COVID-19; ಫೆಬ್ರವರಿ ಆರಂಭದಲ್ಲಿಯೇ ತನ್ನ ದತ್ತಾಂಶ ಪ್ರಕಟ ನಿಲ್ಲಿಸಿದ IDSP
ರಾಷ್ಟ್ರೀಯ

COVID-19; ಫೆಬ್ರವರಿ ಆರಂಭದಲ್ಲಿಯೇ ತನ್ನ ದತ್ತಾಂಶ ಪ್ರಕಟ ನಿಲ್ಲಿಸಿದ IDSP

IDPS ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಅಂಕಿ ಅಂಶ ಕಲೆ ಹಾಕಿ ಆರೋಗ್ಯ‌ ಸಚಿವಾಲಯಕ್ಕೆ ಸಲ್ಲಿಸಬೇಕಿತ್ತು. ವಿಶೇಷವಾಗಿ IDPS ಏರ್‌ ಪೋರ್ಟ್‌, ಕ್ವಾರೆಂಟೈನ್‌ ಕೇಂದ್ರ ಹಾಗೂ ಇನ್ನಿತರ ಮೂಲಗಳಿಂದ ಮಾಹಿತಿ ಕಲೆ ಹಾಕಿ ಆರೋಗ್ಯ ಸಚಿವಾಲಯಕ್ಕೆ ನೀಡಿದರೆ, ಲ್ಯಾಬ್‌ಗಳಿಂದ ಬಂದ ವರದಿ ಆಧರಿಸಿ ICMR ತನ್ನ ವರದಿಯನ್ನ ಆರೋಗ್ಯ ಸಚಿವಾಲಯಕ್ಕೆ ನೀಡುತ್ತದೆ. 

ಮೊಹಮ್ಮದ್‌ ಇರ್ಷಾದ್‌

ಫೆಬ್ರವರಿ ಆರಂಭದ ವಾರದಲ್ಲಿ ದೇಶದಲ್ಲಿ ಕೇವಲ ಮೂರು ಕೋವಿಡ್-19‌ ಪ್ರಕರಣಗಳಷ್ಟೇ ಪತ್ತೆಯಾಗಿದ್ದವು ಎಂದು Integrated Disease Surveillance Programme (IDSP) ತನ್ನ ವಾರದ ವರದಿಯಲ್ಲಿ ದಾಖಲಿಸಿಕೊಂಡಿದ್ದವು. ಈ IDSP ಅನ್ನೋದು ದೇಶದಲ್ಲಿ ಕಳೆದ ಒಂದು ದಶಕದಿಂದ ವರುಷದ ಪ್ರತಿವಾರ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯ ಪತ್ತೆಹಚ್ಚುವ ಕೆಲಸ ಮಾಡಿಕೊಂಡಿದ್ದು, ಮಾತ್ರವಲ್ಲದೇ ತನ್ನದೇ ಅಧಿಕೃತ ವೆಬ್‌ಸೈಟ್‌ ನಲ್ಲಿ ಅದು ಪ್ರಕಟಿಸುತ್ತದೆ. ಮಾತ್ರವಲ್ಲದೇ IDSP ಅತ್ಯಂತ ವಿಶ್ವಾಸಾರ್ಹ ಅಂಕಿ ಅಂಶವನ್ನ ಇಡಬಲ್ಲ ಸಂಸ್ಥೆಯೂ ಆಗಿದೆ. ಆದರೆ ಕೋವಿಡ್-19‌ ಸಮಯದಲ್ಲಿ ಇನ್ನೂ ಹೆಚ್ಚು ನಿಖರವಾಗಿ ಅಂಕಿ-ಅಂಶ ನೀಡಬೇಕಿದ್ದ IDSP ಫೆಬ್ರವರಿ 2 ಕ್ಕೆ ತನ್ನ ಕೊನೆಯ ವರದಿಯನ್ನ ದಾಖಲಿಸಿ, ಆನಂತರ ಯಾವುದೇ ಒಂದು ಅಂಕಿ ಅಂಶವನ್ನೂ ಅದು ಪ್ರಕಟಿಸಿಲ್ಲ.

ಇಂತಹ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ಜವಾಬ್ದಾರಿ ಮಹತ್ವದ್ದಾಗಬೇಕಿತ್ತು. ಆದರೆ ಕೋವಿಡ್-19‌ ಸಮಯದಲ್ಲಿ ಅದೇನು ಮಾಡುತ್ತಿದೆ ಅನ್ನೋದನ್ನ ತಜ್ಞರೊಬ್ಬರು ಪ್ರಶ್ನಿಸುತ್ತಾರೆ. ಜಾಗತಿಕ ಮಟ್ಟದಲ್ಲಿ CDC ಯಾವ ರೀತಿ ಸಾಂಕ್ರಾಮಿಕ ರೋಗದ ನಿಯಂತ್ರಣ ಜವಾಬ್ದಾರಿ ನಿರ್ವಹಿಸುತ್ತೋ, ಅದೇ ರೀತಿ ಭಾರತದಲ್ಲಿ ICMR ಆ ಕೆಲಸವನ್ನ ನಿರ್ವಹಿಸಬೇಕಿದೆ. ಅದಕ್ಕೆ ಪೂರಕವಾಗಿ NCDC ಕೆಲಸ ನಿರ್ವಹಿಸಬೇಕಿತ್ತು. ಆದರೆ ಅದೇ ಈ ಸಮಯದಲ್ಲಿ ಕಾರ್ಯನಿರ್ವಹಿಸದೇ ಕಣ್ಮರೆಯಾಗಿದೆ ಅನ್ನೋದಾಗಿ ತಜ್ಞರು ಅಚ್ಚರಿ ಪಡುತ್ತಾರೆ. ಕಳೆದ ಮೂರು ತಿಂಗಳ ಕೋವಿಡ್-19‌ ಹೋರಾಟದ ಸಮಯದಲ್ಲೂ NCDC ಇದುವರೆಗೂ ತನ್ನಲ್ಲಿರುವ ಅಂಕಿ ಅಂಶವನ್ನ ಶೇರ್‌ ಮಾಡಿಕೊಂಡಿದ್ದಾಗಲೀ, ಇಲ್ಲವೇ ಸಾಂಕ್ರಾಮಿಕ ರೋಗ ಕುರಿತ ಮೀಟಿಂಗ್‌ಗಳಲ್ಲಿ ಭಾಗವಹಿಸಿದ್ದಾಗಲೀ ಮಾಡಲಿಲ್ಲ ಎಂದು ICMR ನ ಓರ್ವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

IDPS, 2004 ರಲ್ಲಿ SARS, ಸಿಂಡ್ರೋಮ್‌ ರೋಗಗಳ ಬಳಿಕ ಅಸ್ತಿತ್ವಕ್ಕೆ ಬಂತು. ಇದಕ್ಕೆ ವಿಶ್ವ ಬ್ಯಾಂಕ್‌ ದೇಣಿಗೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಅಥವಾ ಸೋಂಕಿನ ಮುನ್ಸೂಚನೆ ಬಗ್ಗೆ ಮಾಹಿತಿಯನ್ನ ಈ ಸಂಸ್ಥೆಯು ಕಲೆ ಹಾಕುತ್ತದೆ. ಇದನ್ನ ಭಾರತದಲ್ಲಿ NCDC ಅಡಿಯಲ್ಲಿ ತಂದು ರೋಗಗಳ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಘಟಕಗಳನ್ನ ಹೊಂದಿವೆ. ಅಲ್ಲದೇ NCDC ಕೂಡಾ ಆರಂಭದಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳ ಅಂಕಿ ಅಂಶ ಕಲೆ ಹಾಕುವಲ್ಲಿ ಅತ್ಯಂತ ಯಶಸ್ವಿಯೂ ಆಗಿತ್ತು.

ಆದರೆ ಅದರಡಿಯಲ್ಲಿರುವ IDPS ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಅಂಕಿ ಅಂಶ ಕಲೆ ಹಾಕಿ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಬೇಕಿತ್ತು. ವಿಶೇಷವಾಗಿ IDPS ಏರ್‌ ಪೋರ್ಟ್‌, ಕ್ವಾರೆಂಟೈನ್‌ ಕೇಂದ್ರ ಹಾಗೂ ಇನ್ನಿತರ ಮೂಲಗಳಿಂದ ಮಾಹಿತಿ ಕಲೆ ಹಾಕಿ ಆರೋಗ್ಯ ಸಚಿವಾಲಯಕ್ಕೆ ನೀಡಿದರೆ, ಲ್ಯಾಬ್‌ಗಳಿಂದ ಬಂದ ವರದಿ ಆಧರಿಸಿ ICMR ತನ್ನ ವರದಿಯನ್ನ ಆರೋಗ್ಯ ಸಚಿವಾಲಯಕ್ಕೆ ನೀಡುತ್ತದೆ. ಹೀಗೆ ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟವಾಗಿ ಎರಡು ಮೂಲಗಳಿಂದ ರೋಗಿಗಳ ಅಂಕಿ ಅಂಶ ಹಾಗೂ ಇನ್ನಿತರ ಮಾಹಿತಿಗಳನ್ನ ಸಂಗ್ರಹಿಸುತ್ತದೆ. ಆದರೆ ಫೆಬ್ರವರಿ 2 ರ ನಂತರ IDPS ಯಾವೊಂದು ಅಂಕಿ ಅಂಶವನ್ನೂ ಬಹಿರಂಗಪಡಿಸಿಲ್ಲ.

ಇಷ್ಟೆಲ್ಲವೂ ಆದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯವನ್ನೇ ಪ್ರಶ್ನೆ ಮಾಡೇ ಮಾಡಲಾಗುತ್ತದೆ. ಅಂತೆಯೇ IDPS ಅಂಕಿ ಅಂಶ ಬಹಿರಂಗ ಪಡಿಸದೇ ಇರುವ ಕುರಿತು ಖುದ್ದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಹಾಜರಿದ್ದ ಸಭೆಯಲ್ಲಿಯೇ ಪ್ರಶ್ನೆ ಎತ್ತಲಾಯಿತು. ಮಾರ್ಚ್‌ 27 ರಂದು ಉನ್ನತ ಮಟ್ಟದ ಸಮಿತಿ ರಚಿಸಿದ ನಾಲ್ಕೇ ದಿನಗಳಲ್ಲಿ ನಡೆದ ಮೊದಲ ಸಭೆಯಲ್ಲಿಯೇ ಈ ಪ್ರಶ್ನೆ ಆರೋಗ್ಯ ಸಚಿವರಿಗೆ ಎದುರಾಯಿತು. ಆದರೆ ಆರೋಗ್ಯ ಸಚಿವರ ಪ್ರತಿಕ್ರಿಯೆ ಮಾತ್ರ ಅದನ್ನ ಸಮರ್ಥಿಸುವಂತೆ ಇತ್ತು. ಅವರು IDPS ದತ್ತಾಂಶವನ್ನ ಸಾರ್ವಜನಿಕಗೊಳಿಸಲು ಇಚ್ಛಿಸುವುದಿಲ್ಲ ಎಂದರು. ಇದನ್ನ ʼಆಂತರಿಕ ತಜ್ಞರುʼ ತಿಳಿಸಿದ್ದಾಗಿ ಹೇಳಿದ್ದಾರೆ. ಆದರೆ ಆಂತರಿಕ ತಜ್ಞರು ಯಾಕಾಗಿ NCDC ದತ್ತಾಂಶವನ್ನ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ ಎಂದು ಹರ್ಷವರ್ಧನ್‌ ಕಾರಣ ತಿಳಿಸಿರಲಿಲ್ಲ ಎಂದು ಆ ಸಭೆಯಲ್ಲಿ ಭಾಗವಹಿಸಿದ್ದ ವಿಜ್ಞಾನಿಯೊಬ್ಬರು ʼಕಾರವಾನ್‌ʼ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ಈ ʼಆಂತರಿಕ ತಜ್ಞರುʼ ಯಾರು ಎನ್ನುವುದು ಗೊತ್ತಾಗಲೇ ಇಲ್ಲ ಅಂತಾ ತಜ್ಞರೊಬ್ಬರು ಹೇಳುತ್ತಾರೆ. ಏಕೆಂದರೆ ದೇಶದಲ್ಲಿ ICMR ಎಲ್ಲಾ ವಿಭಾಗಗಳನ್ನು ಹೊಂದಿದ್ದು, ಜೊತೆಗೆ ICMR ಅವುಗಳಿಗೆಲ್ಲ ಮುಂದಾಳತ್ವ ನೀಡುತ್ತಿದೆ. ಆದರೆ ಸರಕಾರದ ನಿರ್ಧಾರಗಳ ಮುಂದೆ ಅದು ಕೂಡಾ ʼರಬ್ಬರ್‌ ಸ್ಟ್ಯಾಂಪ್‌ʼನಂತೆ ಆಗಿಬಿಟ್ಟಿದೆ ಅನ್ನೋದು ತಜ್ಞರ ಮಾತು. ಅಲ್ಲದೇ IDPS ಹಾಗೂ ICMR ನಡುವೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಸಂವಹನ ನಡೆಯುತ್ತಿಲ್ಲ.

“ಎರಡೂ ಸಂಸ್ಥೆಗಳು (IDPS ಹಾಗೂ ICMR) ದತ್ತಾಂಶ ಕಲೆಹಾಕುವಲ್ಲಿ ತಮ್ಮದೇ ಮೂಲಗಳನ್ನ ಹೊಂದಿದ್ದಾರೆ. ಮಾತ್ರವಲ್ಲದೇ ಅಂತಹ ಅಧಿಕಾರವಿರುವ ಈ ಎರಡೂ ಸಂಸ್ಥೆಗಳು ತನ್ನಲ್ಲಿರುವ ಯಾವುದೇ ದತ್ತಾಂಶಗಳನ್ನು ಬಿಟ್ಟು ಕೊಡಬೇಕಿಲ್ಲ. ಆದರೆ ಸಾರ್ವಜನಿಕರಿಗೆ ಇಲ್ಲವೇ ಸಂಶೋಧಕರಿಗೆ ಈ ಅಂಕಿ ಅಂಶಗಳು ಸಿಗುತ್ತಿದ್ದರೆ, ಕರೋನಾ ಸೋಂಕು ಯಾವ ಹಂತದಲ್ಲಿದೆ ಮತ್ತು ಯಾವ ಹಂತ ತಲುಪೀತು ಅನ್ನೋದರ ಕುರಿತು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇದು NCDC ಹಾಗೂ ICMR ನಡುವಿನ ಸಾಂಸ್ಥಿಕ ಯುದ್ಧದಂತೆ ಭಾಸವಾಗುತ್ತಿದೆ” ಎಂದು ಇನ್ನೋರ್ವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುತ್ತಾರೆ.

ಮತ್ತೋರ್ವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, NCDC ತನ್ನಲ್ಲಿರುವ ದತ್ತಾಂಶವನ್ನ ICMR ಗೆ ನೀಡುವ ಸಂಪ್ರದಾಯವಿದೆ. ಆದರೆ NCDC ಗೆ ICMR ಮಾಹಿತಿ ನೀಡಬೇಕಾಗಿಲ್ಲ. ಮಾತ್ರವಲ್ಲದೇ ತನ್ನ academic partners ಎನಿಸಿಕೊಂಡಿರುವ All India Institute of Medical Sciences ಹಾಗೂ ಇನ್ನಿತರ ಸಂಸ್ಥೆಗಳಿಗೂ ನೀಡುವಂತಿಲ್ಲ ಎನ್ನುತ್ತಾರೆ.

ಹೀಗಾಗಿ ದತ್ತಾಂಶವಿಲ್ಲದೇ ಪರೀಕ್ಷೆಗಳನ್ನ ನಡೆಸುವುದು ಅಸಾಧ್ಯದ ಮಾತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮಾತ್ರವಲ್ಲದೇ IDSP ತನ್ನ ದತ್ತಾಂಶಗಳನ್ನ ಯಾಕಾಗಿ ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಅಪ್ಲೋಡ್‌ ಮಾಡುತ್ತಿಲ್ಲ ಅನ್ನೋದಕ್ಕೆ ಇದುವರೆಗೂ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ. ಕರೋನಾ ಸೋಂಕು ತಡೆಗಟ್ಟುವಲ್ಲಿ ಸರಕಾರ ಎದುರಿಸಿದ ಕೊರತೆಯೇ ಇಲ್ಲೂ ಎದುರಾಗಿದೆಯೇ ಅನ್ನೋ ಪ್ರಶ್ನೆಯನ್ನ ಸಹಜ ಮೂಡಿಸುವಂತೆ ಮಾಡಿದೆ.

Click here Support Free Press and Independent Journalism

Pratidhvani
www.pratidhvani.com