ಮಲ್ಯ ಎಂಬ ಹುಲಿ ತೋರಿಸಿ ಇಲಿ ಹಿಡಿದೀತೆ  ಕೇಂದ್ರ ಸರ್ಕಾರ..?
ರಾಷ್ಟ್ರೀಯ

ಮಲ್ಯ ಎಂಬ ಹುಲಿ ತೋರಿಸಿ ಇಲಿ ಹಿಡಿದೀತೆ  ಕೇಂದ್ರ ಸರ್ಕಾರ..?

ಆರ್ಥಿಕ ಪುನಶ್ಚೇತಕ್ಕಾಗಿಯೋ, ಉದ್ಯಮಿಗಳ ಲಾಬಿಗೆ ಮಣಿದೋ ಕೇಂದ್ರ ಸರ್ಕಾರ ಸುಸ್ತಿದಾರರಾಗಿರುವ ಸಾಲವನ್ನು ಮನ್ನಾ ಮಾಡುವ ನಿರ್ಧಾರ ಮಾಡಿದ್ದರಿಂದ ಮಲ್ಯ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲದೆ ವಾಪಸ್‌ ಆಗಬಹುದು. ಇಷ್ಟು ದಿನ ಭಾರತದ ವಿರುದ್ಧ ಕಾನೂನು ಹೋರಾಟ ಹಾಗೂ ಕಣ್ಮರೆ ಆಗಿದ್ದ ಕಾರಣಕ್ಕೆ ಕೆಲವೊಂದಿಷ್ಟು ಸಮಯ ಜೈಲಿನಲ್ಲಿಯೂ ಉಳಿಯಬಹುದು. ಆದರೆ ಈ ಹಿಂದೆ ಹೇಳಿದಂತೆ ಸದೆ ಬಡಿಯುತ್ತೇವೆ ಎನ್ನುವ ಮಾತು ಅರ್ಥ ಕಳೆದುಕೊಳ್ಳಲಿದೆ.

ಕೃಷ್ಣಮಣಿ

ಕರುನಾಡ ಕುವರ ಮದ್ಯದ ದೊರೆ ವಿಜಯ್‌ ಮಲ್ಯ ಭಾರತದಲ್ಲಿ 9900 ಕೋಟಿ ರೂಪಾಯಿ ಸಾಲಗಾರನಾಗಿ ತಲೆಮರೆಸಿಕೊಂಡ ಬಳಿಕ ಇಂಗ್ಲೆಂಡ್‌ನಲ್ಲಿ ಆಶ್ರಯ ಪಡೆದಿದ್ದರು. ವಂಚಿಸಿ ಓಡಿಹೋದವರನ್ನು ಎಂದಿಗೂ ಬಿಡುವುದಿಲ್ಲ ಎಂದು ಘರ್ಜಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾನೂನು ಅಡೆತಡೆಗಳನ್ನೆಲ್ಲಾ ಮೀರಿ ಭಾರತಕ್ಕೆ ವಾಪಸ್‌ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಇದೀಗ ವಿಜಯ್‌ ಮಲ್ಯಗೆ ಇಂಗ್ಲೆಂಡ್‌ನಲ್ಲಿ ಎಲ್ಲಾ ರೀತಿಯ ಕಾನೂನು ಹೋರಾಟ ಅಂತ್ಯವಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿ ತಿರಸ್ಕಾರವಾದ ಬಳಿಕ ಸುಪ್ರೀಂನಲ್ಲೂ ಅರ್ಜಿ ಸಲ್ಲಿಸಲು 14 ದಿನಗಳ ಕಾಲಾವಾಶ ನೀಡಲಾಗಿತ್ತು. ಅದರಲ್ಲಿ ಮೌಖಿಕ ಹೇಳಿಕೆ ಕೇಳುವುದು, ಸಿದ್ಧಪಡಿಸಿದ ಪ್ರಶ್ನೆಗಳಿಗೆ ಪ್ರಮಾಣಪತ್ರ ಮೂಲಕ ಉತ್ತರ ನೀಡುವುದು ಮತ್ತು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೇಳಲಾಗಿತ್ತು. ಆದರೆ ಮಲ್ಯ ಅವರ ಮನವಿಯನ್ನು ಬ್ರಿಟನ್ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ತಿರಸ್ಕರಿಸಿದೆ. ಹಾಗಾಗಿ ಮುಂದಿನ 28 ದಿನಗಳಲ್ಲಿ ಮಲ್ಯ ಗಡಿಪಾರು ಮಾಡಬೇಕು ಎನ್ನಲಾಗಿತ್ತು. ಆದರೆ ಅದಕ್ಕೂ ಇದೀಗ ಬ್ರೇಕ್‌ ಬಿದ್ದಿದೆ ಎನ್ನಲಾಗುತ್ತಿದೆ.

ಬ್ರಿಟನ್‌ ಸರ್ಕಾರವೇ ಮುಂದಿನ 28 ದಿನಗಳ ಒಳಗಾಗಿ ಭಾರತಕ್ಕೆ ಮಲ್ಯ ಗಡಿಪಾರು ಮಾಡುವ ಬಗ್ಗೆ ಅಲ್ಲಿನ ಗೃಹ ಇಲಾಖೆ ಕಾರ್ಯದರ್ಶಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ವರದಿಗಳು ಬಂದಿದ್ದವು. ಆದರೆ, ಇದೀಗ ಕೋವಿಡ್‌ - 19 ಸೋಂಕು ಭಾರತದಲ್ಲಿ ಹೆಚ್ಚಾಗಿದೆ. ಹೀಗಾಗಿ ವಿಜಯ್‌ ಮಲ್ಯ ಅವರಿಗೆ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ವಿಜಯ್‌ ಮಲ್ಯ ಅವರನ್ನು ಒಂದು ತಿಂಗಳ ಕಾಲ ಭಾರತಕ್ಕೆ ಹಸ್ತಾಂತರ ಮಾಡುವುದಿಲ್ಲ ಎನ್ನಲಾಗಿದೆ. ವಿಜಯ್‌ ಮಲ್ಯ ಹಸ್ತಾಂತರ ಬಳಿಕ ಮುಂಬೈನ ಆರ್ಥಾರ್‌ ರೋಡ್‌ ಜೈಲಿನಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಇದೀಗ ಮಹಾರಾಷ್ಟ್ರದಲ್ಲಿ ಕರೋನಾ ಸೋಂಕು ಮಿತಿ ಮೀರಿದೆ. ಅದರಲ್ಲೂ ಮಲ್ಯ ಅವರನ್ನು ಬಂಧಿಸಿಡಲು ವ್ಯವಸ್ಥೆ ಮಾಡಿರುವ ಆರ್ಥಾರ್‌ ರೋಡ್‌ ಜೈಲಿನಲ್ಲಿ 200 ಕೋವಿಡ್‌-19 ಕೇಸ್‌ಗಳು ಪತ್ತೆಯಾಗಿವೆ. ಇದೀಗ ಮಲ್ಯ ಹಸ್ತಾಂತರ ನಡೆದರೆ ಸಮಸ್ಯೆ ಆಗಲಿದೆ ಎಂದು ವಿಜಯ್ ಮಲ್ಯ ಅವರ ಕಾನೂನು ತಂಡ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಭಾರತ ಸರ್ಕಾರ ಒಂದು ವೇಳೆ ಬೇರೊಂದು ಪರ್ಯಾಯ ಬಂಧನ ಕೇಂದ್ರ ಹಾಗೂ ಅಲ್ಲಿನ ಭದ್ರತೆ ಬಗ್ಗೆ ಬ್ರಿಟನ್‌ ಸರ್ಕಾರಕ್ಕೆ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾದರೆ ಮಾತ್ರ ಹಸ್ತಾಂತರ. ಇಲ್ಲದಿದ್ದರೆ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಮಾತ್ರವೇ ಹಸ್ತಾಂತರ ನಡೆಯಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಭಾರತದ IDB I ಬ್ಯಾಂಕ್‌ನಿಂದ 900 ಕೋಟಿ ಹಾಗೂ SBI ಸಮೂಹ ಬ್ಯಾಂಕ್ಗಳಿಂದ 9000 ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿದ್ದ. ಆದರೆ ಇದೀಗ ವಿಜಯ್ ಮಲ್ಯ ತಾನು ಪಡೆದಿದ್ದ ಸಾಲದ ಅಸಲಿ ಮೊತ್ತವನ್ನು ಭಾರತದ ಬ್ಯಾಂಕ್‌ಗಳಿಗೆ ವಾಪಸ್‌ ಕಟ್ಟುವುದಕ್ಕೆ ನಾನು ಸಿದ್ಧ ಎಂದು ಟ್ವೀಟರ್‌ನಲ್ಲಿ ಘೋಷಣೆ ಮಾಡಿದ್ದಾನೆ. ಸುಸ್ತಿದಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ವಿಜಯ್‌ ಮಲ್ಯ ಮನವಿಯನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿಲ್ಲ. ಸಾಲ ಪಡೆದಿರುವ ಸಂಪೂರ್ಣ ಹಣವನ್ನು ನಾನು ಮರುಪಾವತಿಗೆ ಸಿದ್ಧನಿದ್ದೇನೆ ದಯವಿಟ್ಟು ಸ್ವೀಕರಿಸಿ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಭಾರತ ಸರ್ಕಾರ ಮಾತ್ರ ಹಣ ಸ್ವೀಕಾರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಹಣ ಸ್ವೀಕಾರ ಮಾಡದೆ ಇರುವುದಕ್ಕೆ ಯಾವುದೇ ಕಾರಣವನ್ನೂ ನೀಡಿ ತಿರಸ್ಕಾರವನ್ನೂ ಮಾಡಿಲ್ಲ.

ವಿಷಯ ಎಂದರೆ ಕರೋನಾ ಸಂಕಷ್ಟಕ್ಕೆ ಸಿಲುಕಿರುವ ಭಾರತ ಸರ್ಕಾರ, ದೇಶದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸಕಲ ತಯಾರಿ ನಡೆಸಿದೆ. ಈ ನಡುವೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸಾಲ ಮಾಡಿ ಸುಸ್ತಿದಾರರಾಗಿ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದೆ ಎನ್ನುವ ಆರೋಪ ಈಗಾಗಲೇ ಕೇಳಿ ಬಂದಿದೆ. ಒಟ್ಟು 50 ಬ್ಯಾಂಕ್‌ಗಳಿಗೆ ಸೇರಿದ 68,607 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅದರಲ್ಲಿ ನೀರವ್‌ ಮೋದಿ, ಮೆಹೂಲ್‌ ಚೋಕ್ಸಿ, ವಿಜಯ್‌ ಮಲ್ಯ ಅವರು ಸೇರಿದ್ದಾರೆ ಎಂದು ಆರ್‌ಟಿಐ ಮಾಹಿತಿ ಆಧಾರದ ಮೇಲೆ ಆರೋಪ ಮಾಡಿದೆ.ಇಷ್ಟು ಮಾತ್ರವಲ್ಲದೆ 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಿಂದ ಸೆಪ್ಟೆಂಬರ್‌ 2019ರ ತನಕ ಬರೋಬ್ಬರಿ 6.66 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಇದೇ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 50 ಬ್ಯಾಂಕ್‌ಗಳಿಗೆ ಮೋಸ ಮಾಡಿ ಓಡಿ ಹೋದವರ ಬಗ್ಗೆ ಸಂಸತ್‌ನಲ್ಲಿ ಮಾಹಿತಿ ಕೇಳಿದ್ದರು. ಆದರೆ ಹಣಕಾಸು ಸಚಿವರು ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಆರ್‌ಬಿಐ ಇದೀಗ ಮಾಹಿತಿ ಕೊಟ್ಟಿದೆ. ಅದರಲ್ಲಿ ನೀರವ್‌ ಮೋದಿ, ಮೆಹೂಲ್‌ ಚೋಕ್ಸಿ, ವಿಜಯ್‌ ಮಲ್ಯ ಕೂಡ ಸೇರಿದ್ದಾರೆ ಎಂದು ಟೀಕಿಸಿತ್ತು. ಜೊತೆಗೆ ಸಾಲಗಾರರ ಪಟ್ಟಿಯನ್ನೂ ಬಿಡುಗಡೆ ಮಾಡಿ, ಯಾವ ಕಾರಣಕ್ಕಾಗಿ ಸಾಲ ಮನ್ನಾ ಮಾಡಿದ್ದೀರಿ ಉತ್ತರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಸವಾಲು ಹಾಕಿದ್ದರು.

ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್‌ ಆರೋಪಕ್ಕೆ ಮೌನದ ಉತ್ತರ ನೀಡಿದ್ದಾರೆ. ಆದರೆ ಸಾಲ ಮಾಡಿ ಓಡಿ ಹೋದವರ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ರಾಹುಲ್‌ ಗಾಂಧಿ ಆರೋಪಕ್ಕೂ ಪ್ರತ್ಯುತ್ತರ ನೀಡಿದ್ದಾರೆ. ನಾವು ಸಾಲ ಮಾಡಿ ಓಡಿ ಹೋದವರನ್ನು ಹಿಡಿದು ತರುವುದಕ್ಕೆ ಪ್ರಯತ್ನ ಮಾಡಿದ್ದೇವೆ. ಸಾಲ ಮಾಡಿ ಓಡಿ ಹೋದವರು ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲ ಮಾಡಿದ್ದವರು ಎಂದಿದ್ದಾರೆ. ಇದೇ ಕಾರಣಕ್ಕಾಗಿ 3515 ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಒಂದು ವೇಳೆ ಆರ್ಥಿಕ ಪುನಶ್ಚೇತಕ್ಕಾಗಿಯೋ ಅಥವಾ ಉದ್ಯಮಿಗಳ ಲಾಬಿಗೆ ಮಣಿದೋ ಕೇಂದ್ರ ಸರ್ಕಾರ ಸುಸ್ತಿದಾರರಾಗಿರುವ ಸಾಲವನ್ನು ಮನ್ನಾ ಮಾಡುವ ನಿರ್ಧಾರ ಮಾಡಿದ್ದರಿಂದ ವಿಜಯ್‌ ಮಲ್ಯ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲದೆ ವಾಪಸ್‌ ಆಗಬಹುದು. ಇಷ್ಟು ದಿನ ಭಾರತದ ವಿರುದ್ಧ ಕಾನೂನು ಹೋರಾಟ ಹಾಗೂ ಕಣ್ಮರೆ ಆಗಿದ್ದ ಕಾರಣಕ್ಕೆ ಕೆಲವೊಂದಿಷ್ಟು ಸಮಯ ಭಾರತದ ಜೈಲಿನಲ್ಲಿಯೂ ಉಳಿಯಬಹುದು. ಆದರೆ ಭಾರತ ಸರ್ಕಾರ ಈ ಹಿಂದೆ ಹೇಳಿದಂತೆ ವಂಚಿಸಿ ಓಡಿ ಹೋದವರನ್ನು ಸದೆ ಬಡಿಯುತ್ತೇವೆ ಎನ್ನುವ ಮಾತು ಅರ್ಥ ಕಳೆದುಕೊಳ್ಳಲಿದೆ. ವಿಜಯ್‌ ಮಲ್ಯ ಎಂಬ ಹುಲಿಯನ್ನು ತೋರಿಸಿ ಇಲಿಯನ್ನು ಹಿಡಿದಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Click here Support Free Press and Independent Journalism

Pratidhvani
www.pratidhvani.com