ದೇಶದಲ್ಲಿ ಕುಸಿಯುತ್ತಿರುವ ರಾಜತಾಂತ್ರಿಕ ನೀತಿ, ಕಣ್ಮರೆಯಾಗುತ್ತಿರುವ ಕೋಮು ಸೌಹಾರ್ದತೆ!
ರಾಷ್ಟ್ರೀಯ

ದೇಶದಲ್ಲಿ ಕುಸಿಯುತ್ತಿರುವ ರಾಜತಾಂತ್ರಿಕ ನೀತಿ, ಕಣ್ಮರೆಯಾಗುತ್ತಿರುವ ಕೋಮು ಸೌಹಾರ್ದತೆ!

ಭಾರತದ ಧಾರ್ಮಿಕ ಸಹಿಷ್ಣುತೆ ಮತ್ತು ಜಾತ್ಯಾತೀತ ಎಂಬುದು ಕೇವಲ ಸಿದ್ದಾಂತಗಳಲ್ಲ. ಅದು ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತಕ್ಕಿರುವ ವಿಳಾಸ. ಮೃದು ಧೋರಣೆ ಎಂಬುದು ಭಾರತದ ಅಭಿವೃದ್ಧಿಯಲ್ಲಿ ಹಾಸುಹೊಕ್ಕಾದ ಅಂಶ. ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿದ್ಯತೆ ಎಂಬುದೇ ಭಾರತದ ಶ್ರೀಮಂತಿಕೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಮೋದಿ ಸರ್ಕಾರ ಅಂತರ-ಧಾರ್ಮಿಕ ಸಹಬಾಳ್ವೆಯನ್ನು ಹರಿದು ಹಾಕಲು ಪ್ರಯತ್ನಿಸುತ್ತಿದೆ.

ಶಿವಕುಮಾರ್‌ ಎ

ಕೋವಿಡ್-19 ಪ್ರಭಾವ ಮತ್ತು ಇದನ್ನು ನಿಗ್ರಹಿಸುವ ಕ್ರಮವಾಗಿ ಘೋಷಿಸಲಾದ ಲಾಕ್ಡೌನ್ನಿಂದಾಗಿ ಭಾರತ ಆರ್ಥಿಕವಾಗಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ಕರೋನಾ ಪೂರ್ವ ಕಾಲದಲ್ಲೇ ಸಂಕಷ್ಟದಲ್ಲಿದ್ದ ಭಾರತದ ಆರ್ಥಿಕತೆ ಪ್ರಸ್ತುತ ಪಾತಾಳಕ್ಕೆ ಕುಸಿದಿರುವುದು ದಿಟ. ಆದರೆ, ಇಂತಹ ಸಂದರ್ಭದಲ್ಲಿ ಭಾರತ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸರಿಯಾಗಿ ನಿಭಾಯಿಸುವುದು ಅಗತ್ಯದ ಸಂಗತಿ. ಆದರೆ, ಪ್ರಸ್ತುತ ಹಾಗಾಗುತ್ತಿಲ್ಲ ಎಂಬುದೇ ವಿಷಾದಕರ ಸಂಗತಿ.

ಸ್ವತಂತ್ರ ಭಾರತದ ಕಳೆದ 70 ವರ್ಷದಲ್ಲಿ ಭಾರತದ ರಾಜಕೀಯ ವ್ಯವಸ್ಥೆಯನ್ನು ಜಾತ್ಯಾತೀತ ದೃಷ್ಟಿಕೋನದಲ್ಲೇ ನೋಡಲಾಗುತ್ತಿದೆ. ಸಂವಿಧಾನದ ಪೀಠಿಕೆಯಲ್ಲೇ ಭಾರತವನ್ನು ಸಮಾಜವಾದಿ ಜಾತ್ಯಾತೀಯ ಪ್ರಜಾಪ್ರಭುತ್ವ ರಾಷ್ಟ್ರ ಎಂದೇ ಗುರುತಿಸಲಾಗಿದೆ. ಭಾರತದ ಜಾತ್ಯಾತೀತ ಮೌಲ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮಹತ್ವ ಮತ್ತು ಬೆಲೆ ಇದೆ. ಆದರೆ, ಕಳೆದ ಕೆಲ ವರ್ಷಗಳಿಂದ ಭಾರತದ ಈ ಮೌಲ್ಯಕ್ಕೆ ಮತ್ತೆ ಮತ್ತೆ ಚ್ಯುತಿಯಾಗುತ್ತಿದೆ. ಇನ್ನೂ ಕರೋನಾ ಕಾಲದಲ್ಲಂತೂ ಅಂತಾರಾಷ್ಟ್ರೀಯ ಸಮುದಾಯ ಭಾರತದ ಕಡೆಗೆ ಬೊಟ್ಟು ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂಬುದು ಕಟು ವಾಸ್ತವ.

ಭಾರತದಲ್ಲಿ ಕರೋನಾ ಹರಡುತ್ತಿದ್ದಂತೆ ಇದಕ್ಕೆ ತಬ್ಲಿಘಿಗಳೇ ಕಾರಣ ಎಂದು ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಅಲ್ಲದೆ, ಇದೇ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅರಬ್ ರಾಷ್ಟ್ರದ ಮುಸ್ಲಿಂ ಮಹಿಳೆಯರ ಕುರಿತು ಮಾಡಿದ್ದ ಟ್ವೀಟ್ ಬಾರೀ ದೊಡ್ಡ ಸದ್ದು ಮಾಡಿತ್ತು.

ಇದರ ಬೆನ್ನಿಗೆ ಭಾರತದ ವಿರುದ್ಧ ಕೆಂಡ ಕಾರಿದ್ದ ಗಲ್ಫ್ ರಾಷ್ಟ್ರದ ರಾಣಿ ತಮ್ಮ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಏಕೆ ಇಲ್ಲಿಂದ ಹೊರ ಹಾಕಬಾರದು? ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ, ಭಾರತದ ಕೋಮುವಾದಿ ನೀತಿಯ ಬಗ್ಗೆ ಕೆಂಡ ಕಾರಿದ್ದ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಆಯೋಗ, “ಭಾರತದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿತ್ತು” ಒಟ್ಟಾರೆ ಇತ್ತೀಚಿನ ಕೆಲ ಸಂಗತಿಗಳು ಭಾರತದ ಅಂತಾರಾಷ್ಟ್ರೀಯ ಸಂಬಂಧದ ಮೇಲೆ ವ್ಯತಿರೀಕ್ತ ಪರಿಣಾಮ ಬೀರಿರುವುದು ಮಾತ್ರ ಸುಳ್ಳಲ್ಲ.

ಹಾಗೆ ನೋಡಿದರೆ ಧಾರ್ಮಿಕತೆಯ ಮೇಲಿನ ಮೃಧು ಧೋರಣೆ ಎಂಬುದು ಭಾರತೀಯ ರಾಜತಾಂತ್ರಿಕ ಮೌಲ್ಯದ ಪ್ರಮುಖ ಅಂಶ. ಬಿಜೆಪಿ 2014ರ ನಂತರ ಅಧಿಕಾರಕ್ಕೆ ಏರಿದ ಮೇಲೆಯೂ ಇದನ್ನು ಪ್ರಮುಖ ರಾಜತಾಂತ್ರಿಕ ವಿಚಾರವಾಗಿಯೇ ಪಾಲಿಸಲಾಗಿತ್ತು. ಇತರೆ ಪಕ್ಷಗಳಿಗಿಂತ ಭಾರತೀಯ ಜನತಾ ಪಕ್ಷ ಭಾರತೀಯ ಮೂಲದ ವಲಸೆ ಸಮುದಾಯವನ್ನು ಹೆಚ್ಚು ಆಕರ್ಷಿಸಿತ್ತು. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಹೌಡಿ-ಮೋದಿ ಕಾರ್ಯಕ್ರಮ ಇದಕ್ಕೊಂದು ಉತ್ತಮ ಉದಾಹರಣೆ.

ಕಳೆದ 6 ವರ್ಷದ ಅವಧಿಯಲ್ಲಿ ಬಿಜೆಪಿ ಇಂತಹ ಹತ್ತಾರು ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮತ್ತು ಆಮೂಲಕ ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತದ ಕುರಿತ ದೃಷ್ಟೀಕೋನ ಮತ್ತಷ್ಟು ಉತ್ತಮಗೊಳಿಸುವಲ್ಲಿ ಶ್ರಮಿಸಿದೆ ಎಂದರೆ ತಪ್ಪಾಗಲಾರದು.

ಯೋಗ ದಿನ:

ಪ್ರಧಾನಿ ನರೇಂದ್ರ ಮೋದಿ ಬೌದ್ಧ ಧರ್ಮದೊಂದಿಗಿನ ಭಾರತದ ಐತಿಹಾಸಿಕ ಸಂಪರ್ಕಗಳಿಗೆ ಪ್ರಯತ್ನ ನಡೆಸಿದ್ದಾರೆ. ಅಂತಹ ಪ್ರಯತ್ನಗಳಲ್ಲೊಂದೆ ಭಾರತದ ’LOOK EAST’ ನೀತಿ. ಅದೇ ರೀತಿ ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತದ ಮೃಧು ಧೋರಣೆಯ ಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ವೇದಿಕೆಯೇ ಯೋಗ ದಿನ.

ಯೋಗ ಭಾರತದ ಪ್ರಾಚೀನ ಸಂಸ್ಕೃತಿಯ ಅಮೂಲ್ಯ ಕೊಡುಗೆ ಎಂದು ಅಂತಾರಾಷ್ಟ್ರೀಯ ಸಮುದಾಯದ ಎದುರು ಬಣ್ಣಿಸಿ ಅದಕ್ಕೊಂದು ಸ್ಥಾನಮಾನ ಕೊಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಪರಿಣಾಮ ಯೋಗ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಇಂದು ಇಡೀ ವಿಶ್ವವೇ ಆಚರಿಸುತ್ತಿದೆ. ಅಲ್ಲದೆ, ಇದೇ ಅವಧಿಯಲ್ಲಿ ಮಹಾತ್ಮಾ ಗಾಂಧಿಯನ್ನು ಮುಂದಿಟ್ಟು ಭಾರತ ವಿಶ್ವದ ಶಾಂತಿಪ್ರಿಯ ರಾಷ್ಟ್ರ ಎಂದು ಬಿಂಬಿಸುವ ಕೆಲಸವೂ ವ್ಯಾಪಕವಾಗಿ ನಡೆದಿತ್ತು.

ಪರಿಣಾಮ ಕಳೆದ ಐದು ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಸಿಯೋಲ್ ಶಾಂತಿ ಪ್ರಶಸ್ತಿ, ಗೇಟ್ಸ್ ಫೌಂಡೇಶನ್ನ ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ ಮತ್ತು ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿಗಳು ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಆದರೆ, ಈ ಎಲ್ಲಾ ಧನಾತ್ಮಕ ಅಂಶಗಳನ್ನೂ ಆ ಒಂದು ಕಾಯ್ದೆ ಕಸಿದುಕೊಂಡು ಬಿಟ್ಟಿದ್ದು ಮಾತ್ರ ವಿಪರ್ಯಾಸ.

ಸಿಎಎ ಕಾಯ್ದೆಯ ಜೊತೆಗೆ ಕುಸಿದ ಶಾಂತಿ ಮಂತ್ರ:

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಭಾರತದ ಸರ್ಕಾರದ ಮಹತ್ವಾಕಾಂಕ್ಷೆಯ ಕಾಯ್ದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ಕಾಯ್ದೆಯನ್ನು ಉಬಯ ಸದನದಲ್ಲೂ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಆದರೆ, ಈ ಕಾಯ್ದೆಯ ವಿರುದ್ಧ ದೇಶದ ಅಲ್ಪಸಂಖ್ಯಾತ ಸಮುದಾಯ ಇಡೀ ದೇಶದಾದ್ಯಂತ ಸತತವಾಗಿ ವ್ಯಾಪಕ ಶಾಂತಿ ಚಳುವಳಿ ನಡೆಸುತ್ತಲೇ ಇದೆ. ಇದಕ್ಕೆ ಭಾರತದ ಸರ್ಕಾರವೂ ಅಷ್ಟೇ ಕ್ರೂರವಾಗಿ ಪ್ರತ್ಯುತ್ತರ ನೀಡಿದ್ದು ಸುಳ್ಳಲ್ಲ.

ಭಾರತ ಸರ್ಕಾರದ ಈ ವರ್ತನೆಯನ್ನು ವಿಶ್ವಸಂಸ್ಥೆ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ, ಯುರೋಪಿಯನ್ ರಾಷ್ಟ್ರಗಳು, ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಮಾದ್ಯಮಗಳು ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕು ಆಯೋಗ ಖಂಡಿಸಿತ್ತು. ಭಾರತದಲ್ಲಿ ನಡೆಯುತ್ತಿರುವ ಅಸಹಿಷ್ಣುತೆಯ ವಿರುದ್ಧ ಕಳವಳ ವ್ಯಕ್ತಪಡಿಸಿತ್ತು. ಇದೇ ಸಂದರ್ಭದಲ್ಲಿ ʼಹೌಡಿ ಮೋದಿʼ ಕಾರ್ಯಕ್ರಮದ ಮೂಲಕ ಬಾರತದ ಕುರಿತು ಅಮೆರಿಕದಲ್ಲಿ ನಿರ್ಮಿಸಲಾಗಿದ್ದ ಸದ್ಭಾವನೆ ನೆಲ ಕಚ್ಚಿತ್ತು ಮತ್ತು ಭಾರತೀಯ ವಲಸೆಗಾರರಲ್ಲಿ ಎರಡು ಗುಂಪಾಗಿ ಅದರಲ್ಲೊಂದು ಗುಂಪು ಮೋದಿ ವಿರೋಧಕ್ಕೂ ಮುಂದಾದದ್ದು ಇತಿಹಾಸ.

ಮುಸ್ಲಿಂ ವಿರೋಧಿ ವಾಕ್ಚಾತುರ್ಯ:

ಸಿಎಎ ಶಾಂತಿಯುತ ಪ್ರತಿಭಟನೆಗಳ ಮೇಲೆ ಪೊಲೀಸರ ದಾಳಿಗಳು ಒಂದೆಡೆಯಾದರೆ ಬಿಜೆಪಿ ಪಕ್ಷದ ಕೆಲ ನಾಯಕರು ಬಹಿರಂಗವಾಗಿಯೇ ಮುಸ್ಲಿಂ ಸಮುದಾಯದ ವಿರೋಧಿ ಮತ್ತು ಪ್ರಚೋಧನಾಕಾರಿ ಹೇಳಿಕೆಗಳನ್ನು ನೀಡಲು ಮುಂದಾಗಿದ್ದರು. ದೇಶದಲ್ಲಿ ಕರೋನಾ ವೈರಸ್ ವ್ಯಾಪಕವಾಗಿ ಹರಡಿದ ನಂತರವೂ ಸಹ ಇದಕ್ಕೆ ಒಂದು ಸಮುದಾಯದ ಜನರನ್ನು ಹೊಣೆಗೇಡಿಗಳನ್ನಾಗಿ ಮಾಡುವ ಕೆಲಸ ಬಿಜೆಪಿ ನಾಯಕರಿಂದಲೇ ವ್ಯಾಪಕವಾಗಿ ನಡೆದಿತ್ತು.

ಆದರೆ, ಬಿಜೆಪಿ ನಾಯಕರ ಇಂತಹ ಹೇಳಿಕೆಗಳು ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತ ಗೌರವ ಮತ್ತು ವಿಶ್ವಾಸಾರ್ಹತೆ ಕುಸಿಯುವಂತೆ ಮಾಡಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಯಿಂದಾಗಿ ಭಾರತದ ಸ್ಪಷ್ಟ ಮತ್ತು ಸ್ಥಿರವಾದ ದೇಶೀಯ ನೀತಿಗಳನ್ನು ಭಾರತದ ಆರ್ಥಿಕ ಸಂದೇಶವನ್ನು ಗೊಂದಲಕ್ಕೀಡು ಮಾಡುತ್ತಿದೆ. ಪರಿಣಾಮ ಭಾರತದ ವಿದೇಶಿ ನೇರ ಹೂಡಿಕೆ ಕಡಿಮೆಯಾಗುತ್ತಾ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುವಂತಾಗಿದೆ.

ಭಾರತದ ಧಾರ್ಮಿಕ ಸಹಿಷ್ಣುತೆ ಮತ್ತು ಜಾತ್ಯಾತೀತ ಎಂಬುದು ಕೇವಲ ಸಿದ್ದಾಂತಗಳಲ್ಲ. ಅದು ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತಕ್ಕಿರುವ ವಿಳಾಸ. ಮೃದು ಧೋರಣೆ ಎಂಬುದು ಭಾರತದ ಅಭಿವೃದ್ಧಿಯಲ್ಲಿ ಹಾಸುಹೊಕ್ಕಾದ ಅಂಶ. ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿದ್ಯತೆ ಎಂಬುದೇ ಭಾರತದ ಶ್ರೀಮಂತಿಕೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಮೋದಿ ಸರ್ಕಾರ ಅಂತರ-ಧಾರ್ಮಿಕ ಸಹಬಾಳ್ವೆಯನ್ನು ಹರಿದು ಹಾಕಲು ಪ್ರಯತ್ನಿಸುತ್ತಿದೆ. ಈ ಧೋರಣೆ ಭಾರತೀಯ ರಾಜತಾಂತ್ರಿಕ ನೀತಿಯಿಂದ ಆಮ್ಲಜನಕವನ್ನು ಹೀರಿಕೊಳ್ಳುತ್ತಿದೆ. ಪರಿಣಾಮ ಅಂತಾರಾಷ್ಟ್ರೀಯ ಸಮುದಾಯದ ಎದುರು ಭಾರತ ಪ್ರಸ್ತುತ ಅಪರಾಧಿಯಂತೆ ಬಿಂಬಿಸಿಕೊಳ್ಳುತ್ತಿದೆ.

ಕರೋನಾದಂತಹ ಸಂದಿಗ್ಧ ಕಾಲದಲ್ಲಿ ಭಾರತದ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸುರಕ್ಷಿತವಲ್ಲ ಎಂಬ ಸಂದೇಶ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಹರಡುವುದು ಭಾರತದ ಮತ್ತು ಅಭಿವೃದ್ಧಿಯ ಮಟ್ಟಿಗೂ ಸಹ ಉತ್ತಮ ಬೆಳವಣಿಗೆಯಲ್ಲ. ಹೀಗಾಗಿ ಕೇಂದ್ರ ಸಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಳೆಯ ಗೌರವವನ್ನು ಮತ್ತೆ ಪಡೆಯಬೇಕಾದರೆ ದೇಶದಾದ್ಯಂತ ಕೋಮು ಸೌಹಾರ್ದತೆಯನ್ನು ಮತ್ತೆ ಪ್ರಚುರಪಡಿಸುವ ಅಗತ್ಯವಿದೆ. ಅಲ್ಲದೆ, ಅಭಿವೃದ್ಧಿಗೂ ಈ ನೀತಿ ಪೂರಕವಾಗಲಿದೆ.

Click here Support Free Press and Independent Journalism

Pratidhvani
www.pratidhvani.com