ಕರೋನಾ ಲಾಕ್‌ ಡೌನ್‌ ; ದೇಶದ ವಸತಿ ರಹಿತರಿಗೆ ಇನ್ನೂ ಸಿಗದ ಸರ್ಕಾರಿ ಸೌಲಭ್ಯ
ರಾಷ್ಟ್ರೀಯ

ಕರೋನಾ ಲಾಕ್‌ ಡೌನ್‌ ; ದೇಶದ ವಸತಿ ರಹಿತರಿಗೆ ಇನ್ನೂ ಸಿಗದ ಸರ್ಕಾರಿ ಸೌಲಭ್ಯ

ದೆಹಲಿ, ಮಹಾರಾಷ್ಟ್ರ, ಕೇರಳ ರಾಜ್ಯಗಳು ವಸತಿ ರಹಿತರಿಗೆ ಆರೋಗ್ಯ ತಪಾಸಣೆ ನಡೆಸುತ್ತಿವೆ. ಸಮೀಕ್ಷೆಯ ಪ್ರಕಾರ ಈ ವಸತಿ ರಹಿತರ ಬಳಿ ಯಾವುದೇ ದಾಖಲಾತಿ ಇಲ್ಲ. ಇದರಿಂದ ಆಹಾರ, ಆರೋಗ್ಯ, ನೀರು, ನೈರ್ಮಲ್ಯ ಸೌಲಭ್ಯಗಳು ತಲುಪಿಲ್ಲ. ಆದರೆ ಇಂಡೋ ಗ್ಲೋಬಲ್ ‌ಸೋಷಿಯಲ್‌ ಸರ್ವೀಸ್‌ ಸೊಸೈಟಿ ನಡೆಸಿರುವ ಸಮೀಕ್ಷೆಯಲ್ಲಿ ಅವರ ಯೋಗಕ್ಷೇಮಕ್ಕಾಗಿ ಕಿಂಚಿತ್ತೂ ಕಾಳಜಿ ವಹಿಸಿಲ್ಲ ಎಂದಿದೆ. 

ಕೋವರ್ ಕೊಲ್ಲಿ ಇಂದ್ರೇಶ್

ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕರೋನಾ ಎಂಬ ಮಹಾಮಾರಿಯ ಕಾಟದಿಂದಾಗಿ ಜನಜೀವನವೇ ಅಸ್ಯವ್ಯಸ್ಥಗೊಂಡಿದೆ. ಇಡೀ ದೇಶಾದ್ಯಂತ ಲಾಕ್‌ ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಕಡು ಬಡವರು ಮತ್ತು ಮದ್ಯಮ ವರ್ಗದ ಕೋಟ್ಯಾಂತರ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಕೇಂದ್ರ ಸರ್ಕಾರ ಎಲ್ಲರಿಗೂ ಸೂಕ್ತ ಪಡಿತರ ನೀಡಲಾಗುವುದೆಂದೂ ಮೊದಲೇ ಘೋಷಿಸಿತ್ತು. ನಂತರ 20 ಲಕ್ಷ ರೂಪಾಯಿಗಳ ವಿಶೇಷ ಪ್ಯಾಕೇಜ್‌ನ್ನೂ ಘೋಷಿಸಿದೆ. ಅದರೆ ದೇಶದಲ್ಲಿರುವ ಸುಮಾರು 1.77 ಲಕ್ಷ ವಸತಿ ರಹಿತ ಕಡು ಬಡವರ ಸ್ಥಿತಿ ದಯನೀಯವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ದೇಶದ 16 ರಾಜ್ಯಗಳಲ್ಲಿರುವ ಶೇಕಡಾ 40ರಷ್ಟು ವಸತಿರಹಿತರ ಬಗ್ಗೆ ರಾಜ್ಯ ಸರ್ಕಾರಗಳು ಉಲ್ಲೇಖವನ್ನೇ ಮಾಡಿಲ್ಲ.

ದೆಹಲಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತಮ್ಮಲ್ಲಿರುವ ವಸತಿ ರಹಿತರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ನಡೆಸುತ್ತಿವೆ. ಸಮೀಕ್ಷೆಯ ಪ್ರಕಾರ ಈ ವಸತಿರಹಿತರ ಬಳಿ ಯಾವುದೇ ದಾಖಲಾತಿ ಇಲ್ಲ. ಇದರಿಂದ ಆಹಾರ, ಆರೋಗ್ಯ, ನೀರು, ನೈರ್ಮಲ್ಯ, ಸೌಲಭ್ಯಗಳು ಇವರಿಗೆ ತಲುಪಿಲ್ಲ. ಕೋವಿಡ್‌-19 ಕುರಿತಂತೆ ಬಹುಶಃ ಪ್ರತಿದಿನವೂ ಈವರೆಗೂ ನೂರಾರು ಸುತ್ತೋಲೆಗಳನ್ನು ಸರ್ಕಾರಗಳು ಹೊರಡಿಸಿವೆ. ಆದರೆ ಇಂಡೋ ಗ್ಲೋಬಲ್‌ ಸೋಷಿಯಲ್‌ ಸರ್ವೀಸ್‌ ಸೊಸೈಟಿ ಎಂಬ ಎನ್‌ಜಿಓ ವಸತಿರಹಿತರ ಕುರಿತೇ ನಡೆಸಿರುವ ಸಮೀಕ್ಷೆಯಲ್ಲಿ ಅವರ ಯೋಗಕ್ಷೇಮಕ್ಕಾಗಿ ಕಿಂಚಿತ್ತೂ ಕಾಳಜಿ ವಹಿಸಿಲ್ಲ ಎಂದು ತಿಳಿದು ಬಂದಿದೆ.

ಗುಜರಾತ್‌ , ಹರ್ಯಾಣ, ಹಿಮಾಚಲ ಪ್ರದೇಶ, ಸಿಕ್ಕಿಂ, ತಮಿಳುನಾಡು, ಉತ್ತರ ಪ್ರದೇಶ,ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಅಂತ್ಯೋದಯ ಅನ್ನ ಯೋಜನ ಎಂಬ ಕೇಂದ್ರ ಸರ್ಕಾರದ ಯೋಜನೆಯಂತೆ ಮತ್ತು ರಾಜ್ಯ ಸರ್ಕಾರದ ಆದ್ಯತಾ ಕುಟುಂಬ ಎಂಬ ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಬಡವರಿಗೆ ಪಡಿತರ ಒದಗಿಸುತ್ತಿವೆ. ಆಂಧ್ರ ಪ್ರದೇಶ, ಅರುಣಾಚಲ, ಬಿಹಾರ, ಚತ್ತೀಸ್‌ ಘಡ, ದೆಹಲಿ, ಜಾರ್ಖಂಡ್‌ , ಕರ್ನಾಟಕ, ಕೇರಳ, ಮದ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಾಸ್ಥಾನ, ಮತ್ತು ತ್ರಿಪುರಾ ರಾಜ್ಯಗಳಲ್ಲಿ ವಸತಿ ರಹಿತರಿಗೆ ಅಹಾರ ಒದಗಿಸುವ ಸೂಚನೆ ನೀಡಲಾಗಿದೆ. ಆದರೆ ವಸತಿ ರಹಿತರಿಗೆ ಬೇಯಿಸಿದ ಆಹಾರ ಒದಗಿಸಲು ಸೂಕ್ತ ಅಡುಗೆ ಕೋಣೆಗಳೇ ಇಲ್ಲ. ಮುಂದಿನ 6 ತಿಂಗಳಿನಲ್ಲಿ ವಸತಿ ರಹಿತರ ಬದುಕು ಇನ್ನಷ್ಟು ದುರ್ಬರವಾಗಲಿದೆ ಎಂದು ಸಾಮಾಜಿಕ ಹೋರಾಟಗಾರ ಬ್ರಿಜೇಶ್ ಆರ್ಯ ಹೇಳುತ್ತಾರೆ. ಲಾಕ್‌ ಡೌನ್‌ ಒಂದು ವೇಳೆ ಮುಗಿದರೂ ಈ ವಸತಿರಹಿತರಿಗೆ ಮಳೆಗಾಲದಲ್ಲಿ ಕೆಲಸ ಸಿಗುವುದೂ ಇಲ್ಲ ಜತೆಗೇ ಇವರಿಗೆ ಕುಡಿಯುವ ನೀರಿನ ಕೊರತೆ , ಕಳಪೆ ಆಹಾರ ಸೇವಿಸುವುದರಿಂದ ಖಾಯಿಲೆಗಳಿಗೆ ಬಹಳ ಬೇಗ ತುತ್ತಾಗುತ್ತಾರೆ ಎಂದು ಅವರು ಹೇಳಿದರು.

ಕಳೆದ ಮೇ 3 ರಂದು ಮಹಾರಾಷ್ಟ್ರ, ದೆಹಲಿ ಸರ್ಕಾರಗಳು ವಸತಿ ರಹಿತರಿಗೆ ನಿಯಮಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಸೂಚಿಸಿದವು. ಆದರೆ ಕೇರಳ ಸರ್ಕಾರ ಮಾತ್ರ ವಸತಿರಹಿತರಿಗೆ ಜೀವನ ಭದ್ರತೆ ಯನ್ನು ಒದಗಿಸಿಕೊಟ್ಟಿದೆ. ಆಂಧ್ರ ಪ್ರದೇಶ, ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾತ್ರ ಕಾರ್ಮಿಕರಿಗೆ ಸ್ಯಾನಿಟೈಸರ್ಸ್‌ , ಮುಖ ಮತ್ತು ಕೈ ಗವುಸುಗಳನ್ನು ಒದಗಿಸುವ ಬಗ್ಗೆ ಮಾತಾಡಿವೆ. ಆಂಧ್ರ, ದೆಹಲಿ, ಕರ್ನಾಟಕ, ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾತ್ರ ವಸತಿರಹಿತರಿಗೆ ಕೋವಿಡ್‌-19 ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಪ್ರಸ್ತಾಪಿಸಿವೆ.

2011 ರ ಜನಗಣತಿಯ ಪ್ರಕಾರ ದೇಶದಲ್ಲಿ 1.77 ಮಿಲಿಯನ್‌ ವಸತಿ ರಹಿತರಿದ್ದಾರೆ ಎಂದು ಹೇಳಲಾಗಿದ್ದರೂ ವಾಸ್ತವವಾಗಿ ಇವರ ಸಂಖ್ಯೆ ಮೂರು ಮಿಲಿಯನ್‌ ಗೂ ಅಧಿಕವಾಗಿದೆ ಎಂದು ಹೇಳಲಾಗಿದೆ. ವಸತಿರಹಿತರ ಹಕ್ಕುಗಳಿಗಾಗಿಯೇ ಹೋರಾಡುತ್ತಿರುವ ಇಂಡೋ-ಗ್ಲೋಬಲ್‌ ಸೋಷಿಯಲ್‌ ಸರ್ವೀಸ್‌ ಸೊಸೈಟಿಯು ಕಳೆದ ಮೇ 2019 ರಂದು ಸಮೀಕ್ಷೆಯನ್ನು ನಡೆಸಿ ನಗರ ವಸತಿರಹಿತರ ತೊಂದರೆಗಳನ್ನು ಗುರುತಿಸಲು ಪ್ರಯತ್ನಿಸಿತು. ಆಗ ತಿಳಿದುಬಂದದ್ದೇನೆಂದರೆ ಶೇಕಡಾ 80ರಷ್ಟು ವಸತಿರಹಿತರು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಗಳ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಇವರಲ್ಲಿ ಶೇಕಡಾ 60ರಷ್ಟು ವಸತಿರಹಿತರು ನಗರ ಪ್ರದೇಶಗಳಲ್ಲೇ ಹುಟ್ಟಿದ್ದಾರೆ. ಸಮೀಕ್ಷೆಯಲ್ಲಿ 15 ನಗರಗಳ 4382 ಜನರನ್ನು ಮಾತಾಡಿಸಲಾಗಿತ್ತು. ಇವರಲ್ಲಿ ಶೇಕಡಾ 41 ರಷ್ಟು ಜನರಿಗೆ ಯಾವುದೇ ವೈದ್ಯಕೀಯ ಸೌಲಭ್ಯ ಲಭಿಸಿಲ್ಲ. ಅಷ್ಟೇ ಅಲ್ಲ ಇವರಲ್ಲಿ ಶೇಕಡಾ 45ರಷ್ಟು ಜನರು ಆಸ್ಪತ್ರೆ ಮತ್ತು ಕ್ಲಿನಿಕ್‌ ಗಳಿಂದ ಕೇವಲ ಒಂದು ಕಿಲೋಮೀಟರ್‌ ದೂರದಲ್ಲೇ ವಾಸಿಸುತಿದ್ದಾರೆ. ಇವರಲ್ಲಿ ವಸತಿರಹಿತ ಮಹಿಳೆಯರು ಅಪೌಷ್ಟಿಕತೆ , ಮಾನಸಿಕ ಅರೋಗ್ಯ ಸಮಸ್ಯೆ , ಗರ್ಭ ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಎಂದೂ ಸಮೀಕ್ಷೆ ಹೇಳಿದೆ.

ವಸತಿರಹಿತರಲ್ಲಿ ಶೇಕಡಾ 18ರಷ್ಟು ಜನರಿಗೆ ಮಾತ್ರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪಡಿತರ ಸಿಗುತ್ತಿದೆ. ದೇಶದ ವಸತಿರಹಿತರಿಗೂ ಉತ್ತಮ ಬದುಕು ಕಲ್ಪಿಸಿಕೊಟ್ಟು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಿನ ಆರು ತಿಂಗಳವರೆಗೆ ಅವರಿಗೆ ನಿತ್ಯವೂ ಸೂಕ್ತ ಬೇಯಿಸಿದ ಪೌಷ್ಟಿಕ ಆಹಾರವನ್ನು ಒದಗಿಸಿಕೊಡಬೇಕಿದೆ.ಎಲ್ಲರಿಗೂ ಮುಖಗವುಸು, ಕೈಗವಸು, ಸೋಪು, ಸ್ಯಾನಿಟೈಸರ್‌ ಗಳನ್ನು ಒದಗಿಸಬೇಕಾಗಿದೆ. ಅನೇಕ ಕಡೆಗಳಲ್ಲಿ ವಸತಿರಹಿತರಿಗೆ ಅವರಿರುವ ಸ್ಥಳಗಳಲ್ಲೇ ಕ್ವಾರಂಟೈನ್‌ ಮಾಡಲಾಗುತ್ತಿದೆ. ಅವರಿಗೆ ಸರ್ಕಾರೀ ಸಾಮೂಹಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಿಸಬೇಕಿದೆ. ಬಹುತೇಕರು ನಿತ್ಯವೂ ಶೌಚಾಲಯ ಶುಲ್ಕ ನೀಡಿ ಬಳಸಬೇಕಾಗಿದೆ. ಇದರಿಂದ ಇವರಿಗೆ ವಿನಾಯ್ತಿ ನೀಡಬೇಕಾಗಿದೆ. ವಸತಿರಹಿತರು ವಾಸಿಸುವ ಪ್ರದೇಶಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಅತ್ಯಗತ್ಯವಾಗಿದ್ದು ರಾಜ್ಯ ಸರ್ಕಾರಗಳು ಕೂಡಲೇ ಇತ್ತ ಗಮನ ಹರಿಸಿ ಅವರಿಗೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ. ಏಕೆಂದರೆ ನಮ್ಮ ಸಂವಿಧಾನವು ಸರ್ವರಿಗೂ ಸಮಾನವಾಗಿ ಬದುಕುವ ಮೂಲಭೂತ ಹಕ್ಕನ್ನು ನೀಡಿದೆ. ಆದರೆ ಇದನ್ನು ಸಮರ್ಪಕವಾಗಿ ಜಾರಿಗೊಳಿಸಲು ನಮ್ಮ ಸರ್ಕಾರಗಳು ಮನಸ್ಸು ಮಾಡಬೇಕಿದೆ. ರಾಜಕೀಯ ಇಚ್ಚಾಶಕ್ತಿ ಪ್ರಕಟಿಸಬೇಕಿದೆ ಹಾಗಾದಲ್ಲಿ ಮಾತ್ರ ಕಡು ಬಡವರು ಬದುಕಿನಲ್ಲಿ ನೆಮ್ಮದಿ ಕಾಣಬಹುದು.

Click here Support Free Press and Independent Journalism

Pratidhvani
www.pratidhvani.com