಬಳಿಕ ಸರ್ಕಾರ ತಮ್ಮ ಜವಾಬ್ದಾರಿಯನ್ನು ಮರೆತು ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಹೇಳಿತು. ಈ ನಡುವೆ ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರ ಮರೆತು ಹೋದಂತೆ ನಟಿಸಿತು. ಆದರೆ ಕೇರಳ ಮಾತ್ರ ಎಲ್ಲರಗಿಂತ ಭಿನ್ನವಾಗಿ ನಿಂತುಕೊಂಡಿತು. ದೇಶದ ಇತರ ಕಡೆಗಳಗಲ್ಲಿ ವಲಸೆ ಕಾರ್ಮಿಕರ ಕಣ್ಣೀರಿನ ಕತೆಗಳು ದೇಶದೆಲ್ಲೆಡೆ ಹರಿದಾಡುತ್ತಿರುವಾಗ, ನಮ್ಮದೇ ದೇಶದ ಕಮ್ಯೂನಿಷ್ಟ್ ಸರ್ಕಾರವಿರುವ ಕೇರಳದ್ದು ಬೇರೆಯೆ ಕತೆಯಾಗಿತ್ತು. ಇಲ್ಲಿ ವಲಸೆ ಕಾರ್ಮಿಕರಿಗೆ ದೇಶದ ಇತರ ಕಡೆಗಳಲ್ಲಿ ಆದಂತಹ ಯಾವುದೇ ಕಷ್ಟಗಳೂ ಇರಲಿಲ್ಲ. ಅಷ್ಟೇ ಅಲ್ಲದೆ ಕೇರಳ ತನ್ನ ಊರನ್ನು ಕಟ್ಟಿದ ಈ ಕಾರ್ಮಿಕರಿಗೆ ವಲಸೆ ಕಾರ್ಮಿಕರು ಎನ್ನುವ ಹೆಸರನ್ನು ಕಿತ್ತೆಸೆದು “ಅತಿಥಿ” ಕಾರ್ಮಿಕರು ಎಂದು ಗೌರವಪೂರ್ವಕವಾಗಿ ಕರೆಯಿತು.

ಕರೋನಾ ಪ್ರಕರಣ ಮೊದಲಿಗೆ ವರದಿಯಾಗಿದ್ದು ಕೇರಳದಲ್ಲೇ. ಇದಕ್ಕಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕರೋನಾ ಪರಿಹಾರವಾಗಿ ಬರೋಬ್ಬರಿ 20 ಸಾವಿರ ಕೋಟಿ ಪ್ಯಾಕೇಜನ್ನು ಘೋಷಿಸಿತು. ಈ ಹೊತ್ತಿಗೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಇಷ್ಟೊಂದು ಮೊತ್ತದ ಪ್ಯಾಕೇಜನ್ನು ಘೋಷಿಸಿರಲಿಲ್ಲ. ಕೇಂದ್ರದ ಆಡಳಿತ ಪಕ್ಷದ ನಾಯಕರು ಕೇರಳದ ಈ ನಡೆಗೆ ತಕರಾರು ಮಾಡಿದರು, ಆದರೂ ಕೇರಳ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ.

ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಕರೆದ ಕೇರಳ ಅವರಿಗಾಗಿ ಸರ್ಕಾರದ ವತಿಯಿಂದಲೇ 15 ಸಾವಿರಕ್ಕಿಂತಲೂ ಹೆಚ್ಚು ಕರೋನಾ ಪರಿಹಾರ ಶಿಬಿರಗಳನ್ನು ತೆರೆದಿತ್ತು. ಇದರೊಂದಿಗೆ ಅಲ್ಲಿನ NGO ಗಳು ಕೂಡಾ 3397 ಪರಿಹಾರ ಶಿಬಿರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದವು. ಎಪ್ರಿಲ್ 17ರಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟಿಗೆ ನೀಡಿದ ಮಾಹಿತಿಯಂತೆ ದೇಶದಾದ್ಯಂತ ಇರುವ ಒಟ್ಟು ಪರಿಹಾರ ಶಿಬಿರಗಳಲ್ಲಿ ಶೇ.69 ಕ್ಕಿಂತ ಹೆಚ್ಚು ಶಿಬಿರಗಳು ಕೇರಳವೊಂದರಲ್ಲೇ ಇತ್ತು. ಇಲ್ಲಿ ಕೇವಲ ಕಾರ್ಮಿಕರನ್ನು ಕೂಡಿ ಹಾಕದೆ ಅವರಿಗೆ ಮನೋರಂಜನೆಗಾಗಿ ಟಿವಿ, ಕ್ಯಾರಮ್, ಚೆಸ್, ಮೊಬೈಲ್ ರೀಚಾರ್ಜ್ ಇತ್ಯಾದಿಗಳ ವ್ಯವಸ್ಥೆ ಮಾಡಿಕೊಟ್ಟಿತು. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಭಾಷೆಗಳನ್ನು ತಮ್ಮದೇ ಭಾಷೆಯಲ್ಲಿ ಮಾತನಾಡುವ ಕೇರಳ, ಈ ಕಾರ್ಮಿಕರೊಂದಿಗಿನ ಸಂವಹನಕ್ಕಾಗಿ ಅಸ್ಸಾಮಿ, ಒಡಿಯಾ, ಹಿಂದಿ, ಬಂಗಾಳಿ ಇತ್ಯಾದಿ ಭಾಷೆಗಳಲ್ಲಿ ಮಾತನಾಡಿತು, ಸಂದೇಶಗಳನ್ನು ಕೊಟ್ಟಿತು, ಪೋಸ್ಟರುಗಳನ್ನು ಹಂಚಿತು. ಇದಲ್ಲವೇ ನಾಡು ಕಟ್ಟಿದವರ ಋಣವನ್ನು ತೀರಿಸುವ ಬಗೆ..?

ಕೇರಳದ ಪರಿಹಾರ ಶಿಬಿರಗಳಲ್ಲಿ 3 ಲಕ್ಷ ಕಾರ್ಮಿಕರು ಆಶ್ರಯ ಪಡೆಯುತ್ತಿದ್ದರು. ಈ ವೇಳೆ ಕರ್ನಾಟಕದ ಪರಿಹಾರ ಶಿಬಿರಗಳಲ್ಲಿ ಇದ್ದ ವಲಸೆ ಕಾರ್ಮಿಕರ ಸಂಖ್ಯೆ 16,138ರಷ್ಟು. ಕೇರಳದ ಈ ಪರಿಹಾರ ಶಿಬಿರಗಳಲ್ಲಿ ಒಂದುವರೆ ಲಕ್ಷ ಕಾರ್ಮಿಕರು ನೇರವಾಗಿ ವಸತಿ ಹಾಗೂ ಉಚಿತ ಊಟವನ್ನೂ ಪಡೆಯುತ್ತಾರೆ. ಇದಕ್ಕಾಗಿಯೆ ದೇಶದೆಲ್ಲೆಡೆ ವಲಸೆ ಕಾರ್ಮಿಕರು ಹಸಿವಿನ ಬೆಂಕಿಯಿಂದ ಧಗದಗಿಸುತ್ತಿದ್ದರೆ ಕೇರಳದ ’ಅತಿಥಿ ಕಾರ್ಮಿಕರು’ ತಾವು ಲಾಕ್‌ಡೌನ್ ನಂತರ ತಮ್ಮ ಕುಟುಂಬವನ್ನು ಸೇರಿಕೊಳ್ಳುತ್ತೇವೆ ಎಂದು ವಿಶ್ವಾಸದಿಂದು ಹೇಳಿದ್ದು. ಅವರ ವಿಶ್ವಾಸಗಳು, ನಿರೀಕ್ಷೆಗಳನ್ನು ಕೇರಳದ ಎಡಪಂಥೀಯ ಸರ್ಕಾರ ಹುಸಿಗೊಳಿಸಲೂ ಇಲ್ಲ. ತಮ್ಮೂರನ್ನು ಕಟ್ಟಿದ ’ಅತಿಥಿ ಕಾರ್ಮಿಕ’ರನ್ನು ಬಹಳ ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿತು. ಕಾರ್ಮಿಕರಿಗೆ ಉಚಿತ ರೈಲು ಪ್ರಯಾಣ, ಊರಿಗೆ ತಲುಪುವವರೆಗಿನ ಆಹಾರ, ರೈಲಿನಲ್ಲಿ ಪೋಲಿಸ್ ಭದ್ರತೆ, ವೈದ್ಯಕೀಯ ಸೌಲಭ್ಯ ಇತ್ಯಾದಿಗಳನ್ನು ನೀಡಿತು. ಕೇರಳದ ಕಾರ್ಯಕ್ಕೆ ಒರಿಸ್ಸಾ ಮುಖ್ಯಮಂತ್ರಿ ಧನ್ಯವಾದವನ್ನೂ ಹೇಳಿದ್ದರು.

ಆಪತ್ತು ಎರಗಿದರೆ ವ್ಯವಸ್ಥೆಯನ್ನು ಹೇಗೆ ನಡೆಸಬೇಕು ಎಂಬುವುದಕ್ಕೆ ಕೇರಳ ಒಂದು ಅತ್ಯುತ್ತಮ ಉದಾಹರಣೆ. ಈ ಹಿಂದೆ ಕೇರಳಕ್ಕೆ ಎರಗಿದ ನಿಫಾ, ಶತಮಾನದ ಪ್ರವಾಹವನ್ನು ಕೇರಳ ಎದುರಿಸಿದ ರೀತಿ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವಂತದ್ದು. ಕೊರೊನಾ ದೇಶಕ್ಕೆ ಎರಗಿದ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿ ಮಾಡಿದ್ದ ಕೇರಳದಲ್ಲಿ, ಈ ಮಹಾಮಾರಿಗೆ ಬಲಿಯಾಗಿದ್ದು ನಾಲ್ವರು ಮಾತ್ರ. ವೃದ್ದರಿಗೆ ಅಪಾಯವೆಂದು ಹೇಳುವ ಈ ಸೋಂಕು ತಗುಲಿಸಿಕೊಂಡ ಭಾರತದ ಅತ್ಯಂತ ಹಿರಿಯ 93 ವರ್ಷದ ವ್ಯಕ್ತಿಯೂ ಗುಣಮುಖರಾಗಿ ತಮ್ಮ ಮನೆಗೆ ಹೋಗುತ್ತಾರೆ.

ಹೀಗೆ ದೇಶದ ಹೃದಯ ಭಾಗದಲ್ಲಿ ವಲಸೆ ಕಾರ್ಮಿಕರು ಸೊರಗಿದ ಹೊಟ್ಟೆಯನ್ನು, ತಮ್ಮ ಸೋತ ಕಾಲುಗಳನ್ನು ಎಳೆದುಕೊಂಡು ಮಟಮಟ ಮಧ್ಯಾಹ್ನ ತಮ್ಮ ಊರ ಕಡೆ ದೃಷ್ಟಿ ಹಾಯಿಸಿ ನಡೆಯುತ್ತಿರುವಾಗ ಕೇರಳದಲ್ಲಿ ವಲಸೆ ಕಾರ್ಮಿಕರನ್ನ ಅತಿಥಿ ಕಾರ್ಮಿಕರೆಂದು ಕರೆದು ಗೌರವಪೂರ್ವಕವಾಗಿ ನಡೆಸಿಕೊಂಡಿತು. ವಾಸ್ತವದಲ್ಲಿ ಇದು ಕೇಂದ್ರ ಸರ್ಕಾರ ಮಾಡಬೇಕಿದ್ದ ಕೆಲಸ. ವಲಸೆ ಕಾರ್ಮಿಕರನ್ನು ಅತಿಥಿಗಳಂತೆ ನೋಡಿಕೊಳ್ಳಬೇಕಿತ್ತು ಎಂದು ಮೋದಿ ಹೇಳಿದ್ದರೆ ಅವರ ಪಾಡು ಬೇರೆಯೇ ಆಗುತ್ತಿತ್ತು. ಆದರೆ ಅವನರನ್ನ ಕಡೆಗಣಿಸಿದ ಕೇಂದ್ರ ಸರ್ಕಾರ ಅವರ ಕಣ್ಣೀರಿನ ಶಾಪ ತಟ್ಟಿಸಿಕೊಂಡಿದೆ. ಕೈಗೂಸುಗಳನ್ನು ಸೊಂಟಕ್ಕೆ ಕಟ್ಟಿಕೊಂಡು ನೆತ್ತಿ ಸೀಳುವ ಬಿಸಿಲಿನಲ್ಲಿ ನಡೆಯುತ್ತಾ ಸಾಗಿದ್ದು ಇಡೀ ಭಾರತದ ಆತ್ಮ ಸಾಕ್ಷಿಯನ್ನು ಕೆಣಕಿದ ಪರಿ.

ಸರ್ಕಾರ ಜನಪರವಾಗಿರುವುದು ಹೇಗೆ ಎಂಬುವುದನ್ನು ಕೇರಳವನ್ನು ನೋಡಿ ಕಲಿಯಬೇಕಿದೆ. ಹೀಗಾಗಿ ಕೇರಳವು ಭಾರತವೆಂಬ ರಾಜ್ಯಗಳ ಒಕ್ಕೂಟ ವ್ಯವಸ್ಥೆಗೆ ಮಾದರಿ.

Click here Support Free Press and Independent Journalism

Pratidhvani
www.pratidhvani.com