ಕೋವಿಡ್ 19 ವಿರುದ್ಧದ ಹೋರಾಟ: ವಿಶ್ವ ಮಾಧ್ಯಮಗಳಲ್ಲಿ ರಾರಾಜಿಸಿದ ಕೇರಳ.!
ರಾಷ್ಟ್ರೀಯ

ಕೋವಿಡ್ 19 ವಿರುದ್ಧದ ಹೋರಾಟ: ವಿಶ್ವ ಮಾಧ್ಯಮಗಳಲ್ಲಿ ರಾರಾಜಿಸಿದ ಕೇರಳ.!

ವಿದೇಶಿ ಮಾಧ್ಯಮಗಳಲ್ಲಿ ಈಗ ಕೇರಳದ್ದೇ ಸದ್ದು. ದೇಶದ ಚೊಚ್ಚಲ ಕರೋನಾ ಪ್ರಕರಣ ಪತ್ತೆಯಾಗಿದ್ದು ಕೇರಳದಲ್ಲೇ. ಅದಾದ ಬಳಿಕ ಅದನ್ನು ಕೇರಳ ಹಿಮ್ಮೆಟ್ಟಿಸಿದ ರೀತಿ ನಿಜಕ್ಕೂ ಅಭಿನಂದನಾರ್ಹ. ಈ ಹೋರಾಟದಲ್ಲಿ ಕೇರಳ ಕೇವಲ ಭಾರತಕ್ಕೆ ಮಾತ್ರ ಮಾದರಿಯಾಗಿ ನಿಂತಿಲ್ಲ. ಈ ಸೋಂಕಿನ ವಿರುದ್ದ ಕೇರಳ ನಡೆಸುತ್ತಿರುವ ಮಾದರಿ ಹೋರಾಟದ ವರದಿಗಳು ಬಿಬಿಸಿಯಿಂದ ಹಿಡಿದು ಜಗತ್ತಿನ ಸುಮಾರು 30 ಕ್ಕಿಂತಲೂ ಹೆಚ್ಚು ಮಾಧ್ಯಮಗಳಲ್ಲಿ ವರದಿಯಾಗಿವೆ.

ಆಶಿಕ್‌ ಮುಲ್ಕಿ

ವಿದೇಶಿ ಮಾಧ್ಯಮಗಳಲ್ಲಿ ಈಗ ಕೇರಳದ್ದೇ ಸದ್ದು. ದೇಶದ ಚೊಚ್ಚಲ ಕರೋನಾ ಪ್ರಕರಣ ಪತ್ತೆಯಾಗಿದ್ದು ಕೇರಳದಲ್ಲೇ. ಅದಾದ ಬಳಿಕ ಅದನ್ನು ಕೇರಳ ಹಿಮ್ಮೆಟ್ಟಿಸಿದ ರೀತಿ ನಿಜಕ್ಕೂ ಅಭಿನಂದನಾರ್ಹ. ಕರೋನಾ ವಿರುದ್ದದ ಹೋರಾಟದಲ್ಲಿ ಕೇರಳ ಎಂಬ ಭಾರತದ ಪುಟ್ಟ ರಾಜ್ಯ ಕೇವಲ ಭಾರತಕ್ಕೆ ಮಾತ್ರ ಮಾದರಿಯಾಗಿ ನಿಂತಿಲ್ಲ. ಈ ಸೋಂಕಿನ ವಿರುದ್ದ ಕೇರಳ ನಡೆಸುತ್ತಿರುವ ಮಾದರಿ ಹೋರಾಟದ ವರದಿಗಳು ಬಿಬಿಸಿಯಿಂದ ಹಿಡಿದು ಜಗತ್ತಿನ ಸುಮಾರು 30 ಕ್ಕಿಂತಲೂ ಹೆಚ್ಚು ಮಾಧ್ಯಮಗಳಲ್ಲಿ ವರದಿಯಾಗಿವೆ.

BBC News, ಕೇರಳ ಕರೋನಾ ವಿರುದ್ಧ ಹೋರಾಡಿದ ಪರಿಯನ್ನು ಗುರುತಿಸಿ ಏಪ್ರಿಲ್ 16ರಂದೇ ಸುದ್ದಿ ಪ್ರಕಟ ಮಾಡಿತ್ತು. ʻಕೇರಳ ಹೇಗೆ ಕರೋನಾ ವೃತ್ತವನ್ನು ಚಪ್ಪಟೆಗೊಳಿಸಿತುʼ ಎಂಬ ಒಕ್ಕಣೆ ಬರೆದು ಮುಕ್ತಕಂಟದಿಂದ ಕೇರಳವನ್ನು ಮತ್ತು ಕೇರಳ ಸರ್ಕಾರವನ್ನು ಹೊಗಳಿತು. ಇಡೀ ಲೇಖನದಲ್ಲಿ ಚೊಚ್ಚಲ ಪ್ರಕರಣ ಪತ್ತೆಯಾದ ಸಂಧರ್ಭವನ್ನು ಬಿಬಿಸಿ ನ್ಯೂಸ್ ವಿವರಿಸಿದೆ. ಕೇರಳ ಎಲ್ಲಿಯವರಿಗೆ ಸಜ್ಜಾಗಿ ನಿಂತಿತ್ತು ಎಂದರೆ ಚೊಚ್ಚಲ ವ್ಯಕ್ತಿಯ ಕರೋನಾ ಟೆಸ್ಟ್ ವರದಿ ಕೈ ಸೇರೋದಕ್ಕು ಮೊದಲೇ ಕ್ವಾರಂಟೈನ್ ಎಂಬ ಜಾಲವನ್ನು ಕೇರಳದ ಉದ್ದಗಲಕ್ಕೂ ಸೃಷ್ಟಿ ಮಾಡಿತ್ತು. ಅದ್ಯಾವಾಗ ಚೊಚ್ಚಲ ಪಾಸಿಟಿವ್ ವರದಿ ಕೇರಳ ಸರ್ಕಾರದ ಕೈ ಸೇರಿತೋ, ಆ ಕ್ಷಣದಲ್ಲೇ ಕ್ವಾರಂಟೈನ್ ಗೆ ಆದೇಶ ಹೊರಡಿಸಿತು. ಹೀಗೊಂದು ಅದೇಶ ಹೊರ ಬೀಳುತ್ತಿದ್ದಂತೆ ಮಲಯಾಳಿಗಳಲ್ಲಾದ ಕರ್ತವ್ಯ ಪ್ರಜ್ಞೆ ಕಾರ್ಯಪ್ರವೃತ್ತಿ ಆಯಿತು. ಆ ಬಳಿಕ ಈ ವೈರಸ್ ಲಕ್ಷಣ ಕಂಡುಬರುವ ವ್ಯಕ್ತಿಗಳೆಲ್ಲರೂ ವೈದ್ಯರ ಮೇಲ್ನೋಟದಲ್ಲಿದ್ದರು ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

The Guardian ಎಂಬ ಇಂಗ್ಲೆಂಡ್ನ ಮಾಧ್ಯಮ ಕರೋನಾ ತಡೆಗಟ್ಟುವಲ್ಲಿ ನಮ್ಮ ಪಕ್ಕದ ಕೇರಳ ನಡೆಸಿದ ಹೋರಾಟಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ. ಅದ್ರಲ್ಲೂ ಕೇರಳದ ಆರೋಗ್ಯ ಮಂತ್ರಿ ಶೈಲಜಾ ಟೀಚರ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ಕಾರ್ಯವೈಖರಿಯ ಮಾದರಿ ಎಂದು ಬಣ್ಣಿಸಿದ್ದಾರೆ. ಚೀನಾದ ವುಹಾನ್ ನಲ್ಲಿ ಕರೋನಾ ಎಂಬ ಮಹಾಮಾರಿ ಚೊಚ್ಚಲವಾಗಿ ತಲೆ ಎತ್ತಿದಾಗ ಇಲ್ಲಿ ಕೇರಳವೆಂಬ ಪುಟ್ಟ ರಾಜ್ಯದಲ್ಲಿ ಕರೋನಾಗೆ ಬೇಕಾದ ಎಲ್ಲಾ ಸಿದ್ಧತೆಗಳು ನಡೆದಿದ್ದವು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. 2018ರಲ್ಲಿ ನಿಫಾ ವೈರಸ್ ಕೇರಳದ ಬುಡಕಚ್ಚಿದಾಗ ಅದನ್ನ ತೊಲಗಿಸಿದ ಪರಿಯೇ ಕೇರಳದ ಈ ಸಾಧನೆಗೆ ಬಿದ್ದ ಅಡಿಪಾಯವೆಂದು ದಿ ಗಾರ್ಡಿಯನ್ ಅಭಿಪ್ರಾಯ ಪಟ್ಟಿದೆ.

ವಿಶ್ವಮಾಧ್ಯಮಗಳ ಸಾಲಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮತ್ತೊಂದು ಮಾಧ್ಯಮ ಸಂಸ್ಥೆ ಎಂದರೆ ಅದು Khaleej Times. ಯುಎಇ ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಖಲೀಜ್ ಟೈಮ್ಸ್ ವಿಶ್ವ ಮಟ್ಟದಲ್ಲಿ ವಿದ್ಯಾಮಾನಗಳನ್ನ ಜನರಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಸುದ್ದಿ ಸಂಸ್ಥೆ. ಇವರು ಕೂಡ ಕರೋನಾ ಹೆಡೆಮುರಿ ಕಟ್ಟಲು ಕೇರಳ ಇಟ್ಟ ನಡೆಗಳು ಇಡೀ ಭಾರತಕ್ಕೆ ಮಾದರಿ ಎಂಬ ಒಕ್ಕಣೆಯಲ್ಲಿ ಸುದ್ದಿ ಪ್ರಕಟಿಸಿದೆ.

ಜಗತ್ತಿನ ಮತ್ತೊಂದು ಭಾಗದಲ್ಲಿರುವ ಬ್ರೆಜಿಲ್ ಮಾಧ್ಯಮಗಳು ಕೂಡ ಕೇರಳದತ್ತ ಕಣ್ಣಾಯಿಸಿದೆ. ಕರೋನಾ ಹೋರಾಟದಲ್ಲಿ ಭಾರತದ ಕೇರಳ ಮಾದರಿ ಎಂದು ಶೀರ್ಷಿಕೆ ಕೊಟ್ಟು ಬ್ರೆಜಿಲ್ನ Brasil De Fato ಸುದ್ದಿ ಮಾಧ್ಯಮ ಸುದ್ದಿ ಪ್ರಕಟಿಸಿದೆ. ಮುಖ್ಯವಾಗಿ ಈ ವದರಿಯಲ್ಲಿ ಬ್ರೆಜಿಲ್ ದೆ ಫಾಟೋ, ಕೇರಳದ ಆರೋಗ್ಯ ಇಲಾಖೆಯ ನಡೆಯೊಂದನ್ನು ಮುಕ್ತಕಂಟದಿಂದ ಹಾಡಿಹೊಗಳಿದೆ. ಚೀನಾದಲ್ಲಿ ಕರೋನಾ ಹುಟ್ಟಿಕೊಂಡಿದೆ ಎಂಬ ಸುದ್ದಿ ಬಂದ ಕೂಡಲೇ ಇಲ್ಲಿ ದೇವರನಾಡು ನಿಫಾ ವೈರಸ್ ನಿಂದಾದ ಅವಾಂತರಗಳನ್ನು ಮೆಲುಕು ಹಾಕಿಕೊಂಡಿತು. ನಂತರ ಒಂದರ್ಧಕ್ಷಣವೂ ವ್ಯರ್ಥ ಮಾಡದೆ 18 ನುರಿತ ವೈದ್ಯರ ತಂಡವನ್ನು ರಚಿಸಿ ಕರ್ತವ್ಯಪ್ರಜ್ಞೆ ಮೆರೆಯಿತು. ಇದಾಗಿ ಕೆಲವೇ ಕೆಲವು ದಿನಗಳಲ್ಲಿ ಕೇರಳದ ತ್ರಿಶ್ರೂರ್ನಲ್ಲಿ ಭಾರತದ ಚೊಚ್ಚಲ ಕರೋನಾ ಪ್ರಕರಣ ಬೆಳಕಿಗೆ ಬಂತು. ಇದಲ್ಲವೇ ಮಾದರಿ ಎಂದರೆ.? ಎಂದು ಬ್ರೆಜಿಲ್ನ ಬ್ರೆಜಿಲ್ ದೆ ಫಾಟೋ ಮಾಧ್ಯಮ ಹೇಳಿದೆ.

ನ್ಯೂಯಾರ್ಕ್ನ VOGUE ಎಂಬ ಮ್ಯಾಗಜಿನ್ ಕೇರಳ ವಾರಿಯರ್ಸ್ ಎಂಬ ಒಕ್ಕಣೆಯಲ್ಲಿ ಕೇರಳ ಕರೋನಾ ತಡೆಗಟ್ಟಲು ತೆಗೆದುಕೊಂಡ ಸುಧಾರಣೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕೇರಳ ಸರ್ಕಾರ ಮಾದರಿ ಸರ್ಕಾರ. ಯಾಕೆಂದರೆ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೇರಳ ತೆಗೆದುಕೊಂಡ ತೀರ್ಮಾನಗಳೆಲ್ಲವೂ ಮಾದರಿಯಾಗುದಂತದ್ದು ಎಂದು ಶ್ಲಾಘಿಸಿದೆ. ಯಾಕೆಂದರೆ ಈವರೆಗೆ ಕರೋನಾ ಕಾರಣದಿಂದಾಗಿ ಕೇರಳದಲ್ಲಿ ಮೃತ ಪಟ್ಟವರ ಸಂಖ್ಯೆ ಕೇವಲ ನಾಲ್ಕು. ಇದೇ ಸಮಯದಲ್ಲಿ ಕರೋನಾ ವೈರಸ್ ವೃದ್ಧರಿಗೆ ತಗುಲಿದರೆ ಸಾವು ಶತಸಿದ್ಧ ಎಂಬ ನಂಬಿಕೆಯನ್ನು ಕೇರಳ ಸುಳ್ಳಾಗಿಸಿದೆ. ಯಾಕೆಂದರೆ ಕೇರಳದಲ್ಲಿ 85 ರಿಂದ 90ರ ನಡುವಿನ ವೃದ್ಧರಿಗೆ ಕರೋನಾ ತಗುಲಿತ್ತು. ಆದರೆ ಕೇರಳ ಅವರನ್ನು ಮರಳಿ ಬದುಕಿಗೆ ಕೈ ಹಿಡಿದು ನಡೆಸಿದೆ ಎಂದು ವೋಗ್ ವರದಿ ಮಾಡಿದೆ.

ಹೀಗೆ ಜಾಗತಿಕ ಮಟ್ಟದಲ್ಲಿ ಕೇರಳದ ಸಾಧನೆಯ ತೇರಿನ ಸಂಭ್ರಮ ಮುಂದುವರೆದಿದೆ. ಸುಮಾರು 30ಕ್ಕೂ ಹೆಚ್ಚಿನ ಸುದ್ದಿ ಸಂಸ್ಥೆಗಳು ಕರೋನಾ ನಿಯಂತ್ರಣದಲ್ಲಿ ಕೇರಳ ತೋರಿದ ಕರ್ತವ್ಯಪ್ರಜ್ಞೆಯನ್ನು ಹಾಡಿ ಹೊಗಳಿದೆ. ಕೆಲವು ನ್ಯೂಸ್‌ ಲಿಂಕ್‌ ಗಳನ್ನ ಕೆಳಗೆ ನೀಡಲಾಗಿದೆ. ಆಸಕ್ತರು ಓದಬಹುದು.

VOA News | National Post | Gulf News | Le Monde | La Stampa |

Junge Welt | Week Asia | The Straits Time | Punch | Dhaka Tribune |

ಇದು ಮೂರುವರೆ ಕೋಟಿ ಜನ ಸಂಖ್ಯೆ ಹೊಂದಿರುವ ಕೇರಳದ ಯಶೋಗಾಥೆ. ಚೊಚ್ಚಲ ಪ್ರಕರಣದ ಹೊಣೆ ಹೊತ್ತ ಕೇರಳದಲ್ಲಿ ಸದ್ಯ ನಾಲ್ಕು ಜನರಷ್ಟೇ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಬಹುಶಃ ಇದು ದೊಡ್ಡ ಸಾಧನೆಯೇ ಸರಿ. ದೇಶಕ್ಕೆ ಗುಜರಾತ್ ಮಾಡೆಲ್ ಎಂಬ ಭ್ರಮೆಯ ಮಧ್ಯೆ ಕೇರಳ ತನ್ನ ಅಸಲಿ ತಾಕತ್ತು ತೋರಿದೆ. ಅಲ್ಲದೇ ಇಡೀ ದೇಶಕ್ಕೆ ಕೇರಳ ಮಾದರಿ ಅನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇದನ್ನ ಮನಗಂಡ ರಾಜ್ಯದ ಬಿಎಸ್ ವೈ ಸರ್ಕಾರ ಇತ್ತೀಚೆಗೆ ಕೇರಳ ಆರೋಗ್ಯ ಮಂತ್ರಿ ಕೆ ಶೈಲಜಾ ಟೀಚರ್ ಅವರೊಂದು ವಿಡಿಯೋ ಸಂವಾದ ನಡೆಸಿ ಕೆಲವು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಬಹುಶಃ ದೇಶದ ಪ್ರತಿಯೊಂದು ರಾಜ್ಯವೂ ಹೀಗೆ ಕೇರಳವನ್ನು ಸಂಪರ್ಕಿಸಿ ಸುಧಾರಣಾ ನಡೆಗಳ ಬಗ್ಗೆ ಸಲಹೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಹೆಜ್ಜೆ ಹಾಕಬೇಕು. ಸದ್ಯ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆಯಾದರೂ ಸೋಂಕಿತರ ಸಂಖ್ಯೆಯಲ್ಲೇನು ಕೊರತೆ ಇಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ಭಾರತ 81 ಸಾವಿರಕ್ಕೂ ಹೆಚ್ಚಿನ ಪಾಸಿಟಿವ್ ಕೇಸ್ ಗಳನ್ನು ಹೊಂದಿದೆ. ದೇಶದಲ್ಲಿ 2,649 ಈ ಕರೋನಾ ಕಾರಣದಿಂದ ಮೃತ ಪಟ್ಟಿದ್ದಾರೆ. ಹೀಗೆಯಾದರೆ ಮುಂದಿನ ದಿನಗಳು ಬಹಳ ಕಠಿಣವಾಗಲಿದೆ. ಇಂತವುಗಳ ಮಧ್ಯೆ ಕೇರಳ ವಿಭಿನ್ನವಾಗಿ ನಿಂತಿದೆ ಅನ್ನೋದರಲ್ಲಿ ಯಾವುದೇ ಅನುಮಾನವೇ ಇಲ್ಲ.

Click here Support Free Press and Independent Journalism

Pratidhvani
www.pratidhvani.com