ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!
ರಾಷ್ಟ್ರೀಯ

ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!

ಅಮೃತ್ ಮತ್ತು ಯಾಕೂಬ್ ಗುಜರಾತಿನ ಸೂರತ್ ನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದರು. ದುರಾದೃಷ್ಟವಶಾತ್, ಅಮೃತ್ ಊರ ಸೇರಲಾಗದೆ ತನ್ನ ಗೆಳೆಯ‌ ಯಾಕೂಬ್ ಮಡಿಲಲ್ಲಿ ಅಸುನೀಗಿದ್ದಾನೆ.

ಆಶಿಕ್‌ ಮುಲ್ಕಿ

ಯಾಕೂಬ್ ಮತ್ತು ಅಮೃತ್. ಒಬ್ಬ ಹಿಂದೂ ಮತ್ತೊಬ್ಬ ಮುಸ್ಲಿಂ. ಈ ಇಬ್ಬರು ಯುವಕರ ಕುರಿತು ಈಗ ಇಡೀ ದೇಶವೇ ಮಾತನಾಡುತ್ತಿದೆ. ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ಪಡುತ್ತಿರುವ ಬವಣೆ ದೇಶದ ಪ್ರಭುತ್ವದ ಆತ್ಮ ಸಾಕ್ಷಿಯನ್ನು ಕೆಣಕಿದೆ. ಲಕ್ಷಾಂತರ ಕಾರ್ಮಿಕರು ಈ ಲಾಕ್ ಡೌನ್ ಸಹಿಸಿಕೊಂಡು ಬೀದಿಯಲ್ಲಿ ಕಣ್ಣೀರಾಗಿದ್ದನ್ನು ನಾವು ಕಂಡಿದ್ದೇವೆ. ಈ ಎಲ್ಲದರ ಮಧ್ಯೆ ಇದೊಂದು ಸುದ್ದಿ ಈಗ ದೇಶ ಮತ್ತೆ ಕಣ್ಣೀರಾಗುವಂತೆ ಮಾಡಿದೆ.

ಯಾಕೂಬ್, ಅಮೃತ್ ಸೇರಿದಂತೆ ಒಟ್ಟು 70 ಜನ ತಲಾ 4 ಸಾವಿರ ರೂಪಾಯಿ ಕೊಟ್ಟು ಒಂದು ಟ್ರಕ್ ನಲ್ಲಿ ತಮ್ಮ ಊರಿಗೆ ಹೊರಟಿದ್ದರು. ಹೀಗಿರುವಾಗ ದಾರಿ ಮಧ್ಯೆ ಅಮೃತ್ ವಾಂತಿ ಮಾಡೋದಕ್ಕೆ ಶುರುವಿಟ್ಟುಕೊಂಡಿದ್ದಾನೆ. ತಕ್ಷಣ ಇದು ಜತೆಗಿದ್ದ ಇತರರಲ್ಲಿ ಆತಂಕ ಸೃಷ್ಟಿಮಾಡಿದೆ. ಇದು ಕರೋನಾ ಇರಬಹುದು ಎಂದು ಹೇಳಿದ್ದಾರೆ‌. ಅಲ್ಲದೆ ಅಮೃತ್ ನನ್ನು ಇಲ್ಲಿಯೇ ಅರ್ಧ ದಾರಿಗೆ ಬಿಟ್ಟುಬಿಡುವ ನಿರ್ಧಾರಕ್ಕೆ ಬಂದರು. ಅಂತೆಯೇ ಅಮೃತ್ ನನ್ನು ರಸ್ತೆ ಬದಿಯಲ್ಲಿ ಕೂರಿಸಿ ಪ್ರಯಾಣ ಮುಂದುವರೆಸಲು ಮುಂದಾದರು. ಈ ವೇಳೆ ಜೀವದ ಗೆಳಯನನ್ನು ಅರ್ಧ ದಾರಿಯಲ್ಲಿ ಬಿಡಲು ಒಪ್ಪದ ಯಾಕೂಬ್ ಅಭ್ಯಂತರ ತೋರಿದ್ದಾನೆ. ಶತಾಯಗತಾಯ ಅಮೃತ್ ನನ್ನು ಜತೆ ಕರೆದುಕೊಳ್ಳಲು ಒಪ್ಪದ‌ ಕಾರಣ ಯಾಕೂಬ್ ಕೂಡ‌ ಅಮೃತ್ ಜತೆ ಟ್ರಕ್ ನಿಂದ ಇಳಿದು ಬಿಡುತ್ತಾನೆ.

ಅಮೃತ್, ನಿರಂತರವಾಗಿ ವಾಂತಿ ಮಾಡುತ್ತಾ ಸುಸ್ತಾಗಿ ಹೋಗಿದ್ದ. ಆಯಾಸಹೊಂದಿದ ಅಮೃತ್ ನನ್ನು ತನ್ನ ಮಡಿಲಲ್ಲಿ ಕೂರಿಸಿ ದಾರಿಹೋಕರಿಗೆ ಕೈ ಮುಗಿದ ಯಾಕೂಬ್ ಸಹಾಯಕ್ಕಾಗಿ ಅಂಗಲಾಚಿದ. ಆದರೆ ಇದು ಕರೋನಾ ಇರಬಹುದು. ನಮಗೆ ಯಾಕೆ ಇಂಥಾ ಊಸಾಬರಿ ಅಂತೇಳಿ ಸಹಾಯ ಹಸ್ತ ಚಾಚದೆ ಮುಂದಕ್ಕೆ ನಡೆದಿದ್ದಾರೆ. ಹೀಗೆ ಸಹಾಯ ಸಿಗದೆ ಅಸಾಹಯಕನಾಗಿ ತನ್ನ ಮಡಿಲಲ್ಲಿ ಅಮೃತ್ ನನ್ನು ಮಲಗಿಸಿಕೊಂಡಿರುವಾಗಲೇ ಅಮೃತ್ ಕೊನೆಯುಸಿರೆಳೆದಿದ್ದಾನೆ.

ಆ ಬಳಿಕ ವೈಧ್ಯರ ತಂಡವೊಂದು ಬಂದು ಇಬ್ಬರನ್ನೂ ಆಸ್ಪತ್ರೆ ಸೇರಿಸಿದ್ದಾರೆ. ಅಲ್ಲದೇ ಭೋಪಾಲ್ ನ ಶಿವಪುರಿ‌ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಅಮೃತ್ ಗೆ ಹಾಗೂ ಯಾಕೂಬ್ ನಿಗೆ ಕರೋನಾ ಟೆಸ್ಟ್ ನಡೆಸಿದ್ದಾರೆ. ಟೆಸ್ಟ್ ನ ವರದಿ ಬಂದ ಬಳಿಕ ಅಮೃತ್ ಶವಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.

ಅಂದಹಾಗೆ, ಅಮೃತ್ ಮತ್ತು ಯಾಕೂಬ್ ಗುಜರಾತಿನ ಸೂರತ್ ನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದರು. ದುರಾದೃಷ್ಟವಶಾತ್, ಅಮೃತ್ ಊರ ಸೇರಲಾಗದೆ ತನ್ನ ಗೆಳೆಯ‌ ಯಾಕೂಬ್ ಮಡಿಲಲ್ಲಿ ಅಸುನೀಗಿದ್ದಾನೆ.

ಕರೋನಾ ಎಂಬ ಮಹಾಮಾರಿ ಕಣ್ಣೆದುರು ಬಂದು ನಿಲ್ಲುವಾಗಲೂ ಯಾಕೂಬ್ ಜೀವದ ಗೆಳಯನ ಜತೆಗೆ ಜೀವದ ಹಂಗು ತೊರೆದು ನಿಂತಿದ್ದಾನೆ. ಮಾನವೀಯ ಮೌಲ್ಯ ಸತ್ತು ಮಣ್ಣಾಗುವ ಈ ಹೊತ್ತಲಿ‌ ಯಾಕೂಬ್ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾನೆ. ಸದ್ಯ ಯಾಕೂಬ್ ನನ್ನು ಕ್ವಾರಂಟೈನ್ ನಲ್ಲಿ‌ ಇಡಲಾಗಿದೆ.

Click here Support Free Press and Independent Journalism

Pratidhvani
www.pratidhvani.com