ಲಾಕ್‌ಡೌನ್:‌ 900 ಕಿ.ಮೀ‌ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ
ರಾಷ್ಟ್ರೀಯ

ಲಾಕ್‌ಡೌನ್:‌ 900 ಕಿ.ಮೀ‌ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ

ದಣಿವು ಮತ್ತು ಹಸಿವಿನೊಂದಿಗೆ ಸುಮಾರು 900 ಕಿ.ಮೀ ದೂರವನ್ನು ಕ್ರಮಿಸಿ ಬಂದ 9 ತಿಂಗಳ ಗರ್ಭಿಣಿಯನ್ನೊಳಗೊಂಡ ತಂಡ ಗುರುವಾರ ಬೆಳಗ್ಗೆ ಉತ್ತರ ಪ್ರದೇಶ- ಬಿಹಾರ ಗಡಿಭಾಗದಲ್ಲಿರುವ ಗೋಪಾಲ್‌ಗಂಜ್‌ನ ಪುನರ್ವಸತಿ ಕೇಂದ್ರಕ್ಕೆ ತಲುಪಿದೆ. ಆದರೆ ಆ ತಂಡದಲ್ಲಿದ್ದ ಗರ್ಭಿಣಿ ಹೆರಿಗೆಗಾಗಿ ಸ್ಥಳೀಯ ಆಸ್ಪತ್ರೆಗೆ ತೆರಳಿದಾಗ ಕರೋನಾ ಸೋಂಕು ಶಂಕೆಯಿಂದ ದಾಖಲಿಸಿಕೊಳ್ಳಲು ನಿರಾಕರಿಸಿದ ಘಟನೆ ವರದಿಯಾಗಿದೆ. 

ಫೈಝ್

ಫೈಝ್

ವಲಸೆ ಕಾರ್ಮಿಕರ ಕಾಳಜಿ ಕುರಿತು ತಡವಾಗಿಯಾದರೂ ಎಚ್ಚರಗೊಂಡ ಸರ್ಕಾರ, ವಲಸೆ ಕಾರ್ಮಿಕರಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ತಲುಪಿಸುವಲ್ಲಿ ಈಗಲೂ ಸಂಪೂರ್ಣವಾಗಿ ಸಿದ್ದವಾಗಿಲ್ಲ. ವಿಶೇಷ ‘ಶ್ರಮಿಕ್‌’ ರೈಲು, ಕಾರ್ಮಿಕರಿಗಾಗಿ ಇನ್ನಿತರ ಸಾರಿಗೆ ಸಂಚಾರ ಆರಂಭಗೊಂಡಿದ್ದರೂ ತಮ್ಮೂರುಗಳಿಗೆ ತಲುಪದ ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಳಲ್ಲೇ ಇದ್ದಾರೆ. ಇನ್ನು ಪುನರ್ವಸತಿ ಕೇಂದ್ರಗಳಿಗೆ ತಲುಪಿದ ಕಾರ್ಮಿಕರದ್ದು ಬೇರೆಯದ್ದೇ ಸಮಸ್ಯೆ. ಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಕಳಪೆ ಆಹಾರ ಮತ್ತು ಅಸಮರ್ಪಕ ವೈದ್ಯಕೀಯ ಸವಲತ್ತುಗಳು ಬಡವ ಕಾರ್ಮಿಕರೆಡೆಗೆ ಸರ್ಕಾರ ತೋರುವ ನಿರ್ಲಕ್ಷ್ಯಗಳಿಗೆ ಬೊಟ್ಟು ಮಾಡುತ್ತದೆ.

ವಲಸೆ ಕಾರ್ಮಿಕರ ತಂಡ ನೋಯ್ಡಾದಿಂದ ಕಾಲ್ನಡಿಗೆಯಲ್ಲಿ ಹಾಗೂ ದಾರಿಯಲ್ಲಿ ಸಿಕ್ಕ ಟ್ರಕ್‌ಗಳ ಮೂಲಕ ಪ್ರಯಾಣ ಮಾಡಿ ಬಿಹಾರದ ಗೋಪಾಲ್‌ಗಂಜ್‌ ಜಿಲ್ಲೆಗೆ ತಲುಪಿದೆ. ದಣಿವು ಮತ್ತು ಹಸಿವಿನೊಂದಿಗೆ ಸುಮಾರು 900 ಕಿ.ಮೀ ದೂರವನ್ನು ಕ್ರಮಿಸಿ ಬಂದ 9 ತಿಂಗಳ ಗರ್ಭಿಣಿಯನ್ನೊಳಗೊಂಡ ತಂಡ ಗುರುವಾರ ಬೆಳಗ್ಗೆ ಉತ್ತರ ಪ್ರದೇಶ- ಬಿಹಾರ ಗಡಿಭಾಗದಲ್ಲಿರುವ ಗೋಪಾಲ್‌ಗಂಜ್‌ನ ಪುನರ್ವಸತಿ ಕೇಂದ್ರಕ್ಕೆ ತಲುಪಿದೆ. ಪ್ರಯಾಣ ನಡೆಸಿ ಆಯಾಸಗೊಂಡಿದ್ದ, ತಂಡದಲ್ಲಿದ್ದ 28 ವರ್ಷದ ತುಂಬು ಗರ್ಭಿಣಿಯನ್ನು ಕೇಂದ್ರದಲ್ಲಿ ಆಯಾಸ ನಿವಾರಿಸಿಕೊಳ್ಳಲು ಬರಿ ಪ್ಲಾಸ್ಟಿಕ್‌ ಕುರ್ಚಿಯೊಂದನ್ನು ಒದಗಿಸಿ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಅಸಮರ್ಪಕ ವ್ಯವಸ್ಥೆಯ ವಾಸ್ತವವನ್ನು ಅನಾವರಣಗೊಳಿಸಿದ್ದಾರೆ.

ಗುರುವಾರ ಬೆಳಗ್ಗೆ ಪುನರ್ವಸತಿ ಕೇಂದ್ರ ತಲುಪಿ ಅಂದು ಸಂಜೆಯೇ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ರೇಖಾ ದೇವಿ, ತನ್ನ ಗಂಡ, ನಾಲ್ಕು ಪುಟ್ಟ ಮಕ್ಕಳು ಹಾಗು ಸಂಬಂಧಿಕರು ಸೇರಿದಂತೆ 19 ಮಂದಿಯೊಂದಿಗೆ ನೋಯ್ಡಾದಿಂದ ತಮ್ಮೂರುಗಳಿಗೆ ಹೊರಟಿದ್ದರು. ಸದ್ಯ ಗೋಪಾಲ್‌ಗಂಜ್‌ ತಲುಪಿ ಮಗುವಿಗೆ ಜನ್ಮ ನೀಡಿರುವ ರೇಖಾದೇವಿ ತಮ್ಮೂರು ತಲುಪಲು ಇನ್ನೂ 300 ಕಿ.ಮೀ ಕ್ರಮಿಸಬೇಕು. ಗುರುವಾರ ಮಧ್ಯಾಹ್ನ ದೇವಿಯನ್ನು ಸಂಪರ್ಕಿಸಿದ ‘ದಿ ಪ್ರಿಂಟ್’ ಪ್ರತಿನಿಧಿಯೊಂದಿಗೆ ಆಸುಪಾಸು 4 ತಾಸುಗಳ ಕಾಲ ನಿಂತೇ ಇರುವುದಾಗಿ ನೋವು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪ್ರಯಾಣಿಸುತ್ತಿರುವ ನಮ್ಮನ್ನು ಉತ್ತರ ಪ್ರದೇಶ- ಬಿಹಾರ ಗಡಿಯಲ್ಲಿ ಟ್ರಕ್‌ನಿಂದ ಇಳಿಸಲಾಯಿತು.

ಯಾವಾಗ ಬೇಕಾದರೂ ಹೆರುವಂತಿದ್ದ ಅವಳ ಪರಿಸ್ಥಿತಿಯನ್ನು ಕಂಡು ಪುನರ್ವಸತಿ ಕೇಂದ್ರಕ್ಕೆ ತಲುಪಿಸುವಂತೆ ಪೋಲೀಸರನ್ನು ಕೇಳಿಕೊಂಡೆವು. ಅವರು ನಿರಾಕರಿಸಿದ್ದರಿಂದ ನಮ್ಮೊಂದಿಗೆ ಸೇರಿ ಆಕೆಯೂ 10 ಕಿ.ಮೀ ನಡೆದು‌ ಪುನರ್ವಸತಿ ಕೇಂದ್ರ ತಲುಪಬೇಕಾಯಿತೆಂದು ದೇವಿಯ ಸಂಬಂಧಿಕರೊಬ್ಬರು ಹೇಳಿದ್ದಾರೆ.

ಗೋಪಾಲ್‌ಗಂಜ್‌ನ ಎಸ್‌ಪಿಗೆ ಪ್ರಿಂಟ್‌ ವರದಿಗಾರರು ಗರ್ಭಿಣಿಯ ಅವಸ್ಥೆಯನ್ನು ತಿಳಿಸಿದ ಬಳಿಕ ಮಧ್ಯಾಹ್ನ ಅವರಿಗೆ ಆಂಬ್ಯುಲೆನ್ಸ್‌ ಒದಗಿಸಲಾಯಿತು. ಸಂಜೆ 5:45ರ ವೇಳೆಗೆ ಜಿಲ್ಲಾ ಸಾದರ್‌ ಆಸ್ಪತ್ರೆಯಲ್ಲಿ ಹೆರಿಗೆಯಾದ ದೇವಿಯನ್ನು ಮೊದಲು ಆಸ್ಪತ್ರೆಯ ವೈದ್ಯಾಧಿಕಾರಿಗಳು ದಾಖಲು ಮಾಡಲು ನಿರಾಕರಿಸಿದರು. ಅವರಿಗೆ ಕೋವಿಡ್-19‌ ಶಂಕೆ ಇರುವುದರಿಂದ ದಾಖಲು ಮಾಡಲು ನಿರಾಕರಿಸಲಾಗಿದೆಯೆಂದು ‘ದಿ ಪ್ರಿಂಟ್’ ವರದಿ ಮಾಡಿದೆ.

ಆದರೆ ಇದನ್ನು ಅಲ್ಲಗೆಳೆದಿರುವ ಗೋಪಾಲ್‌ಗಂಜ್‌ನ ಜಿಲ್ಲಾ ಮ್ಯಾಜಿಸ್ಟ್ರೆಟ್‌ ಅರ್ಷದ್‌ ಅಝೀಝ್‌, ಪುನರ್ವಸತಿ ಕೇಂದ್ರದಲ್ಲಿ ದೇವಿ ಕೊನೆಯ ಹಂತದ ಗರ್ಭಾವಸ್ಥೆಯ ಕುರಿತು ಆಕೆಯ ಸಂಬಂಧಿಕರು ವೈದ್ಯರಿಗೆ ತಿಳಿಸಿರಲಿಲ್ಲ, ಕೋವಿಡ್‌-19 ಸ್ಕ್ರೀನಿಂಗ್‌ ಮಾಡುವಾಗಲೂ ಆಕೆಗೆ ಹೆರಿಗೆ ನೋವು ಕಾಣಿಸಿರುವುದನ್ನು ನಮ್ಮ ಬಳಿ ಹೇಳಿಕೊಂಡಿಲ್ಲ ಎಂದಿದ್ದಾರೆ.

ದೇವಿಗೆ 8 ತಿಂಗಳಷ್ಟೇ ತುಂಬಿದ್ದು ಹಾಗಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಿಲ್ಲ ದೇವಿಯನ್ನು ದಾಖಲು ಮಾಡಲು ಜಿಲ್ಲಾಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ ಎಂದು ದೇವಿಯ ಗಂಡ ಯಾದವ್‌ ಹೇಳಿದ್ದಾರೆ. ಕೊನೆಗೂ ಹಿರಿಯ ಜಿಲ್ಲಾ ಆಡಳಿತಾಧಿಕಾರಿಗಳು ಆಸ್ಪತ್ರೆಯ ಆಡಳಿತ ಮಂಡಳಿಗೆ ದಾಖಲು ಮಾಡಲು ಆದೇಶ ನೀಡಿದ ಬಳಿಕ ಗರ್ಭಿಣಿ ಸ್ತ್ರೀಯನ್ನು ಅಡ್ಮಿಟ್‌ ಮಾಡಲಾಯಿತು.

ಆಕೆಗೆ ಕರೋನಾ ಸೋಂಕು ತಗುಲಿರುವ ಅನುಮಾನದ ಹಿನ್ನಲೆಯಲ್ಲಿ ಆಸ್ಪತ್ರೆಯ ವೈದ್ಯರು ಆಕೆಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿಕೊಂಡಿದ್ದರು ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಹಿರಿಯ ಆಡಳಿತ ಅಧಿಕಾರಿಗಳು ʼದಿ ಪ್ರಿಂಟ್‌ʼ ಬಳಿ ಹೇಳಿಕೊಂಡಿದ್ದಾರೆ.

ಈಗಾಗಲೇ ಆಸ್ಪತ್ರೆಗೆ ದಾಖಲಿಸಬೇಕಾದ ಸಮಯ ಕಳೆದಿದೆ. ಆದಷ್ಟು ಬೇಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸದಿದ್ದರೆ ಪರಿಸ್ಥಿತಿ ಗಂಭಿರವಾಗುತ್ತದೆ ಎಂದು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯೊಬ್ಬರು ʼದಿ ಪ್ರಿಂಟ್‌ʼ ಬಳಿ ಹೇಳಿಕೊಂಡಿರುವುದಾಗಿ ವರದಿ ಮಾಡಿದೆ.

Click here Support Free Press and Independent Journalism

Pratidhvani
www.pratidhvani.com