ಮೇ 31ರ ವರೆಗೆ ನಾಲ್ಕನೇ ಹಂತದ ಲಾಕ್‌ಡೌನ್;‌ ರಾಜ್ಯದಲ್ಲಿ ಮತ್ತೆ 55 ಹೊಸ ಪ್ರಕರಣ
ರಾಷ್ಟ್ರೀಯ

ಮೇ 31ರ ವರೆಗೆ ನಾಲ್ಕನೇ ಹಂತದ ಲಾಕ್‌ಡೌನ್;‌ ರಾಜ್ಯದಲ್ಲಿ ಮತ್ತೆ 55 ಹೊಸ ಪ್ರಕರಣ

ಮೂರನೇ ಹಂತದ ಲಾಕ್‌ಡೌನ್‌ ಮುಕ್ತಾಯದ ದಿನವಾದ ಇಂದು (ಮೇ 17) ಕೇಂದ್ರ ಸರಕಾರ ನಾಲ್ಕನೇ ಹಂತದ ಲಾಕ್‌ಡೌನ್‌ ವಿಧಿಸಿ ಆದೇಶವನ್ನ ನೀಡಿದೆ. ಆದರೆ ಯಾವುದೇ ಮಾರ್ಗಸೂಚಿ ಬಿಡಗಡೆ ಮಾಡಿಲ್ಲ. ಇನ್ನು ಕರ್ನಾಟಕದಲ್ಲಿ ಇಂದು ಮತ್ತೆ 55 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ.  

ಪ್ರತಿಧ್ವನಿ ವರದಿ

ದೇಶಾದ್ಯಂತ ಮೇ 31ರ ವರೆಗೆ ನಾಲ್ಕನೇ ಹಂತದ ಲಾಕ್‌ಡೌನ್‌ ವಿಸ್ತರಿಸಿ ಕೇಂದ್ರ ಸರಕಾರ ಆದೇಶವನ್ನ ನೀಡಿದೆ. ಮೇ 12 ರಂದು ದೇಶವನ್ನ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಮಾತನಾಡಿದ್ದರು. ಇದೀಗ ಮೂರನೇ ಹಂತದ ಲಾಕ್‌ಡೌನ್‌ ಮುಕ್ತಾಯ ದಿನವಾದ ಮೇ 17 ರಂದು ಮತ್ತೆ ಎರಡು ವಾರಗಳ ಕಾಲ ಲಾಕ್‌ಡೌನ್‌ ವಿಸ್ತರಿಸಿ ಆದೇಶ ನೀಡಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ 4 ನೇ ಹಂತದ ಲಾಕ್‌ಡೌನ್‌ ನಲ್ಲಿ ಇನ್ನಷ್ಟು ಬದಲಾವಣೆಗಳಿರಲಿವೆ ಎಂದಿದ್ದರು. ಆದರೆ ಸದ್ಯ ಲಾಕ್‌ಡೌನ್‌ ಮೇ 31ರ ವರೆಗೆ ವಿಸ್ತರಿಸಿದ ಕೇಂದ್ರ ಯಾವುದೇ ಮಾರ್ಗಸೂಚಿ ಬಿಡುಗಡೆಗೊಳಿಸಿಲ್ಲ.

ಇದರಿಂದಾಗಿ ಕರ್ನಾಟಕ ಸರಕಾರವು ಮುಂದಿನ ಆದೇಶದವರೆಗೆ ಇಲ್ಲವೇ ಮೇ 19ರ ಮಧ್ಯರಾತ್ರಿವರೆಗೆ ಮೂರನೇ ಹಂತದ ಲಾಕ್‌ಡೌನ್‌ ನಲ್ಲಿದ್ದ ಮಾರ್ಗಸೂಚಿಗಳನ್ನೇ ಪಾಲಿಸುವ ಸಾಧ್ಯತೆ ಇದೆ. ಸದ್ಯ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಸಡಿಲಿಕೆ ಇದ್ದು, ಇದು ಇನ್ನಷ್ಟು ಮುಂದುವರಿಯುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ. ಜೊತೆಗೆ ನಗರಗಳಲ್ಲಿ ಬಸ್‌ ಓಡಾಟಗಳೂ ಆರಂಭವಾಗುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

ಇನ್ನು ಕಳೆದ 24 ಗಂಟೆಗಳಲ್ಲಿ 55 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಂಡ್ಯ ಜಿಲ್ಲೆಯೊಂದರಲ್ಲೇ 22 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೆ, ಕಲಬುರಗಿ 10, ಹಾಸನ 6, ಧಾರವಾಡ 4, ಯಾದಗಿರಿ 3, ಕೋಲಾರ 3, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ 2, ವಿಜಯಪುರ ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದು ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಇದುವರೆಗೆ ಕರೋನಾ ಸೋಂಕಿಗೆ 37 ಮಂದಿ ಮೃತಪಟ್ಟಿದ್ದಾರೆ.

Click here Support Free Press and Independent Journalism

Pratidhvani
www.pratidhvani.com