ವಿದೇಶಿ ಪ್ರಯಾಣಿಕರ  ‘ಸ್ಕ್ರೀನಿಂಗ್‌’ ನಲ್ಲಿ ಎಡವಿದ ಕೇಂದ್ರ ಸರಕಾರ; RTI ಮಾಹಿತಿಯಲ್ಲಿ ಬಹಿರಂಗ
ರಾಷ್ಟ್ರೀಯ

ವಿದೇಶಿ ಪ್ರಯಾಣಿಕರ ‘ಸ್ಕ್ರೀನಿಂಗ್‌’ ನಲ್ಲಿ ಎಡವಿದ ಕೇಂದ್ರ ಸರಕಾರ; RTI ಮಾಹಿತಿಯಲ್ಲಿ ಬಹಿರಂಗ

ವಿದೇಶಿ ಪ್ರಯಾಣಿಕರಿಂದಲೇ ಸೋಂಕು ಹರಡುತ್ತದೆ ಎನ್ನುವ ಕಾರಣಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ವ್ಯವಸ್ಥೆಯನ್ನ ಜನವರಿ ತಿಂಗಳಾರ್ಧದಲ್ಲೇ ಮಾಡಲಾಗಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ತನ್ನ ಟ್ವಿಟ್ಟರ್‌ ನಲ್ಲಿ ತಿಳಿಸಿದ್ದರು. ಆದರೆ ನಿಜಕ್ಕೂ ಸ್ಕ್ರೀನಿಂಗ್‌ ವ್ಯವಸ್ಥೆಯನ್ನ ಮಾಡಿತ್ತೇ ಅನ್ನೋದನ್ನ RTI ಮೂಲಕ ಸಾಕೇತ್‌ ಗೋಖಲೆ ಮಾಹಿತಿ ಕೇಳಿದ್ದು, ಕೇಂದ್ರ ಸರಕಾರ ಎಡವಟ್ಟು ಬಹಿರಂಗವಾಗಿದೆ.

ಮೊಹಮ್ಮದ್‌ ಇರ್ಷಾದ್‌

ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಇದೀಗ ಮತ್ತೆ ವಿದೇಶಿ ಹಾಗೂ ಅನ್ಯರಾಜ್ಯಗಳ ಪ್ರಯಾಣಿಕರು ಪ್ರಯಾಣದಿಂದಾಗಿ ಸೋಂಕು ಮತ್ತಷ್ಟು ಉಲ್ಬಣಗೊಂಡಿದೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದಂತೆ, ಸೋಂಕಿಗೆ ಔಷಧ ಪತ್ತೆ ಹಚ್ಚುವವರೆಗೂ ಹಾಗೇ ಇರಲಿದ್ದು, ಅದರ ಜೊತೆಗೆ ನಾವು ಬದುಕುವುದನ್ನ ಕಲಿಯಬೇಕಿದೆ. ಆದರೆ ಭಾರತದಲ್ಲಿ ಈಗಾಗಲೇ ಮೂರು ಹಂತದ ಲಾಕ್‌ಡೌನ್‌ಗಳು ವಿಧಿಸಲ್ಪಟ್ಟರೂ ಕರೋನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೂ ಲಾಕ್‌ಡೌನ್‌ ಭಾರೀ ಸಡಿಲಿಕೆ ಕಾಣಬಹುದು. ಆದರೆ ಆರಂಭದಲ್ಲಿ ಸರಕಾರ ಮಾಡಿದ ಕೆಲವು ಎಡವಟ್ಟುಗಳು ಸೋಂಕು ಅತಿಯಾಗಲು ಕಾರಣ ಎನ್ನಲಾಗಿದೆ.

ಆರಂಭಿಕ ಹಂತದಲ್ಲಿ ವಿದೇಶಿ ಪ್ರಯಾಣಿಕರಿಂದಲೇ ಸೋಂಕು ಹರಡುತ್ತದೆ ಎನ್ನುವ ಕಾರಣಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ವ್ಯವಸ್ಥೆಯನ್ನ ಜನವರಿ ತಿಂಗಳಾರ್ಧದಲ್ಲೇ ಮಾಡಲಾಗಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ತನ್ನ ಅಧಿಕೃತ ಖಾತೆಯಲ್ಲಿ ಮಾರ್ಚ್‌ 15 ರಂದು ಮಾಡಿದ್ದ ಟ್ವಿಟ್ಟರ್‌ ನಲ್ಲಿ ತಿಳಿಸಿದ್ದರು. ಆದರೆ ದೇಶದಲ್ಲಿ ಮೊದಲ ಕರೋನಾ ಸೋಂಕು ಪತ್ತೆಯಾಗಿದ್ದು ಜನವರಿ 30 ರಂದು ಕೇರಳದ ವಿದ್ಯಾರ್ಥಿಗಳಿಂದ. ಕರೋನಾ ಮೂಲ ಚೀನಾದಿಂದ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಅದಾಗಲೇ ಎಚ್ಚೆತ್ತುಕೊಂಡು ಕ್ವಾರೆಂಟೈನ್‌, ಸ್ಕ್ರೀನಿಂಗ್‌ ಮಾಡಬೇಕಿದ್ದ ಸರಕಾರ ಮಾರ್ಚ್‌ ತನಕ ಅಂತಹ ಗೋಜಿಗೆ ಹೋಗದೇ ಇರೋದೆ ಸೋಂಕು ಉಲ್ಬಣಿಸಲು ಕಾರಣವಾಯಿತು. ಆಯಾಯ ಜಿಲ್ಲಾಡಳಿತ ಆರಂಭಿಕ ಹಂತದಲ್ಲಿ ಕ್ವಾರೆಂಟೈನ್‌ ಜವಾಬ್ದಾರಿ ವಹಿಸಿಕೊಂಡಿದ್ದರೆ, ವಿದೇಶದಿಂದ ಬರೋ ಸೋಂಕು ಸುಲಭವಾಗಿ ದೇಶವನ್ನ ಸೇರುತ್ತಿರಲಿಲ್ಲ. ಆದರೆ ದೇಶದಲ್ಲಿ ಸ್ಕ್ರೀನಿಂಗ್‌ ಮಾಡಬೇಕಾದ ಪರಿಕರಗಳೇ ಇರಲಿಲ್ಲ ಅನ್ನೋದು ಕೂಡಾ ಈಗಾಗಲೇ ತಿಳಿದಿರುವ ಸತ್ಯ.

ಆದರೆ ನಿಜಕ್ಕೂ ಇಂತಹ ವ್ಯವಸ್ಥೆಯನ್ನ ಕೇಂದ್ರ ಸರಕಾರ ಪ್ರತೀ ವಿಮಾನ ನಿಲ್ದಾಣಗಳಲ್ಲಿ ಇಂತಹ ಸ್ಕ್ರೀನಿಂಗ್‌ ವ್ಯವಸ್ಥೆಯನ್ನ ಮಾಡಿತ್ತೇ ಅನ್ನೋದನ್ನ RTI ಮೂಲಕ ಸಾಕೇತ್‌ ಗೋಖಲೆ ಮಾಹಿತಿ ಕೇಳಿದ್ದು, ಆರಂಭಿಕ ಹಂತದಲ್ಲಿ ಕೇಂದ್ರ ಸರಕಾರ ಮಾಡಿದ ಎಡವಟ್ಟನ್ನ ಸಾಕೇತ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತ ಸರಕಾರದ ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಪಡೆದ ಮಾಹಿತಿಗೂ, ಪ್ರಧಾನಿ ಮೋದಿ ಮಾತಿಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿದೆ. ಕಾರಣ, ಸಾಕೇತ್‌ ಗೋಖಲೆ ಜನವರಿ 15 ರಿಂದ ಮಾರ್ಚ್‌ 18ರ ವರೆಗಿನ ಮಾಹಿತಿಯನ್ನ RTI ನಲ್ಲಿ ಪಡೆದಿದ್ದು ಒಂದಿಷ್ಟು ಎಡವಟ್ಟುಗಳು ಎದ್ದು ಕಾಣುತ್ತಿವೆ. ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಕರೋನಾ ಮಾರಣಹೋಮಕ್ಕೆ ತುತ್ತಾದ ಇಟೆಲಿಯ ಆರಂಭಿಕ ಹಂತದಲ್ಲಿ ಆಗಮಿಸಿದ ಪ್ರಯಾಣಿಕರನ್ನೂ ಫೆಬ್ರವರಿ 26ರ ತನಕ ಥರ್ಮಲ್‌ ಸ್ಕ್ರೀನಿಂಗ್‌ ಗೆ ಒಳಪಡಿಸಿರಲಿಲ್ಲ ಅನ್ನೋದನ್ನ RTI ನ ಈ ಮಾಹಿತಿ ಬಹಿರಂಗಪಡಿಸಿದೆ.

ಜನವರಿ 17ರಂದು ಆರಂಭವಾದ ವಿದೇಶಿ ಪ್ರಯಾಣಿಕರ ಥರ್ಮಲ್‌ ಸ್ಕ್ರೀನಿಂಗ್‌ ಅನ್ನೋದು ಫೆಬ್ರವರಿ ಆರಂಭದ ವರೆಗೂ ಕೇವಲ ಚೀನಿ ಹಾಗೂ ಹಾಂಕಾಂಗ್‌ ಪ್ರಯಾಣಿಕರಿಗಷ್ಟೇ ಸೀಮಿತವಾಗಿದ್ದವು. ಅದು ಕೇವಲ ಮುಂಬೈ, ದೆಹಲಿ, ಕೋಲ್ಕತ್ತಾ ವಿಮಾನ ನಿಲ್ದಾಣಗಳಿಗೆ ಮಾತ್ರ ಸೀಮಿತವಾಗಿದ್ದವು. ಆನಂತರ ಜನವರಿ 17 ರಿಂದ ಚೆನ್ನೈ, ಹೈದರಾಬಾದ್‌, ಕೊಚ್ಚಿ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲೂ ವಿಸ್ತರಣೆಗೊಂಡು ಚೀನಾ ಹಾಗೂ ಹಾಂಕಾಗ್‌ ಪ್ರಯಾಣಿಕರನ್ನ ಪರೀಕ್ಷೆಗೊಳಪಡಿಸಲಾಯಿತು. ಫೆಬ್ರವರಿ 2ರ ನಂತರ ಥಾಯ್ಲಾಂಡ್‌, ಸಿಂಗಾಪುರ ದೇಶದ ಪ್ರಯಾಣಿಕರನ್ನೂ ದೇಶದ ಬಹುತೇಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್‌ ಪರೀಕ್ಷೆ ನಡೆಸಲು ಆರಂಭಿಸಲಾಯಿತು. ಫೆಬ್ರವರಿ 22 ಕ್ಕೆ ಇದು ಇನ್ನಷ್ಟು ರಾಷ್ಟ್ರಗಳ ಪ್ರಯಾಣಿಕರಿಗೂ ಅನ್ವಯಿಸಲ್ಪಟ್ಟಿತ್ತು. ಮಾತ್ರವಲ್ಲದೇ ಫೆಬ್ರವರಿ 26 ರ ಸಾಲಿನಲ್ಲಿ ಭೀಕರ ಕರೋನಾ ಸೋಂಕಿಗೆ ತುತ್ತಾದ ಇಟೆಲಿ, ಇರಾನ್‌ ದೇಶಗಳು ಸೇರ್ಪಡೆಗೊಂಡವು.

ಇನ್ನೂ ಮಾರ್ಚ್‌ 4 ರ ನಂತರವಷ್ಟೇ ದೇಶದ ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೂ ಥರ್ಮಲ್‌ ಪರೀಕ್ಷೆ ಅನ್ವಯವಾಯಿತು. ಅದರಲ್ಲಿ ರಾಜ್ಯದ ಕರಾವಳಿಯ ಮಂಗಳೂರು ಹಾಗೂ ಕೇರಳದ ಕಣ್ಣೂರು ವಿಮಾನ ನಿಲ್ದಾಣಗಳು ಸೇರ್ಪಡೆಗೊಂಡಿದ್ದವು. ಮಾತ್ರವಲ್ಲದೇ ಮಾರ್ಚ್‌ 4 ರ ನಂತರ ವಿಮಾನ ಸಂಚಾರ ಸ್ಥಗಿತದವರೆಗೂ ಎಲ್ಲಾ ವಿದೇಶಿ ಪ್ರಯಾಣಿಕರನ್ನ ಥರ್ಮಲ್‌ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಮಾರ್ಚ್‌ ತಿಂಗಳಾರ್ಧದವರೆಗೂ ಬಹುತೇಕ ವಿದೇಶಿ ಪ್ರಯಾಣಿಕರಿಗೆ ಹೋಂ ಕ್ವಾರೆಂಟೈನ್‌ ಮಾಡಲು ಏರ್‌ ಪೋರ್ಟ್‌ನಲ್ಲಿದ್ದ ವೈದ್ಯಕೀಯ ಇಲ್ಲವೇ ಅಧಿಕಾರಿಗಳಿಂದ ಯಾವುದೇ ಸೂಚನೆ ನೀಡಿರಲಿಲ್ಲ. ಅದರೆ ಈ ಹಂತದಲ್ಲಿ ದೇಶದೊಳಗೆಯೇ ಸಂಚರಿಸಿದ ಯಾವೊಬ್ಬ ಪ್ರಯಾಣಿಕನನ್ನು ಪರೀಕ್ಷೆಗೊಳಪಡಿಸಲಿಲ್ಲ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯ ಜನವರಿ 15 ರಿಂದ ಮಾರ್ಚ್‌ 23ರ ವರೆಗೆ ನೀಡಿರುವ RTI ಮಾಹಿತಿಯಲ್ಲಿ ಸ್ಪಷ್ಟಪಡಿಸಿದೆ.

ಅಲ್ಲದೇ ಸಾಕೇತ್‌ ಗೋಖಲೆ ಟ್ವೀಟರ್‌ ಗೆ ಕಾಮೆಂಟ್‌ ಮಾಡಿದ ಕೆಲವರು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಅನ್ನೋದು ಕೇವಲ ಬಾಯಿ ಮಾತಿಗಷ್ಟೇ ನಡಿದಿತ್ತೇ ವಿನಃ ಪರಿಣಾಮಕಾರಿಯಾಗಿ ನಡೆದಿರಲಿಲ್ಲ ಅನ್ನೋದು ಇದರಿಂದ ತಿಳಿಯುವಂತಾಗಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿಯವರು ಮಾರ್ಚ್‌ 15 ರಂದು ಮಾಡಿದ ಟ್ವೀಟ್‌ ನಲ್ಲಿ ತಿಳಿಸಿದಂತೆ ಎಲ್ಲಾ ಅಂತರಾಷ್ಟ್ರೀಯ ಏರ್‌ಪೋರ್ಟ್‌ ಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿರಲಿಲ್ಲ. ಜೊತೆಗೆ ಅದಕ್ಕೆ ಪೂರಕವಾದ ಕಿಟ್‌ ಗಳು ಕೂಡಾ ದೇಶದಲ್ಲಿ ಪರಿಣಾಮಕಾರಿ ಸಂಖ್ಯೆಯಲ್ಲಿರಿಲ್ಲ ಅನ್ನೋದು ಕೂಡಾ ಹೌದು. ಆದ್ದರಿಂದ ಆರಂಭಿಕ ಹಂತದಲ್ಲಾದ ಕೆಲವೊಂದು ಎಡವಟ್ಟು, ವಿಪಕ್ಷ ನಾಯಕರ ಬದಿಗಿಟ್ಟು ನಡೆಸಿದ ವ್ಯರ್ಥ ಪ್ರಯತ್ನಗಳೆಲ್ಲವೂ ಒಂದೊಂದಾಗಿ ಇದೀಗ ಅಡ್ಡ ಪರಿಣಾಮ ಬೀರುತ್ತಿದೆ ಅನ್ನೋದಕ್ಕೆ ಇದೆಲ್ಲವೂ ಸಾಕ್ಷಿ ಹೇಳುತ್ತಿದೆ.

Click here Support Free Press and Independent Journalism

Pratidhvani
www.pratidhvani.com